ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 80
Saturday, September 27, 2025
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 80
ಲೇಖಕರು : ಶ್ರೀಮತಿ ಸುಪ್ರಿಯಾ
ಸಹಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
ಕಳೆದ ತಿಂಗಳು ಶಿಕ್ಷಕರ ದಿನಾಚರಣೆ. ವಿದ್ಯಾರ್ಥಿಗಳು ಅತ್ಯಂತ ಸಂಭ್ರಮ, ಸಂತೋಷದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ ಫೋಟೋಗಳು ಎಲ್ಲಾ ಶಿಕ್ಷಕರ ವಾಟ್ಸಾಪ್ಗಳಲ್ಲಿ, ಫೇಸ್‌ಬುಕ್ ಪೇಜ್ ಗಳಲ್ಲಿ ತುಂಬಿ ತುಳುಕುತ್ತಿತ್ತು. ಈ ಸಂದರ್ಭದಲ್ಲಿ ಕೆಲವು ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕೊಟ್ಟ ವಿವಿಧ ಉಡುಗೊರೆಗಳ ಚಿತ್ರಗಳನ್ನು ಕೂಡಾ ಹಂಚಿಕೊಂಡಿದ್ದರು.
ಉಡುಗೊರೆ ಪಡೆಯುವ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ಸರ್ವೇ ಸಾಮಾನ್ಯ, ಹಾಗಾಗಿ ಇದರ ಸರಿ ತಪ್ಪುಗಳ ವಿಶ್ಲೇಷಣೆ ತೀರಾ ವೈಯಕ್ತಿಕ.
ಈ ಉಡುಗೊರೆಯ ವಿಷಯ ಬಂದಾಗಲೆಲ್ಲ ನನಗೆ ಸರಿ ಸುಮಾರು 15 ವರ್ಷಗಳ ಹಿಂದಿನ ಘಟನೆ ನೆನಪಿಗೆ ಬರುವುದುಂಟು. ನಾನು ಏಳನೇ ತರಗತಿಯ ತರಗತಿ ಶಿಕ್ಷಕಿಯಾಗಿ ಹಾಗೂ ಗಣಿತ ಶಿಕ್ಷಕಿಯಾಗಿದ್ದೆ. ಎಲ್ಲಾ ಶಿಕ್ಷಕರಂತೆ ನಾನೂ ಕೂಡಾ ಮಕ್ಕಳ ಬಗ್ಗೆ, ಶಾಲೆಯ ಬಗ್ಗೆ ಅತೀ ಅನ್ನುವ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದೆ. ಗಣಿತ ಶಿಕ್ಷಕಿಯಾಗಿದ್ದ ನಾನು ವಿದ್ಯಾರ್ಥಿಗಳೊಂದಿಗೆ ಅನೇಕ ಬಾರಿ ಕಠಿಣವಾಗಿ ವರ್ತಿಸಿದ್ದೇ ಹೆಚ್ಚು.. ನನ್ನನ್ನು ತುಂಬಾ ಜೋರಿನ ಟೀಚರ್ ಅಂತಲೇ ಮಕ್ಕಳು ತಮ್ಮ ಮನೆಯಲ್ಲಿ ಪರಿಚಯಿಸುತ್ತಿದ್ದರು! ಆದರೂ ನನ್ನ ವಿದ್ಯಾರ್ಥಿಗಳು ನನ್ನೊಂದಿಗೆ ಪ್ರೀತಿ, ಗೌರವದಿಂದ ವ್ಯವಹರಿಸುತ್ತಿದ್ದರು. ಒಂದು ಬಾರಿ ನನ್ನ ಹುಟ್ಟು ಹಬ್ಬದ ದಿನವನ್ನು ಯಾರಿಂದಲೋ ಕೇಳಿ ತಿಳಿದುಕೊಂಡು ನನಗೇ ಗೊತ್ತಿಲ್ಲದೆ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಮಕ್ಕಳು ತಯಾರಿ ನಡೆಸಿದ್ದರು.
