ಜೀವನ ಸಂಭ್ರಮ : ಸಂಚಿಕೆ - 212
Monday, October 20, 2025
Edit
ಜೀವನ ಸಂಭ್ರಮ : ಸಂಚಿಕೆ - 212
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ನಮ್ಮ ಜೀವನದಲ್ಲಿ ಯಾವುದು ಶ್ರೇಷ್ಠ? ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಘಟನೆ ಓದಿ. ಲೂಯಿ ಪಾಶ್ಚರ್ ಎನ್ನುವ ವಿಜ್ಞಾನಿ ತರುಣನಾಗಿದ್ದ. ವಿಜ್ಞಾನಿ ಹಾಗೂ ಸಂಶೋಧಕ. ಅಷ್ಟು ತನ್ಮಯ ತನ್ನ ಕೆಲಸದಲ್ಲಿ. ಈತನಿಗೆ ವಿವಾಹ ನಿಶ್ಚಯವಾಗಿತ್ತು. ಲಗ್ನ ಮಂಟಪದಲ್ಲಿ ಎಲ್ಲರೂ ಸೇರಿದ್ದರು. ಲೂಯಿ ಪಾಶ್ಚರ್, ವಧು, ಎರಡು ಕುಟುಂಬದ ಬಂಧು ಬಳಗ ಎಲ್ಲರೂ ಸೇರಿದ್ದರು. ಮದುವೆ ನಡೆಯುತ್ತಿದ್ದ ಸ್ಥಳ ಚರ್ಚ್. ಒಂದು ಬದಿಯಲ್ಲಿ ವರನ ಕಡೆಯವರು, ಇನ್ನೊಂದು ಬದಿಯಲ್ಲಿ ವಧುವಿನ ಕಡೆಯವರು ಸೇರಿದ್ದರು. ಮದುವೆ ನೆರವೇರಿಸಲು ಪಾದ್ರಿ ಬಂದು, ವರ ಮತ್ತು ವಧುವಿನ ಹೆಸರನ್ನು ಹೇಳಿ, ವಧುವನ್ನು ವೇದಿಕೆಗೆ ಕರೆದರು. ವಧು ವೇದಿಕೆ ಮೇಲೆ ಹೋದಳು. ನಂತರ ವರನನ್ನು ಕರೆದರು. ಅಲ್ಲಿ ವರ ಇರಲಿಲ್ಲ. ಅಂದರೆ ಏನು?. ಯಾವಾಗಾದರೂ ಹೀಗಾಗುತ್ತದೆಯೆ?. ಲಗ್ನ ಒಂದು ತಿಂಗಳು ಇರುವಾಗಲೇ ಮದುವೆ ಮಂಟಪ ನೋಡಲು ಹೋಗುವ ಈಗಿನ ವರರೆಲ್ಲಿ? ಅಂತಹದರಲ್ಲಿ ವರ ಸಿಗ್ಲಿಲ್ಲ ಅಂದರೆ ಏನು?. ಒಂದು ಸಲ, ಎರಡು ಸಲ, ಮೂರು ಸಲ ಕರೆದರೂ ವರ ಇರಲಿಲ್ಲ. ನಂತರ ವರನನ್ನು ಹುಡುಕಲು ಶುರು ಮಾಡಿದರು. ಎಲ್ಲೂ ಇಲ್ಲ. ಬಂದು ಕುಳಿತಿದ್ದ. ಎದ್ದು ಹೋದದ್ದು ಯಾರಿಗೂ ಗೊತ್ತಿಲ್ಲ. ಆಗ ಆತನ ಗೆಳೆಯ ಈತನನ್ನು ಹುಡುಕಿಕೊಂಡು ಪ್ರಯೋಗ ಶಾಲೆಗೆ ಹೋದನು. ಅಲ್ಲಿ ಲೂಯಿ ಪಾಸ್ಟರ್ ಪ್ರಯೋಗ ಶಾಲೆಯಲ್ಲಿ, ಪ್ರಯೋಗ ಮಾಡಿಕೊಳ್ಳುತ್ತಾ ಮಗ್ನನಾಗಿದ್ದನು. ಲಗ್ನ ಮಂಟಪದಲ್ಲಿ ಏನೋ ಹೊಳೆದಿತ್ತು. ಸಮಸ್ಯೆಗೆ ಉತ್ತರ ಹೊಳೆದಿತ್ತು. ಓಡುತ್ತಾ ಬಂದು ಪ್ರಯೋಗ ಮಾಡುತ್ತಿದ್ದನು. ವಧುವನ್ನು ಮರೆತಿದ್ದನು. ಲಗ್ನ ಮರೆತಿದ್ದನು. ಲಗ್ನ ಮಂಟಪ ಮರೆತ್ತಿದ್ದನು. ಇದು ಮಹತ್ವದ್ದು ಅಂದ ಗೆಳೆಯನಿಗೆ. ಎಲ್ಲರೂ ಅಲ್ಲೇ ಕುಳಿತಿದ್ದಾರೆ, ನೀನೇನು ಮಾಡುತ್ತಿದ್ದೀಯಾ? ಎಂದನು ಗೆಳೆಯ. ಅವಾಗ ಪಾಶ್ಚರ್ ಹೇಳುತ್ತಾನೆ... "ಲಗ್ನ ಮತ್ತೆ ಆಗೋದಿಕ್ಕೆ ಬರುತ್ತದೆ. ಸಂಶೋಧನೆ ಹೊಳೆಯುತ್ತದಲ್ಲ, ತಲೆಗೆ ಮತ್ತೆ ಹೊಳೆಯುತ್ತದೆ ಏನು?. ಲಗ್ನ ಮಂಟಪದಲ್ಲಿ ಸತ್ಯಹೊಳೆದಿದೆ. ತಲೆಯಲ್ಲಿ ವದುವಿಲ್ಲ. ತಲೆಯಲ್ಲಿ ಸಮಾರಂಭವಿಲ್ಲ. ತಲೆಯೊಳಗೆ ಶೋಧ. ಇಂತಹ ಮನಸ್ಸಿದ್ದರೆ ಮಾತ್ರ ಜಗತ್ತಿನ ಸತ್ಯ ಮೈಬಿಚ್ಚಿಕೊಳ್ಳುತ್ತದೆ. ಸಂಶೋಧನೆಗಾಗಿ ಬದುಕಿದ್ದಾರೆ. ಇದಕ್ಕೆ ತತ್ಪರತೆ ಎನ್ನುವರು. ಯಾರಾದರೂ ಮದುವೆ ಮನೆಯಿಂದ ಓಡಿ ಹೋಗಿದ್ದರೇನು? ಮದುವೆಗೆ ಎಲ್ಲಾ ಮರೆತು ಬಂದಿದ್ದಾರೆ. ಲಗ್ನದಾಗ ಕುಳಿತಾಗ ಬೇರೆ ವಿಚಾರ ಬರುತ್ತದೆ ಏನು?. ನಮಗೆ ಲಗ್ನ ಮಹತ್ವ. ಆ ವಿಜ್ಞಾನಿಗೆ ಸಂಶೋಧನೆ ಮಹತ್ವದ್ದು. ಅದೇ ವಿಜ್ಞಾನಿ ನಾಯಿ ಕಡಿತಕ್ಕೆ, ಪ್ಲೇಗ್ ಗೆ ಲಸಿಕೆ ಕಂಡುಹಿಡಿದನು. ಜಗತ್ತನ್ನು ರೋಗ ಮುಕ್ತ ಮಾಡಿದ. ಹಾಗೆ ನಮ್ಮ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಕೊಡಬೇಕೆಂದು ಯೋಚಿಸಬೇಕು. ಯಾವುದು ನಮ್ಮ ಜೀವನವನ್ನು ಸುಂದರಗೊಳಿಸುತ್ತದೆಯೋ? ಶ್ರೀಮಂತಗೊಳಿಸುತ್ತದೆಯೋ?. ಅದಕ್ಕೆ ಮಹತ್ವ ಕೊಡಬೇಕು. ಯಾವುದರಿಂದ ನಮ್ಮ ಜೀವನದ ಬೆಲೆ ಹೆಚ್ಚುತ್ತದೆ?. ಅದಕ್ಕೆ ಬೆಲೆ ಕೊಡಬೇಕು. ಅದನ್ನು ನಾವು ಯೋಚಿಸಬೇಕು. ಆ ರೀತಿ ಬುದ್ಧಿಯನ್ನು ಬಳಸಬೇಕು. ಅದಕ್ಕೆ ಮಹತ್ವ ಕೊಡಬೇಕು.
