ಪಯಣ : ಸಂಚಿಕೆ - 61 (ಬನ್ನಿ ಪ್ರವಾಸ ಹೋಗೋಣ)
Thursday, September 18, 2025
Edit
ಪಯಣ : ಸಂಚಿಕೆ - 61 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ "ಚಿಕ್ಕಮಗಳೂರು ಜಿಲ್ಲೆಯ ಕಲ್ಲತ್ತಿಗಿರಿ ಫಾಲ್ಸ್" ಗೆ ಪಯಣ ಮಾಡೋಣ ಬನ್ನಿ....
ಕೆಮ್ಮಣ್ಣುಗುಂಡಿಯಿಂದ 10 ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರಿನ ಕಲ್ಲತ್ತಿಗಿರಿ ತನ್ನ ಸೌಂದರ್ಯವನ್ನು ಸ್ವಾಭಾವಿಕವಾಗಿ ಪಡೆದುಕೊಂಡು ಬಂದಿದೆ. 150 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಹಾರೆಯಂತೆ ಹರಿಯುತ್ತದೆ. ಇಲ್ಲಿ ಗುಹೆಯಲ್ಲಿರುವ ವೀರಭದ್ರೇಶ್ವರ ದೇವರನ್ನು ಪೂಜಿಸಲಾಗುತ್ತದೆ. ಇದನ್ನು ಕೃಷ್ಣದೇವರಾಯನ ಆಳ್ವಿಕೆ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.
ತರೀಕೆರೆ ತಾಲೂಕಿನ ಕಲ್ಪತ್ತಿಗಿರಿ ಫಾಲ್ಸ್ ಕೂಡ ರಮಣೀಯವಾಗಿದೆ. ಸುಮಾರು 122 ಮೀ. ಎತ್ತರದಿಂದ ಧುಮ್ಮಿಕ್ಕುವ ಈ ಜಲಧಾರೆ ವಿವಿಧ ಹಂತಗಳಲ್ಲಿ ಧುಮ್ಮಿಕ್ಕುವುದನ್ನು ಟ್ರೆಕ್ಕಿಂಗ್ ಮೂಲಕವೂ ವೀಕ್ಷಿಸಬಹುದು. ಕೆಮ್ಮಣ್ಣುಗುಂಡಿಯಿಂದ ಕೇವಲ 8 ಕಿ.ಮೀ. ಅಂತರದಲ್ಲಿರುವ ಹೆಬ್ಬೆ ಫಾಲ್ಸ್ ಕೂಡ ಅತ್ಯಾಕರ್ಷಕ. ಸುಮಾರು 300 ಅಡಿ ಎತ್ತರದಿಂದ 2 ಹಂತಗಳಲ್ಲಿ ಜಲಪಾತ ಧುಮ್ಮಿಕ್ಕುತ್ತದೆ. ಇನ್ನು 800ಕ್ಕೂ ಹೆಚ್ಚು ವರ್ಷ ಇತಿಹಾಸ ಹೊಂದಿರುವ ಅಮೃತಾಪುರದಲ್ಲಿ ಹೊಯ್ಸಳ ಅರಸ 2ನೇ ಬಲ್ಲಾಳ ನಿರ್ಮಿಸಿದ ಅಮೇತೇಶ್ವರ ದೇಗುಲ ಕಲಾವೈಭವಕ್ಕೆ ತಾಣ ಸಾಕ್ಷಿಯಾಗಿದೆ. ಚಿಕ್ಕಮಗಳೂರಿನಿಂದ 67 ಕಿ.ಮೀ. ಅಂತರದಲ್ಲಿದೆ.
ಜಿಲ್ಲೆಯನ್ನು ನಿತ್ಯಹರಿದ್ವರ್ಣವಾಗಿಸಿರುವುದು ಇಲ್ಲಿನ ದಟ್ಟಾರಣ್ಯ. ಚಿಕ್ಕಮಗಳೂರಿನಿಂದ 38 ಕಿ.ಮೀ. ದೂರದಲ್ಲಿರುವ ಭದ್ರಾ ಅಭಯಾರಣ್ಯವನ್ನು ಅನೇಕ ಗಿರಿಶೃಂಗಗಳು ಆವರಿಸಿವೆ. ಭದ್ರಾ ನದಿ ಹರಿಯುವ ಈ ಪ್ರದೇಶದಲ್ಲಿ ಬಗೆಬಗೆಯ ಪಕ್ಷಿ, ಮೃಗಗಳು ಸ್ವಚ್ಛಂದವಾಗಿ ಸುಳಿದಾಡುತ್ತಿವೆ. ಸರಿಸುಮಾರು 1968 ಕಿ.ಮೀ. ವಿಸ್ತಾರವಿರುವ ವನ್ಯಧಾಮದಲ್ಲಿ ಸುಮಾರು 150 ಕಿ.ಮೀ. ವರೆಗೆ ಸಂಚರಿಸಿ ವನ್ಯಜೀವಿಗಳನ್ನು ವೀಕ್ಷಿಸಲು ಅವಕಾಶವಿದೆ. ಕೆಲವು ನಿಷೇಧಿತ ಪ್ರದೇಶಗಳಿಗೆ ಅನುಮತಿ ಕಡ್ಡಾಯ. ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಭದ್ರಾ ಜಲಾಶಯಕ್ಕೂ ಭೇಟಿ ನೀಡಿದರೆ ಮುದವುಣ್ಣಬಹುದು.
