ನನ್ನ ಪ್ರೀತಿಯ ಟೀಚರ್ - 2025 : ವಿದ್ಯಾರ್ಥಿಗಳ ಬರಹಗಳು : ಸಂಚಿಕೆ -02
Saturday, September 6, 2025
Edit
ನನ್ನ ಪ್ರೀತಿಯ ಟೀಚರ್ - 2025
ವಿದ್ಯಾರ್ಥಿಗಳ ಬರಹಗಳು : ಸಂಚಿಕೆ -02
ಶಿಕ್ಷಕರ ದಿನಾಚರಣೆ ಸೆಪ್ಟೆಂಬರ್ : 05 - 2025
ಮಕ್ಕಳ ಜಗಲಿಯ ವಿದ್ಯಾರ್ಥಿಗಳ ಬರಹಗಳ ಮಾಲೆ
ಶಿಕ್ಷಕರ ದಿನಾಚರಣೆ - 2025 ವಿಶೇಷತೆಯಾಗಿ 'ನನ್ನ ಪ್ರೀತಿಯ ಟೀಚರ್' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ಮಕ್ಕಳು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ಮಕ್ಕಳ ವಿಭಾಗದ ಎರಡನೇ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ
ಈ ಸಂಚಿಕೆಯ ಬರಹಗಾರರು :
▪️ಗೀತಾಲಕ್ಷ್ಮಿ, ದ್ವಿತೀಯ ಪಿಯುಸಿ ವಿಜ್ಞಾನ
▪️ಭಾರತಿ, 8ನೇ ತರಗತಿ
▪️ಹಾರ್ವಿಕ್, ಯು ಕೆ ಜಿ
▪️ರಶ್ಮಿ ಬಿ, 8ನೇ ತರಗತಿ
▪️ದಿವ್ಯ ಜ್ಯೋತಿ ಶೆಟ್ಟಿ, 9ನೇ ತರಗತಿ
▪️ಕೌಶಿಕ್, 3ನೇ ತರಗತಿ
▪️ಅನಿಶಾ ಕೆ, 8ನೇ ತರಗತಿ
▪️ಮಾನ್ಯಶ್ರೀ ಕೆ. ಎಮ್, ಪ್ರಥಮ ಪಿಯುಸಿ
ನನ್ನ ಹೆಸರು ಗೀತಾಲಕ್ಷ್ಮಿ. ನಾನು ದ್ವಿತ್ತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶ್ರೀ ರಾಮ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಹೊಸ ದಾರಿಯನ್ನು ತೋರಿಸಿ ಸ್ಫೂರ್ತಿಯಾದವರು ನನ್ನ ಪ್ರೌಢಶಾಲಾ ಜೀವನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಂತಹ ಉಮಾನಾಥ ರೈ ಮೇರಾವು ಸರ್ ರವರು. "ತಾಯಿ ಉಸಿರು ಕೊಡುತ್ತಾಳೆ. ತಂದೆ ಹೆಸರು ಕೊಡುತ್ತಾನೆ. ಆದರೆ ಗುರುಗಳು ಉಸಿರು ಇರುವವರೆಗೂ; ಹೆಸರು ಉಳಿಸಿ ಕೊಳ್ಳಲು ವಿದ್ಯೆ ಕೊಡುತ್ತಾರೆ.'' ಎಂಬ ಮಾತಿನಂತೆ ನನ್ನ ಜೀವನದಲ್ಲಿ ಯೋಗ ಎಂಬ ವಿದ್ಯೆ ಕಲಿಸಿ ನಾನು ಪ್ರೌಢಶಾಲಾ ಜೀವನದಲ್ಲಿ ತಾಲೂಕು ಮಟ್ಟದ ಯೋಗಸನ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳ ಕಾಲ ಬಹುಮಾನ ಪಡೆಯುವಂತಾಯಿತು. ಇವರು ನೀಡುತ್ತಿದ್ದ ಪ್ರೋತ್ಸಾಹದಾಯಕ ಮಾತುಗಳಿಂದ ಯೋಗಾಸನ ಕಲಿಯಬೇಕೆಂಬ ಆಸಕ್ತಿ ಇನ್ನಷ್ಟು ಮೂಡಿತು. ಇವರ ಪ್ರೋತ್ಸಾಹದಿಂದ ಇನ್ನಷ್ಟು ಯೋಗಾಸನ ಅಭ್ಯಾಸವನ್ನು ಮಾಡಿ ಪ್ರಥಮ ಪಿಯುಸಿಯಲ್ಲಿ ವಿದ್ಯಾಭಾರತಿ ವತಿಯಿಂದ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗು ವಂತಾಯಿತು. ಅಷ್ಟೇ ಅಲ್ಲದೆ ಈ ವರ್ಷ ನಡೆದ ವಿದ್ಯಾಭಾರತಿ ವತಿಯಿಂದ ಈ ವರ್ಷ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತಾಯ್ತು. ಹೀಗೆ ಐದು ವರ್ಷಗಳ ಕಾಲ ಯೋಗಾಸನ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಂತಾಯಿತು. ಇದಕ್ಕೆ ಮುಖ್ಯ ಕಾರಣ ನನಗೆ ಪ್ರೌಢಶಾಲಾ ಜೀವನದಲ್ಲಿ ದೈಹಿಕ ಶಿಕ್ಷಕರ ಶಿಕ್ಷಕರಾಗಿ ಸಿಕ್ಕಿರುವಂತಹ ಉಮಾನಾಥ್ ರೈ ಸರ್ ರವರು. ಹಾಗಾಗಿ ಇವರು ನನ್ನ ಜೀವನಕ್ಕೆ ಪ್ರೋತ್ಸಾಹದಾಯಕ ಶಿಕ್ಷಕರು ಎಂದು ಹೆಮ್ಮೆಯಿಂದ ಹೇಳುತ್ತೇನೆ. ಧನ್ಯವಾದಗಳು
ದ್ವಿತೀಯ ವಿಜ್ಞಾನ ವಿಭಾಗ.
ಶ್ರೀರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನಾನು ಸರಕಾರಿ ಪ್ರೌಢಶಾಲೆ ಪಾಪೆಮಜಲುಗೆ ಸೇರಿದಾಗ ನನ್ನನ್ನು ಮೊದಲು ಮಾತನಾಡಿಸಿದ್ದು ಸವಿತ ಮಿಸ್. ಇವರು ನಮಗೆ ಸಮಾಜ ಪಾಠ ಮಾಡುತ್ತಾರೆ. ಪಾಠಗಳು ತುಂಬಾ ಚೆನ್ನಾಗಿ ಅರ್ಥವಾಗುತ್ತದೆ. ನನಗೆ ಸವಿತಾ ಮಿಸ್ ಎಂದರೆ ತುಂಬಾ ಇಷ್ಟ. ಅವರು ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರು ತಾಯಿಗೆ ಸಮಾನ. ಎಂಟನೇ ತರಗತಿಗೆ ಬರುವಾಗ ನನಗೆ ಭಯವಾಗುತ್ತಿತ್ತು. ಅವರ ಮಾತನ್ನು ಕೇಳಿ ನನಗೆ ಭಯವೆಲ್ಲಾ ಹೋಯಿತು.
8ನೇ ತರಗತಿ
ಸರಕಾರಿ ಪ್ರೌಢಶಾಲೆ ಪಾಪೆ ಮಜಲು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನನ್ನ ಹೆಸರು ಹಾರ್ವಿಕ್. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದೇನೆ. ನಾನು ಶಾಲೆಗೆ ಸೇರಿದ ಮೊದಲ ವರ್ಷ ಎಲ್ ಕೆ ಜಿ ಯಲ್ಲಿ ನನಗೆ ಸಿಕ್ಕಿದ ಟೀಚರ್ ಜ್ಯೋತಿ ಮಿಸ್. ಆಟ ಪಾಠದ ಜೊತೆಗೆ ಅಮ್ಮನ ಪ್ರೀತಿಯನ್ನು ಕೊಡುತ್ತಿದ್ದರು. ಈಗ ಯು ಕೆ ಜಿ ಯಲ್ಲಿ ಸಿಕ್ಕಿದ ಟೀಚರ್ ಪ್ರತಿಭಾ ಮಿಸ್. ಪ್ರೀತಿಯ ಜೊತೆಗೆ ಶಿಸ್ತಿನ ಪಾಠ ವನ್ನು ಹೇಳಿಕೊಡುತ್ತಿದ್ದಾರೆ. ಇವರೆಲ್ಲ ನನ್ನ ನೆಚ್ಚಿನ ಟೀಚರ್.
