ನಿಷ್ಪಾಪಿ ಸಸ್ಯಗಳು : ಸಂಚಿಕೆ - 118
Thursday, September 4, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 118
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ನಾವು ಇತಿಹಾಸದ ಪಠ್ಯದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಗೇರು ಸೊಪ್ಪೆಯ ರಾಣಿ ಚೆನ್ನಭೈರಾದೇವಿ.. ಹೀಗೆ ಹಲವಾರು ಪರಾಕ್ರಮ ತೋರಿದ ರಾಣಿಯರನ್ನು ಗುರುತಿಸುತ್ತೇವೆ. ವಿವಿಧ ಕಾರಣಗಳಿಗಾಗಿ ಇವರೆಲ್ಲರನ್ನು ಇಂದಿಗೂ ಸ್ಮರಿಸಲಾಗುತ್ತದೆ, ಗೌರವಿಸಲಾಗುತ್ತದೆ. ಇವರಿಗೂ ನಿಷ್ಪಾಪಿ ಸಸ್ಯಗಳಿಗೂ ಅದೇನು ಸಂಬಂಧ ಎಂದು ಯೋಚಿಸುತ್ತಿರುವಿರಾ? ಹ್ಹಾ.. ಖಂಡಿತ ನಿಮ್ಮ ಯೋಚನೆ ಸರಿಯಾದುದೇ ಆಗಿದೆ. ಪೋರ್ಚುಗೀಸ್ ಹಾಗೂ ಇತರ ವಿರೋಧಿಗಳ ನಡುವಿನಲ್ಲಿ ಚಾಣಾಕ್ಷತನದಿಂದ 50 ವರ್ಷಗಳ ಕಾಲ ರಾಜ್ಯವಾಳಿದ ಗೇರುಸೊಪ್ಪೆಯ ರಾಣಿ ಚೆನ್ನ ಬೈರಾದೇವಿಗೆ 'ಕರಿಮೆಣಸಿನ ರಾಣಿ, ಕಾಳು ಮೆಣಸಿನ ರಾಣಿ' ಎಂಬ ಅನ್ವರ್ಥಕ ಹೆಸರುಗಳಿದ್ದವು ಎಂದು ಇತಿಹಾಸ ತಿಳಿಸುತ್ತದೆ!ಕಾಳುಮೆಣಸು, ದಾಲ್ಚಿನ್ನಿ, ಅಡಿಕೆ, ಶುಂಠಿ, ಗಂಧ ಈಕೆಯ ಕಾಲದಲ್ಲಿ ಯುರೋಪಿಗೆ ರಫ್ತು ಮಾಡಲಾಗುತ್ತಿತ್ತು. ಈಕೆಗಾಗಿ ಗೇರುಸೊಪ್ಪೆಯಲ್ಲಿ ದೇವಾಲಯವೂ ಇದೆ ಗೊತ್ತಾ! ನೀವು ಈಕೆಯ ಬಗ್ಗೆ ಖಂಡಿತವಾಗಿಯೂ ಓದಬೇಕು, ಮೈ ರೋಮಾಂಚನಗೊಳ್ಳುವುದನ್ನು ಅನುಭವಿಸಬೇಕು.
ಕರಿಮೆಣಸು ಅಂದಾಕ್ಷಣ ನಿಮ್ಮ ಕಣ್ಣೆದುರು ವೀಳ್ಯದೆಲೆಯಂತಹಾ ಬಳ್ಳಿಯ ಚಿತ್ರಣ, ಕಪ್ಪಾದ ಸಣ್ಣ ಕಾಳುಗಳು, ಶೀತ ನೆಗಡಿ ಎಂದಾಕ್ಷಣ ಅಮ್ಮ ಮಾಡಿ ಕೊಡುವ ಖಾರ ಖಾರ ಕಷಾಯ, ಕಷಾಯಕ್ಕೆ ಬೆಲ್ಲ ಹಾಕಿದ್ದರೂ ಕೈಯಲ್ಲಿ ಬೆಲ್ಲದ ತುಂಡೊಂದನ್ನು ನೀಡಿ ರಮಿಸುವುದು ಎಲ್ಲವೂ ನೆನಪಿಗೆ ಬರುತ್ತದೆಯಲ್ಲವೇ? ಮಕ್ಕಳೇ, ಇದು ಅಂತಿಂಥ ಸಾಂಬಾರ ವಸ್ತುವಲ್ಲ.. ಮಸಾಲೆಗಳ ರಾಜ!, ಕಪ್ಪು ಬಂಗಾರ! ಎಂದೆಲ್ಲ ಇದನ್ನು ಕರೆಯುತ್ತಾರೆ ಗೊತ್ತಾ? ಇತಿಹಾಸದಲ್ಲಿ ಇದನ್ನು ಹಣದ ರೂಪದಲ್ಲಿ ಬಳಕೆ ಮಾಡಿದ್ದೂ ಇದೆ!
