-->
ಜೀವನ ಸಂಭ್ರಮ : ಸಂಚಿಕೆ - 229

ಜೀವನ ಸಂಭ್ರಮ : ಸಂಚಿಕೆ - 229

ಜೀವನ ಸಂಭ್ರಮ : ಸಂಚಿಕೆ - 229
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
               
ಮಕ್ಕಳೇ, ಇಂದು ಉದಾಸೀನ ಏತಕ್ಕೆ ಬೇಕು?. ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಜಗತ್ತು ದ್ವಂದ್ವದಿಂದ ಕೂಡಿದೆ. ದ್ವಂದ್ವ ಎಂದರೆ ಹೊಂದಿಕೊಂಡ ಎರಡು. ಉದಾಹರಣೆಗೆ ಬಲ-ಎಡ, ಮೇಲೆ-ಕೆಳಗೆ, ಮುಂದೆ-ಹಿಂದೆ. ಒಂದೇ ಇರುವುದಿಲ್ಲ. ಬರೀ ಬಲ ಇರುವುದಿಲ್ಲ. ಆ ಎರಡು ಇದ್ದರೆ ಅರ್ಥ. ಇದೆ ಜಗತ್ತಿಗೆ ಸಂಸಾರ, ಪ್ರಪಂಚ ಎನ್ನುವರು. ಅಂದರೆ ದ್ವಂದ್ವಗಳ ವಿಸ್ತಾರ. ದ್ವಂದ್ವ ಇಲ್ಲದಿದ್ದರೆ ಮತಿಶಾಂತ. ದ್ವಂದ್ವ ಇರುವವರೆಗೆ ಭಾವ ಹೊಯ್ದಾಡುತ್ತದೆ. ದ್ವಂದ್ವ ಇಲ್ಲದಿದ್ದರೆ ಭಾವಶಾಂತಿ ಇರುತ್ತದೆ. ಸತಿ-ಪತಿ, ಅತ್ತೆ-ಸೊಸೆ, ಅಪ್ಪ- ಮಗ, ಗುರು-ಶಿಷ್ಯ. ಬರಿ ಸತಿ ಅರ್ಥವಿಲ್ಲ. ಇಂತಹ ವ್ಯವಹಾರ ಪ್ರಾಪಂಚಿಕ ವ್ಯವಹಾರ.

ಜಗತ್ತು ದ್ವಂದ್ವ ವ್ಯವಹಾರದಿಂದ ತುಂಬಿಹೋಗಿದೆ. ಕೆಳಗಿದ್ದವನಿಗೆ ಮೇಲಿನ ಆಸೆ, ಮೇಲಿದ್ದವನಿಗೆ ಕೆಳಗಿನ ಆಸೆ. ಬದುಕಿರುವುದು ಹಾಗೆ. ದ್ವಂದ್ವಮೀರಿ ಬದುಕಲು ಆಗುವುದಿಲ್ಲ. ಪೂರ್ವ - ಪಶ್ಚಿಮ, ಉತ್ತರ-ದಕ್ಷಿಣ. ಪಶ್ಚಿಮದ ಕಲ್ಪನೆ ಇಲ್ಲದಿದ್ದರೆ ಪೂರ್ವದ ಕಲ್ಪನೆ ಇಲ್ಲ. ಹಾಗೆ ದಕ್ಷಿಣದ ಕಲ್ಪನೆ ಇಲ್ಲದಿದ್ದರೆ ಉತ್ತರದ ಕಲ್ಪನೆ ಇಲ್ಲ. ಒಂದು ಹೋಯಿತು ಅಂದರೆ ಇನ್ನೊಂದು ಇಲ್ಲ. ವಿರುದ್ಧ ಆದರೆ ಮೇಳವಿರುತ್ತದೆ. ದೇವ ಅಂದರೆ ದ್ವಂದ್ವ ಇಲ್ಲದ್ದು. ಸಂಬಂಧಗಳೆಲ್ಲ ದ್ವಂದ್ವವೆ. ಭೇದ ಇರುವವರಿಗೆ ಸುಖ ದುಃಖ ಇರುತ್ತದೆ. ಶಾಂತಿ ಅಂದರೆ ಸುಖವಲ್ಲ. ದುಃಖವಲ್ಲ. ಭಾವರಹಿತ ಸ್ಥಿತಿ. ದ್ವಂದ್ವ ಇರುವುದರಿಂದ ಕೆಲವು ಹಿಡಿಸುತ್ತದೆ. ಕೆಲವು ಹಿಡಿಸುವುದಿಲ್ಲ. ಕೆಲವೊಂದನ್ನು ಪ್ರೀತಿಸುತ್ತೇವೆ. ಕೆಲವೊಂದನ್ನು ದ್ವೇಷಿಸುತ್ತೇವೆ. ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆ ಎಂದರೆ ಉಳಿದ ಮಕ್ಕಳನ್ನು ಪ್ರೀತಿಸುವುದಿಲ್ಲ ಎಂದು ಅರ್ಥ. ಎಡ ಅಶುಭ ಅಂದರೆ ಬಲ ಶುಭ ಅಂತಾನೆ ಅರ್ಥ. ಇಂತಹುದರಲ್ಲಿ ಸುಂದರವಾಗಿ ಬದುಕಬೇಕಲ್ಲ.