ಇಲ್ಲೊಂದು ಹೂವಿದೆ, ಪಕ್ಕದಲ್ಲಿ ಮುತ್ತಿನಹಾರ, ರತ್ನ ಇದೆ ಎಂದು ಇಟ್ಟುಕೊಳ್ಳಿ. ಅಲ್ಲಿಗೆ ಭೃಂಗ ಬಂದಿತ್ತು ಅಂತ ಇಟ್ಟುಕೊಳ್ಳಿ. ರತ್ನದ ಬೆಲೆ ಲಕ್ಷ. ಹೂವಿಗೆ ಬೆಲೆ ಇಲ್ಲ. ಆದರೆ ಭೃಂಗ ಹೋಗುವುದು ರತ್ನದ ಕಡೆ ಅಲ್ಲ, ಹೂವಿನ ಕಡೆ ಹೋಗುತ್ತದೆ. ಯಾಕೆ?. ಆ ಭೃಂಗಕ್ಕೆ ಗೊತ್ತಿದೆ ರತ್ನಕ್ಕೆ ಬೆಲೆ ಇಲ್ಲ ಅಂತ. ಭೃಂಗ ಹೇಳುತ್ತದೆ, ಈ ರತ್ನ ಏತಕ್ಕೆ ಬರುತ್ತದೆ?. ಈ ಹೂವು ರಸ ನೀಡುತ್ತದೆ. ನನ್ನ ಬದುಕು ಈ ರಸದ ಮೇಲೆ ನಿಂತಿದೆ ಅನ್ನುತ್ತದೆ. ಹಾಗೆ ನಮಗೂ ಗೊತ್ತಿರಬೇಕು, ಯಾವುದು ಮಹತ್ವದ್ದು?. ಅಂತ .
ಒಬ್ಬ ರೈತ ಬೆಳೆದಿದ್ದ ಎಲ್ಲಾ ಬೆಳೆಯನ್ನು ಮಾರಾಟ ಮಾಡಿ, ಒಳ್ಳೆಯ ಬಟ್ಟೆ ತೆಗೆದುಕೊಂಡು, ಬೂಟು ಸೂಟು ಎಲ್ಲ ತೆಗೆದುಕೊಂಡು ಮನೆಗೆ ಬಂದನು. ಮನೆಯಲ್ಲಿ ಊಟಕ್ಕೆ, ತಿನ್ನೋದಕ್ಕೆ ಏನಿಲ್ಲ. ಎಲ್ಲಾ ಖರ್ಚು ಮಾಡಿದ್ದಾನೆ. ಬೂಟು, ಸೂಟು ಹಾಕಿಕೊಂಡ ಮಾತ್ರಕ್ಕೆ ಸಂತೋಷ ಬರುತ್ತದೆ ಏನು?. ಮೈಮೇಲೆ ಬಟ್ಟೆ ಇರಲಿಕ್ಕಿಲ್ಲ , ಚಂದಾಗಿ ಊಟ ಮಾಡಿದ ಮನುಷ್ಯನ ಮುಖವೇ ಬೇರೆ. ಹಸಿವು ಇದ್ದು ಮೈ ಮೇಲೆ ಎಲ್ಲಾ ಹಾಕಿಕೊಂಡಿದ್ದಾನೆ. ಆದರೆ ಆತನ ಮುಖಾನೆ ಬೇರೆ. ಯಾವುದಕ್ಕೆ ಮಹತ್ವ ?.ಆಹಾರ. ಯಾವುದು ಸಂಪತ್ತು?. ಬೆರಳಿಗೆ ಉಂಗುರ ಹಾಕಿಕೊಂಡಿದ್ದೇವೆ. ಆ ಬೆರಳನ್ನು ಅಲುಗಾಡಿಸಲು ಆಗುತ್ತಿಲ್ಲ. ಯಾವುದು ಮಹತ್ವದ್ದು?. ಬೆರಳು ಮಹತ್ವದ್ದೊ, ಬೆರಳನ್ನು ಅಲಂಕರಿಸುವ ಉಂಗುರ ಮಹತ್ವದ್ದೊ?. ಅಂತಹ ಉಂಗುರ ಮಾಡಿರುವುದು ಇವೆ ಬೆರಳಲ್ಲವೇ?. ಹಾರ ಮಹತ್ವದ್ದೊ?. ಕಂಠ ಮಹತ್ವದ್ದೊ?. ತಲೆ ಮಹತ್ವದ್ದೊ?. ಕಿರೀಟ ಮಹತ್ವದ್ದೊ?. ಕಾಲು ಮಹತ್ವದ್ದೊ?. ಕಾಲು ಗೆಜ್ಜೆ ಮಹತ್ವದ್ದೊ?. ಹೇಳಿ. ಯಾವುದಕ್ಕೆ ಮಹತ್ವ ಕೊಡಬೇಕು?. ನಡೆಯುವ ಕಾಲು, ವಿಚಾರ ಮಾಡುವ ತಲೆ, ಕಾರ್ಯ ಮಾಡುವ ಕೈಗಳು ಇವುಗಳಿಗೆ ಮಹತ್ವ ಕೊಡಬೇಕೊ?, ಅಲಂಕಾರಕ್ಕೆ ಮಹತ್ವ ಕೊಡಬೇಕೊ?. ಮಗು ಬಹಳ ಸುಂದರ ಇದೆ. ನಗುನಗುತ್ತಾ ಆಡುತ್ತಾ ಇದೆ. ಅದರ ಮೈಮೇಲೆ ತಾಯಿ ಆಭರಣ ಹಾಕಿದ್ದಾಳೆ. ಮೈ ಮೇಲೆ ರೇಷ್ಮೆ ಬಟ್ಟೆ ಹಾಕಿದ್ದಾಳೆ. ಹುಡುಗನನ್ನು ನೋಡಿ ಆನಂದಪಟ್ಟಿದ್ದಾಳೆ. ಹುಡುಗನನ್ನಲ್ಲ ಆಭರಣ ನೋಡಿ ಆನಂದ ಪಟ್ಟಿರುವುದು. ಆ ಹುಡುಗನನ್ನ ಆಟಕ್ಕೆ ಬಿಟ್ಟಿದ್ದಾಳೆ. ಹೇಳಿದ್ದಾಳೆ ಹೊರಗೆ ಹೋಗಬೇಡ ಅಂತ. ಯಾಕೆಂದರೆ ಯಾರಾದರೂ ಆಭರಣ ಕಸಿದುಕೊಂಡಾರು ಅನ್ನುವ ಭಯ. ಚಿಂತೆ ಮಗನದ್ದಲ್ಲ, ಆಭರಣದ್ದು. ಹೊರಗೆ ತುಂತುರು ಮಳೆ ಬರುತ್ತಾ ಇದೆ. ಹೊರಗೆ ಸಣ್ಣ ಸಣ್ಣ ಹುಡುಗರು ಬಂದು ಕೇಕೆ ಹಾಕಿಕೊಂಡು ಆಟ ಆಡುತ್ತಿದ್ದಾರೆ. ಆ ಹುಡುಗರು ಈ ಹುಡುಗನನ್ನು ಹೊರಗೆ ಬಾ ಎಂದು ಕರೆಯುತ್ತಿದ್ದಾರೆ. ಈ ಹುಡುಗ ಬಟ್ಟೆ ಮರೆತ, ಆಭರಣ ಮರೆತ, ಮಳೆಯೊಳಗೆ ಹಾಡಿ ಕುಣಿದು ಕುಪ್ಪಳಿಸಿದ. ತಾಯಿ ಬಂದು ನೋಡಿ ಹಿಡಿದುಕೊಂಡು ಬಂದಳು. ಆಗ ಮಗು ಹೇಳಿತು. ನನಗ್ಯಾಕೆ ಹಿಡಿಯುತ್ತಿ? ಇಷ್ಟು ಆನಂದ ಅಲ್ಲಿ?. ಆನಂದ ಪಡುತ್ತೀನಿ ಬಿಡು ಅಂದಿತು. ಆಗ ತಾಯಿ ಹೇಳಿದಳು, ಬಟ್ಟೆ ಹೊಲಸಾಗುತ್ತದೆ ಅಂದಳು. ಆಗ ಹುಡುಗ ಹೇಳಿದನು, ತೆಗೆದು ಕೊಂಡು ಬಿಡು ಅದನ್ನು. ನಿನ್ನ ಬಟ್ಟೆ ಯಾರಿಗೆ ಬೇಕಾಗಿದೆ ?.ನಿನ್ನ ಆಭರಣ ಯಾರಿಗೆ ಬೇಕಾಗಿದೆ?. ನಾನು ಆಡುವುದಕ್ಕೆ, ಸಂತೋಷ ಪಡುವುದಕ್ಕೆ ಅಡೆತಡೆ ಆಯಿತು ಅಂದರೆ ಅವುಗಳನ್ನು ತೆಗೆದುಕೊಂಡು ಬಿಡು ಎಂದನು. ಎಲ್ಲ ತೆಗೆದುಹಾಕಿ ಹೊರಗೆ ಹೋಗಿ ಆಟ ಆಡಿಕೊಂಡು ಸಂತೋಷಪಡುತ್ತಿದ್ದನು. ಯಾವುದು ಮಹತ್ವದ್ದು?. ತುಂತುರು ಹನಿ, ತಂಪಾದ ಗಾಳಿ, ಸಂತೋಷದಿಂದ ಆಡುತ್ತಿತ್ತು. ಯಾವುದು ಮಹತ್ವ? ಹುಡುಗನಿಗೆ ಗೊತ್ತಿದೆ ಸಂತೋಷ ಮಹತ್ವದ್ದು, ಹೊರಗೆ ಆಡುವುದು ಮಹತ್ವದ್ದು. ಆಟದಿಂದ ಆಗುವ ಸಂತೋಷ ಮಹತ್ವದ್ದು ಅಂತ ಹುಡುಗನಿಗೆ ಗೊತ್ತು. ಆದರೆ ತಾಯಿಗೆ ಗೊತ್ತಿಲ್ಲ. ತಾಯಿಗೆ ಬಟ್ಟೆ ಮಹತ್ವದ್ದು. ಆಭರಣ ಮಹತ್ವದ್ದು. ಅಲಂಕಾರ ಮಹತ್ವದ್ದು. ಯಾವುದಕ್ಕೆ ಮಹತ್ವ ಕೊಡಬೇಕೆಂದು ಮಗುವಿಗೆ ಗೊತ್ತಿದೆ. ತಾಯಿಗೆ ಗೊತ್ತಿಲ್ಲ. ಈ ಕಥೆ ಹೇಳಿದವರು ರವೀಂದ್ರನಾಥ ಟಾಗೋರ್. ಮಕ್ಕಳಿಗೆ ಬಂಗಾರದ ಬಟ್ಟಲಲ್ಲಿ ಹಾಲು ನೀಡಿದರು, ಮಕ್ಕಳು ಹಾಲಿಗೆ ಮಹತ್ವ ನೀಡುತ್ತವೆ ವಿನಹ ಬಂಗಾರದ ಬಟ್ಟಲಿಗೆ ಅಲ್ಲ. ಆದರೆ ನಾವು ಹಾಲು ಚೆಲ್ಲಿ ಬಟ್ಟಲು ಇಟ್ಟುಕೊಳ್ಳುತ್ತೇವೆ. ಹಾಗೆ ನಾವು ಯಾವುದಕ್ಕೆ ಮಹತ್ವ ನೀಡಬೇಕು ಎಂಬುದನ್ನು ವಿಚಾರ ಮಾಡಬೇಕು. ಅದರಲ್ಲಿ ಮಗ್ನ ಆಗಬೇಕು.
