-->
ಜೀವನ ಸಂಭ್ರಮ : ಸಂಚಿಕೆ - 218

ಜೀವನ ಸಂಭ್ರಮ : ಸಂಚಿಕೆ - 218

ಜೀವನ ಸಂಭ್ರಮ : ಸಂಚಿಕೆ - 218
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                            


ಮಕ್ಕಳೇ ಈ ಕಥೆ ಓದಿ. ಒಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದನು. ಆತ ಒಂದು ನಾಯಿ ಸಾಕಿದ್ದನು. ಅದು ಚೆನ್ನಾಗಿ ತಿಂದು ಕೊಬ್ಬಿತ್ತು. ಆ ಯಜಮಾನ ಜಮೀನಿನಲ್ಲಿ ಭತ್ತ, ರಾಗಿ ಬೆಳೆದಿದ್ದನು. ಭತ್ತ ರಾಗಿ ಕಟಾವು ಮಾಡಿದ ನಂತರ ಆ ಒಣಹುಲ್ಲನ್ನು ಒಂದು ಕಡೆ ಜೋಡಿಸಿದ್ದನು. ಅದಕ್ಕೆ ನಮ್ಮ ಕಡೆ ಮೆದೆ ಎನ್ನುವರು. ಹಸಿರು ಹುಲ್ಲು ಸಿಗದಿದ್ದಾಗ ಹಸು, ಎಮ್ಮೆಯ ಆಹಾರಕ್ಕೆ ಈ ಒಣ ಹುಲ್ಲನ್ನು ಬಳಸುತ್ತಾರೆ. ಒಂದು ವರ್ಷದವರೆಗೆ ಇಟ್ಟರೂ ಹಾಳಾಗುವುದಿಲ್ಲ. ಹಸಿರು ಹುಲ್ಲು ತಿಂದ ಎಮ್ಮೆ ಹಸುವಿನ ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ ಎನ್ನುವ ಭಾವನೆ ಹಳ್ಳಿಗರದು. ಹಾಗಾಗಿ ಹಸು ಹೆಮ್ಮೆಗಳಿಗೆ ವರ್ಷಪೂರ್ತಿ ಆಹಾರ ಆಗುವುದರಿಂದ ರಾಗಿ ಭತ್ತ ವಿಂಗಡಿಸಿದ ನಂತರ ಆ ಒಣಹುಲ್ಲನ್ನು ಶಿಸ್ತಾಗಿ, ಕ್ರಮಬದ್ಧವಾಗಿ ಜೋಡಿಸಿರುತ್ತಾರೆ. ಈ ರೀತಿ ಇಟ್ಟ ಹುಲ್ಲಿಗೆ ಒಣ ಹುಲ್ಲಿನ ಮೆದೆ ಎನ್ನುವರು.

