ಜೀವನ ಸಂಭ್ರಮ : ಸಂಚಿಕೆ - 200
Sunday, July 27, 2025
Edit
ಜೀವನ ಸಂಭ್ರಮ : ಸಂಚಿಕೆ - 200
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಮೋಹದ ಬಗ್ಗೆ ತಿಳಿದುಕೊಳ್ಳೋಣ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಯವರು ಈಶೋಪನಿಷತ್ತು ಪ್ರವಚನದಲ್ಲಿ ಹೇಳಿದ ಕಥೆ.
ಸತ್ಯ, ಸುವರ್ಣ ಪಾತ್ರೆಯ ಮುಚ್ಚಳದಿಂದ ಮುಚ್ಚಿದೆ. ನಮ್ಮ ಕಣ್ಣನ್ನು ಆಕರ್ಷಣೆ ಮಾಡುವುದು, ಹೊಳೆಯುವ ಸುವರ್ಣ ಪಾತ್ರೆ ಮತ್ತು ಆಕರ್ಷಕ ಮುಚ್ಚಳವೆ ವಿನಹ ಸತ್ಯ ಕಾಣುವುದಿಲ್ಲ. ಸುವರ್ಣ ಪಾತ್ರೆಯ ಮುಚ್ಚಳ ಸರಿಸಿದರೆ ಸತ್ಯ ಗೋಚರಿಸುತ್ತದೆ. ಹಾಗೆಯೇ ನಮ್ಮ ಮನಸ್ಸು ಮೋಹದಿಂದ ಮುಚ್ಚಿ ಹೋಗಿದೆ. ಮೋಹ ತೆಗೆದರೆ ಸತ್ಯ ಗೋಚರಿಸುತ್ತದೆ. ಕಣ್ಣು ಮಂಜಾದರೆ ವಸ್ತು ಸರಿಯಾಗಿ ನೋಡಲು ಆಗುವುದಿಲ್ಲ. ಬುದ್ಧಿ ಮಂಕಾಗಿದ್ದರೆ ವಿಷಯ ಜ್ಞಾನ ಸರಿಯಾಗಿ ಆಗುವುದಿಲ್ಲ. ಹಾಗೆ ಮನಸ್ಸು ಮಂಜಿನಿಂದ ಆವರಿಸಿದರೆ ಸರಿಯಾದ ಅನುಭವ ಆಗುವುದಿಲ್ಲ. ಮನಸ್ಸನ್ನು ಆವರಿಸಿರುವ ಮಂಜೆ ಮೋಹ.
ವ್ಯಾಮೋಹದಿಂದ ಕೂಡಿದ ವ್ಯಕ್ತಿಗೆ ಸತ್ಯ ಕಾಣುವುದಿಲ್ಲ. ಸತ್ಯ ಇರುತ್ತದೆ ಗೊತ್ತಾಗುವುದಿಲ್ಲ. ಮನುಷ್ಯನಿಗೆ ಒಂದಲ್ಲ ಒಂದು ಮೋಹ ಇದ್ದೇ ಇರುತ್ತದೆ. ಕೆಲವರಿಗೆ ರೂಪದ ಮೋಹ, ಕೆಲವರಿಗೆ ಶಬ್ದದ ಮೋಹ, ಕೆಲವರಿಗೆ ಮುಟ್ಟೋಮೋಹ, ಕೆಲವರಿಗೆ ತಿನ್ನುವ ಮೋಹ, ಕೆಲವರಿಗೆ ಭಾಷೆಯ ಮೋಹ, ಕೆಲವರಿಗೆ ದೇಶದ ಮೋಹ, ಕೆಲವರಿಗೆ ಜಾತಿ ಮೋಹ, ಹೀಗೆ ಮೋಹದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಜಗತ್ತು ಮೋಹಮಯ. ಇದು