ಯು ಕೆ ಜಿ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಎಲ್ಲರ ಜೀವನದಲ್ಲೂ ಶಿಕ್ಷಕರ ಪಾತ್ರ ಮಹತ್ವವಾಗಿದೆ. ನಾವು ಉತ್ತಮ ಪ್ರಜೆಯಾಗಲು ಒಳ್ಳೆಯ ಶಿಕ್ಷಕರ ಮಾರ್ಗದರ್ಶನ ಅಗತ್ಯ. ನನ್ನ ಶಾಲೆಯ ನೆಚ್ಚಿನ ಶಿಕ್ಷಕರೆಂದರೆ ಪೂರ್ಣಿಮ ಟೀಚರ್.
ಅವರು ನಮಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಅವರ ಸರಳ ವ್ಯಕ್ತಿತ್ವ ನಮಗೆ ಸ್ಪೂರ್ತಿದಾಯಕವಾಗಿತ್ತು. ನಮ್ಮ ಯಾವುದೇ ತಪ್ಪುಗಳ ಬಗ್ಗೆ ಪ್ರೀತಿಯಿಂದ ವಿವರಿಸಿ ನಮಗೆ ತಿಳಿ ಹೇಳುತ್ತಿದ್ದರು. ಎಲ್ಲರಿಗೂ ಪ್ರೀತಿಯಿಂದ ಪಾಠ ಹೇಳಿಕೊಡುತ್ತಿದ್ದರು. ಅರ್ಥವಾಗದಿದ್ದರೆ ಅದನ್ನು ಅರ್ಥವಾಗುವವರೆಗೂ ಹೇಳಿಕೊಡುತ್ತಿದ್ದರು. ಎಲ್ಲಾ ವಿದ್ಯಾರ್ಥಿ ಅವರನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಸಮಯ ಪಾಲನೆ, ಕ್ಷಮ ಗುಣ ವಿದ್ಯಾರ್ಥಿಗಳ ಮೇಲೆ ಪ್ರೀತಿ, ಶಿಸ್ತು ಪಾಲನೆ ಮುಂತಾದವುಗಳು ಅವರ ಮುಖ್ಯ ಗುಣಗಳು. ನನ್ನ ಶಿಕ್ಷಕರೆಲ್ಲರೂ ಶಿಸ್ತಿನ ಸಿಪಾಯಿ ನಮಗೂ ಕೂಡ ಕಟ್ಟುನಿಟ್ಟಿನ ಶಿಸ್ತನ್ನು ಕಾಪಾಡಲು ಸೂಚಿಸುತ್ತಾರೆ. ನಮ್ಮ ಶಿಕ್ಷಕರು ನಮ್ಮೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಮಾರ್ಗದರ್ಶನ ನೀಡುತ್ತಾರೆ. ನನ್ನ ನೆಚ್ಚಿನ ಶಿಕ್ಷಕಿಯ ಬಗ್ಗೆ ನನಗೆ ತುಂಬಾ ಗೌರವವಿದೆ. ಅವರು ತುಂಬಾ ಒಳ್ಳೆಯ ಮತ್ತು ಬುದ್ಧಿವಂತ ಶಿಕ್ಷಕಿ ಆಗಿದ್ದರು. ವಿದ್ಯಾರ್ಥಿಗಳ ಯಶಸ್ವಿಗೆ ಶಿಕ್ಷಕರು ತುಂಬಾ ಖುಷಿಪಡುತ್ತಾರೆ. ವಿದ್ಯಾರ್ಥಿಗಳ ಹುಟ್ಟು ಹಬ್ಬದ ದಿನ ನನ್ನ ನೆಚ್ಚಿನ ಟೀಚರ್ ಗೆ ಚಾಕ್ಲೆಟ್ ಕೊಟ್ಟರೆ ಅದನ್ನು ಯಾರು ಚೆನ್ನಾಗಿ ಕಲಿಯುತ್ತಾರೆ ಅವರಿಗೆ ಕೊಡುತ್ತಿದ್ದರು. ನಮಗೆ ಗೊತ್ತಿಲ್ಲದ ವಿಷಯಗಳನ್ನು ತುಂಬಾ ಕಲಿಸಿಕೊಟ್ಟಿದ್ದಾರೆ. ನಾವು ಬೇರೆ ಶಾಲೆಗೆ ಹೋದರೆ ಅಲ್ಲಿ ಎಷ್ಟು ಶಿಸ್ತಿನಿಂದ ಇರಬೇಕೆಂಬುದು ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು ಅದನ್ನು ನಮಗೆ ಮತ್ತೆ ಮತ್ತೆ ಕೇಳಲು ಆಸೆಯಾಗುತ್ತಿತ್ತು. ಅವರು ಮಾಡಿದ ಪಾಠವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರು ಕೊಟ್ಟ ಪ್ರೀತಿಯನ್ನು ಕೂಡ ಎಂದಿಗೂ ಮರೆಯುವುದಿಲ್ಲ. ಅವರು ನಮಗೆ ತರಗತಿಯಲ್ಲಿ ಆಟವನ್ನು ಆಡಿಸುತ್ತಿದ್ದರು. ನನ್ನ ನೆಚ್ಚಿನ ಟೀಚರ್ ಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ.
