ನನ್ನ ಬೆಸ್ಟ್ ಟೀಚರ್ : ಸಂಚಿಕೆ - 02 : ಜಗಲಿಯ ಹಿರಿಯರ ಬರಹಗಳು
Sunday, September 6, 2026
Edit
ನನ್ನ ಬೆಸ್ಟ್ ಟೀಚರ್ : ಸಂಚಿಕೆ - 02
ಸೆಪ್ಟೆಂಬರ್ - 5 : ಶಿಕ್ಷಕರ ದಿನಾಚರಣೆ - 2026
ಜಗಲಿಯ ಹಿರಿಯರ ಬರಹಗಳು
ಬರಹಗಾರರು :
◾ ಸೆಕೀನಾ ಐರಾಝ್, ಪ್ರಭಾರ ಮುಖ್ಯ ಶಿಕ್ಷಕರು
◾ ಹರಿಕೇಶ್ , ವಕೀಲರು ಮಂಗಳೂರು
◾ ಕವಿತಾ ಶ್ರೀನಿವಾಸ ದೈಪಲ
◾ ವರ್ಷಾ ವಿ ನಾಯ್ಕ್ , ಸಹ ಶಿಕ್ಷಕಿ
◾ ವಿದ್ಯಾಗಣೇಶ್ , ಚಾಮೆತ್ತಮೂಲೆ ಮನೆ
◾ ಚಿಂತನ ನಡುವಾಳು
◾ ಡಾ. ಮೈತ್ರಿ ಭಟ್, ವಿಟ್ಲ
ಗುರುರ್ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀಗುರುವೇ ನಮಃ..
ಅಂತಹ ನನ್ನೆಲ್ಲಾ ಗುರುಗಳಿಗೆ ಮೊತ್ತ ಮೊದಲು ನಮನಗಳನ್ನು ಸಲ್ಲಿಸುತ್ತಿದ್ದೇನೆ. ನನ್ನ ಪ್ರೀತಿಯ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಆದರದ ಶುಭಾಶಯಗಳು...
ನಾನು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಸುಜೀರ್ ನಲ್ಲಿ ಮುಗಿಸಿರುತ್ತೇನೆ. ಆ ಸಂದರ್ಭದಲ್ಲಿ ಅಂದಾಜು 25 ಶಿಕ್ಷಕರು ಇದ್ದರು. ಎಲ್ಲರೂ ಉತ್ತಮ ರೀತಿಯಲ್ಲಿ ಪ್ರವಚನ ನೀಡುತ್ತಿದ್ದರು. ಅದರಲ್ಲಿ ಕೆಲವರು ನನ್ನ ಅತ್ಯಂತ ನೆಚ್ಚಿನ ಶಿಕ್ಷಕರಾಗಿದ್ದಾರೆ. ಅದರಲ್ಲೂ ಗಣಿತ ಶಿಕ್ಷಕಿಯಾದ ಆದರಣೀಯ Silvya Brags ಎಂದರೆ ನನಗೆ ಪಂಚಪ್ರಾಣ. ಅವರ ಮಾತಿನ ಶೈಲಿ , ಆತ್ಮೀಯತೆ ಹಾಗೂ ವಿಶೇಷವಾದ ಬೋಧನಾ ವಿಧಾನಗಳಿಂದಾಗಿ ಗಣಿತ ವಿಷಯದಲ್ಲಿ
ನನಗೆ ಹೆಚ್ಚಿನ ಆಸಕ್ತಿಯನ್ನು ಉಂಟಾಗುವಂತಾಯಿತು. ಈ ಶಿಕ್ಷಕಿ ನನಗೆ ಇಷ್ಟವಾದ್ದರಿಂದ ಗಣಿತ ವಿಷಯವು ನನ್ನ ಇಷ್ಟದ ವಿಷಯವಾಯಿತು. ನನ್ನ ಸಹಪಾಠಿಗಳೆಲ್ಲರೂ ಗಣಿತ ಕಷ್ಟ ಎಂದಾಗ ನಾನು ಆಶ್ಚರ್ಯಚಕಿತಳಾಗುತ್ತಿದ್ದೆ. ಯಾಕೆಂದರೆ, ನನಗೆ ಗಣಿತ ಅಷ್ಟೊಂದು ಸುಲಲಿತವಾಗಿತ್ತು. ಇದಕ್ಕೆ ಕಾರಣ ಈ ಶಿಕ್ಷಕಿ. ಈಗಲೂ ಆ ನನ್ನ ಶಿಕ್ಷಕರನ್ನು ಸ್ಮರಿಸುತ್ತಾ ಇರುತ್ತೇನೆ. ಎಂ.ಎಸ್ಸಿ , ಬಿ.ಇಡಿ ಮುಗಿಸಿದರೂ ಇಂದಿಗೂ ಪ್ರಾಥಮಿಕ ಶಾಲೆಯಲ್ಲಿ ಬೋಧಿಸಿದ ಆದರಣೀಯ ಸಿಲ್ವಿಯಾ ಬ್ರಾಗ್ಸ್ ಅವರೇ ನನಗೆ ಮಾದರಿ ಶಿಕ್ಷಕಿ. ಆ ಕಾರಣದಿಂದಲೇ ಪ್ರಸ್ತುತ ನಾನು ಗಣಿತ ವಿಜ್ಞಾನ ಶಿಕ್ಷಕಿಯಾಗಿ ಸರಕಾರಿ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಇದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಇಂದಿನ ಒತ್ತಡದ ಕಾರ್ಯಶೈಲಿಯಲ್ಲಿ ಸಿಲ್ವಿಯಾ ಬ್ರಾಗ್ಸ್ ನಂತೆ ಕೆಲಸ ಮಾಡುವುದು ಅತ್ಯಂತ ಕಷ್ಟವಾದರೂ ಸಹ, ಅವರ ಆದರ್ಶಗಳ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿದ್ದೇನೆ.
ಪ್ರಭಾರ ಮುಖ್ಯ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಡಿತಡ್ಕ
ಕನ್ಯಾನ, ಬಂಟ್ವಾಳ ತಾಲೂಕು, ದ. ಕ. ಜಿಲ್ಲೆ.