ಒಮ್ಮೆ ಈ ನಾಯಿ ಮಾಲಿಕನ ಜೊತೆ ಜಮೀನಿಗೆ ಹೋಗಿತ್ತು. ಅದು ಈ ಹುಲ್ಲಿನ ಮೆದೆ ನೋಡಿತ್ತು. ಮಾಲೀಕ ಹಸು ಎಮ್ಮೆಗಳನ್ನು ಮೇಯಲು ಬಿಟ್ಟಿದ್ದನು. ಹಾಗೆ ಜಮೀನು ನೋಡಲು ಹೋದನು. ನಾಯಿ ಆ ಮೆದೆಯ ಬಳಿ ನಿಂತಿತ್ತು. ಕೊನೆಗೆ ನಾಯಿ ಈ ಒಣ ಹುಲ್ಲಿನ ಮೆದೆ ಏರಿ ಮೇಲೆ ಕುಳಿತುಕೊಂಡಿತು. ಅಲ್ಲಿಗೆ ಹುಲ್ಲು ತಿನ್ನಲು ಹಸು ಮತ್ತು ಎಮ್ಮೆ ಬಂದವು. ಹಸು ಮತ್ತು ಎಮ್ಮೆ ಹುಲ್ಲಿನ ಸಮೀಪ ಬರುತ್ತಿದ್ದಂತೆ ನಾಯಿ ಗುರ್ರೆಂದು ನೋಡುತ್ತಾ ಬೊಗಳಿತ್ತು. ಹಸು ಮತ್ತು ಎಮ್ಮೆ ಹಿಂದೆ ಸರಿದು, ಇದ್ಯಾಕೆ ಹೀಗೆ ಮಾಡುತ್ತಿದೆ ? ಅಂತ ಯೋಚಿಸಿದವು. ಕೊನೆಗೆ ಹೇಳಿದವು, "ನಾಯಿಯೆ, ಈ ಹುಲ್ಲು ನಿನ್ನ ಆಹಾರವಲ್ಲ, ಬೊಗಳುತ್ತೀಯಲ್ಲ ಯಾಕೆ?." ಆಗ ನಾಯಿ ಹೇಳಿತು, "ನೋಡು ನಾನು ಎಲ್ಲಿದ್ದೇನೆ?. ನಾನು ಈ ಹುಲ್ಲಿನ ಮೇಲೆ ಕುಳಿತಿದ್ದೇನೆ. ನಾನು ಇದರ ಮಾಲೀಕ" ಎಂದಿತು. ಆಗ ಹಸು ಹೇಳಿತು, "ಈ ಹುಲ್ಲು ನಿನಗೇನು ಉಪಯೋಗವಿಲ್ಲ, ಅದು ನಿನ್ನ ಆಹಾರವಲ್ಲ, ಅದು ಹೇಗೆ ನೀನು ಮಾಲೀಕ?." ಆಗ ನಾಯಿ ಹೇಳಿತು, "ನಾನು ಬಳಸುತ್ತೇನೊ ಇಲ್ಲವೋ, ನನಗೆ ಉಪಯೋಗ ಇದೆಯೋ ಇಲ್ಲವೋ, ಅದು ಮುಖ್ಯವಲ್ಲ, ನಾನು ಇದರ ಮೇಲೆ ಕುಳಿತಿದ್ದೇನೆಯಲ್ಲ ಅದು ಮುಖ್ಯ" ಅಂದಿತು.

ಈ ಕಥೆಯನ್ನು ಓದಿದ ಬಳಿಕ ನಮ್ಮಲ್ಲಿರುವ ಶ್ರೀಮಂತರನ್ನು ನೋಡಿ. ಕೆಲವರು ಇದ್ದರು. ಸಾವಿರಾರು ಸೀರೆ, ನೂರಾರು ಚಪ್ಪಲಿ ಇತ್ತು. ಆದರೆ ಬಳಸುತ್ತಿದ್ದದ್ದು ಒಂದು ದಿನಕ್ಕೆ ಒಂದು ಸೀರೆ, ಒಂದು ಜೊತೆ ಚಪ್ಪಲಿ. ಕೆಲವರು ಅನ್ಯಾಯ ಭ್ರಷ್ಟಾಚಾರದ ಮೂಲಕ ಹಣ ಆಸ್ತಿ ಗಳಿಸಿರುತ್ತಾರೆ. ಗಳಿಸಿದ ಆಸ್ತಿಯಲ್ಲಿ ಏನು ಬಳಸದೆ ಹಾಗೆ ಬಿದ್ದಿರುತ್ತದೆ. ಇವರಿಗೆ ನಮ್ಮ ಹೆಸರಿನಲ್ಲಿ ಇದೆ ಅನ್ನೋದು ಅಷ್ಟೇ, ಅದನ್ನು ಬಳಸುವವನಿಗೆ ನೀಡುವುದಿಲ್ಲ. ಕೊಟ್ಟರೆ ಎಲ್ಲಿ ಅನ್ಯಾಯ ಮಾಡಿಬಿಡುತ್ತಾರೋ ಎನ್ನುವ ಅಂಜಿಕೆಯಿಂದ ಯಾರಿಗೂ ನೀಡುವುದಿಲ್ಲ.

