-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 156

ನಿಷ್ಪಾಪಿ ಸಸ್ಯಗಳು : ಸಂಚಿಕೆ - 156

ನಿಷ್ಪಾಪಿ ಸಸ್ಯಗಳು : ಸಂಚಿಕೆ - 156
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

    
ಪ್ರೀತಿಯ ಮಕ್ಕಳೇ ಹೇಗಿದ್ದೀರಿ..? ಮಳೆರಾಯನ ಆರ್ಭಟಕ್ಕೆ ಸೊಕ್ಕಿನ ಗಾಳಿಯೂ ಸೇರಿಕೊಂಡು ಅಲ್ಲಲ್ಲಿ ಮರಗಳನ್ನು ಉರುಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದಷ್ಟು ಹೊತ್ತು ಜನಜೀವನ ಅಸ್ತವ್ಯಸ್ತವಾಗಿ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಮಾರ್ಗದ ಬದಿಯ ಆಲದಮರಗಳು ಉರುಳುವುದೆ ಹೆಚ್ಚು! ಯಾಕೆ ಗೊತ್ತಾ? ಆಲದ ಮರದ ಬೇರುಗಳು ಭೂಮಿಯ ಮೇಲ್ಭಾಗದಲ್ಲಿ ಹರಡಿಕೊಂಡಿರುವುದೆ ಹೆಚ್ಚು! ಆದ್ದರಿಂದ ಗಾಳಿ ಮಳೆಗೆ ಯಾವುದೇ ಮರದಡಿ ನಿಲ್ಲಲೇ ಬಾರದು ಅಲ್ವಾ..?

