-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 193

ಸ್ಫೂರ್ತಿಯ ಮಾತುಗಳು : ಸಂಚಿಕೆ - 193

ಸ್ಫೂರ್ತಿಯ ಮಾತುಗಳು : ಸಂಚಿಕೆ - 193
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
       
                          
“ನಮಸ್ಕಾರ” ಉಚ್ಚರಿಸಲು ಬಹಳ ಸುಲಭದ ಪದ. ನಮಸ್ಕಾರ ಕೊಡುವ ಮತ್ತು ಪಡೆಯುವ ಸೌಭಾಗ್ಯ ಭಗವನ್ಮಯ ಮನದ ಕನ್ನಡಿ. ನಮಸ್ಕಾರವು ವಿನಯದ ಲಕ್ಷಣವಾಗಿದೆ. ಕರಗಳೆರಡನ್ನೂ ಗೌರವದ ಭಾವನೆಯೊಂದಿಗೆ ಜೋಡಿಸಿ ಮಾಡುವ ನಮಸ್ಕಾರ ಹೆಚ್ಚು ಅರ್ಥಪೂರ್ಣ. ನಮಸ್ಕಾರದೊಂದಿಗೆ ಶಿರದ ಭಾಗ ಬಾಗಿದರೆ ಉತ್ತಮ. ಶಿರ ಮತ್ತು ಮನ ಎರಡೂ ಬಾಗಿದರೆ ಅತ್ಯುತ್ತಮ, ಇಲ್ಲದಿದ್ದರೆ ನಾಟಕೀಯವಾದ ನಮಸ್ಕಾರ. ಇಂದು ನಾವು ಕಾಣುವ ನಮಸ್ಕಾರ ತುಟಿಯಿಂದ ಹೊರ ಬರುವ ಪದಗಳಿಗೆ ಮಾತ್ರ ಸೀಮಿತವಾಗಿದ್ದು ವ್ಯಕ್ತಿತ್ವದ ಲಕ್ಷಣವಾಗಿ, ಸಂಸ್ಕಾರದ ಹೆಗ್ಗುರುತಾಗಿ ಬಿಂಬಿತವಾಗುತ್ತಿಲ್ಲ.

ದೇವರಿಗೆ, ದೈವಕ್ಕೆ, ದೆವ್ವಕ್ಕೆ, ದೇಹಕ್ಕೆ ಮಾಡುವ ನಮಸ್ಕಾರಗಳಲ್ಲಿ ಸಣ್ಣ ಸಣ್ಣ ವ್ಯತ್ಯಾಸಗಳಿವೆ. “ಈ ದೆವ್ವದ ಪೀಡೆ ಒಮ್ಮೆ ತೊಲಗಿದರೆ ಸಾಕಪ್ಪಾ” ಎಂಬ ಭಾವದಿಂದ ನಮಸ್ಕಾರ ಸಲ್ಲಿಸುವುದಿದೆ. ದೇವರಿಗೆ ದೈವಕ್ಕೆ ಮಾಡುವ ನಮನದಲ್ಲಿ ಭಕ್ತಿಯ ಪರಕಾಷ್ಠೆಯಿದೆ. ದೇವರಿಗೆ ಅಥವಾ ದೈವಗಳಿಗೆ ನಮಸ್ಕರಿಸುವುದರಲ್ಲಿ ಕೂಡಾ ನಾಟಕ ಮಾಡುವ ಮನೋಗುಣದವರೂ ಇಲ್ಲವೆನ್ನಲಾಗದು. ಆದರೆ ನಮ್ಮ ಎಲ್ಲ ನಮಸ್ಕಾರಗಳೂ ಪ್ರೀತಿ, ಗೌರವ ಮತ್ತು ಭಕ್ತಿಗಳಿಂದ ಕೂಡಿದರೆ ಮಾತ್ರ ಅದು ಶಕ್ತಿಶಾಲಿಯಾಗಿರುತ್ತದೆ.

