-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 121

ನಿಷ್ಪಾಪಿ ಸಸ್ಯಗಳು : ಸಂಚಿಕೆ - 121

ನಿಷ್ಪಾಪಿ ಸಸ್ಯಗಳು : ಸಂಚಿಕೆ - 121
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

     
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ತಮಗೆಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು.

ನವರಾತ್ರಿ ಎಂದಾಕ್ಷಣ ಸಂಭ್ರಮ, ಅಲಂಕಾರ, ಬಣ್ಣಬಣ್ಣದ ಪುಷ್ಪಹಾರಗಳ ಸೊಗಸು ಕಣ್ಮನ ಸೆಳೆಯುತ್ತವೆ. ಯಾವ ಹಬ್ಬಗಳೇ ಇರಲಿ, ಅಲ್ಲಿ ಹೂವುಗಳಿಗೆ ವಿಶೇಷ ಬೇಡಿಕೆ! ಆದರೆ ಹಣ ಕೊಟ್ಟು ಹೂವು ಖರೀದಿಸುವ ಪೇಟೆಯ ಜನರಿಗಿಂತ ಹಳ್ಳಿಗರನ್ನು ಪ್ರತ್ಯೇಕಿಸುವ ಒಂದು ವಿಶೇಷ ಹೂವೆಂದರೆ ದಾಸವಾಳ! ಎಲ್ಲಿ ನೆಟ್ಟರಲ್ಲಿ ಬೇರಿಳಿಸಿ ಒಂದೆರಡು ತಿಂಗಳ ಒಳಗೆ ಚಿಗುರಿ ಮೊಗ್ಗು ಬಂದು ಅರಳಿ ನೆಟ್ಟವರಿಗೆ ಕೃತಜ್ಞತೆ ಸಲ್ಲಿಸುತ್ತದೆ.

