-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 83

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 83

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 83
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ

ಮಕ್ಕಳ ಜಗಲಿಯ ಎಲ್ಲರಿಗೂ ನನ್ನ ನಮಸ್ಕಾರಗಳು. ಶಾಲೆಯ ಶೈಕ್ಷಣಿಕ ಪ್ರವಾಸ, ಕ್ರೀಡಾ ದಿನ, ಪ್ರತಿಭಾ ಕಾರಂಜಿ ಇವೆಲ್ಲವುಗಳ ತಯಾರಿ ಮತ್ತು ಆಚರಣೆಗಳ ನಂತರ ಮತ್ತು ಮುಂಬರಲಿರುವ ಶಾಲಾ ಉತ್ಸವದ ತಯಾರಿಯ ಯೋಚನೆಯ ಮಧ್ಯದಲ್ಲೇ ನನ್ನದೊಂದು ಅನುಭವವನ್ನು ಹಂಚಿಕೊಳ್ಳುವ ಆಸೆಯಾಯಿತು....

       
ದಿನವೂ ಪಠ್ಯದ ಅಭ್ಯಾಸದ ಜೊತೆಗೆ ವಾರಕ್ಕೊಮ್ಮೆ ಚಟುವಟಿಕೆಗಳನ್ನು ಮಾಡಿ ಸಂತಸ ಪಡುವ ನಮ್ಮ ಮಕ್ಕಳಿಗೆಲ್ಲ ಅಂದು ಸಂತೋಷದ ದಿನ. ಏಕೆಂದರೆ ಅಂದು ಮಕ್ಕಳ ದಿನಾಚರಣೆ. ರಂಗು ರಂಗಿನ ಮೈ ಬಣ್ಣ ಹೊದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರುವ ಹೂದೋಟದ ಪತಂಗಗಳಂತೆ ಕಾಣುತ್ತಿದ್ದ, ಬಣ್ಣ ಬಣ್ಣದ ಉಡುಗೆ ತೊಟ್ಟು, ಓಡಿ ಬಂದು ನಮ್ಮನ್ನೆಲ್ಲ ಮುತ್ತುಗೆ ಹಾಕಿ, ಮೌನವಾಗಿಯೇ ನಮ್ಮಿಂದ "ಮಕ್ಕಳ ದಿನಾಚರಣೆ" ಯ ಶುಭಾಶಯಗಳನ್ನು ಬಯಸುತ್ತಿದ್ದ ಮಕ್ಕಳ ಹಿಂಡನ್ನು ಕಂಡು, ಮಕ್ಕಳ ಜೊತೆ ನಾವೂ ಮಕ್ಕಳಾಗಿಯೇ ನಲಿದ ದಿನ.

