-->
ಮಕ್ಕಳಿಗೆ ರಜೆಯ ಓದು : ಸಂಚಿಕೆ - 26

ಮಕ್ಕಳಿಗೆ ರಜೆಯ ಓದು : ಸಂಚಿಕೆ - 26

ಮಕ್ಕಳಿಗೆ ರಜೆಯ ಓದು
ಸಂಚಿಕೆ - 26
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815

         
                     
ಶಾಲೆಗಳು ಪ್ರಾರಂಭವಾಗಿ ಒಂದೂವರೆ ತಿಂಗಳಾಯಿತು. ಇನ್ನು ಪಠ್ಯದತ್ತ ಗಮನ ಹರಿಸುವ ಸಮಯವಾದರೂ ಮನೋರಂಜನೆ ಹಾಗೂ ಜ್ಞಾನಾರ್ಜನೆಗಾಗಿ ಕಥೆ ಪುಸ್ತಕಗಳನ್ನು ಓದುವುದು ತಪ್ಪಲ್ಲ. ನಿಮ್ಮ ಶಾಲಾ ದಿನಗಳು ಆನಂದದಾಯಕವಾಗಿರಲಿ ಎಂದು ಹಾರೈಸುತ್ತಾ ಈಗ ಹಿರಿಯರಾಗಿರುವ ಬಹಳಷ್ಟು ಮಂದಿಗೆ ಪರಿಚಯವಿರುವ ಸುಮಾರು ಅರ್ಧ ಶತಮಾನದಷ್ಟು ಇತಿಹಾಸವಿರುವ ಮಕ್ಕಳ ಪತ್ರಿಕೆ ‘ಚಂದಮಾಮ’ ಬಗ್ಗೆ ಮಾಹಿತಿ ತಿಳಿಸಲಿರುವೆ. 

ಚಂದಮಾಮ, ಬಾಲಮಿತ್ರ, ಬೊಂಬೆಮನೆ ಇವುಗಳು ೭೦, ೮೦ ಹಾಗೂ ೯೦ರ ದಶಕಗಳಲ್ಲಿ ಎಲ್ಲರ ಮನೆಯಲ್ಲಿ ಇರುತ್ತಿದ್ದ ಮಕ್ಕಳ ಪತ್ರಿಕೆಗಳು. ಈ ಎಲ್ಲಾ ಪತ್ರಿಕೆಗಳ ವಿಶೇಷತೆ ಏನೆಂದರೆ ಇವುಗಳು ಪ್ರಕಟವಾಗುತ್ತಿದ್ದುದು ಕರ್ನಾಟಕದಲ್ಲಿ ಅಲ್ಲ. ನೆರೆ ರಾಜ್ಯ ತಮಿಳುನಾಡಿನ ಮದ್ರಾಸ್ (ಈಗಿನ ಚೆನ್ನೈ) ನಲ್ಲಿ. ಚಂದಮಾಮವು ತಮಿಳು, ತೆಲುಗು, ಆಂಗ್ಲ, ಹಿಂದಿ ಮೊದಲಾದ ಭಾಷೆಗಳಲ್ಲಿ ಹೊರ ಬರುತ್ತಿತ್ತು. ಈಗಿನಂತೆ ಆಧುನಿಕತೆಯ ಮುದ್ರಣ ವ್ಯವಸ್ಥೆಗಳು ಇಲ್ಲದೇ ಹೋದರೂ ಸುಂದರವಾದ ಕೈಯಿಂದ ಬಿಡಿಸಿದ ಚಿತ್ರಗಳು ಮೂಡಿಬರುತ್ತಿದ್ದವು. ಚಂದಮಾಮದಲ್ಲಿ ಪ್ರಕಟವಾಗುತ್ತಿದ್ದ ವಿಕ್ರಮ-ಬೇತಾಳ ಕಥೆಗಳಂತೂ ಎಲ್ಲಾ ಮಕ್ಕಳಿಗೆ ಅಚ್ಚುಮೆಚ್ಚಾಗಿತ್ತು. ತಮ್ಮ ಅದ್ಭುತ ಕಲ್ಪನೆಯಲ್ಲಿ ವಿಕ್ರಮ ಬೇತಾಳ ಕಥಾ ಸರಣಿಯ ಚಿತ್ರಗಳನ್ನು ಬಿಡಿಸುತ್ತಿದ್ದ ಕೆ ಸಿ ಶಿವಶಂಕರನ್ ಕ್ರಮೇಣ ‘ಚಂದಮಾಮ ಶಂಕರ್’ ಎಂದೇ ಜನಪ್ರಿಯರಾಗಿದ್ದರು. 

