-->
ಜೀವನ ಸಂಭ್ರಮ : ಸಂಚಿಕೆ - 248

ಜೀವನ ಸಂಭ್ರಮ : ಸಂಚಿಕೆ - 248

ಜೀವನ ಸಂಭ್ರಮ : ಸಂಚಿಕೆ - 248
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        

            
ಮಕ್ಕಳೇ, ಇಂದು ಸಾಧನೆ ಮಾಡಲು ಅಗತ್ಯವಾದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ. ಇದರ ಬಗ್ಗೆ ಪತಂಜಲ ಯೋಗ ಸೂತ್ರದಲ್ಲಿ ಉಲ್ಲೇಖವಿದೆ. ಪತಂಜಲಿ ಮಹರ್ಷಿಯು ಮನಸ್ಸಿಗೆ ಹೆಚ್ಚು ಮಹತ್ವ ನೀಡಿದ್ದಾನೆ. ಮನಸ್ಸು ಬಹಳ ಮಹತ್ವದ್ದು. ಅರಿವು ಮರೆವು ಮನಸ್ಸಿಗೆ. ಬಂಧನ ಮುಕ್ತಿ ಮನಸ್ಸಿಗೆ. ಸುಖ ದುಃಖದ ಅನುಭವ ಮನಸ್ಸಿಗೆ. ಎಲ್ಲವನ್ನು ಮನಸ್ಸಿನ ಮೂಲಕ ಅನುಭವಿಸುತ್ತೇವೆ. ಮನಸ್ಸಿಲ್ಲ ಅನುಭವವಿಲ್ಲ. ವಸ್ತುಗಳನ್ನು ನಾನು ನೋಡುತ್ತೇನೆ. ಮನಸ್ಸು ಕಣ್ಣಿನ ಮೂಲಕ ವಸ್ತುವನ್ನು ಸ್ಪರ್ಶಿಸುತ್ತದೆ. ಮನಸ್ಸಿಗೆ ಹಿತ ಅನಿಸಿದರೆ ಆ ವಸ್ತುವನ್ನು ಪ್ರೀತಿಸುತ್ತದೆ. ಹಿತ ಅನಿಸದಿದ್ದರೆ ಪ್ರೀತಿಸುವುದಿಲ್ಲ ದ್ವೇಷಿಸುತ್ತದೆ. ಯಾವಾಗ ಪ್ರೀತಿಸುತ್ತೆ ಆವಾಗ ಸುಖ ಅನಿಸುತ್ತದೆ. ಆ ವಸ್ತುವನ್ನು ಕಂಡು ಕೇಳಿ ಅಹಿತವಾಗಿದ್ದರೆ ದುಃಖ ಅನುಭವಿಸುತ್ತದೆ. ನಾವು ಸುಖಿಗಳಾಗಬೇಕಾದರೆ ಮನಸ್ಸನ್ನು ಹದಗೊಳಿಸಬೇಕು. ವಸ್ತು, ಮನಸ್ಸಿನ ಬಂಧನದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಕೆಲವೊಮ್ಮೆ ಮನಸ್ಸು ಆ ವಸ್ತುವಿನಿಂದ ಮುಕ್ತವಾಗುತ್ತದೆ. ಮುಕ್ತ ಆದಾಗ ಸಮಾಧಾನ ಅನಿಸುತ್ತದೆ. ಬಂಧನ ಆದಾಗ ಅಸಮಾಧಾನ ಅನಿಸುತ್ತದೆ. ನಾವು ಸಮಾಧಾನ ಪಡೆಯಬೇಕಾದರೆ ಮನಸ್ಸನ್ನು ಮುಕ್ತ ಮಾಡಬೇಕು. ಯೋಗಶಾಸ್ತ್ರಕ್ಕೆ ಮನಸ್ಸಿನ ಬಗ್ಗೆ ಕಾಳಜಿ. ಇದು ಮೂಲತತ್ವಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ. ಮೂಲತತ್ವ ಎಂದರೆ ಯಾವುದು ಉಳಿಯುತ್ತದೆ ?. ಯಾವುದು ಮೂಲದಲ್ಲಿ ಇರುತ್ತದೆ?. ಇದರ ಬಗ್ಗೆ ಅಷ್ಟಾಗಿ ಬೆನ್ನು ಬೀಳುವುದಿಲ್ಲ. ಏಕೆಂದರೆ ಇರುವುದು ಇದ್ದೇ ಇರುತ್ತದೆ. ಏನು ಇರುತ್ತದೆ?. ಹೇಗೆ ಇರುತ್ತದೆ?. ಅದು ಹಾಗೆ ಇರುತ್ತದೆ. ಅದನ್ನು ಬಹಳಷ್ಟು ತಲೆಗೆ ಹಾಕಿಕೊಳ್ಳಬೇಕಾಗಿಲ್ಲ. ಅದು ನಮ್ಮೊಳಗೆ ಎಲ್ಲರೊಳಗೂ ಇರುತ್ತದೆ. ಆದರೆ ನಮ್ಮ ಬದುಕಿನಲ್ಲಿ ಅತ್ಯಂತ ಸಮೀಪವಾಗಿ ಬದುಕನ್ನು ಸುಂದರಗೊಳಿಸುವುದು, ಬದುಕನ್ನು ಕೆಡಿಸುವುದು, ಬದುಕಿನ ಮೆರುಗನ್ನು ಹೆಚ್ಚಿಸುವುದು, ಬದುಕಿನ ಮೆರುಗನ್ನು ಕಡಿಮೆಗೊಳಿಸುವುದು ಎಲ್ಲ ಮನಸ್ಸು.

