-->
ಮಳೆಯ ವಿಶೇಷ ಅನುಭವ : ಸಂಚಿಕೆ - 04

ಮಳೆಯ ವಿಶೇಷ ಅನುಭವ : ಸಂಚಿಕೆ - 04

ಮಳೆಯ ವಿಶೇಷ ಅನುಭವ : ಸಂಚಿಕೆ - 04
ಈ ಬಾರಿಯ ಮಳೆಯ ಕುರಿತು ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಮಕ್ಕಳ ಜಗಲಿಯಲ್ಲಿ ಹಂಚಿಕೊಂಡಿದ್ದಾರೆ.. 

ಜಗಲಿಯ ಮಕ್ಕಳ ಅನುಭವ ಬರಹಗಳು
◾ ಚಿನ್ಮಯಿ, ದ್ವಿತೀಯ ಪಿಯುಸಿ
◾ ರಶ್ಮಿ ಬಿ , 9ನೇ ತರಗತಿ
◾ ನಿಹಾ ಎಸ್ ಆರ್, 4ನೇ ತರಗತಿ
◾ ರುಬ, 6ನೇ ತರಗತಿ
◾ ಸಿ ಬಿ ಸನಿಹ, 8ನೇ ತರಗತಿ
◾ ತಸ್ಲೀಮ ಬಾನು, 8ನೇ ತರಗತಿ
◾ ಸಿ ಬಿ ಶರಧಿ, 8ನೇ ತರಗತಿ


ಮಳೆ ಇಲ್ಲದೆ ಬೆಳೆ ಇಲ್ಲ ಎನ್ನುವುದು ಸತ್ಯ. ಮಳೆ ಎಂದರೆ ಯಾರಿಗೆ ತಾನೇ ಖುಷಿ ಇರಲ್ಲ. ಮಳೆ ನೀರಲ್ಲಿ ಆಟ ಆಡುವುದೇ ಖುಷಿ. ನಮ್ಮ ಅಜ್ಜ ರೈತ. ಮೊದಲ ಮಳೆ ಬಂದಾಗ ಅಜ್ಜ ಹೇಳುವರು ಯಾವಾಗ ಸಾಗುವಳಿ ಶುರು ಮಾಡುವುದು ಎಂದು. ಗದ್ದೆಯನ್ನು ಕೋಣಗಳಿಂದ ನಮ್ಮ ಅಜ್ಜ ಉಳುತ್ತಿದ್ದರು. ನಾನು ಕೊಡೆ ಹಿಡಿದುಕೊಂಡು ಉಳುಮೆ ನೋಡಲು ಹೋಗುತ್ತಿದ್ದೆ.         

ಆದರೆ ಇತ್ತೀಚಿನ ದಿನಗಳಲ್ಲಿ ಹಾಗಲ್ಲ ಮಳೆ ಬಂದರೆ ಶಾಲೆಗೆ ರಜೆ‌. ಮಳೆ ಬಂದಾಗ ಬೈಯುವರು. ಹಲವರು ಖುಷಿ ಪಡುವರು. ಇತ್ತೀಚಿನ ಒಂದು ಘಟನೆ ನನ್ನ ಮನವನ್ನು ಮೂಕವಾಗಿಸಿದೆ. ಬೆಳಗ್ಗೆ ಎದ್ದು ರಜೆ ಇದೆಯೇ ಎಂದು ನೋಡುತಿದ್ದ ನಾನು ಅವತ್ತು ಸ್ನೇಹಿತರೊಂದಿಗೆ ಶಾಲೆಗೆ ಹೋಗುತ್ತಿದ್ದೆ. ಸಂಜೆ ಶಾಲೆಯಿಂದ ಮರಳಿ ಬರುವಾಗ ಮನೆ ಮುಂದೆ ಹಲವಾರು ಬಣ್ಣ ಬಣ್ಣದ ಪಕ್ಷಿಗಳು ಚಿಂವ್ ಚಿಂವ್ ಹಾಡು ಹಾಡುತ್ತಾ ಇರುತ್ತವೆ. ನಮ್ಮ ಮನೆಯ ಅಂಗಳದಲ್ಲಿ ನವಿಲು ಬಂದು ಓಡಾಡುತ್ತಿರುತ್ತದೆ. ಅದೆಲ್ಲ ನಮಗೆ ತುಂಬಾ ಖುಷಿ ಕೊಡುತ್ತದೆ.
.............................................. ಚಿನ್ಮಯಿ
ದ್ವಿತೀಯ ಪಿಯುಸಿ
ಶ್ರೀ ರಾಮ ಪದವಿಪೂರ್ವ ಕಾಲೇಜು, ಕಲ್ಲಡ್ಕ
ಬಂಟ್ವಾಳ ತಾಲೂಕು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
 

