-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 128

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 128

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 128
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203



ಪ್ರೀತಿಯ ಮಕ್ಕಳೇ, ಕಳೆದ ವಾರ ನಾನು ಜೀವಿಗಳ ಜನನದ ಜೈವಿಕ ಉದ್ಧೇಶದ ಬಗ್ಗೆ ಹೇಳುತ್ತಾ ತಮ್ಮ ವಂಶವನ್ನು ಮುಂದುವರಿಸುವ ಉದ್ದೇಶ ಎಂದು ಹೇಳಿದ್ದೆ. ಮೇಲ್ವರ್ಗದ ಜೀವಿಯಲ್ಲಿ ಎರಡು ಹಂತಗಳನ್ನು ಗುರುತಿಸಬಹುದು. ಒಂದು ದೇಹ ಬೆಳವಣಿಗೆ (vegetative growth) ಇನ್ನೊಂದು ವಂಶಾಭಿವೃದ್ಧಿ (reproduction). ಮಾವಿನ ಗಿಡವನ್ನು ನೋಡುತ್ತೀರಲ್ಲ. ಅದು ಚಿಗಿತು ಹೊಸ ಚಿಗುರು ಎಲೆ ಮತ್ತು ಟೊಂಗೆಗಳನ್ನು ಬೆಳೆಸಿಕೊಳ್ಳುತ್ತವೆ. ಇದಕ್ಕೆ ಅಪಾರ ಪ್ರಮಾಣದ ಶಕ್ತಿ ವ್ಯಯವಾಗುತ್ತದೆ. ಆದ್ದರಿಂದ ಕೃಷಿಕರು ಈ ಹೆಚ್ಚುವರಿ ದೇಹದ ಭಾಗಗಳನ್ನು ಕತ್ತರಿಸುವುದನ್ನು ನೋಡಬಹುದು. ವಾಟೆಕಾಯಿಯ ಕಾಯಿಗಳನ್ನು ಕೊಯ್ದ ನಂತರ ಅದರ ಟೊಂಗೆ ಮತ್ತು ತುದಿಗಳಿಗೆ ಕೋಲಿನಿಂದ ಬಡಿಯುವುದನ್ನು ನೋಡಿದ್ದೀರಾ? ತೆಂಗು ಮತ್ತು ಅಡಿಕೆ ಮರಗಳ ಹಳೆಯ ಬೇರುಗಳನ್ನು ಕತ್ತರಿಸಲಾಗುತ್ತದೆ. ಆಧುನಿಕ ಗೇರು ಕೃಷಿಯಲ್ಲಿ ಗೇರು ಗಿಡಗಳ ನಡುವಿನ ಅಂತರ ಕಡಿಮೆ ಮಾಡಿ ಟೊಂಗೆಗಳನ್ನು ಪ್ರತಿ ವರ್ಷ ಕತ್ತರಿಸುತ್ತಾರೆ. ರಂಬುಟಾನ್ ಮುಂದಿನ ವರ್ಷ ಒಳ್ಳೆಯ ಬೆಳೆ ಕೊಡಬೇಕಾದರೆ ಹಳೆಯ ಟೊಂಗೆಗಳನ್ನು ಕತ್ತರಿಸಬೇಕು. ಕಾಫಿಯ ಗಿಡವನ್ನು ಮುಕ್ತವಾಗಿ ಬೆಳೆಯಲು ಬಿಡುವುದಿಲ್ಲ. ಇದು ರೈತರು ಬಹಳ ಹಳೆಯ ಕಾಲದಿಂದ ಅನುಸರಿಸಿಕೊಂಡು ಬಂದ ಪದ್ಧತಿ. ಇದನ್ನು ವಿಜ್ಞಾನದ ಪರಿಭಾಷೆಯಲ್ಲಿ ಪ್ರೂನಿಂಗ್ (pruning) ಎನ್ನುವುದು. ಇನ್ನೊಂದು ವಂಶಾಭಿವೃದ್ಧಿಯ ಹಂತ. ಕಾಡು ಮಾವಿನ ಮರಗಳನ್ನು ನೋಡಿದ್ದೀರಾ? ಅವು ಹೂ ಬಿಟ್ಟ ನಂತರ ಚಿಗುರುತ್ತವೆ ಹೊರತು ಚಿಗುರಿ ಹೂ ಬಿಡುವುದಿಲ್ಲ. ಅಂದರೆ ವಂಶಾಭಿವೃದ್ಧಿ ಅವುಗಳ ಆದ್ಯತೆ.

