ಜೀವನ ಸಂಭ್ರಮ : ಸಂಚಿಕೆ - 257
Sunday, August 23, 2026
Edit
ಜೀವನ ಸಂಭ್ರಮ : ಸಂಚಿಕೆ - 257
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಜೀವನದ ಪರಮ ಗುರಿ ಎರಡು. ಒಂದು ಸತ್ಯದರ್ಶನ, ಇನ್ನೊಂದು ಪರಮ ಶಾಂತಿ ಅನುಭವಿಸುವುದು. ಮನುಷ್ಯ ವರ್ಷ ವರ್ಷಗಳ ಕಾಲ ಬದುಕಬೇಕಾಗುತ್ತದೆ. ಬದುಕಬೇಕು ಅಂದಾಗ ಜಗತ್ತು ಮತ್ತು ಜನಾಂಗ ಬೇಕು. ಇವುಗಳ ಮೇಲೆ ಬದುಕು ಆಧಾರಿತವಾಗಿರುತ್ತದೆ. ವಸ್ತುವಿನೊಂದಿಗೆ ವ್ಯವಹರಿಸುತ್ತೇವೆ. ಹಾಗೆ ವ್ಯಕ್ತಿಗಳೊಂದಿಗೂ ವ್ಯವಹರಿಸುತ್ತೇವೆ. ವ್ಯವಹಾರವೇ ಜೀವನ. ಎಷ್ಟು ವರ್ಷ ಬದುಕುತ್ತೇವೆ ?. ಅಷ್ಟು ವರ್ಷ ವ್ಯವಹಾರ ಮಾಡಿರುತ್ತೇವೆ ಎಂದು ಅರ್ಥ. ಜನರೊಂದಿಗೆ ವ್ಯವಹರಿಸುತ್ತೇವೆ. ಕಾರ್ಯಗಳನ್ನು ಮಾಡುತ್ತೀವಿ, ಮಾತನಾಡುತ್ತೇವೆ, ಜನರಿಗೆ ಕೊಡುತ್ತೀವಿ. ಜನರಿಂದ ಪಡೆಯುತ್ತೇವೆ. ಇವೆಲ್ಲ ವ್ಯವಹಾರ. ವ್ಯವಹಾರ ಆಧಾರಿತ ಜೀವನ. ವ್ಯವಹಾರಗಳ ಪ್ರವಾಹವೇ ಜೀವನ.
ಈ ವ್ಯವಹಾರಗಳು ಐಂದ್ರಿಯಿಕ ವ್ಯವಹಾರಗಳು, ದೈಹಿಕ ವ್ಯವಹಾರಗಳು, ಮಾನಸಿಕ ವ್ಯವಹಾರಗಳು, ಬೌದ್ಧಿಕ ವ್ಯವಹಾರಗಳು, ವಿಚಾರಗಳನ್ನು ಕಲಿತರೆ ವೈಚಾರಿಕ ವ್ಯವಹಾರ, ಇನ್ನೊಬ್ಬರೊಂದಿಗೆ ಸದ್ಭಾವದಿಂದ ನಡೆದುಕೊಂಡರೆ ಭಾವನಾತ್ಮಕ ವ್ಯವಹಾರ, ಎರಡು ಒಳ್ಳೆಯ ಮಾತುಗಳನ್ನು ಆಡಿದರೆ ವಾಚಿಕ ವ್ಯವಹಾರ, ಇನ್ನೊಬ್ಬರಿಗೆ ಸಹಾಯ ಮಾಡಿದರೆ ದೈಹಿಕ ವ್ಯವಹಾರಗಳು, ಕೆಲಸಗಳು. ನಮಗೊಂದು ದೇಹ ಇದೆ ಕಾರ್ಯ ಮಾಡುವುದಕ್ಕೆ. ಒಂದಷ್ಟು ಇಂದ್ರಿಯಗಳಿವೆ, ಒಳ್ಳೆಯ ಮನಸ್ಸಿದೆ, ಒಂದಷ್ಟು ಬುದ್ಧಿ ಇದೆ. ಇವೆಲ್ಲ ನಮ್ಮ ಸಲಕರಣೆಗಳು. ಇವುಗಳನ್ನು ಬಳಸಿಕೊಂಡು ಬದುಕನ್ನು ಕಟ್ಟಬೇಕಾಗಿದೆ. ನಾವು ಪ್ರತಿಕ್ಷಣ ಕೆಲಸ ಮಾಡುತ್ತಿರುತ್ತೇವೆ. ಬೇರುಗಳು ಕೆಲಸ ಮಾಡುತ್ತವೆ, ಕಾಂಡ ಕೆಲಸ ಮಾಡುತ್ತದೆ. ಎಲೆಗಳು ಕೆಲಸ ಮಾಡುತ್ತವೆ, ಹೂ ಹಣ್ಣು ಕೆಲಸ ಮಾಡಿಕೊಳ್ಳುತ್ತಾ ಬದುಕುತ್ತವೆ. ಬದುಕು ಎಂದರೆ ಕೆಲಸಗಳ ಪ್ರವಾಹ. ಅದು ವ್ಯವಹಾರ.
