ನಿಷ್ಪಾಪಿ ಸಸ್ಯಗಳು : ಸಂಚಿಕೆ - 162
Thursday, September 17, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 162
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ....? ಈ ನಡುವೆ ನೀವೇನಾದರೂ ಹೊಸ ಸಸ್ಯಗಳ ಗೆಳೆತನ ಮಾಡಿಕೊಂಡಿರಾ? ಹೊಸ ಹೂಗಳನ್ನು ಕಂಡಿರಾ?
ದಿನಾ ನೋಡುತ್ತಿದ್ದರೂ ಮಾತನಾಡಿಸದೇ ಉಳಿದುಬಿಟ್ಟ ತರುಲತೆಗಳಿವೆಯೇ.. ಗಮನಿಸಿ. ನಿಮ್ಮಲ್ಲಿ ನಾನೇಕೆ ಕೇಳುತ್ತಿದ್ದೇನೆಂದರೆ ಅದಕ್ಕೂ ಒಂದು ಕಾರಣವಿದೆ. ಶಾಲೆಗೆ ಹೊರಟು ಅಂಗಳದಿಂದ ಹೊರಗೆ ಬರುವಾಗ ಪುಟ್ಟ ಮಾವಿನ ಗಿಡದ ಜೊತೆ ಸಲ್ಲಾಪದಲ್ಲಿರುತ್ತಿದ್ದ ಅಚ್ಚ ಬಿಳೀ ಹೂಗಳನ್ನು ಹೊತ್ತ ಬಳ್ಳಿ ನನ್ನನ್ನೇ ನೋಡುತ್ತಿತ್ತು. ದಿನವೂ ಆ ಲತೆಯನ್ನು ಹಾಗೂ ಹಸಿರ ನಡುವೆ ಮುಗುಳ್ನಗುವನ್ನು ಬೀರುತ್ತಿದ್ದ ಐದು ದಳಗಳ ಪುಷ್ಪಗಳನ್ನು ನೋಡಿ ನಸುನಕ್ಕು ಹೊರಟುಬಿಡುತ್ತಿದ್ದೆ. ಇದು ಎರಡು ಮೂರು ವರ್ಷಗಳಿಂದ ನಡೆದು ಬಂದಿದ್ದರೂ 'ಈ ಬಳ್ಳಿಯ ಬಗ್ಗೆ ಬರೆಯಬೇಕೆಂದು ಏಕೆ ಅನಿಸಲಿಲ್ಲವೋ...ನಾ ಕಾಣೆ!.
ಇಂದು ಈ ಬಳ್ಳಿಯ ಬಗ್ಗೆ ಗಮನವೇ ಇಲ್ಲದೆ ಹೊರಗಡಿ ಇಟ್ಟಿದ್ದೆ. ಯಾಕೋ ನನಗರಿವಿಲ್ಲದೆ ಎಡಬದಿಗೆ ಮಾವಿನ ಸಸಿಯತ್ತ ದೃಷ್ಟಿ ಹೊರಳಿತು. ಏಕೆಂದರೆ ದಿನವೂ ನೋಡುವಷ್ಟು ಆತ್ಮೀಯತೆ ಬೆಳೆದಿತ್ತಲ್ಲ! ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದ ಹಾಗೆ ಅಲ್ಲಲ್ಲಿ ಗುಂಪು ಗುಂಪಾಗಿ ಈ ಹೂವುಗಳದ್ದೇ ಕಾರುಬಾರು! ನೋಡಲು ಸ್ನೋ ವೈಟ್.. ಅದೂ ದುಂಡಾದ ರೂಪ, ಉದ್ದನೆಯ ಕೊಳವೆಯಾಕಾರದ ಹೂದಂಟಿಗೆ ಕಲಶದಂತಹ ಪುಷ್ಪ ಪತ್ರೆ. ಒಂದಿನಿತು ವಾಸನೆಯೋ ಸುವಾಸನೆಯೋ ಏನೂ ಇರದು.. ಮುಂಜಾವಿನಲಿ ಅರಳಿ ಸಂಜೆಯಾಗುತ್ತಲೇ ಧರೆಗುರುಳುವ ಈ ದ್ವಿ ಲಿಂಗಿ ಹೂವಿನ ಜಾಗದಲ್ಲಿ ಹಕ್ಕಿಯ ಕೊಕ್ಕಿನಂತಹ ತುದಿಯುಳ್ಳ ದುಂಡಾದ ಕಾಯಿ ರೂಪುಗೊಳ್ಳುತ್ತದೆ. ಮಾಗುತ್ತ ಕಂದು ಬಣ್ಣಕ್ಕೆ ತಿರುಗುವ ಈ ಗೋಳಾಕಾರದ ಕ್ಯಾಪ್ಸೂಲ್ ನೊಳಗೆ ಅರ್ದಚಂದ್ರಾಕಾರದ ನಾಲ್ಕು ಬೀಜಗಳಿದ್ದು ಒಣಗಿದಾಗ ಸಿಡಿಯುತ್ತದೆ.
