ಜೀವನ ಸಂಭ್ರಮ : ಸಂಚಿಕೆ - 197
Monday, July 7, 2025
Edit
ಜೀವನ ಸಂಭ್ರಮ : ಸಂಚಿಕೆ - 197
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಹೇಗೆ ಬದುಕನ್ನು ಸುಂದರಗೊಳಿಸುವುದು ಎನ್ನುವುದರ ಬಗ್ಗೆ ನೋಡೋಣ. ಬದುಕು ಎಂದರೇನು?. ನಾವೆಲ್ಲ ತಿಳಿದಿರುವಂತೆ ಗಳಿಸುವುದು, ದೊಡ್ಡಮನೆ ಕಟ್ಟುವುದು... ಬದುಕಲ್ಲ! ಹಣ ಸಂಪಾದಿಸುವುದು.. ಬದುಕಲ್ಲ! ವಸ್ತುಗಳನ್ನು ಸಂಗ್ರಹಿಸುವುದು ಬದುಕಲ್ಲ! ಹಾಗಾದರೆ ಬದುಕು ಎಂದರೇನು?. ಬದುಕು ಎಂದರೆ ಏನೂ ಅಲ್ಲ, ಕೈ ಬಳಸುವುದು, ಕಾಲು ಬಳಸುವುದು, ಕಣ್ಣು ಬಳಸುವುದು, ಕಿವಿ ಬಳಸುವುದು, ಮೂಗು ಬಳಸುವುದು, ನಾಲಿಗೆ ಬಳಸುವುದು, ಮನಸ್ಸು ಬಳಸುವುದು, ಬುದ್ದಿ ಬಳಸುವುದು, ವಸ್ತು ಬಳಸುವುದು ಹಾಗೂ ನಾಲ್ಕು ಜನರ ಜೊತೆ ವ್ಯವಹಾರ ಮಾಡುವುದು, ಇದಕ್ಕೆ ಬದುಕು ಎನ್ನುವರು. ಇವುಗಳಲ್ಲಿ ಯಾವುದೇ ಕೊರತೆಯಾದರೂ ಅದು ಸುಂದರ ಬದುಕು ಆಗುವುದಿಲ್ಲ. ಉದಾಹರಣೆಗೆ: ಕಣ್ಣು ಬಿಟ್ಟಿದ್ದಾನೆ ಆದರೆ ಕಣ್ಣು ಚಲನೆ ಇಲ್ಲ ಎಂದರೆ ವ್ಯಕ್ತಿ ಬದುಕಿಲ್ಲ ಎನ್ನುತ್ತೇವೆ. ಹಾಗೆ ಕೈಕಾಲು ಚಲನೆ ಇಲ್ಲ ಹಾಗೆ ಇದೆ ಎಂದರೆ ಬದುಕಿಲ್ಲ ಎಂದರ್ಥ. ಬದುಕು ಸುಂದರವಾಗಬೇಕು ಅಂದರೆ ಬದುಕಿನ ಅಂಗಗಳು ಸುಂದರವಾಗಬೇಕು.