ಮಕ್ಕಳೇ, ನೀವು ಆಲದ ಮರ‌ ನೋಡಿದ್ದೀರಿ, ಹಳ್ಳಿಗಳ ಶ್ವಾಸಕೋಶವೆಂದೇ ಕರೆಯಲ್ಪಡುವ ಅಶ್ವತ್ಥ ಮರ ನೋಡಿರಬಹುದು... ಆದರೆ ಅಶ್ವತ್ಥ ಮರದ ಎಲೆಯಂತೆ ಎಲೆ ಇರುವ, ಬೇರೆ ಸಣ್ಣ ಮರವನ್ನು ಎಲ್ಲಾದರೂ ನೋಡಿದ್ದೀರಾ? ಕೆಲವರು ನೋಡಿರಬಹುದು.. ಅದು ನಾನೇ!. ನನ್ನ ಹೆಸರನ್ನು ಮೊದಲೇ‌ ಹೇಳಿ ಬಿಡುತ್ತೇನೆ. ನಾನು ಕಲ್ಲು ಅಶ್ವತ್ಥ!. 
ಕಲ್ಲು ಎಂದಾಕ್ಷಣ ನನ್ನ ಮೇಲೆಲ್ಲೂ ಕಲ್ಲುಗಳಿಲ್ಲ. ನನಗೆ ಕಲ್ಲು ಬಂಡೆಗಳೆಂದರೆ‌ ಬಹಳ ಇಷ್ಟ. ನಿಮಗೆ ಕಠಿಣವೆಂದು ಕಾಣಬಹುದಾದ ಕಲ್ಲುಬಂಡೆಗಳಲ್ಲಿ ಸಣ್ಣ ಸೀಳಿದ್ದರೂ ಸರಿ, ನನ್ನ ಬೇರುಗಳ ಮೂಲಕ ಇನ್ನಷ್ಟು ಮತ್ತಷ್ಟು ಸೀಳಿ ನೆಲೆಯೂರಬಲ್ಲೆ. ನನ್ನಲ್ಲಿ ಆಲದ ಮರದಂತೆ ಬಿಳಲುಗಳಿಲ್ಲ. ಆದರೆ ಬಂಡೆಯನ್ನು ಗಟ್ಟಿಯಾಗಿ ಹಿಡಿಯಲು ಬಲವಾದ ಬೇರುಗಳಿವೆ. ನಾನೇನು ಬಾರೀ ಎತ್ತರದ ಮರವಾಗಿ ಬೆಳೆಯುವುದಿಲ್ಲ. ಇರುವ ಅಲ್ಪ ಮಣ್ಣು ಮತ್ತು ತೇವಾಂಶ ಹೀರಿಕೊಂಡು ಅತ್ಯಂತ ಬರಗಾಲದ ಸ್ಥಿತಿಯಲ್ಲೂ ಹಸಿರಾಗಿರಬಲ್ಲೆ. ಪಶ್ಚಿಮ ಘಟ್ಟ, ಒಣ ಪತನ ಶೀಲ ಕಾಡು, ಅರೆ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಬಂಡೆ, ಕೊರಕಲು, ನೀರ ಹರಿವಿನ ಸನಿಹ ಬೆಳೆಯುವುದೆಂದರೆ ಬಹಳ ಇಷ್ಟ. ದೇವಳ, ಮನೆ ಗೋಡೆಗಳ ಮೇಲೆ, ಸೇತುವೆ, ತೋಡು, ಗುಡ್ಡಗಳ ಪೊಟರೆಗಳೂ ನನಗೆ ಜನ್ಮಭೂಮಿಗಳಾಗಿವೆ. ಯಾಕೆ ಹೀಗೆಲ್ಲ ಇಕ್ಕಟ್ಟಾದ ಜಾಗಗಳಲ್ಲೇ ಬೆಳೆಯುತ್ತೇನೆ ಗೊತ್ತೆ? ನನ್ನ ಬೀಜ ಪ್ರಸಾರ ಮಾಡುವ ಸ್ನೇಹಿತರ ಕಿತಾಪತಿ! ಪಕ್ಷಿಗಳು, ಬಾವಲಿಗಳು, ಕೆಲ ವನ್ಯ ಜೀವಿಗಳು ನನ್ನ ಹಣ್ಣುಗಳನ್ನು ಚಪ್ಪರಿಸಿ ತಿಂದು ಇನ್ನೆಲ್ಲೋ ಹಿಕ್ಕೆ ಹಾಕಿದಾಗ ಬೀಜಗಳು ಕೊರಕಲು, ನದಿ ದಂಡೆ, ಕಲ್ಲು ಬಂಡೆಗಳ ಕೊರಕಲ ನಡುವೆ ಬಿದ್ದು ಮೊಳಕೆಯೊಡೆಯುವ ಭಾಗ್ಯ ದೊರಕುತ್ತದೆ..! ಕಲ್ಲಿನ ಆವಾಸ ಸ್ಥಾನಗಳಿಗೇ ನನ್ನ ಆದ್ಯತೆ. ಅಲ್ಲಿ ನನ್ನ ಎಳೆಯ ಎಲೆಗಳ ತಾಮ್ರ, ಕೆಂಪು, ಗುಲಾಬಿ ವರ್ಣಗಳ ಆಕರ್ಷಣೆಗೆ ಯಾರಾದರೂ ಒಳಗಾಗಲೇಬೇಕು. ಎಷ್ಟು ದೂರದಲಿದ್ದರೂ ನನ್ನ ಹೊಳಪಿನ ಬಣ್ಣದ ಎಲೆಗಳು ನನ್ನನ್ನು ಪ್ರತ್ಯೇಕಿಸಬಲ್ಲದು. 9-10 ಸೆಂಟಿಮೀಟರ್ ಅಗಲದ ಹೃದಯದಾಕಾರದ ಎಲೆಗೆ ಏಳೆಂಟು ಜೊತೆ ಆಳವಾದ ಗುಲಾಬಿ ವರ್ಣದ ನರಗಳು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಅರಳಿಯಂತೆಯೆ ಕಾಣಿಸಿದರೂ ಅದಕಿಂತ ದಪ್ಪನೆಯ, ತುದಿಯು ಮೊಂಡಾದ ಗುಲಾಬಿ ಬಣ್ಣದ ಉದ್ದನೆಯ ತೊಟ್ಟಿನಲ್ಲಿ ಗಾಳಿಯ ಆಟಕ್ಕೆ ಅಲೆ ಅಲೆಯಾದ ಅಂಚುಳ್ಳ ಎಲೆಗಳು ಪಟಪಟ ತೊನೆದಾಡುವುದನ್ನು ನೀನೊಮ್ಮೆ ನೋಡು. ಆ ನೋಟ ಬಲು ಸೊಗಸು.

