-->
ಜೀವನ ಸಂಭ್ರಮ : ಸಂಚಿಕೆ - 205

ಜೀವನ ಸಂಭ್ರಮ : ಸಂಚಿಕೆ - 205

ಜೀವನ ಸಂಭ್ರಮ : ಸಂಚಿಕೆ - 205
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
   
ಮಕ್ಕಳೇ, ಇಂದು ಜ್ಞಾನದ ಮಹತ್ವ ತಿಳಿದುಕೊಳ್ಳೋಣ. ನಮ್ಮ ಜೀವನ ಸರಿಯಾಗಿ ಇರಬೇಕೆಂಬ ಇಚ್ಛೆ ಇದ್ದರೆ, ನೂರು ವರ್ಷ ಜಗತ್ತಿನಲ್ಲಿ ಪ್ರಶಾಂತ ಚಿತ್ತರಾಗಿ ಇರಬೇಕು. ನಾವು ಭಾವ ಚಂದ ಮಾಡಬೇಕಾಗುತ್ತದೆ. ಭಾವವನ್ನು ಶೃಂಗರಿಸಬೇಕಾಗುತ್ತದೆ. ಇದರ ಜೊತೆಗೆ ನಾವೇನು ತಿಳಿದುಕೊಂಡು ಇರುತ್ತೇವೆಯೋ, ಅದು ನಮ್ಮನ್ನು ಬದಲು ಮಾಡುತ್ತದೆ. ನಮ್ಮ ಬದುಕಿಗೆ ಕಳೆ ಕೊಡುವುದು, ನಮ್ಮ ಬದುಕಿಗೆ ಬೆಳಕ ನೀಡುವುದು, ನಮ್ಮ ಸರಿಯಾದ ಜ್ಞಾನ. ತಪ್ಪು ತಪ್ಪು ತಿಳಿದುಕೊಂಡು ಹೋದೆವು ಎಂದಾದರೆ, ಜೀವನ ಹೇಗೆ ಬೆಳಗುವುದು?

ನಾವು ಕೆಲವು ಬಾರಿ ಜನರನ್ನು ದ್ವೇಷಿಸುತ್ತೇವೆ. ಏಕೆಂದರೆ ನಾವು ಅವರನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅವರು ನಮಗೆ ಹಿಡಿಸುವುದಿಲ್ಲ. ನಮಗೆ ಯಾಕೆ ಹಿಡಿಸುವುದಿಲ್ಲ ಎಂದರೆ, ಅವರನ್ನು ನಾವು ಸರಿಯಾಗಿ ತಿಳಿದುಕೊಂಡಿಲ್ಲ. ಸರಿಯಾಗಿ ಅರ್ಥ ಮಾಡಿಕೊಂಡರೆ ಹಿಡಿಸದಿರುವ ಪ್ರಶ್ನೆ ಇಲ್ಲ. ಅವಸರ ಅವಸರದಿಂದ ಅಲ್ಲೊಂದು ಎರಡು ಶಬ್ದ ಕೇಳಿ, ಇಲ್ಲೊಂದು ಎರಡು ಶಬ್ದ ಕೇಳಿ, ಅವರು ಸರಿ ಇಲ್ಲ ಅನ್ನುತ್ತೇವೆ. ಅವಸರದಿಂದ ಜ್ಞಾನ ಆಗುವುದಿಲ್ಲ. ಹಾಗೆಯೇ ಅವಸರದಿಂದ ಅನುಭವ ಆಗುವುದಿಲ್ಲ. ಸರಿಯಾದ ಜ್ಞಾನ ಆಯಿತು ಅಂದರೆ, ದ್ವೇಷ ಮೂಡುವ ಪ್ರಶ್ನೆ ಬರುವುದಿಲ್ಲ. ಯಾಕೆ ಹೀಗೆ ಆಗುತ್ತಾ ಇದೆ..? ನಮ್ಮ ಒಳಗಣ್ಣು ಮತ್ತು ಹೊರಗಣ್ಣು ಕೆಲಸ ಮಾಡದೆ ಇದ್ದರೆ, ಬೆಳಕು ಕಡಿಮೆ ಆಗುತ್ತದೆ. ಬೆಳಕು ಕಡಿಮೆಯಾದಾಗ ಏನೇನಾದರೂ ಕಾಣೋದಕ್ಕೆ ಶುರುವಾಗುತ್ತದೆ. ದೆವ್ವ, ಭೂತ ಬಂದ ಹಾಗೆ ಆಗುತ್ತದೆ. ಯಾರೋ ಸುಳಿದಾಡಿದಂತೆ ಆಗುತ್ತದೆ. ಕತ್ತಲೆಯಲ್ಲಿ ಆಗುವ ಅನುಭವ, ಒಳ್ಳೆ ಬೆಳಕು ಇದ್ದರೆ ಏನು ಆಗುವುದಿಲ್ಲ. ಭಯ ಇರುವುದಿಲ್ಲ. ಹಾಗೆ ಜ್ಞಾನ ಸ್ವಚ್ಛ ಇತ್ತು ಅಂದರೆ, ಯಾರನ್ನು ಏನು ದ್ವೇಷಿಸುವುದು?. ಯಾರನ್ನ ಏನು ಪ್ರೀತಿಸುವುದು?. ಸರಿಯಾದ ಜ್ಞಾನ, ಜೀವನದ ಬೆಳಕನ್ನು ಹೆಚ್ಚಿಸುತ್ತದೆ. ಅದು ಜೀವನವನ್ನು ಬೆಳಗುವಂತೆ ಮಾಡುತ್ತದೆ. 