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಜೀವನದಲ್ಲಿ ಗುರಿ, ಸಾಧನೆಯ ಹಠ, ಶಿಸ್ತು ಇವೆಲ್ಲಾ ಕಲಿಸಿದ ನಿಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ತಾಯಿಯಿಂದ ಉಸಿರು ಬರುತ್ತೆ ತಂದೆಯಿಂದ ಹೆಸರು ಬರುತ್ತೆ. ಆದರೆ ಒಬ್ಬ ಗುರುವಿನಿಂದ ಉಸಿರು ಇರೋವರೆಗೂ ಹೆಸರು ಬರೋ ವಿದ್ಯೆ ಬರುತ್ತೆ. ನನ್ನ ತಾಯಿ ನನ್ನ ಮೊದಲ ಶಿಕ್ಷಕಿ, ನನ್ನ ಸೃಷ್ಟಿಕರ್ತೆ, ನನ್ನ ಆಪ್ತ ಸಖಿ, ನನ್ನ ಉತ್ತಮ ಸ್ನೇಹಿತೆ. ಪ್ರೀತಿಯ ಅಮ್ಮ, ನೀನು ನನ್ನ ಗೆಳತಿ, ಸಹೋದರಿ, ಶಿಕ್ಷಕಿ ಮತ್ತು ಸಲಹೆಗಾರ್ತಿಯಾಗಬಲ್ಲೆ. ಮುಂದೆ ಎಷ್ಟೇ ಕೋಪ ತೋರಿಸಿದರು, ಮನಸಲ್ಲಿ ಬೆಟ್ಟದಷ್ಟು ಕನಸು ಪ್ರೀತಿ ಹೊಂದಿರುವ ಜೀವವೇ ತಂದೆ. ಜ್ಞಾನದ ತೋಟದಲ್ಲಿ ಹೂವುಗಳಂತೆ ಅರಳಲು ನೀವು ನನಗೆ ಸಹಾಯ ಮಾಡಿದ್ದೀರಿ. ಹೆತ್ತವರು, ನೀವು ಮೊದಲ ಗುರುಗಳು... ನಾವು ನಗುವುದಕ್ಕೆ, ಆತ್ಮವಿಶ್ವಾಸದಿಂದ ಇರುವುದಕ್ಕೆ ಮತ್ತು ಇಂದು ಪ್ರಕಾಶಮಾನವಾಗಿ ಬೆಳಗುವುದಕ್ಕೆ ಕಾರಣ ಅವರ ಪರಿಶ್ರಮ, ಪ್ರೀತಿ.. ಪೋಷಕರು ಕಲಿಸುವಂತೆ ಯಾರಿಂದಲೂ ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಿಲ್ಲ. ಜ್ಞಾನದೊಂದಿಗೆ ಅವರು ನಮಗೆ ಜೀವನ ಪಾಠಗಳನ್ನು ಸಹ ಕಲಿಸುತ್ತಾರೆ... ಈ ವಿಶೇಷ ದಿನದಂದು ನನ್ನ ಹೆತ್ತವರಿಗೆ ಕೃತಜ್ಞತೆ ಸಲ್ಲಿಸಲು ನನಗೆ ಸಂತೋಷವಾಗಿದೆ.. ಶಿಕ್ಷಕರ ದಿನಾಚರಣೆಯ ಶುಭಾಶಯಗಳು..
