ನಿಷ್ಪಾಪಿ ಸಸ್ಯಗಳು : ಸಂಚಿಕೆ - 154
Thursday, June 25, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 154
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ..? ಮಳೆಗಾಲ ಕಾಲಿಟ್ಟೂ.. ಇಡದಂತೆ ಕಣ್ಣುಮುಚ್ಚಾಲೆಯಾಡುತ್ತಿದೆ. ತುಂತುರು ಮಳೆಗೆ ನಕ್ಕುನಲಿದ ನಿಸರ್ಗ ಚಿಂತೆಗೀಡಾಗಿದೆ. ಮಣ್ಣಿಗೆ ಸೇರಿದ್ದ ಅದೆಷ್ಟೋ ಸಣ್ಣ ಪುಟ್ಟ ಸಸ್ಯಗಳ ಬೀಜಗಳು ಮೊಳಕೆಯೊಡೆದು ಅಲ್ಲೇ ಉಸಿರುಗಟ್ಟಿವೆ. ಇವನ್ನೆಲ್ಲಾ ತಪ್ಪಿಸಲು ಮಳೆ ಬೇಗನೆ ಬರಲೆಂದು ಹಾರೈಸೋಣ ಅಲ್ಲವೇ...
ಬಾಲ್ಯದಲ್ಲಿ ನಾವೊಂದು ಕತೆ ಕೇಳಿದ್ದೆವು. ಅದು ಯಾವ ಕತೆ ಎಂದರೆ ಕರಡಿ ಮತ್ತು ನರಿ ಬೇಸಾಯ ಮಾಡಿದ ಕತೆ. ಇವೆರಡೂ ಬೆಳೆಯ ಬಗ್ಗೆ ಒಪ್ಪಂದ ಮಾಡಿಕೊಂಡು ಬೇಸಾಯ ಮಾಡಿ ನರಿ ಸಿಹಿಗೆಣಸು ಬೆಳೆದು ಕರಡಿಯನ್ನು ಮೂರ್ಖನನ್ನಾಗಿ ಮಾಡಿದ್ದು ತುಂಬಾ ಚೇತೋಹಾರಿಯಾದ ಕತೆ!.
ಈ ಸಿಹಿಗೆಣಸು ಎಂತಹವರನ್ನೂ ಮರುಳು ಮಾಡುವಷ್ಟು ರುಚಿಯುಳ್ಳ ಗಡ್ಡೆಯನ್ನು ನೀಡುವ ಒಂದು ಬಳ್ಳಿ. ಗೆಣಸು ಅಂದರೇನೆ ಅದು ಭೂಮಿಯ ಕೆಳಭಾಗದಲ್ಲಿ ಬೆಳೆಯಬಲ್ಲ ಒಂದು ಸಸ್ಯ. ಕನ್ನಡದಲ್ಲಿ ಸಿಹಿಗೆಣಸು, ನೆಲ ಗೆಣಸು, ಗೆಣಸು, ಚೀನೀ ಗೆಣಸು ಎಂದು ಕರೆದರೆ ಸಾಮಾನ್ಯವಾಗಿ Sweet potato ಎನ್ನುವರು. ಇದರ ಹೆಸರಲ್ಲೇ ಸಿಹಿ ಇದೆ. ಇಪೋಮಿಯ ಬಟಾಟಸ್ (Ipomoea batatas) ಎಂಬುವುದು ಇದರ ಶಾಸ್ತ್ರೀಯ ಹೆಸರಾದರೆ ಕಾನ್ವೊಲ್ವುಲೇಸಿ (Convolvulaceae ) ಕುಟುಂಬದ ಸದಸ್ಯತನ ಪಡೆದಿದೆ. ಕೊಲಂಬಸ್ ನ ಮೂಲಕ ದಕ್ಷಿಣ ಅಮೇರಿಕಾದ ಮೂಲದಿಂದ ಇಂದು ವಿಶ್ವಾದ್ಯಂತ ಹರಡಿರುವ ಸಿಹಿ ಗೆಣಸು ಗೋಧಿ, ಅಕ್ಕಿ, ಜೋಳ, ಆಲೂಗಡ್ಡೆ, ಬಾರ್ಲಿ, ಮರಗೆಣಸಿನ ನಂತರದ ದೊಡ್ಡ ಬೆಳೆಯಾಗಿದೆ ! ಇದೊಂದು ಕಾಡು ಬಳ್ಳಿಯೇ ಆಗಿದ್ದರೂ ಪ್ರಾಚೀನ ಕಾಲದಿಂದ ಮಾನವನ ರಕ್ಷಣೆ ಮಾಡಿಕೊಂಡು ಬಂದಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ದೊರಕಿವೆ.
