ಪಯಣ : ಸಂಚಿಕೆ - 62 (ಬನ್ನಿ ಪ್ರವಾಸ ಹೋಗೋಣ)
Friday, September 26, 2025
Edit
ಪಯಣ : ಸಂಚಿಕೆ - 62 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ನಮ್ಮೀ ಕನ್ನಡ ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ, ಐತಿಹಾಸಿಕ, ಪ್ರಾಕೃತಿಕ, ನಮ್ಮ ನಾಡ ಹಬ್ಬ 'ದಸರಾ' ದ ಕೇಂದ್ರ ಬಿಂದುವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣ" ಗಳಿಗೆ ಪಯಣ ಮಾಡೋಣ ಬನ್ನಿ....
ಸಮುದ್ರ ಮಟ್ಟದಿಂದ 770 ಮೀಟರ್ ಎತ್ತರದಲ್ಲಿರುವ ಮೈಸೂರು ಬೆಂಗಳೂರಿನಿಂದ 140 ಕಿ.ಮೀ. ದೂರದಲ್ಲಿದೆ. ಒಡೆಯರ ರಾಜ್ಯದ ರಾಜಧಾನಿಯಾಗಿ ಮೆರೆದ ಸಾರ್ವಭೌಮರ ನಗರವಾದ ಮೈಸೂರು ಪ್ರಜ್ವಲಿಸುವ ತನ್ನ ಪುರಾತನ ವೈಭವ ಮತ್ತು ಸೊಬಗನ್ನು ಎಲ್ಲಾ ಕಾಲದಲ್ಲೂ ಉಳಿಸಿಕೊಂಡಿದೆ. ಮಹಿಷೇರು ಎಂದು ಕರೆಯಲಾಗುತ್ತಿದ್ದ ಮೈಸೂರಿಗೆ ತನ್ನದೇ ಆದ ಪೌರಾಣಿಕ ಕಥಾನಕವೂ ಇದೆ.
ಹಿಂದೆ ಇಲ್ಲಿ ಮಹಿಷಾಸುರನೆಂಬ ರಾಕ್ಷಸ ವಾಸವಾಗಿದ್ದು ಪ್ರಜೆಗಳಿಗೆ ತುಂಬಾ ಕಿರುಕುಳ ನೀಡುತ್ತಿದ್ದ. ಆಗ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಈತನನ್ನು ಸಂಹರಿಸಿದಳು. ಮಹಿಷಾಸುರ ಅಥವಾ ಮಹಿಷಾಸುರನ ಊರು ಕ್ರಮೇಣ ಮೈಸೂರು ಎಂದು ಚಾಲ್ತಿಯಲ್ಲಿ ಬಂದಿತು ಎನ್ನಲಾಗುತ್ತದೆ.
ಮಹಾಭಾರತ ಕಾಲದಿಂದ ಮೈಸೂರನ್ನು ರಾಜಮಹಾರಾಜರು ಆಳಿದ್ದು, ಎರಡನೇ ಶತಮಾನದಿಂದ ಹತ್ತನೇ ಶತಮಾನದವರೆಗೂ ಗಂಗ ದೊರೆಗಳು ಸೇರಿದಂತೆ ಚಾಲುಕ್ಯರು, ಹೊಯ್ಸಳ, ವಿಜಯನಗರ ರಾಜರು ಈ ನಗರವನ್ನು ಆಳಿದವರಲ್ಲಿ ಪ್ರಖ್ಯಾತರು. ಚಾಮರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ ಮೈಸೂರು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಿತು ಎನ್ನಲಾಗಿದೆ.