ಆ ದಿನ ನನ್ನ ಹುಟ್ಟಿದ ಹಬ್ಬ. ತರಗತಿಗೆ ಹೋದಾಗ ನನಗೆ ಅಚ್ಚರಿ ಕಾದಿತ್ತು. ಕರಿಹಲಗೆಯ ಮೇಲೆ ಹುಟ್ಟು ಹಬ್ಬದ ಶುಭಾಶಯವನ್ನು ಬರೆದಿದ್ದರು! ಸುತ್ತಮುತ್ತ ಹೂವಿನ ಚಿತ್ರಗಳನ್ನು ಬಿಡಿಸಿದ್ದರು, ಒಬ್ಬ ವಿದ್ಯಾರ್ಥಿಯಂತೂ ನನ್ನ ಭಾವಚಿತ್ರ ವನ್ನು ಬಿಡಿಸಿದ್ದ! ತರಗತಿ ಒಳಗೆ ಹೋಗುತ್ತಿದ್ದಂತೆ "ಹ್ಯಾಪಿ ಬರ್ತ್ಡೇ ಮೇಡಂ" ಅಂತ ಒಂದೇ ಉಸಿರಲ್ಲಿ ಎಲ್ಲ ಮಕ್ಕಳು ಕಿರುಚಿದ್ದರು!. ನನಗೆ ಸ್ವಲ್ಪ ಕಸಿವಿಸಿಯಾದರೂ, ಮಕ್ಕಳ ಉತ್ಸಾಹಕ್ಕೆ ತಣ್ಣೀರು ಎರಚುವುದು ಬೇಡ ಎಂದು ಆದಷ್ಟು ನಿಧಾನವಾಗಿ ಮಾತನಾಡಲು ತಿಳಿಸಿದೆ. ಆಗ ಶುರುವಾಯಿತು ಒಬ್ಬೊಬ್ಬರೇ ತಾವು ತಂದಿದ್ದ ಉಡುಗೊರೆಗಳನ್ನು ನನ್ನ ಮುಂದೆ ಇಡಲು ಶುರು ಮಾಡಿದರು. ಅದುವರೆಗೂ ನನಗೆ ಯಾರೂ ಉಡುಗೊರೆಗಳನ್ನು ಕೊಟ್ಟಿದ್ದೇ ಇಲ್ಲ! ಹಾಗಾಗಿ ಈ ಉಡುಗೊರಗಳನ್ನೆಲ್ಲ ನೋಡಿ ಆಶ್ಚರ್ಯ ಮತ್ತು ಸಂತೋಷವಾಯಿತು. ನಾನು ನನ್ನ ಹುಟ್ಟುಹಬ್ಬ ವನ್ನು ವಿಶೇಷವಾಗಿ ಆಚರಿಸಿದ್ದೇ ಇಲ್ಲ! ನಾವು ಚಿಕ್ಕವರಿರಬೇಕಾದರೆ ಅಪ್ಪ- ಅಮ್ಮ ಹುಟ್ಟು ಹಬ್ಬದ ದಿನ ಹೊಸ ಬಟ್ಟೆ ತಂದು ಕೊಡುತ್ತಿದ್ದರು. ಇದು ಒಂದೇ ನನಗೆ ನನ್ನ ಹುಟ್ಟು ಹಬ್ಬದ ನೆನಪು. ಹಾಗಾಗಿ ನಾನೂ ಸ್ವಲ್ಪ ಹೆಚ್ಚೇ ಉತ್ಸಾಹದಿಂದ ಉಡುಗೊರೆಗಳನ್ನು ಪಡೆದುಕೊಂಡು ಮಕ್ಕಳಿಗೆ ಧನ್ಯವಾದ ಹೇಳಿ ಆ ಎಲ್ಲಾ ಉಡುಗೊರೆಗಳನ್ನು ಶಿಕ್ಷಕರ ಕೊಠಡಿಯಲ್ಲಿಟ್ಟು ಮತ್ತು ತರಗತಿಗೆ ಬಂದೆ.