ನಮಸ್ಕಾರದ ಹಿಂದೆ ಕೆಲವು ತತ್ವಗಳಿವೆ. ಹೃದಯದ ಭಾಗದಲ್ಲಿ ಕೈಗಳ ಹತ್ತೂ ಬೆರಳುಗಳು ಪರಸ್ಪರ ತಾಗಿಸಿಕೊಂಡಿರುವಂತೆ ನಮಸ್ಕಾರ ಸಲ್ಲಿಸಬೇಕು. ಹಿರಿಯರಿಗೆ ಪಾದ ಸ್ಪರ್ಶಿಸಿ ನಮಸ್ಕಾರ ಮಾಡುವ, ಭಗವಂತನಿಗೆ ದೀರ್ಘದಂಡ ನಮಸ್ಕಾರ ಮಾಡುವ ವಿಧಾನಗಳ ಅನುಸರಣೆಯೂ ಇದೆ. ಎಲ್ಲ ರೀತಿಯ ನಮಸ್ಕಾರಗಳೂ ಮನಸ್ವಿಯಾಗಿರಬೇಕು. ಇದಿರಿಗಿರುವ ಮನುಷ್ಯನಿಗೆ ನಮಸ್ಕರಿಸುವಾಗ ಕೈಗಳು ಹೃದಯಭಾಗದಲ್ಲಿ ಸ್ಥಾಯಿಯಾಗಿರಬೇಕು. ಹೃದಯಭಾಗದಲ್ಲಿ ಕೈಗಳನ್ನಿರಿಸುವುದರ ಉದ್ದೇಶದ ಹಿಂದೆ ನಮಸ್ಕಾರ ಮತ್ತು ಮನಸ್ಸಿನ ಸಂಯೋಜನಾ ತತ್ವವಿದೆ.

ನಮಸ್ಕಾರದಲ್ಲಿ ಹೆಬ್ಬೆರಳಿಗೆ ಹೆಬ್ಬೆರಳೇ ತಾಗಬೇಕು. ಹೆಬ್ಬೆರಳನ್ನು ಆತ್ಮ ವಿಶ್ವಾಸದ ಸಂಕೇತವಾಗಿ ಬಳಸುತ್ತೇವೆ. ಭಾರತವು ಯಾವುದಾದರೂ ದೇಶದೊಂದಿಗೆ ಕ್ರಿಕೆಟ್‌ ಪಂದ್ಯಾಟವಾಡುವುದಾದರೆ ನಾವು ಭಾರತವೇ ಗೆಲ್ಲುತ್ತದೆ ಎನ್ನುವಾಗ ಹೆಬ್ಬೆರಳನ್ನು ಮೇಲ್ಮುಖವಾಗಿರಿಸಿ ಎತ್ತಿ ತೋರಿಸಿ ಆತ್ಮವಿಶ್ವಾಸ ತೋರುತ್ತೇವೆ. ಈ ವಿಷಯ ನನಗೆ ಅರ್ಥವಾಯಿತು ಎಂದು ಹೆಬ್ಬೆರಳೆತ್ತಿ ವಿಶ್ವಾಸ ವ್ಯಕ್ತಪಡಿಸುವುದೂ ಇದೆ. ನೀನು ಈ ಬಾರಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗುವೆಯಾ ಎಂದಾಗ ವಿದ್ಯಾರ್ಥಿಗಳು ಹೆಬ್ಬೆರಳು ಮೇಲ್ಮುಖ ಮಾಡಿದರೆ ಅದು ಅವರ ಆತ್ಮವಿಶ್ವಾಸದ ಸಂಕೇತ. ಕೆಳಮುಖಮಾಡಿದರೆ ವಿಶ್ವಾಸವಿಲ್ಲದಿರುವುದರ ಛಾಯೆ. ಆಗ ಮುಖವೂ ಛಾಯಾಮಯವಾಗಿರುತ್ತದೆ. 

ನಮಸ್ಕಾರದಲ್ಲಿ ತೋರುಬೆರಳೂ ಸೇರಬೇಕು. ತೋರು ಬೆರಳನ್ನು ಅಹಂಕಾರದ ಪ್ರತೀಕ ಎನ್ನುತ್ತೇವೆ. “ಅವನ ಕಾರಣದಿಂದ ಹೀಗಾಯಿತು, ನೀನೇ ಎಲ್ಲ ರಾದ್ಧಾಂತಗಳಿಗೆ ಕಾರಣ” ಎನ್ನುವಾಗ ಬಳಸುವ ಬೆರಳು ತೋರು ಬೆರಳು. ಎಲ್ಲ ತೊಂದರೆಗಳಿಗೂ ಇತರರನ್ನು ಹೊಣೆಯಾಗಿಸುವ ಅಥವಾ ದೂಷಿಸುವ ತೋರುಬೆರಳು ಗೆಲುವಿಗೆ ಮತ್ತು ಗೆಲುವಿಗೆ ತಾನೇ ಕಾರಣವೆಂದು ಬಿಂಕ ಪಡುತ್ತದೆ, ನನ್ನಿಂದಾಗಿ…… ಆಯಿತೆನ್ನುವುದೂ ಅಹಂಕಾರ. ಆದುದರಿಂದ ತೋರು ಬೆರಳಿಗೆ ಅಹಂಕಾರಿ ಎಂದು ವ್ಯಾಖ್ಯಾನ.