ಬದುಕು ಶ್ರೀಮಂತ ಆಗಲು ಕೆಲಸ ಮಾಡಬೇಕು. ಬದುಕು ಸುಂದರವಾಗಲು ಸದ್ಭಾವ ಬೇಕು. ಬದುಕು ಬೆಳಗಲು ಜ್ಞಾನ ಅವಶ್ಯಕ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಸಿಕೊಳ್ಳುವುದೇ ಸಾಧನೆ. ಒಳ್ಳೆ ಕೆಲಸ ಮಾಡುವುದೇ ಯೋಗ. ಒಳ್ಳೆ ಹೃದಯ ಇಟ್ಟುಕೊಳ್ಳುವುದು ಯೋಗ. ಒಳ್ಳೆಯ ಬುದ್ದಿ ಬೆಳೆಸಿಕೊಳ್ಳುವುದು ಯೋಗ. ಈ ಮೂರು ಕೂಡಿದರೆ ಪೂರ್ಣ ಯೋಗ ಎನ್ನುವರು. ಈ ಮೂರು ಅವಶ್ಯ. ಇಡೀ ಸಮಾಜ ಸುಧಾರಣೆಯಾಗಬೇಕಾದರೆ, ಒಂದು ದೇಶ ಎಲ್ಲಾ ದೃಷ್ಟಿಯಿಂದಲೂ ದೊಡ್ಡದಾಗಬೇಕಾದರೆ, ಈ ಮೂರು ಬೇಕು. ಪ್ರತಿಯೊಬ್ಬರು ಈ ಮೂರು ಕೆಲಸ ಮಾಡಬೇಕು. ನಮ್ಮ ಎದೆ (ಭಾವ) ಹೊಲಸಾದರೆ ದೇಶ ಹೊಲಸು, ಸಮಾಜ ಹೊಲಸು. ಜ್ಞಾನ ಹೊಲಸಾದರೂ ಅಷ್ಟೇ. ಕೈ ದೇಹ ಹೊಲಸಾದರೂ ಅಷ್ಟೇ. ಯಾರ ಕೈಯಲ್ಲಿ ದೇಶದ ಸೂತ್ರ ಇದೆ ಅವರಿಗೆ ಈ ಮೂರು ಕಡ್ಡಾಯವಾಗಿ ಬೇಕಾಗುತ್ತದೆ. 

