ಜೀವನ ಸಂಭ್ರಮ : ಸಂಚಿಕೆ - 256
Sunday, August 16, 2026
Edit
ಜೀವನ ಸಂಭ್ರಮ : ಸಂಚಿಕೆ - 256
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇದು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಈ ಶಾಲೆಯಲ್ಲಿ ನಡೆದ ಘಟನೆ.
ದಿನಾಂಕ 13.8.2026ರ ಗುರುವಾರದಂದು ಶಾಲೆಯಲ್ಲಿ ಬಿಸಿಯೂಟ ತಯಾರಿ ನಡೆಯುತ್ತಿತ್ತು. ಅಡುಗೆ ಸಿಬ್ಬಂದಿ ಅಡುಗೆ ಕಾರ್ಯದಲ್ಲಿ ತೊಡಗಿದ್ದರು. ಅವರಲ್ಲಿ ಒಬ್ಬರು ಸಾಂಬಾರಿಗಾಗಿ ಕಾಯಿ ತುರಿಯಲು ವಿದ್ಯುತ್ ಚಾಲಿತ ತುರೀಮಣೆ ಬಳಸಿದ್ದರು. ಆಕಸ್ಮಿಕವಾಗಿ ಅಡುಗೆ ಸಿಬ್ಬಂದಿಯ ಕೈ ಬೆರಳು ವಿದ್ಯುತ್ ತುರಿ ಮಣೆಯಲ್ಲಿ ಸಿಕ್ಕಿಹಾಕಿಕೊಂಡು ಕಿರುಚಿದ್ದಾರೆ. ಅದೇ ಸಮಯದಲ್ಲಿ ಶಾಲೆಯ ಅಂಗಳದಲ್ಲಿ ಆಟವಾಡುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಮನ್ವಿತ್ ಕಿರುಚಾಟ ಕೇಳಿ ಓಡಿ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಮುಂದಾಗುತ್ತಿದ್ದ ಅನಾಹುತ ತಪ್ಪಿಸಿದ್ದಾನೆ. ಸ್ವಯಂ ನಿರ್ಧಾರದಿಂದ ಸಮಯ ಪ್ರಜ್ಞೆ ಮೆರೆದ ಬಾಲಕನ ಧೈರ್ಯವನ್ನು ರಾಜ್ಯದ ಮುಖ್ಯಮಂತ್ರಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ.
ದಿನಾಂಕ 14.08.2026ರಂದು ಈತನಿಗೆ ಅಭಿನಂದನೆ ಸಲ್ಲಿಸಲು ನಾನು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್, ಸಹಾಯಕ ನಿರ್ದೇಶಕ ನೋಣಯ್ಯ, ಎಸ್ ಡಿ ಎಮ್ ಸಿ ಅಧ್ಯಕ್ಷರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಯ ತಂದೆತಾಯಿ ಮತ್ತು ಮಕ್ಕಳ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಇದರಲ್ಲೇನು ವಿಶೇಷತೆ?. ಅನ್ನಬಹುದು. ಬಾಲಕ ಮನ್ವಿತ್ ಕಿರುಚಾಟ ಕೇಳಿ ಹೋಗಿ ನೋಡಿ ಗಾಬರಿಗೊಂಡು ಸಹಾಯಕ್ಕೆ ಬೇರೆಯವರನ್ನು ಕರೆದಿಲ್ಲ ಅಥವಾ ಭಯದಿಂದ ಓಡಿಹೋಗಿ ಶಿಕ್ಷಕರ ಗಮನಕ್ಕೆ ತರಲು ಪ್ರಯತ್ನಿಸಿಲ್ಲ. ಹೆದರದೆ ಸ್ವಯಂಪ್ರಜ್ಞೆಯಿಂದ ವಿದ್ಯುತ್ ಸಂಪರ್ಕ ತಪ್ಪಿಸಿದ್ದು ಒಳ್ಳೆಯ ಕಾರ್ಯ. ಈ ಕಾರ್ಯವನ್ನು ತೋರಿಸಿಕೊಳ್ಳಲು, ಮಾನ್ಯತೆಗಾಗಿ ಅಥವಾ ಹೆಸರಿಗಾಗಿ ಮಾಡಿದ್ದಲ್ಲ. ಇದರಿಂದ ಮುಂದೆ ಆಗುತ್ತಿದ್ದ ದೊಡ್ಡ ಅನಾಹುತ ತಪ್ಪಿದೆ ಅದಕ್ಕಾಗಿ ಈ ಬಾಲಕನಿಗೆ ಅಭಿನಂದನೆ ಸಲ್ಲಿಸಲಾಗಿದೆ.