ಮೊ : 99007 46516
**************************************
ಅದು 2013-14ರ ಸಮಯ ಅಂದರೆ 12 ವರ್ಷಗಳ ಹಿಂದಿನ ನೆನಪು. ನಾನು ಕಲಿತ ಶಾಲೆ ಆನಂದಾಶ್ರಮ ಪ್ರೌಢ ಶಾಲೆ, ಸೋಮೇಶ್ವರ ಗ್ರಾಮ ಉಳ್ಳಾಲ ತಾಲೂಕು. ಇಲ್ಲಿಯ ಶಿಕ್ಷಣ ಕ್ರಮ ಮತ್ತು ಶಿಕ್ಷಕ ವೃಂದ ನನ್ನ ಜೀವನದಲ್ಲಿ ಗಾಢವಾದ ಪರಿಣಾಮವನ್ನು ಬೀರಿತು. ಇಲ್ಲಿಯ ಶಿಕ್ಷಕರು ಮತ್ತು ಶಿಕ್ಷಕಿಯರು ನನ್ನ ಪಾಲಿನ "THE BEST TEACHRS:" ಈ ಲೇಖನದಲ್ಲಿ ನನಗೆ ಎಲ್ಲ ಶಿಕ್ಷಕ ಮತ್ತು ಶಿಕ್ಷಕಿಯರ ಬಗ್ಗೆ ಹೇಳಲು ಅವಕಾಶವಿಲ್ಲದಾದರಿಂದ ನಾನು
ಒಬ್ಬ ಶಿಕ್ಷಕಿಯ ಬಗ್ಗೆ ಮತ್ತು ಅವರು ಯಾವ ರೀತಿ ನನ್ನ ಜೀವನದಲ್ಲಿ ಪ್ರಭಾವ ಬೀರಿದರೆಂದು ತಿಳಿಸಲು ಇಚ್ಛಿಸುತ್ತೇನೆ.
ಶಿಸ್ತಿನ ಸಿಪಾಯಿ, ನೇರ-ನುಡಿ, ನಿಷ್ಠುರವಾದಿ, ವಿಚಾರಧಾರೆ, ಜ್ಞಾನ ಭಂಡಾರ ಮತ್ತು ಮಕ್ಕಳ ಪಾಲಿನ ಅಚ್ಚುಮೆಚ್ಚಿನ ತುಂಬಾ Strict Teacher ಎಂದು ಕರೆಸಿಕೊಳ್ಳುವ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ತಿದ್ದಿ-ತಿಳಿ ಹೇಳಿದ ದೇವಮಾತೆ ನನ್ನ THE BEST TEACHER ಗಾಯತ್ರಿ ಅದ್ಯಪಾಡಿ ಟೀಚರ್.
ನನ್ನ ಬದುಕಿನ ದಾರಿದೀಪ ಗಾಯತ್ರಿ ಟೀಚರ್.
ಗುರು ಬ್ರಹ್ಮ, ಗುರು ವಿಷ್ಣು,
ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ:
ತಸ್ಮೈ ಶ್ರೀ ಗುರವೇ ನಮಃ
ಈ ಶ್ಲೋಕದ ನಿಜವಾದ ಅರ್ಥವನ್ನು ನನಗೆ ತೋರಿಸಿಕೊಟ್ಟವರು ನನ್ನ ಹೈಸ್ಕೂಲಿನ ಗಾಯತ್ರಿ ಟೀಚರ್. ಗಾಯತ್ರಿ ಟೀಚರ್ ನನಗೆ ಕೇವಲ ಶಿಕ್ಷಕಿಯಲ್ಲ, ನನ್ನ ತಾಯಿ ಇದ್ದಂತೆ. ಅವರು ತರಗತಿಗೆ ಬಂದರೆ ಇಡೀ ಕ್ಲಾಸ್ ಮೌನವಾಗಿ ಇರುತ್ತಿತ್ತು. ಕ್ಲಾಸ್ ತುಂಬಾ ಲವಲವಿಕೆಯಿಂದ ಇರುತ್ತಿತ್ತು. ಅವರು ಪಾಠವನ್ನು ಪುಸ್ತಕದಿಂದ ಹೇಳಿಕೊಡುತ್ತಿರಲಿಲ್ಲ. ನಮ್ಮ ಬದುಕಿಗೆ connect ಮಾಡಿ ಹೇಳಿಕೊಡುತ್ತಿದ್ದರು. ಕಷ್ಟದ ವಿಷಯವನ್ನು
ಅವರಲ್ಲಿ ನಾನು ಕಂಡ ಅತ್ಯಂತ ದೊಡ್ಡ ಗುಣವೆಂದರೆ ತಾಳ್ಮೆ, ಪ್ರೀತಿ ಮತ್ತು ನೇರ ನುಡಿ. ವಿದ್ಯಾರ್ಥಿಗಳು ಎಷ್ಟೇ ತಪ್ಪು ಮಾಡಿದರೂ ವೈಯಕ್ತಿಕವಾಗಿ ನಿಂದಿಸದೆ ತಪ್ಪು ಆಗುವುದು ಸಹಜ ಅದನ್ನು ತಿದ್ದಿ, ಒಳ್ಳೆಯವರಾಗಬೇಕೆಂದು ಪ್ರೀತಿಯಿಂದ ಬುದ್ಧಿ ಹೇಳುತ್ತಿದ್ದರು. ನಿಜವಾದ ಶಿಕ್ಷಣವೆಂದರೆ ಅಂಕಗಳಲ್ಲ, ಬದಲಾಗಿ ಸಂಸ್ಕಾರದಲ್ಲಿ ಇದೆ ಎಂದು ಅವರು ಪ್ರತಿಪಾದಿಸುತ್ತಿದ್ದರು. ಅವರ ತಾಳ್ಮೆ, ಅವರ ಪ್ರೀತಿ ಅವರ ಸರಳತೆ ನನ್ನನ್ನು ಸ್ಫೂರ್ತಿಗೊಳಿಸಿದೆ. ಅವರು ಎಂದಿಗೂ ಅಂಕಗಳಿಗಾಗಿ ಒತ್ತಡ ಹಾಕಲಿಲ್ಲ, ಒಳ್ಳೆಯ ಮನುಷ್ಯನಾಗು, ಅಂಕಗಳು ತಾನಾಗಿಯೇ ಬರುತ್ತವೆ, ತಂದೆ-ತಾಯಿಯನ್ನು ಗೌರವಿಸು, ತಂದೆ ತಾಯಿ ದೇವರ ಸಮಾನ ಎಂದು ಹೆತ್ತವರ ಕುರಿತಂತೆ ಮಕ್ಕಳಿಗೆ ತಿಳಿ ಹೇಳುತ್ತಿದ್ದರು. ಶಾಲೆಯ ಪರೀಕ್ಷೆಯಲ್ಲಿ ಮಾತ್ರವಲ್ಲ ಜೀವನದ ಪರೀಕ್ಷೆಯಲ್ಲೂ ಪಾಸಾಗಿ ಈ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಬೇಕೆಂದು ಆಶಿಸುತ್ತಿದ್ದರು ನನ್ನ ಗಾಯತ್ರಿ ಟೀಚರ್.