ಎಲ್ಲಾ ಕಡೆ ಕಂಡು ಬರುತ್ತದೆ. ಕೇವಲ ಭಾರತದಲ್ಲಿ ಮಾತ್ರ ಅಲ್ಲ. ಕೆಲವು ಸಂಗತಿ ಭಾರತದಲ್ಲಿ ಇದೆ, ಅಮೆರಿಕದಲ್ಲಿ ಇಲ್ಲ. ಭಾರತದಲ್ಲಿ ಹಣಕಾಸು ಕಡಿಮೆ, ಅಮೆರಿಕದಲ್ಲಿ ಸ್ವಲ್ಪ ಹೆಚ್ಚು. ಭಾರತದಲ್ಲಿ ಪ್ರಾಮಾಣಿಕತೆ ಸ್ವಲ್ಪ ಕಡಿಮೆ, ಜಪಾನ್ ನಲ್ಲಿ ಸ್ವಲ್ಪ ಹೆಚ್ಚು. ಆತ್ಮೀಯತೆ ಭಾರತದಲ್ಲಿ ಹೆಚ್ಚು, ಉಳಿದ ದೇಶಗಳಲ್ಲಿ ಸ್ವಲ್ಪ ಕಡಿಮೆ. ಆದರೆ ಮೋಹ ಇಲ್ಲದ ದೇಶ ಇಲ್ಲವೇ ಇಲ್ಲ. ನಿರ್ಮೋಹಿ ದೇಶ ಇಲ್ಲ. ಆದರೆ ಅಲ್ಲೊಬ್ಬರು ಇಲ್ಲೊಬ್ಬರು ನಿರ್ಮೋಹಿಗಳು ಇದ್ದಾರೆ. ಈ ಮೋಹ ನಮ್ಮನ್ನು ಒಂದೊಂದಕ್ಕೆ ಗಂಟು ಹಾಕಿರುತ್ತದೆ. ಅಂದರೆ ನಮ್ಮ ಮನಸ್ಸನ್ನು ಅದಕ್ಕೆ ಬಂದಿಸಿ ಬಿಟ್ಟಿರುತ್ತದೆ. ನಮ್ಮ ಮನಸ್ಸು ಯಾವುದಕ್ಕೆ ಬಂದಿಸಿದೆ ಅನ್ನುವುದನ್ನು ನಾವೇ ನಮ್ಮ ಮನಸ್ಸನ್ನು ಪರಿಶೀಲಿಸಿ ವೀಕ್ಷಿಸಿ ನೋಡಬೇಕಾಗುತ್ತದೆ. ರೂಪದ ಮೋಹ ಇದ್ದವರು ಅದರಲ್ಲೇ ಮಗ್ನರಾಗಿರುತ್ತಾರೆ. ಎಲ್ಲರೂ ನಮ್ಮನ್ನು ನೋಡಬೇಕೆಂದು ಬಯಸುತ್ತಾರೆ. ಅದೇ ರೀತಿ ಶಬ್ದದ ಮೋಹ ಇದ್ದವರು ಎಲ್ಲರೂ ನನ್ನನ್ನು ಹೊಗಳಬೇಕೆಂದು ಬಯಸುತ್ತಾರೆ. ಇದರಿಂದ ಬುದ್ಧಿ, ಮನಸ್ಸು ಕುರೂಪವಾಗುತ್ತದೆ. ಈ ಮೋಹ ಹೋಲಿಕೆಯಿಂದ ಬರುತ್ತದೆ. ಯಾವುದು ನಮ್ಮ ಮನಸ್ಸನ್ನು ಹಿಡಿಯುತ್ತದೆ, ಅದು ನಮ್ಮ ಮನಸ್ಸನ್ನು ಬಂಧಿಸುತ್ತದೆ. ಕುಣಿತರು, ನಿಂತರು, ಹೊರಗೆ ಹೋದರು, ಒಳಗೆ ಇದ್ದರೂ, ಅದರ ಬಾನ ಇರುತ್ತದೆ. ಏಕೆಂದರೆ ಅದು ಹೋದೀತು ಅನ್ನುವ ಭಯ. ಅಂದರೆ ಅದು ಹೋಗೋದೆ. ಅದು ಹೋಗಬಾರದು ಹಾಗೆ ಇರಬೇಕು ಅಂತ ಮನಸ್ಸು ಬಯಸುತ್ತದೆ. ಅದನ್ನು ಬಿಟ್ಟು ಬೇರೆ ಕಾಣದಂತೆ ಮಾಡುತ್ತದೆ. ಆದರೆ ಗೊತ್ತಿರಲಿ ಅದು ಕಾಯಂ ಇರುವುದಿಲ್ಲ ಅಂತ ತಿಳಿದಿರಬೇಕು. ಉದಾಹರಣೆಗೆ ನನಗೆ ಹಣದ ಮೇಲೆ ಮೋಹ ಇತ್ತು ಅಂತ ಭಾವಿಸಿ. ನಾನು ಹಣವನ್ನು ಕೂಡಿಸುತ್ತಾ ಕೂಡಿಸುತ್ತಾ ಹೋಗುತ್ತೇನೆ. ಉಳಿದ ಬಾನ ನನಗೆ ಇರುವುದಿಲ್ಲ. ಯಾರ ಬಗ್ಗೆ ನಾನು ವಿವೇಚಿಸುವುದಿಲ್ಲ. ಹೀಗೆ ಕಣ್ಣಿನ ಮೋಹ, ಕೈಮೋಹ, ಕಾಲಿನ ಮೋಹ ಹೀಗೆ ಬೆಳೆಯುತ್ತಾ ಹೋಗುತ್ತದೆ. ಮೋಹ ಇರುವವರು ಸತ್ಯದ ಸಮೀಪಕ್ಕೆ ಹೋಗುವುದಿಲ್ಲ. ಸತ್ಯದ ಅನುಭವ ನಮಗೆ ಆಗುವುದಿಲ್ಲ. ಮೋಹ ತೆಗೆದು ನೋಡಿದರೆ ಮೋಹ ಆಗುವುದಿಲ್ಲ.
ಒಂದು ಊರು. ಅಲ್ಲಿ ಒಂದು ಅರಮನೆ. ಆ ಅರಮನೆಯಲ್ಲಿ ರಾಜ ಇದ್ದನು. ಆತನಿಗೆ ಒಬ್ಬ ಮಗ, ವಯಸ್ಸು 20 ವರ್ಷ. ಸುಂದರ ಮೈ ಕಟ್ಟು, ದಷ್ಟಪುಷ್ಟ ದೇಹ, ಬುದ್ಧಿವಂತ ಮತ್ತು ಶಕ್ತಿವಂತ ಆಗಿದ್ದನು. ಒಮ್ಮೆ ಅರಣ್ಯಕ್ಕೆ ಬೇಟೆಗೆ ಹೋಗಿದ್ದನು. ಆ ಅರಣ್ಯದಲ್ಲಿ ಒಬ್ಬ ಬಡಸಂತ, ಸಂತನ ಹೆಂಡತಿ ಮತ್ತು ಒಬ್ಬಳು ಮಗಳು ವಾಸವಾಗಿದ್ದರು. ಒಂದು ಸುಂದರ ತೋಟ ಮಾಡಿಕೊಂಡು ಆನಂದವಾಗಿ ವಾಸವಾಗಿದ್ದರು. ಆ ಸಂತನ ಮಗಳು ಅದ್ಭುತ ಸೌಂದರ್ಯವತಿ, ಧ್ವನಿ ಅಷ್ಟು ಮಧುರ, ವಿವಾಹವಾಗುವ ವಯಸ್ಸು, ಆದರೆ ಲಗ್ನ ಆಗಿರಲಿಲ್ಲ. ಆಕೆಯನ್ನು ಹೂವಿನಂತೆ ಬೆಳೆಸಿದ್ದರು. ಕೋಗಿಲೆಯಂತೆ ಬೆಳೆಸಿದ್ದರು. ರಾಜಕುಮಾರನಿಗೆ ಬೇಟೆಯಾಡಿ ದಣಿವಾಗಿತ್ತು. ರಾಜ ಪುತ್ರ ಈ ಸಂತನ ಕುಟೀರದ ಬಳಿ ದಾಹ ಇಂಗಿಸಿಕೊಳ್ಳಲು ಬಂದನು. ಸಂತನ ಮಗಳು ಗುಡಿಸಲ ಹೊರಗೆ ಕುಳಿತುಕೊಂಡಿದ್ದಳು. ಅಲ್ಲಿಗೆ ಬಂದ ರಾಜ ಪುತ್ರ ನೀರನ್ನು ಆ ತರುಣಿಯ ಬಳಿ ಕೇಳಿದನು. ಆ ಸಮಯದಲ್ಲಿ ರಾಜಪುತ್ರ ತರುಣಿಯ ಮುಖ ನೋಡಿದನು. ಕಣ್ಣು