-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 158

ನಿಷ್ಪಾಪಿ ಸಸ್ಯಗಳು : ಸಂಚಿಕೆ - 158

ನಿಷ್ಪಾಪಿ ಸಸ್ಯಗಳು : ಸಂಚಿಕೆ - 158
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

     
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ..? ನಾಗರ ಪಂಚಮಿಯ ಮೂಲಕ ಹಬ್ಬಗಳ ಸಾಲು ಆರಂಭಗೊಂಡಿದೆ. ಎಲ್ಲೆಲ್ಲೂ ತಳಿರು ತೋರಣಗಳು, ಪುಷ್ಪಮಾಲೆಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆಯಲ್ಲವೇ?

ನಮ್ಮ ಬಾಲ್ಯದ ದಿನಗಳಲ್ಲಿ 'ತಾರಿದಡಿ' ಎಂಬ ನೆರೆಮನೆ ಇತ್ತು. ಅಲ್ಲಿ ದ್ಯಾಮ ಅಂತ ಒಬ್ಬರು ಅಜ್ಜಿ ಇದ್ದರು. ಅವರಿಗೆ ಹೂಗಿಡಗಳೆಂದರೆ ಬಹಳ ಪ್ರೀತಿ. ಮನೆಯ ಸುತ್ತಲೂ ಗಿಡಗಳಿದ್ದವು. ಹಬ್ಬಗಳ ಸಂದರ್ಭಗಳಲ್ಲಿ ಅವರ ಗಿಡಗಳಿಗೆ ನಾವು ಲಗ್ಗೆಯಿಡುತ್ತಿದ್ದೆವು. ಆದರೆ ಸೂರ್ಯಕಾಂತಿ ಎಂಬ ಒಂದು ವಿಧದ ಹೂವನ್ನು ಮಾತ್ರ ಅವರೇ ಕೊಯ್ದು ಹಾಲು ಕೊಂಡೊಯ್ಯಲು ಬರುತ್ತಿದ್ದ ಮಕ್ಕಳಿಗೆ ದಿನವೂ ಹಂಚುತ್ತಿದ್ದರು. ಈ ಬಣ್ಣ ಬದಲಾಯಿಸುವ ಹೂವು ಮಕ್ಕಳ ಆಕರ್ಷಣೆಯಾಗಿತ್ತು. ಗಿಡವೂ ಅಲ್ಲ‌ ಅತ್ತ ಮರವೂ ಅಲ್ಲವೆನ್ನುವಂತಹ ಈ ಸಸ್ಯದ ಗೆಲ್ಲುಗಳು ನಮಗೆ ಎಟಕುತ್ತಿರಲಿಲ್ಲ. ಗಿಡದ ಪ್ರತಿ ಕೊಂಬೆಗಳ ತುದಿಗಳಲ್ಲಿ ಶ್ವೇತವರ್ಣದ ಹಲವಾರು ಸುಂದರ ದಳಗಳ ಸಮೂಹವಿರುವ ದೊಡ್ಡದೊಡ್ಡ ಹೂವುಗಳು ಅರಳುತ್ತಿದ್ದವು. ಉದ್ದನೆಯ ಕೋಲೊಂದರ ತುದಿಗೆ Y ಆಕಾರದಲ್ಲಿ ಇನ್ನೊಂದು ಸಣ್ಣ ಕಡ್ಡಿ ಕಟ್ಟಿ ಈ ಸೂರ್ಯಕಾಂತಿ ಹೂವುಗಳನ್ನು ಕೊಯ್ಯುವುದು ಅಜ್ಜಿಯ ದಿನದ ಮೊದಲ ಕೆಲಸವಾಗಿದ್ದದ್ದೇ ಅಲ್ಲದೆ ಅದನ್ನು ಪ್ರತೀ ಮನೆಗೂ ಸಮಾನವಾಗಿ ಹಂಚಿ ಚಾವಡಿಯ ಜಗಲಿಯಲ್ಲಿಡುತ್ತಿದ್ದರು. ಸೂರ್ಯಕಾಂತಿ ಹೂವಿಗೆ ಹತ್ತು ಹದಿನೈದು ಸೆಂ.ಮೀ. ಉದ್ದದ ತೊಟ್ಟುಗಳಿದ್ದುದರಿಂದ ಎಷ್ಟು ಹೂವುಗಳನ್ನಾದರೂ ಹಿಡಿದುಕೊಂಡು ಹಾಲಿನ ಪಾತ್ರೆಯ ಜೊತೆ ನಡೆಯಬಹುದಾಗಿತ್ತು. ಅಷ್ಟು ದೊಡ್ಡ ಹೂವಾಗಿದ್ದರೂ ಮಹಿಳೆಯರು ತಲೆಗೆ ಮುಡಿಯುತ್ತಿದ್ದರು.

ಹಿಂದಿನ ದಿನವೇ ಬಿರಿಯ ತೊಡಗುವ ಮೊಗ್ಗನ್ನು ಕೊಯ್ದಿಟ್ಟರೆ ಮರುದಿನ ಹೂಗಳ ಗಾತ್ರ ಕಿರಿದಾಗಿರುತ್ತಿತ್ತು. ಸೂರ್ಯೋದಯಕ್ಕೂ ಮೊದಲೇ ಅರಳುವ ಈ ಸೂರ್ಯಕಾಂತಿ ಹೂವುಗಳು ಅಚ್ಚಬೆಳ್ಳಗಿರುತ್ತಿದ್ದವು. ವಿಸ್ತಾರವಾಗಿ ಹರಡಿಕೊಂಡ ಟೊಂಗೆಗಳ ಹಸಿರ ನಡುವೆ ಬಿಳಿಯದಾದ ಈ ಒಂಟಿ ಹೂಚೆಂಡುಗಳು ವಾತಾವರಣಕ್ಕೇ ಶೋಭೆ ನೀಡುತ್ತಿದ್ದವು. ಮಕರಂಧ ಹೀರುವ ಕೀಟಗಳು, ಚಿಟ್ಟೆಗಳು, ಇರುವೆಗಳು ಆಗಲೇ ವ್ಯಾಪಾರ ಆರಂಭಿಸುತ್ತಿದ್ದವು.