ಭಾರತ ದೇಶದಲ್ಲಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ಸಾಮ್ರಾಟ ಅಂದರೆ ಅಶೋಕ. ಮೊದಲು ಯುದ್ಧ ಅಂದರೆ ಅವನಿಗೆ ಇಷ್ಟ. ಬರಿ ಯುದ್ಧ ಮಾಡಿ ಕೊಂಡಿದ್ದನು. ಒಮ್ಮೆ ಕಳಿಂಗ ಯುದ್ದ ಆಯ್ತು. ಇದು ಒರಿಸ್ಸಾ ರಾಜ್ಯದಲ್ಲಿದೆ. ಅದು ಭಯಂಕರ ಯುದ್ಧ. ಲಕ್ಷಾಂತರ ಸೈನಿಕರೂ ಸತ್ತಿದ್ದರು. ಯುದ್ಧದಲ್ಲಿ ಜಯಶೀಲನಾಗಿದ್ದ. ಆದ್ದರಿಂದ ತರುಣ ಅಶೋಕನಿಗೆ ತುಂಬಾ ಆನಂದವಾಗಿತ್ತು. ಅಶೋಕನನ್ನು ಒಬ್ಬ ಬೌದ್ಧ ಬಿಕ್ಷು ಉಪಗುಪ್ತ ಭೇಟಿಯಾದನು. ಉಪಗುಪ್ತ ಅಶೋಕನನ್ನು ಕರೆದುಕೊಂಡು ರಣರಂಗಕ್ಕೆ ಹೋದನು. ಆ ರಣರಂಗದಲ್ಲಿ ರಕ್ತ ಮಡುಗಟ್ಟಿತ್ತು ಹಾಗೂ ರಕ್ತ ಹರಿಯುತ್ತಿತ್ತು. ಲಕ್ಷಾಂತರ ಯುವಕರು ಸತ್ತಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ಚೀರಾಟ, ನರಳಾಟ ಇರುವ ಕಡೆ ಉಪಗುಪ್ತ, ಅಶೋಕನನ್ನು ಕರೆದುಕೊಂಡು ಹೋದನು. ಆಗ ಅದನ್ನು ತೋರಿಸುತ್ತಾ ಉಪಗುಪ್ತ ಹೇಳಿದ "ನೋಡು ಅಶೋಕ, ನಿನ್ನ ಜಯ ಈ ರಕ್ತದ ಮೇಲೆ, ಈ ಆಕ್ರಂದನದ ಮೇಲೆ, ದುಃಖದ ಮೇಲೆ, ಈ ತಾಪದ ಮೇಲೆ ನಿಂತಿದೆ. ಹೀಗೆ ಹೇಳುವವರಿದ್ದರೆ ಬೆಳಕು ಬರುತ್ತದೆ. ನಮಗೆ, ನಮ್ಮಷ್ಟಕ್ಕೆ ಒಮ್ಮೊಮ್ಮೆ ತಿಳಿಯುವುದಿಲ್ಲ. ಈಗ ಜಗಳ ಮಾಡುವವರಿಗೆ ಬೇರೆ ಯಾವುದು ಗೊತ್ತಾಗೋದಿಲ್ಲ. ಜಗಳದ ಹುರುಪಿನಲ್ಲಿ ತಲೆಗೆ ಹೊಡೆದರೂ, ಬೆನ್ನಿಗೆ ಹೊಡೆದರೂ ಹೊಡೆಸಿಕೊಂಡವ ಸಾಯುತ್ತಾನೆ. ಈತ ಜೈಲಿಗೆ ಹೋಗುತ್ತಾನೆ. ಇದು ಸಹಿತ ಗೊತ್ತಾಗೋದಿಲ್ಲ. ಹಾಗೆ ಅಶೋಕ ಮಹಾರಾಜ ಯುದ್ಧವನ್ನೇ ನೋಡಿದ, ಭಾರಿ ಆನಂದ ಆಗಿತ್ತು. ನೋಡು, ಇದನ್ನು ಏನು ಮಾಡುತ್ತೀಯ ನೋಡು. ಇದರಿಂದ ನಿನ್ನ ದೇಶ ಶ್ರೀಮಂತಾಗುತ್ತದೆ ಏನು? ಅಂದ. ದೇಶ ನಕ್ಕು ನಲಿಯಬೇಕು, ಅವಾಗ ಶ್ರೀಮಂತ. ದೊಡ್ಡ ಮನೆ ಇದೆ. ಮನೆಯಲ್ಲಿ ಸಾಕಷ್ಟು ಅನ್ನ ಇದೆ, ಸಾಕಷ್ಟು ಮುತ್ತು ರತ್ನಗಳಿವೆ, ಆದರೆ ಪತಿ ಯುದ್ಧದಲ್ಲಿ ಸತ್ತಿದ್ದಾನೆ. ಹೇಳು, ಹೇಗೆ ಸಂತೋಷ ಇರುತ್ತದೆ?. ಯಾವ ಸಂಪತ್ತು ತೆಗೆದುಕೊಂಡು ಏನು ಮಾಡುವುದು?. ಇದನ್ನು ತೋರಿಸಿದ. ನಿನ್ನ ಜಯ, ನಿನ್ನ ಸಾಮ್ರಾಜ್ಯ, ಇದರ ಮೇಲೆ ನಿಂತಿದೆ". ಆಗ ಅಶೋಕನಿಗೆ ದುಃಖ ಆಗಿತ್ತು. ನಾನೇನು ಮಾಡಿಬಿಟ್ಟೆ ಅಂದನು. ಅದಕ್ಕೆ ಉಪಗುಪ್ತ ಹೇಳಿದ, "ಇದಕ್ಕೆ ವಿರುದ್ಧವಾಗಿರುವುದನ್ನು ಮಾಡಬೇಕು. ಸುಂದರ ಕೆಲಸ ಮಾಡಬೇಕು. ಇಲ್ಲಿಯವರೆಗೆ ಆಗಿದ್ದು ಆಗಿ ಹೋಯಿತು. ಇನ್ನು ಮೇಲೆ ಬಡಿದಾಡಬೇಡ. ಇನ್ನು ಮೇಲೆ ಕೊಲೆ ಮುಂತಾದವುಗಳನ್ನು ಮಾಡಬೇಡ. ಆಸೆಯಿಂದ ಯುದ್ಧ ಮಾಡುವುದು ಬೇರೆ, ರಕ್ಷಣೆಗಾಗಿ ಯುದ್ಧ ಮಾಡುವುದು ಬೇರೆ. ಯಾರಾದರೂ ನಮ್ಮ ಮೈಮೇಲೆ ಬಂದಮೇಲೆ ಯುದ್ಧ ಮಾಡುವುದು ಬೇರೆ. ಅವರದನ್ನು ಕಬಳಿಸಬೇಕು ಅಂತ ಯುದ್ಧ ಮಾಡುವುದು ಬೇರೆ." ಇದನ್ನು ತಿಳಿಸಿಕೊಟ್ಟ ಉಪಗುಪ್ತ. "ನಿನ್ನ ಸೇನೆ ಇರಬೇಕು, ರಕ್ಷಣೆಗಾಗಿ. ಎಲ್ಲೆಲ್ಲಿ ಅನ್ಯಾಯ ಆಗುತ್ತದೆಯೋ? ಎಲ್ಲೆಲ್ಲಿ ತೊಂದರೆ ಇದೆಯೋ? ಅದರ ರಕ್ಷಣೆ ಮಾಡೋದಕ್ಕೆ ಸೈನ್ಯ ಇರಬೇಕೆ ವಿನಹ ಕೊಲ್ಲುವುದಕ್ಕೆ ಅಲ್ಲ. ಜನರನ್ನು ರಕ್ಷಿಸುವುದಕ್ಕೆ ಮತ್ತು ದೇಶ ರಕ್ಷಿಸುವುದಕ್ಕೆ ಸೈನ್ಯ ಬೇಕು" ಎಂದು ಹೇಳಿದನು. 

