-->
ಪಯಣ : ಸಂಚಿಕೆ - 50 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 50 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 50 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಉಂಚಳ್ಳಿ ಜಲಪಾತಕ್ಕೆ ಪಯಣ ಮಾಡೋಣ ಬನ್ನಿ....

                                 
ಮಂಜಿನ ಹನಿಯೇ ತೇಲಿ ಆಗಸಕ್ಕೆ ಚಿಮ್ಮಿದಂತೆ ಗೋಚರಿಸುವ ಉಂಚಳ್ಳಿ ಜಲಪಾತವಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೆಗ್ರಣೆ ಎಂಬಲ್ಲಿ. ಮಳೆಗಾಲ ಮತ್ತು ಬೇಸಿಗೆ ಎನ್ನದೆ ಇಲ್ಲಿ ನೀರು ಧುಮುಕುತ್ತಲೇ ಇರುತ್ತದೆ. ದಟ್ಟ ಅರಣ್ಯದ ನಡುವೆ ಕಲ್ಲು ಶಿಲೆಯನ್ನು ಹಾಲಿನ ಹೊಳೆಯೇ ಸೀಳಿಕೊಂಡಂತೆ. ವರ್ಷಪೂರ್ತಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅದರಲ್ಲೂ ಜೂನ್‌ನಿಂದ ಅಕ್ಟೋಬರ್‌ವರೆಗೆ ಪ್ರವಾಸಿಗರ ಜಾತ್ರೆಯೇ ಇರುತ್ತದೆ.

ಜಲಪಾತದ ಅರ್ಧ ದಾರಿಯವರೆಗೂ ವಾಹನಗಳು ಬರಬಹುದು. ನಂತರ ಚಾರಣ ಶುರು. ಸುಮಾರು 4 ಕಿ.ಮೀ.ಗಳಷ್ಟು ನಡೆಯಬೇಕು. ದಟ್ಟ ಕಾಡಿನ ನಡುವೆ ಕಿರಿದಾದ ದಾರಿ ಎಲ್ಲಿಗೆ ಕರೆದೊಯ್ಯುತ್ತದೆಯೋ ಎಂದು ಒಂದು ಸಾರಿ ಭಯವಾಗದೇ ಇರದು. ನಂತರ ಕಲ್ಲುಶಿಲೆಯ ಮೇಲೆ ನಡೆಯುವ ಅನುಭವ ರೋಚಕವಾದದ್ದು. ಹೀಗೆ ಚಾರಣದ ಹಾದಿಯಲ್ಲಿ ನಡೆಯುವಾಗ ಎಲ್ಲೋ ಪಕ್ಷಿಗಳ ಕಲರವ, ಕಾಡುಪ್ರಾಣಿಗಳ ಕೂಗು ಗಮನ ಸೆಳೆಯುತ್ತದೆ. ಹಾಗೆಯೇ ನೀರಿನ ಭೋರ್ಗರೆಯುವ ನಾದವೂ ಕೇಳುತ್ತದೆ. ಆಗ ನೀವು ಜಲಪಾತದ ಸನಿಹದಲ್ಲಿದ್ದೀರಿ ಎಂದರ್ಥ.