          
ಈ ಬಾರಿ ಮಳೆಯ ವಿಶೇಷ ಅನುಭವಗಳನ್ನು ನಾನು ಹೇಗೆಲ್ಲ ಎದುರಿಸಿದೆ ಎಂದು ನಿಮಗೆ ತಿಳಿಯಲು ಕಾತುರವಿದೆಯೇ ಹಾಗಾದರೆ ಕೇಳಿ...

ನಾನು ಮಳೆಗಾಲದ ಸಮಯ ಬಂದಾಗ ಬೇಗನೆ ಎದ್ದು ಮೊಬೈಲ್ ನೋಡುವುದು ರಜೆ ಉಂಟಾಂತ. ರಜೆ ಇಲ್ಲದಿದ್ದರೆ ಎದ್ದು ಶಾಲೆಗೆ ಹೊರಡುವುದು. ರಜೆ ಇದ್ದರೆ 9 ಗಂಟೆಯ ತನಕ ನಿದ್ದೆ ಮಾಡುವುದು. ಅಮ್ಮ ಬೆಳಗ್ಗೆ ಬೆಳಗ್ಗೆಯೇ ಶುರು ಮಾಡ್ತಾರೆ... "ಈ ಮಕ್ಕಳಿಗೆ ಒಂದು ಯಾಕೆ ರಜೆ ಸಿಕ್ಕಿದೆಯೇ, ಶಾಲೆ ಇದ್ದಾಗ ಹಾಸಿಗೆಯಿಂದ ಬೇಗ ಎದ್ದೇಳ್ತಾರೆ ಇಲ್ಲದಿದ್ದರೆ 9 ಗಂಟೆ ತನಕ ಮಲಗುತ್ತಾರೆ. ಮನೆಯಲ್ಲಿ ಅಷ್ಟು ಕೆಲಸ ಉಂಟು ಒಂದು ಕೆಲಸದಲ್ಲಿಯಾದರು ಸಹಾಯ ಮಾಡ್ತಾರ ಇಲ್ಲ. ಬೆಳಗ್ಗೆ ಎದ್ದು ಮೊಬೈಲ್ ನೋಡುವುದು ಮೊಬೈಲ್ ಇಲ್ಲಾಂದ್ರೆ ಟಿವಿ ನೋಡುವುದು." ಹೀಗೆ ಅಮ್ಮನ ಮಾತುಗಳು ಬರ್ತಾನೆ ಇರುತ್ತವೆ.