ಹೃದಯದಾಕಾರದ ಅಥವಾ ತ್ರಿಕೋನಾಕಾರದ ಅಭಿಮುಖ ಎಲೆಗಳು.ಅಂಚುಗಳಲ್ಲಿ ಹಲ್ಲಿನಂತಹ ರಚನೆ. ಸಾಮಾನ್ಯ ಬಳ್ಳಿಗಳಂತೆ ಈ ಬಳ್ಳಿಯು ದುಂಡಗಿರದೆ ಚೌಕಾಕಾರ Square shaped stemps ಹೊಂದಿದೆ. ತುಂಬಾ ವೇಗವಾಗಿ ಹಾಗೂ ಸುಲಭವಾಗಿ ಹರಡುವ ಈ ಬಳ್ಳಿಗೆ ಸಾಮಾನ್ಯವಾಗಿ ಯಾವುದೇ ಹೆಸರು ಕಾಣಿಸದಿದ್ದರೂ ಕೆಲವೆಡೆ ನಿತ್ಯ ಮಲ್ಲಿಗೆ ಎನ್ನುವರಂತೆ. ಕನ್ನಡದಲ್ಲಿ ಹೇಗಲ ಬಳ್ಳಿ , ಬಿಳಿ ನಂದಿ ಬಟ್ಟಲ ಬಳ್ಳಿ, ಬಿಳಿ ಶಂಖ ಪುಷ್ಪದ ಬಳ್ಳಿ ಎಂದೆಲ್ಲ ಈ ಹೂವಿನ ರೂಪ ಕಂಡು ಅನ್ವರ್ಥ ಹೆಸರುಗಳೂ ಇವೆ!. Sweet clock vine, White lady, Angel wing's ಎಂಬ ಆಂಗ್ಲ ಹೆಸರುಗಳು, ತಮಿಳಿನಲ್ಲಿ ಇಂದ್ರ ಪುಷ್ಪಂ, ಭಾರತದ ಸಿದ್ದ ವೈದ್ಯಕೀಯದಲ್ಲಿ ಇಂದ್ರಪುಷ್ಪವೆಂದೂ ಹೆಸರಿಸಲ್ಪಟ್ಟಿರುವ ಈ ನಿಷ್ಪಾಪಿ ಸಸ್ಯವನ್ನು ಮೊದಲು ಗುರುತಿಸಿದವರು ಪ್ರಸಿದ್ಧ ಸ್ಕಾಟಿಷ್ ಸಸ್ಯಶಾಸ್ತ್ರಜ್ಞ ಡಾ. ವಿಲಿಯಂ ರಾಕ್ಸ್ ಬರ್ಗ್. ಇವರ ಗೌರವಾರ್ಥವಾಗಿ ಈ ಬಳ್ಳಿಗೆ ಸಸ್ಯಶಾಸ್ತ್ರೀಯವಾಗಿ ಥನ್ ಬರ್ಜಿಯಾ ಫ್ರಾಗ್ರೆನ್ಸ್ ರಾಕ್ಸಬ್ (Thumbergia fragrance Roxb) ಎಂದೇ ಹೆಸರಿಸಲಾಗಿದೆ. ವಿಚಿತ್ರವೆಂದರೆ fragrance ಅಂದರೆ ಲ್ಯಾಟಿನ್ ಭಾಷೆಯಲ್ಲಿ ಸುಗಂಧಭರಿತ ಎಂದರ್ಥವಂತೆ! ಹೂವಿಗೆ ಯಾವುದೇ ಸುಗಂಧವಿರದಿದ್ದರೂ ಎಳೆಯ ಕೊಂಬೆ ಹಾಗೂ ಎಲೆಗಳಿಗೆ ಒಂದು ವಿಶಿಷ್ಠ ಆಹ್ಲಾದಕರ ಸುಗಂಧವಿದೆಯೆಂದು Roxburgh ದಾಖಲಿಸಿದ್ದಾರೆ. ಅಕಂಥೇಸಿ (Acanthaceae ) ಕುಟುಂಬದ ಸದಸ್ಯತನ ಪಡೆದಿರುವ ಈ ನಿತ್ಯಮಲ್ಲಿಗೆ ಭಾರತ, ಶ್ರೀಲಂಕಾ, ದಕ್ಷಿಣ ಏಷ್ಯಾ ಮೂಲದಿಂದ ಸುಮಾರು 150 ಕ್ಕೂ ಹೆಚ್ಚು ಜಾತಿಗಳ ಮೂಲಕ ವಿಶ್ವಾದ್ಯಂತ ಹರಡಿದೆ.
ಜ್ವರ, ಗಾಯ, ತಲೆನೋವು, ಚರ್ಮರೋಗಗಳಿಗೆ ಉಪಶಮನ ನೀಡುವ ಈ ನಿತ್ಯಮಲ್ಲಿಗೆಯ ಎಲೆ ಸಾರದಲ್ಲಿ Antioxidant, Antibacterial ಗುಣಗಳು ಪತ್ತೆಯಾಗಿವೆ. ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಅತಿಹೆಚ್ಚು ಹೂ ಬಿಡುವ ಈ ಬಳ್ಳಿಯನ್ನು ಬೀಜ ಹಾಗೂ ಕಾಂಡ ನೆಡುವ ಮೂಲಕ ಬೆಳೆಸಬಹುದು. ಮನೆ ಕಂಪೌಂಡ್, ಬೇಲಿ, ಗೇಟ್, ಬಾಲ್ಕನಿ ಗ್ರಿಲ್ , ಗಾರ್ಡನ್ ಗಳಲ್ಲಿ ಕಣ್ಸೆಳೆಯುವ ಈ ನಿತ್ಯಮಲ್ಲಿಗೆ ಆಸ್ಟ್ರೇಲಿಯಾ, ಹವಾಯಿ, ಸಿಂಗಾಪುರದಂತಹ ದೇಶಗಳಲ್ಲಿ ಅತಿಯಾಗಿ ಹರಡಿ ಸ್ಥಳೀಯ ಸಸ್ಯಗಳನ್ನು ಬೆಳೆಯಲು ಬಿಡದೆ ಆಕ್ರಮಣಕಾರಿ ಕಳೆಸಸ್ಯವೆಂದು ಘೋಷಿಸಲ್ಪಟ್ಟಿದೆ.
ಮಕ್ಕಳೇ, ತಾತ್ಸಾರದಿಂದ ನಾವು ಕಾಣುವ ಪ್ರತೀ ತರುಲತೆಗಳ ಹಿಂದೆ ಎಂತೆಂತಹ ವಿಶೇಷತೆಗಳಿವೆಯಲ್ಲವೇ? ದಿನವೂ ನೋಡುತ್ತಾ.. ನಮ್ಮ ಒಡನಾಟದಲ್ಲಿದ್ದರೂ ಗಮನ ಹರಿಸದೆ ಮುಂದುವರಿಯುತ್ತೇವೆ. ನಾನೀಗ ಈ ಸಂಜೆ ಮಲ್ಲಿಗೆಯನ್ನು ನೋಡುವ ಭಾವವೇ ಬದಲಾಗಿದೆ. ಆತ್ಮೀಯ ಭಾವ ಮೂಡಿದೆ. ಇಷ್ಟು ದಿನ ಎಷ್ಟೊಂದು ಮಾತನಾಡಿಕೊಳ್ಳಬಹುದಿತ್ತು!!
ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************