ಇನ್ನು ಮೈಸೂರಿಗೆ ಪ್ರವಾಸ ಕೈಗೊಂಡವರಿಗೆ ಒಂದಲ್ಲ ಹಲವಾರು ಪ್ರೇಕ್ಷಣೀಯ ಸ್ಥಳಗಳು ಮುದ ನೀಡುತ್ತವೆ. ಈ ಪೈಕಿ ಮೈಸೂರು ಅರಮನೆ, ಸರ್ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ, ಸೇಂಟ್ ಫಿಲೋಮಿನಾಸ್ ಚರ್ಚ್, ಮೈಸೂರು ಮೃಗಾಲಯ. ಜಾಮುಂಡಿ ಬೆಟ್ಟ, ಬೃಂದಾವನ ಗಾರ್ಡನ್ ಇತ್ಯಾದಿ ಆಕರ್ಷಕ ತಾಣಗಳು ಮನ ಸೆಳೆಯುತ್ತವೆ. ಇನ್ನು ಆಹಾರ ವಿಶೇಷತೆ ಬಗ್ಗೆ ಹೇಳಬೇಕೆಂದರೆ, ಬಾಯಲ್ಲಿ ನೀರೂರಿಸುವ ಮೈಸೂರು ಪಾಕ್ ಗೆ ಮೈಸೂರು ಹೆಸರುವಾಸಿ. ಜೊತೆಗೆ ಪಲಾವ್, ಇಡ್ಲಿ, ಮೈಸೂರು ಮಲ್ಲಿಗೆ ಇಡ್ಲಿ, ವಡೆ ಇತ್ಯಾದಿ ತಿನಿಸುಗಳು ಹಾಗೂ ಮೈಸೂರು ರಸಬಾಳೆ, ಮಲ್ಲಿಗೆ ಹೂವು, ಮತ್ತು ವೀಳ್ಯದೆಲೆ ತಮ್ಮದೇ ಆದ ರುಚಿಯ ವೈಶಿಷ್ಟ್ಯತೆ ಹೊಂದಿವೆ.
ಇನ್ನು ಮೈಸೂರಿಗೆ ಭೇಟಿ ನೀಡಿ ಇವೆಲ್ಲಾ ತಾಣಗಳ ಸೊಬಗನ್ನು ಸವಿಯುವ ಪ್ರವಾಸಿಗರು ಮೈಸೂರಿನ ಸುತ್ತಮುತ್ತಲೂ ಇರುವ ಶ್ರೀರಂಗಪಟ್ಟಣ, ದರಿಯಾ ದೌಲತ್, ಕೋಟೆ, ಸಂಗಮ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮತ್ತು ರಂಗನತಿಟ್ಟು ಪಕ್ಷಿಧಾಮಕ್ಕೂ ಭೇಟಿ ನೀಡಬಹುದು.
ಮೈಸೂರು ಜಿಲ್ಲೆ ವಿಶ್ವಾದ್ಯಂತ ಪ್ರವಾಸಿಗರ ಮನಃ ಪಟಲದಲ್ಲಿ ಅಚ್ಚಳಿಯದೇ ನಿಂತಿರುವುದಕ್ಕೆ ಇಲ್ಲಿನ ಸಾಂಸ್ಕೃತಿಕ ವೈಭವವೇ ಕಾರಣ. ಜಗಮ್ಮೋಹನ ಅರಮನೆ, ನಗರದಿಂದ 13 ಕಿ.ಮೀ. ದೂರದ ಚಾಮುಂಡಿಬೆಟ್ಟ, ಬೃಹತ್ ನಂದಿ, ಕೆ.ಆರ್.ಎಸ್. ಬೃಂದಾವನ, ಚಾಮರಾಜೇಂದ್ರ ಮೃಗಾಲಯ, ಲಲಿತ್ ಮಹಲ್, ಕಾರಂಜಿಕೆರೆ ಹಾಗೂ ಚಿಟ್ಟೆ ಪಾರ್ಕ್ ಅತ್ಯಾಕರ್ಷಕ. ಸನಿಹದ ಚುಂಚನಕಟ್ಟೆ ಫಾಲ್ಸ್, ಬಲಮುರಿ ಜಲಧಾರೆಗಳ ಮಧ್ಯೆ ಕಾಲ ಕಳೆದದ್ದೇ ಗೊತ್ತಾಗುವುದಿಲ್ಲ.
ರಸಋಷಿ ಕುವೆಂಪು ಅವರ ನೆಚ್ಚಿನ ಕುಕ್ಕರಹಳ್ಳಿ ಕೆರೆ ಇನ್ನೊಂದು ಆಕರ್ಷಣೆ. 60 ಎಕರೆ ವಿಸ್ತಾರದಲ್ಲಿ ಕುಕ್ಕರಹಳ್ಳಿ ಕೆರೆ ಇದೆ.