ಯಾವುದು ಮಹತ್ವದ್ದು ಆಯ್ಕೆ ಮಾಡಿ, ಅದರಲ್ಲಿ ತತ್ಪರತೆ ಹೊಂದಬೇಕು. ಜಗತ್ತು ಯಾವುದಕ್ಕೆ ಮಹತ್ವ ಕೊಡುತ್ತದೆ?. ಯಾವುದಕ್ಕೆ ಜಗಳ ಆಗುತ್ತದೆ?. ಯಾವುದಕ್ಕೆ ಜನ ಸಾಯ್ತಾರೆ?, ನಗರ ನಗರಗಳ ನಾಶವಾಗುತ್ತವೆ ಯಾವುದಕ್ಕಾಗಿ?. ಇಷ್ಟೆಲ್ಲ ಮಾಡುತ್ತೀವಲ್ಲ ಉದ್ದೇಶ ಏನು?. ಮಹಾಭಾರತ ಯುದ್ಧ ಆಯ್ತು ಏಕೆ? ಏನು ಸಂತೋಷ ಪಡುವುದಕ್ಕೆ ಏನು? ಅಂಗೈಯಗಲ ಭೂಮಿಗಾಗಿ, ಅಧಿಕಾರದ ಕುರ್ಚಿಗಾಗಿ, ಚದುರಂಗ ಆಟಕ್ಕಾಗಿ. ವ್ಯಾಸ ಮಹರ್ಷಿ ಈ ಕಥೆ ಬರೆದಿದ್ದು. ನಮ್ಮ ಬದುಕಿನ ಕಥೆ. ನಾವು ಯಾವುದಕ್ಕೆ ಮಹತ್ವ ಕೊಡುತ್ತೇವೆ?. ದೇಹಕ್ಕಲ್ಲ , ಮನಸ್ಸಿಗಲ್ಲ, ಬುದ್ಧಿಗಲ್ಲ, ಇವುಗಳನ್ನೆಲ್ಲ ಅರಳಿಸುವ ಆನಂದಕ್ಕೆ ಮಹತ್ವವಿಲ್ಲ. ಕೇವಲ ವಸ್ತುಗಳಿಗೆ ಮಹತ್ವ ಕೊಡುತ್ತೇವೆ. ಇದರಿಂದ ನಮ್ಮ ಜೀವನ ಹೊಲಸಾಗುತ್ತದೆ. ನಮ್ಮ ಜೀವನ ಕಷ್ಟಕ್ಕೆ ಒಳಗಾಗುತ್ತದೆ. ಸಂತೋಷ ಮರೆಯಾಗುತ್ತದೆ.
