-->
ಬೇಸಿಗೆ ರಜೆಯ ಊಟಿ ಪ್ರವಾಸ : ಸಾನ್ವಿ ಚೆಂಬರ್ಪು, 8ನೇ ತರಗತಿ

ಬೇಸಿಗೆ ರಜೆಯ ಊಟಿ ಪ್ರವಾಸ : ಸಾನ್ವಿ ಚೆಂಬರ್ಪು, 8ನೇ ತರಗತಿ

ಪ್ರವಾಸದ ಕಥನ : ಬೇಸಿಗೆ ರಜೆಯ ಊಟಿ ಪ್ರವಾಸ
ಬರಹ : ಸಾನ್ವಿ ಚೆಂಬರ್ಪು 
8ನೇ ತರಗತಿ
ಶ್ರೀ ಗುರುದೇವ ಆಂಗ್ಲ ಮಾಧ್ಯಮ 
ಶಾಲೆ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

               
            
ಅಂದು 15-05-2025ರ ಮಧ್ಯಾಹ್ನ. ನನಗಂತೂ ಸಂಭ್ರಮವೋ ಸಂಭ್ರಮ. ನಾವು ಅಂದು ಮಧ್ಯಾಹ್ನ ಊಟದ ಬಳಿಕ ನಮ್ಮ ಮನೆಯಿಂದ ಮೈಸೂರಿಗೆ ಹೊರಟೆವು. ಅಲ್ಲಿ ರಾತ್ರಿ ನಮ್ಮ ಸಂಬಂಧಿಕರ ಮನೆಯಲ್ಲಿ ತಂಗಿದೆವು. ಮರುದಿನ ಬೆಳಗ್ಗೆ ಬೇಗನೇ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ, ಊಟಿಯ ಕಡೆ ಹೊರಟೆವು. ದಾರಿಯಲ್ಲಿ ಬಂಡಿಪುರ ಮತ್ತು ಮೂಡುಮಲೈ ಅರಣ್ಯಗಳನ್ನು ದಾಟಿ ಹೋಗಬೇಕಿತ್ತು. ಅಲ್ಲಿ ಜೀರುಂಡೆಗಳ ಇಂಪಾದ ಧ್ವನಿಯಿಂದ ಮನ ಪ್ರಸನ್ನಗೊಂಡಿತು. ಅರಣ್ಯದಲ್ಲಿ ಸಾಗುವಾಗ ಸಾಕಷ್ಟು ಜಿಂಕೆಗಳ ಹಿಂಡು ಹತ್ತಿರದಲ್ಲೇ ಕಾಣಸಿಗುತ್ತಿದ್ದವು. ನಯನ ಮನೋಹರವಾದ ಪರ್ವತ ಶ್ರೇಣಿಗಳನ್ನು ನೋಡುತ್ತಾ ಆನಂದಿಸುತ್ತಾ ಊಟಿ ತಲುಪಿದೆವು.

ಮೊದಲನೆಯದಾಗಿ ನಾವು ಊಟಿಯಲ್ಲಿ ಕರ್ನಾಟಕ ಸಿರಿ ಹಾರ್ಟಿಕಲ್ಚರ್ ಗಾರ್ಡನ್ ಗೆ ಹೋದೆವು. ಅಲ್ಲಿ ಸುಂದರವಾದ ತೆರಹೇವಾರಿ ಹೂವುಗಳು ನಮ್ಮನ್ನು ಸ್ವಾಗತಿಸುತ್ತಿದ್ದವು. ಆ ಉದ್ಯಾನವನ ತುಂಬಾ ದೊಡ್ಡದಿತ್ತು. ಅಲ್ಲಿ ಒಂದು ಉದ್ದ ಹಾಗೂ ಎತ್ತರವಾದ ತೂಗು ಸೇತುವೆ ಇತ್ತು. ಆ ತೂಗು ಸೇತುವೆಯಿಂದ ನೋಡಿದರೆ ಇಡೀ ಉದ್ಯಾನವನವೇ ರಮಣೀಯವಾಗಿ ಕಾಣಿಸುತ್ತಿತ್ತು. ಆಚೆ ಕಡೆ ಚಹಾ ತೋಟ, ಈಚೆ ಬೆಟ್ಟದ ತಪ್ಪಲು ನಡುವೆ ಈ ಉದ್ಯಾನವನ. ಈ ಉದ್ಯಾನವನದಲ್ಲಿ ಒಂದು ನೀರಿನ ಕಾರಂಜಿಯೂ ಇತ್ತು. ನಮ್ಮ ಮೈಸೂರಿನ ಅರಮನೆ, ಕೆ ಆರ್ ಎಸ್ ಅಣೆಕಟ್ಟು ಇವುಗಳ ಮಾದರಿಯನ್ನು ಅವರು ಹೂವಿನ ಗಿಡಗಳಿಂದ ಮಾಡಿದ್ದರು. ಕರ್ನಾಟಕ ಗಾರ್ಡನ್ ತುಂಬಾ ಚೆನ್ನಾಗಿತ್ತು.