ವಿವಿಧ ಕಾರ್ಯಕ್ರಮಗಳನ್ನು ನೀಡಿದ ಶಿಕ್ಷಕರು ಅಂದು ತಾವೂ ಸಹ ತಮ್ಮ ವಿದ್ಯಾರ್ಥಿ ಜೀವನದ ಆನಂದವನ್ನು ಸವಿದ ಸಂತಸದ ಕ್ಷಣಗಳನ್ನು ಹೇಳಲು ಪದಗಳೇ ಸಾಲದು...! ಅಂತೂ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿ, ಊಟದ ನಂತರ ಮಕ್ಕಳಿಗೆಲ್ಲ ಒಂದು ಸಣ್ಣದಾದ ಆಟ ಕೊಟ್ಟೆ. ಅದೇನೆಂದರೆ ಅವರು ದೊಡ್ಡವರಾದ ಮೇಲೆ ಏನಾಗ ಬಯಸುತ್ತಾರೆ? ಎಂಬುದು. ಈ ಪ್ರಶ್ನೆಯನ್ನು ಕೇಳಿದಾಗ ಪ್ರತಿಯೊಂದು ಮಗುವಿನ ಬಳಿಯೂ ಒಂದೊಂದು ವಿಶೇಷತೆಯನ್ನೊಳಗೊಂಡ ಉತ್ತರಗಳೆ ಇದ್ದವು... ಒಬ್ಬರು, "ನಾನೂ ಡಾಕ್ಟರ್ ಆಗಿ ರೋಗಿಗಳಿಗೆ ಓಷಧಿ ಕೊಡುತ್ತೇನೆ" ಎಂದರೆ ಇನ್ನೊಂದು ಮಗು, "ನಾನೂ ಮಿಲಿಟರಿ man ಆಗಿ ದೇಶ ಕಾಯುತ್ತೇನೆ" ಎಂದು. ಇನ್ನು ಹೀಗೆ ಹಲವು ಹಲವು ವೃತ್ತಿಗಳ ಸಮೂಹವೇ ಕೊಠಡಿಯಲ್ಲಿತ್ತು. ಹೇಳಿದ ಎಲ್ಲ ಮಕ್ಕಳಲ್ಲೂ ಬೇರೆ ಬೇರೆ ಆಯ್ಕೆಗಳು ಇದ್ದವು, ಆದರೆ ನಾನು ನಿರೀಕ್ಷೆ ಮಾಡಿದ ಉತ್ತರ ಬಾರದ ಕಾರಣ ಮನಸ್ಸಿಗೆ ಕೊಂಚ ಬೇಜಾರಾಯಿತಾದರೂ, ಮತ್ತೊಂದು ಮಗುವನ್ನು ನಿಲ್ಲಿಸಿ ಕೇಳಿದೆ "ನೀ ದೊಡ್ಡವಳಾದ ಮೇಲೆ ಏನಾಗುತ್ತೀ?" ಎಂದು.. ವಾಸ್ತವದಲ್ಲಿ ತರಗತಿಯಲ್ಲಿ ಪಾಠ ಮಾಡುವಾಗ ಪಾಠ ಕೇಳದೆ ತನ್ನದೇ ಲೋಕದಲ್ಲಿ ಸಮಯ ಕಳೆಯುವ ಮಗು ಅದು. ಆದರೆ ಅದರ ಉತ್ತರ ಕೇಳಿ ನನ್ನಲ್ಲೊಂದು ನಗು ಅರಳಿತು. ಕಾರಣ. ಮಗು ಹೇಳಿತು "ನಾನು ದೊಡ್ಡವಳಾದ ಮೇಲೆ ನಿಮ್ಮ ತರಹ ಟೀಚರ್ ಆಗ್ತೀನಿ" ಎಂಬ ದೃಢ ನಿರ್ಧಾರದ ಉತ್ತರ.. ಉತ್ತರ ಕೇಳಿ ಮನಸ್ಸಿಗೆ ಸಂತೋಷವಾಗಿ ಮತ್ತೆ ಅವಳಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದೆ. "ಆಗಲಿ ಪುಟ್ಟ ನೀನು ಟೀಚರ್ ಆಗು, ಆದರೆ ನೀನು ತುಂಬಾ ಓದಿ ದೊಡ್ಡ ಮಕ್ಕಳಿಗೆ ಪಾಠ ಮಾಡುವ ಟೀಚರ್ ಆಗು" ಎಂದು ನಾನು ಹೇಳಿದಾಗ ಮಗು ಹೇಳಿತು.. "ಇಲ್ಲ ಇಲ್ಲ ನಾನು ನಿಮ್ಮ ಥರ ಟೀಚರ್ ಆಗ್ಬೇಕು" ಎಂದು. ನನ್ನ ತರವೇ ಟೀಚರ್ ಆಗ್ಬೇಕಾ? ಅದೇನು ಹಾಗೆ? ಅಷ್ಟೊಂದು ಇಷ್ಟನಾ ನಾನು ನಿನಗೆ? ನೀ homework ಮಾಡದೆ ಇದ್ದಾಗ ನಾನು ನಿನ್ನ ಮೇಲೆ ಸಿಟ್ಟು ಮಾಡುತ್ತೇನೆ, ಕೆಲವೊಮ್ಮೆ ಬೈಯುತ್ತೇನೆ, ಆದರೂ ನಾನು ನಿನಗೆ ಇಷ್ಟನಾ? ಎಂದೆಲ್ಲ ಕೆಲವು ಅಣಕದ ಪ್ರಶ್ನೆಗಳನ್ನು ಕೇಳಿದೆ.. ಆಗ ಮಗು ಹೇಳಿತು.. "ನೀವು ನಾನು ಪಾಠ ಕೇಳದೆ ಇದ್ದಾಗ ಶಾಲೆಯಲ್ಲಿ ನನ್ನ ಹೆಸರನ್ನೇ ಕರೆದು ಹೇಳ್ತೀರಲ್ಲ ಅದೇ ನನಗೆ ಇಷ್ಟ, ನನ್ನ ಅಮ್ಮನೂ ಕೂಡ ಹಾಗೆ, ನಾ ಏನಾದರೂ ಕಿತಾಪತಿ ಮಾಡಿದ್ರೆ ನಿಮ್ಮ ಹಾಗೆ ಬೈತಾಳೆ, ಅದಕ್ಕೆ ಅವಳನ್ನ ನಾನು ಯಾವಾಗಲೂ ಕಾಡಿಸ್ತೇನೆ.. ನೀವು ನನ್ನ ಬೈದಾಗಲೆಲ್ಲ ನನಗೆ ಅಮ್ಮನೇ ಬೈತಿದ್ದಾಳೆ ಅನ್ಸತ್ತೆ ಅದ್ಕೆ ನೀವಂದ್ರೆ ನನಗೆ ಇಷ್ಟ." ಎಂದು ಆ ಮಗು ಹೇಳಿದಾಗ ಎಲ್ಲಿಲ್ಲದ ಆನಂದವಾಯಿತು.. ಆ ಮಗು ನನಗೆ ತಾಯಿಯ ಸ್ಥಾನ ಕೊಟ್ಟಿದೆ ಎಂದು. "ಅದೆಲ್ಲ ಸರಿ ಆದರೆ ನಿನಗೆ ನಾನು ಇಷ್ಟ ಆಗೋದಕ್ಕೂ ನೀ ಟೀಚರ್ ಆಗೋದಕ್ಕೂ ಏನೂ ಸಂಬಂಧ? ಬಿಡಿಸಿ ಸರಿ ಮಾಡಿ ಹೇಳು ಮಾರಾಯಿತಿ, ಎಂದು ಕೇಳಿದಾಗ ಅವಳ ವಿವರಣೆ ತುಂಬಾ ವಿಶೇಷವಾಗಿತ್ತು.. "ನೋಡಿ ಈಗ ನಿಮಗೆ ಇಂಗ್ಲೀಷ್ ಪಾಠ ಮಾಡೋಕು ಗೊತ್ತು, Maths ಗೊತ್ತಿದೆ, E.. V. S. ಗೊತ್ತು, ಎಲ್ಲ Subject ಗೊತ್ತು. ನಮಗೆ PT ಸಹ ನೀವೇ ಹೇಳಿಕೊಡ್ತೀರಿ, ಮತ್ತೆ ತಿಂಡಿ box ಎಲ್ಲ open ಮಾಡಿ ಕೊಡ್ತೀರಿ, ಜುಟ್ಟು ಬಿಚ್ಚಿ ಹೋದ್ರೆ ನೀವೇ ಸರಿ ಮಾಡ್ತೀರಿ, ಊಟ ಬಡಿಸ್ತೀರಿ, ಅಳು ಬಂದಾಗ ಸಮಾಧಾನ ಮಾಡಿ ಅಮ್ಮನಿಗೆ ಫೋನ್ ಮಾಡ್ತೀರಿ, ಎಷ್ಟೊಂದು ಕೆಲಸ ಮಾಡ್ತೀರಾ, ನೀವು ಬುದ್ಧಿವಂತರು ನಿಮಗೆ ಎಲ್ಲ ಗೊತ್ತಿದೆ. ಅದ್ಕೆ ನಾನು ನಿಮ್ಮ ಥರಾನೇ ಆಗ್ತೀನಿ" ಎಂಬ ಆ ಮಗುವಿನ ನಿಷ್ಕಲ್ಮಶ ಮನಸ್ಸಿನ ಉತ್ತರ ಕೇಳಿ ಮನ ತುಂಬಿ ಬಂದಿತ್ತು. ಶಿಕ್ಷಕ ವೃತ್ತಿಯಲ್ಲಿರುವುದರ ಸಾರ್ಥಕತೆ, ಹೆಮ್ಮೆ ಆ ಕ್ಷಣ ಇಮ್ಮಡಿಯಾಗಿತ್ತು..!! 

