ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 94
Wednesday, August 27, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 94
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಿಜವಾಗಿ ಗಣೇಶ ಹಬ್ಬದ ಬಗ್ಗೆ ಬರೆಯಬೇಕಿತ್ತು. ಆದರೆ ಈ ಬಾರಿ ನಾನೊಂದು ಎಳೆಯನ್ನು ಹಿಡಿದು ಹೊರಟಿರುವುದರಿಂದ ವಿಷಯಾಂತರ ಮಾಡಲೇಬಾರದು ಎಂದು ಗಟ್ಟಿ ಮನಸ್ಸು ಮಾಡಿದೆ.
ಕಳೆದ ವಾರ ಒಂದು ಯೂಕ್ಯಾರಿಯೋಟ್ ಜೀವಕೋಶ ಅನೇಕ ಪ್ರೋಕ್ಯಾರಿಯೋಟ್ ಜೀವಿಗಳ ಒಂದು ಕಾಲೋನಿಯ ಹಾಗೆ ಎಂದು ತೀರ್ಮಾನಕ್ಕೆ ಬಂದಿದ್ದೆವು. ಅಂದರೆ ಒಂದು ಯೂಕ್ಯಾರಿಯೋಟಿಕ್ ಕೋಶವು ಇನ್ನೊಂದು ಪ್ರೋಕ್ಯಾರಿಯೋಟಿಕ್ ಕೋಶವನ್ನು ತನ್ನೊಳಗೆ ಸೇರಿಸಿಕೊಂಡರಾಯಿತಷ್ಟೇ ಎಂದರೆ ಅದಷ್ಟು ಸುಲಭವಾದ ಕಥೆಯಲ್ಲ. ಇದು ಗಣೇಶನಿಗೆ ಆನೆಯ ತಲೆಯನ್ನು ತಂದು ಜೋಡಿಸಿದಷ್ಟು ಕಷ್ಟವಾದ ಕೆಲಸ. ಇಲ್ಲ ಇಲ್ಲ ನಮ್ಮ ಅಜ್ಜ ಹೇಳುವ ಕಥೆಯಲ್ಲಿ ಇದು ತುಂಬಾ ಸರಳವಾಗಿದೆಯಲ್ಲ ಎಂದು ಹೇಳುತ್ತೀರಲ್ಲವೇ? ಆದರೆ ಇದು ಸರಳವಲ್ಲ.
ನಿಮ್ಮ ಸ್ನೇಹಿತನೊಬ್ಬನಿಗೆ ಅಪಘಾತದಲ್ಲಿ ಬಹಳ ರಕ್ತಸ್ರಾವವಾಗಿ ರಕ್ತಪೂರಣಗೊಳಿಸಬೇಕಾಗಿ ಬಂದರೆ ಯಾರ್ಯಾರದೋ ರಕ್ತ ಕೊಡಲು ಬರುವುದಿಲ್ಲ ತಾನೆ? ವೈದ್ಯರು ಸರಿಯಾದ ಗುಂಪಿನ ರಕ್ತ ತರುವಂತೆ ತಿಳಿಸುತ್ತಾರೆ. ಏಕೆಂದರೆ ಹೊಂದಿಕೆಯಾಗದ ರಕ್ತ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಏಕೆಂದರೆ ನಮ್ಮ ದೇಹದೊಳಗೆ ನಮಗೆ ಹೊಂದಾಣಿಕೆಯಾಗದ ರಕ್ತ ಸೇರಿಬಿಟ್ಟರೆ ಆ ಪರಕೀಯ ಕಾಯವನ್ನು ಹೊರ ಹಾಕಲು ಅಥವಾ ಅದನ್ನು ತಟಸ್ಥಗೊಳಿಸಲು ದೇಹ ಪ್ರಯತ್ನಿಸುತ್ತದೆ. ಈ ವ್ಯವಸ್ಥೆಯನ್ನು ನಾವು ರೋಗ ನಿರೋಧಕ ವ್ಯವಸ್ಥೆ (immune system) ಎಂದು ಕರೆಯವುದು. ಇದು