ಮಕ್ಕಳಿಗೆ ರಜೆಯ ಓದು : ಸಂಚಿಕೆ - 10
Sunday, August 3, 2025
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 10
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಬಹುತೇಕ ಮಕ್ಕಳಿಗೆ ಕಥೆ ಪುಸ್ತಕಗಳನ್ನು ಓದುವಾಗ ಅದರಲ್ಲಿ ಪರಿಸರ, ಪ್ರಾಣಿ, ಪಕ್ಷಿಗಳು ಇದ್ದರೆ ಬಹಳ ಖುಷಿಯಾಗುತ್ತದೆ. ಇದೇ ಬಗೆಯ ಒಂದು ಪುಸ್ತಕ ‘ನೂರಾ ಒಂದು ಡಾಲ್ಮೇಷಿಯನ್ಸ್’. ಬಹಳಷ್ಟು ಮಂದಿಗೆ ತಿಳಿದಿರುವ ನಾಯಿಯ ಒಂದು ತಳಿ ಡಾಲ್ಮೇಷಿಯನ್. ಬಿಳಿ ಮೈಬಣ್ಣದಲ್ಲಿ ಕಪ್ಪು ಚುಕ್ಕೆಗಳನ್ನು ಅಥವಾ ಕಲೆಗಳನ್ನು ಹೊಂದಿರುವ ಮುದ್ದಾದ ನಾಯಿಯ ತಳಿ ಡಾಲ್ಮೇಷಿಯನ್. ಈ ತಳಿಯ ನಾಯಿಗಳು ಬಹಳ ಚುರುಕು. ಇಂತಹದ್ದೇ ಒಂದು ಜೋಡಿ ನಾಯಿಗಳ ಸುಂದರವಾದ ಕಥೆಯನ್ನು ಹೆಣೆದಿದ್ದಾರೆ ಡೋಡಿ ಸ್ಮಿತ್. ೧೯೫೬ರಲ್ಲಿ ಪ್ರಕಟವಾದ ಈ ಕಥೆ ಪುಸ್ತಕ ಮಕ್ಕಳ ಮನಗೆಲ್ಲುವಲ್ಲಿ ಹಿಂದೆ ಬೀಳಲಿಲ್ಲ.
ನೂರಾ ಒಂದು ಡಾಲ್ಮೇಷಿಯನ್ಸ್ ಕಾದಂಬರಿಯ ಕಥಾ ವಸ್ತು ಬಹಳ ಸರಳ ಮತ್ತು ರೋಮಾಂಚನ ಉಂಟು ಮಾಡುವಂಥದ್ದು. ಪೊಂಗೋ ಮತ್ತು ಮಿಸ್ಸಿಸ್ ಎನ್ನುವ ಡಾಲ್ಮೇಷಿಯನ್ ದಂಪತಿಗಳ ಕಥೆ ಇದೆ. ಈ ಜೋಡಿ ನಾಯಿಗಳು ಕುಖ್ಯಾತ ಕಳ್ಳ ಕ್ರುಯೆಲ್ಲಾ ದಿ ವಿಲ್ ಎಂಬಾತನ ಬಂಧನದಿಂದ ತಮ್ಮ ಮರಿಗಳನ್ನು ರಕ್ಷಿಸುವ ಕಥಾ ವಸ್ತು ಹೊಂದಿದೆ. ಪೊಂಗೋ ಮತ್ತು ಮಿಸ್ಸಿಸ್ ತಮ್ಮ ಇತರೆ ನಾಯಿ ಮಿತ್ರರ ಜೊತೆ ಸೇರಿ ನಾಯಿ ಮರಿಗಳನ್ನು ರಕ್ಷಣೆ ಮಾಡುವ ಕಥೆ ಓದಲು ಬಹಳ ಮಜಾ ನೀಡುತ್ತದೆ.