ಆಗ ಅಶೋಕನ ಕೆಲಸ ಬದಲಾದವು, ದಾರಿ ದಾರಿಯಲ್ಲಿ ಧರ್ಮ ಛತ್ರ ರಚಿಸಿದ. ಅಲ್ಲಲ್ಲಿ ಅರವಟ್ಟಿಗೆಗಳನ್ನು ಇಟ್ಟನು. ದೇಶದ ಎಲ್ಲೆಡೆ ರಸ್ತೆ ನಿರ್ಮಿಸಿದ. ರಸ್ತೆ ಎರಡು ಬದಿ ವೃಕ್ಷ ನಡೆಸಿದ. ಅಲ್ಲಲ್ಲಿ ಬುದ್ಧನ ಮಾತುಗಳನ್ನು ಶಿಲೆಯಲ್ಲಿ ಕೆತ್ತಿಸಿದನು. ಕಾರ್ಯಗಳು ಬದಲಾದವು. ಮೊದಲು ಸೈನಿಕರು ಹೋರಾಟಕ್ಕೆ ದುಡಿಯುತ್ತಿದ್ದರು. ಈಗ ಕೆರೆ ಕಟ್ಟುವುದಕ್ಕೆ, ಬಾವಿ ತೋಡುವುದಕ್ಕೆ, ದಾರಿ ಮಾಡುವುದಕ್ಕೆ, ಗಿಡ ನೀಡುವುದಕ್ಕೆ , ಅನ್ನಛತ್ರ, ಅರವಟ್ಟಿಗೆ ನಡೆಸುವುದಕ್ಕೆ ಸೈನ್ಯ ನಿಯೋಜಿಸಿದನು. ಹೀಗೆ ಅಶೋಕನಲ್ಲಿ ಜ್ಞಾನದ ಬೆಳಕು ಬಿದ್ದಿತ್ತು. 

