ಜೀವನ ಸಂಭ್ರಮ : ಸಂಚಿಕೆ - 225
Monday, January 19, 2026
Edit
ಜೀವನ ಸಂಭ್ರಮ : ಸಂಚಿಕೆ - 225
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಸಂಗತ್ಯಾಗದ ಬಗ್ಗೆ ತಿಳಿದುಕೊಳ್ಳೋಣ. ನಾವು ಜೀವನದಲ್ಲಿ ಕಷ್ಟಗಳನ್ನು ದಾಟಬೇಕು. ಆಕರ್ಷಣೆ ಗೆದ್ದು ನಿಲ್ಲಬೇಕು. ಬದುಕನ್ನು ಸುಂದರಗೊಳಿಸಬೇಕು. ಅದಕ್ಕಾಗಿ ನಾವು ಸಂಗತ್ಯಾಗ ಮಾಡಬೇಕು. ಯಾವ ಸಂಗತಿಯಿಂದ ಮನಸ್ಸು ಹುಚ್ಚು ಹುಚ್ಚಾಗುತ್ತದೆ?. ಅದನ್ನು ಕಡಿಮೆ ಮಾಡಬೇಕು. ಯಾವುದು ಮನಸ್ಸನ್ನು ಅಮಲು ಏರಿಸುತ್ತದೆ?. ಅದನ್ನು ದೂರ ಮಾಡಬೇಕು. ಬಲ್ಲವರು ಮಾಡಿದ್ದೆ ಅಷ್ಟು. ಆಕರ್ಷಣೆ ಸಾಮಾನ್ಯ ಅಲ್ಲಾ. ಮಾಯೆ ಶಕ್ತಿಶಾಲಿ. ಆಕರ್ಷಣೆಗೆ ಒಳಗಾಗದವರು ಕಡಿಮೆ. ಎಂತಹ ಬುದ್ದಿವಂತನಿದ್ದರೂ ಒಂದೊಂದು ಪ್ರಸಂಗದಲ್ಲಿ ಒಂದೊಂದು ಆಕರ್ಷಣೆಗೆ ಒಳಗಾಗುತ್ತಾನೆ. ಆಕರ್ಷಣ ಶಕ್ತಿ ಅಷ್ಟು ಬಲಿಷ್ಠ. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವೆ ಆಕರ್ಷಣೆಗಳು. ಇವು ನಮ್ಮ ಅರಿವಿಗೆ ತಾನಾಗಿ ಬರುತ್ತವೆ. ಇವಕ್ಕೆ ಮಾಯ ಎನ್ನುವರು. ಈ ಮಾಯೆಯನ್ನು ಗೆಲ್ಲುವುದು ಹೇಗೆಂದರೆ? ಸ್ವಲ್ಪ ದೂರ ಇರುವುದು. ಈಗ ಸೇದುವ ಚಟ ಇದ್ದರೆ, ಅದನ್ನು ಹತ್ತಿರ ಇಟ್ಟುಕೊಳ್ಳದಿದ್ದರೆ ಆಯ್ತು. ನಿಮ್ಮಿಂದ ನನಗೆ ಸಿಟ್ಟು ಬರುತ್ತಿತ್ತು ಅಂದರೆ ನಿಮ್ಮಿಂದ ದೂರ ಇದ್ದರೆ ಆಯ್ತು. ಇಲ್ಲಿ ಏನೆಲ್ಲ ಕಂಡರೆ, ಯಾರನ್ನು ನೋಡಿದರೆ, ತಲೆಗೆ ತಾಪ ಆಗುತ್ತಿತ್ತು ಅಂದರೆ ಅವರಿಂದ ಅದರಿಂದ ದೂರ ಇದ್ದರೆ ತಲೆ ತಣ್ಣಗೆ ಆಗುತ್ತದೆ. ಉದಾಹರಣೆಗೆ ಒಂದು ಮನೆ ಅಲ್ಲಿ ಒಂದು ದೊಡ್ಡ ಮಂಚ ಇದೆ ಎಂದು ಭಾವಿಸಿ. ಅದರ ಮೇಲೆ ಮೆದುವಾದ ಹಾಸಿಗೆ ಇದೆ. ಆದರೆ ಹಾಸಿಗೆ ತುಂಬಾ ತಿಗಣೆ ಇದೆ ಎಂದು ಭಾವಿಸಿ. ಇದನ್ನೆಲ್ಲ ಇಟ್ಟುಕೊಂಡು ಆರಾಮವಾಗಿ ನಿದ್ದೆ ಮಾಡಬೇಕು ಎಂದರೆ ಸಾಧ್ಯವೇ?. ಸಾಧ್ಯವಿಲ್ಲ. ಹೊರಹೋಗಬೇಕು. ಅದೇ ಮಂಚದ ಮೇಲೆ ಮಲಗಬೇಕು, ತಿಗಣೆ ಕಡಿಯಬಾರದು ಅಂದರೆ ಸಾಧ್ಯವಿಲ್ಲ. ಚಟ ನಮ್ಮನ್ನು ಬಿಡದಿದ್ದರೆ, ನಾವೇ ಚಟ ಬಿಡಬೇಕು. ಇಲ್ಲವೇ ಚಟ ದೂರಸರಿಸಬೇಕು. ಎಷ್ಟು ದೂರ ಸರಿಸಬೇಕೊ ಅಷ್ಟು ದೂರಸರಿಸಬೇಕು. ಆರಾಮವಾಗಿ ಇರುವುದನ್ನು ಕಲಿಯಬೇಕು.