ಕೇರಳದ ಮಲಬಾರ್ ತೀರದಲ್ಲಿ ಕಾಡು ಮೆಣಸಾಗಿ ಕಾಣಿಸಿಕೊಂಡ ಕರಿಮೆಣಸು ನಿಧಾನಕ್ಕೆ ಕೃಷಿಯ ಮೂಲಕ ಜಗತ್ತಿನ ಮೂಲೆ ಮೂಲೆಗೆ ರಫ್ತಾಗಿ ಖಾರದಲ್ಲೂ ಸುಖ ನೀಡತೊಡಗಿದ್ದು ಈ ನಿಷ್ಪಾಪಿ ಸಸ್ಯದ ಬಹುದೊಡ್ಡ ನಡಿಗೆ. ಅಲೆಗ್ಸಾಂಡರ್ ನ ಕಾಲಕ್ಕಾಗಲೆ ಗ್ರೀಕರಿಗೆ ಭಾರತದ ಕಾಳು ಮೆಣಸಿನ ಬಗ್ಗೆ ತಿಳಿದಿತ್ತು. ಪಶ್ಚಿಮ ಸಮುದ್ರದ ಮೂಲಕ ವ್ಯಾಪಾರೀ ಹಡಗುಗಳಲ್ಲಿ ಸಾಗಿ ಹದವಾದ ಸುವಾಸನೆ ಹರಡುತ್ತಿತ್ತು. ಈಜಿಪ್ಟಿನ 2ನೇ ರಾಮ್ ಸೀಸ್ ದೊರೆಯ ಗೋರಿ ಅಗೆದಾಗ ಶವದ ಮೂಗಿನ ಹೊಳ್ಳೆಗಳಲ್ಲಿ ಕರಿಮೆಣಸಿನ ಕಾಳುಗಳಿದ್ದುವಂತೆ! ಅಂದರೆ ಶವ ಹಾಳಾಗದಂತೆ ರಕ್ಷಿಸಲು ಬಳಸಿದ್ದರೆಂದು ಭಾವಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರ ದಲ್ಲಿ ಇದು ಶನಿದೇವತೆಗೆ ಸಂಬಂಧಿಸಿದೆ.
ಕರಿಮೆಣಸು ಪ್ರಪಂಚದಲ್ಲೇ ಅತೀ ಹೆಚ್ಚು ವ್ಯಾಪಾರವಾಗುವ ಸಾಂಬಾರ ಪದಾರ್ಥ. ಕೊಚ್ಚಿಯಲ್ಲಿ ಅಂತಾರಾಷ್ಟ್ರೀಯ ಕರಿಮೆಣಸು ವಿನಿಮಯ ಕೇಂದ್ರವಿದೆ. ಈಗ ವಿಶ್ವದಲ್ಲಿ ವಿಯೆಟ್ನಾಂ ಅತಿ ಹೆಚ್ಚು ಉತ್ಪಾದಕ. 1940 ರ ವರೆಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ಭಾರತದ ಪಾಲು 80% ಇತ್ತು. ಈಗ ನಾನಾ ಕಾರಣಗಳಿಂದ ಇದು 17% ಕ್ಕೆ ಕುಸಿದಿದೆ. ನಮ್ಮಲ್ಲಿ ಕರಿಮೆಣಸು ಅಥವಾ ಕಾಳುಮೆಣಸಿನ ಪರಿಚಯವಿರದವರು ಯಾರೂ ಇಲ್ಲವೆಂದರೂ ತಪ್ಪಲ್ಲ. ಒಂದೆರಡು ಬಳ್ಳಿಯಾದರೂ ಇರುವ ಮನೆಗಳೇ ಹೆಚ್ವು. ಏಕೆಂದರೆ ಯಾವುದೇ ಮರದ ಬುಡದಲ್ಲಿ ಒಂದು ತುಂಡು ಊರಿಬಿಟ್ಟರೆ ಸಾಕು, ತಾನೇತಾನಾಗಿ ಬೆಳೆದು ಹಬ್ಬಿಕೊಳ್ಳತೊಡಗುತ್ತದೆ. ಆದರೆ ನಾವು ಬಳಸುತ್ತಿದ್ದುದು ಮಾತ್ರ ಹೆಚ್ಚಾಗಿ ಕೆಮ್ಮು , ನೆಗಡಿ ಬಂದಾಗ ಅಥವಾ ಪಾನಕ ಮಾಡುವ ಸಂದರ್ಭದಲ್ಲಿ. ಇದರ ಹೆಚ್ಚಿನ ಬಳಕೆ ಔಷಧಿಗಾಗಿಯೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡುಗೆ ಮನೆಯ ಪ್ರಮುಖ ವಸ್ತುವಾಗಿ ಬದಲಾಗಿದೆ. ಬಹುತೇಕ ಪ್ರತಿಯೊಂದು ಖಾದ್ಯಕ್ಕೂ ಪ್ರವೇಶಿಸುವ ಪ್ರಮುಖ ಮಸಾಲೆ ಕರಿಮೆಣಸು. ಉತ್ತರ ಅಮೇರಿಕಾದ ಎಲ್ಲ ಮನೆಗಳಲ್ಲೂ ಕರಿಮೆಣಸಿನ ಬಳಕೆ ಇದೆಯಂತೆ. ನಮ್ಮಲ್ಲೂ ಕೆಂಪು ಮೆಣಸಿಗೆ ಬದಲಾಗಿ ಕರಿಮೆಣಸನ್ನೇ ಬಳಸುವ ಪರಿಪಾಠವೂ ಇದೆ. ಇದರ ಸಿಪ್ಪೆಯಿಂದ ವಾಸನೆ ನೀಡುವ ತೈಲವನ್ನೂ ಪಡೆಯಲಾಗುತ್ತದೆ. ಗಾಳಿಯಾಡದ ರೀತಿ ಸಂರಕ್ಷಣೆ ಮಾಡಿದರೆ ಮಾತ್ರ ದೀರ್ಘಕಾಲ ಕರಿಮೆಣಸಿನ ಘಮ ಹಾಗೂ ರುಚಿ ಉಳಿಯುತ್ತದೆ.
ಕರಿಮೆಣಸು ಒಂದು ಅಪ್ಪುಸಸ್ಯ. ಬಹುವಾರ್ಷಿಕ ಬಳ್ಳಿ. ಆಧಾರಕ್ಕಾಗಿ ಮರ, ಕಂಬ, ಚಪ್ಪರ ಏನನ್ನಾದರೂ ಇಷ್ಟಪಡುತ್ತದೆ. ಅಡಿಕೆ, ತೆಂಗು, ಹೊಂಗಾರೆ, ಸಿಲ್ವರ್, ಧೂಪ, ತೇಗ ಇಂತಹ ಮರಗಳನ್ನೇ ಅಲ್ಲದೆ ಪ್ಲಾಸ್ಟಿಕ್ ಪೈಪ್ ಗಳು, ಸಿಮೆಂಟ್ ಕಂಬಗಳನ್ನೂ ಇದು ಬೇಡವೆನ್ನುವುದಿಲ್ಲ. ಕರಿ ಮೆಣಸಿನ ಬಳ್ಳಿಯ ಗಂಟುಗಳಲ್ಲಿ ಬೇರುಗಳು ಬಂದು ನೆಲದಲ್ಲಿ ಭದ್ರವಾಗಲು ಹವಣಿಸುತ್ತವೆ. ಮರಗಳ ಗಟ್ಟಿ ತೊಗಟೆಯನ್ನು ಅವುಚಿ ಹಿಡಿದು ಆಹಾರ ಅರಸುತ್ತದೆ. ಇದರ ಎಲೆಗಳು ಪರ್ಯಾಯವಾಗಿದ್ದು 5 ರಿಂದ10 ಸೆಂ.