ಬದುಕು ಅಂದಾಗ ಎರಡು ಇರುವುದೇ. ಹಿತ-ಅಹಿತ, ಪ್ರಿಯ-ಅಪ್ರಿಯ, ಇದ್ದೇ ಇರುತ್ತದೆ. ಪ್ರಿಯ ವಸ್ತು ಕಂಡಾಗ ಮನಸ್ಸು ಸೌಮ್ಯ ಹರುಷ ಕಾಣಬೇಕು. ಅಪ್ರಿಯ ವಸ್ತು ಕಂಡಾಗ ಭಾವ ಉದ್ರೇಕವಾಗದಂತೆ ಇಟ್ಟುಕೊಳ್ಳಬೇಕು. ಪ್ರಿಯದಿಂದ ಮನೋಹದೆಗೆಡಬಾರದು, ವಿಕೃತವಾಗಬಾರದು. ಅದಕ್ಕೆ ಗುರು ಹೇಳಿದ "ತಸ್ಮಿನ್ ಅನನ್ಯತಾ, ತದ್ ವಿರೋಧಿಸು ಉದಾಸೀನತ:". ವಿರೋಧಿಸುವ ಸಂಗತಿಗಳನ್ನು ಉದಾಸೀನ ಮಾಡು. ದ್ವೇಷ ಮಾಡಬೇಡ. ದ್ವೇಷದಿಂದ ಮನಸ್ಸು ಹೊಲಸಾಗುತ್ತದೆ. ಮೇಲೆ ನಿಂತು ಸುಮ್ಮನೆ ನೋಡುವುದು. ಉದಾಹರಣೆಗೆ ಒಂದು ಗಿಳಿ ಮರದ ಮೇಲೆ ಕುಳಿತಿದೆ. ಮರದ ಕೆಳಗೆ ರಸ್ತೆ ಇದೆ. ಅಲ್ಲಿ ಆಕ್ಸಿಡೆಂಟ್ ಆಗಿದೆ. ಪೊಲೀಸರು ಬಂದಿದ್ದಾರೆ. ಇದೆಲ್ಲವನ್ನು ಸುಮ್ಮನೆ ಗಿಳಿ ನೋಡುತ್ತಾ ಇದೆ. ಹಾಗೆ ಸುಮ್ಮನೆ ಕೇಳುವುದು. ಹೇಳುವಾಗ ನಮ್ಮ ಮನ ಒಪ್ಪುವಂತೆ ಹೇಳುವುದು‌. ಇದರಿಂದ ಪ್ರೇಮದ ವೃಕ್ಷ ಬೆಳೆಯುತ್ತದೆ. 