ಈಗ ನೀವೇ ಒಂದು ಪ್ರಯೋಗ ಮಾಡಿ. ಮನೆ ಮುಂದೆ ಯಾರೂ ಅಪ್ಪಣೆ ಇಲ್ಲದೆ ಪ್ರವೇಶವಿಲ್ಲ ಎನ್ನುವ ನಾಮಫಲಕ ಹಾಕುವುದು ಅಥವಾ ತಮಗೆ ಸ್ವಾಗತ ಅಂತ ನಾಮಪಲಕ ಹಾಕಿ ನೋಡಿ. ಆ ಮನೆ ಕಡೆ ನೋಡುವವರ ಭಾವ ಹೇಗಿದೆ ಅಂತ ಗೊತ್ತಾಗುತ್ತದೆ. ಅವರಿಗೆ ಯಾವ ತರದ ವ್ಯಕ್ತಿ ಇದ್ದಾನೆ ಅಂತ ಗೊತ್ತಾಗುತ್ತದೆ. ಇಲ್ಲಿ ನಾಯಿಗಳು ಇದಾವೆ ಎಚ್ಚರವಿರಲಿ ಅಂತ ಮನೆ ಮುಂದೆ ನಾಯಿ ಚಿತ್ರ ಹಾಕಿ ಬರೆದಿರುತ್ತಾರೆ. ಬರೆದವರಿಗೆ ಇದರ ಅರ್ಥವಾಗುವುದಿಲ್ಲ. ಇದು ಏನು ಅರ್ಥ ಅಂತ ಓದುವವನಿಗೆ ಅರ್ಥವಾಗುತ್ತದೆ. ಈ ಮನೆಯಲ್ಲಿ ವಾಸವಾಗಿರುವುದು ನಾಯಿನೋ, ಮನುಷ್ಯನೋ ಅಂತ. ನಿಮಗೆ ಸ್ವಾಗತ ಅಂತ ಬರೆದಿರುವ ಕಡೆ ನೋಡಿ, ದಾರಿಯಲ್ಲಿ ಹೋಗುವವರು ಒಮ್ಮೆ ಓದಿ ಸಂತೋಷಪಟ್ಟು ಹೋಗುತ್ತಾರೆ. ನೀವೇನು ಕರೆಯಬೇಡಿ, ಬಾಗಿಲು ಹಾಕಿರಿ, ಆದರೆ ಆ ಬರೆದಿರುವ ಶಬ್ದ ಎಷ್ಟು ಬದಲಾವಣೆ ಮಾಡುತ್ತದೆ. ಎದ್ದ ಕೂಡಲೇ ಯಾರಾದರೂ ಭೇಟಿಯಾದರೆ ನಮಸ್ಕಾರ ಎಂದರೆ, ಎಷ್ಟು ಚೆನ್ನಾಗಿರುತ್ತದೆ..? ಕೆಟ್ಟ ಮುಖ ಮಾಡಿಕೊಂಡು ಮುಂದೆ ಹೋದರೆ, ಅವರ ಮನಸ್ಸು ಕೆಡುತ್ತದೆ. ಇವನ ಮನಸ್ಸು ಕೆಡುತ್ತದೆ. ಹೇಳಿ ಜೀವನ ಹೇಗೆ ಚೆಂದ ಆಗುತ್ತದೆ?. ಬದುಕು ಕೆಲಸದಿಂದ ಶ್ರೀಮಂತವಾಗುತ್ತದೆ. ಅಶೋಕ ಬದಲಾದ. ಒಬ್ಬ ಉಪಗುಪ್ತ ಅಶೋಕನನ್ನು ಬದಲಾಯಿಸಿದ. ಇಡೀ ದೇಶ ಬದಲಾಗಿತ್ತು.