ದೇಹವನ್ನು ಹೊರಗಿನಿಂದ ಪ್ರವೇಶಿಸುವ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಗೂ ಅನ್ವಯವಾಗುವ ಹೇಳಿಕೆ. ಈ ಹೊರಗಿನಿಂದ ಬರುವ ವಸ್ತು ದೇಹಕ್ಕೆ ವಿಷಕಾರಿಯಾದ ವಸ್ತುಗಳನ್ನು (antigen) ಹೊಂದಿರುತ್ತವೆ. ಇವು ದೇಹದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತವೆ. ಆದ್ದರಿಂದ ಇವುಗಳನ್ನು ತಟಸ್ಥಗೊಳಿಸಲು ರೋಗ ರಕ್ಷಣಾ ವ್ಯವಸ್ಥೆ ಪ್ರತಿ ವಿಷಗಳನ್ನು ಉತ್ಪತ್ತಿ ಮಾಡುತ್ತವೆ. ಈ ಪ್ರತಿ ವಿಷಗಳನ್ನು ಪ್ರತಿಕಾಯಗಳೆನ್ನುತ್ತೇವೆ (antibody). ಈಗ ನಮ್ಮ ದೇಹದೊಳಗೆ ಈ antigen antibody reaction ನಡೆಯುತ್ತದೆ. ಈ ವಿಷ ಮತ್ತು ಪ್ರತಿಕಾಯಗಳ ನಡುವೆ ನಡೆಯುವ ರಾಸಾಯನಿಕ ಕ್ರಿಯೆ ಇದೆಯಲ್ಲ ಅದೊಂದು ಉಷ್ಣಕ್ಷೇಪಕ ಕ್ರಿಯೆ (exothermic reaction). ಅಂದರೆ ರಾಸಾಯನಿಕ ಕ್ರಿಯೆ ನಡೆಯುವಾಗ ಶಾಖ ಬಿಡುಗಡೆಯಾಗುತ್ತದೆ. ಅಂದರೆ ನಮ್ಮ ದೇಹ ಬಿಸಿಯಾಗುತ್ತದೆ. ಇದನ್ನು ನಾವು ಜ್ವರ ಎಂದು ಕರೆಯುವುದು. ಇದನ್ನು ನಾವು ಖಾಯಿಲೆ ಎಂದು ತಿಳಿದಿದ್ದೇವೆ. ಜ್ವರ ಒಂದು ಖಾಯಿಲೆ ಅಲ್ಲ ಅದು ಖಾಯಿಲೆಯ ಮುನ್ಸೂಚನೆ ಅಷ್ಟೇ. ಇಲ್ಲಿ ಖುಷಿ ಪಡಬೇಕಾದ ಒಂದು ಅಂಶವಿದೆ. ಅದೆಂದರೆ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಅತ್ಯಂತ ಕ್ರಿಯಾಶೀಲವಾಗಿದೆ ಎಂಬುದು. ಜ್ವರಕ್ಕೆ ಮದ್ದು ತಂದೆ ಎಂಬುದು ಒಂದು ತಪ್ಪು ಕೆಲಸ. ನೀವು ಡಾ. ಬಿ ಎಂ ಹೆಗ್ಡೆಯವರು ಜ್ವರಕ್ಕೆ ಮದ್ದು ತೆಗೆದುಕೊಳ್ಳಬೇಡಿ ಎನ್ನುವುದನ್ನು ಕೇಳಿದ್ದೀರಲ್ಲವೇ? ಇದರಿಂದ ನಿಮ್ಮ ರೋಗ ನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ. ದೇಹದ ಉಷ್ಣತೆ ಕಡಿಮೆ ಮಾಡಲು ಹಣೆ ಮತ್ತು ಕಂಕುಳಲ್ಲಿ ಒದ್ದೆ ಬಟ್ಟೆಯನ್ನಿರಿಸಬೇಕು.