ಅಲ್ಲಿಂದ ನಾವು ಊಟಿ ಲೇಕ್ ಕಡೆಗೆ ಹೊರಟೆವು. ಅಲ್ಲಿ ವಿವಿಧ ರೀತಿಯ ಬೋಟಿಂಗ್ ಆಯ್ಕೆಗಳು ಇದ್ದವು. ನಾವು ಅದರಲ್ಲಿ ಹುಟ್ಟು ಹಾಕುವ ದೋಣಿಯನ್ನು ಆಯ್ಕೆ ಮಾಡಿದೆವು. ಅದಾಗಲೇ ಆಕಾಶದಲ್ಲಿ ಕಪ್ಪು ಮೋಡಗಳು ನೆರೆದಿದ್ದವು. ನಾವು ಬೋಟಿಂಗ್ ಮುಗಿಸಿ ದಡ ಸೇರುವುದಕ್ಕೂ ಮಳೆ ಸುರಿಯುವುದಕ್ಕೂ ಸರಿಹೋಯಿತು. ಜೋರಾದ ಮಳೆಯೊಂದಿಗೆ ಬಿಸಿ ಬಿಸಿ ಕಡ್ಲೆ ಹಾಗೂ ಇತರ ತಿನಿಸುಗಳನ್ನು ಸವಿದೆವು. ನಾವು ಸುಮಾರು ಹೊತ್ತು ಅಲ್ಲೇ ಕಳೆದೆವು. ನಮಗೆ ಸಮಯದ ಅಭಾವ ಇದ್ದು, ಅಷ್ಟರಲ್ಲಿ ಜಾಸ್ತಿ ಜಾಗ ನೋಡಬೇಕಿತ್ತು. ಹಾಗಾಗಿ ಮಳೆ ಸ್ವಲ್ಪ ನಿಯಂತ್ರಣಕ್ಕೆ ಬಂದಾಗ ನಾವು ಓಡಿ ಕಾರಿಗೆ ಹತ್ತಿ ಬೊಟಾನಿಕಲ್ ಗಾರ್ಡನ್ ಕಡೆ ಪ್ರಯಾಣ ಬೆಳೆಸಿದವು. 