ಭಿನ್ನಾಭಿಪ್ರಾಯ ಹೇಗಿರುತ್ತೆ ಅನ್ನೋದಕ್ಕೆ ಒಂದು ಕಥೆ. ಒಬ್ಬ ಅಜ್ಜ ಮೊಮ್ಮಗ ಒಂದು ಸಣ್ಣ ಕುದುರೆಮರಿ ತೆಗೆದುಕೊಂಡು ನಡೆಸಿಕೊಂಡು ಹೊರಟಿರುತ್ತಾರೆ. ಮರಿ ಕುದುರೆ ಆದುದರಿಂದ ಅದಕ್ಕೆ ಬಾರ ಹಾಕದೆ ಅಜ್ಜ ಮೊಮ್ಮಗ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಎದುರಿಗೆ ಕೆಲವರು ಬಂದರು. ಹೇಳಿದರು "ಇಂತಹ ಸುಂದರ ಕುದುರೆ ಇಟ್ಟುಕೊಂಡು ನಡೆಯುತ್ತಾ ಹೋಗುತ್ತಿದ್ದೀರಲ್ಲ" ಅಂದರು. ಆಗ ಅಜ್ಜ ಮೊಮ್ಮಗನಿಗೆ ಸರಿ ಅನಿಸಿತು. ಆಗ ಮೊಮ್ಮಗನನ್ನು ಕುದುರೆ ಮೇಲೆ ಕೂರಿಸಿ, ಅಜ್ಜ ನಡೆದು ಹೋಗುತ್ತಿದ್ದನು. ಸ್ವಲ್ಪ ದೂರ ಹೋಗುವುದರಲ್ಲಿ ಇನ್ನೊಬ್ಬ ಭೇಟಿಯಾದ. ಆತ ಹೇಳಿದ, ಹುಡುಗನನ್ನು ಕುರಿತು "ಏನು ತಿಳಿಯುವುದಿಲ್ಲವೇ ನಿನಗೆ, ಮುದುಕನನ್ನು ನಡೆಸುತ್ತಾ ನೀನೆ ಮೇಲೆ ಕುಳಿತಿದ್ದೀಯಲ್ಲ" ಅಂದ. ಪಾಪ ಹುಡುಗನಿಗೆ ಏನು ಗೊತ್ತು?. ಕೆಳಗಿಳಿದು ಮುದುಕನನ್ನು ಕುದುರೆ ಮೇಲೆ ಕುಳ್ಳಿರಿಸಿ ಹೊರಟ. ಸ್ವಲ್ಪ ದೂರ ಹೋಗುವುದರಲ್ಲಿ ಇನ್ನೊಬ್ಬ ಎದುರಾಗಿ ಹೇಳಿದ, ಮುದುಕನನ್ನು ಕುರಿತು. "ನೀನು ಮುದುಕ, ಈ ಚಿಕ್ಕ ಹುಡುಗನನ್ನು ನಡೆಸಬಾರದು ಅಂತ ಗೊತ್ತಿಲ್ಲವೇ" ಅಂದ. ಆಗ ಮುದುಕ ಯೋಚಿಸಿ, ಮೊಮ್ಮಗನನ್ನು ಕುದುರೆ ಮೇಲೆ ಹತ್ತಿಕೊಂಡ. ಒಟ್ಟು ಇಬ್ಬರು ಮರಿ ಕುದುರೆ ಮೇಲೆ ಕುಳಿತರು. ಸ್ವಲ್ಪ ದೂರ ಹೋಗುವುದರಲ್ಲಿ ಮತ್ತೊಬ್ಬ ಎದುರಾಗಿ ಇವರಿಬ್ಬರನ್ನು ಕುರಿತು ಹೇಳಿದ, "ನಿಮಗೆ ದಯೆ ಕರುಣೆ ಇಲ್ಲವೇ, ಈ ಮರಿ ಕುದುರೆ ಮೇಲೆ ನೀವಿಬ್ಬರೂ ಕುಳಿತಿದ್ದೀರಲ್ಲ," ಎಂದನು. ಇಬ್ಬರು ಕುದುರೆ ಇಳಿದು ಮೊದಲು ಹೇಗೆ ನಡೆದುಕೊಂಡು ಹೋಗುತ್ತಿದ್ದರೊ ಹಾಗೆ ಕುದುರೆ ಜೊತೆ ನಡೆದುಕೊಂಡು ಹೊರಟರು. ಆಗ ಮುದುಕ ಹೇಳಿದ, "ಅವರಿವರ ಮಾತು ಕೇಳಿ ನಾವಿಬ್ಬರೂ ಬೈಸಿಕೊಂಡಿದ್ದೇವೆ. ಇನ್ನು ಮುಂದೆ ನಮಗೆ ತಿಳಿದಂತೆ ಮಾಡೋಣ. ಅವರಿವರ ಮಾತನ್ನು ಉದಾಸೀನ ಮಾಡೋಣ" ಎಂದನು. 

ಉದಾಸೀನ ಅಂದರೆ ಅವರ ಮಾತಿಗೆ ಅತಿ ಬೆಲೆ ಕೊಡಬಾರದು, ನಮ್ಮ ಮನಸ್ಸಿಗೆ ಹಿತವಾದದ್ದನ್ನು ಮಾಡುವುದು. ಮನಮೆಚ್ಚಿದನ್ನು ನಿಶ್ಚಿಂತವಾಗಿ ಮಾಡುವುದು. ಅಂದುಕೊಂಡು ನಡೆಯುತ್ತಿದ್ದರು. ಎದುರಿಗೆ ಸಿಕ್ಕಿದವರು ಏನೇನು ಹೇಳುತ್ತಿದ್ದರು ಹೂಂ ಅನ್ನುತ್ತಾ ನಗು ನಗುತ್ತಾ ಮರಿ ಕುದುರೆ ಮೇಲೆ ಏರದೆ ನಡೆದುಕೊಂಡು ಹೊರಟುಬಿಟ್ಟರು. ಆರಾಮವಾಗಿ ಇದ್ದರು. ಇದೆ ಉದಾಸೀನ. ಯಾರೇ ಹೇಳಿದಾಗ ಎಷ್ಟು ಕೇಳಬೇಕು?. ಏನು ಕೇಳಬೇಕು?. ಅಷ್ಟಕ್ಕಷ್ಟೇ ಇರಬೇಕು. ಅತಿ ಬೆಲೆ ಕೊಡಬಾರದು. ತಲೆ ಕೆಡಿಸಿಕೊಳ್ಳಬಾರದು. ಅಂದರೆ ಉದಾಸೀನ ಮಾಡು. ಆ ಮಾತಿಗೆ ಬೆಲೆ ಕೊಡಬಾರದು ಅಂತ ಅಲ್ಲವೆ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************




Ads on article

Advertise in articles 1

advertising articles 2

Advertise under the article