ಈ ದಾಸವಾಳ ಎಂಬ ನಿಷ್ಪಾಪಿ ಸಸ್ಯ ನೂರಾರು ವರ್ಷಗಳಿಂದ ನಮ್ಮ ಪೂರ್ವಜರ ಮನ ಗೆದ್ದು ಅಂಗಳ, ತೋಟ ಗದ್ದೆಗಳ ಬೇಲಿಗಳಲ್ಲಿ ಸ್ಥಾನ ಪಡೆದಿವೆ..! ಯಾರು ಕಂಡರೂ ಒಂದು ತುಂಡು ತಂದು ನೆಡಬೇಕನಿಸುವಷ್ಟು ಮುಗ್ಧತೆ ಈ ದಾಸವಾಳದ ಮುಖದಲ್ಲಿದೆ. ಅದರ ಬಣ್ಣಗಳೇನು! ಪಕಳೆಗಳ ಒನಪು ವಯ್ಯಾರಗಳೇನು! ನೆಟ್ಟವರಿಗೆ ಹೂವ ನೀಡದಿರುವ ಕೊಬ್ಬು ದಾಸವಾಳಕ್ಕಿಲ್ಲ. ಮಲ್ಲಿಗೆ ಪುಟ್ಟದಾಗಿದ್ದರೂ ಘಮ ನೀಡಿ ಜನ ಮೆಚ್ಚುಗೆ ಪಡೆದರೆ ದಾಸವಾಳಕ್ಕೆ ಆ ಭಾಗ್ಯವಿಲ್ಲ. ಆದರೂ ತನ್ನ ಗಾತ್ರ ಹಾಗೂ ಬಣ್ಣದಿಂದ ಜಗತ್ತಿಗೆ ರಾಣಿಯಾಗುವ ಕನಸು ಕಾಣುತ್ತದೆ. ಅವಕಾಶ, ಗೊಬ್ಬರ, ನೀರು, ಮಣ್ಣು ಅಷ್ಟೇ ಬೇಕು, ಇಷ್ಟೇ ಬೇಕೆನದೆ ನೆಟ್ಟಲ್ಲಿ ಸ್ವರ್ಗಸುಖ ಕಾಣುವ, ನಗುತ್ತಾ ಬಾಳುವ ಸರಳವಾದ ಒಂದು ಸಸ್ಯ ದಾಸವಾಳ. ಶಾಲೆಯಲ್ಲಿ ಮಕ್ಕಳಿಗೆ ಹೂವಿನ ಭಾಗಗಳ ಪರಿಚಯವಾಗುವುದೇ ದಾಸವಾಳದ ಮೂಲಕ!. ಹೂವಿನ ಚಿತ್ರ ಬರೆದು ಪುಷ್ಪದಳ, ಶಲಾಕಾಗ್ರ, ಶಲಾಕ ನಳಿಕೆ, ಪರಾಗಕೋಶ, ಪರಾಗದಂಡ, ಅಂಡಾಶಯ, ಅಂಡಾಣು, ಪುಷ್ಪಪಾತ್ರೆ ಎಂದೆಲ್ಲ ಗುರುತಿಸಲು ಮಾದರಿಯಾಗುವ ದಾಸವಾಳಕ್ಕೆ ಒಂದಕ್ಕೊಂದು ಸ್ಪರ್ಶಿಸದ ಐದಳಗಳು ಮಾತ್ರವಲ್ಲದೇ ಗುಂಪಾಗಿಯೇ ದಳಗಳಿರುತ್ತವೆ. ಮಾತ್ರವಲ್ಲದೇ ಕೆಲವು ಸಣ್ಣ ದಳಗಳ ಜೊತೆ ಕೆಲವು ದೊಡ್ಡ ದಳಗಳು, ಕೆಲವು ಜಾತಿಯಲ್ಲಿ ಅದರ ಮೇಲೊಂದು ಪುಟ್ಟ ಜುಟ್ಟು, ಕೆಲವಂತೂ ಬಾರೀ ದೊಡ್ಡ ಗಾತ್ರದ ಹೂವನ್ನು ನೀಡಿದರೆ ಕೆಲವು ಕೆಂಪು, ಬಿಳಿ ಬಣ್ಣದ ಮೆಣಸಿನಂತಹ ಹೂಗಳು!. ಹೆಚ್ಚಾಗಿ ಒಂಟಿ ಹೂಗಳೇ ಇದ್ದರೆ ಕೆಲವು ಪ್ರಭೇದಗಳಲ್ಲಿ ಗುಂಪಾಗಿಯೂ ಹೂಗಳಿರುತ್ತವೆ. ಹೂವಿನಲ್ಲಿ ಬೀಜಗಳಾಗುತ್ತವೆ ಯಾದರೂ ಕಸಿ ಕಟ್ಟಿ ಹೊಸ ತಳಿಗಳ ಜನನ ಮಾತ್ರವಲ್ಲದೇ ಕಾಂಡದ ಮೂಲಕ ವಂಶಾಭಿವೃದ್ಧಿಯೇ ಹೆಚ್ಚು. ಹೆಚ್ಚು ನೀರು, ಹೆಚ್ಚು ಗೊಬ್ಬರ, ಉತ್ತಮ ಮಣ್ಣೆಂದು ಕಾಯದೆ. ಅವಕಾಶ ಸಿಕ್ಕಲ್ಲಿ ಸೊಂಪಾಗಿ ಬೆಳೆಯುವುದೇ ದಾಸವಾಳದ ಇನ್ನೊಂದು ಆಕರ್ಷಣೆ.

ಸಾಮಾನ್ಯವಾಗಿ ಹಸಿರು ಅಂಡಾಕಾರದ ಪರ್ಯಾಯ ಎಲೆಗಳು. ಅಂಚು ಗರಗಸದ ಹಲ್ಲಿನಂತಹ ರಚನೆ. ತುದಿ ಚೂಪಾಗಿದ್ದು ಎಲೆಯನ್ನು ಹುಡಿಮಾಡಿದರೆ ನಯವಾದ ದಪ್ಪ ದ್ರವ ಒಸರುವ ಎಲೆಗಳು.. ಹಸುಕರುಗಳಿಗೆ ಬಲು ಇಷ್ಟ. ದಾಸವಾಳ ಅದರ ವೈವಿಧ್ಯಮಯ ರೂಪದಿಂದಲೇ ಜನಾಕರ್ಷಣೆ ಪಡೆದಿದೆ. ಆಧುನಿಕತೆಗೆ ಮಾರುಹೋದ‌ ಇಂದಿನ ಜನಾಂಗಕ್ಕೆ ದಾಸವಾಳ ತಾತ್ಸಾರದ‌ ಸರಕಾದರೂ ಏಷ್ಯಾ ಮತ್ತು ಫೆಸಿಫಿಕ್ ದ್ವೀಪಗಳಲ್ಲಿ ತನ್ನ ಮೂಲವನ್ನು ಹೊಂದಿರುವ ಈ ಪುಷ್ಪವು ಸೌಂದರ್ಯ, ಸ್ತ್ರೀತ್ವ, ಯುವ ಪ್ರೀತಿಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಮಹಿಳೆಯರು ಸಾಂಪ್ರದಾಯಿಕವಾಗಿ ದಾಸವಾಳವನ್ನು ಧರಿಸುವರು. ಅದೂ ಹೇಗಂತೀರಾ? ಎಡಗಿವಿಯ ಹಿಂದೆ ದಾಸವಾಳ ಧರಿಸಿದರೆ ವಿವಾಹಿತ ಮಹಿಳೆಯೆಂದೂ ಬಲಕಿವಿಯ ಹಿಂದೆ ಧರಿಸಿದರೆ ಅವಿವಾಹಿತಳು ಎಂದರ್ಥವಂತೆ!!.

