ನಿಷ್ಪಾಪಿ ಸಸ್ಯಗಳು : ಸಂಚಿಕೆ - 109
Wednesday, July 2, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 109
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ...? ನಮ್ಮೂರಿನಿಂದ ಅತ್ತಿತ್ತ ಸನಿಹದ ಊರುಗಳಿಗೆ ನೀವು ರಜಾ ಕಾಲದಲ್ಲಿ ಪ್ರಯಾಣಿಸಿರಬೇಕಲ್ಲವೇ? ಕೆಲವೆಡೆ ಮಾರ್ಗದ ಇಕ್ಕೆಲಗಳಲ್ಲಿ ಆಕ್ರಮಣ ಮಾಡುವ ಸೈನಿಕನಂತೆ ಧಾವಿಸಿ ಬಂದಿರುವ ಬಳ್ಳಿಯೊಂದನ್ನು ಗಮನಿಸಿದ್ದೀರಾ?
ಸಾಮಾನ್ಯವಾಗಿ ಈ ಬಳ್ಳಿ ರಬ್ಬರ್ ತೋಟಗಳ ಒಳಗಿನಿಂದ ವೇಗವಾಗಿ ಸುತ್ತಲೂ ಹಬ್ಬತೊಡಗಿರುತ್ತವೆ. ಅಲಸಂಡೆ ಬಳ್ಳಿ ಯನ್ನು ಹೋಲುವ ಮೂರೆಲೆಗಳು ಜೋಡಣೆಗೊಂಡ ಪರ್ಯಾಯ ಎಲೆಗಳು, ತಿರುಚಿದ ಕಾಂಡಗಳಿದ್ದು ಪೊದೆ ಸಸ್ಯವಾಗಿಯೂ, ಬಳ್ಳಿ ಯಾಗಿಯೂ ದಿನವೊಂದಕ್ಕೆ 15 _ 20 ಸೆ.ಮೀ ಬೆಳೆಯುತ್ತ ನೆಟ್ಟ 8 _ 9 ತಿಂಗಳಲ್ಲಿ ಸಂಪೂರ್ಣ ನೆಲವನ್ನು ವ್ಯಾಪಿಸಿ ಬಿಡುವ ಈ ಸಸ್ಯ ಭೂಮಿಯನ್ನೇ ಹಸಿರಾಗಿರಿಸುತ್ತದೆ.
ಫ್ಯಾಬೇಸಿ ಕುಟುಂಬದ ಸದಸ್ಯ ಸಸ್ಯವಾದ ಈ ಮುಕುನಾ ಬ್ರಾಕ್ಟಿಯೇಟಾ (Mucuna bracteata) ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ಈ ಬಳ್ಳಿಯು ದ್ವಿದಳ ಧಾನ್ಯದ ಸಸ್ಯವಾಗಿದೆ. ಬಾಂಗ್ಲಾ, ಚೀನಾ, ಲಾವೋಸ್, ಮ್ಯಾನ್ಮಾರ್, ಅಂಡಮಾನ್, ಥೈಲ್ಯಾಂಡ್ ಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಮುಕುನಾ ಭಾರತದಲ್ಲಿ ರಬ್ಬರ್ ಬೆಳೆಗೆ ಪ್ರಯೋಜನಕಾರಿಯೆಂದು ಕಾಲಿರಿಸಿತು. ರಬ್ಬರ್, ಎಣ್ಣೆ ತಾಳೆ, ತೆಂಗಿನ ತೋಟಗಳಲ್ಲಿ ರೈತರು ಪ್ರೀತಿಯಿಂದ ಈ ಸಸ್ಯವನ್ನು ಬೆಳೆಸತೊಡಗಿದರು.
ಬೆಳೆಗಳಿಗೆ ಕ್ರಿಮಿ ಕೀಟಗಳಿಂದ ರಕ್ಷಣೆ ಬೇಕಿತ್ತು, ಮಣ್ಣಿನಲ್ಲಿ ಆರ್ದ್ರತೆ ಉಳಿಯಬೇಕಿತ್ತು. ಇವೆಲ್ಲವನ್ನೂ ಪೂರೈಸಿದ ಮುಕುನಾ 9 ಅಡಿ ಆಳದವರೆಗೆ ಬೇರನ್ನಿಳಿಸಿ ಸತ್ವ ಹೀರಿ ತನ್ನ ಎಲೆಗಳಿಗೆ ತಲುಪಿಸಿ ಮತ್ತೆ ಎಲೆಯುದುರಿಸಿ ಮಾತ್ರವಲ್ಲ ಜೀವಿತ ಕಾಲ ಕಳೆದು ಮಣ್ಣಿನ ಫಲವತ್ತತೆಯನ್ನು 30 ಸೆ.ಮೀ.ನಷ್ಟು ಆಳದವರೆಗೆ ಹೆಚ್ಚಿಸುವ ಮೂಲಕ ಕೃಷಿಬೆಳೆಗೆ ಆಧಾರವಾಗತೊಡಗಿತ್ತು. ಮಣ್ಣಿಗೆ ಹೊದಿಕೆಯಾಗಿ ಸವೆತವನ್ನು ತಡೆಗಟ್ಟಿ, ಖಡ್ಗಮೃಗದಂತಹ ಜೀರುಂಡೆಗಳಿಂದ ಎಣ್ಣೆತಾಳೆಯ ರಕ್ಷಣೆ ಮಾಡುತ್ತದೆ. ಮಣ್ಣಿನ ಸಾರ ಸತ್ವ ನಾಶ ಪಡಿಸಬಲ್ಲ ಕಳೆ ಸಸ್ಯಗಳ ನಿವಾರಣೆ ಮಾಡುತ್ತಾ, ತನ್ನ ನೆರಳಿನಲ್ಲಿ ಇತರ ಹೊದಿಕೆ ಸಸ್ಯಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಾಗಳು, ಶಿಲೀಂಧ್ರಗಳು ಬೆಳೆಯಲು ಸಹಕರಿಸುತ್ತವೆ ಎಂದು ಕಂಡುಕೊಳ್ಳಲಾಯಿತು.
ತೋಟಗಾರಿಕೆ ಉದ್ಯಮದಲ್ಲಿ ಚಿರಪರಿಚಿತ, ಉಪಯುಕ್ತ ಹೊದಿಕೆ ಬೆಳೆಯಾಗಿ ಆಕರ್ಷಣೆ ಪಡೆದು ಕೇರಳದಾದ್ಯಂತ ರಬ್ಬರ್ ಕೃಷಿ ಜೊತೆ ಆವರಿಸಿದ ಮುಕುನಾ ಮಲೇಷಿಯಾದಲ್ಲಿ ಎಣ್ಣೆ ತಾಳೆ ಬೆಳೆಯ ಜೊತೆ ಆವರಿಸಿಕೊಂಡಿದೆ.
ಬೆಟ್ಟ ಗುಡ್ಡಗಳ ನಿತ್ಯಹರಿದ್ವರ್ಣದ ಕಾಡು, ಹುಲ್ಲುಗಾವಲು, ರಸ್ತೆ, ನದಿಗಳ ಪಕ್ಕ ತನ್ನ ಆವಾಸ ವಿಸ್ತರಿಸಿಕೊಂಡ ಈ ನಿಷ್ಪಾಪಿ ಸಸ್ಯ ಇದೀಗ ಆಕ್ರಮಣಕಾರಿ ಸಸ್ಯವಾಗಿ ಪರಿಣಮಿಸಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಬರ ನಿರೋಧತೆ, ನೆರಳು ಸಹಿಷ್ಣುತೆ ಇರುವ ಮುಕುನಾ ಬ್ರಾಕ್ಟಿಯೇಟಾ ಪಶ್ಚಿಮ ಘಟ್ಟದ ಹುಲಿಗಳ ರಕ್ಷಿತಾರಣ್ಯಕ್ಕೂ ಭೇಟಿ ನೀಡಿದೆ! ಸರೀಸೃಪಗಳ ಹರಿದಾಡುವಿಕೆಗೆ, ಇಲಿ ಹೆಗ್ಗಣ, ಮೊಲಗಳಂತಹ ಪುಟ್ಟ ಪ್ರಾಣಿಗಳ ಬದುಕಿಗೆ ತೊಂದರೆ ನೀಡುವುದೇ ಅಲ್ಲದೆ ಜೀವ ವೈವಿಧ್ಯಕ್ಕೇ ಸವಾಲೆಸೆಯುತ್ತಾ, ಎತ್ತರವಾದ ಮರಗಳನ್ನೇ ಬಗ್ಗಿಸಿ ಕುಗ್ಗಿಸುವ ಈ ಸಸ್ಯವನ್ನು ರಬ್ಬರ್ ತೋಟ ಹಾಗೂ ಅರಣ್ಯ ಪ್ರದೇಶದಿಂದ ತೆಗೆದು ಹಾಕಲು ತಮಿಳುನಾಡು ದೊಡ್ಡ ಯೋಜನೆಯನ್ನೇ ಕೈಗೆತ್ತಿಕೊಂಡಿದೆ. ಅದರ ಜೊತೆ ಜೊತೆಗೇ ಈ ಮಣ್ಣಿನ ಹೊದಿಕೆ ಸಸ್ಯದ ಬಗ್ಗೆ ವಿಶ್ವದ ಬೇರೆ ಬೇರೆ ಕಡೆಗಳಿಂದ ನೂರಿನ್ನೂರು ಕೃಷಿ ತಜ್ಞರು ಸೇರಿ ಪ್ರಬಂಧ ಮಂಡನೆಗಳನ್ನು ಮಾಡುತ್ತಾ ಅಧ್ಯಯನ ವನ್ನೂ ನಡೆಸುತ್ತಿದ್ದಾರೆ!