ಈ ಹೂವಿನ ವಿಶೇಷತೆಯೆಂದರೆ ಬೆಳಗಿನ ಗಂಟೆ ಹತ್ತು ದಾಟುತ್ತಿದ್ದಂತೆ ದಳಗಳ ತುದಿಗಳು ಗುಲಾಬಿ ವರ್ಣಕ್ಕೆ ತಿರುಗಲಾರಂಭಿಸುವುದು..! ಮಧ್ಯಾಹ್ನ ಹನ್ನೆರಡು ಗಂಟೆಗೆ ಒಂದು ಗೆಲ್ಲು ಇಡೀ ಹೂವು ಗುಲಾಬಿ ಬಣ್ಣಕ್ಕೆ ತಿರುಗಿ ಸಂಜೆಯಾಗುತ್ತಲೇ ಕೆಂಪಾಗಿ ಕತ್ತಲಡರುವ ಹೊತ್ತಿಗೆ ಕಳಾಹೀನವಾಗಿ ಮುದ್ದೆಯಾಗುತ್ತದೆ. ಕೋಟ್ಯಂತರ ದೂರವಿರುವ ಸೂರ್ಯನ ಬೆಳಕಿನ ಪ್ರಭಾವಕ್ಕೆ ಒಳಗಾದ ಈ ನಿಷ್ಪಾಪಿ ಸಸ್ಯವು ತನ್ನ ಒಡಲಲ್ಲಿ ಯಾವ ರೀತಿಯ ಬದಲಾವಣೆಗೆ ಒಳಪಡುವುದೋ ತಿಳಿಯದು. ಅದರ ಪರಿಣಾಮ ಹೂವುಗಳಲ್ಲಂತೂ ಪ್ರಖರವಾಗಿಯೇ ಕಂಡುಬರುತ್ತದೆ. ಖಾದ್ಯತೈಲದ ಸೂರ್ಯಕಾಂತಿ ಎಂಬ ಹಳದಿ ಹೂವುಗಳೂ ಸೂರ್ಯನಿಗೇ ಮುಖಮಾಡಿರುವುದನ್ನು ಕಾಣಬಹುದು. ಅಮವಾಸ್ಯೆ ಹುಣ್ಣಿಮೆಗಳಿಗೆ ಸಾಗರದ ಏರಿಳಿತವಾದಂತೆ ಸಸ್ಯಗಳೂ ಖಗೋಳದ ವಿದ್ಯಮಾನಗಳಿಗೆ ಪ್ರತಿಕ್ರಿಯೆ ನೀಡುತ್ತವೆ ಎನ್ನುವುದಕ್ಕಿವು ಸ್ಪಷ್ಟ ಉದಾಹರಣೆಗಳಾಗಿವೆ.

ಚಂದ್ರಕಾಂತಿ, ನೆಲಕಮಲ, ಸ್ಥಳಪದ್ಮ, ಬೆಟ್ಟದಾವರೆ (ಬೆಟ್ಟದಾವರೆ ಎಂಬ ಪದ ಆದೇಶ ಸಂಧಿಗೆ ಜನಜನಿತ) ಚಾರಟೆ, ಕಾನ್ಫೆಡರೇಟ್ ರೋಸ್, ಹತ್ತಿರೋಸ್ ಮ್ಯಾಲೋ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ಸೂರ್ಯಕಾಂತಿ ಹೂವು ವೈಜ್ಞಾನಿಕವಾಗಿ ಹೈಬಿಸ್ಕಸ್ ಮುಟಾಬಿಲಿಸ್ ಎಂದು ಕರೆಸಿಕೊಂಡಿದೆ. ಮಾಲ್ವೇಸಿ ಕುಟುಂಬ, ಅಂದರೆ ದಾಸವಾಳದ್ದೇ ಕುಟುಂಬದ ಸದಸ್ಯ ಸಸ್ಯವಾಗಿದೆ. ಹೃದಯದಾಕಾರದ ಅಂಗೈಯಂತಹ ಸಂಯುಕ್ತ ಎಲೆಯು ಸೀಳುಗಳನ್ನು ಹಾಗೂ ಅಂಚುಗಳಲ್ಲಿ ಗರಗಸದಂತಹ ರಚನೆಗಳನ್ನು ಹೊಂದಿದೆ. ಎಲೆ ಹಾಗೂ ತೊಗಟೆಗಳು ಸಾಂಪ್ರದಾಯಿಕ ಔಷಧಿಗಳಾಗಿ ಹುಣ್ಣು, ಗಾಯಕ್ಕೆ ಬಳಕೆಯಲ್ಲಿದೆ. ಭಾಗಶ: ನೆರಳು ಹಾಗೂ ತೇವಯುಕ್ತ ಮಣ್ಣು ಈ ಹೂವಿಗೆ ಅಪ್ಯಾಯಮಾನವಾದುದಾಗಿದೆ. ಈ ಸಸ್ಯವನ್ನು ನಾವೆಲ್ಲರೂ ಸುಲಭವಾಗಿ ನೆಟ್ಟು ಬೆಳಸಬಹುದು.. ನೀವೂ ಪ್ರಯತ್ನಿಸುವಿರಿ ತಾನೇ?

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************


Ads on article

Advertise in articles 1

advertising articles 2

Advertise under the article