ಹವಾಯಿಯನ್ ಸಂಸ್ಕೃತಿಯಲ್ಲಿ ಪ್ರೀತಿ, ಸಂತೋಷ, ಶಾಂತಿಯೊಂದಿಗೆ ದಾಸವಾಳ ಸೇರಿಕೊಂಡಿದೆ. ಫಿಲಿಪೈನ್ಸ್ ನಲ್ಲಿ ದಾಸವಾಳದ ಹೂ ಮತ್ತು ಎಲೆ ಜಜ್ಜಿ ಜಿಗುಟಾದ ದ್ರವ ಬಂದಾಗ ಪಪ್ಪಾಯಿ ಕಾಂಡದ ಎಲೆಕಾಂಡ ಅದ್ದಿ ಗುಳ್ಳೆ ಊದಲು ಸ್ಟ್ರಾದಂತೆ ಬಳಸುವುದೆ ಒಂದು ವಿಶೇಷತೆ. ಏರ್ ಪಾಲಿನೇಸಿಯದ ಲೋಗೋ ದಾಸವಾಳ ಹೂವಿನ ಶೈಲೀಕೃತ ಚಿತ್ರ. ಹೈಟಿಯ ರಾಷ್ಟ್ರೀಯ ಸಂಕೇತ ದಾಸವಾಳ. ಸೊಲೊಮನ್ ದ್ವೀಪ ಹಾಗೂ ನಿಯು ದ್ವೀಪದ, ಸಿರಿಯಾಕಸ್, ದಕ್ಷಿಣ ಕೊರಿಯ, ಮಲೇಷ್ಯಾ ಗಳ ರಾಷ್ಟ್ರೀಯ ಹೂವು ದಾಸವಾಳ! ಹಳದಿ ದಾಸವಾಳ ಹವಾಯಿಯ ರಾಜ್ಯ ಹೂವಾಗಿದೆ. ನ್ಯೂಜಿಲೆಂಡ್ ನ ಅಕ್ಲೆಂಡ್ ನಲ್ಲಿರುವ ಕರಾವಳಿ ಪ್ರದೇಶವನ್ನು ಹೈಬಿಸ್ಕಸ್ ಕೋಸ್ಟ್ ಎನ್ನುವರು. ರಜಾದಿನಗಳಲ್ಲಿ ಕಡಲ ತೀರಕ್ಕೆ ಪರವಶತೆ, ಮೋಹಕತೆಯ ವಾತಾವರಣವನ್ನು ಸೃಷ್ಟಿಸುವ ದಾಸವಾಳ ಇಲ್ಲಿಗೆ ಸ್ಥಳೀಯವಲ್ಲದೇ ಇದ್ದರೂ ಮುಕುಟವೇರಿದೆ. ಕರ್ನಾಟಕದ ಸಾಮಾನ್ಯ ದಾಸವಾಳ ರೋಸಾ ಸಿನೆನ್ಸಿಸ್. ಹೈಬಿಸ್ಕಸ್ ಸಿರಿಯಾಕಸ್, ಅಲ್ಥಿಯಾದ ಗುಲಾಬಿ, ಶರೋನನ್ ನ ಗುಲಾಬಿ ಮೊದಲಾದ ಜನಪ್ರಿಯ ತಳಿಗಳಿವೆ. ಚೀನೀ ದಾಸವಾಳ ರೋಸಾ ಸಿನೆನ್ಸಿಸ್ ಅನೇಕ ಆಕರ್ಷಕ ಮಿಶ್ರ ತಳಿಗಳೊಂದಿಗೆ ಜನಪ್ರಿಯವಾಗಿದೆ.