ಅವರು ವಿದ್ಯಾರ್ಥಿಗಳಿಗೆ ಓದುವ ಕುರಿತಂತೆ ಹುರಿದುಂಬಿಸುತ್ತಿದ್ದ ಶೈಲಿಯೇ ವಿಭಿನ್ನ ಅವರು ತರಗತಿಯಲ್ಲಿ ಹೇಳುತ್ತಿದ್ದ ಮಾತೆಂದರೆ Ideal mind is Devil's work Shop. ಇದನ್ನು ವಿದ್ಯಾರ್ಥಿಗಳಿಗೆ
ಅರ್ಥವಾಗುವಂತೆ ವಿವರಿಸುತ್ತಿದ್ದದ್ದು ಹೀಗೆ "ಯಾರು ಪುಸ್ತಕವನ್ನು ಓದುವುದಿಲ್ಲವೋ, ಯಾರ ತಲೆಯು ಕೆಟ್ಟ ಯೋಚನೆಗಳಿಂದ ತುಂಬಿದೆಯೋ ಅಂತವರ ತಲೆಗಳು ದೆವ್ವಗಳು ಓಡಾಡುವ ಜಾಗ“ ಈ ರೀತಿಯ ಮಾತುಗಳನ್ನು ಕೇಳುವಾಗ ಮೈ ಜುಮ್ಮೆನಿಸುತ್ತಿತ್ತು. 12 ವರ್ಷಗಳ ಹಿಂದೆ ಹೇಳುತ್ತಿದ್ದ ಈ ಮಾತು ಈಗಲೂ ನೆನಪಿದೆ ಎಂದರೆ ಯೋಚಿಸಿ ಅವರ ಮಾತುಗಳು ಅದೆಷ್ಟು ನನ್ನ ಜೀವನದಲ್ಲಿ ಪ್ರಭಾವ ಬೀರಿದೆ ಮತ್ತು ಅವರ ಪಾಠ ಶೈಲಿ ಎಷ್ಟರ ಮಟ್ಟಿಗೆ ವಿಭಿನ್ನವಾಗಿತ್ತು ಎಂದು ಇದರಲ್ಲಿ ತಿಳಿಯಬಹುದು.
ಹೀಗೆ ನನ್ನ ಗಾಯತ್ರಿ ಮೇಡಂ ಬಗ್ಗೆ ಹೇಳಬೇಕಾದರೆ ಪುಟಗಳು ಸಾಕಾಗುವುದಿಲ್ಲ ಮತ್ತು ಅದೊಂದು ಮುಗಿಯದ ಅಧ್ಯಾಯ. ಅದ್ಭುತ ವ್ಯಕ್ತಿತ್ವ ಪ್ರತಿಯೊಂದು ವಿದ್ಯಾರ್ಥಿಯ ಪಾಲಿನ ಆದರ್ಶ ವ್ಯಕ್ತಿ ಗಾಯತ್ರಿ teacher. ಪ್ರತಿಯೊಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಕುಗ್ಗಿ ಹೋದಾಗ ಹುರಿದುಂಬಿಸುತ್ತಿದ್ದರು. ಯಾವುದೇ ವಿದ್ಯಾರ್ಥಿಯ ನಡುವೆ ತಾರತಮ್ಯ ಮಾಡದೆ ನಿಷ್ಠುರವಾಗಿ ಬುದ್ಧಿ ಹೇಳುತ್ತಿದ್ದರು. ಅಗತ್ಯವಿದ್ದರೆ 2 ಪೆಟ್ಟು ಕೊಡುತ್ತಿದ್ದರು. ಅದರಲ್ಲಿ ವಿದ್ಯಾರ್ಥಿ ಕಲಿಕೆಯಲ್ಲಿ ತುಂಬಾ ಮುಂದೆ ಇದ್ದಾನೆ ಅಥವಾ ಹಿಂದೆ ಇದ್ದಾನೆ ಎಂದು ದಾಕ್ಷಿಣ್ಯ ತೋರಿಸುತ್ತಿರಲಿಲ್ಲ. ತಪ್ಪು ಯಾರೆ ಮಾಡಿದ್ದರೂ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುತ್ತಿದ್ದರು, ನಿಷ್ಠುರವಾಗಿಯೇ ಬುದ್ಧಿ ಹೇಳುತ್ತಿದ್ದರು. ಈ ನೇರ ನಡೆ - ನಿಷ್ಠುರವಾದ ವ್ಯಕ್ತಿತ್ವವು ನನಗೆ ಬಹಳ ಇಷ್ಟವಾಗುತ್ತಿತ್ತು. ಇಂದು ನಾನು ಏನೇ ಆಗಿದ್ದರೂ, ಒಂದೆರಡು ಜನ ನನ್ನನ್ನು ಸಮಾಜದಲ್ಲಿ ಗುರುತಿಸುತ್ತಾರೆ ಗೌರವಿಸುತ್ತಾರೆಂದರೆ ಅದರ ಹಿಂದೆ ನನ್ನ ಗಾಯತ್ರಿ ಟೀಚರ್ ಅವರ ಪರಿಶ್ರಮವಿದೆ, ನನ್ನ ಆನಂದಾಶ್ರಮ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರ ಸಹಕಾರವಿದೆ. ಹೇಳಿ-ಕೇಳಿ ನಾನೊಬ್ಬ last bench ನ ವಿದ್ಯಾರ್ಥಿ, ಅದೆಷ್ಟೋ ಕಾಟ ಕೊಟ್ಟರೂ ತಪ್ಪು ಮಾಡಿದರೂ ಅದನ್ನು ತಿದ್ದಿ ಸಲಹಿ ಇವತ್ತೊಂದು ಮಟ್ಟದಲ್ಲಿ ಇರಬೇಕಾದರೆ, ನನ್ನ ಜೀವನದಲ್ಲಿ ಮುಂದೆ ನಾನು ಎಷ್ಟೋ ಎತ್ತರಕ್ಕೆ ಬೆಳೆದರೂ ನನ್ನ ಮೊದಲ ಮೆಟ್ಟಿಲು ಆನಂದಾಶ್ರಮ ಶಾಲೆ.
ಈ ಶಿಕ್ಷಕರ ದಿನದಂದು ನನ್ನ ಎಲ್ಲ ಪ್ರೀತಿಯ ಶಿಕ್ಷಕ-ಶಿಕ್ಷಕಿಯರಿಗೆ ನನ್ನ ಕೋಟಿ ನಮನಗಳು. ನೀವು ನನ್ನ ಹೃದಯದಲ್ಲಿ ಯಾವಾಗಲೂ ಇರುತ್ತೀರಿ, ಕೊನೆಯವರೆಗೂ ತೀರಿಸಲಾರದ ಋಣವಿದೆ.
