-->
ಮಕ್ಕಳ ಕಥೆಗಳು - ಸಂಚಿಕೆ : 18, ರಚನೆ : ಕಿಂಜಲ್, 9ನೇ ತರಗತಿ

ಮಕ್ಕಳ ಕಥೆಗಳು - ಸಂಚಿಕೆ : 18, ರಚನೆ : ಕಿಂಜಲ್, 9ನೇ ತರಗತಿ

ಮಕ್ಕಳ ಕಥೆಗಳು - ಸಂಚಿಕೆ : 18
ರಚನೆ : ಕಿಂಜಲ್ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

                                       
ಒಂದು ಊರಿನಲ್ಲಿ ರಮೇಶ್ ಎಂಬ ಹುಡುಗ ವಾಸವಾಗಿದ್ದನು. ಅವನಿಗೆ ಸಣ್ಣ ವಿಷಯಕ್ಕೂ ಸುಳ್ಳು ಹೇಳುವ ಅಭ್ಯಾಸ ಇತ್ತು. ಅವನು ಮೊದಮೊದಲಿಗೆ ಸತ್ಯವೇ ಹೇಳುತ್ತಿದ್ದಾನೆ ಎಂದುಕೊಂಡು ಊರಿನ ಜನರು ಅವನಿಗೆ ಸಹಾಯ ಮಾಡುತ್ತಿದ್ದರು. ಅವನು ದಿನಾಲು ಒಂದೊಂದು ಸುಳ್ಳನ್ನು ಹೇಳಿ ಜನರನ್ನು ಮೋಸಗೊಳಿಸುತ್ತಿದ್ದನು. ಒಂದು ದಿನ ಅವನು “ಎಲ್ಲರೂ ಕೇಳಿ, ಹಾವು ಬಂದಿದೆ ನನ್ನನ್ನು ರಕ್ಷಿಸಿ” ಎಂದು ಕೂಗಿದನು. ಆಗ ಅವನ ಮನೆ ಹತ್ತಿರ ಇರುವ ಎಲ್ಲ ಜನರು ಓಡಿಕೊಂಡು ಬಂದರು. ಅಲ್ಲಿ ಹಾವು ಇರಲಿಲ್ಲ, ಹಾವಿನ ತರಹದ ಹಗ್ಗ ಮಾತ್ರ ಇತ್ತು. ಎಲ್ಲ ಜನರು ನಿರಾಶರಾಗಿ ಹಿಂತಿರುಗಿದರು. ದಿನಗಳು ಕಳೆದಂತೆ ಅವನ ಸುಳ್ಳು ಹೇಳುವ ಅಭ್ಯಾಸ ಹೆಚ್ಚಾಗುತ್ತಾ ಹೋಯಿತು. ಸಣ್ಣ ಸಣ್ಣ ಸುಳ್ಳುಗಳನ್ನು ಹೇಳಿ ತಮಾಷೆ ಮಾಡುವವ ದೊಡ್ಡ ಸುಳ್ಳನ್ನು ಹೇಳಲು ಆರಂಭಿಸಿದನು. ಒಂದು ದಿನ ರಾತ್ರಿ ಊಟದ ನಂತರ ರಮೇಶ್ ತನ್ನ ಮನೆಯ ಹೊರಗೆ ತಿರುಗಾಡುತ್ತಿರುವಾಗ ಒಂದು ಕಳ್ಳ ಅಲ್ಲಿಂದ ಓಡಿ ಹೋಗುತ್ತಿದ್ದನು, ಅವನ ಹಿಂದೆ ಊರಿನ ಎಲ್ಲಾ ಜನರು ಇದ್ದರು. ಆ ಕಳ್ಳ ತನ್ನ ಕೈಯಲ್ಲಿದ್ದ ಆಭರಣಗಳನ್ನು ರಮೇಶ್ ನ ಕಾಲಿನ ಬಳಿ ಬಿಸಾಡಿ ತಾನು ಓಡಿ ಹೋದನು. ನಂತರ ಊರಿನ ಜನರು ಬಂದು ಆ ಕದ್ದ ಆಭರಣಗಳು ರಮೇಶ್ ನ ಕಾಲಿನಡಿ ಇರುವುದನ್ನು ನೋಡಿದರು. ನೀನೇ ಕಳ್ಳ ಎಂದು ಊರಿನ ಜನರು ಹೇಳಿದರು. ಮರುದಿನ ಅವನನ್ನು ರಾಜನ ಆಸ್ಥಾನಕ್ಕೆ ಕರೆದೊಯ್ಯಲಾಯಿತು. ಅಲ್ಲಿ ರಮೇಶ್ ಹೇಳಿದನು “ನಾನು ಕಳ್ಳತನ ಮಾಡಲಿಲ್ಲ” ಆಗ ಊರಿನ ಜನರು ಹೇಳಿದರು “ಸುಳ್ಳು, ಸುಳ್ಳು, ಇವನು ಯಾವತ್ತೂ ಸುಳ್ಳೇ ಹೇಳುತ್ತಿರುತ್ತಾನೆ, ಇವತ್ತೂ ಇವನು ಸುಳ್ಳೇ ಹೇಳುವುದು” ಎಂದರು. ಆಗ ರಮೇಶ್ ಹೇಳಿದ “ಇಲ್ಲ ನಾನು ಕಳ್ಳತನ ಮಾಡಲಿಲ್ಲ”. ಅವನ ಮಾತನ್ನು ಯಾರೂ ಕೇಳಿಸದೆ ಇವನನ್ನು ಜೈಲಿಗೆ ಹಾಕಿ ಎಂದು ಎಲ್ಲ ಜನರು ರಾಜನಲ್ಲಿ ವಿನಂತಿಸಲಾರಂಬಿಸಿದರು. ರಾಜ ಹೇಳಿದನು “ರಮೇಶ್ ನೀನು ಕಳ್ಳತನ ಮಾಡಿದ್ದರೂ, ಮಾಡಲಿಲ್ಲದಿದ್ದರೂ, ಎಲ್ಲರೂ ನಿನಗೆಯೇ ದೂರು ಹಾಕುತ್ತಾರೆ, ಏಕೆ ಗೊತ್ತುಂಟಾ? ಏಕೆಂದರೆ ನೀನು ಯಾವತ್ತೂ ಸುಳ್ಳು ಹೇಳುತ್ತೀಯಾ. ಇನ್ನು ನೀನು ಸತ್ಯ ಹೇಳಿದರೂ ಇವರು ಸುಳ್ಳೇ ಎಂದು ಎಂದುಕೊಳ್ಳುತ್ತಾರೆ ಎಂದರು. ಆಗ ರಮೇಶ್ ಗೆ ತನ್ನ ತಪ್ಪಿನ ಅರಿವಾಯಿತು.

