-->
ಜೀವನ ಸಂಭ್ರಮ : ಸಂಚಿಕೆ - 249

ಜೀವನ ಸಂಭ್ರಮ : ಸಂಚಿಕೆ - 249

ಜೀವನ ಸಂಭ್ರಮ : ಸಂಚಿಕೆ - 249
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                    

ಮಕ್ಕಳೇ, ಇಂದು ಶಾಂತಿ ಮಾರ್ಗದ ಬಗ್ಗೆ ತಿಳಿದುಕೊಳ್ಳೋಣ. ಶಾಂತಿ ಮಾರ್ಗ ಯಾವುದೆಂದರೆ ಮುಳುಗುವುದು. ಬದುಕಿನಲ್ಲಿ ಪ್ರಶಾಂತಿ ಸಾಧಿಸಬೇಕಾದರೆ, ಮನುಷ್ಯ ಮುಳುಗಬೇಕು. ಆಳವಾಗಿ ಮುಳುಗಬೇಕು. ಒಂದು ಕ್ರಿಯೆಯಲ್ಲಿ ಮುಳುಗಬಹುದು. ಒಂದು ವಸ್ತುವಿನಲ್ಲಿ ಮುಳುಗಬಹುದು. ಒಂದು ವಿಚಾರದಲ್ಲಿ ಮುಳುಗಬಹುದು. ಮುಳುಗುವ ಕೆಲಸ ಮಹತ್ವದ್ದು. ತನ್ಮಯತೆ ಮುಖ್ಯ. ತನ್ಮಯ ಆದಾಗ, ಮನಸ್ಸು ಮುಳುಗಿದಾಗ ಎರಡು ಸಂಗತಿಗಳು ಉಂಟಾಗುತ್ತವೆ.

1. ಮನಸ್ಸು ವಸ್ತುವಿನಲ್ಲಿ ಮುಳುಗಿದಾಗ ಒಂದು ಬಗೆಯ ಸಂತೋಷ ಉಂಟಾಗುತ್ತದೆ. ಆ ಸಂತೋಷ 
ಐಂದ್ರಿಯಕ ಸಂತೋಷವಲ್ಲ, ಅತಿಂದ್ರೀಯ ಸಂತೋಷ ಉಂಟಾಗುತ್ತದೆ. ವಿಶೇಷ ಆನಂದ ಉಂಟಾಗುತ್ತದೆ. ಅದಕ್ಕೆ ಸಮಾಧಿಸ್ತ ಆನಂದ ಎನ್ನುವರು. ಮನಸ್ಸು ಮುಳುಗಿದಾಗ ಅದು ಆಗುತ್ತದೆ.

