-->
ಶಿಕ್ಷಕರ ಮೌನ ಮನವಿ : ಲೇಖಕರು - ಮೌನೇಶ ವಿಶ್ವಕರ್ಮ

ಶಿಕ್ಷಕರ ಮೌನ ಮನವಿ : ಲೇಖಕರು - ಮೌನೇಶ ವಿಶ್ವಕರ್ಮ

ಲೇಖನ : ಶಿಕ್ಷಕರ ಮೌನ ಮನವಿ
ಲೇಖಕರು : ಮೌನೇಶ ವಿಶ್ವಕರ್ಮ
ಪತ್ರಕರ್ತ, ರಂಗನಿರ್ದೇಶಕ 
ಆರ್ಯಾಪು-ಪುತ್ತೂರು, ದ.ಕ.ಜಿಲ್ಲೆ


             
"ನಾವು ಶಿಕ್ಷಕರು... ನಮ್ಮನ್ನು ಪಾಠ ಮಾಡಲು ಬಿಡಿ!"

ಸ್ವಾತಂತ್ರ್ಯದ ಅಮೃತ ಘಳಿಗೆಯಲ್ಲಿ ಶಿಕ್ಷಕರ ಮೌನ ಮನವಿ.                            

ದೇಶವು 80ನೇ ಸ್ವಾತಂತ್ರ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. "ಸ್ವಾತಂತ್ರ್ಯ" ಎಂಬ ಪದ ಇಂದು ಎಲ್ಲೆಡೆ ಮೊಳಗುತ್ತಿದೆ. ಆದರೆ ಇದೇ ಸಮಯದಲ್ಲಿ ದೇಶದ ಭವಿಷ್ಯ ರೂಪಿಸುವ ಶಿಕ್ಷಕರು ಮಾತ್ರ ಒಂದು ನೋವಿನ ಮನವಿಯನ್ನು ದೇಶದ ಮುಂದಿಟ್ಟಿದ್ದಾರೆ – "ನಾವು ಶಿಕ್ಷಕರು... ನಮ್ಮನ್ನು ಪಾಠ ಮಾಡಲು ಬಿಡಿ!"

ಇದು ಕೇವಲ ಒಂದು ಘೋಷಣೆಯಲ್ಲ; ಸಾವಿರಾರು ಶಿಕ್ಷಕರ ಮನದಾಳದ ಮೌನ ಆಕ್ರಂದನ.

ಒಂದು ಕಾಲದಲ್ಲಿ ಶಿಕ್ಷಕರ ಕೈಯಲ್ಲಿ ಚಾಕ್ ಪೀಸ್ ಇತ್ತು. ಎದುರು ಕಪ್ಪು ಹಲಗೆ ಇತ್ತು. ಕಣ್ಣಲ್ಲಿ ಕನಸುಗಳನ್ನು ಹೊತ್ತ ಮಕ್ಕಳಿದ್ದರು. ತರಗತಿ ಕೋಣೆಯಲ್ಲಿ ಪ್ರಶ್ನೆಗಳು, ಚರ್ಚೆಗಳು, ನಗು ಮತ್ತು ಕಲಿಕೆಯ ಸಡಗರ ಇತ್ತು. ಇಂದು ಚಿತ್ರಣವೇ ಬದಲಾಗಿದೆ. ಶಿಕ್ಷಕರ ಕೈಯಲ್ಲಿ ಮೊಬೈಲ್ ಇದೆ. ಕಪ್ಪು ಹಲಗೆ ತರಗತಿಯ ಮೂಲೆಗೆ ಸರಿದಿದೆ. ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ಪಾಠ ಹೇಳಬೇಕಾದ ಸಮಯವನ್ನು ಮೊಬೈಲ್ ಆ್ಯಪ್‌ಗಳಲ್ಲಿ ಮಾಹಿತಿಯನ್ನು ತುಂಬುವ ಕೆಲಸ ನುಂಗಿಬಿಟ್ಟಿದೆ.