ಏನಿದು ಮನಸು?.. ಪತಂಜಲ ಹೇಳುತ್ತಾರೆ, ಅದು ಏನು ಅಂತ ಹೇಳುವುದಕ್ಕೆ ಬರುವುದಿಲ್ಲ. ಯಾಕೆ?. ಅದು ಹಾಗೆ ಇದೆ. ಮನಸ್ಸಿಲ್ಲದಿದ್ದರೆ ಏನು ಆಗುವುದಿಲ್ಲ. ಆದರೆ ಅದು ಏನು ಅಂತ ತಿಳಿಯುತ್ತಿಲ್ಲ. ನಾವು ಎಲ್ಲದರ ಬಗ್ಗೆ ಯೋಚನೆ ಮಾಡುತ್ತೇವೆ. ಆದರೆ ಯಾವುದರ ಮೂಲಕ ಯೋಚಿಸುತ್ತೀವಿ ಅದರ ಬಗ್ಗೆ ಯೋಚಿಸುವುದಿಲ್ಲ. ಅದಕ್ಕೆ ನಮಗೆ ಅದು ಏನು ಅಂತ ಗೊತ್ತಾಗುವುದಿಲ್ಲ. ಎಲ್ಲಾ ಕಲಿಯುತ್ತೀವಿ. ಭೌತಶಾಸ್ತ್ರ , ರಸಾಯನಶಾಸ್ತ್ರ , ಗಣಿತಶಾಸ್ತ್ರ ಮುಂತಾದವು. ಯಾವುದರ ಮೂಲಕ ಕಲಿಯುತ್ತೇವೆ? ಅದನ್ನು ಕಲಿಯುವುದಕ್ಕೆ ಹೋಗುವುದಿಲ್ಲ. ಯಾವುದರ ಮೂಲಕ ಮನುಷ್ಯನಾದ?. ಅದನ್ನು ಕಲಿತಿಲ್ಲ. ಇದರ ಕಡೆ ಲಕ್ಷ್ಯ ಕಡಿಮೆ. ಹಣದ ಕಡೆ ಲಕ್ಷ್ಯ ಇದೆ. ಹಣ ಕಂಡು ಸಂತೋಷಪಡುವುದು ಮನಸ್ಸೆ, ಅದರ ಬಗ್ಗೆ ಕಾಳಜಿ ಇಲ್ಲ. 