ನನ್ನಲ್ಲಿ ಅಂಜೂರದಂತಹ ಹಸಿರು ಕಾಯಿಗಳು ಕೊಂಬೆಗಳ ತುಂಬಾ ಜೋಡಿಯಾಗಿ ಅಥವಾ ಗೊಂಚಲು ಗೊಂಚಲಾಗಿ ಮೂಡುತ್ತವೆ. ಇವುಗಳ ಒಳಗೇ ಹಸಿರು ಸಣ್ಣ ಹೂವುಗಳಿದ್ದು ಪಕ್ಕನೆ ನಿಮಗೆ ಕಾಣಿಸದು. ಹಸಿರಾದ ಕಾಯಿಗಳು ಪಕ್ವವಾದಾಗ ಕೆಂಪಾಗಿ, ಕಡು ನೇರಳೆ ಅಥವಾ ಕಪ್ಪು ಬಣ್ಣದಂತೆ ಕಂಡೀತು. ಭಾರತ ಹಾಗೂ ಶ್ರೀಲಂಕಾಗಳಿಗೆ ಸ್ಥಳೀಯವೆನಿಸಿದ ನಾನು ಕರ್ನಾಟಕ, ಕೇರಳದ ಉದ್ದಗಲದಲ್ಲಿರುವೆ.

ರಾಕ್ ಅಂಜೂರವೆಂದೇ ಸಾಮಾನ್ಯವಾಗಿ ಕರೆಸಿಕೊಳ್ಳುವ ನನ್ನನ್ನು ಕನ್ನಡದಲ್ಲಿ ಕಲ್ಲರಳಿ, ಬೆಟ್ಟರಸಿ,ಕಾಡರಸಿ, ಕಾಡು ಅಶ್ವತ್ಥ, ಕಲ್ಲತ್ತಿ, ಪಾಸುಅತ್ತಿ, ಕಲ್ಲಶ್ವತ್ಥ ಎಂದೆಲ್ಲ ಕರೆಯುತ್ತಾರೆ. ನಿಷ್ಪಾಪಿ ಸಸ್ಯವಾದ ನನ್ನ ಶಾಸ್ತ್ರೀಯ ಹೆಸರು ಫಿಕಸ್ ಅರ್ನೋಟಿಯಾನಾ (Ficus arnottiana) ಪಿಕಸ್ ಕ್ಯಾರಿಕಾ ಕುಲದ ಮೊರೇಸಿ ಕುಟುಂಬದ ಸದಸ್ಯತನ ನನಗಿದೆ. ಸಸ್ಯ ಶಾಸ್ತ್ರಜ್ಞ ಜಾರ್ಜ್ ಅರ್ನಾಟ್ ವಾಕರ್ ಅರ್ನಾಟ್ ಅವರ ಗೌರವಾರ್ಥ ನನಗೆ ಈ ಶಾಸ್ತ್ರೀಯ ಹೆಸರಿಡಲಾಗಿದೆಯಂತೆ.

ಆಯುರ್ವೇದ ಹಾಗೂ ಸಾಂಪ್ರದಾಯಿಕ ವೈದ್ಯ ಪದ್ದತಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುವ ನಾನು ಮಧುಮೇಹ, ಉರಿಯೂತ, ಗಾಯ ಗುಣಪಡಿಸುವ, ಸೂಕ್ಷ್ಮ ಜೀವಿಗಳ ಸೋಂಕು ತಡೆಗಟ್ಟುವ, ಚರ್ಮರೋಗ, ಸ್ರ್ತೀರೋಗ, ಹೊಟ್ಟೆಯ ಸಮಸ್ಯೆ ನಿವಾರಿಸುವ ಗುಣ ಹೊಂದಿದ್ದೇನೆಂದು ಗುರುತಿಸಿದ್ದಾರೆ. ನನ್ನ ತೊಗಟೆ, ಎಲೆ ಹಾಗೂ ಹಾಲು ಬಹು ಉಪಯುಕ್ತವೆನ್ನುತ್ತಾರೆ.

ನೀವು ನನ್ನ ಹತ್ತು ಮೀಟರ್ ಎತ್ತರ ಬೆಳೆಯುವ ಗುಣ ಕಂಡು ಹೇಗೆ ಬೆಳೆಸುವುದು? ಎಂದು ಆತಂಕಪಡಬೇಕಾಗಿಲ್ಲ. ಏಕೆಂದರೆ ಕಲ್ಲು ಬಂಡೆಗಳ ಮೇಲೆ ಬೆಳೆಯುವ ನೈಸರ್ಗಿಕ ಗುಣ ಕಂಡು ಬೋನ್ಸಾಯ್ ಮಾಡಬಹುದು. ನನ್ನನ್ನು ಪ್ರೀತಿಸುವ ಹೃದಯಗಳ ಕೈಯಳತೆಯಲ್ಲೇ ನಾನು ಕೂರಬಲ್ಲೆ ಗೊತ್ತಾ...?

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************


Ads on article

Advertise in articles 1

advertising articles 2

Advertise under the article