ಬದುಕಿನ ಅಂಗಗಳು ನಾಲ್ಕು. ದೇಹ, ಮನಸ್ಸು, ಬುದ್ಧಿ ಮತ್ತು ಮಾತು. ಬದುಕು ಸುಂದರವಾಗಬೇಕಾದರೆ ಈ ನಾಲ್ಕು ಅಂಗಗಳು ಸುಂದರವಾಗಬೇಕು. ಇವುಗಳನ್ನು ಬಿಟ್ಟು ಪ್ರತ್ಯೇಕವಾದ ಬದುಕು ಇಲ್ಲ. ಈ ಬದುಕು ನಿಂತಿರುವುದು ಕರ್ಮಗಳ ಮೇಲೆ. ಕರ್ಮ ಇಲ್ಲ, ಬದುಕು ಇಲ್ಲ. ಬದುಕು ಸುಂದರವಾಗಬೇಕಾದರೆ ಈ ನಾಲ್ಕು ಅಂಗಗಳು ಸುಂದರ ಕಾರ್ಯ ಮಾಡಬೇಕು. ದೇಹದಿಂದ, ದೇಹದ ಕಾರ್ಯಗಳು, ಮನಸ್ಸಿನಿಂದ, ಮನಸ್ಸಿನ ಕಾರ್ಯಗಳು, ಬುದ್ಧಿಯಿಂದ, ಬುದ್ಧಿಯ ಕಾರ್ಯಗಳು ಮತ್ತು ಮಾತು ಇವೆಲ್ಲ ಸುಂದರವಾಗಬೇಕು. ದೇಹ ಸುಂದರ ಅಂದರೆ ದೇಹದ ಕಾರ್ಯಗಳು ಸುಂದರವಾಗಿರಬೇಕು. ಮನಸ್ಸು ಸುಂದರ ಅಂದರೆ ಮನಸ್ಸಿನ ಭಾವನೆಗಳು ಸುಂದರವಾಗಬೇಕು. ಬುದ್ಧಿ ಸುಂದರ ಅಂದರೆ ಬುದ್ಧಿಯ ವಿಚಾರಗಳು ಸುಂದರವಾಗಬೇಕು. ಹೀಗಾಯ್ತು ಅಂದರೆ ಬದುಕು ಸುಂದರವಾಗುತ್ತದೆ.
ಸುಂದರವಾದ ಬದುಕು ನಮಗೆ ಶಾಂತಿ, ಸಮಾಧಾನ ನೀಡುತ್ತದೆ. ಆದ್ದರಿಂದ ದೇಹದಿಂದ ಮಾಡುವುದೇ ಕರ್ಮ. ಮನಸ್ಸಿನಿಂದ ಮಾಡುವುದೇ ಕರ್ಮ. ಬುದ್ಧಿಯಿಂದ ಮಾಡುವುದೇ ಕರ್ಮ ಹಾಗೂ ಮಾತಿನ ಮೂಲಕ ಮಾಡುವುದು ಕೂಡಾ ಕರ್ಮವೇ. ಈ ಕರ್ಮಗಳನ್ನು ಸುಂದರ ಮಾಡಬೇಕು. ಉದಾಹರಣೆಗೆ ಒಂದು ಹೂ ಸುಂದರವಾಗಿದೆ ಅಂದರೆ ಹೂವಿನ ಬಣ್ಣ ಸುಂದರವಾಗಿರುತ್ತದೆ. ಹೂವಿನ ಆಕಾರ ಸುಂದರವಾಗಿರುತ್ತದೆ. ಹೂವಿನ ದಳಗಳು ಸುಂದರವಾಗಿರುತ್ತವೆ. ಹೂವಿನ ಮಕರಂದ ಸುಗಂಧಿತವಾಗಿರುತ್ತದೆ. ಸುತ್ತಾ ಸೂಸುವ ಸುಗಂಧ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ಆವಾಗ ಹೂವು ಸುಂದರ ಅನ್ನುತ್ತೇವೆ. ಹಾಗೆಯೇ ಮನುಷ್ಯ ತನ್ನ ಬದುಕು ಸುಂದರ ಮಾಡಿಕೊಳ್ಳಬೇಕಾಗಿತ್ತು ಅಂದರೆ ದೇಹದ ಕರ್ಮಗಳು, ಮನಸ್ಸಿನ ಕರ್ಮಗಳು, ಬುದ್ಧಿಯ ಕರ್ಮಗಳು ಮತ್ತು ಮಾತು ಎಲ್ಲವೂ ಸುಂದರವಾಗಿರಬೇಕು. ಆದ್ದರಿಂದ ಕರ್ಮಗಳ ಬಗ್ಗೆ ಜಾಗರೂಕನಾಗಿರಬೇಕಾಗಿರುತ್ತದೆ.
