ಜೀವನ ಸಂಭ್ರಮ : ಸಂಚಿಕೆ - 252
Monday, July 20, 2026
Edit
ಜೀವನ ಸಂಭ್ರಮ : ಸಂಚಿಕೆ - 252
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಸಂಸ್ಕಾರದ ಬಗ್ಗೆ ತಿಳಿದುಕೊಳ್ಳೋಣ. ಸಂಸ್ಕಾರ ಎಂದರೇನು?. ಸಾದಾ ಭಾಷೆಯಲ್ಲಿ ಹೇಳುವುದಾದರೆ ತಲೆಯಲ್ಲಿ ತುಂಬಿದ್ದು ಸಂಸ್ಕಾರ. ನೋಡಿ ನೋಡಿ ಏನ್ ನೋಡ್ತೀವಿ ಅದು ತಲೆ ತುಂಬುತ್ತೆ. ಏನನ್ನು ಮತ್ತೆ ಮತ್ತೆ ಮಾಡುತ್ತೀವಿ ಅದು ತಲೆ ತುಂಬತ್ತದೆ. ತಲೆ ತುಂಬಿದ್ದು ಪರಿಣಾಮ ಉಂಟುಮಾಡುತ್ತದೆ. ಅದಕ್ಕೆ ವ್ಯಕ್ತಿತ್ವ ಎನ್ನುವರು.
ಉದಾಹರಣೆಗೆ ನಾನು ಕಳ್ಳತನ ಮಾಡುತ್ತಿದ್ದರೆ ನನ್ನ ವ್ಯಕ್ತಿತ್ವ ಕಳ್ಳತನ. ನಾನು ಕೊಡುತ್ತಾ ಹೋದರೆ ದಾನಿ. ವ್ಯಕ್ತಿತ್ವ ನಿರ್ಮಾಣ ಮಾಡುತ್ತಾ ಹೋಗುತ್ತದೆ. ಅನುಭವಿಸುತ್ತಾ ಹೋಗುವುದರಿಂದ ವ್ಯಕ್ತಿತ್ವ ಆಗುತ್ತದೆ. ಮಾಡಿದ್ದು, ನೋಡಿದ್ದು, ಕೇಳಿದ್ದು, ತಿಂದಿದ್ದು ಮತ್ತು ಮೂಸಿದ್ದರ ಪರಿಣಾಮ ಒಳಗೆ ಉಳಿಯುತ್ತದೆ. ಉಳಿದಿದ್ದು ಪ್ರಭಾವ ಆಯ್ತು ಅಂದರೆ ಅದು ನಮ್ಮ ಮೇಲೆ ಆಕ್ರಮಣ ಮಾಡುತ್ತದೆ. ಮೊದಲು ರೂಡಿಸುತ್ತೇವೆ. ಆ ರೂಡಿಸುವುದೇ ಸಂಸ್ಕಾರವಾಗುತ್ತದೆ. ಮಾಡಿ ಮಾಡಿ, ನೋಡಿ ನೋಡಿ, ಕೇಳಿ ಕೇಳಿ ಸಂಸ್ಕಾರ ತಯಾರಾಗುತ್ತದೆ. ಕೆಟ್ಟದ್ದನ್ನು ಮತ್ತೆ ಮತ್ತೆ ಮಾಡಿದರೆ ಕೆಟ್ಟ ಸಂಸ್ಕಾರ, ಒಳ್ಳೆಯದನ್ನು ಮತ್ತೆ ಮತ್ತೆ ಮಾಡಿದರೆ ಒಳ್ಳೆಯ ಸಂಸ್ಕಾರ ತಯಾರಾಗುತ್ತದೆ. ಹೀಗೆ ಮಾಡಿ ಮಾಡಿ ಅನೇಕ ಸಂಸ್ಕಾರಗಳು ತಯಾರಾಗುತ್ತದೆ. ಅವುಗಳಲ್ಲಿ ಕೆಟ್ಟ ಸಂಸ್ಕಾರಗಳನ್ನು ತೆಗಿಯಬೇಕಾಗುತ್ತದೆ. ಅದು ಬಹಳ ಕಠಿಣ. ಆ ಕೆಟ್ಟ ಸಂಸ್ಕಾರ ತೆಗೆಯಬೇಕಾದರೆ ಆ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಆ ಕೆಲಸ ಮಾಡುತ್ತಾ ಸಂಸ್ಕಾರ ತೆಗೆಯಲು ಆಗುವುದಿಲ್ಲ. ಆ ಸಂಸ್ಕಾರ ತೆಗೆಯಲೇ ಬೇಕಾದರೆ ಆ ಕೆಲಸ ಮೊದಲು ನಿಲ್ಲಿಸಬೇಕು. ಅದರ ಜೊತೆಗೆ ವಿರೋಧಿ ಸಂಸ್ಕಾರ ಹಚ್ಚಬೇಕು. ವಿರೋಧಿ ಸಂಸ್ಕಾರ ಹಚ್ಚದೆ ಹಳೆ ಸಂಸ್ಕಾರ ಬಿಡಲು ಆಗುವುದಿಲ್ಲ.