ಪರ್ಯಾಯ ಹಾಗೂ ಸರಳವಾದ 5 ರಿಂದ 7 ಸೀಳುಗಳಾಗಿ ನಕ್ಷತ್ರದಂತೆ ಕಂಗೊಳಿಸುವ ಇದರ ಎಲೆಗಳನ್ನು palmate leaf ಎಂದೂ ಕರೆಯುವರು. ಕವಲುಗಳಿರದ ಎಲೆಗಳಿರುವ ಬಳ್ಳಿಯ ಜಾತಿಗಳೂ ಇವೆ. ಬಿಳಿ, ಗುಲಾಬಿ ಕೆಂಪು, ಕಿತ್ತಳೆ, ಹಳದಿ ತಿರುಳಿನ ಗಡ್ಡೆಗಳನ್ನು ಹೊಂದಿದ ಸಿಹಿ ಗೆಣಸಿನ ಬಳ್ಳಿಗೆ ಹಸಿರು, ನಸು ಹಸಿರು, ನಸು ನೇರಳೆ ಬಣ್ಣಗಳ ಮಿಶ್ರಣದ ಎಲೆಗಳಿರುತ್ತವೆ. ಇದರ ಎಲೆಗಳು ಎಳತರಲ್ಲಿ ಕೆಂಪು ಮಿಶ್ರಿತ ನೇರಳೆ ಬಣ್ಣದಲ್ಲಿ ಮುದ್ದು ಮುದ್ದಾಗಿ ಕಾಣಿಸುತ್ತವೆ. ಎಲೆ ಹಾಗೂ ಎಳೆ ಚಿಗುರನ್ನು ಪಲ್ಯ, ತಂಬುಳಿಗಾಗಿ ಮಾತ್ರವಲ್ಲದೆ ವಿಶ್ವಾದ್ಯಂತ ತರಕಾರಿಯಾಗಿಯೂ ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಸುಗ್ಗಿ ಸಂಕ್ರಾಂತಿಯಂದು ಕಡಲೆಕಾಯಿ, ಹಸಿ ಅವರೆಯ ಜೊತೆ ಸಿಹಿಗೆಣಸಿನ ತಿನಿಸು ಸಾಂಪ್ರದಾಯಿಕವಾಗಿದೆ. ಜಪಾನ್ ನಲ್ಲಿ ಬಹಳ ಹಿಂದಿನಿಂದಲೂ ಸಿಹಿಗೆಣಸನ್ನು ಆಹಾರವಾಗಿ ಮಾತ್ರವಲ್ಲದೆ ಆಲ್ಕೋಹಾಲ್ ಗಾಗಿಯೂ ಬಳಸುತ್ತಾರಂತೆ.!
ಸಿಹಿ ಗೆಣಸಿನ ಬಳ್ಳಿಯ ತುದಿಯ ಸನಿಹದ ತುಂಡುಗಳನ್ನು ಅಥವಾ ಚಿಗುರಿದ ಗಡ್ಡೆಗಳನ್ನು ಕತ್ತರಿಸಿ ನೆಡಲಾಗುತ್ತದೆ. ನೀರಾವರಿ ಇದ್ದಲ್ಲಿ ಅಥವಾ ಮಳೆಗಾಲದಲ್ಲೇ ಆದರೂ ಸ್ವಲ್ಪ ಉತ್ತಮ ಮಣ್ಣು ಮತ್ತು ಸಾವಯವ ಗೊಬ್ಬರದ ಸಹಕಾರದಿಂದ ನೆಟ್ಟು ಬಿಟ್ಟರೆ ಜಾಗವಿದ್ದಲ್ಲೆಲ್ಲಾ ನೆಲದಮೇಲೆ ಹರಿದಾಡುವ ಈ ಬಳ್ಳಿ ತನ್ನುದ್ದಕ್ಕೂ ಗೆಣ್ಣುಗಳಲ್ಲಿ ಬೇರುಗಳನ್ನು ಚಾಚುತ್ತಾ ಬಳ್ಳಿಯ ಮೂಲದಲ್ಲಿ ಅಂದರೆ ನೆಟ್ಟಲ್ಲಿ ಹೆಚ್ಚಿನ ಪ್ರಮಾಣದ ಬೇರುಗಳು ಆಹಾರ ಶೇಖರಣೆಯ ಕಾರ್ಯದಲ್ಲಿ ಭಾಗವಹಿಸಿ ದಪ್ಪನೆಯ ಭಾರವಾದ (ಗಡ್ಡೆ) ಗೆಣಸಿನ ಬೆಳವಣಿಗೆಯಾಗುತ್ತದೆ. ಇದರ ರುಚಿಯು ಮಧುರವಾಗಿದ್ದು ಕಾಡುಹಂದಿ, ಹೆಗ್ಗಣ, ಶತಪದಿಗಳಿಗೆ ಬಹುಪ್ರಿಯ. ಈ ನಿಷ್ಪಾಪಿ ಸಿಹಿಗೆಣಸಿನಿಂದ ಪಲ್ಯ, ಹಪ್ಪಳ, ರೊಟ್ಟಿ, ರಸಪಾಕ, ಚಿಪ್ಸ್ ತಯಾರಿಸಿದರೆ ಬಳ್ಳಿ ದನಕರುಗಳಿಗೆ ಉತ್ತಮ ಮೇವಾಗಿದೆ. ಈ ಗಡ್ಡೆಗಳಲ್ಲಿ ಬೀಟಾ ಕೆರೋಟಿನ್ , ವಿಟಮಿನ್ A , B6, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೇಸಿಯಮ್, ಝಿಂಕ್, ರಂಜಕ, ಸೋಡಿಯಂಗಳಿದ್ದು ಹೃದಯ ರಕ್ತನಾಳ ರಕ್ಷಣೆ, ಕ್ಯಾನ್ಸರ್ ವಿರೋಧಿ ಸ್ಮರಣಶಕ್ತಿ ಸುಧಾರಣೆ, ಚಯಾಪಚಯ ಅಸ್ವಸ್ಥತೆ, ಕರುಳಿನ ತಡೆಗೋಡೆಯ ಆರೋಗ್ಯದಲ್ಲಿ ಮುಖ್ಯ ಪಾತ್ರವಹಿಸುವ ಶಕ್ತಿ ಹೊಂದಿದೆ. ಮಧುಮೇಹವಿದ್ದವರೂ ಬಳಸಬಹುದು ಅನ್ನುವ ಅರ್ಹತೆ ಪಡೆದಿದೆ. ಫೈಬರ್ ಹೆಚ್ಚು ಇರುವುದರಿಂದ ಮಲಬದ್ದತೆ ನಿವಾರಣೆಯಾಗುತ್ತದೆ.
ನೆಟ್ಟು ಮೂರ್ನಾಲ್ಕು ತಿಂಗಳಲ್ಲಿ ಕಟಾವಿಗೆ ಬರುವ ಈ ಗೆಣಸಿನ ಬಳ್ಳಿ ನೆಲವನ್ನು ಮುಚ್ಚಿ ಮಣ್ಣಿನ ಸವಕಳಿ ತಪ್ಪಿಸುವುದೇ ಅಲ್ಲದೆ ಕಳೆಗಿಡಗಳ ಬೆಳವಣಿಗೆಯನ್ನೂ ತಪ್ಪಿಸುತ್ತದೆ. ವರ್ಷವಿಡೀ ಆಹಾರ ನೀಡುವ ಸಿಹಿಗೆಣಸು ಬಹುವಾರ್ಷಿಕ ಸಸ್ಯವೇ ಆದರೂ ಕೃಷಿಯಲ್ಲಿ ಏಕವಾರ್ಷಿಕ ಸಸ್ಯವಾಗಿದೆ. ಒಂಟಿಯಾಗಿ ಅಥವಾ ಕೆಲವೊಮ್ಮೆ ಹೆಚ್ಚು ಹೂವುಗಳು ಅರಳುವಾಗ ಗುಲಾಬಿ, ನೇರಳೆ ಬಣ್ಣಗಳಿಂದ ಕಂಗೊಳಿಸುವ ಕಾರಣ ಸೌಂದರ್ಯಕ್ಕಾಗಿಯೂ ಇದನ್ನು ಬೆಳೆಸುವರು. ಇದರ ಕಪ್ಪಗಿನ ಸಣ್ಣ ಬೀಜಗಳ ಸಿಪ್ಪೆ ಬಲು ಕಠಿಣವಾಗಿರುವುದರಿಂದ ಮೊಳಕೆ ಬರುವ ಕಾಲಾವಧಿ ಅಧಿಕವಾಗಿದೆ. ಕೆಲವೊಮ್ಮೆ ಒಂದು ವರ್ಷದಷ್ಟು ಕಾಲ ಸುಮ್ಮನಿದ್ದು ಬಳಿಕವೂ ಮೊಳಕೆಯೊಡೆಯಬಹುದೆನ್ನುತ್ತಾರೆ. ಹಾಗಾಗಿ ರೈತರು ಬೀಜ ಬಿತ್ತನೆಯ ಸಾಹಸ ಮಾಡುವುದಿಲ್ಲ. ದಿನವಿಡೀ ಬಿಸಿಲು ಬೀಳುವ ಪ್ರದೇಶಗಳಲ್ಲಿ ಹೂವುಗಳೂ ಕಡಿಮೆ ಮಾತ್ರವಲ್ಲದೇ ಬೀಜಗಳು ಹುಟ್ಟಿಕೊಳ್ಳುವುದೇ ಇಲ್ಲವೆಂಬುದು ಇದರ ವಿಶೇಷತೆ.
ಮಕ್ಕಳೇ, ನೀವೂ ಈ ಸಿಹಿಗೆಣಸನ್ನು ತಿಂದಿರಬಹುದಲ್ಲವೇ! ಮುಂದಿನ ಬಾರಿ ತಿನ್ನುವಾಗ ಪರಿಚಯವನ್ನು ನೆನಪು ಮಾಡಿಕೊಳ್ಳುತ್ತಾ ಆಸ್ವಾದಿಸಿರಿ.
ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************