ನೀವು ಲಿಂಬೆಯ ಗಿಡಗಳನ್ನು ನೋಡಿದ್ದೀರಲ್ಲ. ಅವುಗಳಿಗೆ ವಿಫುಲವಾಗಿ ನೀರು ಬಿಡುತ್ತಾ ಹೋದರೆ ಅವು ಹೊಸ ಚಿಗುರು ಬಿಡುತ್ತಾ ನಮ್ಮ ದೇಹ (ಕಾಯಜ) ಬೆಳವಣಿಗೆಯ ಕಡೆಗೆ ಗಮನ ಹರಿಸುವುದಿಲ್ಲ. ಅಂದರೆ ಹೂ ಬಿಡುವುದೇ ಇಲ್ಲ. ಅಂತಹ ಕಾಯಿ ನೀಡದ ಗಿಡಗಳಿಂದ ಪ್ರಯೋಜನವಾದರೂ ಏನು? ರೈತ ಏಕಾಏಕಿ ನೀರು ಬಿಡುವುದನ್ನು ನಿಲ್ಲಿಸುತ್ತಾನೆ. ಆಗ ಲಿಂಬೆಯ ಗಿಡಕ್ಕೆ ಹೆದರಿಕೆ ಶುರುವಾಗುತ್ತದೆ. ಅಯ್ಯೋ ನನಗೆ ನೀರು ಸಿಗುತ್ತಿಲ್ಲ. ನಾನು ಸತ್ತು ಹೋಗುತ್ತೇನೆ. ನನ್ನ ವಂಶ ಇಲ್ಲಿಗೆ ಮುಗಿದು ಹೋಗುತ್ತದೆ ಎಂಬ ಒತ್ತಡಕ್ಕೆ (stress) ಸಿಲುಕುತ್ತದೆ. ಅದು ಹೊಸ ಚಿಗುರು, ರೆಂಬೆಗಳನ್ನು ಉತ್ಪಾದಿಸುವುದನ್ನು ನಿಲ್ಲಿಸುತ್ತವೆ ಮತ್ತು ತಮ್ಮ ವಂಶವನ್ನು ಮುಂದುವರಿಸುವ (continuing progeny) ಹೂಗಳ ಉತ್ಪಾದನೆಯ ಕಡೆಗೆ ಹೊರಳುತ್ತವೆ. ಇದನ್ನು ನಾವು stress fruiting ಎಂದು ಕರೆಯುವುದು. ನೀವು ಒತ್ತಡವನ್ನುಂಟು ಮಾಡದಿದ್ದಲ್ಲಿ ಲಿಂಬೆ ಹೂ ಬಿಡುವುದೇ ಇಲ್ಲ. ನಮಗೆ ಇದೇ ಅಭ್ಯಾಸ. ನೀರು ಬೇಕಾದಷ್ಟಿದ್ದರೆ ವಿದ್ಯತ್ ಉಚಿತವಾಗಿರುವುದರಿಂದ ಪ್ರತಿದಿನ ತೆಂಗು ಅಡಿಕೆಗಳಿಗೆ ನೀರು ಬಿಡುವವರಿದ್ದಾರೆ. ಆದರೆ ನಮ್ಮ ಹಿರಿಯರು ತೆಂಗು ಅಡಿಕೆಗಳಿಗೆ ಬೇರು ಕಾದು ನೀರು ಬಿಡುವುದು. ಈ ಬೇರು ಕಾಯುವುದು ಎಂದರೆ ಒತ್ತಡವನ್ನುಂಟು ಮಾಡುವುದು ಎಂದರ್ಥ. ಆದ್ದರಿಂದ ಎರಡು ನೀರುಗಳ ಮಧ್ಯೆ ಕನಿಷ್ಠ 4 ದಿನಗಳ ಅಂತರವಿರಬೇಕು.

2003 ರ ಅವಧಿಯಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF 2003) ಪಠ್ಯವಸ್ತುವಿನಿಂದಾಚೆಗಿನ ಕಲಿಕೆಗೆ (teaching beyond the text book) ಒತ್ತು ನೀಡುತ್ತದೆ. ನಾನು ಅದನ್ನೇ ನನ್ನ ಬಿ.ಇಡಿ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೆ‌. ಪಠ್ಯ ಪುಸ್ತಕ ಹೇಳಬೇಕಾದುದನ್ನು ಪಠ್ಯ ಪುಸ್ತಕವೇ ಹೇಳುತ್ತದೆ. ಶಿಕ್ಷಕ ಹೇಳಬೇಕಾದುದು ಹೆಚ್ಚುವರಿ ಮತ್ತು ಪೂರಕವಾದುದನ್ನು ಎನ್ನುವುದು ನನ್ನ ನಿಲುವು. ಅದನ್ನೇ ಅನುಸರಿಸಿ ಯಶಸ್ಸು ಕಂಡವರಿದ್ದಾರೆ. ವಿದ್ಯಾರ್ಥಿಗಳಿದ್ದವರು ಸ್ನೇಹಿತರಾಗಿದ್ದಾರೆ. ಅವರು ಆಗಾಗ ಫೋನಾಯಿಸಿ ಚರ್ಚಿಸುತ್ತಾರೆ. ಕಳೆದ ಸಂಚಿಕೆಯನ್ನು ಓದಿದ ಒಬ್ಬ ಮಿತ್ರ ಈ stressed fruiting ಇರುವುದಿಲ್ಲ ಅಲ್ಲವಾ ಸರ್ ಎಂದು ಕೇಳಿದ್ದಾನೆ. ಇಲ್ಲಿಯೂ stressed fruiting ಇದೆ ಆದರೆ ಭಿನ್ನವಾದ ರೂಪದಲ್ಲಿದೆ ಎಂದೆ. ಹೇಗೆ ಸರ್ ಕೇಳಿದ. ಜನಸಂಖ್ಯೆಯ ಏರಿಕೆ ಎಲ್ಲಿ ಜಾಸ್ತಿ ಉತ್ತರ ಭಾರತವೋ ದಕ್ಷಿಣ ಭಾರತವೋ ಎಂದು ಕೇಳಿದೆ. ಸಹಜವಾಗಿ ಬಡತನದ ರಾಜ್ಯಗಳು ಎಂದ. ಹಾಗಾದರೆ ಕರ್ನಾಟಕವನ್ನು ತೆಗೆದುಕೊಂಡರೆ ಎಲ್ಲಿ ಜಾಸ್ತಿ ಕೇಳಿದೆ. ಉತ್ತರ ಕರ್ನಾಟಕ ಸರ್ ದಕ್ಷಿಣ ಕನ್ನಡ ಉಡುಪಿಗಳಲ್ಲಿ ತೀರಾ ಕಡಿಮೆ ಎಂದ. ಉತ್ತರ ಭಾರತ ಮತ್ತು ದಕ್ಷಿಣ ಭಾಗಗಳನ್ನು ಹೋಲಿಸಿದರೆ ಆರೋಗ್ಯ ಸೇವೆಗಳು ದಕ್ಷಿಣ ಭಾರತದಲ್ಲಿ ಚೆನ್ನಾಗಿದೆ. ಉತ್ತರ ಕರ್ನಾಟಕಕ್ಕಿಂತ ದಕ್ಷಿಣ ಕನ್ನಡದಲ್ಲಿ ಚೆನ್ನಾಗಿದೆ. ಎಲ್ಲಿ ಆರೋಗ್ಯ ಸೇವೆಗಳು ಚೆನ್ನಾಗಿರುತ್ತವೆಯೋ ಅಲ್ಲಿ ಹುಟ್ಟಿದ ಎಲ್ಲಾ ಮಕ್ಕಳೂ ಬದುಕುತ್ತವೆ. ಆದ್ದರಿಂದ ಯಾವ ಒತ್ತಡವೂ ಇರುವುದಿಲ್ಲ. ಆದ್ದರಿಂದ ಸಹಜವಾಗಿ ಜನನದ ದರ ಕಡಿಮೆ ಇರುತ್ತದೆ ಎಂದೆ. 

ಕಾಡಿನ ಹುಲಿಯನ್ನು ನೋಡಿದ್ದೀರಿ ತಾನೆ. ಅದು ಒಮ್ಮೆ ಎರಡೋ ಮೂರೋ ಮರಿ ಹಾಕುತ್ತದೆ. ಕಾಡಿನಲ್ಲಿ ಬೇಟೆ ಪ್ರಾಣಿಗಳು ಕಡಿಮೆ ಇದೆ ಎಂದು ಅರಿವಿಗೆ ಬಂದಾಗ ತನ್ನ ಒಂದು ಮರಿಯನ್ನು ತಾನೇ ಕೊಂದು ತಿನ್ನುತ್ತದೆ. ಇದು ಸ್ವ ಜಾತಿ ಭಕ್ಷಣೆ (cannibalism). ಸ್ವ ಜಾತಿ ಭಕ್ಷಣೆ ಹುಲಿಗಳಲ್ಲಿ ಇಲ್ಲ. ಆದರೆ ತನ್ನ ಮುಂದಿನ ಪೀಳಿಗೆ ಸದೃಢವಾಗಿರಬೇಕು ಆದರೆ ಅವುಗಳೇ ಅಸ್ತಿತ್ವಕ್ಕೆ ಪರಸ್ಪರ ಹೋರಾಡಬಾರದು ಎಂಬ ಒತ್ತಡ ಈ ನಡವಳಿಕೆಗೆ ಕಾರಣ. ಕಪ್ಪೆ ಸಾವಿರಾರು ಮೊಟ್ಟೆ ಇಡುವುದು ಕೋಳಿಗೆ ಇಪ್ಪತ್ತು ಮರಿಗಳಾದರೆ ನವಿಲು ಮೂರೇ ಮೊಟ್ಟೆ ಇಡುವುದು ಇದಕ್ಕೆ ಸಮೀಪವರ್ತಿ ನಡಳಿಕೆಗಳು. ಹೀಗೆ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ.

ಓಹ್ ವಿಷಯಾಂತರ ಮಾಡಿದೆನಾ? ಇಲ್ಲ ವಿಷಯ ಮುಂದಿನ ವಾರ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************


Ads on article

Advertise in articles 1

advertising articles 2

Advertise under the article