ಈ ಹೂವು ಏಕೆ ಸುಖ ಅನಿಸುತ್ತದೆ?.. ಇದು ಸುಂದರ ಹೂಗುಚ್ಚ ನಿಸರ್ಗ ತಯಾರಿಸಿದೆ. ಇದನ್ನು ನೋಡಿ ಮನಸ್ಸು ಆನಂದ ಪಡುತ್ತದೆ. ಏಕೆ ಗೊತ್ತಿಲ್ಲ?. ಮನಸೇ ಇಲ್ಲದಿದ್ದರೆ ಅನುಭವಿಸಲು ಬರುವುದಿಲ್ಲ. ಮನಸೇ ಇಲ್ಲ ಅಂತ ಇಟ್ಟುಕೊಳ್ಳಿ. ಎಲ್ಲಾ ಹೂವು ಇವೆ, ಸುಗಂಧವಿದೆ ಮನಸೇ ಇಲ್ಲದಿದ್ದರೆ ಸಂತೋಷ ಪಡುವವ, ದುಃಖ ಪಡುವವ ಇಲ್ಲ. ಮನಸ್ಸು, ಮನುಷ್ಯನನ್ನು ನಿರ್ಮಿಸುತ್ತದೆ, ಮನಸ್ಸು ಮನುಷ್ಯನನ್ನು ಕೆಡಿಸುತ್ತದೆ. ಮನಸ್ಸು ಹೇಳಿದಂತೆ ಕೇಳುತ್ತೇವೆ. ಡಾಕ್ಟರ್ ಆಗು ಅನ್ನುತ್ತದೆ. ಡಾಕ್ಟರ್ ಆಗುತ್ತೇವೆ. ಮನಸ್ಸಿಲ್ಲ ಡಾಕ್ಟರ್ ಇಲ್ಲ, ವಕೀಲರಿಲ್ಲ ಯಾರು ಇಲ್ಲ. ಈ ಮನಸ್ಸನ್ನು ರೂಪಿಸಬೇಕು ಹೇಗೆ?. ಹೇಗೆ ಬಳಸಿದರೆ ಸಂತೋಷವಾಗುತ್ತದೆಯೋ ಹಾಗೆ.

ಹೇಗೆ ಮನಸ್ಸನ್ನು ತಣ್ಣಗಿಡಬೇಕು, ಗದ್ದಲ ಮಾಡದಂತೆ ಇಡಬೇಕು?. ಯಾವುದೇ ಆಗಿರಲಿ ಎಷ್ಟಿರಬೇಕು ಅಷ್ಟಿರಬೇಕು. ಅದು ಮನಸ್ಸಿನ ತಣ್ಣನೆಗೆ ಅಡ್ಡಿಯಾಗಬಾರದು. ಆದರೆ ಮನಸ್ಸು ತಣ್ಣಗಿರುವಂಥದ್ದಲ್ಲ. ಅದೇ ಮನಸ್ಸು ತಣ್ಣಗಿರು ಅನ್ನುತ್ತದೆ. ಆದರೆ ಅದು ತಣ್ಣಗೆ ಇರುವುದಿಲ್ಲ. ಇದೇ ವಿಶೇಷ. ಇಂತಹ ಮನಸ್ಸಿಗೆ ಪ್ರಪಂಚ ಅಂದರು. ಸಂಸಾರ ಅಂದರು. ಕೆಲವರು ಮಾಯೆ ಅಂದರು. ಕೆಲವರು ಏನು ತಿಳಿಯುವುದಿಲ್ಲ ಅಂದರು. ಆದರೆ ಪತಂಜಲ ಮಹರ್ಷಿ ತಣ್ಣಗಿಡುವುದರ ಬಗ್ಗೆ ಹೇಳಿದ.

ಯಾವುದೇ ಸಾಧನೆ ಮಾಡಿದರೂ ಇವೆರಡು ಮಾರ್ಗ ಅನುಸರಿಸಬೇಕು.
1.ಅಭ್ಯಾಸ. 
2. ವೈರಾಗ್ಯ. 