ಮಾಲ್ವೇಸಿಯ ಮ್ಯಾಲೋ ಕುಟುಂಬದ ಹೂ ಬಿಡುವ ದೊಡ್ಡ ಸಸ್ಯ ಕುಟುಂಬದ ಸದಸ್ಯತನ ಪಡೆದಿರುವ ದಾಸವಾಳ ಪ್ರಪಂಚದಾದ್ಯಂತ ಸಮಶೀತೋಷ್ಣ, ಉಪೋಷ್ಣ, ಉಷ್ಣವಲಯದ ಪ್ರದೇಶಗಳಲ್ಲಿ ಸ್ಥಳೀಯವಾಗಿ ನೂರಾರು ಜಾತಿಗಳಿವೆ. ಮುನ್ನೂರಕ್ಕೂ ಹೆಚ್ಚು ಪ್ರಭೇದಗಳಿರುವ ದಾಸವಾಳ ವಾರ್ಷಿಕ ಹಾಗೂ ದೀರ್ಘಕಾಲಿಕ ಮೂಲಿಕಾ ಸಸ್ಯಗಳಾಗಿವೆ. ಅಲಂಕಾರಿಕ ಸಸ್ಯವಾಗಿ, ಪೊದೆಗಳಾಗಿ, ಸಣ್ಣ ಮರಗಳಾಗಿ, ಉಷ್ಣವಲಯದಲ್ಲಿ ಹದಿನೈದು ಅಡಿಗಳೆತ್ತರಕ್ಕೂ ಬೆಳೆದು ಮೈತುಂಬಾ ಹೂಗಳನ್ನರಳಿಸುವ ದಾಸವಾಳದ ಕುಲ ಗ್ರೀಕ್ ಭಾಷೆಯ ಕೊಡುಗೆಯಾದ ಹೈಬಿಸ್ಕಸ್. ಬಿಳಿ, ಕೆಂಪು, ಗುಲಾಬಿ, ನೀಲಿ, ನೇರಳೆ, ಹಳದಿ, ಕಿತ್ತಳೆ ಇತ್ಯಾದಿ ಬಣ್ಣಗಳಲ್ಲದೆ ಬಣ್ಣಗಳ ಮಿಶ್ರಣದಿಂದ ಹೊಸ ಹೊಸ ಗಾಢ ಬಣ್ಣಗಳಲ್ಲಿ ಜಗತ್ತನ್ನೇ ಬೆರಗುಗೊಳಿಸುತ್ತದೆ. ತೆಳುವಾಗಿ ಕತ್ತರಿಸಲ್ಪಟ್ಟು ಹಿಂದೆ ಬಾಗಿದ ಎಸಳುಗಳಿರುವ ಕತ್ತರಿ ದಾಸವಾಳ ಒಂದು ಅಪೂರ್ವವಾದ ಸೃಷ್ಟಿ. ಇದನ್ನು ಗಂಗಾಲಾಲಿ ಹೂ, ಕತ್ರಿ ದಾಸವಾಳ, ತೊಟ್ಟಿಲು ಹೂ ಬೇಲಿ ದಾಸವಾಳ, ಗಂಟೆ ದಾಸವಾಳ, ಚಿತ್ರ ದಾಸವಾಳ, ಚಕ್ರ ದಾಸವಾಳ, ಲಾಟನ್ ದಾಸವಾಳ, ಕಾಶಿ ದಾಸವಾಳ ಎಂದೆಲ್ಲ ಕರೆಯುವರು. 

ಹೂವು, ಎಲೆ , ಕಾಂಡ , ಬೀಜ, ಬೇರುಗಳ ಮೂಲಕ ದಾಸವಾಳವು ಅಲಂಕಾರಿಕವಾಗಿ, ಧಾರ್ಮಿಕವಾಗಿ, ಆಯುರ್ವೇದ ಔಷಧಿಯಾಗಿ, ಪಾನೀಯವಾಗಿ ಮಾನವನಿಗೆ ನಿತ್ಯ ಬಳಕೆಯ ವಸ್ತುವಾಗಿದೆ. ಮಾತ್ರವಲ್ಲದೆ ಹೈಬಿಸ್ಕಸ್ ಕ್ಯಾನಬಿನಸ್ ಎಂಬ ದಾಸವಾಳ ಸಸ್ಯದ ಕಾಂಡದ ನಾರನ್ನು ಡೆಕ್ಕನ್ ಸೆಣಬೆನ್ನುತ್ತಾರೆ. ಇದರಿಂದ ಕಾಗದ ತಯಾರಿಸುವರು. ಏಷ್ಯಾದಲ್ಲಿ ದಾಸವಾಳವನ್ನು ಶೂ ಹೂವೆನ್ನುವರು. ಏಕೆಂದರೆ ಇಲ್ಲಿ ಈ ಹೂ ದಳಗಳನ್ನು ಸಂಸ್ಕರಿಸಿ ಪಡೆದ ಕಪ್ಪು ಬಣ್ಣವನ್ನ ಶೂ ಪಾಲಿಶ್ ಮಾಡಲು ಬಳಸುವರು.