ನನ್ನ ಅಮ್ಮ ಬೆಳಗ್ಗೆ ತಿಂಡಿ ಮಾಡುತ್ತಾ ಇರುತ್ತಾರೆ. ಮಳೆ ಬಂದರೆ ಹೊರಗೆ ಹಾಕಿದ ಬಟ್ಟೆಗಳನ್ನು ತರಲು ಓಡಿ ಹೋಗ್ತಾರೆ. ಅವರು ಹೋಗುವಾಗ ಅರ್ಧದಷ್ಟು ಬಟ್ಟೆಗಳು ಒದ್ದೆಯಾಗಿರ್ತಾವೆ. ಮತ್ತೆ ಅದು ಒಣಗಿ ಎಲ್ಲಾ ಆದಾಗ ಸಂಜೆ ಆಗುತ್ತದೆ. ಈ ಮಳೆಗಾಲದಲ್ಲಿ ಬಟ್ಟೆ ಒಂದು ಬೇಗ ಒಣಗೋದೆ ಇಲ್ಲ. ಶಾಲೆಗೆ ಹೋಗುವಾಗ ಕೆಲವೊಮ್ಮೆ ನಾನು ಛತ್ರಿಯನ್ನು ಮರೆತು ತೆಗೆದುಕೊಂಡು ಹೋಗುವುದೇ ಇಲ್ಲ. ಸಂಜೆ ಬರವಾಗ ಮಳೆಯಲ್ಲಿ ಒದ್ದೆ ಆಗಿಕೊಂಡು ಬರುವುದು. ಆ ಬಸ್ಸಿನವರು ನಮ್ಮ ಮೇಲೆ ಮಳೆ ನೀರಿನ ಕೆಸರನ್ನು ಹಾರಿಸಿಕೊಂಡು ಹೋಗುವುದು. ಅಬ್ಬಬ್ಬಾ ಮನೆಗೆ ಬಂದರೆ ಅಮ್ಮ ಹೇಳುವುದು, "ನಾನು ನಿನ್ನ ಬಟ್ಟೆಯನ್ನು ತೊಳೆಯುವುದಿಲ್ಲ. ಕೆಸರನೆಲ್ಲ ಮೆತ್ತಿಸಿಕೊಂಡು ಬಂದಿದ್ದಿ." ಎನ್ನುತ್ತಾರೆ.

ಶಾಲೆಗೆ ರಜೆ ಸಿಕ್ಕಿದರೆ ನಾನು ಮತ್ತು ನನ್ನ ಸ್ನೇಹಿತರು ಮಳೆಯಲ್ಲಿ ಆಟ ಆಡುವುದು. ಮಳೆ ನೀರಿನಲ್ಲಿ ಆಟ ಆಡುವ ಮಜಾನೇ ಬೇರೆ. ರಜೆ ಸಿಕ್ಕಿ ಮಳೆ ಬರ್ಲಿಲ್ಲವಾದರೆ ತೋಡಿನಲ್ಲಿ ಮೀನು ಹಿಡಿಯಲು ಹೋಗುವುದು ಅಥವಾ ಏಡಿ ಹಿಡಿಯಲು ಹೋಗುವುದು. ನೀರಿನಲ್ಲಿ ಪೇಪರ್ ದೋಣಿ ಮಾಡಿ ಬಿಡುವುದು ಯಾರ ದೋಣಿ ಮೊದಲು ಹೋಗಿ ತಲುಪುತ್ತದೆ ಅವರು ವಿಜೇತರು. ನಾನು ಇನ್ನೂ ಚಿಕ್ಕ ಇರುವಾಗ ಮನೆಯ ಪಕ್ಕದ ತೋಡಿನಲ್ಲಿ ಕಪ್ಪೆ ಮರಿಗಳು ಇತ್ತು.. ಆ ಮರಿಗಳನ್ನು ತಂದು ಮನೆಯ ಅಂಗಳದಲ್ಲಿ ಗುಂಡಿ ಮಾಡಿ ಆ ಗುಂಡಿಗೆ ಸ್ವಲ್ಪ ನೀ ರು ಹಾಕಿ ಅದರಲ್ಲಿ ಬಿಡುತ್ತಿದ್ದೆವು. ಮರುದಿನ ಬಂದು ನೋಡಿದರೆ ಕಪ್ಪೆಮರಿಗಳೂ ಇರುವುದಿಲ್ಲ ನೀರು ಕೂಡಾ ಇರುವದಿಲ್ಲ. 