ಶಿಕ್ಷಕರು ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ವಿರೋಧಿಗಳಲ್ಲ. ಬದಲಾಗಿ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಮತ್ತು ಪಾರದರ್ಶಕ ಆಡಳಿತವನ್ನು ಅವರು ಸದಾ ಸ್ವಾಗತಿಸುತ್ತಾರೆ. ಆದರೆ ಶಿಕ್ಷಣದ ಮೂಲ ಉದ್ದೇಶವೇ ಮಂಕಾಗುವಷ್ಟು ಆಡಳಿತಾತ್ಮಕ ಹೊರೆ ಶಿಕ್ಷಕರ ಮೇಲಾಗಬಾರದು ಎಂಬುದೇ ಅವರ ಸರಳ ಮನವಿ.

ಇತ್ತೀಚಿನ ವರ್ಷಗಳಲ್ಲಿ ಶಾಲಾ ಶಿಕ್ಷಣದಲ್ಲಿ ವಿವಿಧ ಡಿಜಿಟಲ್ ವ್ಯವಸ್ಥೆಗಳು ಮತ್ತು ಆನ್‌ಲೈನ್ ಆ್ಯಪ್‌ಗಳ ಬಳಕೆ ಹೆಚ್ಚಾಗಿದೆ. SATS ಸೇರಿದಂತೆ ಹಲವಾರು ಆ್ಯಪ್‌ಗಳಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಪುನಃ ಪುನಃ ದಾಖಲಿಸುವುದು, ವಿವಿಧ ವರದಿಗಳನ್ನು ಅಪ್‌ಲೋಡ್ ಮಾಡುವುದು, ನಿರಂತರ ನವೀಕರಣಗಳನ್ನು ಮಾಡುವುದು ಶಿಕ್ಷಕರ ದಿನನಿತ್ಯದ ಕೆಲಸದ ದೊಡ್ಡ ಭಾಗವಾಗಿ ಬದಲಾಗಿದೆ. ಇದರಿಂದ ತರಗತಿಯಲ್ಲಿ ಮಕ್ಕಳೊಂದಿಗೆ ಕಳೆಯಬೇಕಾದ ಅಮೂಲ್ಯ ಸಮಯ ಕಡಿಮೆಯಾಗುತ್ತಿದೆ.

ಶಿಕ್ಷಕರ ಪ್ರಮುಖ ಬೇಡಿಕೆಗಳು ಸರಳವಾಗಿವೆ. ಅಗತ್ಯವಿಲ್ಲದ ಮತ್ತು ಒಂದೇ ಮಾಹಿತಿಯನ್ನು ಮರುಮರು ಕೇಳುವ ಆ್ಯಪ್‌ಗಳನ್ನು ರದ್ದುಪಡಿಸಬೇಕು. ಈಗಿರುವ ಅನೇಕ ಆ್ಯಪ್‌ಗಳ ಬದಲು ಒಂದೇ ಸಮಗ್ರ ವ್ಯವಸ್ಥೆ ಜಾರಿಯಾಗಬೇಕು. ಶಾಲಾ ಸಮಯದಲ್ಲಿ ಶಿಕ್ಷಕರನ್ನು ಮೊಬೈಲ್ ಕೆಲಸಗಳಲ್ಲಿ ತೊಡಗಿಸದೆ, ಮಕ್ಕಳ ಕಲಿಕೆಗೆ ಸಂಪೂರ್ಣ ಸಮಯ ಮೀಸಲಿಡಲು ಅವಕಾಶ ನೀಡಬೇಕು.

ಶಿಕ್ಷಕರು ಹೇಳುತ್ತಿರುವ ಮಾತು ಅತ್ಯಂತ ಸ್ಪಷ್ಟವಾಗಿದೆ:

"ದಿನೇ ದಿನೇ ಹೆಚ್ಚಾಗುತ್ತಿರುವ ಮೊಬೈಲ್ ಆ್ಯಪ್‌ಗಳ ಒತ್ತಡದಲ್ಲಿ ಶಾಲೆಯ ಕಪ್ಪು ಹಲಗೆ ಮೂಲೆ ಸೇರಿದೆ; ಮಕ್ಕಳ ಕಲಿಕೆಯ ಭವಿಷ್ಯ ಮಂಕಾಗುತ್ತಿದೆ."

ಶಿಕ್ಷಕರು ಬಯಸುವುದು ಯಾವುದೇ ವಿಶೇಷ ಸವಲತ್ತು ಅಲ್ಲ. ಅವರಿಗೆ ಬೇಕಾಗಿರುವುದು ಬೋಧನೆಯ ಸ್ವಾತಂತ್ರ್ಯ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ. ಅವರ ಕಲಿಕೆಯನ್ನು ಉತ್ತಮಗೊಳಿಸುವ ಪರಿಸರ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಜವಾದ ಅವಕಾಶ.