ಮೀ. ಉದ್ದ, 3ರಿಂದ 7 ಸೆಂ.ಮೀ. ಅಗಲವಿರುತ್ತವೆ. ಎಳತಾದ ಎಲೆಗಳ ಸಂದಿಯಲ್ಲಿ ತೂಗಾಡುವ ಪುಟಾಣಿ ಗೊನೆಗಳು ಮೂಡಿ ತಿಳಿಹಸಿರು ಹಳದಿ ಬಣ್ಣದ ಪುಷ್ಪಮಂಜರಿ ಮೂಡುತ್ತವೆ. ಬಳಿಕ ಹಸಿರು ಕಾಯಿಗಳು ಕಾಣಿಸಿ ಬೆಳೆಯುತ್ತಾ ಹಳದಿ, ಕೆಂಪು ಬಣ್ಣಕ್ಕೆ ತಿರುಗಿ ಒಣಗುವಾಗ ಕಪ್ಪಾಗಿ ಚರ್ಮ ಸುಕ್ಕುಗಟ್ಟಿ ಉದುರುತ್ತದೆ. ನೆರಳು, ಗಾಳಿ, ಬೆಳಕು, ಗೊಬ್ಬರ ಎಲ್ಲವನ್ನೂ ಬಯಸುವ ಕರಿಮೆಣಸಿನ ಬಳ್ಳಿ ಮುದ್ದಾಗಿ , ನಿರ್ಲಿಪ್ತವಾಗಿ ತನ್ನ ಪಾಡಿಗೆ ತಾನಿರುತ್ತದೆ. ಮೇಲೇರಲು ಮರಸಿಕ್ಕದಿದ್ದರೆ ಹುಡುಕಾಡುತ್ತಾ ಅಡ್ಡಾದಿಡ್ಡಿ ನೆಲದ ಮೇಲೆಯೇ ಹರಿದಾಡುತ್ತದೆ. ಆದರೆ ಕಾಯಿ ಕಟ್ಟದು. ಗೊಬ್ಬರ, ನೀರು, ತಳಿಯನುಸಾರ ಇಳುವರಿಯಲ್ಲೂ ವ್ಯತ್ಯಾಸವಾಗುವುದು. ವೊಕಲಮೊರಾಟ, ಕರಿಮಂಡ, ಕರಿಮೊರಾಟ, ಮಲ್ಲಿಗೆ ಸರ, ತಟ್ಟಿಸರ ಮೊದಲಾದ 35 - 40 ತಳಿಗಳಿದ್ದು 'ಪನಿಯರ್ 1' ಜನಪ್ರಿಯ ವಾಗಿದೆ. ಕರಿಮೆಣಸಲ್ಲಿ ಒಂದು ತಳಿಯಿಂದ ಇನ್ನೊಂದು ತಳಿ ಬಹಳಷ್ಟು ವೈಶಿಷ್ಟ್ಯಪೂರ್ಣವಾಗಿದೆ. ಉದಾಹರಣೆಗೆ 'ತೆಕ್ಕಸ್ ಪೆಪ್ಪರ್' ಎಂಬ ಕೇರಳದ ಊರಿನ ಹೆಸರನ್ನು ಹೊತ್ತ ತಳಿ ಎರಡನೇ ವರ್ಷಕ್ಕೇ ಇಳುವರಿ ನೀಡುವುದಷ್ಟೇ ಅಲ್ಲದೆ ಒಂದೇ ತೆನೆಯಲ್ಲಿ ಹಲವಾರು ಉಪ ತೆನೆಗಳು ಬಂದು ದ್ರಾಕ್ಷಿಯಂತೆ ಗೊಂಚಲು ಗೊಂಚಲಾಗಿರುತ್ತದೆ. ಹಿಪ್ಪಲಿ ಗಿಡಕ್ಕೆ ಕಸಿ ಮಾಡಿದ 'ಪಣಿಯೂರು' ತಳಿ ಭೂಮಿಗೆ ನಾಲ್ಕೈದು ಅಡಿಗಳೆತ್ತರ ಚಿಗುರುಗಳನ್ನು ಬೆಳೆಯಗೊಡದೇ ಮೇಲೇರುತ್ತದೆ. ಇದರಲ್ಲಿ ಇಳುವರಿ ಸ್ವಲ್ಪ ಕಡಿಮೆಯಾದರೂ ರೋಗ ಬಹು ಪಾಲು ಕಡಿಮೆ. 