ವಕೀಲರು ಮಂಗಳೂರು
ಕುತ್ತಾರ್, ಮುನ್ನೂರು ಗ್ರಾಮ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಮೊ : 93536 79143
**************************************
ಅದೆಷ್ಟೋ ವ್ಯಕ್ತಿಗಳು ನಮ್ಮ ಬದುಕಿನಲ್ಲಿ ಬಂದು ಹೋಗುತ್ತಾರೆ. ಆದರೆ ಕೆಲವರು ಮಾತ್ರ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತಾರೆ. ಅದರಲ್ಲೂ ಶಿಕ್ಷಕರು ಎಂದರೆ ಕೇವಲ ಪಾಠ ಕಲಿಸುವವರಲ್ಲ, ನಮ್ಮ ವ್ಯಕ್ತಿತ್ವವನ್ನು ರೂಪಿಸುವವರು. ನಮ್ಮೊಳಗಿನ ಅಜ್ಞಾನವನ್ನು ದೂರ ಮಾಡಿ ಆತ್ಮವಿಶ್ವಾಸವನ್ನು ತುಂಬುವವರು. ಬಾಲ್ಯದ ದಿನಗಳಲ್ಲಿ ಅವರು ತೋರಿದ ಪ್ರೀತಿಯ ಕಾಳಜಿ ಮತ್ತು ಮಾರ್ಗದರ್ಶನ ವರ್ಷಗಳು ಕಳೆದರೂ ಮನಸ್ಸಿನಲ್ಲಿ ಹಸಿರಾಗಿಯೇ ಉಳಿಯುತ್ತದೆ. ನನ್ನ ಬದುಕಿನಲ್ಲಿಯೂ ಕೂಡ ಅಂತಹ ಒಬ್ಬರು ಅಪರೂಪದ ಶಿಕ್ಷಕರನ್ನು ಪಡೆದದ್ದಕ್ಕಾಗಿ ಹೆಮ್ಮೆಯಿದೆ. ಅವರೇ ನನ್ನ ನೆಚ್ಚಿನ ರಮೇಶ್ ಸರ್.
ರಮೇಶ್ ಮಾಸ್ಟರ್ ಪಿಲಿಕೂರು. 1991 ರಿಂದ 1994 ರವರೆಗೆ ನಾನು ಸರ್ಕಾರಿ ಪ್ರೌಢಶಾಲೆ ಸಜೀಪಮೂಡ ಇಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಅವರು ನಮಗೆ ವಿಜ್ಞಾನ ವಿಷಯವನ್ನು ಬೋಧಿಸಿದ ಶಿಕ್ಷಕರು. ಅವರಲ್ಲಿ ನನಗೆ ಹೆಚ್ಚು ಇಷ್ಟವಾದ ಗುಣವೆಂದರೆ ಪೋಷಕತತ್ವ. ಬಡ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳ ಬಗ್ಗೆ ಅವರಿಗಿದ್ದ ಕಾಳಜಿ. ಅಂತಹ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುವಂತೆ ವಿದ್ಯಾರ್ಥಿವೇತನ ಪಡೆಯಲು ಬೇಕಾದ ಅಗತ್ಯ ಮಾಹಿತಿ ನೀಡಿ, ಅರ್ಜಿ ಸಲ್ಲಿಸುವುದರಿಂದ ಹಿಡಿದು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರು. ಮನುಷ್ಯರು ಹೇಗಿರಬೇಕು, ಅಗತ್ಯವಿರುವವರಿಗೆ ಹೇಗೆ ಸಹಾಯ ಮಾಡಬೇಕು ಮತ್ತು ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರ ಬದುಕಿಗೆ ಬೆಳಕಾಗಬೇಕು ಎಂಬ ಜೀವನ ಪಾಠವನ್ನು ಕಲಿಸಿದ ಗುರುಗಳು. ನಾನು ಪದವಿ ಪೂರ್ವ ಶಿಕ್ಷಣ ಮುಗಿಸಿ ಮುಂದೆ ಶಿಕ್ಷಕರ ತರಬೇತಿ ಪಡೆಯಬೇಕೆಂಬ ಆಸೆ ನನ್ನಲ್ಲಿತ್ತು. ಆಸೆಯಿಂದ ಅರ್ಜಿ ಸಲ್ಲಿಸಿದ್ದಾಗ ಕೌನ್ಸಿಲಿಂಗ್ ಗಾಗಿ ಬೆಂಗಳೂರಿಗೆ ತೆರಳಬೇಕಾಗಿತ್ತು. ಆಗ ನನ್ನ ತಂದೆಯೊಂದಿಗೆ ನಮ್ಮ ಬೆಂಬಲಕ್ಕೆ ನಿಂತವರು ನನ್ನ ನೆಚ್ಚಿನ ಗುರುಗಳಾದ ರಮೇಶ ಸರ್. ತಮ್ಮ ಮನೆಯಲ್ಲಿ ಒಂದು ವರ್ಷದೊಳಗಿನ ಪುಟ್ಟ ಮಗು ಮತ್ತು ಪತ್ನಿಯನ್ನು ಬಿಟ್ಟು ನಮ್ಮೊಂದಿಗೆ ಬೆಂಗಳೂರಿಗೆ ಬಂದರು. ಒಂದು ದಿನ ನಮ್ಮೊಂದಿಗಿದ್ದು ಕೌನ್ಸಿಲಿಂಗ್ ಪ್ರಕ್ರಿಯೆಗಳೆಲ್ಲಾ ಮುಗಿಯುವವರೆಗೂ ನಮಗೆ ಬೇಕಾದ ಸಹಾಯ ಮಾಡಿದರು. ನನ್ನ ಶಿಕ್ಷಣವನ್ನು ಮುಂದುವರಿಸುವ ಅವಕಾಶ ನನ್ನದಾಗಲಿಲ್ಲ. ಆದರೆ ನನ್ನ ಕನಸು ನನಸಾಗಲಿಲ್ಲ ಎಂಬ ನೋವಿಗಿಂತಲೂ ನನ್ನ ಶಿಕ್ಷಣ ಮುಂದುವರಿಯಬೇಕು, ನಾನು ಮುಂದೆ ಬರಬೇಕು ಎಂಬ ಕಾಳಜಿಯೊಂದಿಗೆ ನಮ್ಮೊಂದಿಗೆ ಬೆಂಗಳೂರು ನವರೆಗೂ ಬಂದ ನನ್ನ ಗುರುಗಳ ಪ್ರೀತಿ, ಕಾಳಜಿ ನಾನು ಸದಾ ನೆನಪಿನಲ್ಲಿಡುವಂತದ್ದು. ನಮ್ಮನ್ನು ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದರು. ತಂದೆ ತಾಯಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ನಡೆ-ನುಡಿಯಲ್ಲಿ ಸದಾ ಮಾನವೀಯತೆಯ ಸ್ಪರ್ಶವಿತ್ತು. ರಮೇಶ್ ಸರ್ ನನಗೆ ಕೇವಲ ಬೆಸ್ಟ್ ಟೀಚರ್ ಅಲ್ಲ ನನ್ನ ಬದುಕಿನಲ್ಲಿ ಮರೆಯಲಾಗದ ಆತ್ಮೀಯ ಗುರುಗಳು. ಥ್ಯಾಂಕ್ಯೂ ಸರ್.
W/o ಶ್ರೀನಿವಾಸ ದೈಪಲ,
'ಚೈತನ್ಯ' ನೆಲ್ಯಡ್ಕ, ಅಂತರ ನರಿಕೊಂಬು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94806 25773
**************************************
ವ್ಯಾಪ್ತಯೇನ ಚರಾಚರಂ|
ತತ್ವದಂ ದರ್ಷಿತಂ ಯೇನ
ತಸ್ಮಯೇ ಶ್ರೀ ಗುರುವೇ ನಮಃ.
ಗುರುವಿನ ಮಹತ್ವವು ಜೀವನದಲ್ಲಿ ಅತ್ಯಂತ ಪ್ರಮುಖವಾಗಿದೆ. ಗುರುವು ವ್ಯಕ್ತಿಗೆ ಜ್ಞಾನ, ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ನೀಡುತ್ತಾನೆ.
ನನ್ನ ನೆಚ್ಚಿನ ಗುರುಗಳು ನಾಗರತ್ನ ಟೀಚರ್.
ಅವರು ನಮ್ಮ ಸಮಾಜ ವಿಷಯದ ಶಿಕ್ಷಕರಾಗಿದ್ದರು. ಅವರೆಂದರೆ ಎಲ್ಲಾ ಮಕ್ಕಳಿಗೂ ಪ್ರೀತಿ. ನಾನು ತುಂಬಾ ಇಷ್ಟ ಪಡುವ ವ್ಯಕ್ತಿಗಳಲ್ಲಿ ಅವರು ಒಬ್ಬರು.
ಅವರು ನಮ್ಮ ಸಮಾಜ ವಿಷಯದ ಶಿಕ್ಷಕರಾಗಿದ್ದರು. ಅವರೆಂದರೆ ಎಲ್ಲಾ ಮಕ್ಕಳಿಗೂ ಪ್ರೀತಿ. ನಾನು ತುಂಬಾ ಇಷ್ಟ ಪಡುವ ವ್ಯಕ್ತಿಗಳಲ್ಲಿ ಅವರು ಒಬ್ಬರು.
ನಾಗರತ್ನ ಟೀಚರ್ ಕಲಿಸುವ ರೀತಿ ನನಗೆ ಇಷ್ಟ. ಅವರು ಎಲ್ಲಾ ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ನೋಡುವವರು. ಯಾರಲ್ಲೂ ಬೇಧ ಭಾವ ಮಾಡುವವರಲ್ಲ. ಅವರು ಪಾಠದ ಜೊತೆಗೆ ನಮಗೆ ದೈನಂದಿನ ಜೀವನದ ಘಟನೆಗಳನ್ನು ತಿಳಿಸುತ್ತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿಯೇ ಇರುವ ಇವರ ಸ್ವಭಾವ ನಂಗೆ ತುಂಬಾ ಇಷ್ಟ. ಹಾಗೆಯೇ ನಾಗರತ್ನ ಟೀಚರ್ ಅವರ ನೀಳವಾದ ಕೇಶ ರಾಶಿ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿತ್ತು. ನಾನು ಈ ಶಿಕ್ಷಕ ವೃತ್ತಿ ಆಯ್ದು ಕೊಳ್ಳಲು ದಾರಿ ತೋರಿದವರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ನಾನು ಶಿಕ್ಷಕಿಯಾಗಿ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿದ್ದೇನೆ. ಇಂತಹ ಗುರುಗಳು ಸಿಗಲು ನಾವು ಪುಣ್ಯ ಮಾಡಿರಬೇಕು. ಇಂತಹ ಗುರುಗಳಿಗೆ ನನ್ನ ಶತ ಶತ ಕೋಟಿ ಪ್ರಣಾಮಗಳು.
ಸಹ ಶಿಕ್ಷಕಿ
ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿರೂರು
ಬೈಂದೂರು ತಾಲ್ಲೂಕು, ಉಡುಪಿ ಜಿಲ್ಲೆ
ಮೊ : 7899705422
**************************************
ಗುರುಬ್ರಹ್ಮ, ಗುರುರ್ವಿಷ್ಣು
ಗುರುರ್ದೇವೋ ಮಹೇಶ್ವರಾ..
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
ಹಾಗೇ ಒಮ್ಮೆ ಆಳವಾಗಿ ಯೋಚಿಸುತ್ತಾ ಕುಳಿತರೆ... ಗುರುಗಳು ಅದೆಷ್ಟು ಮಹತ್ತರವಾದ ಆಸನದಲ್ಲಿ ಆಸೀನರಾಗಿರುವರು ಎಂಬುವುದರ ಅರಿವಾಗುತ್ತದೆ. ಯಾಕೆಂದರೆ, ಗುರುಗಳ ಸ್ಥಾನಮಾನವೇ ಅಂಥದ್ದು. ಪ್ರಪಂಚವು ಇಂದು ಆಧುನೀಕರಣಗೊಂಡು ನಾನಾ ರೀತಿಗಳಲ್ಲಿ ರಾರಾಜಿಸುತ್ತಿದೆಯೆಂದರೆ, ಅದರ ಹಿಂದೆ ಬೇರೆ - ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು ಕಾರಣ ಎಂದು ಲೀಲಾಜಾಲವಾಗಿ ಹೇಳಬಹುದು. ಆದರೆ ಅವರೆಲ್ಲರ ಜೀವನದ ಹಾದಿಗೆ ಗುರಿ ತೋರಿದ ಶಕ್ತಿಗಳೆಂದರೆ, ವಿದ್ಯೆಯ ನೀಡಿದ ಗುರುಗಳು ಎಂಬ ಸತ್ಯ ತಟ್ಟನೆ ಯಾರ ಯೋಚನೆಗೂ ನಿಲುಕುವುದಿಲ್ಲ. ಜೀವನದಲ್ಲಿ ಬೆಳೆದು ಮುಂದೆ ಸಾಗಿದಂತೆಲ್ಲ, ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳನ್ನು ನಾವು ಮರೆತು ಬಿಡಬಹುದು. ಆದರೆ ಅವರು ಎರಕ ಹೊಯ್ದ ವಿದ್ಯೆ ಬಾಳಿನುದ್ದಕ್ಕೂ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಇದು ವಿಶೇಷ.