ಮಳೆನೀರಿನಲ್ಲಿ ಅಮ್ಮ ಆಟ ಆಡ್ಲಿಕ್ಕೆ ಬಿಡ್ಲಿಲ್ಲಾದ್ರೆ ರೈನ್ ಕೋಟ್ ಹಾಕಿ ಆಟ ಆಡುವುದು. ಎಲ್ಲಾ ಮುಗಿಸಿ ಮನೆಗೆ ಸಂಜೆ ಆದ್ಮೇಲೇನೆ ಬರುವುದು. ಅಮ್ಮ ಬಿಸಿ ಬಿಸಿ ತಿಂಡಿಯನ್ನು ಮಾಡಿ ಇಡುತ್ತಾರೆ. ಅದನ್ನು ಎಲ್ಲರೂ ಒಟ್ಟಿಗೆ ಕೂತು ತಿನ್ನುತ್ತೇವೆ.

ಕೆಸರಿನ ಗದ್ದೆಯಲ್ಲಿ ಆಟ ಆಡುವುದು ಎಂದರೆ ನನಗೆ ಇಷ್ಟ. ನಮ್ಮ ಊರಿನಲ್ಲಿ ಕೆಸರ್ಡ್ ಒಂಜಿ ದಿನ ಅಂತ ಆಚರಿಸುತ್ತೇವೆ. ಆ ಕೆಸರಿನಲ್ಲಿ ನಾವೆಲ್ಲ ಸೇರಿ ಆಟ ಆಡುವುದು ಮತ್ತು ಕೆಲವು ಸ್ಪರ್ಧೆಗಳು ಇರುತ್ತದೆ. ನಾವೆಲ್ಲರು ಸ್ಪರ್ಧೆಯಲ್ಲಿ ಭಾಗವಹಿಸುತ್ತೇವೆ. ಬಹುಮಾನ ಸಿಗುತ್ತದೆ. ಸಿಗದೇನು ಕೂಡ ಇರ್ತದೆ. ಅದಕ್ಕೆ ನಾವು ಬೇಜಾರು ಮಾಡಬಾರದು. ನಾವು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸ್ಪರ್ಧೆ, ಕೆಸರಿನಲ್ಲಿ ಆಟ, ಮೀನು ಹಿಡಿಯುವುದು , ದೋಣಿ ಬಿಡುವುದು ಎಲ್ಲಾ ಮುಗಿದ ಮೇಲೆ ರಾತ್ರಿ ಮತ್ತೆ ಕಾಯುವುದು ನಾಳೆ ರಜೆ ಸಿಕ್ತದಾಂತ. ಒಂದು ದಿವಸ ರಜೆ ಸಿಕ್ಕಿದರೆ ಮರುದಿವಸ ಶಾಲೆಗೆ ಹೋಗಲು ಉದಾಸೀನ. ಶಾಲೆಗೆ ಹೋದ ಮೇಲೆ ಮಕ್ಕಳೊಂದಿಗೆ ಪಾಠ, ಆಟ ಅಂತ ಖುಷಿಯಲ್ಲಿ ಇರುತ್ತೇವೆ.
................................................... ರಶ್ಮಿ ಬಿ
9ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

               

ನನಗೆ ಮಳೆಯಲ್ಲಿ ಆಟವಾಡಬೇಕೆಂಬ ಆಸೆ ತುಂಬಾ ಇರುತ್ತದೆ. ಆದರೆ ನಾನು ಮಳೆಯಲ್ಲಿ ಹೆಚ್ಚು ಹೊತ್ತು ಆಟವಾಡಿದರೆ ಶೀತ ಮತ್ತು ಜ್ವರ ಬರುತ್ತದೆ. ಆದ್ದರಿಂದ ಅಮ್ಮ ಮಳೆಯಲ್ಲಿ ಹೆಚ್ಚು ನೆನೆಯಲು ಬಿಡುವುದಿಲ್ಲ. ಆದರೂ ಮನೆಯ ಕಿಟಕಿಯ ಬಳಿ ನಿಂತು ಮಳೆಯ ಸೌಂದರ್ಯವನ್ನು ನೋಡುವುದು ನನಗೆ ತುಂಬಾ ಇಷ್ಟ.