ಕರ್ಮಗಳಿಂದ ಬದುಕು ನಿರ್ಮಾಣವಾಗುತ್ತದೆ. ಹಾಗಿರಬೇಕಾದರೆ ಕರ್ಮದ ಸ್ವರೂಪ ತಿಳಿದುಕೊಳ್ಳಬೇಕು. ಬದುಕುವವರಿಗೆಲ್ಲ ಬದುಕು ಬೇಕು. ಬದುಕು ಸುಂದರ ಆಗಬೇಕು. ಜಗತ್ತಿನಲ್ಲಿ ಬದುಕಿಗಿಂತ ಮಿಗಿಲಾದ ವಸ್ತು ಯಾವುದು ಇಲ್ಲ. ಬದುಕನ್ನು ಯಾವುದರಿಂದಲೂ ತೂಗಲು ಸಾಧ್ಯವಿಲ್ಲ. ಮನೆ, ಹೊಲ, ಸಂಪತ್ತು, ಹಣ, ಬೆಳ್ಳಿ, ಬಂಗಾರ, ಮುತ್ತು, ರತ್ನ, ಹವಳ, ವಜ್ರ ಮತ್ತು ಅಧಿಕಾರ ಎಲ್ಲಾ ಇದ್ದರೂ ಕೂಡ ಬದುಕಿಗೆ ಅವುಗಳು ಸಮಾನ ಆಗುವುದಿಲ್ಲ. ಜ್ಯೋತಿಗೆ ಯಾವುದು ಸಮಾನ?. ಜ್ಯೋತಿ ಇದೆ ಅಂತರ ಹೊಳೆಯುತ್ತದೆ. ಜ್ಯೋತಿ ಇಲ್ಲ ಅಂದರೆ ಕಾಣುವುದೇ ಇಲ್ಲ. ಅಂದಮೇಲೆ ಅದಕ್ಕೆ ಬೆಲೆ ಎಷ್ಟು?. ಹಾಗೆ ಬದುಕಿಗೆ ಸಮಾನವಾದ ವಸ್ತು ಇಲ್ಲ. ಮನುಷ್ಯನಿಗೆ ಅತ್ಯಂತ ಪ್ರಿಯವಾದ, ಮಹತ್ವದ್ದು ಯಾವುದು ಅಂದರೆ, ಅದು ಬದುಕು. ಬದುಕೇ ಹೋದ ಬಳಿಕ, ಬದುಕೇ ಕೆಟ್ಟ ಬಳಿಕ, ಏನಿದ್ದರೆ ಏನು ಮಾಡುವುದು?. ಎಲ್ಲಾ ಮಾಡುವುದು ಯಾವುದಕ್ಕೆ?. ಬದುಕಿಗಾಗಿ ಅಲ್ಲವೇ.
ಗೃಹಸ್ಥನಾಗುವುದೇ ಆಗಲಿ, ಸನ್ಯಾಸಿಯಾಗುವುದೇ ಆಗಲಿ, ಸಾಧನೆ ಮಾಡುವುದಾಗಲಿ, ಸಂಪಾದನೆ ಮಾಡುವುದೇ ಆಗಲಿ, ಏನೇ ಮಾಡಿದರು ಬದುಕಿಗಾಗಿ ಅಲ್ಲವೇನು?. ಧರ್ಮ ಕಟ್ಟಿದ್ದು, ಸಂಪ್ರದಾಯ ಕಟ್ಟಿದ್ದು, ಮತ ನಿರ್ಮಿಸಿದ್ದು, ಪಂಥಗಳನ್ನು ಕಟ್ಟಿದ್ದು, ಎಲ್ಲಾ ಬದುಕಿಗಾಗಿ. ಎಲ್ಲಾ ಉದ್ಯೋಗ ಬದುಕಿಗಾಗಿ. ಇಂತಹ ಬದುಕು ಬಹಳ ಮಹತ್ವದ್ದು. ಬದುಕಿನಂತಹ ಅದ್ಭುತ ವಸ್ತು ಜಗತ್ತಿನಲ್ಲಿ ಇಲ್ಲ. ಬದುಕಿನಂತಹ ಅಮೂಲ್ಯ ವಸ್ತು ಜಗತ್ತಿನಲ್ಲಿ ಇಲ್ಲ ಅಂದ ಬಳಿಕ, ಅಂತ ಬದುಕು ನಮಗಿದೆ ಅಂದಮೇಲೆ, ನಿಸರ್ಗ ಅಂತಹ ಬದುಕು ನೀಡಿದ ಮೇಲೆ, ನಾವೆಷ್ಟು ಸಿರಿವಂತರು? ಬದುಕಿನಷ್ಟು ಅಮೂಲ್ಯವಾದ ವಸ್ತು ಇಲ್ಲ ಅಂದ ಬಳಿಕ, ಅಂತಹ ಬದುಕು ನಮಗಿದೆ ಅಂದಾಗ, ನಾವೆಷ್ಟು ಸಿರಿವಂತರಿರಬೇಡ ?.ಯಾರು ಬಡವರು ಜಗತ್ತಿನೊಳಗೆ?. ಬದುಕು ಉಳ್ಳವರೆಲ್ಲ ಸಿರಿವಂತರೇ. ಬದುಕೇ ಸಂಪತ್ತು ಅನ್ನುವುದನ್ನು ಮರೆತಿರುವುದರಿಂದ ಬಡವರಾದೆವು.
ನೂರು ವರ್ಷದ ಬದುಕು ಸಾಮಾನ್ಯವೇ?. ಬದುಕಿನ ಒಂದು ಕ್ಷಣ ಹೆಚ್ಚು ಮಾಡುವ ವಸ್ತು ಜಗತ್ತಿನಲ್ಲಿ ಇಲ್ಲ. ಒಂದು ಕೋಟಿ ರೂಪಾಯಿ ಕೊಡುತ್ತೇನೆ. ಒಂದು ತಾಸು ಹೆಚ್ಚು ಬದುಕಬೇಕು ಅಂದರೆ ಅದು ಸಾಧ್ಯವಿಲ್ಲ. ಬದುಕನ್ನು ರೂಪಾಯಿಂದ ತೂಗಲು ಆಗುವುದಿಲ್ಲ. ಬದುಕನ್ನು ಬಂಗಾರ ,ಮುತ್ತು, ರತ್ನದಿಂದ ತೂಗಲು ಆಗುವುದಿಲ್ಲ. ಒಬ್ಬ ಮನುಷ್ಯ ಕೊರಳಿನಲ್ಲಿ ಬಂಗಾರ ,ಮುತ್ತು, ರತ್ನದ ಸರ ಹಾಕಿದ್ದಾನೆ. ಒಂದೊಂದು ರತ್ನದ ಬೆಲೆ ಕೋಟಿ ಕೋಟಿ. ಆದರೆ ಕೊರಳಿನಷ್ಟು ಬೆಲೆ ಅದಕ್ಕಿಲ್ಲ. ಕೊರಳೇ ಇಲ್ಲ ಅಂದ ಬಳಿಕ ಸರಕ್ಕೇನು ಬೆಲೆ?. ಬೆರಳಿಗೆ ರತ್ನದ ಉಂಗುರ ಹಾಕಿದ್ದೇವೆ. ಆದರೆ ಬೆರಳಿನ ಬೆಲೆ ರತ್ನದ ಉಂಗುರಕ್ಕಿಲ್ಲ. ಬೆರಳೆ ಇಲ್ಲ ಅಂದ ಬಳಿಕ ಉಂಗುರಕ್ಕೆ ಬೆಲೆ ಎಲ್ಲಿದೆ?.