ನೀತಿ : ನೂರು ಬಾರಿ ಸುಳ್ಳು ಹೇಳಿ, ಒಂದು ಬಾರಿ ಸತ್ಯ ಹೇಳಿದರೆ, ಯಾರೂ ನಂಬುವುದಿಲ್ಲ.
................................................... ಕಿಂಜಲ್ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
******************************************


                

ಒಂದಾನೊಂದು ಕಾಡಿನಲ್ಲಿ ಹಲವು ಪ್ರಾಣಿಪಕ್ಷಿಗಳು ವಾಸವಾಗಿದ್ದವು. ಅವು ಒಂದು ಇನ್ನೊಂದಕ್ಕೆ ಸಹಕರಿಸುತ್ತಾ ಸಹಬಾಳ್ವೆಯಿಂದ ಬಾಳುತ್ತಿದ್ದವು.

 ಒಂದು ದಿನ ಒಂದು ಜಿಂಕೆ ನದಿಯ ಬಳಿ ಬಂದು ನದಿಯ ನೀರಿನಲ್ಲಿ ತನ್ನ ಮುಖವನ್ನು ನೋಡಿ, ”ಎಲ್ಲಾ ಪ್ರಾಣಿಗಳಲ್ಲಿ ನಾನೇ ಮೇಲು , ನಾನು ಎಲ್ಲರಿಗಿಂತಲೂ ವೇಗವಾಗಿ ಓಡುತ್ತೇನೆ”. ಆಗ “ಇಲ್ಲ” ಎಂದು ನದಿಯ ಒಳಗಿನಿಂದ ಒಂದು ಮೀನಿನ ಸ್ವರ ಬಂದಿತು. ಆಗ ಜಿಂಕೆ ಕೇಳಿತು "ಯಾಕೆ..?" ಆಗ ಮೀನು ಹೇಳಿತು, “ಎಲ್ಲರಿಗಿಂತಲು ಮೇಲು ನೀನಲ್ಲ ನಾನು.. ಏಕೆಂದರೆ ನಾನು ಬಣ್ಣ ಬಣ್ಣದಲ್ಲಿ ಚಂದ. ಹಾಗೂ ನೀರಿನಲ್ಲಿ ಈಜಬಲ್ಲೆ ನೀನು ಓಡುವುದು ಮಾತ್ರ. 