ನಡುಬೆರಳು ಬಹಳ ಉತ್ತಮ ಬೆರಳು. ಅದು ಗೆಲುವಿನ ಸಂಕೇತ. ಚುನಾವಣೆಯಲ್ಲಿ ಗೆದ್ದವನು ಆಂಗ್ಲ ಭಾಷೆಯ “ವಿ” ( V) ಆಕಾರದಲ್ಲಿ ಬೆರಳುಗಳನ್ನು ಎತ್ತಿ ಹಿಡಿಯುತ್ತಾನೆ. ಗೆದ್ದುದರ ಸಂಕೇತವಾಗಿ ನಡುವಿನ ಬೆರಳು ನೆಟ್ಟಗಾದರೆ ಗೆದ್ದೆನಲ್ಲಾ ಎಂಬ ಅಹಂಕಾರದಿಂದ ತೋರುಬೆರಳು ಸಂಯೋಜಿತವಾಗುತ್ತದೆ. ಗೆದ್ದವರು ಅಹಂಕಾರ ವ್ಯಕ್ತಪಡಿಸುವುದಿಲ್ಲ ಎನ್ನಲಾಗದು. ಗೆಲುವಿನ ಬಗ್ಗೆ ಹೆಮ್ಮೆಯಿಂದ ಬೀಗಿದರೆ ಅಹಂಕಾರ, ಹಮ್ಮೆಯಿಂದ ಬಾಗಿದರೆ ವಿನಯ. ಆಗ “V” ಇರದು. ಎಲ್ಲ ಬೆರಳುಗಳೂ ಅಥವಾ ಎರಡೂ ಕೈಗಳೂ ನಮಸ್ಕಾರ ಮುದ್ರೆಯಲ್ಲಿರುತ್ತವೆ.

ಅನಾಮಿಕ ಎಂಬ ನಾಮಧೇಯದ ಬೆರಳಿನ ಪಾತ್ರವೂ ನಮಸ್ಕಾರದಲ್ಲಿ ಪ್ರಮುಖವಾಗಿದೆ. ದೃಢತೆಯ ಸಂಕೇತವೆಂದೂ ಉಂಗುರ ಬೆರಳೆಂದೂ “ಅನಾಮಿಕ ಬೆರಳಿಗೆ” ಹೆಸರಿದೆ. ಉಂಗುರ ತೊಡಿಸಿ ವಿವಾಹದ ನಿಶ್ಚಯ ಮಾಡುವ ಉದ್ದೇಶದ ಹಿಂದೆ ಆ ಬೆರಳು ದೃಢತೆಯ ಸಂಕೇತವೆಂಬ ಕಲ್ಪನೆಯೂ ಇದೆ. 

ಇನ್ನು ಕಿರು ಬೆರಳು ಅದು ಸಹನೆಯ ಪ್ರತೀಕ. ಅದಕ್ಕಾಗಿ ಅದು ಭಗವಂತನಿಗೂ ಹತ್ತಿರವಂತೆ. ತಡವಾಗಿ ಬಂದು ತರಗತಿಯನ್ನು ಪ್ರವೇಶಿಸುವ ವಿದ್ಯಾರ್ಥಿಯು ಬಾಗಿಲ ಬಳಿ ನಿಂತು ಕಿರು ಬೆರಳೆತ್ತಿ ಕ್ಷಮೆ ಕೋರುವ ವಿನಯ ಮೆರೆಯುತ್ತಾನೆ. ಇಬ್ಬರ ಮಾತುಗಳ ನಡುವ ಬಾಯಿ ಹಾಕುವ ವ್ಯಕ್ತಿ ಕಿರು ಬೆರಳು ತೋರಿ ಕ್ಷಮೆ ಕೋರುವುದೂ ಇದೆ. ಕ್ಷಮಿಸುವುದು ಮತ್ತು ಕ್ಷಮೆ ಕೋರುವುದು ವಿನಯದ ಲಕ್ಷಣ. ನಾವು ದೇವರಿಗೆ ನಮಿಸುವಾಗ ನಮ್ಮ ದೇಹದಲ್ಲಿ ಭಗವಂತನಿಗೆ ಹತ್ತಿರವಾಗುವ ಬೆರಳು ಕಿರುಬೆರಳೇ ಅಲ್ಲವೇ?