ಭಾರತೀಯ ಧಾರ್ಮಿಕ ಸಾಹಿತ್ಯದಲ್ಲಿ ದೇವರು ಕಷ್ಟಕಾಲದಲ್ಲಿ ನೆರವಿಗೆ ಬರುತ್ತಾನೆ ಅಂತ ಹೇಳುತ್ತಾರೆ. ಅಂದರೆ ದೇವರು ದೇವರಾಗಿ ಬಂದು ಸಹಾಯ ಮಾಡುವುದಿಲ್ಲ. ದೇವರು ಮಾನವನ ರೂಪದಲ್ಲಿ, ವಸ್ತುರೂಪದಲ್ಲಿ ಸಹಾಯ ಮಾಡುತ್ತಾನೆ. ಅಂದರೆ ನಾವೆಲ್ಲರೂ ದೇವರಾಗಲು ಸಾಧ್ಯವಿದೆ. ಹೇಗೆ?. ಒಳ್ಳೆಯ ಕಾರ್ಯದಿಂದ ದೇವರಾಗಬಹುದು. ಆತನ ಅಣ್ಣನೂ ಕೂಡ 7ನೇ ತರಗತಿ ಓದುತ್ತಿದ್ದು ಅದೇ ಶಾಲೆಯಲ್ಲಿದ್ದಾನೆ. ಆತನ ತಂದೆಗೆ ಮಾತು ಬರುವುದಿಲ್ಲ. ಆದರೆ ತಂದೆ ತಾಯಿ ಶಾಲೆಯ ತೋಟ ನಿರ್ವಹಣೆ ಮಾಡಲು ಸ್ವಯಂ ಪ್ರೇರಣೆಯಿಂದ ಶ್ರಮಿಸುತ್ತಿರುವುದನ್ನು ಶಾಲೆಗೆ ಭೇಟಿ ನೀಡಿದಾಗ ಗಮನಿಸಿರುತ್ತೇನೆ.
ನಮ್ಮಲ್ಲಿ ದಾಸೋಹ ಎನ್ನುವ ಕ್ರಮವಿದೆ. ದಾಸೋಹ ಎಂದರೆ ನಮ್ಮಲ್ಲಿರುವುದನ್ನು ಉಚಿತವಾಗಿ ಆಶಾರಹಿತವಾಗಿ ಹಂಚಿಕೊಳ್ಳುವುದು. ವಿದ್ಯೆಯಿತ್ತು ವಿದ್ಯೆಯನ್ನು ಉಚಿತವಾಗಿ ಹಂಚಿದರೆ ವಿದ್ಯಾ ದಾಸೋಹ ಎನ್ನುತ್ತೇವೆ. ಆಹಾರ ಇದ್ದು ಆಹಾರ ಹಂಚಿದರೆ ಆಹಾರ ದಾಸೋಹ ಎನ್ನುತ್ತೇವೆ. ಒಬ್ಬ ಅಸಕ್ತ ದಾರಿದಾಟಲು ಕಷ್ಟ ಪಡುತ್ತಿದ್ದಾನೆ ಎಂದರೆ ಅತನಿಗೆ ನಮ್ಮ ಶಕ್ತಿ ಬಳಸಿ ದಾರಿ ದಾಟಿಸಿದರೆ ಅದಕ್ಕೆ ಶಕ್ತಿ ದಾಸೋಹ ಎನ್ನುವರು. ಇದೇ ರೀತಿ ನೃತ್ಯದಾಸೋಹ, ಚಿತ್ರಕಲಾ ದಾಸೋಹ. ಬುದ್ಧಿ ದಾಸೋಹ ಮುಂತಾದವುಗಳು ಇದೆ. ಭಗವಂತ ಎಲ್ಲರಲ್ಲೂ ಒಂದೆ ಶಕ್ತಿ ಇಡಲಿಲ್ಲ. ಒಂದು ವೇಳೆ ಎಲ್ಲರಿಗೂ ಗಂಟಲಲ್ಲಿ ಶಕ್ತಿ ಇಟ್ಟು ಎಲ್ಲರೂ ಯಾವಾಗಲೂ ಹಾಡುತ್ತಾ ಇರಿ ಎಂದು ಹೇಳಿದ್ದರೆ ಹಾಡಿನ ಸೌಂದರ್ಯವೇ ಹೋಗುತ್ತಿತ್ತು. ದೇವರು ಹಾಗೆ ಮಾಡಲಿಲ್ಲ. ಕೆಲವರಿಗೆ ಗಂಟಲಲ್ಲಿ ಶಕ್ತಿ ಇಟ್ಟನು. ಅವರು