ಡೋಡಿ ಸ್ಮಿತ್ ಬರೆದ ಈ ಕಾದಂಬರಿಯು ಬಹಳಷ್ಟು ಕಿರು ಚಿತ್ರ, ಕಾರ್ಟೂನ್ ಚಿತ್ರ ಮತ್ತು ಚಲನ ಚಿತ್ರಗಳಿಗೆ ಕಾರಣವಾಯಿತು. ೧೯೬೧ರಲ್ಲೇ ವಾಲ್ಟ್ ಡಿಸ್ನಿ ಸಂಸ್ಥೆಯು ಈ ಕಥೆಯನ್ನು ತಮ್ಮ ಕಾರ್ಟೂನ್ ಚಿತ್ರದಲ್ಲಿ ಬಳಸಿಕೊಂಡಿತು. ಇದು ಮಕ್ಕಳಿಗೆ ಮಾತ್ರವಲ್ಲ ಅವರ ಪೋಷಕರ ಮನಗೆಲ್ಲುವಲ್ಲೂ ಸಫಲವಾಯಿತು. ಈ ಕಥಾ ವಸ್ತುವನ್ನು ಹೊಂದಿದ ಹಲವಾರು ಟಿವಿ ಧಾರಾವಾಹಿಗಳು ಬಂದಿವೆ. ಇದರಲ್ಲಿ ಖಳನಾಯಕ ಕ್ರೂಯೆಲ್ಲಾ ಪಾತ್ರ ಮಾಡಿದ ಗ್ಲೆನ್ ಕ್ಲೋಸ್ ತನ್ನ ಚಿತ್ರ ಭವಿಷ್ಯದಲ್ಲಿ ಅದ್ಭುತ ಖಳನಾಯಕ ಎನ್ನುವ ಬಿರುದು ಪಡೆದುಕೊಂಡ. ಪುಸ್ತಕದಲ್ಲಿ ಆತನ ಪಾತ್ರವನ್ನು ಹೇಗೆ ವಿವರಿಸಲಾಗಿತ್ತೋ ಅದೇ ರೀತಿ ಆತ ನಟನೆ ಮಾಡಿ ಸೈ ಅನಿಸಿಕೊಂಡಿದ್ದ. ನಾಯಿ ಮರಿಗಳ ಅದ್ಭುತವಾದ ರಕ್ಷಣೆ ಮತ್ತು ನಾಯಿಗಳ ಭಾವನಾತ್ಮಕ ಅಂಶಗಳಿಂದ ಈ ಪುಸ್ತಕ ಮಕ್ಕಳಿಗೆ ಈಗಲೂ ಅಚ್ಚು ಮೆಚ್ಚು.
ಮಕ್ಕಳು ಮೇಲಿನ ಪುಸ್ತಕದ ಜೊತೆಗೆ ಈ ಕೆಳಗಿನ ಕೆಲವು ಪುಸ್ತಕಗಳನ್ನೂ ತಮ್ಮ ಓದಿನ ಪಟ್ಟಿಗೆ ಸೇರಿಸಿಕೊಳ್ಳಬಹುದು. ಬಹುತೇಕ ಪುಸ್ತಕಗಳು ಚಲನ ಚಿತ್ರ ಅಥವಾ ಧಾರಾವಾಹಿ ರೂಪದಲ್ಲಿ ಪ್ರದರ್ಶಿತವಾಗಿದೆ. ಚಿತ್ರದ ರೋಚಕತೆಗಾಗಿ ಪುಸ್ತಕದಲ್ಲಿನ ಕತೆಗಳನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿರುತ್ತಾರೆ. ಈ ವಿಷಯವನ್ನು ಗಮನದಲ್ಲಿರಿಸಿಕೊಂಡು ಚಲನ ಚಿತ್ರಗಳನ್ನು ನೋಡಿ. ಅದಕ್ಕೂ ಮೊದಲು ಪುಸ್ತಕಗಳನ್ನು ಓದಿ.