250 ಮೀ. ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ರುದ್ರ ರಮಣೀಯ. ಶರಾವತಿ ನದಿಯ ವರಪ್ರಸಾದವಾದ ಈ ಜಲಪಾತ ಹರಿಯುವುದು ಸುಮಾರು 3 ಕಿ.ಮೀ. ದೂರದವರೆಗೂ ಗೋಚರಿಸುತ್ತದೆ. ಶಿರಸಿಯಿಂದ ಬರೋಬ್ಬರಿ 36 ಕಿ.ಮೀ. ದೂರದಲ್ಲಿದೆ ಉಂಚಳ್ಳಿ. ದಾರಿಯ ನಡುವೆ ಕುನಗುಂದ ಎಂಬ ಊರು ಸಿಗುತ್ತದೆ. ಮಳೆಗಾಲದಲ್ಲಿ ಜನರ ಓಡಾಟವೂ ಕಡಿಮೆ ಇರುತ್ತದೆ. ಜಲಪಾತದ ಅಂಚಿನಲ್ಲಿ ಸುತ್ತಲಿನ 13 ಕಿ.ಮೀ.ವರೆಗೆ ಯಾವ ಊರಾಗಲೀ ಅಥವಾ ಮನೆಗಳಾಗಲೀ ಇಲ್ಲ. ದಟ್ಟ ಕಾಡಿನ ನಡುವೆ ಈ ಜಲಪಾತ ಇರುವುದರಿಂದ ಸಾರಿಗೆ ಸಂಪರ್ಕ ಕೂಡ ಕಡಿಮೆ. ಹೆಗ್ಗರಣೆವರೆಗೆ ಮಾತ್ರ ವಾಹನಗಳ ಸಂಚಾರ ಲಭ್ಯವಿದೆ. ಆದುದರಿಂದ ಉಂಚಳ್ಳಿ ಜಲಪಾತಕ್ಕೆ ಬರುವ ಪ್ರವಾಸಿಗರು ತಮ್ಮದೇ ಆದ ವಾಹನದ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಿಕೊಳ್ಳಬೇಕು. 
ಮಳೆಗಾಲದಲ್ಲಿ ಇಲ್ಲಿಗೆ ಬರುವವರನ್ನು ವಿಶೇಷವಾಗಿ ಮಲೆನಾಡಿನ ಇಂಬಳಗಳು ಸ್ವಾಗತಿಸುತ್ತವೆ. ವಾಹನಗಳು ಕೆಟ್ಟರೆ ನಿಮ್ಮನ್ನು ಕಾಪಾಡಲು ಯಾರೂ ಸಹ ಇರುವುದಿಲ್ಲ. ಆದರೆ ಒಮ್ಮೆ ಮಳೆಗಾಲದಲ್ಲಿ ಇಂದಿಗೆ ಬಂದವರು ಪುನಃ ಪುನಃ ಮಳೆಗಾಲದಲ್ಲೇ ಬರುತ್ತಾರೆ. ಏಕೆಂದರೆ ಜಲಪಾತದ ನಿಜವಾದ ಸೌಂದರ್ಯ ನಿಮಗೆ ತಿಳಿಯುವುದು ಮಳೆಗಾಲದಲ್ಲಿ. 
 
ಮಾರ್ಗ : ಶಿರಸಿಯಿಂದ ಹೆಗ್ಗರಣೆಗೆ ಸರಕಾರಿ ಬಸ್‌ಗಳಿವೆ ಮತ್ತು ಖಾಸಗಿ ವಾಹನಗಳಿವೆ. ಅಲ್ಲದೆ ಸಿದ್ಧಾಪುರದಿಂದಲೂ ಸಹ ವಾಹನಗಳು ನಿಮಗೆ ಸಿಗುತ್ತವೆ. ಬೆಂಗಳೂರಿನಿಂದ ಸಾಗರದ ಮಾರ್ಗವಾಗಿ ಹಾಗೂ ಕುಮಟಾದಿಂದ ದೇವಿಮನೆ ಘಾಟ್ ಮಾರ್ಗವಾಗಿ ಉಂಚಳ್ಳಿ ಜಲಪಾತಕ್ಕೆ ಬರಬಹುದು.

"ಹನಿಗಳ ಸಮೂಹ ಜಲಧಾರೆಯಾಗಿ ಧುಮುಕುವ ಸೊಗಸಾದ ದೃಶ್ಯ, ಹಾಲಿನಂತಹ ಬಣ್ಣವಾಗಿ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಎಲ್ಲರನ್ನು ಸೆಳೆಯುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಉಂಚಳ್ಳಿ ಜಲಪಾತ ಮಳೆಗಾಲದಲ್ಲಿ ನೋಡುವುದೇ ಚಂದ" ಬನ್ನಿ ಒಮ್ಮೆ ಪ್ರವಾಸಕ್ಕೆ....

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************


Ads on article

Advertise in articles 1

advertising articles 2

Advertise under the article