ಆಗ ಕೊನೆಯ ಬೆಂಚಿನ ಒಬ್ಬ ಹುಡುಗ ಒಂದು ದೊಡ್ಡ ಉಡುಗೊರೆಯನ್ನು ತೆಗೆದುಕೊಂಡು ನನ್ನೆದುರು ನೀಡಿದ. ಆ ವಿದ್ಯಾರ್ಥಿ ಕಲಿಯುವುದರಲ್ಲಿ ತುಂಬಾ ಹಿಂದುಳಿದಿದ್ದ ಹಾಗಾಗಿ ಯಾವ ಶಿಕ್ಷಕರಿಗೂ ಆತನ ಬಗ್ಗೆ ಸದಭಿಪ್ರಾಯ ಇರಲಿಲ್ಲ. ನಾನು ಕೂಡ ತುಂಬಾ ಸಲ ಆ ಹುಡುಗನಿಗೆ ಪೆಟ್ಟು ಕೊಟ್ಟಿದ್ದೂ ಉಂಟು. ಹಾಗಾಗಿ ಆತ ಸ್ವಲ್ಪ ಸಂಕೋಚದಿಂದ ಅವನು ತಂದಿದ್ದ ಉಡುಗೊರೆಯನ್ನು ನನ್ನ ಮುಂದೆ ನೀಡಿದ. 'ನನ್ನ ಮೆಚ್ಚಿಸಲು ಉಡುಗೊರೆ ಕೊಟ್ರೆ ಆಗಲ್ಲ, ಪಾಠ ಬೇರೆ ಹುಟ್ಟು ಹಬ್ಬ ಬೇರೆ, ಚೆನ್ನಾಗಿ ಓದು" ಅಂತ ಅಲ್ಲೂ ನನ್ನ ಟೀಚರ್ ಬುದ್ದಿ ಉಪಯೋಗಿಸಿದ್ದೆ!
ಮಕ್ಕಳೆಲ್ಲ 'ಮೇಡಂ ಅದರಲ್ಲಿ ಏನಿದೆ ತೋರಿಸಿ' ಅಂದರು. ಉಡುಗೊರೆ ತೆರೆದು ನೋಡಿದರೆ ಅದೊಂದು ಬಹಳ ಸುಂದರವಾದ 'ಲಾಫಿಂಗ್ ಬುದ್ಧ' ನ ಮೂರ್ತಿ! ಹೆಚ್ಚು ಕಮ್ಮಿ ಆ ಹುಡುಗನೂ ಆ ಗೊಂಬೆಯ ಹಾಗೇ ಗುಂಡು ಗುಂಡಾಗಿ ಇದ್ದ ಅವನನ್ನೇ ಹೋಲುವಂತಿತ್ತು. ಅವನಿಂದ ಆ ಉಡುಗೊರೆಯನ್ನು ಪಡೆದು ನನ್ನ ಮೇಜಿನ ಮೇಲೆ ಇಟ್ಟು ಬಂದೆ. ಸಂಜೆ ನನ್ನ ಟೇಬಲ್ ಮೇಲಿದ್ದ ಉಡುಗೊರೆಗಳನ್ನೆಲ್ಲಾ ನೋಡಿದ ನನಗೆ ಅದೇನೋ ದೊಡ್ಡ ಸಾಧನೆ ಮಾಡಿದ ಸಂಭ್ರಮ!!. ಆದರೆ ನನ್ನ ಈ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ!!
ಈ ಘಟನೆ ನಡೆದು ಮೂರನೇ ದಿನಕ್ಕೆ ಬುದ್ಧನ ಮೂರ್ತಿ ಕೊಟ್ಟ ಹುಡುಗನ ತಾಯಿ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಮಗನ ವಿದ್ಯಾಭ್ಯಾಸದ ಬಗ್ಗೆ ಕೇಳಿ ಕೊನೆಗೆ ಸಂಕೋಚದಿಂದ 'ಮೇಡಂ, ಮೊನ್ನೆ ನಿಮ್ಮ ಹುಟ್ಟಿದ ಹಬ್ಬಕ್ಕೆ ನನ್ನ ಮಗ ನಿಮಗೆ ಏನಾದರೂ ಉಡುಗೊರೆ ಕೊಟ್ಟಿದ್ದಾನ? ಎಂದು ಕೇಳಿದರು. ನಾನು 'ಹೌದು ಕೊಟ್ಟಿದ್ದಾನೆ' ಅಂದೆ. 