ಜೀವನ ಸಂಭ್ರಮ : ಸಂಚಿಕೆ - 228
Monday, February 9, 2026
Edit
ಜೀವನ ಸಂಭ್ರಮ : ಸಂಚಿಕೆ - 228
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ದೇವರು ಅಂದರೆ "ಅತಿ ಪವಿತ್ರ ಶಕ್ತಿ" ಎನ್ನುತ್ತೇವೆ. ದೇವ ಪ್ರೇಮ ಎಂದರೂ, ಪವಿತ್ರ ಪ್ರೇಮ ಎಂದರೂ, ಎರಡು ಒಂದೇ. ಯಾವುದನ್ನು ನೋಡಿದರೆ ಮನಸ್ಸಿನಲ್ಲಿ ಪವಿತ್ರ ಭಾವ ಮೂಡುತ್ತದೆಯೋ, ಅದೇ ದೇವರು. ಅಂದರೆ ಯಾವುದನ್ನು ಪ್ರೀತಿಸಿದರೆ ಮನಸ್ಸು ಪವಿತ್ರವಾಗುತ್ತದೆಯೋ, ಅದು ದೇವರು. ದೇವ ಎಂದರೆ ಅತ್ಯಂತ ಪವಿತ್ರ ತತ್ವ. ಯಾವ ವಸ್ತುವನ್ನು ನಾವು ಪ್ರೀತಿಸುತ್ತೇವೆ, ಅದರ ಅನುಭವ ನಮಗೆ ಉಂಟಾಗುತ್ತದೆ. ಸಣ್ಣ ವಸ್ತು ಪ್ರೀತಿಸಿದರೆ, ಆ ವಸ್ತು ಮನಸ್ಸನ್ನು ತುಂಬಿಕೊಳ್ಳುತ್ತದೆ. ದೊಡ್ಡ ವಸ್ತುವನ್ನು ಪ್ರೀತಿಸಿದರೆ, ದೊಡ್ಡವಸ್ತು ಮನಸ್ಸನ್ನು ತುಂಬಿಕೊಳ್ಳುತ್ತದೆ. ಪ್ರೇಮ, ಆ ವಸ್ತುವಿನಿಂದ ಸಂತೋಷ ಅಥವಾ ಆನಂದ ಉಂಟು ಮಾಡುತ್ತದೆ. ಪ್ರೇಮವೇ ಸಂತೋಷವನ್ನು ನಿರ್ಮಿಸುವುದು. ಅಷ್ಟು ಸಾಮರ್ಥ್ಯ ಆ ಪ್ರೇಮಕ್ಕೆ ಇದೆ.
ಆ ಪ್ರೇಮ ಭಾವ ಇರುವುದರಿಂದ ಜೀವನ ಮಧುರ, ಸುಂದರ. ನಾವು ನೂರು ವರ್ಷ ಬಾಳಬೇಕೆಂದು ಇಚ್ಛಿಸುತ್ತೇವೆ. ದೇಹದಲ್ಲಿ ಒಂದಿಷ್ಟು ಕೊರತೆಯಾದರೂ ಚಿಂತೆ ಇಲ್ಲ. ಸಾಯಲು ಯಾರು ಬಯಸುವುದಿಲ್ಲ. ಏಕೆಂದರೆ ಈ ಜೀವನವನ್ನು ನಾವು ಪ್ರೀತಿಸುತ್ತೇವೆ. ಒಂದು ವೇಳೆ ಈ ಬದುಕನ್ನು ಪ್ರೀತಿಸದೆ ಇದ್ದರೆ ಜೀವನ ಸಾಕು ಅನಿಸುತ್ತದೆ.