ದೊಡ್ಡವರು ಬದಲಾಗುವುದು ಬಹಳ ಮಹತ್ವ. ಸಣ್ಣವರು ಬಹಳ ಸಂಖ್ಯೆಯಲ್ಲಿ ಬದಲಾದರೆ ಅಷ್ಟು ಪ್ರಯೋಜನ ಇಲ್ಲ. ಉಪಗುಪ್ತ ಹೇಳಿದ, "ನೀನು ಬದಲಾದರೆ ದೇಶ ಬದಲಾಗುತ್ತದೆ. ನಿನ್ನ ದೇಶ ಶ್ರೀಮಂತ ಆಗಬೇಕಾದರೆ, ಶ್ರೀಮಂತ ಆಗುವ ಕೆಲಸ ಮಾಡು". ಕೆರೆಕಟ್ಟಿದ್ದರೆ ಜನ ಸಾಯುವುದಿಲ್ಲ. ಜನರ ಮುಖದಲ್ಲಿ ಕಳೆ ಬರುತ್ತದೆ, ಸಮೃದ್ಧಿ ಬರುತ್ತದೆ. ಎಲ್ಲಾ ಕಡೆ ನೋಡಿದರೆ ಗಿಡಗಂಟೆ ಕಾಣ ಬೇಕು, ಶವ ಕಾಣಬಾರದು, ಸ್ಮಶಾನ ಕಾಣಬಾರದು. ಊರಿನ ಸಮೀಪ ತೋಟ, ನದಿ, ಪಕ್ಷಿಗಳು ತುಂಬಿದರೆ ಅದು ಸುಂದರವಾದ ಊರು. ದೇಶವನ್ನು ಸುಂದರ ತೋಟ ಮಾಡಬೇಕು. ಅದೇ ಕೆಲಸ.

ಇಂತಹ ಕೆಲಸ ಮಾಡಿದರೆ ಮನೆ ಶ್ರೀಮಂತವಾಗುತ್ತದೆ. ದೇಶ ಶ್ರೀಮಂತವಾಗುತ್ತದೆ. ಸುಂದರ ಸುಂದರ ಕೆಲಸ ಮಾಡಿಕೊಳ್ಳುತ್ತಾ ಇರುವುದು. ಅದೇ ನಾವು ಮಾಡುವುದು ಏನೆಂದರೆ ಸುಂದರ ಕಂಡರೆ ರಾತ್ರಿ ಹೋಗುವುದು. ಅದನ್ನು ಹಾಳು ಮಾಡುವುದು. ಒಳ್ಳೆಯ ದಾರಿಯಲ್ಲಿ ಮುಳ್ಳು ಹಾಕುವುದು. ಹೀಗೆ ಮಾಡಿದರೆ ಊರು, ದೇಶ ಹೇಗೆ ಉಳಿಯುತ್ತದೆ? ಸುಂದರ ಆಗುತ್ತದೆ..? ನಮ್ಮ ಜೀವನ ಹೇಗೆ ಸುಂದರಾಗುತ್ತದೆ...? ಸುಂದರ ಆಗುವಂತೆ ಮಾಡುವುದಕ್ಕೆ ಕಾರ್ಯ ಎನ್ನುತ್ತೇವೆ. 

ಅದೇ ರೀತಿ ಭಾವ, ಅದೇ ರೀತಿ ಜ್ಞಾನ. ಸರಿಯಾಗಿ ತಿಳಿದುಕೊಂಡಿರಬೇಕು. ಏನಾದರೂ ತಿಳಿದುಕೊಳ್ಳಬಾರದು. ಏನಾದರೂ ಓದಿಕೊಳ್ಳುವುದು. ಏನಾದರೂ ಬರೆಯುವುದು. ಏನಾದರೂ ಮಾಡುವುದು. ಹೀಗಾದರೆ ಶ್ರೀಮಂತ ಆಗುವುದಿಲ್ಲ. ಸರಿಯಾದ ತಿಳುವಳಿಕೆ ಬೇಕು.

ನಮ್ಮಂತೆ ಪ್ರಾಮಾಣಿಕವಾಗಿ ಬದುಕಿದರೆ ಹೀಗೆ, ಹೇಗೆ ಬದುಕಲು ಆಗುತ್ತದೆ?. ಎಂದು ಹೇಳುತ್ತಾನೆ. ಈತ ಪ್ರಾಮಾಣಿಕ. ಎರಡು ಮನೆ ಕಟ್ಟಿದ್ದಾನೆ . ಜ್ಞಾನ, ತಿಳುವಳಿಕೆ ಇರಬೇಕು. ಯಾವ ಜ್ಞಾನ ಪ್ರಕಾಶಮಾನವಾಗಿ ಬೆಳಗುತ್ತದೆಯೋ, ಅಂತಹ ಜ್ಞಾನವನ್ನು ಹರಡುವುದು. ನಮ್ಮ ಮಾತಿನಲ್ಲಿ ಸತ್ಯ ಇದ್ದರೆ ಬೆಳಗುತ್ತದೆ. ಅಲ್ಲವೇ ಮಕ್ಕಳೇ..?
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************


Ads on article

Advertise in articles 1

advertising articles 2

Advertise under the article