'ಟಾಪ್ ಶೂಟ್' ಎಂಬ ತಳಿಯಲ್ಲಿ ಮೊದಲ ವರ್ಷಕ್ಕೇ ಬೆಳೆ ಬಂದು ವೇಗವಾಗಿ ಹಬ್ಬಿಕೊಳ್ಳುವ ಗುಣ ಹೊಂದಿದೆ. 'ಪಣಿಯೂರು 5' ತಳಿ 6 ಇಂಚು ಉದ್ದದ ತೆನೆ ನೀಡಿ ಕಾಯಿಯೂ ದೊಡ್ಡದಾಗಿರುತ್ತದೆ. ಆದರೆ ಕಾಯಿ ಹಗುರ ಮಾತ್ರವಲ್ಲದೆ 3 ಬಾರಿ ಕೊಯ್ಲು ಮಾಡಬೇಕಾಗುತ್ತದೆ. 'ಸ್ಥಳೀಯ ತಳಿ' ಯೊಂದು ಕೇವಲ ಎರಡು ಮೂರು ಇಂಚಿನಷ್ಟೇ ಗಾತ್ರದ ತೆನೆಗಳನ್ನು ನೀಡುತ್ತದೆಯಾದರೂ ಇದು ಅತೀ ಖಾರದ ತಳಿಯಾಗಿದೆ. ಉಳಿದೆಲ್ಲ ಕಾಳು ಮೆಣಸುಗಳಿಗಿಂತ ಇದಕ್ಕೆ ಕ್ವಿಂಟಾಲಿಗೆ ಮೂರ್ನಾಲ್ಕು ಸಾವಿರ ಬೆಲೆ ಹೆಚ್ಚು! ಏಕೆಂದರೆ ಇದು ಔಷಧಿಗಾಗಿ ಬಳಕೆಯಾಗುವುದೇ ಹೆಚ್ಚು. 'ತಿರ್ಪಕರೆ' ಎಂಬ ತಳಿಯ ತೆನೆಗಳು S ಆಕಾರದಲ್ಲಿದ್ದು ಬೆಳೆ ಬರಲು ನಾಲ್ಕು ವರ್ಷ ಕಾಯಬೇಕು.ಆದರೆ ಕಾಳುಗಳ ತೂಕ ಹೆಚ್ಚು!. 20 ಅಡಿ ಬಳ್ಳಿಗೆ 5-6 ಕೆ.ಜಿ. ಬೆಳೆ ಬರುವುದು.
ಕಾಳು ಮೆಣಸನ್ನು ಕೊಯ್ಲು ಮಾಡಲು ಮರ ಹತ್ತುವ ನೈಪುಣ್ಯತೆ ಇರುವವರೇ ಬೇಕು. ಕೆಲವು ತಳಿಗಳಲ್ಲಿ ಎರಡು ಮೂರು ಬಾರಿ ಕೊಯ್ಲು ಇದ್ದರೆ ಕೆಲವು ತಳಿಗಳಿಗೆ ಒಂದೇ ಕೊಯ್ಲು. ಆದರೆ ಕೃಷಿಕರಿಗೆ ಕೊಯ್ಲು ಮಾಡಲು ಜನ ಸಿಗುವುದೇ ಸಮಸ್ಯೆ. ಅದಕ್ಕೇ ಪರಿಹಾರವೆಂಬಂತೆ 'ಪೊದೆ ಮೆಣಸು' ವರದಾನವಾಗಿದೆ. ಮಕ್ಕಳೂ ಕೊಯ್ಯಬಹುದಾದಷ್ಟೇ ಎತ್ತರದಲ್ಲಿ ಕಾಯಿಗಳಾಗುವ ತಳಿಗಳೂ ಇವೆ!