9ನೇ ತರಗತಿ
ಕ್ರೈಸ್ಟ್ ಸ್ಕೂಲ್ ಉಡುಪಿ
ಉಡುಪಿ ಜಿಲ್ಲೆ
****************************************
ನನಗೆ ಅಕ್ಷರ ಕಲಿಸಿದ ನನ್ನ ಗುರುಗಳು ನನ್ನ ಜೀವನದ ದಾರಿದೀಪಗಳು. ನಾನು ಇಂದೇನು ಓದುತ್ತಿದ್ದೇನೆ, ಬರೆಯುತ್ತಿದ್ದೇನೆ ಎನ್ನುವುದು ಅವರ ಶ್ರಮದ ಫಲವಾಗಿದೆ. ಗುರುಗಳ ಕಾಳಜಿ, ಸಹನೆ ಮತ್ತು ಪ್ರೀತಿಯಿಂದ ನಾನು ಓದು ಬರಹವನ್ನು ಕಲಿಯಲು ಶಕ್ತನಾದೆ. ಅಕ್ಷರ ಜ್ಞಾನವು ನನಗೆ ಹೊಸ ಲೋಕವನ್ನು ತೆರೆದಿದೆ. ಜ್ಞಾನವೆಂಬ ಬೆಳಕನ್ನು ನನ್ನ ಹೃದಯದಲ್ಲಿ ಹಚ್ಚಿ, ಜೀವನಕ್ಕೆ ನಿಜವಾದ ಅರ್ಥವನ್ನು ನೀಡಿದ ನಮ್ಮ ಸ.ಹಿ.ಪ್ರಾ.ಶಾಲೆ ಪೆರ್ಮುಡ, ನಿಟ್ಟಡೆ ಇಲ್ಲಿನ ನನ್ನ ಪ್ರಿಯ ಗುರುಗಳಾದ ಅನುರಾಧ ಮೇಡಂ ಹಾಗೂ ಧನಂಜಯ ಸರ್ ನಿಮಗೆ ನನ್ನ ಹೃದಯಸ್ಪರ್ಶಿ ನಮನಗಳು.
3ನೇ ತರಗತಿ
ಸ.ಹಿ.ಪ್ರಾ.ಶಾಲೆ ಪೆರ್ಮುಡ, ನಿಟ್ಟಡೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರಃ
ಗುರುಂ ಸಾಕ್ಷಾತ್ ಪರಬ್ರಹ್ಮ
ತಸ್ಮೈಂ ಶ್ರೀ ಗುರುವೇ ನಮಃ
ಇಂದು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ದಿನ. ನನಗೆ ಮಾತು ಕಲಿಸಿದ ಮೊದಲ ಗುರು ಅಮ್ಮ ನನಗೆ ಜೀವನದ ಪಾಠವನ್ನು ಕಲಿಸಿದ ಅಪ್ಪ ವಿದ್ಯೆ ಬುದ್ಧಿ ಪಾಠಗಳನ್ನು ಕಲಿಸಿದ ಗುರುಗಳು ಮತ್ತು ನನ್ನ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....
ನನಗೆ ಇಷ್ಟವಾದ ಟೀಚರ್ ಶಾಂತಿ ಟೀಚರ್. ಟೀಚರು ನಮಗೆ ಸಮಾಜವನ್ನು ಕಲಿಸಿಕೊಡುತ್ತಿದ್ದರು. ನಾನು ಅವರ ಬೋಧನಾ ಶೈಲಿಯನ್ನು ಪ್ರೀತಿಸುತ್ತೇನೆ. ಅವರು ನಮ್ಮ ಜೊತೆ ಒಳ್ಳೆಯ ಗೆಳತಿ ಮತ್ತು ಮಾರ್ಗದರ್ಶಿಯಾಗಿದ್ದರು. ಶಿಸ್ತನ್ನು ಪಾಲಿಸದೆ ಇರುವ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿ ಶಿಕ್ಷಿಸುತ್ತಾರೆ. ಎಲ್ಲ ವಿದ್ಯಾರ್ಥಿಗಳು ಅವರನ್ನು ತುಂಬಾ ಇಷ್ಟಪಡುತ್ತಾರೆ. ಅವರು ನಮ್ಮನ್ನು ಹೆತ್ತ ಮಕ್ಕಳ ತರ ನೋಡುತ್ತಾರೆ. ನಾವು ತಪ್ಪುಗಳನ್ನು ಮಾಡಿದಾಗ ಬುದ್ಧಿಗಳನ್ನು ಹೇಳುತ್ತಾರೆ. ನಮಗೆ ಇತರ ಚಟುವಟಿಕೆಯಲ್ಲಿ ಸಹಾಯ ಮಾಡುತ್ತಾರೆ. ಅವರು ಪಾಠವನ್ನು ನಮ್ಮ ಮನ ಮುಟ್ಟುವಂತೆ ವಿವರಿಸುತ್ತಾರೆ. ತಮಾಷೆಗಳನ್ನು ಮಾಡಿ ನಗಿಸುತ್ತಾರೆ. ನಮಗೆ ನೀತಿ ಪಾಠಗಳನ್ನು ಕೂಡ ಹೇಳುತ್ತಾರೆ. ನಾನು ತಪ್ಪು ದಾರಿಯಲ್ಲಿ ಹೋದಾಗ ತಿದ್ದಿ ಸರಿದಾರಿಯನ್ನು ಹೇಳುತ್ತಾರೆ. ಮತ್ತು ನಮ್ಮಲ್ಲಿ ತಮಾಷೆಯಿಂದ ಇರುತ್ತಾರೆ. ನಮಗೆ ಸ್ಕೂಲ್ ಡೇಯ ಹಿಂದಿನ ದಿವಸ ಮೊಬೈಲ್ ಅನ್ನು ಕೊಟ್ಟು ಡ್ಯಾನ್ಸ್ ಅನ್ನು ಕಲಿಸಿದ್ದಾರೆ. ಸ್ಕೂಲ್ ಡೇ ದಿವಸ ನಮಗೆ ಮೇಕಪ್ ಅನ್ನು ಮಾಡಿದ್ದಾರೆ. ಅವರು ಹಾಕುವ ಒಂದೊಂದು ಸೀರೆ ಕೂಡ ಸುಂದರವಾಗಿರುತ್ತದೆ. ಅವರು ನನ್ನ ಅಮ್ಮನ ತರ. ನೀವು ನಮ್ಮ ಜೊತೆ ಫೋಟೋಗಳನ್ನು ತೆಗೆದಿದ್ದೀರಿ. ನೀವು ಕೊಡುವ ಪರೀಕ್ಷೆಗಳು ಸುಲಭವಾಗಿರುತ್ತಿತ್ತು. ನನ್ನನ್ನು ಆಶೀರ್ವದಿಸಿ ತಾಯಿಯಾಗಿ. ಟೀಚರ್ ನಿಮಗೆ ಶಿಕ್ಷಕರ ದಿನಾಚರಣೆಯ ಕೋಟಿ ಕೋಟಿ ನಮನಗಳು. ಎಲ್ಲಾ ಟೀಚರ್ಸ್ ಗಳಿಗೂ ಶಿಕ್ಷಕರ ದಿನಾಚರಣೆಯ ಕೋಟಿ ಕೋಟಿ ನಮನಗಳು.
8ನೇ ತರಗತಿ
ಸರಕಾರಿ ಪ್ರೌಢಶಾಲೆ, ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಕತ್ತಲೆಯ ಅಜ್ಞಾನವನ್ನು ತೊಡೆದು ಹಾಕಲು ಸಹಾಯ ಮಾಡಿದ ಎಲ್ಲಾ ಶಿಕ್ಷಕರಿಗೆ ನನ್ನ ಕೋಟಿ ನಮಸ್ಕಾರಗಳು. ಶಿಕ್ಷಕರನ್ನು ಎಲ್ಲರೂ 'ಗುರು' ಎಂದು ಪರಿಗಣಿಸುತ್ತಾರೆ ಆದರೆ ನಮಗೆ ನಮ್ಮ ಶಿಕ್ಷಕರು 'ದೇವರ' ಸ್ಥಾನದಲ್ಲಿರುವರು.
"ಶಿಕ್ಷಕರು ಎಂದರೆ ಸ್ವಯಂ ಉರಿದು, ಬೇರೆಯವರ ಜೀವನ ಬೆಳಗುವ ಮೇಣದ ಬತ್ತಿಯಂತೆ" ಗುರುವಿನ ಮುಂದೆ ತಲೆಬಾಗಿಸಿದವನಿಗೆ ಜಗತ್ತೇ ತಲೆಬಾಗುತ್ತದೆ. ಅಂತಹ ನನ್ನ ನೆಚ್ಚಿನ ಶಿಕ್ಷಕರ ಬಗ್ಗೆ ನಾನು ಏನು ಅಂತ ಬರೆಯಲಿ.......
