ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 84
Friday, December 12, 2025
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 84
ಲೇಖಕರು : ಶ್ರೀಮತಿ ಸುಪ್ರಿಯಾ
ಸಹಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
ಡಿಸೆoಬರ್ ತಿಂಗಳು ಬಂದರೆ ಸಾಕು, ಬಹುತೇಕ ಶಾಲೆಗಳಲ್ಲಿ ವಾರ್ಷಿಕೋತ್ಸವದ ತಯಾರಿ ಆರಂಭವಾಗುತ್ತದೆ. ಮಕ್ಕಳಿಗೆ ಪಾಠ- ಪ್ರವಚನಗಳಿಂದ ಸ್ವಲ್ಪ ಮಟ್ಟಿನ ಬಿಡುವು ಎಂಬ ಖುಷಿ. ಶಿಕ್ಷಕರಿಗೆ ವಾರ್ಷಿಕೋತ್ಸವದ ಸಿದ್ಧತೆಗಳ ಜವಾಬ್ದಾರಿ.
ನರನಮ್ಮ ಶಾಲೆಯಲ್ಲೂ ಪ್ರತೀ ವರ್ಷ ಶಾಲಾ ವಾರ್ಷಿಕೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಈ ವರ್ಷ ನಮ್ಮ ಶಾಲೆಯ 25ನೇ ವಾರ್ಷಿಕೋತ್ಸವದ ಸಂಭ್ರಮ. ಮಕ್ಕಳಿಗೆಲ್ಲಾ ಆಮಂತ್ರಣ ಪತ್ರಿಕೆ ಹಂಚುವಾಗ, ಸುಮಾರು ವರ್ಷಗಳ ಹಿಂದೆ ನಡೆದ ಘಟನೆ ನೆನಪಾಯಿತು.
ಅದು ಡಿಸೆoಬರ್ ತಿಂಗಳ ಮೊದಲ ವಾರ, ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಕೇವಲ ಹತ್ತು ದಿನಗಳಷ್ಟೇ ಬಾಕಿ ಇತ್ತು. ಶಿಕ್ಷಕರೆಲ್ಲಾ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿಯನ್ನೂ ನಡೆಸುತ್ತಾ ಇದ್ದೆವು. ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಕೈಗೆ ಸಿಕ್ಕಿದ ಕೂಡಲೇ, 6ನೇ ತರಗತಿಯ ಕ್ಲಾಸ್ ಟೀಚರ್ ಆಗಿದ್ದ ನಾನು ವಿದ್ಯಾರ್ಥಿಗಳ ಹೆತ್ತವರಿಗೆ ಆಮಂತ್ರಣ ಪತ್ರಿಕೆ ನೀಡುವ ಸಲುವಾಗಿ, ಪ್ರತಿ ವಿದ್ಯಾರ್ಥಿ ಯನ್ನು ಬಳಿಗೆ ಕರೆದು ಅವರ ತಂದೆಯ ಹೆಸರನ್ನು ಕೇಳಿ ಪತ್ರಿಕೆಯಲ್ಲಿ ಬರೆದು ಕೊಡುತ್ತಿದ್ದೆ. ಮಕ್ಕಳೆಲ್ಲರೂ ಖುಷಿಯಿಂದ ತಮ್ಮ ಆಮಂತ್ರಣ ಪತ್ರಿಕೆ ಪಡೆದು ಹೋಗುತ್ತಿದ್ದರು. ಒಬ್ಬ ಹುಡುಗ ತನ್ನ ಸರದಿ ಬಂದಾಗ, ನನ್ನತ್ತ ಬಾಗಿ ನಿಂತು ಪಿಸು ಧ್ವನಿಯಲ್ಲಿ ''ಮಾಮ್ ನನ್ನ ಇನ್ವಿಟೇಶನ್ ನಲ್ಲಿ ನನ್ನ ಅಮ್ಮನ ಹೆಸರು ಬರೆಯಿರಿ ಪ್ಲೀಸ್' ಅಂದ! ನನಗೆ ಒಂದು ಕ್ಷಣ ಕಸಿವಿಸಿ ಆಯಿತು. ಆತನಿಗೆ ತಂದೆ ತಾಯಿ ಇಬ್ಬರೂ ಇದ್ದಾರೆ ಎಂಬ ವಿಷಯ ನನಗೆ ಗೊತ್ತಿದ್ದರಿಂದ ಯಾಕಪ್ಪ ತಾಯಿಯ ಹೆಸರು ಬರೆಯ ಬೇಕು? ಎಲ್ಲರೂ ತಂದೆಯ ಹೆಸರೇ ಹೇಳಿ ಬರೆಸಿಕೊಂಡರಲ್ಲ!' ಎಂದೆ. ಆಗ ಆ ವಿದ್ಯಾರ್ಥಿಯ ಉತ್ತರ ಕೇಳಿ ನನ್ನ ಹೃದಯ ತುಂಬಿ ಬಂತು.