ಅದೇ ಸಮಯಕ್ಕೆ ಅಲ್ಲಿಗೆ ಒಂದು ನವಿಲು ಬಂದಿತು. ಅದು ಜಿಂಕೆ ಮತ್ತು ಮೀನಿನ ಜಗಳವನ್ನು ನಿಲ್ಲಿಸುವ ಬದಲಿಗೆ ತಾನೂ ಸೇರಿತು. ನವಿಲು, ”ನೀವಿಬ್ಬರೂ ಸುಮ್ಮನಿರಿ ನಿಮ್ಮಿಬ್ಬರಿಗಿಂತಲೂ ನಾನೇ ಮೇಲು ಏಕೆಂದರೆ ನಾನು ಭೂಮಿಯಲ್ಲಿ ನಡೆಯಲೂಬಹುದು ಹಾರಲೂಬಹುದು ಹಾಗೂ ನೃತ್ಯವೂ ಚೆನ್ನಾಗಿ ಮಾಡುತ್ತೇನೆ." ಎಂದಿತು.  

ಮೂರು ಅಹಂಕಾರಿಗಳ ಮಧ್ಯೆ ಜಗಳ ನಡೆಯುವಾಗ ಅಲ್ಲಿಗೆ ಒಂದು ಮೊಲ ಬಂದಿತು. ಅದು "ನೀವು ಯಾಕೆ ಜಗಳ ಮಾಡುತ್ತಿದ್ದೀರಾ..?" ಎಂದು ಕೇಳಿತು. ಮೂರೂ ಪ್ರಾಣಿಗಳು ವಿಷಯವನ್ನು ವಿವರಿಸಿದವು. ಆಗ ಮೊಲ ಹೇಳಿತು, “ನಾವು ಮೂರು ಸ್ಪರ್ಧೆಯನ್ನು ಏರ್ಪಡಿಸೋಣ. ಸ್ಪರ್ಧೆಯಲ್ಲಿ ಗೆದ್ದವರೇ ಎಲ್ಲರಿಗಿಂತಲೂ ಮೇಲು" ಎಂದಿತು. ಆಗ ಮೂರು ಪ್ರಾಣಿಗಳು ಒಪ್ಪಿದವು. ಮೊಲವು ಕಾಡಿನ ಎಲ್ಲಾ ಪ್ರಾಣಿಗಳನ್ನು ಕರೆದು ಸ್ಪರ್ಧೆಯನ್ನು ಏರ್ಪಡಿಸಿತು. ಮೊದಲನೇ ಸ್ಪರ್ಧೆ ಓಡುವ ಸ್ಪರ್ಧೆ ಅದರಲ್ಲಿ ಮೀನು ನೀರಿನಿಂದ ಹೊರ ಬರಲಾರದೆ ಸ್ಪರ್ಧೆಯನ್ನು ಸೋತಿತು. ಇನ್ನೊಂದು ಕಡೆ ನವಿಲು ಪಕ್ಷಿಯಾದ ಕಾರಣ ಅದಕ್ಕೆ ವೇಗವಾಗಿ ಓಡಲು ಸಾಧ್ಯವಾಗಲಿಲ್ಲ. ಹಾಗಾಗಿ ಆ ಸ್ಪರ್ಧೆಯಲ್ಲಿ ಜಿಂಕೆಯು ಗೆದ್ದಿತು. 

ಎರಡನೇ ಸ್ಪರ್ಧೆ ಈಜುವ ಸ್ಪರ್ಧೆ. ಅದರಲ್ಲಿ ಜಿಂಕೆ ಮತ್ತು ನವಿಲಿಗೆ ನೀರಿಗೆ ಇಳಿಯಲಾಗದೆ ಅವು ಸೋತವು. ಆದರೆ ಮೀನು ನೀರಿನಲ್ಲಿ ವಾಸ ಮಾಡುವ ಪ್ರಾಣಿ. ಅದು ಎರಡನೇ ಸ್ಪರ್ಧೆಯಲ್ಲಿ ಗೆದ್ದಿತು. 

ಇನ್ನು ಉಳಿದ ನವಿಲು "ನನಗಾಗದು ನಾನು ಯಾರಿಗಿಂತಲೂ ಮೇಲಲ್ಲ. ನನಗೆ ಏನೂ ಮಾಡಲಾಗುವುದಿಲ್ಲ. ಎಂದು ಹೇಳಿದಾಗ ಮೊಲ ಹೇಳಿತು “ಚಿಂತೆ ಪಡಬೇಡ ನವಿಲೇ ಕೊನೆಯದ್ದು ನೃತ್ಯದ ಸ್ಪರ್ಧೆ." ಎಂದಿತು. ಅದರಲ್ಲಿ ಜಿಂಕೆಗೆ ಮತ್ತು ಮೀನಿಗೆ ನೃತ್ಯ ಮಾಡಲು ಸಾಧ್ಯವಾಗಲಿಲ್ಲ. ನವಿಲು ಸುಂದರವಾದ ನೃತ್ಯ ಮಾಡಿತು. ಅದರಲ್ಲಿ ನವಿಲು ಗೆದ್ದಿತು. ಈಗ ಮೂರು ಸ್ಪರ್ಧೆಯಲ್ಲಿ ಮೂರು ಪ್ರಾಣಿಗಳು ಗೆದ್ದವು. 

ಆಗ ಮೊಲ ಹೇಳಿತು "ಯಾರು ಮೇಲು ಎಂದು ನಿಮಗೀಗಾಗಲೇ ತಿಳಿದಿರಬಹುದು”. ಆಗ ಮೂರು ಪ್ರಾಣಿಗಳು “ನಮ್ಮಿಂದ ದೊಡ್ಡ ತಪ್ಪಾಯ್ತು. ಇಲ್ಲಿ ನಮ್ಮ ಕಾಡಲ್ಲಿ ಯಾರೂ ಮೇಲಿಲ್ಲ ಯಾರೂ ಕೀಳಿಲ್ಲ. ಎಲ್ಲರೂ ಸಮಾನರು. ಎಲ್ಲರಲ್ಲಿರುವ ಕೌಶಲ್ಯಗಳು ಬೇರೆ ಬೇರೆ ಇರಬಹುದು. ಆದರೆ ನಾವೆಲ್ಲರೂ ಒಂದೇ " ಎಂದು ಹೇಳಿದವು. ಸ್ಪರ್ಧೆಯ ನಂತರ ಎಲ್ಲಾ ಪ್ರಾಣಿಗಳು ಸಹಬಾಳ್ವೆಯಿಂದ ಬಾಳತೊಡಗಿದವು.

ನೀತಿ : ಈ ಪ್ರಪಂಚದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೂ ಸಮಾನರು.
................................................... ಕಿಂಜಲ್ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
******************************************



ಒಂದು ಊರಿನಲ್ಲಿ ಗೋಪಾಲ ಎಂಬ ಹುಡುಗ ವಾಸವಾಗಿದ್ದನು. ಅವನಿಗೆ ಚಿತ್ರಕಲೆ ಎಂದರೆ ತುಂಬಾ ಇಷ್ಟ. ಅವನು ಹಲವು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು. ಅವನು ಭಾಗವಹಿಸಿದ ಬಹುತೇಕ ಎಲ್ಲಾ ಸ್ಪರ್ಧೆಗಳಲ್ಲಿ ಅವನು ಗೆಲ್ಲುತ್ತಿದ್ದನು.

