-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 136

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 136

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 136
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ಕಳೆದ ವಾರ ಹಸಿರು ಮನೆಯ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೆವು. ನಾವು ಓದಿ ಓದಿ, ಕೇಳಿ ಕೇಳಿ ಹಸಿರು ಮನೆಯ ಪರಿಣಾಮ ನಮಗೆ ಮಾರಕ ಎಂದೇ ಭಾವಿಸಿದ್ದೇವೆ. ಆದರೆ ಹಸಿರುಮನೆಯ ಪರಿಣಾಮ ಇಲ್ಲದೇ ಇದ್ದಿದ್ದರೆ ಭೂಮಂಡಲದ ಸರಾಸರಿ ಉಷ್ಣತೆ -18°C ಇರುತ್ತಿತ್ತು. ಭೂಮಿಯ ಮೇಲೆ ಬದುಕು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನೋಡಿದ್ದೇವೆ. ಈ ಹಸಿರುಮನೆಯ ಪರಿಣಾಮವನ್ನು ನಾವು ಎಲ್ಲಿ ಎಲ್ಲಿ ಬಳಸುತ್ತೇವೆ ಎಂಬುದನ್ನು ನೋಡೋಣ.

ನೀವು ಸೋಲಾರ್ ಕುಕ್ಕರ್ ಗಳನ್ನು ಬಳಸಿದ್ದೀರಾ ಅಥವಾ ಬಳಸುತ್ತಿದ್ದೀರಾ? ನಿಜವಾಗಿ ನಿಮಗೆ ಭೂಮಿ ಬಿಸಿಯಾಗುವ (global warming) ಬಗ್ಗೆ ನೈಜ ಕಾಳಜಿ ಇದ್ದರೆ ನೀವು ಸೋಲಾರ್ ಕುಕ್ಕರ್ ಅನ್ನು ಬಳಸುತ್ತಿದ್ದಿರೇನೋ. ಇದು ಒಳ ಮೇಲ್ಮೈಗೆ ಕಪ್ಪು ಬಣ್ಣ ಬಳಿದ ಒಂದು ಮರದ ಪೆಟ್ಟಿಗೆ. ಇದಕ್ಕೊಂದು ಗಾಜಿನ ಮುಚ್ಚಳವಿರುತ್ತದೆ ಮತ್ತು ಒಳಗೆ ಬೆಳಕನ್ನು ಪ್ರತಿಫಲಿಸಲು ಒಂದು ಕನ್ನಡಿ ಇರುತ್ತದೆ. ಇದರಲ್ಲಿ ಬೇಯಿಸಬೇಕಾದ ವಸ್ತುಗಳನ್ನು ಕಪ್ಪು ಪಾತ್ರೆಗಳಲ್ಲಿ (anodised vessels) ಅಗತ್ಯವಾದಷ್ಟು ನೀರು ಹಾಕಿ ಪೆಟ್ಟಿಗೆಯೊಳಗಿಟ್ಟು ಗಾಜಿನ ಹಲಗೆಯನ್ನು ಮುಚ್ಚಿ ಬಿಸಿಲಿನಲ್ಲಿ ಇಡುತ್ತೇವೆ. ಇದರ ಒಳಗೆ ನೇರವಾಗಿ ಬಿಸಿಲು ಬೀಳುವುದು ಮಾತ್ರವಲ್ಲ ಜೋಡಿಸಲಾದ ಕನ್ನಡಿ ಹೆಚ್ಚುವರಿ ಬೆಳಕನ್ನು ಪ್ರತಿಫಲಿಸುತ್ತದೆ. ಇದರೊಳಗಿನ ಕಪ್ಪು ಬಣ್ಣ ಶಾಖ ವಿಕಿರಣಗಳನ್ನು ಸುಲಭವಾಗಿ ಹೀರುತ್ತದೆ. ಇನ್ನು ಗಾಜಿನ ಮುಚ್ಚಳ ಹೊರಗೆ ತಪ್ಪಿಸಿಕೊಂಡು ಹೋಗುವ ಶಾಖವನ್ನು ಒಳಗೆ ಬಂಧಿಸಿ ಉಷ್ಣತೆ ಮತ್ತಷ್ಟು ಏರಿ ಒಳಗಿನ ಆಹಾರವನ್ನು ಬೇಯಿಸುತ್ತದೆ. ಮರದ ಪೆಟ್ಟಿಗೆ ಶಾಖ ನಿರೋಧಕವಾದುದರಿಂದ ಬಿಸಿ ಹೊರ ಹೋಗುವುದಿಲ್ಲ. ಯಾವುದೇ ಮಾಲಿನ್ಯವಿಲ್ಲ ಯಾವುದೇ ಶಾಖ ಉತ್ಸರ್ಜನೆ ಇಲ್ಲ. 