'ಮೇಡಂ, ತಪ್ಪು ತಿಳಿಯಬೇಡಿ ಅವನು ನಿಮ್ಮ ಹುಟ್ಟಿದ ಹಬ್ಬದ ಹಿಂದಿನ ದಿನ ಅವನ ಅಪ್ಪನಲ್ಲಿ ನಿಮಗೆ ಕೊಡಲು ಉಡುಗೊರೆಗಾಗಿ ದುಡ್ಡು ಕೇಳಿದ್ದ. ಆದರೆ ಅವರು ಕೊಟ್ಟಿರಲಿಲ್ಲ. ಅದಕ್ಕೆ ಮಾರನೇ ದಿವಸ ಅವನ ಅಪ್ಪನ ಪರ್ಸ್ ನಿಂದ 150 ರೂಪಾಯಿಗಳನ್ನು ಕದ್ದು ಅಂಗಡಿಯಿಂದ ನಿಮಗೆ ಉಡುಗೊರೆ ಕೊಟ್ಟು ತಂದಿದ್ದಾನೆ. ಅವನಪ್ಪನಿಗೆ ವಿಷಯ ಗೊತ್ತಾಗಿ ನಾಲ್ಕು ಏಟು ಕೊಟ್ಟಿದ್ದಾರೆ' ಅಂದರು. ನನಗೊ, ಹೆತ್ತಮ್ಮನ ಮಾತು ಕೇಳಿ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯಲಿಲ್ಲ! ಅದುವರೆಗೂ ವಿದ್ಯಾರ್ಥಿಗಳ ಉಡುಗೊರೆಯಿಂದ ಉಬ್ಬಿ ಹೋದ ನನಗೆ ತಲೆ ಮೇಲೆ ಒಂದು ದೊಡ್ಡ ಕಲ್ಲನೆತ್ತಿ ಹಾಕಿದಂತಾಯ್ತು. ಆತನ ತಾಯಿಯಲ್ಲಿ ಏನು ಮಾತನಾಡಬೇಕೆಂದು ತೋಚಲಿಲ್ಲ. ಕಡೆಗೆ ಅವರೇ ಹೇಳಿದರು "ಪರವಾಗಿಲ್ಲ ಮೇಡಂ ಮಕ್ಕಳಲ್ವಾ ? ಅವರಿಗೂ ಅವರ ಟೀಚರಿಗೆ ಏನಾದರೂ ಕೊಡಬೇಕು ಅಂತ ಆಸೆ ಇರುತ್ತೆ. ಹಾಗಾಗಿ ನಾನೇ ನನ್ನ ಯಜಮಾನರಿಗೆ ಸಮಾಧಾನ ಮಾಡಿದೆ" ಅಂದರು. ಅವರೇನೋ ಅಷ್ಟು ಹೇಳಿ ಹೊರಟು ಹೋದರು ಆದರೆ ಅವರ ಹೇಳಿದ ಮಾತುಗಳು ನನ್ನಲ್ಲಿ ಗುಂಯಿ ಗುಡುತ್ತಿತ್ತು. 'ಮಕ್ಕಳಲ್ವಾ, ಅವರಿಗೆ ತಮ್ಮ ಟೀಚರಿಗೆ ಏನಾದರೂ ಕೊಡಬೇಕು ಅನ್ನೋ ಆಸೆ ಇರುತ್ತೆ !!' ಅವರು ಹೋದ ಮೇಲೆ ನಾನೇ ಕುಳಿತು ಯೋಚಿಸಿದೆ.
ಹೌದು, ನನ್ನ ಹುಟ್ಟಿದ ಹಬ್ಬದಂದು ಸಂಭ್ರಮಿಸುತ್ತಿದ್ದ ವಿದ್ಯಾರ್ಥಿಗಳ ನಡುವೆ, ತರಗತಿಯ ಮೂಲೆಯಲ್ಲಿ ಎಲ್ಲೋ ಕುಳಿತು ನಿರಾಸೆಯ ಕಣ್ಣುಗಳನ್ನು ನಾನು ಗಮನಿಸದೇ ಹೋದೆ! ಶಿಕ್ಷಕರ ಹುಟ್ಟುಹಬ್ಬ ಎಂದಾಗ ಎಲ್ಲಾ ಮಕ್ಕಳಿಗೂ ಸಂಭ್ರಮ, ಎಲ್ಲರಿಗೂ ಟೀಚರ್ ಹತ್ರ ಹೋಗ್ಬೇಕು, ಅವರಿಗೆ ಏನಾದರೂ ಕೊಡಬೇಕು ಅನ್ನೋದು ಇರುತ್ತೆ. ಆದರೆ ಉಡುಗೊರೆ ಕೊಡಲಾಗದ ಮಕ್ಕಳ ನಿರಾಸೆಯ ಕಡೆ ಗಮನ ಕೊಡದೆ ಕೇವಲ ನಾನು ಹಾಗೂ ಕೆಲವು ವಿದ್ಯಾರ್ಥಿಗಳು ಸಂಭ್ರಮ ಪಟ್ಟೆವು. ಅಷ್ಟೇ ಅಲ್ಲದೇ ಉಡುಗೊರೆಗಳನ್ನು ತರಲು ವಿದ್ಯಾರ್ಥಿಗಳು ಹೇಗೆ ವ್ಯವಸ್ಥೆ ಮಾಡಿದ್ದರು ಎಂಬ ಬಗ್ಗೆಯೂ ವಿಚಾರಿಸದೇ ಇದ್ದದ್ದು ನನ್ನ ತಪ್ಪು. ಇದೊಂದು ನನ್ನ ವೃತ್ತಿ ಬದುಕಿಗೆ ದೊಡ್ಡ ಪಾಠವಾಯಿತು. ಇನ್ನು ಮುಂದೆ ಮಕ್ಕಳಿಂದ ಯಾವುದೇ ಉಡುಗೊರೆಗಳನ್ನು ಪಡೆಯಬಾರದು ಎಂದು ನಿರ್ಧಾರ ಮಾಡಿದೆ.