ವ್ಯವಹಾರ ಮಾಡಲು ಬೇರೆ ಬೇರೆ ಅವಯವಗಳಿವೆ. ನೀರು ಹೀರಿಕೊಳ್ಳುವ ಅವಯವ ಬೇರೆ. ಆಹಾರ ತಯಾರು ಮಾಡುವ ಅವಯವ ಬೇರೆ. ನೀರನ್ನು ಸಾಗಿಸುವ ಅವಯವ ಬೇರೆ. ಆಹಾರ ಹಂಚುವ ಅವಯವ ಬೇರೆ. ಸಂಗ್ರಹಿಸುವ ಅವಯವ ಬೇರೆ. ಇವೆಲ್ಲ ಅವಯವಗಳು. ಹೇಗೆ ಮನುಷ್ಯನಿಗೆ ಅವಯವಗಳೋ ಹಾಗೆ ಸಸ್ಯಗಳಿಗೂ ಅವಯವಗಳಿವೆ. ಈ ಅವಯವಗಳು ಸಹಾಯ ಮಾಡುತ್ತವೆ. ಈ ಅವಯವಗಳ ಮೂಲಕ ಸುಂದರಕಾರ್ಯ ನಡೆಯುತ್ತಿರುತ್ತದೆ.
ಜಗತ್ತಿನಲ್ಲಿ ಒಂದು ಸಾಮಾನ್ಯ ಗಿಡ ಬದುಕ ಬೇಕಾದರೂ ಜಗತ್ತು ಬೇಕು. ಜೀವಿಗಳು ಬೇಕು. ಸಾಧನಗಳಲ್ಲಿ ವ್ಯತ್ಯಾಸವಾದರೆ ಜೀವನ ಕೆಡುತ್ತದೆ. ಬೇರು ಕೆಲಸ ಮಾಡದಿದ್ದರೆ, ಎಲೆ ಕೆಲಸ ಮಾಡದಿದ್ದರೆ, ಹೂಗಳು ಕೆಲಸ ಮಾಡದಿದ್ದರೆ, ಗಿಡದ ಬದುಕು ಕೆಡುತ್ತದೆ. ಹಾಗೆ ಮನುಷ್ಯನ ಬದುಕು ಕೆಡುತ್ತದೆ ಯಾವಾಗ ಅಂದರೆ ನಮ್ಮ ಕೆಲಸ ಸರಿಯಾಗಿ ಸಾಗದಿದ್ದರೆ. ಸಮಾಧಾನದಿಂದ ಒಂದು ಗಿಡ ಬದುಕಬೇಕಾದರೆ ಎಲ್ಲಾ ಕೆಲಸ ಮಾಡಬೇಕಾಗುತ್ತದೆ. ನಮ್ಮ ದೇಹ, ನಮ್ಮ ಮನಸ್ಸು, ನಮ್ಮ ಇಂದ್ರಿಯಗಳು, ನಮ್ಮ ಬುದ್ಧಿ, ಎಲ್ಲ ಸುಂದರವಾಗಿ ಕೆಲಸ ಮಾಡಬೇಕು. ಮನಸ್ಸಿನಲ್ಲಿ ಹೊಲಸು ಬಿತ್ತು, ಬುದ್ಧಿಯಲ್ಲಿ ಕತ್ತಲೆ ತುಂಬಿತ್ತು, ಮೈಯಲ್ಲಿ ಆಲಸ್ಯ ಇತ್ತು, ಮಾತಿನಾಗ ಹದ ತಪ್ಪಿತ್ತು ಅಂದಾಗ ಜೀವನ ಹೇಗೆ ಸುಂದರವಾಗಿರುತ್ತದೆ?.