೧೯೪೭ರಲ್ಲಿ ನಾಗಿರೆಡ್ಡಿ ಹಾಗೂ ಚಕ್ರಪಾಣಿ ಎಂಬವರು ಪ್ರಾರಂಭಿಸಿದ ಚಂದಮಾಮ ಪತ್ರಿಕೆಗೆ ಬಿ ವಿಶ್ವನಾಥ ರೆಡ್ಡಿ ಸಂಪಾದಕರಾಗಿದ್ದರು. ನಂತರದ ದಿನಗಳಲ್ಲಿ ಚಂದಮಾಮದ ಪ್ರಸಾರ ಸಂಖ್ಯೆ ಎರಡು ಲಕ್ಷಕ್ಕೂ ಮೀರಿತ್ತು ಎಂದರೆ ಅಚ್ಚರಿಯಾಗಬಹುದು. ಸುಮಾರು ೬೬ ವರ್ಷಗಳ ಕಾಲ ಪ್ರಕಟಣೆಗೊಂಡ ಚಂದಮಾಮ ೨೦೧೩ರ ಮಾರ್ಚ್ ಸಂಚಿಕೆಯೊಂದಿಗೆ ಪ್ರಕಟಣೆ ಸ್ಥಗಿತಗೊಳಿಸಿತು.
ಈಗ ಹಳೆಯ ಚಂದಮಾಮದ ಸಂಚಿಕೆಗಳು ಸಿಗುತ್ತಿಲ್ಲವಾದರೂ ಅಂದಿನ ಚಂದಮಾಮದಲ್ಲಿ ಪ್ರಕಟವಾದ ಕಥೆಗಳನ್ನು ಸಂಗ್ರಹಿಸಿ ಎಂಟು ಸಂಪುಟಗಳನ್ನಾಗಿ ಹೊರತಂದಿದ್ದಾರೆ. ಇನ್ನೂ ಹೊಸ ಹೊಸ ಸಂಪುಟಗಳು ಹೊರಬರಲಿವೆ ಎನ್ನುತ್ತಿದ್ದಾರೆ ಪ್ರಕಾಶಕರು.  

ಮಕ್ಕಳಿಗೆ, ಹಿರಿಯರಿಗೆ, ಎಲ್ಲರಿಗೂ ಜ್ಞಾನ, ವಿಜ್ಞಾನ, ವಿನೋದವನ್ನು ಕೊಡುವ ಚಂದಮಾಮಾ ಕಥೆಗಳು-೧ ಮತ್ತು ಚಂದಮಾಮಾ ಕಥೆಗಳು-೨ ೧೯೭೦ ಮತ್ತು ೨೦೧೨ರ ನಡುವೆ ಪ್ರಕಟವಾದ ಕಥೆಗಳನ್ನು ಸಂಗ್ರಹಿಸಿ ಚಿತ್ರಗಳೊಂದಿಗೆ ಮತ್ತೆ ಓದುಗರಿಗೆ ಕೊಡುವ ಪ್ರಯತ್ನವನ್ನು ಈ ಪುಸ್ತಕಗಳು ಮಾಡುತ್ತಿವೆ. ಬೆಂಗಳೂರಿನ ಕಾಟನ್‌ಪೇಟೆಯ ಹೇಮಂತ ಸಾಹಿತ್ಯ ಇವುಗಳನ್ನು ಪ್ರಕಟಿಸಿದೆ. ಶಕ್ತಿದಾಸ್ ಅವರು ಚಿತ್ರ ರಚಿಸಿದ್ದಾರೆ. ವಸುಂಧರ ಅವರು ಬರೆದ ತೆಲುಗು ಕಥೆಗಳನ್ನು ಕನ್ನಡಕ್ಕೆ ಡಾ. ರಾಜೇಶ್ವರಿ ಕೆ.ವಿ. ಅವರು ಅನುವಾದಿಸಿಕೊಟ್ಟಿದ್ದಾರೆ.
ಇದೇ ರೀತಿ, ಚಂದಮಾಮಾ ಕಥೆಗಳು-೨ ಮತ್ತು ಚಂದಮಾಮಾ ಕಥೆಗಳು-೩ ಕೂಡ ಅದೇ ಅವಧಿಯ (೧೯೭೦-೨೦೧೨ರ ನಡುವೆ ಪ್ರಕಟವಾದ) ಆಯ್ದ ಕಥೆಗಳ ಸಂಗ್ರಹ ಪುಸ್ತಕ. ಇದು ೨೦೨೨ರಲ್ಲಿ ಮುದ್ರಣ ಕಂಡಿದೆ. ಚಂದಮಾಮಾ ಕಥೆಗಳು-೨ ಈ ಪುಸ್ತಕದಲ್ಲಿ ೪೬ ಕಥೆಗಳಿದ್ದು, ಚಂದಮಾಮಾ ಕಥೆಗಳು-೩ರಲ್ಲಿ ೪೭ ಕಥೆಗಳಿವೆ. ಚಂದಮಾಮಾ ಕಥೆಗಳು-೩ನ್ನು ಸೂರ್ಯವಂಶಿ (ಬಿ. ಪದ್ಮಜ) ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ೨೦೨೩ರ ಜನವರಿಯಲ್ಲಿ ಪ್ರಕಟಗೊಂಡ ಚಂದಮಾಮಾ ಕಥೆಗಳು-೪ ಈ ಪುಸ್ತಕದಲ್ಲಿ ೧೯೭೨ ಮತ್ತು ೧೯೭೯ರ ನಡುವೆ ಪ್ರಕಟವಾದ ೪೫ ಕಥೆಗಳಿವೆ. ಈ ಕಥೆಗಳ ಮೂಲ ಲೇಖಕರು ಸಾವಿರಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಬರೆದವರು ನಾಗೇಶ್ವರ ರಾವ್. ಅವರು ತೆಲುಗಿನಲ್ಲಿ ಬರೆದ ಕಥೆಗಳನ್ನು ಕನ್ನಡಕ್ಕೆ ಡಾ. ರಾಜೇಶ್ವರಿ ಕೆ.ವಿ. ಅವರು ಸುಂದರವಾಗಿ ಅನುವಾದಿಸಿಕೊಟ್ಟಿದ್ದಾರೆ. ಈ ಸರಣಿ ಮುಂದುವರೆದು ಇಲ್ಲಿಯ ತನಕ ೮ ಪುಸ್ತಕಗಳು ಪ್ರಕಟವಾಗಿವೆ.

