ಪಯಣ : ಸಂಚಿಕೆ - 83 (ಬನ್ನಿ ಪ್ರವಾಸ ಹೋಗೋಣ)
Friday, February 27, 2026
Edit
ಪಯಣ : ಸಂಚಿಕೆ - 83 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಕೊಡಗಿನ 'ಮೃತ್ಯುಂಜಯಸ್ವಾಮಿ ದೇವಳ' ಕ್ಕೆ ಪಯಣ ಮಾಡೋಣ ಬನ್ನಿ....
ದಕ್ಷಿಣ ಭಾರತದ ಕಾಶ್ಮೀರ, ಬ್ರಿಟಿಷರ ಪಾಲಿಗೆ ಭಾರತದ ಸ್ಕಾಟ್‌ಲೆಂಡ್ ಖ್ಯಾತಿಯ, ಯೋಧರ ನಾಡು ಕೊಡಗು ಪ್ರಕೃತಿ ಸಿರಿ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಪುರಾತನ ದೇಗುಲಗಳು, ಗಿರಿ - ಶೃಂಗಗಳು, ಕಾಫಿ ತೋಟಗಳು, ಹೆಸರಾಂತ ನದಿಮೂಲಗಳು, ಜಲಪಾತ, ಅಮೋಘ ಅರಣ್ಯ ಸಂಪತ್ತು. ಅಷ್ಟೇ ಏಕೆ ಸದಾ ತಂಪಾದ ಪರಿಸರದಿಂದ ಕೂಡಿರುವ ಇಲ್ಲಿನ ಸೊಬಗು ಆಸ್ವಾದಿಸಲು ಐಷಾರಾಮಿ ರೆಸಾರ್ಟ್‌ಗಳು ಕೊಡಗು (ಕೂರ್ಗ್) ಪ್ರವಾಸೋದ್ಯಮವನ್ನು ಶ್ರೀಮಂತವಾಗಿಸಿವೆ ಎಂದರೆ ತಪ್ಪಾಗಲಾರದು. ಶೌರ್ಯ, ಸಾಹಸಕ್ಕೂ ಈ ನಾಡಿನ ಕೊಡುಗೆ ಗಮನಾರ್ಹ. ಕೊಡಗಿನ ತುದಿ ಕೇರಳದ ಅಂಚಿನಲ್ಲಿರುವ ಶ್ರೀ ಮೃತ್ಯುಂಜಯಸ್ವಾಮಿ ದೇವಳ ಈ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದು ವಿಶೇಷ ತಾಣ.
ದಕ್ಷಿಣ ಕೊಡಗಿನ ಹುದಿಕೇರಿ (ವಯಾ) ಅಂಚೆ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ಶ್ರೀ ಮೃತ್ಯುಂಜಯ ದೇವಸ್ಥಾನವಿದೆ. ಈ ದೇವಳಕ್ಕೆ ನೂರಾರು ವರ್ಷದ ಹಿನ್ನೆಲೆ ಇದೆ. ಬಯಸಿದವರಿಗೆ ಭಾಗ್ಯ ನೀಡುವ ಮೃತ್ಯುಂಜಯನ ಮಹಿಮೆಯೂ ಅಷ್ಟೇ ಪ್ರಬಲವಾಗಿದೆ. ಸಾವಿರಾರು ವರ್ಷಗಳ ಹಿಂದೆ ರಾಜ ಚೆರಕಲ್ ಎಂಬಾತ 'ಮರೆ ನಾಟ್' ಎಂಬ ಊರಿನಲ್ಲಿ ಆಳುತ್ತಿದ್ದ. ಆತನಿಗೆ ಮಕ್ಕಳು ಜನಿಸದ ಕಾರಣ ಕೇರಳ ಕೋಟೆಯ ಮೃತ್ಯುಂಜಯನ ಪ್ರಾರ್ಥನೆ ಮಾಡಿ ಇಬ್ಬರು ಪುತ್ರರನ್ನು ಪಡೆದರು. ನಂತರ ಕಣ್ಣೂರು ರಾಜ ಯುದ್ಧಕ್ಕೆ ಬಂದರು. ಆದರೆ, ದೇವರ ಕೃಪೆಯಿಂದ ಅವರು ಸೋತು ಹಿಂತಿರುಗಿದರು. ದೇವರ ಕೃಪೆಯಿಂದ ಯುದ್ಧದಲ್ಲಿ ಜಯಶಾಲಿಯಾದ ಚೆರಕಲ್ ರಾಜ ಬಾಡರಗೇರಿಯಲ್ಲಿ ದೇವಾಲಯ ಕಟ್ಟಿಸಿದ. ಅಂದಿನಿಂದ ಇಂದಿನವರೆಗೂ ಅಲ್ಲಿನ ಸ್ಥಳೀಯರಿಗೆ ಮಾತ್ರ ಪ್ರೀತಿಪಾತ್ರನಾಗಿದ್ದ ಮೃತ್ಯುಂಜಯ ದೇವಸ್ಥಾನಕ್ಕೆ ಇಂದು ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಿದ್ದು, ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ದೇವರು ಬಯಸಿದ್ದನ್ನು ಕೊಡುತ್ತಾರೆ ಎಂಬುದು ಆಚಲವಾಗಿದೆ.