ಮಕ್ಕಳೇ, ಇದನ್ನು ಅಭ್ಯಾಸ ಮಾಡುವುದು, ಕೃಷಿ ನಡೆಸುವುದು, ಗುಣಲಕ್ಷಣಗಳ ಸಂಶೋಧನಾ ಕಾರ್ಯಗಳೇ ಒಂದು ಸೊಗಸಲ್ಲವೇ? 'ಪಂಚಮೀ' ಎಂಬ ತಳಿಯಲ್ಲಿ ಬಳ್ಳಿಯ ಮೈತುಂಬಾ ಎಲೆಗಳೇ ಕಾಣಿಸುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ತಾಯಿಯ ಸೀರೆಯಂಚಿನ ಮರೆಯಲ್ಲಿ ಅವಿತು ಕುಳಿತು ಆಟವಾಡುವ ಕಂದಮ್ಮಗಳಂತೆ ಸಾಲು ಸಾಲು ಮೆಣಸಿನ ತೆನೆಗಳು ಎಲೆಗಳಡಿಯಲ್ಲಿ ಅವಿತಿರುತ್ತವೆ! ಸಸ್ಯಗಳ ಬದುಕುವ ಕಲೆಯನ್ನು ಮಾನವ ಅರಿತುಕೊಂಡಾಗ ಅದೇ ಅದ್ವೈತ ವಾಗುವುದು.
ಕರಿ ಮೆಣಸಿನಲ್ಲಿ ಪರಾಗಸ್ಪರ್ಶ ಕ್ರಿಯೆಗೆ ಜೇನು ಇತ್ಯಾದಿ ಜೀವಿಗಳ ಸಹಾಯಕ್ಕಿಂತ ನೀರು ಪ್ರಮುಖ ಪಾತ್ರವಹಿಸುತ್ತದೆ! ನೀರಿನ ಮೂಲಕವೇ ಪರಾಗಸ್ಪರ್ಶ ನಡೆಯುತ್ತದೆ. ಹೀಗಾಗಿ ಮಳೆ ವ್ಯತ್ಯಾಸವಾದರೆ ಖಂಡಿತ ಬೆಳೆಯಲ್ಲೂ ವ್ಯತ್ಯಾಸವಾಗುವುದು. ಮಳೆ ಬಾರದ ಊರಾದರೆ ನೀರು ಚಿಮುಕಿಸುವುದು ಅನಿವಾರ್ಯವಾಗುತ್ತದೆ.. ಒಣ ಪ್ರದೇಶ, ಮಲೆನಾಡು, ಅರೆಮಲೆನಾಡು, ಬಯಲು ಸೀಮೆ ಹೀಗೆ ಎಲ್ಲಿಗೂ ಒಗ್ಗಿಕೊಳ್ಳುವ ತಳಿಗಳಿದ್ದರೂ ಬೆಳವಣಿಗೆಗೆ ಹಾಗೂ ಕಾಯಿಕಟ್ಟಲು ನೀರು ಅತ್ಯಗತ್ಯ. ಕರಿ ಮೆಣಸನ್ನು ಸಂಸ್ಕರಿಸಿ ಕಪ್ಪು, ಹಸಿರು, ಬಿಳಿ, ಗುಲಾಬಿ ಬಣ್ಣಗಳು ಬರುವಂತೆ ಮಾಡಲಾಗುತ್ತದೆ. ಇದು ಔಷಧಿಯಾಗಿ ಬಹಳಷ್ಟು ಬಳಕೆಯಾಗುತ್ತದೆ. ವಿಟಮಿನ್A, C, E, K ಮಾತ್ರವಲ್ಲದೆ ಕಬ್ಬಿಣ, ಸತು, ಕ್ಯಾಲ್ಸಿಯಂ, ರಂಜಕ ಮೊದಲಾದ ಹಲವಾರು ಅಂಶಗಳನ್ನು ಹೊಂದಿದೆ. ತ್ರಿಕಟು ಚೂರ್ಣ, ಚಂದ್ರಪ್ರಭಾ, ನಮರೀಚದಿ , ತ್ರಿಭುವನ ಕೀರ್ತಿರಸ ಮೊದಲಾದ ಔಷಧಿಗಳಲ್ಲಿ ಕರಿಮೆಣಸಿನ ಘಟಕಾಂಶವಿದೆ.