ಮನುಷ್ಯ ಬುದ್ಧಿವಂತ ಅಂತ ಅನ್ನುತ್ತೇವೆ. ಯಾರಿಗೆ ಯಾವುದು ಸರಿ?. ಯಾವುದು ತಪ್ಪು ಅಂತ ತಿಳಿದಿರುವವನು ಬುದ್ಧಿವಂತ. ಯಾವುದು ಹಿತ?. ಯಾವುದು ಅಹಿತ?. ಅಂತ ತಿಳಿದಿರುವುದು ಬುದ್ಧಿವಂತಿಕೆ. ಯಾವುದು ಒಳ್ಳೆಯದು?. ಯಾವುದು ಕೆಟ್ಟದ್ದು ತಿಳಿಯುವುದೇ ಬುದ್ಧಿವಂತಿಕೆ. ಬುದ್ಧಿವಂತಿಕೆ ಎಂದರೆ ಬಿಡಿಸಿ ನೋಡುವುದು. ಮಗುವಿನ ಮುಂದೆ ಕಲ್ಲು ಸಕ್ಕರೆ ಮತ್ತು ಸಿಗರೇಟು ಇಟ್ಟರೆ, ಮಗು ಕಲ್ಲು ಸಕ್ಕರೆ ತೆಗೆದುಕೊಳ್ಳುತ್ತದೆ . ದೊಡ್ಡವರು ಸಿಗರೇಟ್ ತೆಗೆದುಕೊಳ್ಳುತ್ತಾರೆ. ಏಕೆ?. ಅದು ಅಮೇರಿಕಾದ್ದು, ದುಬಾರಿಬೆಲೆ. ಯಾರು ಬುದ್ಧಿವಂತರು? ಕಲ್ಲು ಸಕ್ಕರೆ ಮೇಲೆ ಐದು ರೂಪಾಯಿ ಒಂದು ಸಿಗರೇಟ್ ಬೆಲೆ 50 ರೂ. ಆದರೂ ಮಗು ಕಲ್ಲು ಸಕ್ಕರೆ ತೆಗೆದುಕೊಂಡಿತು. ಯೋಚಿಸಿ ಯಾರು ಜಾಣರು? ಮಗು ಶಾಲೆಗೆ ಹೋಗಿಲ್ಲ, ಕಲ್ಲು ಸಕ್ಕರೆ ತೆಗೆದುಕೊಂಡಿದೆ. ಇವನು ಎಲ್ಲಾ ಪದವಿ ಪಡೆದಿದ್ದಾನೆ, ಸಿಗರೇಟ್ ತೆಗೆದುಕೊಂಡ. ಬಹಳ ಬುದ್ಧಿವಂತ ಅಂತ ಅನಿಸಿಕೊಂಡಿದ್ದಾನೆ. ಆದರೆ ಹುಡುಗನಷ್ಟು ಜಾಣ ಅಲ್ಲ. ಈತ ದೊಡ್ಡವರ ದೃಷ್ಟಿಯಲ್ಲಿ ಹುಡುಗ ದಡ್ಡ. ಹುಡುಗನ ದೃಷ್ಟಿಯಲ್ಲಿ ಆತ ದಡ್ಡ. ಬೆಲೆ ಎಷ್ಟೇ ಇರಬಹುದು?. ಹಿತವಾದದ್ದನ್ನು ಆಯ್ದುಕೊಂಡವನು ಜಾಣನೊ ಅಥವಾ ಹೆಚ್ಚು ಬೆಲೆಯ ಅಹಿತವಾದದ್ದನ್ನು ಆಯ್ದುಕೊಂಡವನು ಜಾಣನೊ?. ಮಕ್ಕಳ ಮನಸ್ಸು ಸ್ವಚ್ಛ ಇರುವುದರಿಂದ ಸರಿ ತಪ್ಪು ಗೊತ್ತಾಗುತ್ತದೆ. ಸರಿಯಾಗಿ ವಿಚಾರ ಮಾಡಿ ತಿಳಿದುಕೊಂಡು, ಹಿತವಾದದ್ದನ್ನು ಆಯ್ಕೆ ಮಾಡಿ, ಅದರಲ್ಲಿ ತತ್ಪರನಾಗಬೇಕು, ಮಗ್ನನಾಗಬೇಕು. ಯಾವುದು ಬೆಲೆ ಕೊಡುತ್ತದೆ?. ಯಾವುದು ನಮ್ಮನ್ನು ಬಂಧಿಸಿ ನಾಶಮಾಡುತ್ತದೆ?. ಯಾವುದು ನಮ್ಮನ್ನು ಮುಕ್ತ ಗೊಳಿಸುತ್ತದೆ?. ಮನಸ್ಸಿನಲ್ಲಿ ಬೆಳಕನ್ನು ಚೆಲ್ಲುತ್ತದೆ ಅಂತಹದ್ದನ್ನು ಆಯ್ಕೆ ಮಾಡಿ, ಅದರಲ್ಲಿ ಮಗ್ನನಾಗಬೇಕು.