1979ರಲ್ಲಿ ಆರಂಭಿಸಲಾದ ರೈಲ್ವೆ ಮ್ಯೂಸಿಯಂ, 1861ರಲ್ಲಿ ನಾಲ್ಕನೇ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಜಗನ್ಮೋಹನ ಪ್ಯಾಲೇಸ್, ಚಾಮರಾಜ ಒಡೆಯರ್ ಅವರ ಬಳುವಳಿಯಾಗಿರುವ ಜಯಲಕ್ಷ್ಮಿವಿಲಾಸ ಕಟ್ಟಡಗಳು ಅತ್ಯಾಕರ್ಷಕ. ಮೈಸೂರಿನಲ್ಲಿ 2ನೇ ಅತಿ ದೊಡ್ಡ ಅರಮನೆ ಖ್ಯಾತಿಯ ಲಲಿತಮಹಲ್ ನಾಲ್ಕನೇ ಕೃಷ್ಣರಾಜ ಒಡೆಯರ್ ಬಳುವಳಿ. 1931ರಲ್ಲಿ ನಿರ್ಮಾಣ ಕಂಡ ಈ ಕಟ್ಟಡ ವಿನ್ಯಾಸ ಮನಸೆಳೆಯುವಂಥದು. ಹಾಗೆಯೇ, ವಿಶೇಷ ವಿನ್ಯಾಸದ ಸೇಂಟ್ ಫಿಲೋಮಿನಾ ಚರ್ಚ್ ಕೂಡ.
ರಾಜಮನೆತನ ಕಡೆಯ ಅರಸ ಜಯಚಾಮರಾಜೇಂದ್ರರು 1953ರಲ್ಲಿ ನಿರ್ಮಿಸಿದ ಗಾಯತ್ರಿ ದೇಗುಲಕ್ಕೆ ಶಿಲ್ಪಿ ಸಿದ್ಧಲಿಂಗಸ್ವಾಮಿ ಕಲೆಯ ಬಲೆ ನೇಯ್ದಿದ್ದಾರೆ. ದಸರಾ ಸಂಭ್ರಮಕ್ಕೆ ಪ್ರಾಮುಖ್ಯ ತಂದುಕೊಡುವ ದೇಗುಲ ಗಳಲ್ಲೊಂದಾದ ಸೋಮೇಶ್ವರ ದೇಗುಲ, ಕೋಡಿ ಭೈರವ ದೇಗುಲ, 1951ರಲ್ಲಿ ಒಡೆಯರ್ ಅವರಿಂದ ನಿರ್ಮಿಸಲಾದ ಭುವನೇಶ್ವರಿ ದೇಗುಲ ನೋಡಲೇಬೇಕಾದಂಥವು. ಪ್ರತಿವರ್ಷ ಜನವರಿ-ಫೆಬ್ರವರಿಯಲ್ಲಿ ಇಲ್ಲಿ ನಡೆಯುವ ರಥಸಪ್ತಮಿ ಉತ್ಸವದಂದು ಭಕ್ತಸಾಗರವೇ ಮೈಸೂರಿಗೆ ಹರಿದುಬರುವುದು ವಿಶೇಷ.
ಮಹತ್ವದ ಕಲಾ ವೈಭವ ಹೊತ್ತು ನಿಂತಿರುವುದು ಮೈಸೂರಿನ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ. 1875ರಲ್ಲಿ ಜಗನ್ಮೋಹನ ಅರಮನೆ ಆರ್ಟ್ ಗ್ಯಾಲರಿಯಾಗಿ ಸ್ಥಾಪಿಸಲಾಗಿದ್ದು, ಇಲ್ಲಿರುವ ಸೂಕ್ಷ್ಮ ಪೇಟಿಂಗ್‌ಗಳ ಸಂಗ್ರಹ ಪ್ರವಾಸಿಗರನ್ನು ಸೆಳೆಯುತ್ತಿದೆ. ಕುವೆಂಪು ನೆಲೆಸಿದ್ದ 'ಉದಯರವಿ' ಮನೆ, ಕಾದಂಬರಿಕಾರ ಆರ್. ಕೆ. ನಾರಾಯಣರ ಯಾದವಗಿರಿಯಲ್ಲಿನ ಮನೆ ಇವೆ. ದಸರಾ ಸಮೀಪಿಸುತ್ತಿರುವುದರಿಂದ ಈಗಿಂದಲೇ ಅರಮನೆಗಳ ನಗರಿ 'ಪ್ರವಾಸಕ್ಕೆ ಪ್ಲಾನ್ ಮಾಡುವುದೊಳಿತು. ಮೈಸೂರಿನಿಂದ 45 ಕಿ.ಮೀ. ದೂರದ ತಲಕಾಡು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಲ್ಲಿ ಪಾತಾಳೇಶ್ವರ, ಮರಳೇಶ್ವರ, ಅರಕೇಶ್ವರ, ವೈದ್ಯನಾಥೇಶ್ವರ, ಮಲ್ಲಿಕಾರ್ಜುನ ದೇಗುಲಗಳು ವಿಶೇಷ ಆಕರ್ಷಣೆ. 