ಅಮೆರಿಕ ದೇಶದ ಒಬ್ಬ ಲೇಖಕರು ಹೆಲನ್ ಕೆಲರ್ ಒಂದು ಸುಂದರ ಮಾತನ್ನು ಉಲ್ಲೇಖಿಸಿ ಹೇಳುತ್ತಾರೆ. "ಮಧುರ ಭಾವವನ್ನು (ಪ್ರೇಮ) ನಾವು ಮುಟ್ಟಲು ಸಾಧ್ಯವಿಲ್ಲ. ಇದನ್ನು ಸ್ಪರ್ಶ ಮಾಡಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅಷ್ಟು ಸೂಕ್ಷ್ಮ. ಎಲ್ಲವನ್ನು ಚಿತ್ರಿಸಬಹುದು. ಭಾವವನ್ನು ಚಿತ್ರಿಸಲು ಆಗುವುದಿಲ್ಲ. ಆದರೆ ಅದರ ಸವಿಯನ್ನು ಎಲ್ಲರೂ ಅನುಭವಿಸಬಹುದು".
ಈ ಪ್ರೇಮ ಭಾವ ಪ್ರತಿಯೊಂದು ವಸ್ತುವಿನಲ್ಲಿ ಮಧುರತೆ (ಸವಿಯನ್ನು) ತುಂಬುತ್ತದೆ. ವಸ್ತು ನಮಗೆ ಯಾಕೆ ಹಿತ (ಸವಿ) ಅಂದರೆ, ಪ್ರೇಮ ಭಾವ ಆ ವಸ್ತುವಿನಲ್ಲಿ ಸವಿ ತುಂಬಿದೆ ಅದಕ್ಕೆ. ಪ್ರತಿಯೊಂದು ವಸ್ತುವಿನಲ್ಲಿ ಸವಿ ತುಂಬುವುದು ಯಾವುದು ಅಂದರೆ ಅದು ಮಧುರ ಭಾವ. ನಾವು ಸಂತೋಷದಿಂದ ಇರಬೇಕಾಗಿತ್ತು ಅಂದರೆ ನಾವು ಪ್ರೇಮದ ಕಡೆ ಲಕ್ಷ ಕೊಡಬೇಕು. ನಮಗೆ ಜೀವನದಲ್ಲಿ ಸಂತೋಷವೇ ಮಹತ್ವದ್ದು. ಗಳಿಸುವುದು ಕಡಿಮೆ ಇರಬಹುದು. ಬದುಕಿನ ಉದ್ದೇಶ ಸಂತೋಷ ಪಡುವುದು. ನಾವು ಏನೇ ಮಾಡಲಿ ಅದರಲ್ಲಿ ಸಂತೋಷದ ಅಂಶ ಮಹತ್ವದ್ದು. ಆದುದರಿಂದ ನಮ್ಮ ಲಕ್ಷ್ಯ ಮಧುರ ಭಾವದ ಕಡೆ ಇರಬೇಕು. ನೋಡಿದ್ದು ಸಂತೋಷ ಕೊಡಬೇಕಾದರೆ ನೋಡಿದ ವಸ್ತುವಿನಲ್ಲಿ ಪ್ರೇಮ (ಸವಿ) ತುಂಬಬೇಕಾಗುತ್ತದೆ. ಉದಾಹರಣೆಗೆ ಪಂಚತಾರಾ ಹೋಟೆಲ್ ಗೆ ಹೋದರೆ ಗೊತ್ತಾಗುತ್ತದೆ. ವಿಶಾಲವಾದ ಕೋಣೆ, ಅದ್ಭುತವಾದ ಪೀಠೋಪಕರಣ, ಮಾಡುವ ಜನ, ಅವರ ಸಮವಸ್ತ್ರ, ಶಿಸ್ತು , ನೀಡುವ ಆಹಾರ ಅಪ್ರತಿಮ.