ಮಳೆಯಲ್ಲಿ ಶಾಲೆಗೆ ಹೋಗುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಕೊಡೆ ಹಿಡಿದು ಅಥವಾ ಮಳೆಕೋಟು ಹಾಕಿಕೊಂಡು ಶಾಲೆಗೆ ಹೋಗುವುದು ತುಂಬಾ ಮಜವಾಗಿರುತ್ತದೆ. ದಾರಿಯಲ್ಲಿರುವ ನೀರಿನ ಗುಂಡಿಗಳನ್ನು, ಹಸಿರಾಗಿ ಕಾಣುವ ಮರಗಳನ್ನು ಮತ್ತು ಮಳೆಯಲ್ಲಿ ನೆನೆಯುವ ಪಕ್ಷಿಗಳನ್ನು ನೋಡಲು ತುಂಬಾ ಸಂತೋಷವಾಗುತ್ತದೆ. ಜೋರಾಗಿ ಮಳೆ ಬಂದರೆ ಕೆಲವೊಮ್ಮೆ ಶಾಲೆಗೆ ರಜೆ ಸಿಗುತ್ತದೆ. ಆಗ ನಾನು ಮನೆಯಲ್ಲೇ ಕುಳಿತು ಓದುವುದು ಮತ್ತು ಬರೆಯುತ್ತೇನೆ. ನಮ್ಮ ಶಾಲೆಯ ಮೈದಾನವೂ ಮಳೆಯ ನೀರಿನಿಂದ ತುಂಬಿ ದೊಡ್ಡ ಕೆರೆಯಂತೆ ಕಾಣುತ್ತದೆ. ಮಳೆಯ ಈ ಸುಂದರ ಅನುಭವ ನನಗೆ ಯಾವಾಗಲೂ ಸಂತೋಷವನ್ನು ನೀಡುತ್ತದೆ.
........................................... ನಿಹಾ ಎಸ್ ಆರ್
4ನೇ ತರಗತಿ
ಎಸ್ ಎಲ್ ಎನ್ ಪಿ ಸ್ಕೂಲ್ ಪಾಣೆಮಂಗಳೂರು
ಬಂಟ್ವಾಳ ತಾಲೂಕು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

 

ಒಂದು ದಿನ ನಮ್ಮ ಶಾಲೆಗೆ ಮಳೆಯ ರಜೆ ಘೋಷಿಸಲಾಯಿತು. ‌ರಜೆ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು. ಬೆಳಿಗ್ಗೆ ಬೇಗನೆ ಎದ್ದೆ. ಹೊರಗೆ ಮಳೆ ಬರುತ್ತದೆ ಎಂದು ಕಾಯುತ್ತಿದ್ದೆ. ಆದರೆ ಮಳೆಬರಲಿಲ್ಲ. ಆಕಾಶದಲ್ಲಿ ಮೋಡಗಳು ಮಾತ್ರ ಇದ್ದವು. ನಾನು ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ ಮಳೆ ಯಾವಾಗ ಎಂದು ಕಾಯುತ್ತಿದ್ದೆ. ಆದರೆ ಇಡೀ ದಿನ ಮಳೆ ಸುರಿಯಲಿಲ್ಲ. ನನಗೆ ಸ್ವಲ್ಪ ನಿರಾಶೆಯಾಯಿತು. ಸ್ನೇಹಿತರ ಜೊತೆ ಶಾಲೆಗೆ ಹೋಗಲು ಆಗಲಿಲ್ಲ. ಶಿಕ್ಷಕರನ್ನು ಕೂಡ ಭೇಟಿ ಮಾಡಲಿಲ್ಲ. ಮನೆಯಲ್ಲೇ ಸಮಯ ಕಳೆಯಬೇಕಾಯಿತು. ಪುಸ್ತಕ ಓದಿದೆ. ದೂರದರ್ಶನ ನೋಡಿದೆ. ಮನೆಯವರ ಜೊತೆ ಮಾತನಾಡಿದೆ. ಸ್ವಲ್ಪ ಆಟವೂ ಆಡಿದೆ. ಆದರೂ ಶಾಲೆಗೆ ಹೋಗದ ಬೇಸರವಿತ್ತು. ಮಳೆ ಬರದ ಕಾರಣ ಆಶ್ಚರ್ಯವಾಯಿತು. ಹವಾಮಾನ ಯಾವಾಗ ಬೇಕಾದರೂ ಬದಲಾಗಬಹುದು ಎಂದು ತಿಳಿಯಿತು. ಮುನ್ನೆಚ್ಚರಿಕೆಯಾಗಿ ಶಾಲೆಗೆ ರಜೆ ನೀಡಿದ್ದರು. ವಿದ್ಯಾರ್ಥಿಗಳ ಸುರಕ್ಷತೆ ಮುಖ್ಯ ಎಂಬುದು ಅರ್ಥವಾಯಿತು.