2. ವಸ್ತುವಿನ ಸಮಗ್ರ ದರ್ಶನ, ಸ್ವರೂಪ ದರ್ಶನ ಉಂಟಾಗುತ್ತದೆ. ಇವೆರಡೂ ಸಮಾಧಿಫಲಗಳು. ಆದ್ದರಿಂದ ಜಗತ್ತನ್ನು ತಿಳಿದುಕೊಳ್ಳಬೇಕೆಂದರೂ ಸಮಾಧಿಸ್ತ ಆಗಬೇಕು. ಮುಳುಗಬೇಕು. ಯಾವುದೇ ಇರಲಿ ಮನಸು ಮುಳುಗಬೇಕು. ಒಬ್ಬ ವಿಜ್ಞಾನಿ ಏನದೆ ಅಂತ ತಿಳಿಯಬೇಕೆಂದು ಹೊರಟರೆ ಅದರಲ್ಲಿ ಮುಳುಗಬೇಕು. ಎಲ್ಲಾ ಮರೆತು ಅದರಲ್ಲಿ ಮಗ್ನನಾಗುತ್ತಾನೆ. ಉದಾಹರಣೆಗೆ ನಾವು ಟಿವಿ ಮುಂದೆ ಕುಳಿತಿರುತ್ತೇವೆ. ಊಟದ ತಟ್ಟೆ ಮುಂದಿರುತ್ತದೆ. ಹುಡುಗರು, ಮನೆಯವರು, ಎಲ್ಲರೂ ಕುಳಿತಿರುತ್ತಾರೆ. ಕಥೆ ಅಷ್ಟು ಅದ್ಭುತವಾಗಿರುತ್ತದೆ. ಎಲ್ಲರೂ ತನ್ಮಯರಾಗಿರುತ್ತಾರೆ. ಆ ಚಿತ್ರದಲ್ಲಿ ಮುಳುಗಿರುತ್ತಾರೆ. ಎಷ್ಟು ಮುಳುಗಿರುತ್ತಾರೆ? ಅಂದರೆ ಏನು ತಿಂದಿದ್ದಾರೆ ಗೊತ್ತಿಲ್ಲ. ಎಷ್ಟು ತಿಂದಿದ್ದಾರೆ ಗೊತ್ತಿಲ್ಲ?. ಮುಂಬೈನಲ್ಲಿ ಒಂದು ಘಟನೆ ನಡೆಯಿತು. ಬಾಗಿಲು ಅರ್ಧ ಮುಚ್ಚಿದೆ. ಮನೆ ಮಂದಿ ಎಲ್ಲ ಟಿವಿ ನೋಡುವುದರಲ್ಲಿ ಮಗ್ನರಾಗಿದ್ದರು. ಒಬ್ಬ ಕಳ್ಳ ಬಂದು ಬಾಗಿಲು ತೆಗೆದ. ಮನೆ ಮಂದಿಗೆ ಗೊತ್ತಿಲ್ಲ. ಒಳಗೆ ಬಂದ. ಇವರಿಗೆ ಗೊತ್ತಾಗಲಿಲ್ಲ. ತಿಜೋರಿ ತೆಗೆದು ಎಲ್ಲಾ ಆಭರಣ ತೆಗೆದುಕೊಂಡು ಹೊರಗೆ ಹೋದನು. ಯಾರು ಮಲಗಿಲ್ಲ. ಎದ್ದಿಲ್ಲ. ಎಲ್ಲಾ ಮುಳುಗಿದ್ದಾರೆ. ಮುಳುಗಿದಾಗ ಏನು ಕಾಣಿಸುವುದಿಲ್ಲ. ಸಂಪತ್ತು ಕಾಣುವುದಿಲ್ಲ. ರುಚಿ ಗೊತ್ತಾಗುವುದಿಲ್ಲ. ಏನೇನು ಗೊತ್ತಾಗುವುದಿಲ್ಲ. ಅದಕ್ಕೆ ಸಮಾಧಿ ಆವಸ್ಥೆ ಎನ್ನುವರು. ಅವರ ಸಮಾಧಿ ಯಾವುದರಲ್ಲಾಗಿತ್ತು? ಅಂದರೆ ಯಾವುದರಲ್ಲಿ ಸಮಾಧಿ ಆದರೆ ಸಂಪತ್ತು ಹೋಗುತ್ತದೊ ಅದರಲ್ಲಿ ಸಮಾಧಿಯಾಗಿದ್ದರು. ಅಷ್ಟು ತನ್ಮಯ. ಅಷ್ಟು ತನ್ಮಯಾಗಬೇಕು ಮಗ್ನ ಆಗಬೇಕು. ಇಲ್ಲದೇ ಇದ್ದರೆ ಯಾವುದನ್ನು ಅನುಭವಿಸಲು ಆಗುವುದಿಲ್ಲ. ಯಾವುದರಲ್ಲಿ ತನ್ಮಯ ಆದರೆ ಮನಸ್ಸು ವಿಕೆಸಿತವಾಗುತ್ತದೆಯೋ ?
ಆನಂದ ತುಂಬುತ್ತದೆಯೊ?, ಶಾಂತಿ ಸಮಾಧಾನ ಉಂಟಾಗುತ್ತದೆಯೋ? ಅದರಲ್ಲಿ ತನ್ಮಯ ಆಗಬೇಕು. ಆಗ ವಸ್ತುಗಳ ತಮ್ಮ ರಹಸ್ಯ ಹೊರಹೊಮ್ಮುತ್ತವೆ. ಜಗತ್ತು ರಹಸ್ಯ ಹೊರ ಹಾಕುತ್ತದೆ. 

ಇಮ್ಯಾನುವಲ್ ಕ್ಯಾಂಟ್ ಜರ್ಮನ್ ದೇಶದ ದೊಡ್ಡ ತತ್ವಜ್ಞಾನಿ. ಸಣ್ಣವನಿದ್ದಾಗ ಜಗತ್ತಿನ ಮೂಲ ಸ್ವರೂಪ ತಿಳಿಯಲು, ಆಲೋಚಿಸಲು ಪ್ರಾರಂಭ ಮಾಡಿದನು. 80 ವರ್ಷ ಬಾಳಿದ. ಗೆಳೆಯರು ಒಮ್ಮೆ ಕೇಳಿದರು. ಮಹಾನುಭಾವರೇ ನಿಮಗೆ 80ರ ವಯಸ್ಸು ನೀವು ಲಗ್ನ ಏಕೆ ಆಗಲಿಲ್ಲ?. ಎಂದರು. ಇಮ್ಯಾನುವಲ್ ಕ್ಯಾಂಟ್ ಹೇಳಿದ ಮರೆತೇ ಹೋಯ್ತು ಎಂದನು. ಆವಾಗ ನೆನಪು ಮಾಡಿದ್ರೆ ಲಗ್ನ ಆಗುತ್ತಿದ್ದೆ ಎಂದನು. ಒಂದು ತಾಸು ಮರೆಯುವುದಲ್ಲ. ಎರಡು ತಾಸು ಮರೆಯುವುದಲ್ಲ. ಹೆಣ್ಣು ಕೊಡಲಿಲ್ಲ ಅಂತ ಅಲ್ಲ. 80 ವರ್ಷ ಮರೆತಿದ್ದ ಅಂದರೆ ತತ್ವ ಜ್ಞಾನದಲ್ಲಿ ಮುಳುಗಿದ್ದನು. ಆಗ ಜಗತ್ತು ರಹಸ್ಯ ಬಿಟ್ಟು ಕೊಡುತ್ತದೆ. ನಾವೆಲ್ಲರೂ ಸಮಾದಸ್ತರೇ. ನಮಗೆ ಬೇರೆ ದರ್ಶನ, ಅವರಿಗೆ ಬೇರೆ ದರ್ಶನವಾಗುತ್ತದೆ.