ಆದರೆ ಅದರಲ್ಲಿ ಒಂದು ಅಂಶ ಕೊರತೆ, ಅದು ಸದ್ಭಾವ. ಅಲ್ಲಿರುವುದು ಹಣದ ಅಂಶ. ಒಂದು ನಮಸ್ಕಾರಕ್ಕೆ ನೂರು ಕೊಡಬೇಕು. ಅದೇ ನಮ್ಮ ಮನೆಯಲ್ಲಿ ತಾಯಂದಿರು ಅಡುಗೆ ಮಾಡುತ್ತಾರೆ. ನಮಗಾಗಿ ಮಾಡುತ್ತಾರೆ. ಅವರು ನಮಗೆ ನಮಸ್ಕಾರ ಹಾಕುವುದಿಲ್ಲ. ಅಲ್ಲಿಯ ಹಾಗೆ ಉಪಚಾರ ಇಲ್ಲ. ಸಾದಾ ತಟ್ಟೆಯಲ್ಲಿ ಸಾದಾ ಆಹಾರ ನೀಡುತ್ತಾರೆ. ತಗೊಳಪ್ಪ ಅಂತಾರೆ. ಇಲ್ಲಿ ತಾಯಿಯ ಮಧುರ ಪ್ರೇಮ ಬೆರೆತಿರುತ್ತದೆ. ಅಲ್ಲಿ ಹಣಕ್ಕಾಗಿ ಮಾಡುತ್ತಾರೆ. ಇಲ್ಲಿ ಹಣ ಇಲ್ಲ. ಟೇಬಲ್ ಇಲ್ಲ. ನಮಸ್ಕಾರ ಇಲ್ಲ. ಆಹಾರ ಇದೆ. ಆಹಾರ ಅದ್ಭುತ ಇರುತ್ತದೆ. ನಮಗಾಗಿ ಮಾಡಿದ್ದು ಇಲ್ಲಿ. ಹಣಕ್ಕಾಗಿ ಮಾಡಿದ್ದು ಅಲ್ಲಿ. ಅಲ್ಲಿ ಎಲ್ಲರಿಗೂ ಮಾಡಿದ್ದು. ಮನೆಯಲ್ಲಿ, ನಮಗಾಗಿಯೇ ಮಾಡಿದ್ದು ತಾಯಿ. ಮಾಡಿದ ಊಟದಲ್ಲಿ ಮಧುರ ಪ್ರೇಮ ತುಂಬಿರುತ್ತದೆ. ಅದಕ್ಕೆ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ. ಇದು ಗೊತ್ತಿದ್ದರೆ ತಾಯಿ ಮಾಡಿದ ಅಡುಗೆ ರುಚಿ. ಗೊತ್ತಿಲ್ಲದಿದ್ದರೆ ಅಲ್ಲಿಯ ಊಟ ರುಚಿ. ಇದನ್ನು ಮಧುರ ಭಾವ ಗೊತ್ತು ಹಚ್ಚುತ್ತದೆ.
ಯಾವುದರಲ್ಲಿ ಸವಿಯಿದೆ ಅನ್ನೋದಕ್ಕೆ ಉದಾಹರಣೆ. ಸಣ್ಣ ಮಕ್ಕಳು ಅವರ ತಾಯಿ ಊಟ ಮಾಡಿಸಿದರೆ ಊಟ ಮಾಡುತ್ತವೆ. ಹೊರಗಿನವರು ಊಟ ಮಾಡಿಸಲು ಶುರು ಮಾಡಿದರೆ ಅವು ತಿನ್ನುವುದಿಲ್ಲ. ಆ ಮಕ್ಕಳಿಗೆ ಗೊತ್ತಿದೆ ಯಾವ ಕೈಯಲ್ಲಿ ಏನಿದೆ ಅಂತ. ನೇರವಾಗಿ ಗೊತ್ತಾಗುತ್ತದೆ. ಭಾವ ಹೇಗಿದೆ ಅಂತ. ಒಳ್ಳೆಯ ಆಹಾರ ಮಾಡಿ ತಂದು ಕಾಟಾಚಾರಕ್ಕೆ ಬಿಸಾಡಿದರೆ ಆ ಊಟ ಎಷ್ಟೇ ಒಳ್ಳೆಯದಿರಲಿ ಅದು ರುಚಿಸುವುದಿಲ್ಲ. ಪ್ರತಿಯೊಂದು ಘಟನೆ, ಪ್ರತಿಯೊಂದು ಚಲನೆಯಲ್ಲಿ ಪ್ರೇಮ ವ್ಯಕ್ತವಾಗಬೇಕು. ಆಗ ಸಂತೋಷವಾಗುತ್ತದೆ. ಪ್ರೇಮ ಇದ್ದರೆ ಸಂತೋಷದ ಬದುಕು. ಪ್ರೇಮ ಬತ್ತಿದರೆ ಆನಂದ ಮರೆಯಾಯಿತು. ಆದುದರಿಂದ ನಾವು ಪ್ರೇಮ ಕಾಪಾಡಿಕೊಳ್ಳಬೇಕು. ಪ್ರೇಮಕ್ಕೆ ಮಹತ್ವ ನೀಡಿ ಬದುಕಬೇಕು. ಏನನ್ನ ಪ್ರೀತಿಸಬೇಕು ಅನ್ನುವುದಕ್ಕೆ ಸಂತರು, ಶರಣರು ಹೇಳುತ್ತಾರೆ. ಯಾವುದು ಶಾಶ್ವತವಾಗಿ ಉಳಿಯುತ್ತದೆಯೊ? ಅದನ್ನು. ಯಾವುದು ಅತ್ಯಂತ ಪವಿತ್ರವೋ?. ಅದನ್ನು. ಯಾವುದು ವ್ಯಾಪಕವೋ?. ಅದನ್ನು ಪ್ರೀತಿಸಬೇಕು. ಆದರೆ ಪ್ರೇಮ ಮೋಹರೂಪ ತಾಳಬಾರದು. ಪ್ರೇಮದಲ್ಲಿ ಕಾಮ ತುಂಬಿರಬಾರದು. ಪ್ರೇಮ ಶುದ್ಧ ಮಾಧುರ್ಯ ಇರಬೇಕು. ಇಂತಹ ಪ್ರೇಮವೇ ದೇವ ಪ್ರೇಮ.
ಪ್ರೇಮದಲ್ಲಿ ಎರಡು ವಿಧ. ಲೌಕಿಕ ಪ್ರೇಮ ಮತ್ತು ಆಂತರಿಕ ಪ್ರೇಮ. ಲೌಕಿಕ ಪ್ರೇಮ ಅಂದರೆ ವ್ಯವಹಾರ ಪ್ರೇಮ. ಇದರಲ್ಲಿ ನಿರೀಕ್ಷೆ ಇರುತ್ತದೆ. ಸಹಜ ಪ್ರೇಮವೇ ಅಲೌಕಿಕ. ಸಹಜ ಪ್ರೇಮದಲ್ಲಿ ಆನಂದ ಉಂಟಾಗುತ್ತದೆ.
ರೈತ ಒಂದು ಪ್ರಾಣಿಯನ್ನು ಮುದ್ದಿನಿಂದ ಸಾಕಿದ ಅಂದರೆ ಮುಂದೆ ಅದರಿಂದ ಬರುವ ಆದಾಯ ಕಾರಣ. ಇದು ಲೌಕಿಕ ಪ್ರೇಮ. ಆದ್ದರಿಂದ ಸಹಜ ಪ್ರೇಮ ಬೆಳೆಸಿಕೊಳ್ಳಬೇಕು. ಸಹಜ ಪ್ರೇಮದಲ್ಲಿ ಯಾವ ಉದ್ದೇಶ ಇರುವುದಿಲ್ಲ. ಅದರಲ್ಲಿ ಬರೀ ಸಂತೋಷ ಇರುತ್ತದೆ. ಅದ್ದರಿಂದ ಸಹಜ ಪ್ರೇಮ ಬೆಳೆಸಿಕೊಳ್ಳಬೇಕು ಅಲ್ಲವೆ ಮಕ್ಕಳೇ...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************