ಹಾಡುಗಾರಿಕೆಯಲ್ಲಿ ಮುಂದುವರಿಯುತ್ತಿದ್ದಾರೆ. ಕೆಲವರಿಗೆ ನಾಲಿಗೆಯಲ್ಲಿ ಶಕ್ತಿ ಇಟ್ಟು ಸುಂದರ ಮಾತುಗಳ ಮೂಲಕ ಪ್ರವಚನ ಗಳನ್ನು ನೀಡುತ್ತಿದ್ದಾರೆ. ಕೆಲವರಿಗೆ ಕೈಯಲ್ಲಿ ಶಕ್ತಿ ಇಟ್ಟು ಅವರು ಸುಂದರ ಶಿಲ್ಪ ಮತ್ತು ಚಿತ್ರಕಲೆ ಮಾಡುತ್ತಿದ್ದಾರೆ. ಕೆಲವರಿಗೆ ಕಾಲಿನಲ್ಲಿ ಶಕ್ತಿ ಇಟ್ಟು ನೃತ್ಯದಲ್ಲಿ, ಆಟೊಟಸ್ಪರ್ಧೆಯಲ್ಲಿ ಮುಂದುವರಿಯುತ್ತಿದ್ದಾರೆ. ಕೆಲವರಿಗೆ ಬುದ್ಧಿಯಲ್ಲಿ ಶಕ್ತಿ ಇಟ್ಟು ವಿಜ್ಞಾನಿ, ತಂತ್ರಜ್ಞಾನಿಯಾಗಿದ್ದಾರೆ. ಇನ್ನು ಕೆಲವರ ಎದೆಯಲ್ಲಿ ಶಕ್ತಿ ಇಟ್ಟು ಕವಿ, ತತ್ವಜ್ಞಾನಿಯಾಗಿದ್ದಾರೆ. ಯಾಕೆ ಹೀಗೆ ಅಂದರೆ ಜಗತ್ತು ವೈವಿಧ್ಯವಾಗಿ ವೈಭವದಿಂದ ಇರಬೇಕೆಂಬುದು. ಹಾಗಿರುವಾಗ ದೇವರು ನಮಗೆ ಕೊಟ್ಟಿರುವುದನ್ನ ಹಂಚಿಕೊಂಡು ಜಗತ್ತನ್ನ ಶ್ರೀಮಂತ ಮಾಡಿ ಆನಂದ ಪಡುವುದೇ ಜೀವನ.
ಈ ಘಟನೆಯಲ್ಲಿ ಮನ್ವಿತ್ ತನ್ನ ಬುದ್ಧಿಶಕ್ತಿ ಬಳಸಿ ಸಂತೋಷಕ್ಕೆ ಕಾರಣನಾಗಿದ್ದಾನೆ. ಹಾಗೆ ನಾವು ನಮ್ಮಲ್ಲಿ ಇರುವುದನ್ನ ಹಂಚಿ ಆನಂದ ಪಡೋಣ. ಆದರೆ ಕೆಲವರು ತೋರಿಕೆಗಾಗಿ. ಮಾನ್ಯತೆಗಾಗಿ. ಹಂಚಿಕೊಳ್ಳುತ್ತಾರೆ. ಇದು ದಾಸೋಹ ಅಲ್ಲ. ಗಾಂಧೀಜಿ, ಅಂಬೇಡ್ಕರ್ ಇವರುಗಳ ಹೆಸರು ಚಿರಸ್ಥಾಯಿಯಾಗಿ ಇದೆ ಏಕೆ?. ಅವರು ಮಾಡಿದ ಸುಂದರ ಆಶಾರಹಿತ ಕರ್ಮದಿಂದಾಗಿ. ಆಶಾರಹಿತ ಕರ್ಮವನ್ನು ಜಗತ್ತು ಗುರುತಿಸುತ್ತದೆ, ಗೌರವಿಸುತ್ತದೆ. ಜಗತ್ತಿನಲ್ಲಿ ಹಂಚಿ ಆನಂದ ಪಡಲು ಸಂಪನ್ಮೂಲದ ಕೊರತೆ ಇಲ್ಲ. ಆದರೆ ಆಸೆ ಪೂರೈಸುವಷ್ಟು ಜಗತ್ತಿನಲ್ಲಿ ಸಂಪತ್ತು ಇಲ್ಲ. ಅಲ್ಲವೆ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************