ಪತಂಜಲ ಮಹರ್ಷಿ ಹೇಳುವುದು ತನ್ಮಯ ಆಗುವುದು ಮಹತ್ವ. ಅನುಭವಿಸಲು ತನ್ಮಯನಾಗು, ಜ್ಞಾನ ಮಾಡಿಕೊಳ್ಳಲು ತನ್ಮಯನಾಗು, ಶಾಂತಿ ಸಮಾಧಾನ ಪಡೆಯಲು ತನ್ಮಯನಾಗು ಎಂದನು. ಏನನ್ನು ತಿಳಿದುಕೊಳ್ಳಬೇಕು ಅಂತ ತೀರ್ಮಾನ ಮಾಡಿದ್ದೀಯಾ? ಅದರಲ್ಲಿ ತನ್ಮಯ ಆಗು. ತನ್ಮಯ ಆದಾಗ ಅದರ ರಹಸ್ಯ ಮೈ ಬಿಚ್ಚುತ್ತೆ. ರಹಸ್ಯ ಗೊತ್ತಾಗುತ್ತದೆ. ಬರೀ ಕಣ್ಣು ಆಡಿಸಿದರೆ ಕಾಣುವುದಿಲ್ಲ. ಸೂಕ್ಷ್ಮವಾಗಿ ನೋಡಿಕೊಳ್ಳುತ್ತಾ ಹೋಗಬೇಕು. 

ಐದಾರು ಸಾವಿರ ವರ್ಷಗಳಿಂದ ವಸ್ತುಗಳನ್ನು ನೋಡಿಕೊಳ್ಳುತ್ತಾ, ನೋಡಿಕೊಳ್ಳುತ್ತಾ ಯಾವ ಸ್ಥಿತಿಗೆ ಬಂದಿದ್ದೀವಿ ಎಂದರೆ ಅತ್ಯಂತ ಸೂಕ್ಷ್ಮ ಕಣಗಳು ಅದನ್ನು ಹಿಡಿಯಲು ಆಗುವುದಿಲ್ಲ. ನೋಡಲು ಆಗುವುದಿಲ್ಲ. ಅಷ್ಟು ಸೂಕ್ಷ್ಮ ಗುಣಗಳೇ. ಅವೇ ವಸ್ತುಗಳ ಮೂಲ ಘಟಕಗಳು. ಎಷ್ಟು ಸೂಕ್ಷ್ಮ ಅಂದರೆ ಕಲ್ಪನೆ ಮಾಡುವುದಕ್ಕೆ ಆಗುವುದಿಲ್ಲ. ಅಣು, ಪರಮಾಣು. ಪರಮಾಣುವಿನ ಮೂಲ ಘಟಕಗಳು ಮತ್ತೆ ಅವುಗಳನ್ನು ವಿಭಜಿಸುವುದು. ಇವೆಲ್ಲ ಸಂಶೋಧನೆ. ಮನುಷ್ಯ ಬುದ್ಧಿಯನ್ನು ಅಷ್ಟು ತನ್ಮಯತೆಯಿಂದ ಬಳಸುತ್ತಿದ್ದಾನೆ. ಉದಾಹರಣೆಗೆ ಊಟ ಮಾಡುತ್ತೇವೆ ಅಂತ ಇಟ್ಟುಕೊಳ್ಳಿ. ಅದು ಸಾಮಾನ್ಯ ಅನುಭವವಲ್ಲ. ಊಟ ಒಂದು ಪೂಜೆ ಇದ್ದಂತೆ. ಅದು ಪ್ರಸಾದ. ಇದು ಸಂತೋಷಪಡುವ ಕ್ರಿಯೆ. ನೀರು ಕುಡಿಯುವಾಗ, ಅನ್ನ ಊಟ ಮಾಡುವಾಗ, ಹಾಲನ್ನು ಸವಿಯುವಾಗ, ಪದಾರ್ಥ ಆಗಿಯುವಾಗ ಮುಳುಗಿದ್ದರೆ ಅದ್ಭುತ ಆನಂದ ಉಂಟಾಗುತ್ತದೆ. ವಸ್ತು ಮಹತ್ವದಲ್ಲ ಮುಳುಗುವುದು ಮಹತ್ವ. ತಾಯಿ ಶ್ರಮಪಟ್ಟು ಅಡುಗೆ ಮಾಡಿರುತ್ತಾಳೆ. ನಾವು ಪೇಪರ್ ಓದುತ್ತಾ ತಿಂದರೆ ಅದರ ಸಂತೋಷ ಎಲ್ಲಿ. ಎಲ್ಲಿ ಮುಳುಗಿದರೆ ಸಂತೋಷವಾಗುತ್ತದೆ. ಕುಳಿತಲ್ಲಿ, ನಿಂತಲ್ಲಿ, ಮಾತು ಕೇಳುವಿಕೆಯಲ್ಲಿ ಅನುಭವ ಮಾಡಬೇಕಾದರೆ ಮುಳುಗಬೇಕು. 

ಉದಾಹರಣೆಗೆ ಒಂದು ಕಥೆ, ಒಮ್ಮೆ ಒಂದು ಸಂಜೆ ವೇಳೆ ಭೃಂಗ ಹಾರಿ ಬಂತು. ಅಲ್ಲಿ ಸರೋವರ ಇತ್ತು. ಆ ಸರೋವರದಲ್ಲಿ ಒಂದು ಕಮಲ ಅರಳಿತ್ತು. ಕಮಲದ ವಾಸನೆ ಸೂಕ್ಷ್ಮವಾಗಿ ಎಲ್ಲಾ ಕಡೆ ಹರಡಿತ್ತು. ಬಹಳ ದೂರದಿಂದ ಬೃಂಗ ಬಂದಿತ್ತು. ಅಲ್ಲಿ ಕವಿ ಕುಳಿತಿದ್ದನು. ಭೃಂಗ ಕಮಲದ ಮೇಲೆ ಕುಳಿತುಕೊಂಡಿತು. ಸೂರ್ಯ ಮುಳುಗುತ್ತಿದ್ದ, ಆಗ ಕಮಲದ ದಳ ಮುಚ್ಚಿಕೊಂಡಿತು ಒಳಗೆ ಭೃಂಗ ಇತ್ತು. ಇದನ್ನು ನೋಡಿದ ಕವಿ ಹೇಳಿದ ಭೃಂಗಕ್ಕೆ ಹೂ ದಳ ಮುಚ್ಚಿದೆ. ನೀನು ಇದರಿಂದ ಪಾರಾಗುವುದು ಸಾಧ್ಯವಿಲ್ಲ ನೀನು ಸಾಯುತ್ತೀಯ ಎಂದನು. ಆಗ ಭೃಂಗ ಹೇಳಿದ್ದು ಸಾವು ಯಾವುದಕ್ಕೆ?. ಈಗ ಭೃಂಗ ಅನ್ನೋದೇ ಇಲ್ಲ ಭೃಂಗವೆಲ್ಲ ಹೂವಾಗಿದೆ. ಭೃಂಗಕ್ಕೆ ಭೃಂಗ ಅನ್ನೋದು ಮರೆತು ಹೋಗಿದೆ. ಈಗಿರೋದು ಬರೀ ಹೂ. ಬರಿ ಮಕರಂದ. ಬರಿಸುಗಂಧ. ಅಷ್ಟು ತನ್ಮಯ. ಅಷ್ಟೊಂದು ಮಗ್ನ. ಹೂ ಮಕರಂದ ಕುಡಿಯುವಾಗ ಭೃಂಗ ತನ್ನನ್ನು ಮರೆತಿದೆ. ಎಷ್ಟು ಮರೆತಿದೆ ಎಂದರೆ ಮಕರಂದವೇ ತಾನಾಗಿದೆ, ತಾನೇ ಮಕರಂದವಾಗಿದೆ. ಭೃಂಗಕ್ಕೆ ಸಾವಿರಬಹುದು ಮಕರಂದಕ್ಕೆ ಸಾವಿಲ್ಲ. ತಾನು ಮಕರಂದವಾದ್ದರಿಂದ ಸಾವಿನ ಭಯವಿಲ್ಲ. ಅದು ತನ್ಮಯತೆ. ಹಾಗೆ ಮಕ್ಕಳೆ ಜ್ಞಾನ ಪಡೆಯಲು, ಅನುಭವಿಸಲು, ಶಾಂತಿಪಡೆಯುವ ಸುಲಭ ಮಾರ್ಗ ತನ್ಮಯತೆ, ಮಗ್ನತೆ... ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************



Ads on article

Advertise in articles 1

advertising articles 2

Advertise under the article