ಶಾಂತಿ ದೊಡ್ಡದೊ, ಗಳಿಕೆ ದೊಡ್ಡದೊ ವಿಚಾರ ಮಾಡಬೇಕು. ಋಷಿಗಳು ಮತ್ತು ಅನುಭವಿಗಳ ದೃಷ್ಟಿಯಲ್ಲಿ ಶ್ರೇಷ್ಠವಾದದ್ದು ಯಾವುದು ಅಂದರೆ ಆನಂದ. ಮೊದಲು ಆನಂದ. ಆನಂದಕ್ಕಾಗಿ ಎಲ್ಲ. ಹೂವು ಮನಸ್ಸನ್ನು ಕೆಡಿಸುವುದಿಲ್ಲ, ಮನಸ್ಸನ್ನು ಅರಳಿಸುತ್ತದೆ. ಮನೆಯಲ್ಲಿ ಎಷ್ಟು ಸಾಮಾನುಗಳು ಇವೆ ಅನ್ನೋದು ಮಹತ್ವದಲ್ಲ. ಮನೆಯಲ್ಲಿ ಇರುವವರು ಎಷ್ಟು ಪ್ರಸನ್ನತೆ ಇದೆ, ಸಂತೋಷವಾಗಿದ್ದಾರೆ ಅನ್ನುವುದು ಮಹತ್ವದ್ದು. ಎಷ್ಟು ನಗುನಗುತ್ತ ಇದ್ದಾರೆ ಅನ್ನುವುದು ಮಹತ್ವದ್ದು. ದೊಡ್ಡ ಮನೆ ಕಟ್ಟಿದ್ದಾರೆ ಬೆಳಗ್ಗೆಯಿಂದ ಸಂಜೆಯವರೆಗೆ ಜಗಳ ಆಡಿದ್ದಾರೆ ಹೀಗಿದ್ದಾಗ ಏನು ಪ್ರಯೋಜನ. ಯಾವುದಕ್ಕೆ ಮಹತ್ವ? ಮನೆಗಲ್ಲ, ಮನೆಯೊಳಗೆ ಇರುವವರಿಗೆ ಮಹತ್ವ. ಒಂದು ಗುಡಿಸಲು ಇರಬಹುದು, ನಗುನಗುತ್ತ ಹಾಡುತ್ತಾ ಇದ್ದರೆ, ಸಂತೋಷವಾಗಿದ್ದರೆ ಇದು ಮನೆ. ಅರಮನೆಯ ಜಗಳಕ್ಕೆ ಮಹತ್ವವೊ, ಗುಡಿಸಿಲಿನ ಸಂತೋಷಕ್ಕೆ ಮಹತ್ವವೊ?. ಮನೆ ನಮ್ಮನ್ನು ಶ್ರೀಮಂತ ಮಾಡುವುದಿಲ್ಲ. ಮನೆಯಲ್ಲಿ ಬದುಕುವ ರೀತಿ ನಮ್ಮನ್ನು ಶ್ರೀಮಂತ ಮಾಡುತ್ತದೆ. ಯಾವುದು ಯೋಗ್ಯ?. ಯಾವುದು ಹಿತ?. ಯಾವುದು ಸತ್ಯ?. ಯಾವುದು ಉಳಿಯುತ್ತದೆ? ಯಾವುದು ಜೀವನಕ್ಕೆ ಬೆಲೆ ತಂದು ಕೊಡುತ್ತದೆಯೋ? ಅಂತಹುದನ್ನು ತಿಳಿದುಕೊಂಡು ಅದರಲ್ಲಿ ಮಗ್ನರಾಗುವುದು. ಅದನ್ನು ಪ್ರೀತಿಸಬೇಕು. ಅಲ್ಲವೇ ಮಕ್ಕಳೆ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************