12 ವರ್ಷಕ್ಕೊಮ್ಮೆ ನಡೆಯುವ ಪಂಚಲಿಂಗ ದರ್ಶನ ಇಲ್ಲಿನ ಮತ್ತೊಂದು ವಿಶೇಷ. ಒಂದು ಕಾಲದಲ್ಲಿ 30ಕ್ಕೂ ಹೆಚ್ಚು ದೇಗುಲಗಳು ಇಲ್ಲಿದ್ದವು ಎನ್ನಲಾಗಿದೆ. ಇಲ್ಲಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವುದು ಮರಳಿನ ರಾಶಿ. ಕಾವೇರಿ ತೀರ ದೇಗುಲದ ವೈಭವ. ಜಲಕ್ರೀಡೆಗೆ ಹೆಚ್ಚು ಪೂರಕ.
ಮೈಸೂರಿಗೆ ಹಿರಿಮೆ ತಂದುಕೊಡುವಲ್ಲಿ ನಂಜನಗೂಡು ತಾಲೂಕು ಸಹ ಪ್ರಮುಖ. ಕಪಿಲಾ ನದಿ ದಡದಲ್ಲಿ ವಿರಾಜಮಾನ ಇತಹಾಸ ಪ್ರಸಿದ್ಧ ನಂಜುಂಡೇಶ್ವರ ದೇಗುಲದ ಶ್ರೀಮಂತ ಪರಂಪರೆ ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮೈಸೂರು ಸನಿಹದ ಚಾಮರಾಜನಗರ (75 ಕಿ.ಮೀ.) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮುದ ನೀಡುವ ತಾಣ. ಪ್ರತಿ ನಿತ್ಯ ಇಲ್ಲಿನ ಮಂಜು ಮುಸುಕಿನ ವಾತಾವರಣ ದೂರದ ಮಡಿಕೇರಿ, ಊಟಿಯನ್ನು ನೆನಪಿಗೆ ತರುವಂಥದು. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಅತ್ಯಂತ ಎತ್ತರದ ಬೆಟ್ಟವಾಗಿರುವ ಇಲ್ಲಿ ಎತ್ತ ನೋಡಿದರೂ ಹಸಿರೇ ಹಸಿರು. ಬೆಳಿಗ್ಗೆ 6 ರಿಂದ ಸಂಜೆ 5ರವರೆಗೆ ಮಾತ್ರ ದೇಗುಲ ಭೇಟಿಗೆ ಅವಕಾಶವಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಂದ ಟ್ರಕ್ಕಿಂಗ್, ವಿಡಿಯೋ ಚಟುವಟಿಕೆಗೆ ಅನುಮತಿ ಕಡ್ಡಾಯ.
"ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ನಗರವಾದ ಮೈಸೂರು ನೋಡಲು ಹಲವಾರು ಕಾರಣಗಳಿವೆ. ಅದರ ಹಲವು ಪ್ರವಾಸ ತಾಣಕ್ಕೆ ಈ ಪಯಣದ ಭಾಗದಲ್ಲಿ ಈ ನಗರದ ಪ್ರವಾಸದ ಪೀಠಿಕೆಯಾಗಿ ಮತ್ತು ಹಲವು ಪ್ರವಾಸ ತಾಣದ ಪೂರಕ ಮಾಹಿತಿ ನಮ್ಮೀ ಪ್ರವಾಸಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ ಅಲ್ಲವೇ...? ಮೈಸೂರಿನ ಅಂದ ಚಂದವ ಸವಿಯೋಣ.. ಬನ್ನಿ ಒಮ್ಮೆ ಮೈಸೂರಿಗೆ..."
[ಮುಂದುವರಿಯುವುದು..]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************