ನೀವು ಎಲ್ಲಿಯಾದರೂ ನಿಮ್ಮದಲ್ಲದ ಗುಂಪಿನ ರಕ್ತವನ್ನು ತೆಗೆದುಕೊಂಡರೆ ಈ ಕಾಯ ಪ್ರತಿಕಾಯ ಕ್ರಿಯೆಯಲ್ಲಿ ನಿಮ್ಮ ದೇಹದ ಎಲ್ಲಾ ರಕ್ತ ಹೆಪ್ಪುಗಟ್ಟಿ ಸಾವು ಸಂಭವಿಸುತ್ತದೆ. ರಕ್ತಪೂರಣ, ಕಾರ್ನಿಯಾ ಕಸಿ ಇವುಗಳು ಸರಳವಾದ ಅಂಗದಾನ ಪ್ರಕ್ರಿಯೆ. ಆದರೆ ಉಳಿದ ಅಂಗಗಳಾದ ಮೂತ್ರಜನಕಾಂಗ, ಹೃದಯ ಇವುಗಳ ವಿಷಯದಲ್ಲಿ ಹಾಗಲ್ಲ. ಒಂದೇ ರಕ್ತದ ಗುಂಪಿಗೆ ಸೇರಿದ್ದರೂ ನಮ್ಮ ದೇಹ ಅಂದರೆ ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಇದೊಂದು ಪರಕೀಯ ವಸ್ತು. ಅದನ್ನು ಹೊರಹಾಕಲು ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದಕ್ಕಾಗಿ ನೀವು ಇದನ್ನು ತಟಸ್ಥಗೊಳಿಸುವ ಔಷಧಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಲೇ ಇರಬೇಕಾಗುತ್ತದೆ.
ಅದೇ ಗಣಪತಿಯ ವಿಷಯಕ್ಕೆ ಬಂದರೆ ಗಣಪತಿಗೆ ಮಾನವನಿಗೆ ಸಂಬಂಧವೇ ಇಲ್ಲದ ಆನೆಯ ತಲೆಯನ್ನು ಜೋಡಿಸಲಾಗಿದೆ. ಆದರೆ ಸದ್ಯದ ಆರೋಗ್ಯ ವಿಜ್ಞಾನದ ಪ್ರಕಾರ ಇದು ಅಸಾಧ್ಯವಾದ ಮಾತು. ಹಾಗಾದರೆ ಗಣಪತಿಯ ದೇಹ ಆನೆಯ ತಲೆಯನ್ನು ಉಳಿಸಿಕೊಂಡಿದ್ದಾದರೂ ಹೇಗೆ? ಈಗಿನ ವಿಜ್ಞಾನದ ಪ್ರಕಾರ ಅಸಾಧ್ಯವಾಗಿರುವ ಇದು ಕಾಲ್ಪನಿಕವೇ...? ಅಥವಾ ಆ ಕಾಲದಲ್ಲಿ ಇಂತಹ ಅಂಗಾಂಗ ಜೋಡಣೆ ಮತ್ತು ಇದನ್ನು ದೇಹ ನಿರಾಕರಿಸದಂತೆ ಮಾಡಲು ಔಷಧಗಳಿದ್ದುವೇ ನನಗಂತೂ ತಿಳಿದಿಲ್ಲ. ನೀವು ಕಲಿತು ದೊಡ್ಡವರಾದ ಮೇಲೆ ಇದನ್ನು ಸಾಧ್ಯವಾಗಿಸುತ್ತೀರೋ ನೋಡೋಣ.
ಓಹ್ ಗಣಪತಿಯ ವಿಷಯ ಹೇಳುವುದಿಲ್ಲ ಎಂದರೂ ಅಲ್ಲಿಯೇ ಗಿರಕಿ ಹೊಡೆಯುವಂತಾಯಿತು. ಇವತ್ತು ಹೇಳಹೊರಟದ್ದು ಮುಂದಿನವಾರ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************