ಉದಾಹರಣೆಗೆ ಮಗು ಗೊಂಬೆ ಹಿಡಿದಿದೆ ಎಂದು ಭಾವಿಸಿ. ಗೊಂಬೆ ಬಿಡು ಅಂದರೆ ಬಿಡುವುದಿಲ್ಲ. ಒತ್ತಾಯ ಮಾಡಿದರೆ ಅಳುತ್ತದೆ. ಆ ಗೊಂಬೆ ಗಿಂತ ಹೆಚ್ಚು ಆಕರ್ಷಕವಾದುದನ್ನು ಕೊಟ್ಟರೆ ಗೊಂಬೆ ಬಿಡುತ್ತದೆ. ಕುತೂಹಲಕ್ಕಾಗಿ ಅದನ್ನು ಹಿಡಿದು ಗೊಂಬೆ ಬಿಡುತ್ತದೆ. ಹೊಸ ಸಂಸ್ಕಾರ ಕೊಟ್ಟಾಗ ಹಳೆ ಸಂಸ್ಕಾರ ತಾನಾಗೆ ಹೋಗುತ್ತದೆ. ಕಷ್ಟಪಡಬೇಕಾದ ಪ್ರಮೇಯವಿಲ್ಲ. ನಾವು ಬೇರೆ ಏನು ಕೊಡದೆ ಬಿಡು ಬಿಡು ಅಂದರೆ ಬಿಡುವುದಿಲ್ಲ. ಮನಸ್ಸು ಒಲ್ಲೆ ಅನ್ನುತ್ತದೆ. ಮನಸ್ಸು ಕಷ್ಟ ಪಡುತ್ತದೆ. ಹೊಸದು ಕೊಡಬೇಕು. ಸಕ್ಕರೆ ಬಿಡಿಸಬೇಕಾದರೆ ಸಕ್ಕರೆಯಂತೆ ಇರುವ ಬೇರೊಂದು ಸಕ್ಕರೆ ಇಲ್ಲದ್ದು ಕೊಡಬೇಕು. ಪ್ರಪಂಚದ ಒತ್ತಡ, ಚಿಂತೆ ಚಟಗಳನ್ನು ಬಿಡಿಸಬೇಕಾದರೆ ಬೇರೆಯದನ್ನು ಹಚ್ಚಬೇಕು. ಕೈ ಹೊಲಸಾಗುತ್ತಿತ್ತು ಅಂದರೆ ಕೈ ಹೊಲಸಾಗದ ಕೆಲಸದಲ್ಲಿ ತೊಡಗಿಸಬೇಕು. ಬೈಯುತ್ತಿರುವ ವ್ಯಕ್ತಿ ಬೈಗುಳ ಬಿಡಿಸಬೇಕಾದರೆ ಒಳ್ಳೆಯ ಶಬ್ದ ಬಳಸಲು ಕಲಿಸಬೇಕು. "ಮಾತು ಬೆಳ್ಳಿ ಮೌನ ಬಂಗಾರ". ಇದರ ಅರ್ಥ ಮಾತು ಬಂಗಾರವೆ. ಮಾತು ಬರದಿದ್ದರೆ ಮೌನ ಬಂಗಾರ. ಮಾತು ಜಗಳ ತರುತ್ತಿತ್ತು ಅಂದಾಗ ಮೌನ ಬಂಗಾರ. ಮಾತು ಭಾವನೆಗಳನ್ನು ವ್ಯಕ್ತ ಮಾಡುವ ಸಾಧನ. ಮಾತೇ ಇಲ್ಲದಿದ್ದರೆ ಜ್ಞಾನ ಹೇಗಾಗುತ್ತದೆ?. ಪ್ರತಿಕ್ಷಣ ಮಾತನಾಡುತ್ತಿದ್ದರೆ ಮನಸ್ಸು ಸಮಾಧಾನ ಇರುತ್ತದೆ. ಮಾತು ಬಂಗಾರ ಬಂದರೆ. ಮಾತು ಬರದಿದ್ದರೆ ಮೌನ ಬಂಗಾರ. ಮಾತು ಬರೋದು ಅಂದರೆ ಮಾತನಾಡಿದರೆ ಯಾರ ಮನಸ್ಸು ನೋಯದೆ ಮನಸ್ಸು ವಿಸ್ತಾರ ಆಗಬೇಕು.