ದಾಸವಾಳ ಹೂವಿನಿಂದ ಸುವಾಸನೆಯ, ಬಣ್ಣಗಳಿಂದ ತುಂಬಿದ ಬಿಸಿ ಹಾಗೂ ತಂಪು ಪಾನೀಯ ತಯಾರಿಸಿ ಊಟದ ಬಳಿಕ ಬಳಸುವರು. ಹೂವು ಮತ್ತು ಎಲೆಗಳಿಂದ ತಯಾರಿಸಿದ ಎಣ್ಣೆ ಹೆಂಗಳೆಯರ ಕನಸಿನ ಕೂದಲ ಸೌಂದರ್ಯಕ್ಕೆ ಪೂರಕವಾಗಿದೆ. ಕೂದಲು, ಚರ್ಮದ ಆರೋಗ್ಯಕ್ಕೆ ಉತ್ತಮ. ತಲೆಹೊಟ್ಟು ನಿವಾರಕ, ಕೂದಲು ಉದುರುವ ಸಮಸ್ಯೆ ಹಾಗೂ ಎಳವೆಯಲ್ಲೆ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಪರಿಹಾರಕ. ಕತ್ತರಿ ದಾಸವಾಳದ ಹಸಿ ಎಲೆಯನ್ನೇ ಹಿಸುಕಿ ಶಂಪೂವಿನಂತೆ ಬಳಸಿದರೆ ಕೂದಲು ನಯವಾಗಿ ಹೊಳಪು ಕಾಣುವುದು. ರಕ್ತದೊತ್ತಡ ನಿವಾರಕ, ಕೊಲೆಸ್ಟರಾಲ್ ನಿಯಂತ್ರಕ, ಫೈಬರ್ ಅಂಶದಿಂದಾಗಿ ಜೀರ್ಣಕ್ರಿಯೆ ಸುಧಾರಕ.

ಸುಟ್ಟಗಾಯ, ಚರ್ಮದ ಸಮಸ್ಯೆಗೆ ತಡೆಯಲು, ಹಾರ್ಮೋನ್ ಸಮತೋಲನ ಮರುಸ್ಥಾಪಿಸಲು ಸಹಕಾರಿಯಾಗಿದೆ. ತ್ವಚೆಯಲ್ಲಿನ ವಯಸ್ಸಾದ ಚಿಹ್ನೆ ತಡೆಯಲು ಸಹಾಯಕ. ಹೂಗಳಲ್ಲಿ ಕಬ್ಬಿಣ, ರಂಜಕ, ಕ್ಯಾಲ್ಸಿಯಂ, ವಿಟಮಿನ್ ಬಿ ಸಮೃದ್ಧವಾಗಿದ್ದು ನೈಸರ್ಗಿಕ ಆಮ್ಲೀಯ ರುಚಿ ಹೊಂದಿದೆ. ದೇವರ ಪೂಜೆಗೆ ಕೈಗೆಟುಕುವಷ್ಟು ಹತ್ತಿರ ಇರುವ ದಾಸವಾಳ ಜಪಪುಷ್ಪ ಎಂದೂ ಕರೆಯಲ್ಪಡುತ್ತದೆ. 

ಮಕ್ಕಳೇ, ಒಟ್ಟಿನಲ್ಲಿ ದಾಸವಾಳ ಇರದ ಜಾಗ ಸಿಗುವುದು ದುರ್ಲಭವೆಂದರೂ ತಪ್ಪಲ್ಲ ಅಲ್ಲವೇ? ಬಣ್ಣಗಳ ಪಾಠವನ್ನು ದಾಸವಾಳದಿಂದಲೇ ಕಲಿಯಬೇಕು. ಹೂದಳಗಳ ಬಣ್ಣಕ್ಕಿಂತ ಅವುಗಳ ಕೇಂದ್ರಭಾಗದ ಬಣ್ಣಗಳು ವ್ಯತಿರಿಕ್ತವಾಗಿ, ಕಡು ಬಣ್ಣಗಳಾಗಿರುವುದನ್ನು ಗಮನಿಸಿರಿ.

ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ... ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************

Ads on article

Advertise in articles 1

advertising articles 2

Advertise under the article