ಇನ್ನೊಂದು ನಿಮ್ಮ ಮನೆಯ ಸೌರ ನೀರು ಕಾಯಿಸುವ ವ್ಯವಸ್ಥೆ (solar geyser) ಕೂಡಾ ಕೆಲಸ ಮಾಡುವುದು ಕೂಡಾ ಹಸಿರುಮನೆಯ ಪರಿಣಾಮವೇ. ಮೊದಲು ಗಾಜಿನ ಪೆಟ್ಟಿಗೆಯ ಒಳಗೆ ನೀರು ತುಂಬಿದ ತಾಮ್ರದ ನಳಿಕೆಗಳನ್ನು ಬಳಸಲಾಗುತ್ತಿತ್ತು. ಈಗ ನೇರವಾಗಿ ಗಾಜಿನ ನಳಿಕೆಗಳನ್ನೇ ಬಳಸಲಾಗುತ್ತದೆ. ಈ ಗಾಜಿನ ನಳಿಕೆಯ ಒಳಗಿನ ಕಪ್ಪು ಬಣ್ಣ ಶಾಖವನ್ನು ಸುಲಭವಾಗಿ ಹೀರುತ್ತದೆ ಮತ್ತು ಗಾಜು ಹಸಿರುಮನೆಯ ಕಾರಣದಿಂದ ಶಾಖ ತಪ್ಪಿಸಿಕೊಂಡು ಹೋಗಲು ಬಿಡದೇ ನೀರನ್ನು ಸುಮಾರು 80°C ವರೆಗೆ ಕಾಯಿಸುತ್ತದೆ. ನೀವು ಬಹಳ ದಿನ ಮನೆ ಬಿಟ್ಟು ಹೋಗುವುದಾದರೆ ಅಥವಾ ನಿಮ್ಮ ಮೇಲ್ಸ್ಥರದ ಟ್ಯಾಂಕ್ ಇಲ್ಲದೇ ಇರುವುದಾದರೆ ನೀವು ಗಾಜಿನ ಟ್ಯೂಬ್ ಗಳನ್ನು ಮುಚ್ಚಿ ಇಡಬೇಕಾಗುತ್ತದೆ. ಏಕೆಂದರೆ ಹಸಿರುಮನೆಯ ಪರಿಣಾಮದಿಂದ ಏರುವ ಉಷ್ಣತೆ ನಿಮ್ಮ ಗಾಜಿನ ಕೊಳವೆಗಳು ಒಡೆಯುವಂತೆ ಮಾಡುತ್ತದೆ. ಇಲ್ಲಿ ಕೂಡಾ ಯಾವುದೇ ಮಾಲಿನ್ಯವಿಲ್ಲ ಯಾವುದೇ ಶಾಖದ ಉತ್ಸರ್ಜನೆ ಇಲ್ಲ. ಇದು ಭೂ ವಾತಾವರಣದ ಉಷ್ಣತೆ ಏರಲು ಬಿಡುವುದಿಲ್ಲ.

ಯಾರು ಹೇಳಿದರು ನಿಮಗೆ ಹಸಿರುಮನೆಯ ಪರಿಣಾಮ ಭೂಮಿಯ ತಾಪವನ್ನು ಏರಿಸುತ್ತದೆ ಎಂದು?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article