ನಮ್ಮ ಸುತ್ತ ಸುಂದರ ಜಗತ್ತು ಇದೆ. ನಮ್ಮನ್ನು ಪ್ರೀತಿಸುವ ಮಂದಿ ಇದ್ದಾರೆ. ಆದರೆ ಮನಸ್ಸು ಬಡವಾಗಿದ್ದರೆ, ಯಾರು ಏನು ಮಾಡಲು ಸಾಧ್ಯವಿಲ್ಲ. ಒಂದು ಗುಬ್ಬಿ ಆಕಾಶದಲ್ಲಿ ಹಾರಾಡುತ್ತದೆ. ಸಂತೋಷದಿಂದ ಹಾರಾಡುತ್ತದೆ. ಅದು ಒಂದು ಮನೆ ಮೇಲೆ ಕುಳಿತು ಹಾಡುತ್ತದೆ. ಆನಂದವಾಗಿ ಇರುತ್ತದೆ. ಸ್ವಚ್ಛಂದವಾಗಿ ಇರುತ್ತದೆ. ಆದರೆ ಅದೇ ಸುಂದರ ಮನೆ ಒಳಗೆ ಇರುವ ಮನುಷ್ಯ ಬಡತನದಿಂದ ಬಳಲುತ್ತಿದ್ದಾನೆ. ಏನೇನು ಇಲ್ಲದ ಪಕ್ಷಿ ಅಷ್ಟು ಆರಾಮವಾಗಿ ಇರುತ್ತದೆ. ಎಲ್ಲಾ ಇರುವ ಮನುಷ್ಯ ಬಡವನಾಗಿದ್ದಾನೆ. ಗುಬ್ಬಿ ಜಗತ್ತಿನ ಸಂಪತ್ತನ್ನೆಲ್ಲ ನನ್ನ ಸಂಪತ್ತು ಅಂತ ಭಾವಿಸಿದೆ. ನಮ್ಮದು ಹಾಗೆ ಆಗಿಲ್ಲ. ಇರುವ ಸಂಪತ್ತು ಕಡಿಮೆ ಬಿದ್ದಿದೆ ಅದಕ್ಕೆ ಬಡವರು ನಾವು. ನಮಗೆ ಕೂಡಿ ಬದುಕಲು ಬರೋದಿಲ್ಲ. ಇರುವುದರಲ್ಲಿ ಆನಂದವಾಗಿ ಬದುಕಲು ಬರುವುದಿಲ್ಲ. ತಿಂದು ಉಂಡು ಆರಾಮವಾಗಿರಬೇಕು. ಅದರ ಬದಲು ಇಷ್ಟು ಗಳಿಸಿದ ಮೇಲೆ ಆರಾಮ ಎಂದರೆ ಹೇಗೆ? ಬಡವರಾಗಿ ಬದುಕುತ್ತೇವೆ ಏಕೆಂದರೆ ಹೋಲಿಸಿಕೊಳ್ಳುತ್ತೇವೆ ಅದಕ್ಕೆ. ಸಿರಿವಂತ, ಬಡವ ಹೇಗೆ ಇರುತ್ತೆ ಅಂದರೆ ಒಬ್ಬರ ಹತ್ತಿರ ಹೆಚ್ಚು ಇತ್ತು ಅಂದರೆ ನಾವು ಬಡವರು. ಇನ್ನೊಬ್ಬರ ಹತ್ತಿರ ಕಡಿಮೆ ಇತ್ತು ಅಂದರೆ ನಾವು ಸಿರಿವಂತರು. ನಮ್ಮ ಸಂಪತ್ತು ನಮ್ಮನ್ನು ಶ್ರೀಮಂತ ಮಾಡುವುದಿಲ್ಲ. ಇನ್ನೊಬ್ಬರ ಸಂಪತ್ತು ನಮ್ಮನ್ನು ಬಡವ ಅಥವಾ ಶ್ರೀಮಂತ ಮಾಡುತ್ತದೆ. ಉದಾಹರಣೆಗೆ, ಈಗ ನಾನು ಕುಳಿತಿದ್ದೇನೆ ಎಂದು ಭಾವಿಸಿ. ನನ್ನ ಪಕ್ಕ ಇನ್ನೊಬ್ಬ ದೊಡ್ಡ ಕುರ್ಚಿ ಹಾಕಿಕೊಂಡು ಕುಳಿತುಕೊಂಡ ಎಂದರೆ ನಾನು ಬಡವ. ನನ್ನ ಇನ್ನೊಂದು ಬದಿಗೆ ಸಣ್ಣ ಕುರ್ಚಿಯಲ್ಲಿ ಕುಳಿತುಕೊಂಡ ಎಂದರೆ ನಾನು ಶ್ರೀಮಂತನಾಗುತ್ತೇನೆ. ನನ್ನಷ್ಟಕ್ಕೆ ನಾನು ನೋಡಿದರೆ ನಾನು ದೊಡ್ಡವನು ಅಲ್ಲ, ಸಣ್ಣವನು ಅಲ್ಲ. ಆ ಕಡೆ ಈ ಕಡೆ ಕುರ್ಚಿ ಇಲ್ಲ ಹೇಳಿ ನಾನು ದೊಡ್ಡವನೊ, ಸಣ್ಣವನೊ?. ಏನೂ ಇಲ್ಲ ಆರಾಮವಾಗಿರುತ್ತೇನೆ. ಆ ಕುರ್ಚಿಗಳು ಇಲ್ಲದೆ ಇದ್ದಾಗ, ನನ್ನಷ್ಟಕ್ಕೆ ನಾನು ಇದ್ದಾಗ, ಹೋಲಿಸುವುದಿಲ್ಲ ಆರಾಮಾಗಿ ಇರುತ್ತೇನೆ. ನಾನು ಶ್ರೀಮಂತನೇ. ಎರಡು ಕುರ್ಚಿ ಇರಬೇಕು. ನಮ್ಮ ಕುರ್ಚಿ ಕಡೆ ನಮ್ಮ ಲಕ್ಷ್ಯ ಇರಬೇಕು. ಆಗ ಶ್ರೀಮಂತನೆ ಇರ್ತೀವಿ. ಬಡವನೇ ಇರುವುದಿಲ್ಲ. ಅವರ ಕಡೆ, ಇವರ ಕಡೆ ಗಮನ ಹರಿಸುವುದಕ್ಕಿಂತ ನಮ್ಮ ವೈಭವದಾಗೆ ನಾವು ಇದ್ದರೆ ಸುಖಿಯಾಗಿರುತ್ತೇವೆ, ಶ್ರೀಮಂತರಾಗಿ ಇರುತ್ತೇವೆ. ಇನ್ನೊಬ್ಬರ ವಸ್ತು ನಮ್ಮನ್ನು ಬಡವ, ಶ್ರೀಮಂತ ಮಾಡುವುದಕ್ಕೆ ಮಾಯೆ ಎನ್ನುವರು. ಹೋಲಿಸಿಕೊಳ್ಳದಿರುವುದೇ ಉಪಾಯ. ಇದ್ದಿದ್ರಾಗ ಶ್ರೀಮಂತರಾಗಿ ಬಾಳಬೇಕು. ಇರುವುದನ್ನು ಭಗವಂತನ ಪ್ರಸಾದ ಎನ್ನಬೇಕು. ಇರುವುದೇ ಸಂಪತ್ತು ಅಂತ ಭಾವಿಸಬೇಕು. ಇಲ್ಲದಿದ್ದರೆ ಬ್ರಾಂತಿ. ಎಲ್ಲವೂ ಪವಿತ್ರ ಎಂದು ಭಾವಿಸುವುದರಿಂದ ಭಯವಿರುವುದಿಲ್ಲ. ಹೀಗೆ ಹೋಲಿಸಿಕೊಳ್ಳುವುದರಿಂದ ದೂರ ಇರುವುದು. ತಾಪ ಕೊಡುವುದರಿಂದ ದೂರ ಇರುವುದು. ನೋವುಂಟು ಮಾಡುವುದರಿಂದ ದೂರ ಇರುವುದೇ ಸಂಗತ್ಯಾಗ. ಅಲ್ಲವೇ ಮಕ್ಕಳೇ...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************