ಮಣ್ಣಿನಲ್ಲಿ ಸಾರಜನಕದ ಸ್ಥಿರೀಕರಣ, ನೈಸರ್ಗಿಕ ಮಣ್ಣಿನ ಫಲೀಕರಣ, ಗಾಳಿಯಾಡುವಿಕೆಯ ಪ್ರಕ್ರಿಯೆಯ ಮೂಲಕ ಮಣ್ಣಿನ ಫಲವತ್ತತೆ ಹಾಗೂ ಆರೋಗ್ಯ ಹೆಚ್ಚಿಸುವ ಮೂಲಕ ಮಣ್ಣಿಗೆ ಸುಸ್ಥಿರ ನೀರಿನ ಧಾರಣ ಮಟ್ಟ ಒದಗಿಸುವ ಮುಕುನಾ ಒಂದು ವಿಶೇಷ ಸಸ್ಯವೇ ಸರಿ.
ಚೆನ್ನಾಗಿ ನೀರು ಬಸಿದು ಹೋಗುವಂತಹ ಮಣ್ಣಿನಲ್ಲಿ, ಪೂರ್ಣ ಸೂರ್ಯನ ಸಖ್ಯದಲ್ಲಿ ತಿಳಿಹಸಿರಿನ ಹಾರಗಳಾಗಿ ಕಂಗೊಳಿಸುವ ಮುಕುನಾದ ಬೀಜಗಳಿಗೆ ಕೀಟ ಬಾಧೆಯಿದೆಯಂತೆ! 90_190 ಮಿಲಿಗ್ರಾಮ್ ತೂಗುವ ಕಪ್ಪು ದ್ವಿದಳ ಬೀಜವನ್ನು ನೀರಲ್ಲಿ ನೆನೆಸಿದರೆ ಮೊಳಕೆ ಬರುವ ಸಂಖ್ಯೆ ಕಡಿಮೆಯಂತೆ! ಕಪ್ಪುನೇರಳೆ ಬಣ್ಣದ ಹೂಗಳು ತೆನೆಯಂತಹ ರಚನೆಯಲ್ಲಿ ಗುಂಪಾಗಿ ಬೆಳೆಯುತ್ತದೆ. ಮುಕುನಾ ಬಟಾಣಿ ಹಾಗೂ ಬೀನ್ಸ್ ನ್ನು ಹೋಲುವ ಸಸ್ಯಗಳ ಕುಟುಂಬಕ್ಕೆ ಸೇರಿರುವುದರಿಂದ ಸಸ್ಯ ರಚನೆಯಲ್ಲಿ ಸಾಮ್ಯತೆ ಕಾಣಬಹುದು. ಇದೇ ಮಾಲಿಕೆಯಲ್ಲಿ ಬಂದಿರುವ ನಸುಗುನ್ನಿಯೂ ಇದರ ಹತ್ತಿರದ ಸಂಬಂಧಿಯಾಗಿದೆ.
ಮಕ್ಕಳೇ, ನಿಸರ್ಗದಲ್ಲಿ ಯಾವುದೇ ಮರ ಗಿಡ ಬಳ್ಳಿಗಳ ಬಗ್ಗೆ ಅಥವಾ ಕ್ರಿಮಿ ಕೀಟ, ಪ್ರಾಣಿ ಪಕ್ಷಿಗಳ ಬಗ್ಗೆ ಒಂದೇ ದಿಕ್ಕಿನಿಂದ ನೋಡಿ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎನ್ನುವುದಕ್ಕೆ ಈ ಮುಕುನಾ ಬ್ರಾಕ್ಟಿಯೇಟಾ ಒಂದು ಅತ್ಯುತ್ತಮ ಉದಾಹರಣೆಯಲ್ಲವೇ? ಈ ಸಸ್ಯವನ್ನು ಕಂಡರೆ ಗುರುತಿಸಿರಿ ಹಾಗೂ ಸನಿಹ ಹೋಗಿ ಕಣ್ತುಂಬಿಕೊಂಡು ಗಮನಿಸಿರಿ.
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************