ದಿ ವಿಂಡ್ ಇನ್ ದಿ ವಿಲ್ಲೋಸ್ (The Wind In The Willows) ಇದು ಸ್ವಾರಸ್ಯದಾಯಕ ಹಾಗೂ ರೋಚಕ ಕಥಾ ವಸ್ತುವನ್ನು ಒಳಗೊಂಡಿದೆ. ೧೯೦೮ರಲ್ಲಿ ಕೆನೆತ್ ಗ್ರಹಾಂ ಎಂಬಾತ ಬರೆದ ಈ ಪುಸ್ತಕದಲ್ಲಿ ೧೨ ಅಧ್ಯಾಯಗಳಿವೆ. ಇದು ಮೋಲ್, ರಾಟಿ, ಮಿ.ಟೋಡ್ ಹಾಗೂ ಮಿ.ಬಡ್ಗೆರ್ ಎಂಬ ನಾಲ್ಕು ಪಾತ್ರಗಳ ಜೊತೆಗೆ ಹೆಣೆದ ಕಥೆ. ಮನೆಯ ಕೆಲಸದಿಂದ ಬೋರ್ ಆದ ಮೋಲ್ ವಾಕ್ ಗೆ ಎಂದು ಹೊರಟಾಗ ಅದಕ್ಕೆ ರಾಟಿ ಎನ್ನುವ ನೀರು ಇಲಿಯ ಪರಿಚಯವಾಗುತ್ತದೆ. ಅವರ ಸಾಹಸ ಯಾತ್ರೆಗಳ ಪಯಣದಲ್ಲಿ ಮಿ. ಟೋಡ್ ಹಾಗೂ ಮಿ. ಬಡ್ಗೇರ್ ಜೊತೆಯಾಗುತ್ತಾರೆ. ಈ ಪಾತ್ರಗಳು ಕೇವಲ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವಾಗುತ್ತವೆ.
ದಿ ಹೊಬ್ಬಿಟ್ (The Hobbit) ಎಂಬ ಪುಸ್ತಕ ಕುಳ್ಳ ವ್ಯಕ್ತಿ ಬಿಲ್ಬೋ ಬಗ್ಗಿನ್ಸ್ ನ ಸಾಹಸ ಕಥೆಯನ್ನು ಹೇಳುತ್ತದೆ. ಸಾಮಾನ್ಯ ಕುಳ್ಳ ಬಿಲ್ಬೋ ಅಸಾಮಾನ್ಯ ವ್ಯಕ್ತಿಯಾಗಿ ಬದಲಾಗುವ ಅದ್ಭುತ ಕಥೆ ಈ ಕಾದಂಬರಿಯಲ್ಲಿದೆ. ಇದರಲ್ಲಿ ಸಾಹಸ, ಬುದ್ಧಿವಂತಿಕೆ, ಜ್ಞಾನ, ನಾಯಕತ್ವ ಮೊದಲಾದ ಗುಣಗಳು ಮೇಳೈಸಿವೆ. ೧೯೩೭ರಲ್ಲಿ ಜೆ ಆರ್ ಆರ್ ಟೋಲ್ಕಿನ್ ಬರೆದ ‘ದಿ ಹೊಬ್ಬಿಟ್’ ಪುಸ್ತಕ ಚಲನಚಿತ್ರವಾಗಿಯೂ ಜನ ಮೆಚ್ಚುಗೆಯನ್ನು ಗಳಿಸಿದೆ.
ಚಾರ್ಲೊಟ್ಟೇಸ್ ವೆಬ್ (Charlotte’s Web) ಎಂಬ ಕಾದಂಬರಿಯು ವಿಲ್ಬರ್ ಹಂದಿ ಹಾಗೂ ಚಾರ್ಲೊಟ್ಟೆ ಎಂಬ ಜೇಡನ ನಡುವಿನ ಗೆಳೆತನದ ಕಥೆಯನ್ನು ಹೇಳುತ್ತದೆ. ಗ್ರಾಮಸ್ಥರು ಹಂದಿಯನ್ನು ಕೊಲ್ಲಲು ಬರುವ ಸಮಯದಲ್ಲಿ ಚಾರ್ಲೊಟ್ಟೆ ಜೇಡವು ತನ್ನ ಬಲೆಯಲ್ಲಿ ತನ್ನ ಗೆಳೆಯನ ಬಗ್ಗೆ ಮೆಚ್ಚುಗೆಯ ಪದವನ್ನು ಬರೆಯುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ವಿಲ್ಬರ್ ಅನ್ನು ಕೊಲ್ಲದೇ ಹೋಗುತ್ತಿದ್ದರು. ಈ ಕಾದಂಬರಿಯನ್ನು ೧೯೫೨ರಲ್ಲಿ ಇ ಬಿ ವೈಟ್ ಎಂಬಾತ ಬರೆದಿದ್ದಾನೆ.
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************