ಆಗ ಮಧ್ಯಾಹ್ನದ ಸಮಯ. ಆಗಲೇ ತಿಳಿಸಿದಂತೆ ನಮಗೆ ಸಮಯದ ಕೊರತೆ ಇತ್ತು. ಹಾಗಾಗಿ ನಾವು ಮಧ್ಯಾಹ್ನದ ಊಟದ ಬದಲು ಇತರ ತಿಂಡಿಗಳಿಂದಲೇ ಹೊಟ್ಟೆ ತುಂಬಿಸಿಕೊಂಡೆವು. ಬೊಟಾನಿಕಲ್ ಗಾರ್ಡನ್ ಗೆ ಹೋಗುವ ರಸ್ತೆಯಲ್ಲಿ ಜನಸಾಗರವೋ ಜನಸಾಗರ. ಅಂತೂ ಇಂತೂ ಟ್ರಾಫಿಕ್ ನಡುವೆ ಬೊಟಾನಿಕಲ್ ಗಾರ್ಡನ್ ತಲುಪಿದೆವು. ಗಾರ್ಡನ್ ಪ್ರವೇಶಿಸುತ್ತಲೇ ಹೂವಿನಿಂದ ಮಾಡಿದ ಹೆಬ್ಬಾಗಿಲು ನಮ್ಮನ್ನು ಸ್ವಾಗತಿಸುತ್ತಿತ್ತು. ನಾವು ಹೋದಂದು ಅಲ್ಲಿ ಫ್ಲವರ್ ಶೋ ಎಂಬ ಕಾರ್ಯಕ್ರಮವಿತ್ತು. ಊಟಿಯ ಬೊಟಾನಿಕಲ್ ಗಾರ್ಡನ್ ಫ್ಲವರ್ ಶೋ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ. ಇದು 127ನೇ ಫ್ಲವರ್ ಶೋ ಆಗಿದೆ. ಫ್ಲವರ್ಸ್ ಶೋ ಅಲ್ಲಿ ಹೂವಿನಿಂದ ಮಾಡಿದ ಹಲವಾರು ಆಕೃತಿಗಳಿದ್ದವು. ಉದಾಹರಣೆಗೆ ಹೂವಿನ ಉಯ್ಯಾಲೆ, ಹೂವಿನ ರಥ, ಕನ್ನಡಿ, ರಾಕೆಟ್ ಸೇರಿ ಹಲವಾರು ಆಕೃತಿಗಳಿದ್ದವು. ಹೂವಿನ ಆನೆ ಸೈನಿಕ ಎಲ್ಲವೂ ಒಂದಕ್ಕಿಂತ ಒಂದು ಸುಂದರವಾಗಿದ್ದವು. ಅಲ್ಲಿ ಬೇರೆ ಬೇರೆ ಲೆಕ್ಕವಿಲ್ಲದಷ್ಟು ಹೂವುಗಳ ಪ್ರದರ್ಶನವು ಇತ್ತು. ಬೊಟಾನಿಕಲ್ ಗಾರ್ಡನ್ ಸೌಂದರ್ಯವಂತೂ ವರ್ಣಿಸಲಸದಳ. 

ಅಲ್ಲಿಂದ ಹೊರಟು ನಾವು ರೋಸ್ ಗಾರ್ಡನ್ ಗೆ ತಲುಪಿದೆವು. ಇದಂತೂ ರಮಣೀಯವಾಗಿತ್ತು. ಎಲ್ಲಿ ಕಣ್ಣು ಹಾಯಿಸಿದರೂ ಗುಲಾಬಿಗಳೇ ಕಾಣಿಸುತ್ತಿದ್ದವು. 4 ಪ್ಲಾಟ್ ಫಾರ್ಮ್ ಗಳಿರುವ ಈ ಉದ್ಯಾನವನದಲ್ಲಿ ಇಲ್ಲದ ಗುಲಾಬಿಗಳೇ ಇಲ್ಲ. ಎಲ್ಲಾ ಬಣ್ಣದ ಎಲ್ಲಾ ವಿಧದ ಗುಲಾಬಿಗಳು ಇಲ್ಲಿದ್ದವು. ನನಗಂತೂ ಇದು ತುಂಬಾ ಇಷ್ಟವಾಯಿತು. ಅಲ್ಲಿಂದ ನಾವು ನಮ್ಮ ರೂಮಿಗೆ ಬಂದು ಸ್ನಾನಾದಿಗಳನ್ನು ಮುಗಿಸಿದೆವು. ಬಳಿಕ ಒಂದು ಹೋಟೆಲ್ ಗೆ ಹೋಗಿ ತಿಂಡಿ ತಿಂದು ರೂಮಿಗೆ ಬಂದು ಗಡಗಡ ನಡುಗುವ ಚಳಿಯಲ್ಲಿ ನಿದ್ದೆಗೆ ಜಾರಿದೆವು. 

