-->
ಪಯಣ : ಸಂಚಿಕೆ - 60 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 60 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 60 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ "ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ" ಗೆ ಪಯಣ ಮಾಡೋಣ ಬನ್ನಿ....
                   
ಕಂಬದಹಳ್ಳಿಯು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಜೈನರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಾಚೀನ ಜಿನಾಲಯವಿದ್ದು, ಜೈನ ಮಠವು ಸಹ ಇದೆ. ಕಂಬದಹಳ್ಳಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿಗೆ ಸೇರಿದೆ.

ಕಂಬದಹಳ್ಳಿಯನ್ನು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಮಂಗಳೂರರ ಕದಬ ಹಳ್ಳಿಯ ಮೂಲಕ ತಲುಪಬಹುದು. ಜೈನರ ಪ್ರಮುಖ ಯಾತ್ರಾ ಸ್ಥಳ ಶ್ರವಣಬೆಳಗೊಳದಿಂದ ಕಂಬದಹಳ್ಳಿಯು 18 ಕಿಲೋಮೀಟರ್ ದೂರದಲ್ಲಿದೆ.

ಈ ಊರಿನಲ್ಲಿರುವ ಪಂಚಕೂಟ ಬಸದಿಗೆ ಉತ್ತರದಿಂದ 50 ಅಡಿ ಎತ್ತರದ ಕರಿ ಕಲ್ಲಿನ ಬ್ರಹ್ಮದೇವರ ಕಂಬದಿಂದಾಗಿ ಊರಿಗೆ ಕಂಬದಹಳ್ಳಿ ಎಂಬ ಹೆಸರು ಬಂದಿದೆ. ಈ ಮನಮೋಹಕ ಕಂಬದ ತಳ ಭಾಗದಲ್ಲಿ ಅಷ್ಟ ಕೋಣಗಳಿದ್ದು ಅದರ ಮೇಲೆ ಅಷ್ಟದಿಕ್ಪಾಲಕರ ಉಬ್ಬು ಶಿಲ್ಪಗಳಿವೆ.

ಈ ಕಂಬದ ಮೇಲೆ ಪೂರ್ವಾಭಿಮುಖವಾಗಿರುವ ಬ್ರಹ್ಮ ದೇವರ ಮೂರ್ತಿ ಇದೆ. ಹೀಗಾಗಿ ಈ ಕಂಬಕ್ಕೆ ಬ್ರಹ್ಮದೇವರ ಕಂಬ ಎಂಬ ಹೆಸರು ಬಂದಿದೆ. ಕಂಬಕ್ಕೆ ಅತಿ ಹತ್ತಿರದಲ್ಲಿ ದ್ರಾವಿಡ ಶೈಲಿಯಲ್ಲಿ ಕಲ್ಲಿನಿಂದ ಕಟ್ಟಲಾದ ಏಳು ದೇವಾಲಯಗಳಿವೆ. ಕ್ರಿ. ಶ. 900ರ ಸರಿಸುಮಾರಿನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಪಂಚಕೂಟ ಬಸ್ತಿಯಿದೆ. ಇದರ ನಡುವೆ ಮೂರು ಗೋಪುರಗಳ ತ್ರಿಕೂಟಾಚಲ ಆದಿನಾಥ ಬಸದಿಯಿದೆ. ಈ ದೇವಾಲಯ ಕನ್ನಡ ನಾಡಿನ್ನಾಳಿದ ಪಲ್ಲವರ ಕಾಲದ್ದೆಂದು ಇಲ್ಲಿರುವ ಶಿಲ್ಪಿಗಳಿಂದ ತಿಳಿದು ಬರುತ್ತದೆ. 

ದೇವಾಲಯದ ಕೆಳಭಾಗ ಎಂಟು ಮೂಲೆಗಳನ್ನ ಹೊಂದಿದ್ದು ಅತಿ ಮನಮೋಹಕವಾಗಿದೆ. ಬಲಭಾಗದ ಗರ್ಭಗುಡಿಯಲ್ಲಿ ನೇಮಿನಾಥ ಮತ್ತು ಎಡಬಾಗದ ಗುಡಿಯಲ್ಲಿ ಶಾಂತಿನಾಥನ ಶಿಲಾಮೂರ್ತಿಗಳಿವೆ. ಈ ದೇವಾಲಯದಲ್ಲಿರುವ ಮೂರು ಶಿಖರಗಳು ಮೂರು ವಿಧವಾಗಿರುವುದು ವಿಶೇಷ. ಪೂರ್ವದ ಶಿಖರ ದುಂಡಾಗಿದ್ದರೆ ಉತ್ತರ ಭಾಗದಲ್ಲಿರುವ ಗೋಪುರ ಚೌಕಾಕೃತಿಯಲ್ಲಿದೆ. ಪಶ್ಚಿಮದ ಶಿಖರ ಅದ್ಭುತವಾಗಿದ್ದು, ಎಲ್ಲರ ಮನ ಸೆಳೆಯುತ್ತದೆ. ಸಮೀಪದಲ್ಲೇ ಮತ್ತೆರಡು ಮಂದಿರಗಳಿವೆ.

ಒಂದು ಮಂದಿರದಲ್ಲಿ 10 ಅಡಿ ಎತ್ತರದ ಶಾಂತಿನಾಥನ ಮೂರ್ತಿ ಇದೆ. ಈ ಮಂದಿರವನ್ನು 12ನೇ ಶತಮಾನದಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ದಂಡನಾಯಕ ಗಂಗರಾಜ ಬೊಪ್ಪನು ಕಟ್ಟಿಸಿದ ಎಂದು ಹೇಳಲಾಗುತ್ತದೆ. ಹೊರ ಬಿತ್ತಿಗಳ ಪಟ್ಟಿಗಳಲ್ಲಿ ಆನೆ, ಕುದುರೆ, ಲತೆ, ಮಕರ, ಸಿಂಹ ಮೊದಲಾದ ಸುಂದರ ಕಲಾಕೃತಿಗಳಿವೆ. ಧ್ಯಾನದಲ್ಲಿ ತಲ್ಲೀನ ಆಗಿರುವ ನೇಮಿನಾಥ ವಿಗ್ರಹ ಮನ ಮೋಹಕವಾಗಿದೆ.

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************






Ads on article

Advertise in articles 1

advertising articles 2

Advertise under the article