ಮಕ್ಕಳನ್ನು ಗಮನದಲ್ಲಿಟ್ಟು ಹೇಳುವುದಾದರೆ ಈ ಎಂಟೂ ಪುಸ್ತಕಗಳು ಕೂಡ ಸಂಗ್ರಹ ಯೋಗ್ಯವಾದವು. ಮಕ್ಕಳನ್ನು ಓದಲು ಪ್ರೇರೇಪಿಸುವಂತೆ ಈ ಪುಸ್ತಕಗಳಿದ್ದು, ಹಿರಿಯರು ಇದನ್ನು ಖರೀದಿಸಿ ಮಕ್ಕಳಿಗೆ ಕೊಡುಗೆಯಾಗಿ ನೀಡಿದರೆ ನಮ್ಮತನವನ್ನು ಉಳಿಸಿ ಬೆಳೆಸುವ ನೈತಿಕ ಕಥೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಪ್ರಯತ್ನ ಮುಂದುವರಿದೀತು. ಹಳೆಯ ಪುಸ್ತಕ ಸಂಗ್ರಾಹಕರಲ್ಲಿ ಬಾಲಮಿತ್ರ, ಬೊಂಬೆಮನೆ ಮೊದಲಾದ ಚಂದಮಾಮದ ಜೊತೆ ಹೊರ ಬರುತ್ತಿದ್ದ ಪತ್ರಿಕೆಗಳು ನಿಮಗೆ ಸಿಗಬಹುದು. ಇಂತಹ ಪತ್ರಿಕೆಗಳನ್ನು ನಿಮ್ಮ ಮಕ್ಕಳಿಗೆ ಓದಲು ನೀಡಿ. ಅಂದಿನ ಕಾಲದ ಸಂಸ್ಕೃತಿ, ಪೌರಾಣಿಕ ಕಥೆಗಳು, ವಿಜ್ಞಾನದ ಬೆಳವಣಿಗೆ ಬಗ್ಗೆ ಮಾಹಿತಿ ಸಿಗುತ್ತದೆ.

(ಪೂರಕ ಮಾಹಿತಿ ಸಂಗ್ರಹ ಕೃಪೆ : ಉತ್ಥಾನ ಪತ್ರಿಕೆಯ ಜಾಲತಾಣ)
ಚಿತ್ರ ಕೃಪೆ: ಎಕ್ಸ್ ಖಾತೆ, ಉತ್ಥಾನ ಜಾಲತಾಣಗಳು
..................................... ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************



Ads on article

Advertise in articles 1

advertising articles 2

Advertise under the article