ಮರುದಿನ ಬೆಳಗ್ಗೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಆ ಗಡಗಡ ಚಳಿಯಲ್ಲಿ ಮುಗಿಸಿದವು. ಬೆಳಗಿನ ಉಪಹಾರ ನಮ್ಮ ಕೋಣೆಗೆ ತಂದು ಕೊಡುವ ವ್ಯವಸ್ಥೆ ಇತ್ತು. ಅದನ್ನು ತಿಂದು ದೊಡ್ಡ ಬೆಟ್ಟ ಶಿಖರದ ಕಡೆಗೆ ಪ್ರಯಾಣ ಬೆಳೆಸಿದವು. ಅಲ್ಲಿ ತುತ್ತ ತುದಿಯವರೆಗೂ ವಾಹನ ಹೋಗುತ್ತಿತ್ತು. ಹಾಗಾಗಿ ಜಾಸ್ತಿ ನಡೆಯಲು ಇರಲಿಲ್ಲ. ದೊಡ್ಡ ಬೆಟ್ಟದ ನೋಟವಂತೂ ಮನಮೋಹಕವಾಗಿತ್ತು. ಅಲ್ಲಿ ಮೂರು ಭಾಗಗಳಿಂದ ನೋಡಿದರೆ ಕರ್ನಾಟಕ, ತಮಿಳುನಾಡು, ಕೇರಳ ಮೂರು ರಾಜ್ಯಗಳು ಕಾಣಿಸುತ್ತಿದ್ದವು. ಅಲ್ಲಿನ ಗೋಪುರಕ್ಕೆ ಹತ್ತಿ ನೋಡಿದರಂತೂ ನೋಟ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು. 

ಅಲ್ಲಿಂದ ಹೊರಟು ನಾವು ಟೀ ಮತ್ತು ಚಾಕಲೇಟ್ ಫ್ಯಾಕ್ಟರಿಗೆ ಬಂದೆವು. ಅಲ್ಲಿ ಟೀ ಮತ್ತು ಚಾಕಲೇಟ್ ತಯಾರಿಕೆಯನ್ನು ಬಹಳ ಚೆನ್ನಾಗಿ ವಿವರಿಸಿದರು. ನಮಗೆ ಅಲ್ಲಿ ಹೊಸ ವಿಷಯವನ್ನು ತಿಳಿಯಲು ಸಾಧ್ಯವಾಯಿತು. ಅಲ್ಲಿ ಕೆಲವು ವಸ್ತುಗಳನ್ನು ಖರೀದಿಸಿ ನಮ್ಮ ಪ್ರಯಾಣ ಮುಂದುವರಿಸಿ ಪೈನ್ ಫಾರೆಸ್ಟ್ ತಲುಪಿದೆವು. ಅಲ್ಲಿನ ಎಲ್ಲಾ ಪೈನ್ ಮರಗಳು ತುಂಬಾ ಎತ್ತರವಾಗಿದ್ದವು. ಹಿಂದಿನ ಹಲವಾರು ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿತ್ತು. ಇಳಿಜಾರಿನಲ್ಲಿ ಪೈನ್ ಮರಗಳು ಕೊನೆಯಲ್ಲಿ ಒಂದು ಸರೋವರ. ಇದಂತೂ ನಯನ ಮನೋಹರವಾಗಿತ್ತು. ಪೈನ್ ಫಾರೆಸ್ಟ್ ನಿಂದ ಹೊರಟು ನಾವು ಪೈಕಾರ ಜಲಪಾತಕ್ಕೆ ಬಂದೆವು. ಅಲ್ಲಿ ಸ್ವಲ್ಪ ನಡೆದು, ಬಳಿಕ ಜಲಪಾತದ ಬಳಿ ತಲುಪಿದೆವು. ಶುದ್ಧವಾದ ನೀರು, ಜಲಪಾತ, ಆಚೆ ಬೆಟ್ಟಗಳ ನೋಟಗಳನ್ನೊಳಗೊಂಡ ಈ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಅಲ್ಲಿಂದ ಬರುವ ದಾರಿಯಲ್ಲಿ ನೀಡಲ್ ರಾಕ್ ವೀವ್ ಪಾಯಿಂಟ್ ಎಂಬ ಸ್ಥಳ ಕಾಣಿಸಿತು. ಅಲ್ಲಿಗೆ ಹೋಗುವುದೆಂದು ನಾವು ಯೋಚನೆ ಮಾಡಿರಲಿಲ್ಲ. ಆದರೂ ಇಲ್ಲಿ ನೋಡಿ ಹೋಗೋಣ ಎಂದು ನಿರ್ಧರಿಸಿದೆವು. ಅಲ್ಲಿ ಸ್ವಲ್ಪ ಚಾರಣ ಮಾಡಬೇಕಿತ್ತು. ಬೆಟ್ಟದ ತಪ್ಪಲಿನಿಂದ ಪರ್ವತ ಶ್ರೇಣಿಗಳ ಸಾಲಿನ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದು. ಇದಂತೂ ತುಂಬಾ ಚೆನ್ನಾಗಿತ್ತು. ಬೇಸಿಗೆ ರಜೆಯ ಕಾರಣದಿಂದ ಊಟಿಯ ಎಲ್ಲಾ ಸ್ಥಳಗಳಲ್ಲಿಯೂ ಜನಜಂಗುಳಿ ಇತ್ತು. ಆದರೆ ಈ ಜಾಗ ಮಾತ್ರ ಹೆಚ್ಚು ಜನಜಂಗುಳಿ ಇಲ್ಲದೆ ಪ್ರಶಾಂತವಾಗಿತ್ತು. ನಮಗಂತೂ ಈ ಸ್ಥಳ ತುಂಬಾ ಇಷ್ಟವಾಯಿತು. ಚಾರಣಪ್ರಿಯರಿಗೆ ಇದು ತುಂಬಾ ಒಳ್ಳೆಯ ಜಾಗ. ಅಲ್ಲಿಂದ ಹೊರಟು ದಾರಿಯಲ್ಲಿ ಹೋಗುವಾಗ ಆ ಅರಣ್ಯದ ಸೌಂದರ್ಯವನ್ನು ನೋಡುವುದೇ ಚಂದ. ದಪ್ಪವಾದ ಅಲ್ಲಿನ ಮರಗಳು ಆಕಾಶದಷ್ಟು ಎತ್ತರ ಬೆಳೆದಿದ್ದವು. ಇಲ್ಲಿ ಎಲ್ಲಾ ಕಡೆಯೂ ನೀಲಗಿರಿ ರಾರಾಜಿಸುತ್ತವೆ. ನನಗೆ ಕಂಡಂತೆ ಕ್ಯಾರೆಟ್ ಹಾಗೂ ಚಹಾ ಇಲ್ಲಿನ ಪ್ರಮುಖ ಬೆಳೆಗಳು.