ಎಷ್ಟೋ ಕ್ಷುಲ್ಲಕ ಕಾರಣಗಳಿಗೋಸ್ಕರ, ಅಯ್ಯೋ ಈ ಕೆಲ್ಸವು ಬೇಡ ಈ ರಗಳೆಯೂ ಬೇಡ ಎಂದು ಬೇಜಾರು ಮಾಡಿಕೊಂಡ ಕ್ಷಣಗಳ ಅಪರಾಧಿ ಭಾವ ಅಂದು ಕಣ್ಮುಂದೆ ಬಂದಿತ್ತು. "ಇರುವ ಭಾಗ್ಯವಾ ನೆನೆದು ಬಾರೇನೆಂಬುದ ಬಿಡು, ಹರುಷಕ್ಕಿದೆ ದಾರಿ" ಎಂಬ ಡಿ. ವಿ. ಜಿ ಅವರ ನುಡಿಗಳಂತೆ ಕೆಲವೊಮ್ಮೆ ನಮ್ಮಲ್ಲಿರುವ ಸಂತೋಷ, ನೆಮ್ಮದಿ, ವಿಶೇಷತೆಗಳನ್ನು ಬಿಟ್ಟು ಬೇರೇನನ್ನೋ, ಬೇರೆಲ್ಲೋ ಹುಡುಕುವ ವ್ಯರ್ಥ ಪ್ರಯತ್ನವನ್ನು ಬಿಟ್ಟು, ನಮ್ಮ ಕೆಲಸದಲ್ಲಿ ನಿಷ್ಠತೆ, ಪ್ರಾಮಾಣಿಕತೆ, ಪ್ರೀತಿ ಇವೆಲ್ಲದರ ಜೊತೆ ಸಾಗಿದರೆ ಅದಕ್ಕಿಂತ ಸಂತೋಷ ಬೇರೊಂದಿಲ್ಲ ಎಂಬುವ ನೀತಿಯನ್ನು ಕೆಲವೊಮ್ಮೆ ಪ್ರಪಂಚದ ಅರಿವೇ ಇರದ ಮುಗ್ಧ ಮಕ್ಕಳಿಂದ ನಾವೂ ಕಲಿಯಬೇಕಿದೆ.   
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
******************************************


Ads on article

Advertise in articles 1

advertising articles 2

Advertise under the article