ಒಂದು ಉದಾಹರಣೆ... ಹಿಂದೆ ವಾಲ್ಮೀಕಿ ಇದ್ದ. ಆತ ಮೊದಲು ಕೊಲೆಗಾರನಾಗಿದ್ದನು. ಎಷ್ಟು ಕೊಲೆ ಮಾಡಿದ್ದ ಅನ್ನೋ ನೆನಪಿಲ್ಲದಷ್ಟು ಕೊಲೆ ಮಾಡಿದ್ದನು. ಈಗಿನ ಕಾಲದಲ್ಲಾದರೆ ಒಂದು ಕೊಲೆಯಾದರೆ ಜೈಲು ಶಿಕ್ಷೆ ಅನುಭವಿಸಬೇಕು. ಆತ ಜೈಲಿಗೆ ಹೋಗದೆ ಕೊಲೆ ಮಾಡಿದ್ದನು. ಆಗಿನ ಕಾಲದಲ್ಲಿ ಈಗಿನಂತೆ ಕಾನೂನು ಜೈಲು ಇರಲಿಲ್ಲ. ಕೊಲೆ ಮಾಡುವ ವ್ಯಕ್ತಿಯ ಮನಸ್ಸಿನಲ್ಲಿ ಕೊಲೆ ಬಿಟ್ಟು ಬೇರೇನು ಇರಲಿಲ್ಲ. ಕೊಲೆಯೆ ಆತನ ಸಂಸ್ಕಾರ ಆಗಿತ್ತು. ನೋವು, ಚೀರಾಟ ಮತ್ತು ರಕ್ತ ಇವು ಬಿಟ್ಟರೆ ಬೇರೇನು ಗೊತ್ತಿರಲಿಲ್ಲ. ಇಷ್ಟೆಲ್ಲ ಭಯಂಕರ ಸಂಸ್ಕಾರ ಆಗಿದ್ದರು, ಒಬ್ಬನ ಕೈಯಾಗಿ ಸಿಕ್ಕಿದ. ಆತ ಕೈಯಲ್ಲಿ ತಂಬೂರಿ, ತಾಳ ಹಿಡಿದು ಹಾಡಿಕೊಂಡು ಹೊರಟಿದ್ದನು. ಆತ ಬೇರೆ ಯಾರು ಅಲ್ಲ ನಾರದ ಮಹರ್ಷಿ. ವಾಲ್ಮೀಕಿ ಕೈಯಲ್ಲಿ ಮಚ್ಚು ದೊಣ್ಣೆ ಹಿಡಿದುಕೊಂಡು ಆತನ ಹಿಂದೆ ಓಡಿಕೊಂಡು ಬರುತ್ತಿದ್ದ. ನಾರದ ಮಹರ್ಷಿ ಹಾಡಿಕೊಂಡು ಹೊರಟಿದ್ದನು. ವಾಲ್ಮೀಕಿ ಕಂಡವರು ಚೀರಿಕೊಂಡು ಓಡುತ್ತಿದ್ದರು. ಆದರೆ ನಾರದ ಹಾಡಿಕೊಂಡು ಹೊರಟಿದ್ದನು. ಆ ಹಾಡಿನ ಶಬ್ದ ವಾಲ್ಮೀಕಿ ಕಿವಿಯ ಮೇಲೆ ಬಿತ್ತು. ಆ ಹಾಡನ್ನು ಕೇಳಬೇಕು ಅಂತ ಅನಿಸಿತು. ವಾಲ್ಮೀಕಿ ನಿಂತ ಕೈಯಲ್ಲಿದ್ದ ಮಚ್ಚು ಮತ್ತು ದೊಣ್ಣೆ ಕೆಳಗೆ ಬಿತ್ತು. ಹಾಡು ಕೇಳಿ ಹಳೆಯ ವಾಲ್ಮೀಕಿ ಯು ಮನಸ್ಸು ಸತ್ತಿತ್ತು. ಅಂದರೆ ಕೊಲೆ ಮಾಡುವ ತನ ಸತ್ತಿತ್ತು. ಯಾವ ವಾಲ್ಮೀಕಿಯ ಮನಸ್ಸಿನಲ್ಲಿ ರಕ್ತ, ಸಾವು ಮತ್ತು ನೋವು ತೊಳಲಾಟ ತುಂಬಿತ್ತೊ ಆ ಮನಸ್ಸು ಈಗ ಮುಗ್ದವಾಗಿತ್ತು. ಸಂಗೀತದಲ್ಲಿ ಎರಡು ಪ್ರಕಾರ. ಒಂದು ಮಲಗಿಸುವ ಸಂಗೀತ. ಇನ್ನೊಂದು ಮನಸ್ಸನ್ನು ಉದ್ರಿಕ್ತಗೊಳಿಸುವ ಸಂಗೀತ. ವಾಲ್ಮೀಕಿ ನಿಂತು ಕೇಳಿದ. ಆನಂದ ಅನಿಸಿತ್ತು. ಇಷ್ಟು ವರ್ಷ ಹೊಡೆದರೂ, ಕೊಂದರು ಆಗದ ಆನಂದ. ಏನಿದು ಅಂತ ಅಂದ. ನಾರದ ಮಹರ್ಷಿ ಸಮೀಪಕ್ಕೆ ಹೋದನು. ಋಷಿ ಹಾಡುತ್ತಲೇ ಇದ್ದ. ಈ ಮನುಷ್ಯ ಎಷ್ಟು ಆನಂದವಾಗಿದ್ದಾನೆ. ನಾನ್ಯಾಕೆ ಆಗಬಾರದು ಅಂದ. ಆ ಕ್ಷಣದಲ್ಲಿ ಹಳೆ ಸಂಸ್ಕಾರ ಹೋಗಿತ್ತು.
ಈ ಸಂಸ್ಕಾರ ಪ್ರಬಲವಾಗಿತ್ತು. ಋಷಿಯನ್ನು ನೋಡಿದ ಎಷ್ಟು ಪ್ರಸನ್ನತೆ!. ಇದನ್ನು ಎಂದು ಕಂಡಿರಲಿಲ್ಲ. ಈ ಪ್ರಸನ್ನತೆ ಕಂಡಾಗ ಮನಸ್ಸಿಗೆ ಶಾಂತಿ ಅನಿಸಿತ್ತು. ಆಗ ಋಷಿಯನ್ನು ಕೇಳಿದ. ನಾನು ನಿನ್ನ ಹಾಗೆ ಪ್ರಸನ್ನವಾಗಿರಬೇಕು. ಆನಂದವಾಗಿರಬೇಕು. ಏನು ಮಾಡಲಿ ಅಂದನು. ಆಗ ನಾರದ ಋಷಿ ಹೇಳಿದ ಹಾಡಿಕೊಳ್ಳುತ್ತಾ ಇರು ಎಂದ. ಏನಂತ ಹಾಡಬೇಕೆಂದು ವಾಲ್ಮೀಕಿ ಕೇಳಿದ. ರಾಮ ರಾಮ ಅಂತ ಹಾಡಿಕೊಳ್ಳುತ್ತಿರು ಅಂದ. ರಾಮ ಎಂದರೆ ಸುಂದರ ಎಂದರ್ಥ. ಸಂಗೀತ ವಾಲ್ಮೀಕಿ ತಲೆಯಿಂದ ಹೋಗಲೇ ಇಲ್ಲ. ಮುಖದ ಮೇಲೆ ಪ್ರಸನ್ನತೆ ಅರಳಿತ್ತು. ಹಳೆ ಸಂಸ್ಕಾರ ಹೋಗಿ ಹೊಸ ಸಂಸ್ಕಾರ ಬಂದಿತ್ತು, ಮಹಾಕವಿಯಾಗಿದ್ದನು.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************