ಆದರೆ ನನ್ನ ಜೀವನವು ಇಂದು ಯಥಾವತ್ತಾಗಿ ಸಾಗುತ್ತಿದೆಯೆಂದರೆ, ಅದಕ್ಕೆ ಕಾರಣೀಭೂತರು ಸ್ಪೂರ್ತಿದಾತರು ಕೆಲವು ಮಂದಿ. ಅದರಲ್ಲೂ ಮಗಳು ಪ್ರಣಮ್ಯ ತನ್ನ ಕವಿತೆಯೊಂದಲ್ಲಿ ಬರೆದ ಸಾಲುಗಳು "ಏಳು - ಬೀಳುಗಳ ದಾಟಿ ಸಾಗಿಬಂದಿಹಳು ನನ್ನಮ್ಮ, ನಂಬಿದ ಸತ್ಯ ಕಾಯಬಲ್ಲದೆಂಬ ನಂಬಿಕೆಯಲಿ... ಜೀವನವನ್ನು ಗೆಲ್ಲುವೆನೆಂಬ ಛಲದಲ್ಲಿ.." ಎನ್ನುವ ಸಾಲುಗಳು ಪ್ರತೀ ಬಾರಿಯೂ ನನ್ನನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದೆ. ಒಡಹುಟ್ಟಿದ ಸೋದರಿಯರು ನೀಡುವ ಧೈರ್ಯ 'ಹೇಗಿದ್ದೆ...ಹೇಗಾದೆ' ಎನ್ನುವಂತಹ ಉತ್ಸಾಹವನ್ನು ಜಾಸ್ತಿ ಮಾಡುತ್ತದೆ. ಇದಕ್ಕೆ ಸ್ಪೂರ್ತಿ ಎಂಬಂತೆ, ನನ್ನ ಬದುಕಿನ ತಿರುವಿಗೆ ಹೊಸ ಭಾಷ್ಯ ಬರೆದವರು, ನನಗೆ ಅಕ್ಕನ ಸಮಾನರಾಗಿರುವ ಪ್ರತೀಭಾ ಎಂಬ ಹೆಸರಿಗೆ ತಕ್ಕಂತೆ ಪ್ರತಿಭೆಯಿರುವವರು. ವೃತ್ತಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಒಂದಿಷ್ಟೂ ಆಡಂಬರವಿಲ್ಲದೆಯೇ ಎಲ್ಲರೊಡನೆ ಬೆರೆಯುವ ರೀತಿ ಖುಷಿ ಕೊಡುತ್ತದೆ. ಒಂದಷ್ಟು ಮಕ್ಕಳಿಗೆ ನಾನು ಮನೆಪಾಠ ಹೇಳಿಕೊಡುತ್ತಿದ್ದ ವಿಚಾರ ತಿಳಿದ ಇವರು, ನನ್ನನ್ನು ಬರಮಾಡಿಕೊಂಡು ಇಂದಿನ ಆನ್ಲೈನ್ ಜಗತ್ತಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡಿ, ಜೀವನದಲ್ಲಿ ಮುಂದೆ ಬರಬೇಕಾದರೆ ಪ್ರಯತ್ನ ಪಡಬೇಕು...ಎನ್ನುವ ಸಲಹೆ ಮೂಲಕ ಆನ್ಲೈನ್ ಕ್ಲಾಸ್ಗಳ ಬಗ್ಗೆ ಅರಿವನ್ನು ಮೂಡಿಸಿರುವ ಅವರನ್ನು ನನ್ನ ಗುರುಗಳು ಎಂದರೆ ತಪ್ಪಲ್ಲ.
ಪ್ರತಿಭಾ ಅಕ್ಕರವರು ನನಗೆ ತೋರಿದ ದಾರಿ, ಧೈರ್ಯ, ಹುಮ್ಮಸ್ಸುಗಳ ಫಲವಾಗಿ ನಾನಿಂದು ಒಂದಷ್ಟು ಮಕ್ಕಳಿಗೆ ಆನ್ಲೈನ್ ತರಗತಿ ನಡೆಸುವ ಮುಖೇನ ಸಂಪಾದಿಸುವ ಭಾಗ್ಯ ಪಡೆದಿದ್ದೇನೆ. ಅರ್ಧಕ್ಕೆ ನಿಂತಿದ್ದ ವಿದ್ಯೆಯ ಯಾನ ಮತ್ತೆ ಆರಂಭಗೊಂಡಿದೆ. ಜೀವನದ ಹಲವು ಸಕಾರಾತ್ಮಕ ತಿರುವುಗಳಿಗೆ ಕಾರಣರಾಗುವ ಇಂತಹ ನಿಸ್ವಾರ್ಥ ಮನಸ್ಸಿನವರನ್ನು ನಾವು ಗುರುಗಳ ಸ್ಥಾನದಲ್ಲಿರಿಸಿ ಗೌರವಿಸಬೇಕು. ಹೀಗೂ ಬದುಕಬಹುದು ಎನ್ನುತಾ ಬೆನ್ನು ತಟ್ಟಿ ಪ್ರೇರಕರಾಗಿರುವ ನನ್ನ "ಬೆಸ್ಟ್ ಟೀಚರ್ " ಪ್ರತಿಭಾ ಅಕ್ಕ.. ನಿಮಗೆ ಮಕ್ಕಳ ಜಗಲಿಯ ಮುಖೇನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.....
ಮಕ್ಕಳ ಜಗಲಿ ಎಂಬ ವೇದಿಕೆಯನ್ನು ಹೊಸ -- ಹೊಸ ವಿಚಾರಗಳೊಂದಿಗೆ ಅಲಂಕರಿಸುತ್ತಿರುವ ಹಾಗೆಯೇ ಸಮಾಜದ ಅಭ್ಯುದಯದ ಶಿಲ್ಪಿಗಳಂತಿರುವ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳೊಂದಿಗೆ......
ಚಾಮೆತ್ತಮೂಲೆ ಮನೆ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊ : +91 99453 11853
**************************************
"ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ" ಎಂಬ ಮಾತಿನಂತೆ ನಮಗೆ ಬದುಕಿನ ದಾರಿಯನ್ನು ತೋರಿಸುವವರು ಶಿಕ್ಷಕರು. ನನ್ನ ಜೀವನದಲ್ಲಿ ನನ್ನನ್ನು ಪ್ರೀತಿಯಿಂದ ತಿದ್ದಿ, ತೀಡಿ, ಮುನ್ನಡೆಸಿದ ವರ್ಷ ಟೀಚರ್ ನನ್ನ ಪಾಲಿನ ಅತ್ಯಂತ ಪ್ರೀತಿಯ ಮತ್ತು ನೆಚ್ಚಿನ ಶಿಕ್ಷಕಿ. ಅವರು ನಮಗೆ ಸಮಾಜ ವಿಜ್ಞಾನ ವಿಷಯವನ್ನು ಪಾಠ ಮಾಡುತ್ತಿದ್ದರು. ಇತಿಹಾಸದ ಕಥೆಗಳಿರಲಿ, ಭೂಗೋಳದ ನಕ್ಷೆಗಳಿರಲಿ, ಅವರು ಪಾಠ ಮಾಡುವ ಶೈಲಿ ತುಂಬಾ ಚೆನ್ನಾಗಿ ಇತ್ತು. ತುಂಬಾ ಕಠಿಣವಾದ ವಿಷಯವನ್ನು ಕಥೆಗಳ ಮೂಲಕ ನಮಗೆ ಚೆನ್ನಾಗಿ ಅರ್ಥ ಮಾಡಿಸುತ್ತಿದ್ದರು. ಅವರ ತರಗತಿಗಾಗಿ ನಾನು ಸದಾ ಕಾಯುತ್ತಿದ್ದೆ. ಕೇವಲ ಪಾಠ ಪುಸ್ತಕದಲ್ಲಿದ್ದ ಪಾಠವನ್ನಷ್ಟೇ ಅಲ್ಲ, ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಹೇಗೆ ಬಾಳಬೇಕು ಎಂದು ಬದುಕಿನ ಪಾಠವನ್ನೂ ಕಲಿಸಿದ್ದಾರೆ. ಅವರಲ್ಲಿದ್ದ ತಾಳ್ಮೆ ಮತ್ತು ಯಾವಾಗಲೂ ಮುಖದಲ್ಲಿ ಇದ್ದ ಕಿರುನಗೆ ನಮ್ಮಲ್ಲಿ ಸದಾ ಹುಮ್ಮಸ್ಸನ್ನು ತುಂಬುತ್ತಿತ್ತು. ಅವರು ಈಗ ಬೇರೆ ಶಾಲೆಗೆ ವರ್ಗಾವಣೆ ಆಗಿ ಹೋಗಿರಬಹುದು. ಆದರೆ ನನ್ನ ಹೃದಯದಲ್ಲಿ ಅವರಿಗಿರುವ ಸ್ಥಾನ ಯಾವತ್ತಿಗೂ ಬದಲಾಗುವುದಿಲ್ಲ. ನನಗೆ ಅಕ್ಷರ ಕಲಿಸಿ, ಯೋಚಿಸುವ ಶಕ್ತಿ ನೀಡಿ, ನನ್ನನ್ನು ಉತ್ತಮವಾಗಿ ಬೆಳೆಸಿದ ರೂಪಿಸಿದ ವರ್ಷ ಟೀಚರ್ ಎಂದೆಂದಿಗೂ ನನ್ನ ಹೆಮ್ಮೆಯ ಮತ್ತು ಅತ್ಯಂತ ಪ್ರೀತಿಯ ಗುರುಗಳು.