1.ಅಭ್ಯಾಸ : ಅಭ್ಯಾಸ ಮಾಡುವುದು ಅಂದರೆ ತಣ್ಣಗಿರುವುದನ್ನ ಕಲಿಯೋದು. ತಣ್ಣಗೆ ಇದ್ದು ಇದ್ದು ಅಭ್ಯಾಸ ಮಾಡಬೇಕು. ಉದಾಹರಣೆಗೆ ಹಿಡಿಯುವುದನ್ನು ಅಭ್ಯಾಸ ಮಾಡೋದು ಅಂದರೆ ಒಂದು ಸಲ ಹಿಡಿಯುವುದು, ಎರಡು ಸಲ ಹಿಡಿಯುವುದು, ಮೂರು ಸಲ ಹಿಡಿಯುವುದು ಹೀಗೆ ಹಿಡಿದುಕೊಳ್ಳುತ್ತಾ ಇರುವುದು ಅಭ್ಯಾಸ. ಮಾಡಿದ್ದನ್ನೇ ಮತ್ತೆ ಮತ್ತೆ ಮಾಡಿದರೆ ರೂಢಿಯಾಗುತ್ತದೆ, ಅಭ್ಯಾಸವಾಗುತ್ತದೆ. ಮಾಡಿ ಮಾಡಿ ಸುಂದರ ಆಗುತ್ತೆ ವಿನಃ ಬೇರೆ ಏನೂ ಆಗುವುದಿಲ್ಲ. ಸುಂದರವಾಗಿ ಬರೆಯಬೇಕು ಅಂದರೆ ಬರೆದು , ಬರೆದು, ರೂಡಿ ಮಾಡಬೇಕು.

ಉದಾಹರಣೆಗೆ ಮಹಿಳೆಯರು ಮೊದಲು ಚಪಾತಿ ಮಾಡಿ ಎಂದರೆ ತ್ರಿಭುಜ, ಆಯತ, ನಾಲ್ಕು ಮೂಲೆ, ಎಂಟು ಮೂಲೆ ಆಗುತ್ತೆ. ಮಾಡುತ್ತಾ ಮಾಡುತ್ತಾ ಮುಂದೆ ಮುಟ್ಟಿದರೆ ವೃತ್ತಾಕಾರವಾಗುತ್ತದೆ. ಹಾಗೆ ಮಾಡಿ, ಮಾಡಿ, ಮಾಡಿ ರೂಡಿಸಬೇಕಾಗುತ್ತದೆ. ಅದು ಶ್ರಮದಿಂದ, ಯತ್ನದಿಂದ ಬರುತ್ತದೆ. ಕಷ್ಟ ಪಡಬೇಕಾಗುತ್ತದೆ. ಮನಸ್ಸನ್ನು ತಣ್ಣಗೆ ಇಡಲು, ತಣ್ಣಗೆ ಇಟ್ಟು, ಇಟ್ಟು ಅಭ್ಯಾಸ ಮಾಡಬೇಕು. ಅದು ಆಶೀರ್ವಾದದಿಂದ ಬರುವುದಿಲ್ಲ. 

2. ವೈರಾಗ್ಯ : ಯಾವುದೇ ಕೆಲಸ ಮಾಡುವಾಗ ಲಕ್ಷ್ಯ ಆ ಕಡೆ ಈ ಕಡೆ ಹೋದರೆ ಸಾಧಿಸಲು ಆಗುವುದಿಲ್ಲ. ಲಕ್ಷ್ಯ ಬೇರೆ ಕಡೆ ಹೋದರೆ ರಾಗ ಶುರುವಾಗಿ ವೈರಾಗ್ಯ ತಪ್ಪಿ ಹೋಗುತ್ತದೆ. ವೈರಾಗ್ಯ ತಪ್ಪಿ ಹೋದರೆ ಸಾಧನೆ ಆಗುವುದಿಲ್ಲ. ವಿರಕ್ತರೆ ಬೇರೆ, ಗೃಹಸ್ಥರೇ ಬೇರೆ ಎಂದು ಭಾವಿಸಬಾರದು. ಯೋಗಶಾಸ್ತ್ರದಂತೆ ಎಲ್ಲರೂ ವಿರಕ್ತರಾಗಬೇಕು. ಪ್ರಪಂಚ ಮಾಡಿದರು ವಿರಕ್ತರಾಗಿರಬೇಕು. ಪ್ರಪಂಚ ಮಾಡದಿದ್ದರೂ ವಿರಕ್ತರಾಗಿರಬೇಕು. ಮನಸ್ಸು ಹದಗೊಳಿಸಲು ವೈರಾಗ್ಯಬೇಕು. ವೈರಾಗ್ಯ ಅಂದರೇನು. ವೈರಾಗ್ಯ ಅಂದರೆ ಎಲ್ಲವನ್ನು ತ್ಯಜಿಸುವುದಲ್ಲ. ಉದಾಹರಣೆಗೆ ಒಳ್ಳೆಯ ಆರೋಗ್ಯ ಪಡೆಯಲು ಪ್ರತಿದಿನ ದೈಹಿಕ ಚಟುವಟಿಕೆ ಮಾಡಬೇಕು. ಇದು ಅಭ್ಯಾಸ. ಧೂಮಪಾನ, ಮದ್ಯಪಾನ ಒಳ್ಳೆಯ ಆರೋಗ್ಯಕ್ಕೆ ಮಾರಕವಾಗಿರುವುದರಿಂದ ದೂರವಿರುವುದೇ ವೈರಾಗ್ಯ. 

