ಪಯಣ : ಸಂಚಿಕೆ - 54 (ಬನ್ನಿ ಪ್ರವಾಸ ಹೋಗೋಣ)
Friday, August 1, 2025
Edit
ಪಯಣ : ಸಂಚಿಕೆ - 54 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ "ಅಂಬಾ ತೀರ್ಥ" ಕ್ಕೆ ಪಯಣ ಮಾಡೋಣ ಬನ್ನಿ....
ಹೊರನಾಡು ಅನ್ನಪೂಣೇಶ್ವರಿ ದೇವಿ ಸನ್ನಿಧಿಯ ಹೆಬ್ಬಾಗಿಲಿನಂತಿರುವ ಕಳಸದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಭದ್ರಾ ತೀರದ ಮನಮೋಹಕ, ರಮಣೀಯ ತಾಣ ಅಂಬಾತೀರ್ಥ.
ಬಹಳ ಜನ ಪ್ರವಾಸಿಗರು ಸಾಮಾನ್ಯವಾಗಿ ಹೊರನಾಡು, ಶೃಂಗೇರಿಗಳನ್ನು ನೋಡಿಕೊಂಡು ವೇಳೆಯಿದ್ದಲ್ಲಿ ಮಾತ್ರ ಕಳಸದ ಶ್ರೀ ಕಳಶೇಶ್ವರನ ದರ್ಶನಕ್ಕೆ ಹೋಗುತ್ತಾರೆ. ಹಾಗೆ ಕಳಸದಿಂದ ಹೊರನಾಡಿಗೆ ಹೋಗುವ ಹಾದಿಯಲ್ಲಿ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಪಂಚತೀರ್ಥ ಪರಿಸರದ ಅಂಬುತೀರ್ಥಕ್ಕೆ ಹೋಗಿ ಬರುವ ಪ್ರವಾಸಿಗರ ಸಂಖ್ಯೆ ತೀರಾ ವಿರಳವೇ.
ಕುದುರೆಮುಖ ಬಳಿಯ ಗಂಗಾ ಮೂಲದಲ್ಲಿ ತುಂಗಾ, ಭದ್ರಾ ಹಾಗೂ ನೇತ್ರಾವತಿ ನದಿಗಳು ಜನಿಸುತ್ತವೆ. ತುಂಗೆಯು ಮುಂದೆ ಹನುಮನ ಗುಂಡಿ ಜಲಪಾತವಾಗಿ ಶೃಂಗೇರಿಯತ್ತ ಸಾಗುತ್ತಾಳೆ. ನೇತ್ರಾವತಿಯು ಕಾರ್ಕಳದತ್ತ ಮುಖ ಮಾಡಿ, ಧರ್ಮಸ್ಥಳದತ್ತ ಸಾಗುತ್ತದೆ. ಭದ್ರಾ ನದಿಯು ಕುದುರೇಮುಖ, ಕಳಸ ಹಾದಿಯ ಸಹ್ಯಾದ್ರಿ ಪರ್ವತ ಪ್ರದೇಶಗಳ ಕಣಿವೆಯಲ್ಲಿ ಸಾಗುತ್ತಾಳೆ. ಹೀಗೆ ಕಳಸದ ಬಳಿಯೇ ಸಾಗುವ ಅಂಬಾತೀರ್ಥ, ರುದ್ರ ತೀರ್ಥ, ಕೋಟಿ ತೀರ್ಥ, ನಾಗತೀರ್ಥ ಹಾಗೂ ವಸಿಷ್ಠ ತೀರ್ಥಗಳಾಗಿ ಹರಿಯುತ್ತಾಳೆ. ಈ ಪಂಚ ತೀರ್ಥಗಳಲ್ಲಿ ಅಂಬು ತೀರ ಪರಶುರಾಮ ಕ್ಷೇತ್ರ, ಅಂಬಾ ತೀರ್ಥ, ಮಾರಥಕಾ ತೀರ್ಥ ಎಂದೂ ಈ ರಮಣೀಯ ತಾಣವನ್ನು ಕರೆಯಲು ಕಾರಣ ಇಲ್ಲಿ ಭದ್ರೆಯು ಒಂದೆಡೆ ಪ್ರಶಾಂತವಾಗಿ ಹರಿಯುತ್ತ, ಅತ್ಯಂತ ರಭಸದಿಂದ ಹತ್ತಿಪ್ಪತ್ತು ಅಡಿಗಳ ಎತ್ತರದ ನಡುವೆ ಜಿಗಿ ಜಿಗಿಯುತ್ತ ಹರಿಯುತ್ತಾಳೆ.