ನಡುವಾಳು ಮನೆ, ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊ : +91 82173 80621
**************************************
ನಮ್ಮ ಜೀವನದ ಪ್ರತಿಯೊಂದು ಘಟ್ಟದಲ್ಲೂ ಅನೇಕ ಶಿಕ್ಷಕರನ್ನು ನಾವು ಭೇಟಿಯಾಗುತ್ತೇವೆ. ಕೆಲವರು ನಮಗೆ ಪಾಠವನ್ನು ಕಲಿಸುತ್ತಾರೆ; ಕೆಲವರು ಬದುಕಿನ ಪಾಠವನ್ನೇ ಕಲಿಸುತ್ತಾರೆ. ಆದರೆ ನಮ್ಮೊಳಗಿನ ಸಾಮರ್ಥ್ಯವನ್ನು ಗುರುತಿಸಿ, ನಾವು ನಡೆದುಹೋಗಬೇಕಾದ ದಾರಿಗೆ ಹೊಸ ತಿರುವು ನೀಡಿ, ನಮ್ಮ ಕನಸುಗಳಿಗೆ ಸ್ಫೂರ್ತಿಯಾಗುವ ಕೆಲವೇ ಕೆಲವು ಶಿಕ್ಷಕರು ನಮ್ಮ ಹೃದಯದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತಾರೆ. ನನ್ನ ಜೀವನದಲ್ಲೂ ಅಂತಹ ಒಬ್ಬ ಶಿಕ್ಷಕರು ನನ್ನ ಕನ್ನಡ ಮೇಷ್ಟ್ರು ಶ್ರೀಯುತ ಗಂಗಾಧರ ಗೌಡ ಅವರು.
ಬೆಳ್ತಂಗಡಿಯ ಸಂತ ತೆರೇಸಾ ಪ್ರೌಢಶಾಲೆಯ ದಿನಗಳಲ್ಲಿ ನನಗೆ ಕನ್ನಡವನ್ನು ಕಲಿಸಿದ ಅವರು ಕೇವಲ ಭಾಷಾ ಪಾಠವನ್ನು ಬೋಧಿಸಿದ ಶಿಕ್ಷಕರಲ್ಲ. ನನ್ನೊಳಗೆ ಅಡಗಿದ್ದ ಕನ್ನಡದ ಪ್ರೀತಿಯನ್ನು ಗುರುತಿಸಿ, ಅದಕ್ಕೆ ನೀರೆರೆದು ಬೆಳೆಸಿದ ಮಾರ್ಗದರ್ಶಕರು.
ನನ್ನ ಮೊದಲ ಆಯ್ಕೆ ಎಂ. ಎಸ್ಸಿ . ಮನೋವಿಜ್ಞಾನವಾಗಿತ್ತು. ಆದರೆ ಮತ್ತೆ ಕೆಲವು ವರ್ಷಗಳ ನಂತರ ಕನ್ನಡದ ಲೋಕದತ್ತ ತಿರುಗಿ ನೋಡುವಂತೆ ಮಾಡಿದವರು ನನ್ನ ಕನ್ನಡ ಮೇಷ್ಟ್ರೇ. ಕನ್ನಡ ಭಾಷೆಯ ಸೌಂದರ್ಯ, ಸಾಹಿತ್ಯದ ಆಳ ಮತ್ತು ಅಧ್ಯಯನದ ಸಾಧ್ಯತೆಗಳನ್ನು ನನ್ನ ಮನಸ್ಸಿನಲ್ಲಿ ಬಿತ್ತಿದ ಆ ಸ್ಫೂರ್ತಿಯ ಬೀಜವೇ ಇಂದು ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ.
ಒಂದು ಕಾಲದಲ್ಲಿ ಮನೋವಿಜ್ಞಾನವನ್ನು ಅಧ್ಯಯನ ಮಾಡಿದ ನಾನು, ಇಂದು ಕನ್ನಡದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ. ಪೂರೈಸಿರುವೆ ಎಂದಾದರೆ, ಅದರ ಹಿಂದೆ ನನ್ನ ಪ್ರಯತ್ನದಷ್ಟೇ ನನ್ನ ಶಿಕ್ಷಕರ ಪ್ರೇರಣೆಯೂ ಇದೆ. ಕೆಲವರು ನಮ್ಮ ಬದುಕಿಗೆ ಬಂದು ಒಂದು ವಿಷಯವನ್ನು ಕಲಿಸಿ ಹೋಗುತ್ತಾರೆ; ಆದರೆ ಕೆಲವರು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿ ಹೋಗುತ್ತಾರೆ. ನನಗೆ ನನ್ನ ಕನ್ನಡ ಮೇಷ್ಟ್ರು ಅಂತಹವರು.
ಗುರುವೊಬ್ಬರು ಹೇಳಿದ ಒಂದು ಮಾತು, ತೋರಿದ ಒಂದು ದಾರಿ, ವಿದ್ಯಾರ್ಥಿಯ ಸಾಮರ್ಥ್ಯದ ಮೇಲೆ ಇಟ್ಟ ನಂಬಿಕೆ ವಿದ್ಯಾರ್ಥಿಯ ಬದುಕನ್ನು ಎಷ್ಟೋ ದೂರ ಕರೆದೊಯ್ಯಬಲ್ಲದು ಎಂಬುದಕ್ಕೆ ನನ್ನ ಜೀವನವೇ ಒಂದು ಉದಾಹರಣೆ.
