-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 220

ಸ್ಫೂರ್ತಿಯ ಮಾತುಗಳು : ಸಂಚಿಕೆ - 220

ಸ್ಫೂರ್ತಿಯ ಮಾತುಗಳು : ಸಂಚಿಕೆ - 220
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
             

ಅದೊಂದು ಕಾಲವಿತ್ತಂತೆ. ಹಿಮಾಲಯದಲ್ಲೋ, ಕೇದಾರದಲ್ಲೋ ಕಾಶಿಯಲ್ಲೋ ಭಗವಂತನ ಅನುಗ್ರಹ ಪಡೆಯಲು ಆತನನ್ನು ತಪಸ್ಸು ಮಾಡುತ್ತಿದ್ದ ಕಾಲವದು. ಭಗವಂತ ಮೊದಲಿಗೆ ಬ್ರಹ್ಮ ದೇವರನ್ನು ಸೃಷ್ಟಿಸಿ ಅವನಿಗೆ ಸೃಷ್ಟಿ ಕಾರ್ಯದ ಜವಾಬ್ದಾರಿ ಒಪ್ಪಿಸಿದನಂತೆ. ಬ್ರಹ್ಮ ದೇವರಿಗೆ ಸೃಷ್ಟಿಯನ್ನು ಹೇಗೆ ಮಾಡಬೇಕೆಂದೇ ತಿಳಿಯದು. ಅದಕ್ಕಾಗಿ ಅದನ್ನು ಭಗವಂತನಿಂದಲೇ ತಿಳಿಯ ಬೇಕಿತ್ತು. ಬೇರೆ ಯಾರೂ ಇರಲಿಲ್ಲ. ಅವನು ಒಂದು ಸಾವಿರ ದೇವ ವರ್ಷ ತಪಸ್ಸು ಮಾಡಿದನೆಂದು ಕಥೆಯಿದೆ. ದೇವತಾ ವರ್ಷ ಮತ್ತು ಮಾನವ ವರ್ಷಗಳ ನಡುವೆ ಭಾರೀ ಆಂತರವಿದೆ. ನಮ್ಮ ಒಂದು ವರ್ಷವು ಭಗವಂತನಿಗೆ ಒಂದು ದಿನ. ಉತ್ತರಾಯಣವನ್ನು ಹಗಲೆಂದೂ ದಕ್ಷಿಣಾಯನವನ್ನು ರಾತ್ರಿಯೆಂದೂ ಹೇಳಲಾಗಿದೆ. ಎಂದರೆ ನಮಗೆ ಮುನ್ನೂರ ಅರುವತ್ತು ವರ್ಷವಾದಾಗ ದೇವರಿಗೆ ಒಂದು ವರ್ಷವಾಗುತ್ತದೆ. ಇದನ್ನು ತಪಸ್ಸೆನ್ನುವುದು ದೀರ್ಘಕಾಲಿಕ ಪರಿಶ್ರಮವಾಗಿದೆಯೆಂಬುದು ಇಲ್ಲಿ ಗಮನೀಯ.

ದೇತೆಗಳನ್ನು ಮೆಚ್ಚಿಸಿ ವರಪಡೆಯಲು ರಾಕ್ಷಸರು ತಪಸ್ಸು ಮಾಡುತ್ತಿದ್ದರೆಂದೂ ಓದಿದ್ದೇವೆ. ಇಲ್ಲಿ ತಪಸ್ಸೆನ್ನುವುದು ಧ್ಯಾನವೆಂದು ಬಿಂಬವಿದೆ. ಧ್ಯಾನವೆಂದರೆ ಜಿನಾಸನದ ಮೇಲೆ ಪದ್ಮಾಸನದಲ್ಲಿ ನೇರ ಕುಳಿತು ಮನಸನ್ನು ಏಕಾಗ್ರಗೊಳಿಸಿ ಭಗವಂತನನ್ನು ನೆನಪಿಸುವುದು. ಈ ಧ್ಯಾನ ದೀರ್ಘವಾದರೆ ತಪಸ್ಸು. ಕಠಿಣ ತಪಸ್ಸೆಂದರೆ ಅನ್ನಾಹಾರ ನಿದ್ರೆಗಳನ್ನು ಬಿಟ್ಟು ಮಾಡುವ ದೀರ್ಘಕಾಲಿಕ ಧ್ಯಾನ.

ಆಧುನಿಕ ಕಾಲದಲ್ಲಿ ಬೆಟ್ಟದ ಮೇಲೆಯೋ ಕಾಡಿನಲ್ಲೋ ಮರದ ಕೆಳಗೆ ಕುಳಿತು ತಪಸ್ಸು ಮಾಡುವವರನ್ನು ನಾವು ನೋಡಿಲ್ಲ. ಕೈಲಾಸದಲ್ಲಿರುವ ಪರಮೇಶ್ವರನನ್ನು ಒಲಿಸಲು ಮಾಡಬೇಕಾದ ತಪಸ್ಸನ್ನು ನಾವು ಕಾಯಕ ಎಂದು ಅರ್ಥೈಸಿದ್ದೇವೆ. ಅದಕ್ಕಾಗಿಯೇ ಶ್ರೀ ಬಸವೇಶ್ವರರು “ಕಾಯಕವೇ ಕೈಲಾಸ“ ಎಂದರು. ಯಾವುದೇ ಕೆಲಸವನ್ನು ಪ್ರೀತಿಯಿಂದ (ಭಕ್ತಿ), ಕಾಳಜಿಯಿಂದ ನಿಸ್ವಾರ್ಥ ಭಾವನೆಯಿಂದ ನಿರಂತರವಾಗಿ ಮಾಡುವ ಬದ್ದತೆಯೇ ತಪಸ್ಸು. ನಮಗೆ ವಿದೇಶದಲ್ಲಿ ಮಾನ್ಯತೆ ಸ್ವದೇಶದಲ್ಲಿ ಧನ್ಯತೆ ಕೂಡಿ ಬರಲು ನಮ್ಮ ತಪಸ್ಸು ಕಾರಣವಾಗುತ್ತದೆ.