ಪತಂಜಲ ಮಹರ್ಷಿ ಅಪರ ವೈರಾಗ್ಯಕ್ಕೆ ನಾಲ್ಕು ಪ್ರಕಾರ ಹೇಳಿದ.
1. ಏತಮಾನ: ಯಾವ ವಸ್ತುವಿನ ಕಡೆಗೆ ಮನಸ್ಸು ಹರಿದು ಹರಿದು ಮನಸ್ಸು ತಾಪ ಮಾಡಿಕೊಳ್ಳುತ್ತದೆಯೊ ಅಂತಹ ವಸ್ತುವಿನಿಂದ ಮನಸ್ಸನ್ನು ಜಗ್ಗಿ ಜಗ್ಗಿ ವಾಪಸು ತರುವುದಕ್ಕೆ ಏತಮಾನ ಎನ್ನುವರು. ಮನಸ್ಸಿನ ಜೊತೆ ಜಗಳ ಮಾಡಬಾರದು. ಮನಸ್ಸು ಹೇಳುತ್ತದೆ. "ನಾನು ಅದ್ಭುತ, ಬಳಸುವ ಕಲೆ ಬೇಕು. ಸರಿಯಾಗಿ ಬಳಸಿಕೋ" ಎನ್ನುತ್ತದೆ. ವಸ್ತುವಿನ ತಿಳುವಳಿಕೆ ಇರಲಿ, ಅದರ ದೋಷ ಏನದೇ ತಿಳಿಯಬೇಕು. ಅದು ಇದ್ದಂತೆ ಇರುವುದಿಲ್ಲ. ಮತ್ತೆ ಹೀಗೆ ಯಾವಾಗಲೂ ಸುಖ ಕೊಡುವುದಿಲ್ಲ. ಇದು ಗೊತ್ತಿದ್ದರೆ ಮೋಹವಾಗುವುದಿಲ್ಲ. ಎಲ್ಲಾ ಅನುಭವಿಸಬೇಕು ವಿರಕ್ತನಾಗಿ ಅನುಭವಿಸಬೇಕು.

2. ತಾಪ ಮಾಡುವ ವಸ್ತುವಿನಿಂದ ದೂರ ಇರುವುದು ಅಥವಾ ನಾವೇ ಅದರಿಂದ ದೂರವಾಗುವುದು ಇದರಿಂದ ಆರಾಮ ಆಗುತ್ತದೆ. 

3. ವ್ಯತಿರೇಕ ವೈರಾಗ್ಯ: ವಸ್ತುವಿಗೆ ಬಹಳ ಹಚ್ಚಿಕೊಳ್ಳದಿರುವುದು.

4. ಏಕಕೇಂದ್ರೀಯ : ಹೋಗಲಿ ಬಿಡು ಅನ್ನುವುದು. ಇದರಿಂದ ವೈರಾಗ್ಯ ಉಂಟಾಗುತ್ತದೆ. ಇದರಿಂದ ಸಾಧನೆಗೆ ಅಡ್ಡಿಯಾಗಿರುವುದರಿಂದ ದೂರವಿರಲು ಸಾಧ್ಯವಾಗುತ್ತದೆ. ಹೀಗೆ ಸಾಧನೆಯನ್ನು ಮಾಡಬೇಕು. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************


Ads on article

Advertise in articles 1

advertising articles 2

Advertise under the article