ಒಂದು ದಿನ ಅವನ ಶಾಲೆಯ ಮುಖ್ಯ ಶಿಕ್ಷಕರು ಅವನನ್ನು ಕರೆದು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಅದರಲ್ಲಿ ಗೆದ್ದವರಿಗೆ 20,000 ಬಹುಮಾನ ಸಿಗುತ್ತದೆ. ನೀನು ಖಂಡಿತ ಭಾಗವಹಿಸು ಎಂದರು. ಆಗ ಗೋಪಾಲ ಖುಷಿಯಿಂದ ಮನೆಗೆ ಬಂದು ಎರಡು ಮೂರು ದಿನಗಳಲ್ಲಿ ಚಂದ ಚಿತ್ರವನ್ನು ಬಿಡಿಸಿದನು. ಅದನ್ನು ಸ್ಪರ್ಧೆಗೆ ಕಳುಹಿಸಲಾಯಿತು. ಕೆಲವು ದಿನಗಳ ನಂತರ ಫಲಿತಾಂಶವನ್ನು ಪ್ರಕಟಿಸಲಾಯಿತು. ಅದರಲ್ಲಿ ಎಲ್ಲೂ ಗೋಪಾಲನ ಹೆಸರು ಇರಲಿಲ್ಲ. ದುಃಖದಿಂದ ನನಗೆ “ಚಿತ್ರ ಬಿಡಿಸಲು ಬರುವುದೇ ಇಲ್ಲ. ಇನ್ನು ಮುಂದೆ ನಾನು ಎಂದಿಗೂ ಚಿತ್ರ ಬಿಡಿಸುವುದಿಲ್ಲ.” ಎಂದು ಚಿತ್ರ ಬಿಡಿಸುವುದನ್ನು ನಿಲ್ಲಿಸಿದನು. ಸ್ವಲ್ಪ ದಿನಗಳ ನಂತರ ಗೋಪಾಲನ ಆತ್ಮೀಯ ಸ್ನೇಹಿತ ಪಂಕಜ್ ಗೋಪಾಲನಿಗೆ ಹೇಳಿದನು, "ಗೋಪಾಲ ನಮ್ಮ ಊರಿನಲ್ಲಿ ಒಂದು ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಆ ಸ್ಪರ್ಧೆಗೆ ಬೇರೆ ಬೇರೆ ರಾಜ್ಯದವರು, ಬೇರೆ ಬೇರೆ ದೇಶದವರು, ತನ್ನ ತನ್ನ ಚಿತ್ರಗಳನ್ನು ಕಳುಹಿಸುತ್ತಿದ್ದಾರೆ. ಅದನ್ನು ಪೋಸ್ಟ್ ನ ಮೂಲಕ ಕಳುಹಿಸಬಹುದು. ನೀನು ಭಾಗವಹಿಸು. ಅದರಲ್ಲಿ ಗೆದ್ದವರಿಗೆ ಮೊದಲ ಬಹುಮಾನ 50,000 ಎರಡನೇ ಬಹುಮಾನ 30,000 ಮೂರನೇ ಬಹುಮಾನ 20,000 ಅದಲ್ಲದೆ 10 ಸಮಾಧಾನಕರ ಬಹುಮಾನ 5000." ಆಗ ಗೋಪಾಲ ಎಲ್ಲ ವಿಷಯವನ್ನು ಹೇಳುತ್ತಾನೆ “ನನಗೆ 20 ಸಾವಿರದ ಸ್ಪರ್ಧೆಯಲ್ಲಿ ಗೆಲ್ಲಲಾಗಲಿಲ್ಲ ಇನ್ನು 50,000ದ ಈ ಸ್ಪರ್ಧೆಯಲ್ಲಿ ಹೇಗೆ ಗೆಲ್ಲುವುದು ಅದಕ್ಕೆ ಪಂಕಜ್ "ಅಯ್ಯೋ ಗೋಪಾಲ, ಒಂದು ಸಲ ಸಿಕ್ಕಿದ ಸೋಲಿನಿಂದ ನಿನ್ನ ಕನಸನ್ನು ಬಿಡಬೇಡ. ಸೋಲು-ಗೆಲುವು ನಾಣ್ಯದ ಎರಡು ಮುಖಗಳಂತೆ. ಇಂದು ಸೋಲು ಬಂದರೆ, ನಾಳೆ ಗೆಲುವು ಬರಬಹುದು. ಸೋಲು ಎಂದರೆ ಕನಸನ್ನು ಬಿಟ್ಟುಬಿಡುವುದು ಅಲ್ಲ; ತನ್ನ ತಪ್ಪುಗಳನ್ನು ತಿದ್ದಿಕೊಂಡು ಇನ್ನಷ್ಟು ಶ್ರಮಪಟ್ಟು ಮುಂದಿನ ಅವಕಾಶವನ್ನು ಬಳಸಿಕೊಳ್ಳುವುದು”. 

ಪಂಕಜನ ಮಾತುಗಳು ಗೋಪಾಲನ ಮನಸ್ಸಿಗೆ ಧೈರ್ಯವನ್ನು ನೀಡಿತು. ಗೋಪಾಲನು ತಾನು ಹಿಂದಿನ ಸ್ಪರ್ಧೆಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿ ಶ್ರಮಪಟ್ಟು ಒಂದು ಸುಂದರ ಚಿತ್ರವನ್ನು ಬಿಡಿಸಿ ಆ ಹೊಸ ಸ್ಪರ್ಧೆಗೆ ಕಳುಹಿಸಿದನು. ಅದರ ಫಲಿತಾಂಶ ಬಂದಿತು. ಅದರಲ್ಲಿ ‘ಮೊದಲನೇ ಬಹುಮಾನ ಗೋಪಾಲ!’ ಎಂದು ಬರೆದಿತ್ತು. ಗೋಪಾಲನಿಗೆ 50,000 ರೂಪಾಯಿ ಬಹುಮಾನವಾಗಿ ಸಿಕ್ಕಿತು. ಅವನಿಗೆ ಹಾಗೂ ಅವನ ಕುಟುಂಬದವರ ಖುಷಿಗೆ ಪಾರವೇ ಇಲ್ಲದ ಹಾಗೆ ಆಯಿತು. 

ಗೋಪಾಲನು ತನ್ನ ಸ್ನೇಹಿತ ಪಂಕಜನ ಬಳಿಗೆ ಬಂದು “ಧನ್ಯವಾದಗಳು ಸ್ನೇಹಿತ ನೀನು ಕೊಟ್ಟ ಧೈರ್ಯದಿಂದ ನಾನಿಂದು ಗೆಲ್ಲಲು ಸಾಧ್ಯವಾಯಿತು.” ಆಗ ಪಂಕಜ್ ಹೇಳಿದ, “ನೀನು ಗೆದ್ದದ್ದು ನಾನು ಹೇಳಿದ ಮಾತುಗಳಿಂದ ಅಥವಾ ನಾನು ಕೊಟ್ಟ ಧೈರ್ಯದಿಂದ ಅಲ್ಲ; ನಿನ್ನ ಪ್ರಯತ್ನದಿಂದ.” ಎಂದನು.

ಸ್ವಲ್ಪ ದಿನಗಳ ನಂತರ ಮೊದಲಿನ ಸ್ಪರ್ಧೆಯಲ್ಲಿನ ತೀರ್ಪುಗಾರರು ಅಕ್ರಮಗಳನ್ನು ನಡೆಸಿದ್ದರು, ಎಂಬ ಸುದ್ದಿ ಬಂತು. ಆಗ ಪಂಕಜ್ ಗೋಪಾಲನ ಬಳಿ ಹೋಗಿ “ಈಗ ತಿಳಿಯಿತೇ ನೀನು ಮೊದಲನೇ ಸ್ಪರ್ಧೆಯಲ್ಲಿ ಅನ್ಯಾಯಕ್ಕೆ ಒಳಗಾಗಿದ್ದೆ”. ಆಗ ಗೋಪಾಲ ಹೇಳಿದ “ಏನಾದರೂ, ಗೆಲುವು ಸಂತೋಷವನ್ನು ನೀಡಿದರೆ, ಸೋಲು ಪಾಠಗಳನ್ನು ನೀಡುತ್ತದೆ. ನನಗೆ ನನ್ನ ಸೋಲಿನಿಂದ ಒಂದು ಪಾಠ ಸಿಕ್ಕಿತು. ಏನೆಂದರೆ ಸೋಲು ಮತ್ತು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಸೋಲು ಸಿಕ್ಕಿದರೆ ತಮ್ಮ ಕನಸುಗಳನ್ನು ಬಿಡುವ ಬದಲಿಗೆ ತಮ್ಮ ತಪ್ಪುಗಳನ್ನು ತಿದ್ದಿ ಮುಂದಿನ ಅವಕಾಶವನ್ನು ಬಳಸಬೇಕು”. ಆ ದಿನದಿಂದ ಗೋಪಾಲ ಯಾವ ಸೋಲಿಗೂ ಹೆದರಲಿಲ್ಲ. ಪ್ರತಿಯೊಂದು ಸೋಲನ್ನು ಒಂದು ಪಾಠವೆಂದು ಸ್ವೀಕರಿಸಿ, ಇನ್ನಷ್ಟು ಶ್ರಮಪಟ್ಟು ಒಬ್ಬ ಉತ್ತಮ ಚಿತ್ರಕಾರನಾದನು.

 ನೀತಿ : ಸೋಲು ಅಂತ್ಯವಲ್ಲ, ಮತ್ತೆ ಪ್ರಯತ್ನಿಸಲು ಸಿಕ್ಕ ಅವಕಾಶ.
................................................... ಕಿಂಜಲ್ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
******************************************




Ads on article

Advertise in articles 1

advertising articles 2

Advertise under the article