ಭದ್ರೆಯ ರಭಸಕ್ಕೆ ಕಡೆದ ಬಂಡೆಗಳು, ಅದರಲ್ಲಿನ ದೊಡ್ಡ ದೊಡ್ಡ ರಂಧ್ರಗಳು ನಾನಾ ಅಕೃತಿಯ ಕಲ್ಲುಗಳು, ಸುತ್ತಣದ ಹಸಿರು ಗಿರಿ ಶಿಖರಗಳು ಮೊದಲಾದವು ನೋಡುಗರನ್ನು ಮಂತ್ರಮುಗ್ಧ ಗೊಳಿಸುತ್ತವೆ. ತ್ರೇತಾಯುಗದಲ್ಲಿ ಶ್ರೀರಾಮನು ವನವಾಸಕ್ಕೆಂದು ಇಲ್ಲಿ ತಂಗಿದ್ದಾಗ, ಸೀತೆಯು ಇಲ್ಲಿ ಮಿಂದು, ತನ್ನ ಸೀರೆಯನ್ನು ಇಲ್ಲಿಯ ಬಂಡೆಗಳ ಮೇಲೆ ಒಣಗಲು ಹಾಸಿದ್ದಳಂತೆ. ಆ ಬಂಡೆ ಸೀತೆ ಸೆರಗೆಂದೇ ಈಗಲೂ ಪ್ರಸಿದ್ಧ. ಮಹಾಭಾರತದ ಸಮಯದಲ್ಲಿ ಭೀಮಸೇನನು ಪ್ರಾಕೃತಿಕ ಚೆಲುವಿಗೆ ಮನಸೋತು ಇಲ್ಲಿಯೇ ಕುಳಿತು ಊಟ ಮಾಡಿದ. ಊಟದಲ್ಲಿ ಸಿಕ್ಕ ಕಲ್ಲೊಂದನ್ನು ಇಲ್ಲಿಯ ಬಂಡೆಯ ಮೇಲಿಟ್ಟನಂತೆ. ಅದು ಭೀಮನ ಕಲ್ಲು ಎನಿಸಿಕೊಂಡಿದೆ!
ಶ್ರೀ ಮಧ್ವಾಚಾರ್ಯರು ಇಲ್ಲಿಯ ಗೋಳಾಕೃತಿಯ ಬಂಡೆಯಲ್ಲಿ ಶಾಸನವೊಂದನ್ನು ರಚಿಸಿದ್ದಾರೆ. ಇಲ್ಲಿಯ ಹಾಸು ಬಂಡೆಗಳಲ್ಲಿ ಭಕ್ತರು ಶಿರಸಾಷ್ಟಾಂಗ ಮಾಡುತ್ತಿರುವ ಕೆತ್ತನೆಯನ್ನೂ ಕಾಣಬಹುದು. ಮಳೆಗಾಲದಲ್ಲಿ ಭದ್ರೆಯು ಹೆಚ್ಚು ಭೋರ್ಗರೆದು ಹರಿಯುವುದರಿಂದ ನೀರಿನಲ್ಲಿಳಿಯುವುದು ಅಪಾಯಕಾರಿ. ಆ ವೇಳೆ ಇಲ್ಲಿಯ ನಿಸರ್ಗ ನಿಮಿತ ರಂಧ್ರಗಳ ಸೊಬಗು ಸವಿಯಲು ಸಾಧ್ಯವಾಗದು. ಹಾಗಾಗಿ ಏಪ್ರಿಲ್-ಮೇ ಅವಧಿಯೊಳಗೆ ಇಲ್ಲಿಯ ಪ್ರಾಕೃತಿಕ ಸೊಬಗು ಸವಿಯಲು, ನೀರಿನಲ್ಲಿ ಸ್ವಚ್ಛಂದವಾಗಿ ಕಾಲ ಕಳೆಯಲು ಸಕಾಲ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖದಿಂದ ಕೇವಲ ಇಪ್ಪತ್ತು ಕಿ.ಮೀ. ದೂರದಲ್ಲಿ ಕಳಸ ಇದೆ. ಅಲ್ಲಿಂದ ಹೊರನಾಡಿಗೆ ಎಂಟು ಕಿ.ಮೀ. ಕ್ರಮಿಸಿದೊಡನೆ ಎಡಕ್ಕೆ 'ಅಂಬಾತೀರ್ಥಕ್ಕೆ ದಾರಿ' ಎಂಬ ನಾಮಫಲಕ ಕಾಣಬಹುದು. ಕಚ್ಚಾರಸ್ತೆಯಲ್ಲಿ ಒಂದು ಕಿ.ಮೀ. ಕ್ರಮಿಸುತ್ತಿದ್ದಂತೆ ಭದ್ರಾ ತೀರದ ಅಂಬಾತೀರ್ಥ ಎದುರಾಗುತ್ತದೆ. ತೀರಾ ಇಳಿಜಾರಾದ ಕಚ್ಚಾ ಮಾರ್ಗ. ಹಾಗಾಗಿ ಮಳೆಗಾಲದಲ್ಲಿ ಹೋಗುವುದು ಕಷ್ಟ. ಕಳಸ ಹಾಗೂ ಹೊರನಾಡಿನಿಂದ ಹೋಗಿ ಬರಲು ಜೀಪ್‌ಗಳಿರುತ್ತವೆ.
"ಒಂದೆಡೆ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಆದರೆ ಮತ್ತೊಂದೆಡೆ ಜೀವನದಿಯ ಜಲಧಾರೆಗಳ ಹರಿಯುವಿಕೆಯ ರಮಣೀಯತೆ. ಕಲ್ಲು ಬಂಡೆಗಳ ಹಾಲಿನಂತಹ ನೋಟ - ಬಲು ಸುಂದರ ; ಈ ಕಳಸ ಸಮೀಪದ ಅಂಬಾ ತೀರ್ಥ". ಬನ್ನಿ ಒಮ್ಮೆ ಪ್ರವಾಸಕ್ಕೆ...
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************