ಇನ್ನು ಕೆಲವರು ಬೇರೆ ಬೇರೆ ನಗರದಲ್ಲಿ ಮನೆ ಕಟ್ಟಿರುತ್ತಾರೆ. ಅವರು ಇರುವುದು ಒಂದು ಕಡೆ. ಕೆಲವರು ಅನ್ಯಾಯಮಾರ್ಗದಲ್ಲಿ ಹಣ ಗಳಿಸಿ ವಿದೇಶಿ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ಕಡೆ ಇಟ್ಟಿರುತ್ತಾರೆ. ಅವರಿಗೂ ಉಪಯೋಗವಿಲ್ಲ ಬೇರೆಯವರಿಗೂ ಉಪಯೋಗವಿಲ್ಲ. ಬಹುತೇಕ ಜನ ತಮ್ಮ ಹೆಸರಿನಲ್ಲಿ ಇಟ್ಟುಕೊಳ್ಳಲು ಗಳಿಸುತ್ತಾರೆ. ಬಳಸಲು ಅಲ್ಲ. ಅನುಭವಿಸಲು ಅಲ್ಲ. ಬಲ್ಲವರು ಹೇಳುತ್ತಾರೆ, "ಹಣ, ಕೈ ಕಾಲು ಇದ್ದಂತೆ. ಕೈ ಕಾಲು ಬಳಸುತ್ತಿದ್ದರೆ ಬಾಳಿಕೆ ಬರುತ್ತದೆ. ಗಟ್ಟಿಯಾಗಿರುತ್ತದೆ." ಹಾಗೆ ಹಣ ಸಂಗ್ರಹಿಸುವುದಲ್ಲ, ಬಳಸಬೇಕು ಯಾವುದಕ್ಕೆ ಬಳಸಬೇಕು?. ಹೇಗೆ ಬಳಸಬೇಕು?. ಎಷ್ಟು ಬಳಸಬೇಕು ?.ಅನ್ನುವುದು ಬಹಳ ಮುಖ್ಯ. ಹಣ ನದಿಯಂತೆ ಹರಿಯಬೇಕು. ನದಿ ಹರಿಯುವಾಗ ತನ್ನ ಎರಡು ಬದಿ ಗಿಡಗಳಿಗೆ ನೀರುಣಿಸಿ ನಿಸರ್ಗವನ್ನು ಶ್ರೀಮಂತ ಮಾಡುತ್ತದೆ. ಆದ್ದರಿಂದ ಅದರ ನೀರು ಸ್ವಚ್ಛವಾಗಿರುತ್ತದೆ. ಹಾಗೆ ಸಂಗ್ರಹಿಸಿ ಇಟ್ಟರೆ ಕಟ್ಟೆಯಂತೆ. ಕಟ್ಟೆಯಲ್ಲಿರುವ ನೀರು ಕ್ರಮೇಣ ಆವಿಯಾಗಿ ಕಡಿಮೆಯಾಗುತ್ತದೆ. ಕೊನೆಗೆ ಮಲಿನವಾಗಿ ಬಳಸದಂತೆ ಆಗುತ್ತದೆ. ಕೊನೆಗೆ ಅದರ ಕೆಟ್ಟ ವಾಸನೆ ಸುತ್ತಮುತ್ತ ಹರಡುತ್ತದೆ. ಈ ಕೆಟ್ಟ ವಾಸನೆಯಿಂದ ಬೇಸತ್ತು ಜನ ಅದನ್ನು ಮುಚ್ಚಿ ಬಿಡುತ್ತಾರೆ. ಸಂಗ್ರಹಿಸಿದವರ ಸ್ಥಿತಿ ಕಟ್ಟೆಯಂತೆ. ಸಂಪತ್ತು ಗಳಿಸುವುದು ಬಳಸುವುದಕ್ಕಾಗಿ. ಆನಂದಿಸುವುದಕ್ಕಾಗಿ. ಈ ಸಂಪತ್ತು ಈ ಸಮಾಜದಿಂದ, ನಿಸರ್ಗದಿಂದ ಗಳಿಸಿದ್ದೀವಿ ಅಂದಾಗ ಆ ನಿಸರ್ಗ ಮತ್ತು ಸಮಾಜವನ್ನು ಸುಂದರ ಮಾಡಲು ಸ್ವಲ್ಪವಾದರೂ ಬಳಸಬೇಕು. ಸಂತೋಷ ಕೊಡುವುದು ಸಂಪತ್ತು. ರಕ್ಷಣೆ ಮಾಡುವುದು ಸಂಪತ್ತಲ್ಲ. ಪೋಷಣೆ ಮಾಡುವುದು ಸಂಪತ್ತು. ಗಳಿಸಿದ್ದು ಯಾರಿಗೂ ಉಪಯೋಗವಿಲ್ಲ ಎಂದರೆ ಮೆದೆಯ ಮೇಲೆ ಕುಳಿತ ನಾಯಿಯಂತೆ ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************




Ads on article

Advertise in articles 1

advertising articles 2

Advertise under the article