ಮಂಜಾಯಿತು. ಆಕೆ, ರೂಪವಾಗಿ ಮನಸ್ಸನ್ನು ತುಂಬಿತ್ತು. ರಾಜ ಪುತ್ರನಿಗೆ ಅಸಾಧ್ಯ ಯಾವುದು. ಆಕೆ ನೀರು ತಂದುಕೊಟ್ಟಳು. ನೀರು ಕುಡಿದ ರಾಜಪುತ್ರ, ಸನ್ನಿಹದಲ್ಲೇ ಇದ್ದ ತರುಣಿಯ ತಂದೆ ಬಳಿ ಹೋಗಿ ಹೇಳಿದ, "ನಾನು ನಿಮ್ಮ ಮಗಳನ್ನು ವಿವಾಹವಾಗುತ್ತೇನೆ" ಎಂದನು. ರಾಜ ಪುತ್ರನೇ ಲಗ್ನ ಆಗುತ್ತೇನೆ ಅಂದಾಗ, ತಾಯಿ ತಂದೆಗೆ ಎಷ್ಟು ಆನಂದವಾಗಿರಬೇಡ?. ಬೇರೆಯವರಾಗಿದ್ದರೆ ರಾಜ ವೈಭವ ನೆನೆದು ಆಗಲಿ ಎಂದು ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ ಸಂತ ತಂದೆ ಮಗಳಿಗೆ ಹೇಳಿದ, "ನಿನ್ನಿಷ್ಟ, ನಿನಗೆ ಬೇಕೆನಿಸಿದರೆ ಲಗ್ನ ಮಾಡಿಕೊಳ್ಳಬಹುದು" ಎಂದನು. ಆಗ ಆ ತರುಣಿ ಹೇಳಿದಳು ರಾಜ ಪುತ್ರನಿಗೆ, "ನೀನು ನಿಜವಾಗಿ ನನ್ನನ್ನು ಪ್ರೀತಿಸುತ್ತಿಯೋ, ಇಲ್ಲವೋ ನಾನು ಪರೀಕ್ಷೆ ಮಾಡಬೇಕಾಗಿದೆ. ಇನ್ನು 15 ದಿನ ಬಿಟ್ಟು ಬಂದು, ನನ್ನ ನೋಡಿ, ಇದೇ ಮಾತು ಹೇಳಿದರೆ, ನಿನ್ನ ಪ್ರೇಮ ಮೋಹ ಅಲ್ಲ. ಸ್ವಚ್ಛ ಪ್ರೇಮ ಅಂತ ಗೊತ್ತಾದೀತು" ಅಂದಳು. ಮೊದಲೇ ರಾಜರು ಅವರಿಗೆ ಇತಿಯಿಲ್ಲ, ಮಿತಿ ಇಲ್ಲ. ಮೋಹದ ಪತ್ನಿಯರು ಎಷ್ಟು ದಿನ ಅಂದಳು. ಇಂತಹವರು ಮೋಹದ ದೃಷ್ಟಿಯಿಂದ ಲಗ್ನವಾದರೆ ನಮ್ಮಂತವರ ಗತಿ ಏನು ಎಂದಳು. ನಿಜವಾದ ಸ್ವಚ್ಛ ಪ್ರೇಮವೇ ಅನ್ನುವುದಕ್ಕೆ ಹದಿನೈದು ದಿನ ಬಿಟ್ಟು ಬಂದು ಹೇಳಿ ಎಂದಳು. ಈಗಿನ ಪೋಷಕರಾಗಿದ್ದರೆ ಆತ ಏನಾದರೂ ಪರವಾಗಿಲ್ಲ ಬೆನ್ನು ಬಿದ್ದು ವಿವಾಹ ಮಾಡುತ್ತಿದ್ದರು. ಆಗ ರಾಜಪುತ್ರ ಹೇಳಿದ "ನಾನು ಪ್ರಮಾಣ ಮಾಡಿ ಹೇಳುತ್ತೇನೆ" ಅಂದನು. ಆಕೆ ಹೇಳಿದಳು "ಪ್ರಮಾಣ ,ಅಪ್ರಮಾಣಕ್ಕೆ ಅರ್ಥ ಏನಿದೆ? ಮೋಹದ ಮನಸ್ಸು ಯಾವ ಪ್ರಮಾಣ ಆದರೂ ಮಾಡುತ್ತದೆ" ಅಂದಳು. ಸಂತ ತಂದೆ ತಾಯಿಗೆ ಆಶ್ಚರ್ಯವಾಯಿತು. ಮಗಳು ಮಾರನೆಯ ದಿನದಿಂದ ಏಕಾದಶಿ ಉಪವಾಸ ಪ್ರಾರಂಭ ಮಾಡಿದಳು. 