ನಾವೆಲ್ಲ ಬೂಟುಗಳನ್ನು ನೋಡಿ ಎಷ್ಟು ಅದ್ಭುತವಾಗಿದೆ? ಎಷ್ಟು ಬೆಲೆ ಬಾಳುತ್ತದೆ ?.ಎಂದು ಪ್ರಶ್ನಿಸುತ್ತೇವೆ. ಬೂಟನ್ನು ನೋಡಿ ಆಶ್ಚರ್ಯ ಪಡುತ್ತೇವೆ. ಅದರ ಫೋಟೋಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಕಾಲಿಗೆ ಇರುವ ಬೆಲೆ ಅವುಗಳಿಗೆ ಇಲ್ಲ. ಆದರೆ ನಾವ್ಯಾರು ಕಾಲಿನ ಚಿತ್ರ ತೆಗೆದುಕೊಂಡಿಲ್ಲ. ಏಕೆಂದರೆ ಕಾಲಿನ ಬೆಲೆ ನಮಗೆ ಗೊತ್ತಿಲ್ಲ. ಯಾವುದಕ್ಕೆ ಬೆಲೆ ಅನ್ನುವುದನ್ನು ಮನುಷ್ಯ ಮರೆತಿದ್ದಾನೆ. ಅದರಿಂದಾಗಿ ಮನುಷ್ಯ ಬಡವನಾಗುತ್ತಿದ್ದಾನೆ. ಅರಿತವನು ಶ್ರೀಮಂತನಾಗುತ್ತಾನೆ. ಹಣದಿಂದ ,ಮುತ್ತು ರತ್ನದಿಂದ ಅಲ್ಲ, ಅರಿಯುವುದರಿಂದ. ಜ್ಞಾನದ ಅಭಾವ ನಮ್ಮನ್ನು ಬಡವನನ್ನಾಗಿ ಮಾಡುತ್ತದೆ. ಸಂತ ತುಕರಾಮ ಬಡವ. ಊಟ ಮಾಡೋದಿಕ್ಕೆ ಇರಲಿಲ್ಲ. ಆದರೆ ನನ್ನಷ್ಟು ಶ್ರೀಮಂತ ಯಾರಿಲ್ಲ ಅಂತ ಹೇಳುತ್ತಿದ್ದನು. ಆದ್ದರಿಂದ ಬದುಕುವುದರ ಬೆಲೆ ತಿಳಿದುಕೊಳ್ಳಬೇಕು. ಬದುಕು ಬಹಳ ದೊಡ್ಡದು ಅಂತ ತಿಳಿದಿರಬೇಕು. ಆ ಭಾವ, ಆ ಜ್ಞಾನ ಬಂದಿತು ಅಂದರೆ ನಾವೇಕೆ ಬಡವರು?. ಆದರೆ ಈ ತಿಳುವಳಿಕೆ ತುಂಬಾ ಕೊರತೆ ಇದೆ. ಈ ಮಹತ್ವವನ್ನು ತಿಳಿದುಕೊಂಡು ನಾವು ಬದುಕನ್ನು ಕಟ್ಟಬೇಕು. ಈ ಬದುಕನ್ನು ಕಲ್ಲಿನಿಂದ ಕಟ್ಟಲು ಆಗುವುದಿಲ್ಲ. ಈ ಬದುಕನ್ನು ಸಂಪತ್ತಿನಿಂದ ಕಟ್ಟಲು ಆಗುವುದಿಲ್ಲ. ಈ ಬದುಕನ್ನು ಮನೆ ಮಾರುಗಳಿಂದ ಕಟ್ಟಲು ಆಗುವುದಿಲ್ಲ. ಈ ಬದುಕನ್ನು ಕೆಲಸದಿಂದ ಕಟ್ಟಬೇಕು. ಕೆಲಸಕ್ಕೆ ಕರ್ಮ ಎನ್ನುತ್ತೇವೆ, ಕರ್ಮಕ್ಕೆ ಕೆಲಸ ಎನ್ನುತ್ತೇವೆ. ಹಾಗಾದರೆ ಈ ಕರ್ಮದ ಸ್ವರೂಪವನ್ನು ಮುಂದಿನ ಲೇಖನದಲ್ಲಿ ನೋಡೋಣ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************