ನಾವು ಸುಮಾರು ಮೂರುವರೆ ಗಂಟೆ ಹೊತ್ತಿಗೆ, ಗುಡಲೂರು ಎಂಬಲ್ಲಿ ಊಟ ಮಾಡಿ ಮನೆಯ ಕಡೆ ಪ್ರಯಾಣ ಬೆಳೆಸಿದವು. ದಾರಿಯಲ್ಲಿ ಮತ್ತೊಮ್ಮೆ ಬಂಡಿಪುರ-ಮೂಡುಮಲೈ ಅರಣ್ಯ ಪ್ರದೇಶ ದಾಟಬೇಕಿತ್ತು. ಈ ಬಾರಿ ನಮಗೆ ಅಸಂಖ್ಯಾತ ಆನೆಗಳು ಮರಿಯಾನೆಯಿಂದ ಹಿಡಿದು ದೊಡ್ಡ ಆನೆಯವರೆಗೂ ತುಂಬಾ ಹತ್ತಿರದಲ್ಲೇ ಕಾಣಸಿಕ್ಕವು. ಸಾಕಷ್ಟು ಜಿಂಕೆಗಳೂ ಮಂಗಗಳೂ ಕಾಣಿಸಿದವು. ಅವುಗಳನ್ನು ಕಣ್ತುಂಬಿಕೊಂಡು ಮುಂದುವರಿದೆವು. ಬಳಿಕ 12:15ಕ್ಕೆ ರಾತ್ರಿ ಮನೆಗೆ ತಲುಪಿದೆವು.

ಈ ಊಟಿ ಪ್ರವಾಸವಂತೂ ನನಗೆ ತುಂಬಾ ಸಂತೋಷವನ್ನು ಕೊಟ್ಟಿತು. ಬೇರೆ ಬೇರೆ ಸ್ಥಳಗಳನ್ನು ನೋಡಲು ಸಾಧ್ಯವಾಯಿತು. ನನಗೆ ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಹೋಗಿ ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳಲು ತುಂಬಾ ಇಷ್ಟ. ಇದಂತೂ ನನಗೆ ಎಂದು ಮರೆಯಲಾಗದ ಪ್ರವಾಸವಾಗಿದೆ.
......................................... ಸಾನ್ವಿ ಚೆಂಬರ್ಪು 
8ನೇ ತರಗತಿ
ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article