ಇಂದು ನಾನು ಕನ್ನಡದಲ್ಲಿ ಪಿಎಚ್.ಡಿ. ಪೂರೈಸಿ, ನನ್ನ ಶೈಕ್ಷಣಿಕ ಪಯಣವನ್ನು ಹಿಂದಿರುಗಿ ನೋಡಿದಾಗ, ನನ್ನ ನೆನಪು ಸಹಜವಾಗಿಯೇ ಬೆಳ್ತಂಗಡಿಯ ಸಂತ ತೆರೇಸಾ ಪ್ರೌಢಶಾಲೆಯ ಆ ತರಗತಿಯತ್ತ ಹೋಗುತ್ತದೆ. ಅಲ್ಲಿಯೇ ನನ್ನೊಳಗೆ ಕನ್ನಡದ ಬಗ್ಗೆ ಮೊಳಕೆಯೊಡೆದ ಆ ಪ್ರೀತಿಯ ಹಿಂದೆ ನಿಂತಿರುವ ನನ್ನ ಪ್ರಿಯ ಕನ್ನಡ ಮೇಷ್ಟ್ರು ನೆನಪಾಗುತ್ತಾರೆ.
ಅಂದು ಅವರು ಕಲಿಸಿದ ಕನ್ನಡ ಪಾಠ ನನಗೆ ಕೇವಲ ಒಂದು ವಿಷಯವಾಗಿರಲಿಲ್ಲ. ನನ್ನ ಬದುಕಿನ ಒಂದು ಮಹತ್ವದ ಕ್ಷಣವಾಗಿತ್ತು. ಅಂದು ಅವರ ತರಗತಿಯಲ್ಲಿ ಕುಳಿತಿದ್ದ ನನಗೆ, ಮುಂದೊಂದು ದಿನ ಕನ್ನಡದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ. ಪೂರೈಸುವ ಅವಕಾಶ ಸಿಗುತ್ತದೆ ಎಂದು ಬಹುಶಃ ನಾನೂ ಊಹಿಸಿರಲಿಲ್ಲ.
ಆದರೆ ಜೀವನದಲ್ಲಿ ಕೆಲವು ಬೀಜಗಳು ಯಾವಾಗಲೋ ಬಿತ್ತಲ್ಪಡುತ್ತವೆ. ಆದರೆ ಅವು ಯಾವಾಗ ಮರವಾಗಿ ಬೆಳೆಯುತ್ತವೆ ಎಂಬುದು ನಮಗೇ ಗೊತ್ತಾಗುವುದಿಲ್ಲ. ಒಂದಂತೂ ನಿಜ... ನನ್ನೊಳಗಿನ ಕನ್ನಡದ ಪ್ರೀತಿಯ ಬೀಜವನ್ನು ಬಿತ್ತಿದವರಲ್ಲಿ ನನ್ನ ಕನ್ನಡ ಮೇಷ್ಟ್ರಿಗೂ ವಿಶೇಷ ಸ್ಥಾನವಿದೆ.
ಕೆಲವು ಗುರುಗಳು ಪಾಠವಷ್ಟೇ ಕಲಿಸುತ್ತಾರೆ…
ಕೆಲವು ಗುರುಗಳು ದಾರಿಯಷ್ಟೇ ತೋರಿಸುತ್ತಾರೆ…
ಆದರೆ ಅಪರೂಪದ ಕೆಲವರು ನಮ್ಮೊಳಗಿನ ನಮ್ಮನ್ನೇ ನಮಗೆ ಪರಿಚಯಿಸುತ್ತಾರೆ. ನನ್ನ ಕನ್ನಡ ಮೇಷ್ಟ್ರು ನನಗೆ ಅಂತಹ ಅಪರೂಪದ ಗುರು.
ಇಂದು ನನ್ನ ಹೆಸರಿನೊಂದಿಗೆ “ಡಾ.” ಎಂಬ ಅಕ್ಷರ ಸೇರಿದ್ದರೆ, ಅದರ ಹಿಂದೆ ನನ್ನ ಬದುಕಿನ ಬೇರೆಬೇರೆ ಘಟ್ಟಗಳಲ್ಲಿ ನನ್ನನ್ನು ರೂಪಿಸಿದ ಅನೇಕ ಗುರುಗಳ ಆಶೀರ್ವಾದವಿದೆ. ಆ ಗುರುಗಳ ಸಾಲಿನಲ್ಲಿ ನನ್ನೊಳಗೆ ಕನ್ನಡದ ಪ್ರೀತಿಯನ್ನು ಮೂಡಿಸಿದ ನನ್ನ ಕನ್ನಡ ಮೇಷ್ಟ್ರಿಗೆ ವಿಶೇಷ ಸ್ಥಾನವಿದೆ.
ನನ್ನ ಪ್ರಿಯ ಕನ್ನಡ ಮೇಷ್ಟ್ರೇ, ನೀವು ಕಲಿಸಿದ ಪಾಠಕ್ಕಿಂತಲೂ, ನನ್ನೊಳಗೆ ನೀವು ಹುಟ್ಟಿಸಿದ ಆಸಕ್ತಿ ಬಹಳ ದೊಡ್ಡದು. ಕನ್ನಡದತ್ತ ನನ್ನನ್ನು ಸೆಳೆದ ನಿಮ್ಮ ಪ್ರೇರಣೆಗೆ, ನನ್ನ ಮೇಲೆ ನೀವು ಇಟ್ಟ ನಂಬಿಕೆಗೆ ಮತ್ತು ನನ್ನ ಬದುಕಿನ ಓದಿಗೆ ಹೊಸ ದಿಕ್ಕು ನೀಡಿದ ನಿಮಗೆ ಹೃದಯಪೂರ್ವಕ ಕೃತಜ್ಞತೆಗಳು.
ನನ್ನ ಪಿ.ಎಚ್.ಡಿ. ಸಾಧನೆಯಲ್ಲಿ ನನ್ನ ಹೆಜ್ಜೆಗಳಿವೆ; ಆದರೆ ಅದಕ್ಕೂ ಮಿಗಿಲಾಗಿ, ಆ ಹೆಜ್ಜೆಗಳು ಕನ್ನಡದ ದಾರಿಯತ್ತ ತಿರುಗಲು ಕಾರಣವಾದ ನಿಮ್ಮಂತಹ ಗುರುಗಳ ಪ್ರೇರಣೆ ಬಹಳಷ್ಟಿದೆ.
W/o ರವಿಶಂಕರ ಕೆ.
೫-೩೯೨, ಜಯದುರ್ಗಾ, ನೆತ್ರಕೆರೆ,
ವಿಟ್ಲ, ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ
ಮೊಬೈಲ್ : ೯೪೪೯೭೯೩೫೮೪
**************************************