ಕೂಟಿಯಾಲದಲ್ಲಿ ಬಿಟ್ಟಂಗಾಲ ಮತ್ತು ಹಾತೂರು ನದಿಗಳು ಸೇರಿ ಒಟ್ಟಾಗಿ ಸಾಗುತ್ತವೆ. ಬಿ. ಶೆಟ್ಟಿಗೇರಿಯಿಂದ - ಪಶ್ಚಿಮ ದಿಕ್ಕಿಗೆ ಹರಿಯುತ್ತಾ ಬರಪೊಳೆ ಎಂಬಲ್ಲಿ ಆಳದ ನದಿಯಾಗಿ ಕೇರಳದ ಮಾಕುಟ್ಟ ಕೂಟ ಹೊಳೆ ಸೇರುತ್ತವೆ. ಇರಟಿಯಲ್ಲಿ ಅರಳೆ ಹೊಳೆಯೊಂದಿಗೆ ಮತ್ತೆ ಸಂಗಮವಾಗಿ ಅರಬ್ಬಿಸಮುದ್ರ ಸೇರುತ್ತವೆ. ಟಾಟಾ ಅವರ ಸ್ಪೇನ್ ಲೋರ್‌ನ ಟೀ ಎಸ್ಟೇಟ್, ಇರ್ಮ ಜಲಪಾತ, ರಾಮೇಶ್ವರ ದೇವಸ್ಥಾನ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ (ನಾಗರಹೊಳೆ ಉದ್ಯಾನವನ ), ಕಣ್ಮನ ಸೆಳೆಯುವ ಪಶ್ಚಿಮ ಘಟ್ಟಗಳ ಇಳಿಜಾರು ಸುತ್ತಮುತ್ತ ಕಾಫಿ ಎಸ್ಟೇಟ್‌ಗಳು ನೋಡುವ ಅವಕಾಶ ಇಲ್ಲಿದೆ. ಇವೆಲ್ಲವನ್ನೂ ಸವಿಯುವ ಅದ್ಭುತ ಅವಕಾಶ ಪ್ರವಾಸಿಗರಿಗೆ ಇಲ್ಲಿದೆ.
ಮಾರ್ಗ : ಮೃತ್ಯುಂಜಯ ದೇವಳಕ್ಕೆ ಹುದಿಕೇರಿಯಿಂದ ಹೈಸೂಡ್ಲೂರು ಮಾರ್ಗದಿಂದ 9 ಕಿ.ಮೀ. ದೂರ, ವಿರಾಜಪೇಟೆ ಸಮೀಪದ ಬಿಟ್ಟಂಗಾಲದಿಂದ ಕೋಟಿಯಾಲ ಮಾರ್ಗವಾಗಿ 15 ಕಿ.ಮೀ. ದೂರ ಕ್ರಮಿಸಬೇಕು. ಮೈಸೂರು, ಮಂಗಳೂರು ಹತ್ತಿರದ ರೈಲು-ವಿಮಾನ ನಿಲ್ದಾಣಗಳು, ಬೆಂಗಳೂರು, ಮೈಸೂರು, ಮಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಉತ್ತಮ ರಸ್ತೆ ಸಂಪರ್ಕ ಹಾಗೂ ಬಸ್ ವ್ಯವಸ್ಥೆ ಇದೆ. ಗೋಣಿಕೊಪ್ಪಲು, ಮೊನ್ನಂ ಪೇಟೆ, ವಿರಾಜಪೇಟೆಗಳಲ್ಲಿ ತಂಗಲು ಲಾಡ್ಜ್‌ಗಳಿವೆ.
"ಪ್ರವಾಸ ಮನಸ್ಸಿನ ಗೊಂದಲ ನಿವಾರಿಸುತ್ತದೆ. ಶಾಂತ ಪರಿಸರದಲ್ಲಿ ಚಿಂತನೆ ಸ್ಪಷ್ಟವಾಗುತ್ತದೆ. ಪ್ರವಾಸ ಮನಸ್ಸಿನ ನಲಿವು"
'ಯೋಧರ ನಾಡು, ಅಮೋಘ ಅರಣ್ಯ ಸಂಪತ್ತಿನ ಬೀಡು, ನದಿಜಲಧಾರೆ, ಹೃನ್ಮನಗಳನ್ನು ತಣಿಸುವ ತಂಗಾಳಿ, ಮೃತ್ಯುಂಜಯನ ನೆಲೆ' ಬನ್ನಿ ಒಮ್ಮೆ ಈ ಧಾರ್ಮಿಕ ನೆಲೆ ನೋಡಲು...
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************