ಒಂದು ಬಾರಿ ನಮ್ಮ ಮನೆಯ ಹತ್ತಿರದ ರಸ್ತೆಯಲ್ಲಿ ನೀರು ತುಂಬಿ ವಾಹನಗಳು ಹೋಗಲು ಕಷ್ಟವಾಯಿತು. ಕೆಲವು ಮನೆಗಳಿಗೆ ನೀರು ನುಗ್ಗಿತು. ಶಾಲೆಗೆ ಹೋಗುವ ರಸ್ತೆಯೂ ಕೆಟ್ಟಿತು. ಆಗ ಮಳೆಯ ಕಷ್ಟವೂ ನಮಗೆ ತಿಳಿಯಿತು. ಮಳೆಯ ಸಮಯದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಶಿಕ್ಷಕರು ಹೇಳಿದರು.

ಮಳೆ ನನಗೆ ಸಂತೋಷ, ನಗು, ಆಟ ಮತ್ತು ಕೆಲವು ಕಷ್ಟಗಳನ್ನೂ ಕಲಿಸಿದೆ. ಆದರೂ ಮಳೆಯ ದಿನಗಳು ನನ್ನ ಜೀವನದ ಅತ್ಯಂತ ಸುಂದರ ನೆನಪುಗಳಲ್ಲಿ ಒಂದಾಗಿವೆ. "ಮಳೆ ಬಂದರೆ ಪ್ರಕೃತಿ ನಗುತ್ತದೆ, ಮಕ್ಕಳು ಕುಣಿಯುತ್ತಾರೆ!" ಇದೇ ಮಳೆಯ ವಿಶೇಷ ಅನುಭವ.
...................................................... ರುಬ
6ನೇ ತರಗತಿ
ದ ಕ ಜಿ ಪಂ ಸ ಹಿ ಪ್ರಾ ಶಾಲೆ ಬೆಂಗ್ರೆ ಕಸಬ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



ನನ್ನ ಹೆಸರು ಸಿ ಬಿ ಸನಿಹ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದವಳು. ನಮ್ಮದು ಕರಾವಳಿ ಪ್ರದೇಶ ವಾಗಿರುವ ಕಾರಣ ಇಲ್ಲಿ ಜೋರಾಗಿ ಮಳೆ ಬೀಳುತ್ತದೆ.