ಬದುಕನ್ನು ಕ್ಷಣ ಕ್ಷಣ ಕಟ್ಟಿಕೊಳ್ಳಬೇಕಾಗುತ್ತದೆ. ನಿಧಾನವಾಗಿ ನಿಧಾನವಾಗಿ ಕಟ್ಟಿಕೊಳ್ಳುತ್ತಾ ಹೋಗಬೇಕಾಗುತ್ತದೆ. ನಾನು ಈ ಭೂಮಿಗೆ ಬಂದ ಬಳಿಕ ಬಹಳಷ್ಟು ಇರುವುದಿಲ್ಲ. ಕೆಲವೊಂದು ನೋಡಿ, ಕೆಲವನ್ನು ಮಾಡಿ, ಕೆಲವನ್ನ ಆಲೋಚಿಸಿ, ಕೆಲವನ್ನು ಭಾವಿಸಿ, ಕೆಲವನ್ನು ಕಲ್ಪಿಸಿಕೊಂಡು, ಕೆಲವನ್ನು ಕೇಳಿ, ಕೆಲವನ್ನು ಮುಟ್ಟಿ , ಕೆಲಸವನ್ನು ಮೂಸಿ, ಕೆಲವನ್ನು ರುಚಿಸಿ, ಬದುಕನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಜೀವನ ಕಟ್ಟುವುದು ನಮ್ಮ ಕೈಯೊಳಗೆ ಇದೆ. ಜೀವನಕ್ಕೆ ಏನೇನು ಸಲಕರಣೆ ಬೇಕು ಅದನ್ನು ಕೊಡುವುದು ನಿಸರ್ಗದ ಕೈಯೊಳಗೆ ಇದೆ. ಎರಡನ್ನು ಮಿಶ್ರ ಮಾಡಿದರೆ ಒಂದು ಬಗೆಯ ಜೀವನ ಶುರುವಾಗುತ್ತದೆ. ಅಂತಹ ಜೀವನ ನಾವು ಪಡೆದಿದ್ದೇವೆ. ನಮಗೆ ಸ್ವಾತಂತ್ರ್ಯ ಇದೆ, ನಾವು ಕಟ್ಟಿಕೊಳ್ಳಬೇಕು. ನಿಸರ್ಗ ನಮಗೆ ಏನು ಕೊಡುತ್ತದೆ ಅದರ ಮಿತಿಯೊಳಗೆ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಎಲ್ಲರಿಗೂ ಎಲ್ಲ ಸಿಗೋದಿಲ್ಲ ಅನ್ನೋದು ಗೊತ್ತಿರಬೇಕು. ಒಂದು ಗಿಡ ತನಗೆ ಸಿಕ್ಕಿದ್ದನ್ನು ಬಳಸಿಕೊಂಡು ಅಷ್ಟು ವಿಶಾಲವಾಗಿ ಬೆಳೆಯುತ್ತದೆ. ಸಾವಿರಾರು ಪಕ್ಷಿಗಳಿಗೆ ಆಹಾರ ಆಶ್ರಯ ನೀಡುತ್ತದೆ. ನೆರಳು ಕೊಡುತ್ತದೆ. ಇದು ಹೀಗೆ ನಿಸರ್ಗಕ್ಕೆ ಶೋಭೆ ತಂದಿದೆ. ಅದು ಒಂದು ಗಿಡದ ಬದುಕು.
ಈಗ ಯೋಚಿಸಿ. ಮಂಗಳೂರಿನ ತುಂಬಾ ಬಂಗಾರವೇ ಬಂಗಾರ. ಒಂದು ಗಿಡ ಇಲ್ಲ, ಏನು ಮಾಡುವುದು ಬಂಗಾರ ತೆಗೆದುಕೊಂಡು?. ಮನೆ ಬಂಗಾರದ್ದು, ರಸ್ತೆ ಬಂಗಾರದ್ದು, ವಾಹನ ಬಂಗಾರದ್ದು. ಮನುಷ್ಯ ಬಂಗಾರ ತೆಗೆದುಕೊಂಡು ಏನು ಮಾಡೋದು?. ಕಣ್ಣು ಹೇಗಿದೆ ಅದು ಮಹತ್ವದಲ್ಲ. ಅದು ಕಾಣುತ್ತದೆಯಲ್ಲ ಅದು ಮುಖ್ಯ. ವಿಚಾರ ಮಾಡಿ ಕಣ್ಣು ಎಷ್ಟು ಅದ್ಭುತ!. ಕಿವಿ ಎಷ್ಟು ಅದ್ಭುತ!. ಕೈ ದೊಡ್ಡದು ಅಂತ ಅದ್ರಲ್ಲಿ ಕೇಳೊಕ್ಕಾಗುತ್ತ?. ತಲೆ ದೊಡ್ಡದು ಅಂತ ಕೇಳೋಕ್ ಆಗುತ್ತಾ!. ಕಿವಿ ಹೇಳುತ್ತದೆ ನಾನು ಸಣ್ಣವನಾದ್ರು ಕೂಡ ಶಬ್ದ ಜಗತ್ತನ್ನು ಕೇಳಿಸ್ತೀನಿ. ನಾಲಿಗೆ ಸಾಮರ್ಥ್ಯ ಎಷ್ಟು. ಮನುಷ್ಯ ಬದುಕಿದ್ದೆ ನಾಲಿಗೆಯಿಂದ. ಇದಿಲ್ಲದಿದ್ದರೆ ರುಚಿ ಎಲ್ಲಿದೆ?. ನಿಸರ್ಗ ಎಷ್ಟು ಸುಂದರ ದೇಹ ನಿರ್ಮಾಣ ಮಾಡಿದೆ?. ಒಳಗೆ ಎಲ್ಲಾ ಅಳವಡಿಸಿದೆ. ಇದಕ್ಕಿಂತ ಪವಾಡ ಯಾವುದು?. ಇಂತಹ ದೇಹ ಬಂದ ಬಳಿಕ, ಮನಸ್ಸನ್ನು ನಿಸರ್ಗ ಕೊಟ್ಟ ಬಳಿಕ ಮನಸ್ಸನ್ನು ಶರೀರವನ್ನು ಬಳಸಿಕೊಂಡು ಬದುಕು ಕಟ್ಟುವ ಅವಕಾಶ ಕೊಟ್ಟಿತು. ಇದನ್ನು ಬಳಸಿ ಬದುಕು ಕಟ್ಟಬೇಕು, ಕೆಡಿಸಬಾರದು, ಕಟ್ಟಬೇಕು. ಸುಂದರವಾಗಿರೋದು ಇದು ಯೋಗ.
ಬದುಕನ್ನು ಸುಂದರ ಸುಂದರ ವಸ್ತುಗಳಿಂದ, ವಿಚಾರಗಳಿಂದ, ಭಾವನೆಗಳಿಂದ, ಶಬ್ದಗಳಿಂದ, ಕಟ್ಟಿಕೊಳ್ಳಬೇಕಾಗುತ್ತದೆ. ಒಂದು ಮನೆ ಕಟ್ಟಬೇಕಾದರೆ ವಸ್ತು ಬೇಕು. ಮಣ್ಣು, ನೀರು, ಕಲ್ಲು, ಮರ, ಕಬ್ಬಿಣ ಸಿಮೆಂಟು ಎಲ್ಲಬೇಕು. ಬದುಕನ್ನು ಕಟ್ಟಲು ಶಬ್ದ, ಕೆಲಸ, ಭಾವನೆ, ಸ್ಮರಣೆ, ಕಲ್ಪನೆ , ಆಲೋಚನೆ ಇವೆಲ್ಲ ವಸ್ತುಗಳು ಇವುಗಳನ್ನು ಬಳಸಿಕೊಂಡು ಬದುಕು ಕಟ್ಟಬೇಕು. ಇದರಲ್ಲಿ ಯಾವುದಾದರೂ ತಪ್ಪಿದ್ದರೆ ಬದುಕು ಚೆಂದ ಇರುವುದಿಲ್ಲ. ಕೈಯಿಂದ ಮಾಡುವ ಕೆಲಸವೇ ಒಂದು ವಸ್ತು. ಮಾತುಗಳೇ ವಸ್ತುಗಳು. ವಿಚಾರಗಳೇ ವಸ್ತುಗಳು. ಆಲೋಚನೆ ವಸ್ತುಗಳು ನೆನಪುಗಳು ವಸ್ತುಗಳು. ಇವುಗಳಿಂದ ಬದುಕು ಕಟ್ಟಬೇಕು. ಇದು ಚೆಂದಾಗಿದ್ದರೆ ಬದುಕು ಚೆಂದ. ಇವು ಕೆಟ್ಟರೆ ಜೀವನ ಹಾಳಾಗುತ್ತದೆ. ನಮ್ಮ ಜೀವನವನ್ನು ನಾವೇ ಕಟ್ಟಿಕೊಳ್ಳಬೇಕು. ಬೇರೆಯವರಿಂದ ಸಹಾಯ ಪಡೆಯಬಹುದು ಅಷ್ಟೇ. ಮನೆಯನ್ನು ಗುತ್ತಿಗೆ ನೀಡಿ ಕಟ್ಟಿಸಿಕೊಳ್ಳಬಹುದು. ಬದುಕು ಹಾಗಾಗುವುದಿಲ್ಲ. ಅದನ್ನು ನಾವೇ ಕಟ್ಟಿಕೊಳ್ಳಬೇಕು. ಅಲ್ಲವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************