ದಕ್ಷಿಣ ಭಾರತದಲ್ಲಿ ಅದೈತ ಸಿದ್ದಾಂತ ಪ್ರತಿಪಾದಿಸಿದ ಶಂಕರಾಚಾರ್ಯರು ನೆಲೆಸಿದ ಶೃಂಗೇರಿ ಪುರಾತನ ಶಾರದಾಂಬೆ ದೇಗುಲ ಭಕ್ತಿಪ್ರಧಾನ ಪುಣ್ಯಕ್ಷೇತ್ರ. ಇಲ್ಲಿನ ಶಾರದಾ ಪೀಠ ಮಠದಲ್ಲಿ ಸಂಸ್ಕೃತ ವೇದಾಧ್ಯಯನ ಹಾಗೂ ಸಂಸ್ಕೃತಿ ಕುರಿತ ಪಾಠ ಪ್ರವಚನಗಳನ್ನು ಪ್ರಧಾನವಾಗಿ ನಿರ್ವಹಿಸಲಾಗುತ್ತಿದೆ. ಪುರಾತನ ಶ್ರೀ ಶಾರದಾಂಬೆ ದೇಗುಲ, ಪಕ್ಕದಲ್ಲೇ ಹರಿಯುವ ತುಂಗೆಯಲ್ಲಿ ತುಳುಕಾಡುವ ಮತ್ಸ್ಯಗಳ ಸಮೂಹ ವಿಶೇಷ ಆಕರ್ಷಣೆ. ಮೈಸೂರು ಒಡೆಯರ್, ಹೊಯ್ಸಳ, ವಿಜಯನಗರ ಅರಸರು, ಮುಸ್ಲಿಂ ದೊರೆಗಳ ಇತಿಹಾಸದ ಮೇಲೂ ಶೃಂಗೇರಿ ಕ್ಷೇತ್ರ ಬೆಳಕು ಚೆಲ್ಲಿದೆ. ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಕಾಲಭೈರವ ದೇಗುಲ, ದುರ್ಗಾ ದೇಗುಲ, ಆಂಜನೇಯ ಮತ್ತು ಕಾಳಿಕಾಂಬ ದೇಗುಲಗಳು ಇಲ್ಲಿನ ಆಕರ್ಷಣೆ.
ವಿದ್ಯಾತೀರ್ಥ ಮಹಾಸ್ವಾಮೀಜಿ ಅವರು ದೇಗುಲದ ಮಹಾಗೋಪುರ ನಿರ್ಮಾಣಕ್ಕೆ ಕಾರಣರಾದವರು. ಪ್ರತಿವರ್ಷ ದಸರೆ ಸಂದರ್ಭ 10 ದಿನಗಳ ಕಾಲ ಧಾರ್ಮಿಕ ಆಚರಣೆಗಳು ಇಲ್ಲಿ ಅದ್ಧೂರಿಯಾಗಿ ನಡೆಯುವುದರಿಂದ ವಿವಿದೆಡೆಯಿಂದ ಭಕ್ತಸಮೂಹ ಹರಿದು ಬರುತ್ತದೆ. ಇಲ್ಲಿನ ಮಲ್ಲಪ್ಪ ಬೆಟ್ಟದಲ್ಲಿ ಅತ್ಯಂತ ಪುರಾತನವಾದ ಹಾಗೂ ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ ಮಲಹನಿಕರೇಶ್ವರ ದೇಗುಲವಿದೆ.
'ಸುಂದರ ದೇಗುಲದ ನಡುವೆ ಜಲಧಾರೆಗಳ ಓಡಾಟ. ಕಾನನದ ನಡುವೆ ವಿಹಂಗಮ ನೋಟ. ಸ್ವಚ್ಛಂದ ಪ್ರಕೃತಿಯ ನಡುವೆ ಮನಸ್ಸಿಗೆ ಉಲ್ಲಾಸ ನೀಡುವ ವಾತಾವರಣ ನೋಡಲು ಬಲು ಚಂದ' ಬನ್ನಿ ಒಮ್ಮೆ.. ಕಲ್ಲತ್ತಗಿರಿ ಫಾಲ್ಸ್ ನೋಡಲು..
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************