ಒಂದು ದಿನ ಬೆಳಿಗ್ಗೆ ಜೋರಾಗಿ ಮಳೆ ಬಂತು. ಅಂದು ಆದಿತ್ಯವಾರ ಶಾಲೆಗೆ ರಜೆ. ಜೋರಾಗಿ ಮಳೆ ಬೀಳುವಾಗ ಒಣಗಿ ಹೋಗಿರುವ ಗಿಡಗಳು ಚಿಗುರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಯಿತು. ಸ್ವಲ್ಪ ಸಮಯದ ನಂತರ ಮಳೆ ನಿಂತಿತು. ಆಗ ನಾನೂ ಮತ್ತು ನನ್ನ ತಾಯಿ ತೋಟಕ್ಕೆ ಹೋದೆವು. ಅಲ್ಲಿ ಹಸಿರಿನಿoದ ಕೂಡಿರುವ ಗಿಡಗಳು, ನೀರಿಂದ ಕೂಡಿರುವ ಕೆರಗಳು, ಗಿಡದ ಮೇಲೆ ನಿಂತಿರುವ ಮಳೆ ಹನಿಗಳನ್ನು ನೋಡಲು ತುಂಬಾ ಸಂತೋಷವಾಯಿತು. ನೀರು ಹರಿಯುವ ಕೆರೆಗಳಲ್ಲಿ ಆಟ ಆಡುವಾಗ ಅದರಲ್ಲಿ ಸಣ್ಣ ಸಣ್ಣ ಮೀನುಗಳಿದ್ದವು. ಅವುಗಳನ್ನು ನೋಡಿ ತುಂಬಾ ಸಂತೋಷವಾಯಿತು. ನನ್ನ ಅಮ್ಮ ಮನೆಗೆ ಹೊದರು, ನಾನೂ ಮತ್ತು ನನ್ನ ತಂಗಿ ನೀರಿನಲ್ಲಿ ಆಟ ಆಡಿದೆವು. 
.................................................. ಸಿ ಬಿ ಸನಿಹ 
8ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************




 ಒಂದು ದಿನ ಬೆಳಗ್ಗೆ ಎದ್ದಾಗ ಹೊರಗೆ ಜೋರಾಗಿ ಮಳೆ ಸುರಿಯುತ್ತಿತ್ತು. ನನಗೆ ತುಂಬಾ ಖುಷಿಯಾಯಿತು. "ಇಂದು ಶಾಲೆಗೆ ರಜೆ ಸಿಗಬಹುದೇ?" ಎಂದು ಯೋಚಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಶಾಲೆಯಿಂದ ರಜೆ ಎಂದು ಸುದ್ದಿ ಬಂತು. ನಾನು ಸಂತೋಷದಿಂದ ಕುಣಿದು ಕುಪ್ಪಳಿಸಿದೆ. ಆದರೆ ಒಂದು ಮೋಜಿನ ಸಂಗತಿ ಏನೆಂದರೆ, ಶಾಲೆಗೆ ರಜೆ ಸಿಕ್ಕ ದಿನ ಸ್ವಲ್ಪ ಹೊತ್ತಿನಲ್ಲೇ ಮಳೆ ನಿಂತುಬಿಡುತ್ತಿತ್ತು. ಮತ್ತೆ ಶಾಲೆ ಇರುವ ದಿನ ಮಾತ್ರ ಜೋರಾಗಿ ಮಳೆ ಸುರಿಯುತ್ತಿತ್ತು. ಆಗ ನಾನು ಛತ್ರಿ ಹಿಡಿದು, ಕೆಲವೊಮ್ಮೆ ಮಳೆಯಲ್ಲಿ ನೆನೆಯುತ್ತಾ ಶಾಲೆಗೆ ಹೋಗುತ್ತಿದ್ದೆ. ಇದನ್ನು ನೆನಸಿಕೊಂಡರೆ ಈಗಲೂ ನಗು ಬರುತ್ತದೆ. ರಜೆ ಇದ್ದ ದಿನ ನಾನು ಮನೆಯ ಮುಂದೆ ನಿಂತು ಮಳೆಯ ಹನಿಗಳನ್ನು ನೋಡುತ್ತಿದ್ದೆ. ನನ್ನ ತಮ್ಮ-ತಂಗಿಯರ ಜೊತೆ ಕಾಗದದ ದೋಣಿ ಮಾಡಿ ನೀರಿನಲ್ಲಿ ಹರಿಬಿಡುತ್ತಿದ್ದೆವು. ಮಳೆ ನನಗೆ ಸದಾ ಸಂತೋಷ, ನೆನಪು ಮತ್ತು ಪ್ರಕೃತಿಯ ಪ್ರೀತಿಯ ಸಂಕೇತವಾಗಿದೆ.
.............................................. ತಸ್ಲೀಮ ಬಾನು
8ನೇ ತರಗತಿ
ದ ಕ ಜಿ ಪಂ ಸ ಹಿ ಪ್ರಾ ಶಾಲೆ ಬೆಂಗ್ರೆ ಕಸಬ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
 