ನನ್ನ ಜೀವನದಲ್ಲಿ ನೀವು ಶ್ರೇಷ್ಠ ಶಿಕ್ಷಕರಾಗಿದ್ದೀರಿ ಎಂದು ನಿಮಗೆ ತಿಳಿಸಲು ನನಗೆ ಹೆಮ್ಮೆಯಿದೆ. ನನ್ನ ನೆಚ್ಚಿನ ಶಿಕ್ಷಕರು ಸಂಕೀರ್ಣ ಪರಿಕಲ್ಪನೆಗಳನ್ನು ಸರಳವಾಗಿ ವಿವರಿಸುವವರಾಗಿದ್ದಾರೆ. ನಿಮ್ಮ ಬೋಧನೆಯ ಉತ್ಸಾಹ ಮತ್ತು ಪ್ರೋತ್ಸಾಹವು ಉತ್ತಮ ಸಾಧನೆ ಮಾಡಲು ಸಹಾಯಕವಾಗಿದೆ. ನನ್ನ ನೆಚ್ಚಿನ ಶಿಕ್ಷಕರು ನಮ್ಮ ಶೈಕ್ಷಣಿಕ ಪ್ರಯಾಣ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ರೂಪಿಸಿದ್ದಾರೆ. ನಿಮ್ಮ ಜ್ಞಾನ ಮತ್ತು ಸಮರ್ಪಣ ಮನೋಭಾವ ಶ್ಲಾಘನೀಯವಾಗಿದೆ ನನ್ನ ನೆಚ್ಚಿನ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯದಲ್ಲಿ ನಂಬಿಕೆ ಇಡುತ್ತಾರೆ. ನಮ್ಮ ಕೈಲಾದಷ್ಟು ಮಾಡಲು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಶೈಕ್ಷಣಿಕವಾಗಿ ಮತ್ತು ವೈಯಕ್ತಿಕವಾಗಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಸಹಾಯ ಮಾಡುವ ನಿಮ್ಮ ಸಮರ್ಪಣೆಯನ್ನು ನಾನು ನಿಜವಾಗಿಯೂ ಮೆಚ್ಚುತ್ತೇನೆ. ಅತ್ಯಂತ ಕ್ಲಿಷ್ಟಕರ ವಿಷಯಗಳನ್ನು ಅರ್ಥ ಮಾಡಿಸುವ, ಜೀವನದಲ್ಲಿ ಒಳ್ಳೆಯ ನೈತಿಕ ಮೌಲ್ಯಗಳನ್ನು ಶಿಸ್ತನ್ನು ಮೂಡಿಸುವ ನಿಮ್ಮ ಪರಿಪರಿ ಮಾತುಗಳು ಎಷ್ಟೊಂದು ಸರಳವಾಗಿದೆ ಮತ್ತು ತಾಳ್ಮೆ, ಪ್ರೀತಿ ಹಾಗೂ ಕೇವಲ ತಿಳುವಳಿಕೆಯನ್ನು ಹಂಚುವುದು ಅಷ್ಟೇ ಅಲ್ಲದೆ ನಮ್ಮ ಜೀವನದ ಕಷ್ಟಗಳನ್ನು ಎದುರಿಸಲು ಶಕ್ತಿ ಮತ್ತು ಪ್ರೇರಣೆ ನೀಡಿದವರು. ನಮ್ಮ ಯಶಸ್ಸಿನಲ್ಲಿ ನಿಮ್ಮ ಕೊಡುಗೆಯು ಅತ್ಯಂತ ಅಪಾರವಾದದ್ದು ಹಾಗೂ ನಿಮ್ಮ ಋಣವನ್ನು ಎಂದಿಗೂ ತೀರಿಸಲಾಗದು. ಇಂತಹ ಮಹಾನ್ ಗುರುಗಳಿಗೆ ನನ್ನ ಹೃದಯಪೂರ್ವಕ ನಮನಗಳು.
ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು...
ಪ್ರಥಮ ಪಿ ಯು ಸಿ
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ
ಕಾಲೇಜು, ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************