ಐದೂ ಬೆರಳುಗಳ ಸಮಾಗಮಿತ ನಮಸ್ಕಾರದಲ್ಲಿ ಹೆಬ್ಬೆರಳು ಹೃದಯಮುಖಿಯಾಗಿರುತ್ತದೆ. ಹೆಬ್ಬರಳು ಹೃದಯದ ಸಾಮಿಪ್ಯತೆ ಪಡೆಯುವುದು ಎಂದರೆ ನಮಸ್ಕಾರದಿಂದ ಆತ್ಮವಿಶ್ವಾಸ ಬಲಗೊಳ್ಳುವುದೆಂದರ್ಥ. ಇನ್ನೊಬ್ಬನನ್ನು ನಮಿಸುವಾಗ ನಮ್ಮ ಅಹಂಕಾರವು ಆತನಿಗೆ ಕಾಣಿಸದು. ಆದರೆ ನಮ್ಮ ಗೆಲುವು ಮತ್ತು ಗೆಲುವುಗಳು ಎದ್ದುಕಾಣುತ್ತವೆ. ಗೆಲುವಿನ ಸಂಕೇತವಾದ ನಡುಬೆರಳು ಅತೀ ಉದ್ದವಿರುವುದರಿಂದ ಅಹಂಕಾರದ ಬೆರಳು ಕಾಣಿಸದು. ಜತೆಗೆ ಉಂಗುರ ಬೆರಳಿನ ಮೂಲಕ ಭದ್ರತೆಯ ಅರಿವು ಕಾಣಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ವಿನಯ ಅವನ ಮನಸ್ಸನ್ನು ತಟ್ಟುತ್ತದೆ.

ನಮಸ್ಕಾರದ ನಮ್ಮ ವಿನಯವು ನಮಗೆ ಸ್ನೇಹಿತರನ್ನು ಒದಗಿಸುತ್ತದೆ. ಇತರರ ಜೊತೆಗಿನ ನಮ್ಮ ಸಂಬಂಧಗಳು ಬಲಗೊಳ್ಳುತ್ತವೆ. ನಮ್ಮ ವ್ಯಕ್ತಿತ್ವರಳುತ್ತದೆ. ವ್ಯಕ್ತಿತ್ವರಳಿದಂತೆ ಗೌರವವೂ ಅಧಿಕರಿಸುತ್ತದೆ. ಮನಸ್ಸುಗಳ ಮಿಲನಕ್ಕಿಂತ ಬಲವಾದ ಆಸ್ತಿ ಬೇರೊಂದಿಲ್ಲ. ಮನಗಳ ಬೆಸುಗೆಯಲ್ಲಿ ನಮಸ್ಕಾರವು “ಹೆರಾಲ್ಡ್‌ ಟೈಟ್‌” ನಂತೆ ಕೆಲಸಮಾಡುತ್ತದೆ. ನಮ್ಮ ಬಗ್ಗೆ ಇತರರಲ್ಲಿ ವಿಶ್ವಾಸ ಹಲವು ಪಟ್ಟು ಏರುತ್ತದೆ. 

ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಬಂದೇ ಬರುತ್ತದೆ. ಒಂದು ಗುಂಪಿಗೆ ನಾವು ಒಂದು ನಮಸ್ಕಾರ ನೀಡಿದಾಗ ಆ ಗುಂಪಿನಲ್ಲಿರುವವರೆಲ್ಲರ ನಮಸ್ಕಾರ ನಮಗೆ ಹರಿದು ಬರುತ್ತದೆ. ನಮಸ್ಕಾರವೆನ್ನುವುದು ಅತ್ಯಂತ ಲಾಭದ ವ್ಯವಹಾರವೆಂದೂ ವ್ಯಾಖ್ಯಾನಿಸಿದರೆ ಅತಿಶಯವಾಗದು. ಪಡೆಯುವ ನಮಸ್ಕಾರಗಳು ನಮಗೆ ಭಗವದನುಗ್ರಹದಂತೆ ಶುಭಕರವಾಗುವುದು; ಭಕ್ತಿ ಪ್ರೀತಿ ಸಂಯೋಜಿತ ನಮಸ್ಕಾರಗಳು ಎಂದಿಗೂ ಶಾಪವಾಗದು. ಎಲ್ಲರಿಗೂ ಪ್ರೀತ್ಯಾದರಗಳಿಂದ ನಮಸ್ಕರಿಸುವ ಸಾತ್ವಿಕ ಗುಣ ನಮ್ಮಲ್ಲಿರಲಿ. ಹೃದಯದಿಂದ ಬಾಗಿ ನಮಸ್ಕರಿಸೋಣ. ಬೀಗುವಿಕೆಗಿಂತ ಬಾಗುವಿಕೆಯೇ ಉತ್ಕೃಷ್ಟ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************


Ads on article

Advertise in articles 1

advertising articles 2

Advertise under the article