ನಮ್ಮಲ್ಲಿ ಅತೀ ಹೆಚ್ಚು ಮಳೆಯಾಗುತ್ತದೆ. ಬಹಳ ದಿನದ ನಂತರ ಒಣಗಿರುವ ಧರೆಯ ಒಡಲನ್ನು ತನಿಸಲು ಮೋಡದಿಂದ ಇಳಿದು ಸರಸರನೆ ಬಂತು ಮಳೆ. ಮಳೆಗಾಲದಲ್ಲಿ ನನ್ನ ಮನೆಯ ಸುತ್ತಮುತ್ತಲಿನ ಪ್ರಕೃತಿಯು ಹಸಿರಾಗಿ ಕಂಗೊಳಿ ಸುತ್ತಿತ್ತು. ಮಳೆಗಾಲದ ಸಂಭ್ರಮವೇ ಬೇರೆ. ಮಳೆಗಾಲದಲ್ಲಿ ನಮ್ಮ ಮನೆಯ ಹತ್ತಿರ ಕೆಸರು ಗದ್ದೆ ಆಟವಿತ್ತು. ಅದರಲ್ಲಿ ನಾನು ಭಾಗವಹಿಸಿದೆ. ಆಟವಾಡಿದ ನಂತರ ಅಂಗಳದಲ್ಲಿ ಹರಿಯುವ ನೀರಿನ ಮೇಲೆ ಕಾಗದದ ದೋಣಿಯನ್ನುಮಾಡಿ ಬಿಡುವಾಗ ನನ್ನ ಅಕ್ಕ ಮತ್ತು ನಾನು ಒಬ್ಬರಿಗೊಬ್ಬರು ಕಿತ್ತಾಡಿ ಜಾರಿ ಬಿದ್ದೆವು. ಅಣ್ಣ ಅಕ್ಕನವರ ಜೊತೆ ಸೇರಿ ಶಾಲಾ ಚಟುವಟಿಕೆಗಳನ್ನು ಮಾಡಿದೆ. ಶಾಲಾ ಚಟುವಟಿಕೆಗಳು ಮುಗಿದ ನಂತರ ತಂದೆ ತಾಯಿಯ ಜೊತೆ ನ್ಯೂಸ್ ನೋಡುತ್ತಿದ್ದಾಗ ನಮ್ಮ ಪಕ್ಕದ ಊರಿನಲ್ಲಿ ಹಲವಾರು ಮನೆಗಳಿಗೆ ಗುಡ್ಡ ಕುಸಿದು ನನ್ನಂತ ಪುಟ್ಟ ಪುಟ್ಟ ಕಂದಮ್ಮಗಳ ಪ್ರಾಣವನ್ನೆ ತೆಗೆದು ಕೊಂಡ ಆ ಮಳೆರಾಯನ ಮೇಲೆ ನಾನು ಬಹಳ ಕೋಪ ಗೊಂಡೆ. ನನಗೆ ತುಂಬಾ ದು:ಖವಾಯಿತು. ಅಂದು ನಾನು ಅಳುತ್ತಲೇ ಮಲಗಿದೆ. ಇದು ಈ ಮಳೆಗಾಲದಲ್ಲಿ ಆದ ನನ್ನ ಅನುಭವ.
.................................................. ಸಿ ಬಿ ಶರಧಿ 
8ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article