ರೈತನು ಮಾಡಬಹುದಾದ ತಪಸ್ಸು, ಕಾರ್ಖಾನೆಯ ಮಾಲಿಕ ಮಾಡುವ ತಪಸ್ಸು ಬೇರೆ ಬೇರೆಯಾದರೂ ಅವುಗಳಿಂದ ಜನರಿಗೆ ಉಪಯೋಗವಾಗುವ ಫಲಗಳೇ ಉತ್ಪನ್ನವಾಗುತ್ತವೆ. ದೇವರ ಕುರಿತು ಋಷಿಗಳು ಹಿಮಾಲಯದಲ್ಲಿ ತಪಸ್ಸು ಮಾಡುತ್ತಿದ್ದರು. ತಪಸ್ಸಿನಲ್ಲೂ ಸರಳ, ಕಠಿಣ ಎಂದು ವಿಧಗಳಿವೆ. ತಪಸ್ಸಿನ ಕಠಿಣತೆ ಫಲವನ್ನು ಬಹು ಬೇಗನೆ ಕೊಡುತ್ತದೆ. ಸರಳ ತಪ್ಪಸ್ಸಿನಿಂದ ಇಚ್ಛಿತ ಸಿದ್ಧಿಯು ತಡವಾಗಿ ಒದಗುತ್ತದೆ.

ಪ್ರತಿಯೊಂದು ಕೆಲಸವೂ ತಪಸ್ಸಿನೊಂದಿಗೆ ನಡೆದಾಗ ಸಾರ್ಥಕತೆಯನ್ನು ಹೊಂದುತ್ತದೆ. ವಿದ್ಯಾರ್ಥಿಯು ದಿನದ ಹದಿನಾರು ಘಂಟೆಯಷ್ಟಾದರೂ ದೈನಂದಿನ ಸಮಯವನ್ನು ಅಧ್ಯಯನ ಪೂರಕವಾಗಿ ಶ್ರದ್ಧೆಯಿಂದ ಮಾಡಬೇಕಾಗುತ್ತದೆ. ಅಧ್ಯಯನ ಮಾಡುವೆನೆಂದು ಕೋಣೆ ಸೇರಿದ ವಿದ್ಯಾರ್ಥಿಯು ಪ್ರಾಮಾಣಿಕವಾಗಿ ಕೋಣೆಯೊಳಗೆ ಅಧ್ಯಯನ ಶೀಲ ಎಂದರೆ ಕರ್ತವ್ಯ ಮಗ್ನನಾಗಿರಬೇಕು. ಅಧ್ಯಯನ ಮನೋಕೇಂದ್ರಿತವಾಗಿರಬೇಕು. ಇಂದು ಸಮಯ ಮತ್ತು ಮನಸ್ಸುಗಳನ್ನು ಹಾಳುಮಾಡುವ ನಾನಾ ವಿಧಾನಗಳಿವೆ. ಅವು ಬಹಳ ಬೇಗನೆ ಎಲ್ಲರನ್ನೂ ಬಲವಾಗಿ ಹಿಡಿದಿಡುತ್ತವೆ. ಮನಸ್ಸು ಬಲವಾಗಿ ಸರಿಯಾದುದನ್ನು ಗುರುತಿಸಿ ಆ ದಾರಿಯಲ್ಲಿಯೇ ಮುಂದುವರಿದರೆ ಅದು ತಪಸ್ಸು. ಅವನಿಗೆ ಜ್ಞಾನ ಸಿದ್ಧಿ ಮತ್ತು ಪ್ರಸಿದ್ಧಿ ಎರಡೂ ಒದಗುತ್ತದೆ.

ಧ್ರುವಕುಮಾರನ ಬಗ್ಗೆ ಕೇಳಿದ್ದೇವೆ. ಅವನಲ್ಲಿ ಭಗವಂತನನ್ನು ನೊಡುವ ಅದಮ್ಯ ಇಚ್ಚೆ ಇತ್ತು. ಭಗವಂತನನ್ನು ಕಾಣಬೇಕೆಂಬುದು ಅವನ ಕನಸು. ಸಾದನೆಗೆ ದಕ್ಕದ್ದು ಯಾವುದೂ ಇಲ್ಲವಂತೆ. ತಪಸ್ಸು ಮಾಡಿ ಶ್ರೀಮನ್ನಾರಾಯಣನನ್ನು ಒಲಿಸಿಕೊಂಡ. ಲೋಕೋದ್ಧಾರದ ತನ್ನ ಕನಸನ್ನು ತಪಸ್ಸಾಧನೆಯ ಮೂಲಕ ಈಡೇರಿಸಿದನಲ್ಲವೇ?
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************


Ads on article

Advertise in articles 1

advertising articles 2

Advertise under the article