ಒಬ್ಬ ಶಿಕ್ಷಕ ತರಗತಿಯಲ್ಲಿ ನಿಂತಾಗ ಪಾಠ ಮಾತ್ರ ಹೇಳುವುದಿಲ್ಲ; ಮೌಲ್ಯಗಳನ್ನು ಬಿತ್ತುತ್ತಾನೆ, ಕನಸುಗಳಿಗೆ ರೆಕ್ಕೆ ಕಟ್ಟುತ್ತಾನೆ, ದೇಶದ ಭವಿಷ್ಯವನ್ನು ರೂಪಿಸುತ್ತಾನೆ. ಅಂತಹ ಶಿಕ್ಷಕರ ಅಮೂಲ್ಯ ಸಮಯವನ್ನು ಅನಗತ್ಯ ದಾಖಲೆಗಳು ಮತ್ತು ಡಿಜಿಟಲ್ ಒತ್ತಡಗಳು ಕಸಿದುಕೊಂಡರೆ ಅದರ ನಷ್ಟ ಕೇವಲ ಶಿಕ್ಷಕರಿಗಲ್ಲ, ಇಡೀ ಸಮಾಜಕ್ಕೆ.

ಸ್ವಾತಂತ್ರ್ಯದ ಈ ಪವಿತ್ರ ಸಂದರ್ಭದಲ್ಲಿ ನಾವು ನಮ್ಮನ್ನು ನಾವು ಒಂದು ಪ್ರಶ್ನೆ ಕೇಳಿಕೊಳ್ಳಬೇಕು. ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಅವರು ಅತ್ಯುತ್ತಮವಾಗಿ ಮಾಡಬಲ್ಲ ಕೆಲಸವಾದ ಬೋಧನೆ ಮಾಡುವ ಸ್ವಾತಂತ್ರ್ಯವನ್ನು ನಾವು ನಿಜವಾಗಿಯೂ ನೀಡಿದ್ದೇವೆಯೇ?

ದೇಶಕ್ಕೆ ಉತ್ತಮ ಶಿಕ್ಷಣ ಬೇಕು ಎಂದರೆ ಶಿಕ್ಷಕರಿಗೆ ಮೊದಲು ಉತ್ತಮ ಕೆಲಸದ ವಾತಾವರಣ ಬೇಕು. ಉತ್ತಮ ಶಿಕ್ಷಕ ಎಂದರೆ ಉತ್ತಮ ವಿದ್ಯಾರ್ಥಿ; ಉತ್ತಮ ವಿದ್ಯಾರ್ಥಿ ಎಂದರೆ ಉತ್ತಮ ಸಮಾಜ; ಉತ್ತಮ ಸಮಾಜವೇ ಬಲಿಷ್ಠ ರಾಷ್ಟ್ರ.

ಆದ್ದರಿಂದ ಶಿಕ್ಷಕರ ಒಂದೇ ಮನವಿ –

"ನಮಗೆ ಅಕ್ಕಿ ಬೇಳೆಯ ಲೆಕ್ಕ ಬೇಡ, ಅನಗತ್ಯ ಆ್ಯಪ್‌ಗಳ ಜಂಜಾಟವೂ ಬೇಡ...
ನಮಗೆ ನಮ್ಮ ಮಕ್ಕಳಿಗೆ ಪಾಠ ಹೇಳುವ ಸಮಯವನ್ನು ಮರಳಿ ಕೊಡಿ.
ನಾವು ಶಿಕ್ಷಕರು... ನಮ್ಮನ್ನು ಪಾಠ ಮಾಡಲು ಬಿಡಿ!".          ......................................... ಮೌನೇಶ ವಿಶ್ವಕರ್ಮ
ಪತ್ರಕರ್ತ, ರಂಗನಿರ್ದೇಶಕ 
ಶ್ರೀ ದಿಗ್ವಿಜಯಮ್ ಮನೆ, ಸಂಪ್ಯ
ಆರ್ಯಾಪು-ಪುತ್ತೂರು ದ.ಕ.ಜಿಲ್ಲೆ
Mob : +91 94810 17606
***************************************


Ads on article

Advertise in articles 1

advertising articles 2

Advertise under the article