15 ದಿನ ನೀರು ಬಿಟ್ಟು ಬೇರೇನನ್ನು ಸೇವಿಸಲಿಲ್ಲ. ದೇಹದ ಸೌಂದರ್ಯ ಮರೆಯಾಗಿತ್ತು. ಕಣ್ಣು ಒಳಹೋಗಿತ್ತು, ಮುಖ ಬಾಡಿತ್ತು, ಶರೀರ ಕೃಷವಾಗಿತ್ತು ಆದರೆ ತರುಣಿ ಮಾತ್ರ ಉಳಿದಿದ್ದಳು. ಆಕೆಯ ಮನಸ್ಸು ಮೊದಲು ಹೇಗೆ ತಾಜವಾಗಿತ್ತೋ ಅಷ್ಟೇ ತಾಜವಾಗಿತ್ತು. ಮನಸ್ಸು ಅಷ್ಟೇ ಸುಂದರ ಇತ್ತು. ತಂದೆ ತಾಯಿ ಬಹಳ ಚಿಂತೆ ಮಾಡುತ್ತಿದ್ದರು. 15ನೇ ದಿನ ಬೆಳ್ಳಂ ಬೆಳಗ್ಗೆ ರಾಜ ಪುತ್ರ ಸಂತನ ಕುಟೀರದ ಹತ್ತಿರ ಬಂದನು. ಈ 15 ದಿನ ಆತನ ಮನಸ್ಸು ಅರಮನೆಯಲ್ಲಿ ಇರಲಿಲ್ಲ. ಆ 15 ದಿನ ಆತ ಅರಮನೆಯಲ್ಲಿ ಇದ್ದರೂ ಆತನ ಮನಸ್ಸು ಆ ತರುಣಿಯನ್ನೇ ತುಂಬಿತ್ತು. ಆ ಕುಟೀರ ತುಂಬಿತ್ತು. ತರುಣಿ ಕುಟೀರದ ಹೊರಗೆ ಕುಳಿತಿದ್ದಳು. ರಾಜ ಪುತ್ರ ಬಂದು ಎದುರಿಗೆ ನಿಂತು ನೋಡಿದ, ವಿಶ್ವಾಸ ಆಗಲಿಲ್ಲ. ರಾಜ ಪುತ್ರ ಹೇಳಿದ "ಏನು, ನೀನು ಏನು"? ಎಂದ. ತಾಯಿ ತಂದೆ ಹೊರಗೆ ಬಂದು ಹೇಳಿದರು, ಇವಳೇ ನಮ್ಮ ಮಗಳು ಎಂದರು. ರಾಜ ಪುತ್ರ ನಿರ್ಣಯ ಮಾಡಲು ಅಸಮರ್ಥನಾದನು. ತರುಣಿ ಹೇಳಿದಳು 'ನೀವು ನನ್ನನ್ನು ಪ್ರೀತಿಸುತ್ತಾ ಇದ್ದರೆ, ನನ್ನನ್ನು ಪ್ರೀತಿಸುತ್ತಾ ಇದ್ದರೆ, ನಾ ಇಲ್ಲಿ ಇದ್ದೀನಿ. ಯಾವುದು ನಾ ಅಲ್ಲವೋ ಅದು ಹೋಗಿದೆ. ನಾನು ಅಲ್ಲದ ರೂಪ ಪ್ರೀತಿಸುತ್ತ ಇದ್ದರೆ ಅದು ಇಲ್ಲ. ನೀವು ನನ್ನನ್ನು ಪ್ರೀತಿಸುತ್ತ ಇದ್ದರೆ ಲಗ್ನ ಆಗಿ" ಅಂದಳು. ಆಗ ಆತನ ಮೋಹದ ಕಣ್ಣು ತೆರೆಯಿತು. ಈ ಸಜೀವ ಹೆಣ ಕಟ್ಟಿಕೊಂಡು ಏನು ಮಾಡುವುದು? ಅಂದನು. ಯಾವುದನ್ನು ಕಣ್ಣು ತುಂಬಿಸಿಕೊಂಡು ಹುಚ್ಚಾಗಿದ್ದನೋ ಅದು ಅಲ್ಲಿ ಇರಲಿಲ್ಲ. ಹೋಗಿಬಿಟ್ಟಿತ್ತು. ಇಲ್ಲಿರುವುದನ್ನು ನೋಡ ಬೇಕೆನಿಸುವುದಿಲ್ಲ. ಅದು ಬಹಳ ದಿನ ಇಲ್ಲ. 15 ದಿನ ಇರಲಿಲ್ಲ ಅಂದಮೇಲೆ ಅದನ್ನು ನಂಬಿ ಕೊಂಡು ವಿವಾಹ ಆಗುವುದು ಬೇಡ, ನಿಮ್ಮ ದಾರಿ ನಿಮ್ಮದು. ನನ್ನ ದಾರಿ ನನ್ನದು ಎಂದನು. ಸಂತ ತಾಯಿ ತಂದೆಗೆ ಬಹಳ ಆನಂದವಾಗಿತ್ತು. ಆ ರಾಜಪುತ್ರನಿಗೆ ಕಂಡಿದ್ದೇ ಬೇರೆ, ಇರುವುದು ಬೇರೆ. ಅದೇ ತರುಣಿ ಇದ್ದಾಳೆ. ಆದಿನ ಕಂಡಿದ್ದು ಬೇರೆನೆ. ರೂಪದ ಮೋಹ ಮನಸ್ಸು ಕಂಡಿತ್ತು. ಅದು ಈಗಿಲ್ಲ.
ಮಕ್ಕಳೇ, ಈಗ ಯೋಚಿಸಿ, ನಾವು ಏನು ನೋಡಿ ಮೋಹ ಗೊಳ್ಳುತ್ತೇವೆಯೋ, ಅದು ಹಾಗೆ ಇರುವುದಿಲ್ಲ. ನಾವು ಒಂದು ಹೊಸ ಕಾರು ತಂದಾಗ ಅದರ ಬಣ್ಣ, ಆಕಾರ ನಮ್ಮ ಮನಸ್ಸನ್ನು ಸೆರೆಹಿಡಿದು ಬಂಧಿಸಿರುತ್ತದೆ. ಅದರ ಮೇಲೆ ಗೆರೆ ಬಿದ್ದಾಗ, ಬಣ್ಣ ಹೋದಾಗ ನಿಜವಾದದ್ದು ಯಾವುದು? ತಿಳಿಯುತ್ತದೆ. ಬಣ್ಣದ ಬಟ್ಟೆ ತಂದಿರುತ್ತೇವೆ. ಏನು ಆನಂದ..? ನೀರಿಗೆ ಹಾಕಿದಾಗ ಬಣ್ಣ ಹೋಗುತ್ತದೆ ಅಂದಾಗ ನಿಜವಾದದ್ದು ಯಾವುದು ತಿಳಿಯುತ್ತದೆ. ಹಾಗಾಗಿ ಹೊರಗಿದನ್ನ ನೋಡಿ ಮೋಹ ಹೋಗಬಾರದು. ಪ್ರೇಮ ಇರಬೇಕು, ಮೋಹ ಇರಬಾರದು. ಮೋಹ ಆಗುವುದು ಹೊರಗೆ ಇರೋದನ್ನು ನೋಡಿ. ಆದರೆ ಪ್ರೇಮ ಹೊರಗಿದ್ದನ್ನು ನೋಡಿ ಅಲ್ಲ , ನಿಜವಾಗಿ ಏನಿದೆ ಅದನ್ನು ನೋಡಿ ಉಂಟಾಗುತ್ತದೆ. ಮಕ್ಕಳೇ, ಪ್ರೀತಿ ಇರಲಿ, ಮೋಹ ಬೇಡ ಅಲ್ಲವೇ?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************