ಹಾಗಾಗಿ ಪ್ರತೀ ವರ್ಷ ನನ್ನ ಹುಟ್ಟು ಹಬ್ಬದ ತಿಂಗಳು ಯಾವುದಾದರೂ ಒಂದು ವಿದ್ಯಾರ್ಥಿ ವಿಷಯದ ಬಗ್ಗೆ ಮಾತನಾಡಿದ್ರೆ "ಮಕ್ಕಳೇ ನಿಮಗೆ ನಿಜವಾಗಲೂ ನನ್ನ ಬಗ್ಗೆ ಪ್ರೀತಿ, ಅಭಿಮಾನವಿದ್ದಲ್ಲಿ ದಯಮಾಡಿ ನನಗೆ ಉಡುಗೊರೆ ಕೊಡಬೇಡಿ. ಬದಲಾಗಿ ನೀವೇ ನಿಮ್ಮ ಕೈಯಾರೆ ತಯಾರಿಸಿದ ಗ್ರೀಟಿಂಗ್ ಕಾರ್ಡ್ ಅಥವಾ ನೀವೇ ತಯಾರಿಸಿದ ಸಣ್ಣ ಪುಟ್ಟ ವಸ್ತು ಗಳನ್ನು ಮಾತ್ರ ನಾನು ಪಡೆದುಕೊಳ್ಳುವುದು. ಅಂಗಡಿಯಿಂದ ತಂದಂತ ಯಾವುದೇ ವಸ್ತುಗಳನ್ನು ನಾನು ಪಡೆದುಕೊಳ್ಳುವುದಿಲ್ಲ" ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿರುತ್ತೇನೆ. ಆದರೂ ಕೆಲವೊಮ್ಮೆ ಕೆಲ ವಿದ್ಯಾರ್ಥಿಗಳು ಉಡುಗೊರೆ ಕೊಡಲೇಬೇಕು ಎಂದು ಹಠ ತೊಟ್ಟು ಅವರ ಹೆತ್ತವರ ಮುಖಾಂತರವೇ ನನಗೆ ತಿಳಿಸುವಂತೆ ಮಾಡಿ ಪಡೆದುಕೊಳ್ಳಲೇಬೇಕು ಎನ್ನುವ ಅನಿವಾರ್ಯತೆ ತಂದಿಟ್ಟ ಉದಾಹರಣೆಗಳೂ ಇವೆ. ಆಗೆಲ್ಲಾ ನನಗೆ ಮೇಲಿನ ಘಟನೆ ನೆನಪಾಗುತ್ತದೆ.
"ವಿದ್ಯಾರ್ಥಿಗಳು ಪ್ರೀತಿಯಿಂದ ಏನು ಕೊಟ್ಟರೂ ಶಿಕ್ಷಕರು ಸ್ವೀಕರಿಸಬೇಕು " ಎಂಬ ಮಾತನ್ನೂ ಕೇಳಿದ್ದೇನೆ! ಆದರೂ ಉಡುಗೊರೆಯ ಬಗೆಗಿನ ಜಿಜ್ಞಾಸೆ ನನ್ನಲ್ಲಿ ಈಗಲೂ ಹಾಗೇ ಉಳಿದಿದೆ.
ಸಹಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
Mob : +91 94820 45181
*******************************************