ವೀಳ್ಯ, ಹಿಪ್ಪಲಿಗಳ ಹತ್ತಿರ ಸಂಬಂಧದ ಕರಿಮೆಣಸು ಆಂಗ್ಲ ಭಾಷೆಯ ಬ್ಲ್ಯಾಕ್ ಪೆಪ್ಪರ್ ಎಂಬ ಹೆಸರಲ್ಲೇ ಪ್ರಸಿದ್ಧವಾಗಿದೆ. ಪೈಪರೇಸೀ ಕುಟುಂಬದ ಪೈಪರ್ ಕುಲಕ್ಕೆ ಸೇರಿದ ಈ ಬಳ್ಳಿ ಪೈಪರ್ ನೀಗ್ರಮ್ ಎಂಬ ಸಸ್ಯಶಾಸ್ತ್ರೀಯ ಹೆಸರು ಪಡೆದಿದೆ. ಕನ್ನಡದಲ್ಲಿ ಕರಿಮೆಣಸು, ಒಳ್ಳೆ ಮೆಣಸು, ಕಾಳು ಮೆಣಸು ಎಂದು ಕರೆಯಲ್ಪಟ್ಟರೆ ಮಲಯಾಳ ದಲ್ಲಿ ನಲ್ಲಮುಲುಕ, ಕೊಂಕಣಿಯಲ್ಲಿ ಕರೇ ಮೆಣಸು, ಸಂಸ್ಕೃತ ದಲ್ಲಿ ಉಷಾನ, ಕೃಷ್ಣ ಎಂದೂ ಕರೆಯಲ್ಪಡುತ್ತದೆ. ತೀವ್ರ ರುಚಿ, ತೀಕ್ಷ್ಣ ಗುಣ ಇರುವ ಕರಿ ಮೆಣಸು ಕಫ ವಾತವನ್ನು ಸಮತೋಲನದಲ್ಲಿಡುತ್ತದೆ. ಕರುಳಿನ ಹುಳು, ಹೃದಯದ ಕಾಯಿಲೆ, ಕಫದೋಷ, ಅಸ್ತಮಾ, ಉಸಿರಾಟದ ಅಸ್ವಸ್ಥತೆ, ಮರುಕಳಿಸುವ ಜ್ವರ, ಕೊಬ್ಬಿನ ಶೇಖರಣೆ ನಿವಾರಣೆ, ಬೊಜ್ಜು ನಿರ್ವಹಣೆ, ಕೂದಲುದುರುವಿಕೆ, ಕಣ್ಣಿನ ತೊಂದರೆಗಳಿಗೆ, ಖಿನ್ನತೆ ನಿವಾರಣೆಗೆ, ಕ್ಯಾನ್ಸರ್ ಚಿಕಿತ್ಸೆ ಹೀಗೆ ಹೆಚ್ಚಿನೆಲ್ಲಾ ಚಿಕಿತ್ಸೆಯಲ್ಲಿ ಈ ಕರಿಮೆಣಸು ಉಪಕಾರಿಯಾಗಿದೆ.
ಮಕ್ಕಳೇ ನಮ್ಮ ಶಾಲಾ ಕಲಿಕೆಯನ್ನು ಕೇವಲ ಅಂಕ ಹಾಗೂ ಉದ್ಯೋಗ ಎಂಬ ಮಾನದಂಡದಲ್ಲೇ ತೂಗಿ ನೋಡದೆ, ಜೊತೆಜೊತೆಗೆ ಬದುಕಿಗೆ ಖುಷಿ ನೀಡುವ ಇಂತಹ ಕೃಷಿಯತ್ತಲೂ ಗಮನಿಸಬೇಕಲ್ಲವೇ..? ಇಲ್ಲೂ ಒಂದು ಬದುಕು ಇದೆ, ಕಾಗದಗಳ ಸಖ್ಯಕ್ಕಿಂತ ಸಸ್ಯಗಳ ಸಖ್ಯವೂ ಮುದ ನೀಡಬಹುದು, ಸುಖ ನೀಡಬಹುದೆಂಬ ಅರಿವು ಮೂಡಿಸುವ ಶಿಕ್ಷಣವೂ ಬೇಕಲ್ಲವೇ..? ನೀವೂ ಕರಿ ಮೆಣಸಿನ ಬಳ್ಳಿಯೊಂದನ್ನು ಹಿತ್ತಲಿನ ಯಾವುದಾದರೂ ಮರದ ಬುಡದಲ್ಲಿ ನೆಟ್ಟು ಬೆಳಸಿರಿ. ಒಂದೆರಡು ವರ್ಷದಲ್ಲೇ ಕಾಳುಗಳು ಮೂಡುವುದನ್ನು ಕಂಡು ಹಿಗ್ಗುವ ಮನಸ್ಸನ್ನು ಬೆಳೆಸಿಕೊಳ್ಳಿರಿ..
ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ... ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************