-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 187

ಸ್ಫೂರ್ತಿಯ ಮಾತುಗಳು : ಸಂಚಿಕೆ - 187

ಸ್ಫೂರ್ತಿಯ ಮಾತುಗಳು : ಸಂಚಿಕೆ - 187
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                       

ಪ್ರತಿಯೊಬ್ಬರ ಬಯಕೆ ಗೆಲುವೇ ಹೊರತು ಸೋಲಲ್ಲ. ಸೋಲೆಂದರೆ ಶೂನ್ಯ ಗಳಿಕೆಯೆಂಬ ಭಾವನೆ ಎಲ್ಲರಲ್ಲಿದೆ. ಸೋಲು ಶೂನ್ಯಗಳಿಕೆಯಲ್ಲವೆಂಬ ವಿಚಾರ ಭಾವದಲ್ಲಿ ವಿಕಾಸವಾದಾಗ ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದು ಸುಲಭವಾಗುತ್ತದೆ. ಸೋಲುಗಳಿಂದ ಯಾವತ್ತೂ ಕಂಗೆಡಬೇಡಿ. ಏಕೆಂದರೆ, ಅತ್ಯಂತ ಯಶಸ್ವಿ ಎನಿಸಿರುವ ಗಣಿತ ಆರಂಭವಾಗುವುದು ಶೂನ್ಯದಿಂದಲೇ ಎಂಬ ಅನುಭವಜ್ಞರ ಸೊಲ್ನುಡಿಗೆ ಕಿವಿಯಾದರೆ ಅಥವಾ ಮನನ ಮಾಡಿದರೆ ಸೋಲೆನ್ನುವುದು ಗೆಲುವಿಗೆ ಆಶ್ರಯ ತಾಣವಾಗುವುದು ನಿಸ್ಸಂದೇಹ.

ಗರ್ಭದಿಂದ ಹೊರಗೆ ಬರುವ ಮಗುವಿನ ಜ್ಞಾನ ಶೂನ್ಯವಲ್ಲದಿದ್ದರೂ ಬಹಳ ಬಹಳ ಕಡಿಮೆ. ಅದು ಸೋಲೇ? ಖಂಡಿತಾ ಅಲ್ಲ. ಮಗು ಬೆಳೆಯುತ್ತಾ ಜ್ಞಾನ ನಿಧಿಯಾಗುತ್ತದೆ. ಸರ್ವಶಕ್ತನಾಗುತ್ತದೆ. ಅಂಬೆಗಾಲಿಡುವಾಗ ಉಂಟಾಗುವ ಮೊದಲ ನೋವಿಗೆ ಮಗು ಅಧೀರವಾದರೆ, ಸೋಲಾಯಿತಲ್ಲಾ ಎಂದು ಬೇಗುದಿಗೊಳಗಾಗಿ ತನ್ನ ಚಲನಕ್ರಿಯೆಯನ್ನು ನಿಲ್ಲಿಸಿದರೆ! ಅದರ ಬದುಕು ಕಮರುತ್ತದೆ. ಸೋಲಿನ ಘಾತವಾಗಿ ಕಮರಿದರೆ ಜೀವನ ಪರ್ಯಂತ ಸೋಲಬೇಕಾಗುತ್ತದೆ. ಮರಳಿ ಮರಳಿ ಮಾಡುವ ಯತ್ನಗಳೇ ನಮ್ಮನ್ನು ಶೂನ್ಯದಿಂದ ಒಂದನೇ ಸ್ಥಾನಕ್ಕೇರಿಸುತ್ತದೆ.

ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಧನೆಯ ಮಟ್ಟವನ್ನು ತೂಗಿ ನೋಡಲು ಆಗಾಗ ಪರೀಕ್ಷೆಗಳು ಜರಗುತ್ತವೆ. ಪರೀಕ್ಷೆಯಿಂದ ಪರೀಕ್ಷೆಗೆ ಆ ವಿದ್ಯಾರ್ಥಿಯ ಶೈಕ್ಷಣಿಕ ತೂಕ ಹೆಚ್ಚಾಗುತ್ತಾ ಇದ್ದರೆ ಆತನು ಉನ್ನತಿಯತ್ತ ಮುಖಮಾಡಿದ್ದಾನೆ. ಅವನ ಸಂಕಲ್ಪಗಳು ಧನಾತ್ಮಕವಾಗಿವೆ. ಪರೀಕ್ಷೆಗಳಿಂದ ಅವನು ಪಾಠ ಕಲಿತು ಹೆಚ್ಚು ಸಾಧನಾ ಶೀಲನಾಗುತ್ತಿದ್ದಾನೆ ಎಂದರಿಯಬೇಕು. ಮಾನವನ ಸಾಧನೆಗೆ ಮೊದಲ ಮೆಟ್ಟಿಲು ಶೂನ್ಯ ಸಂಪಾನೆಯಾದರೆ ಅದು ಮಾಸದಿರುವ ಜೀವನ ಪಾಠವಾಗುತ್ತದೆ. ಭಾವವಿಕಾಸಕ್ಕೆಡೆ ಮಾಡಿಕೊಡುತ್ತದೆ. ಪ್ರಥಮ ಚುಂಬನಂ ದಂತ ಭಗ್ನಂ ಎಂದು ಹೇಳುತ್ತಾರೆ. ಈ ಮಾತು ಎರಡರ್ಥವನ್ನು ನೀಡುತ್ತದೆ. ಸಾಮಾನ್ಯ ಅರ್ಥ ಎಲ್ಲರಿಗೂ ತಿಳೀದೇ ಇದೆ. ಮೊದಲ ಹಂತದ ಪ್ರಯತ್ನದಿಂದ ಗೆಲುವಾದರೆ ಅವನು ಅಹಂಕಾರಿಯಾಗಿ ಭಗ್ನನಾಗುತ್ತಾನೆಂದೂ ತಿಳಿಯಬಹುದು.

ಮನುಜ ಸ್ವಭಾವ ಋಣಾತ್ಮಕವಾದಾಗ ವ್ಯಕ್ತಿತ್ವವೂ ಶೂನ್ಯವೇ ಆಗುತ್ತದೆ ಎಂಬ ನಿರ್ವಿವಾದದ ಮಾತೂ ಇದೆ. ಹೊಸತಾಗಿ ಬಿಡುಗಡೆಯಾದ ಮೊಬೈಲ್ ನ್ನು ಸದ್ಬಳಕೆ ಮಾಡಬೇಕಾದರೆ ಅದಕ್ಕೆ ಉತ್ತಮ ಏಪ್‌ಗಳನ್ನೇ ಅಳವಡಿಸಬೇಕು. ಹಾಗೆಯೇ ಶೂನ್ಯವೆಂದು ಪರಿಗಣಿಸಬಹುದಾದ ಮಗುವನ್ನು ಸತ್ಪ್ರಜೆಯನ್ನಾಗಿ ರೂಪಿಸಲು ಅವನೊಳಗೆ ತುಂಬುವ ಏಪ್‌ಗಳೂ ಸಾತ್ವಿಕವೇ ಆಗಿರಬೇಕು. ಮಗುವನ್ನು ಋಣಾತ್ಮಕ ಕಲ್ಪನೆಯೊಂದಿಗೆ ಬೆಳೆಸಿದರೆ ಮಗುವಿನಲ್ಲಿ ಋಣಾತ್ಮಕ ಅಂಶಗಳನ್ನು ಮಾತ್ರವೇ ಅಧಿಕ ಪ್ರಮಾಣದಲ್ಲಿ ತುಂಬಿದರೆ ಮಗು ಶೂನ್ಯವೂ ಆಗಿರದೆ ಅದಕ್ಕಿಂತ ಕೆಳ ಹಂತಕ್ಕೆ ಸಾಗುತ್ತದೆ. ಶೂನ್ಯವು ಪೂಜ್ಯ ಎಂದು ಕರೆಯಲ್ಪಟ್ಟಿದೆ. ಅದಕ್ಕಾಗಿಯೇ ಇನ್ನೂ ಭಾವನೆಗಳರಳದಿರುವ ಮಗು ದೇವರು ಅಥವಾ ಭಗವಂತ ಸದೃಶ. ಜನ್ಮಾನಂತರ ಬೆಳವಣಿಗೆಯ ಕಾಲಘಟ್ಟದಿಂದ ಪೂಜ್ಯತೆ ಉಳಿಯುವುದು, ಬೆಳೆಯುವುದು ಅಥವಾ ಅಳಿಯುವುದು ಅದು ಹೊಂದುವ ಸಂಸ್ಕಾರ ಭರಿತ ಶಿಕ್ಷಣವನ್ನು ಮತ್ತು ಮಗುವು ಗಮನಿಸುವ ವ್ಯಕ್ತಿತ್ವಗಳನ್ನವಲಂಬಿಸಿರುತ್ತದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************

Ads on article

Advertise in articles 1

advertising articles 2

Advertise under the article