ನನ್ನ ಪ್ರಶ್ನೆಗೆ ಉತ್ತರಿಸುತ್ತಾ 'ಮಾಮ್, ನನ್ನ ಮನೆಗೆ ಅನೇಕ ಪತ್ರಗಳು ಬರುತ್ತವೆ, ಪ್ರತಿಯೊಂದರಲ್ಲೂ ನನ್ನ ಅಪ್ಪನ ಹೆಸರೇ ಇರುತ್ತದೆ, ನನ್ನ ಅಮ್ಮನಿಗೆ ಯಾವ ಪತ್ರವೂ ಬರುವುದೇ ಇಲ್ಲ, ಹಾಗಾಗಿ ನಮ್ಮ ಶಾಲೆಯ ಆಮಂತ್ರಣ ಪತ್ರಿಕೆಯಾದರೂ ಅಮ್ಮನ ಹೆಸರಿಗೆ ಬರೆದರೆ ಅವರಿಗೂ ಖುಷಿಯಾಗಬಹುದು, ಹಾಗಾಗಿ ಪ್ಲೀಸ್ ನನ್ನ ಅಮ್ಮನ ಹೆಸರು ಬರೆಯಿರಿ' ಎಂದ.
ಅಬ್ಬಾ ಪುಟ್ಟ ಹುಡುಗನ ಯೋಚನಾ ಲಹರಿಗೆ ನಾನು ಮನಸೋತೆ, ಅಷ್ಟೇ ಅಲ್ಲ ನನ್ನ ತಂದೆಗೆ ಸಿಗುವ ಪ್ರಾಧಾನ್ಯತೆ ತನ್ನ ತಾಯಿಗೂ ಸಿಗಬೇಕು ಎಂಬ ಆತನ ಯೋಚನೆಗೆ ಅಭಿಮಾನ ಮೂಡಿತು. ಅದುವರೆಗೆ ಮನೆಯ ಮುಖ್ಯಸ್ಥನೆಂದರೆ ಅದು ಅಪ್ಪನೇ ಹೊರತು ಅಮ್ಮನೂ ಆಗಬಹುದು ಎಂಬ ಕಲ್ಪನೆ ನನಗೂ ಬಂದಿರಲಿಲ್ಲ ಎಂಬುದರ ಬಗ್ಗೆ ನನಗೇ ಆಶ್ಚರ್ಯವಾಯಿತು!!
ತನ್ನ ತಾಯಿಗೂ, ತಂದೆಯ ಸ್ಥಾನವನ್ನೇ ನೀಡಬೇಕೆಂಬ ಆ ಹುಡುಗನ ಆಸೆ ನನ್ನ ಮೇಲೂ ಪ್ರಭಾವ ಬೀರಿದ್ದು ಸುಳ್ಳಲ್ಲ. ಅವನ ಇಚ್ಛೆಯಂತೆ ಅಮ್ಮನ ಹೆಸರಲ್ಲೇ ಪತ್ರ ನೀಡಿದೆ. ಹುಡುಗ ಖುಷಿಯಿಂದ ಪತ್ರ ಪಡೆದು ಹೋದ. ನಾನು ಮನದಲ್ಲೇ 'ಮಗ ಮನೆಗೆ ಹೋಗಿ ತನ್ನ ತಾಯಿಯ ಹೆಸರಲ್ಲಿ ಬಂದ ಪತ್ರವನ್ನು ಅಮ್ಮನಿಗೆ ನೀಡುವ ಸನ್ನಿವೇಶವನ್ನು ಕಲ್ಪಿಸಿಕೊಂಡು ಆತನ ತಾಯಿ ಮಮತೆ ಸದಾ ಹಾಗೇ ಇರಲಿ ಎಂದು ಮನದಲ್ಲೇ ಹರಸುತ್ತಾ, ಮುಂದಿನ ವಿದ್ಯಾರ್ಥಿ ಯನ್ನು ಕರೆದೆ..
ಸಹಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
Mob : +91 94820 45181
*******************************************