ಸ್ಫೂರ್ತಿಯ ಮಾತುಗಳು : ಸಂಚಿಕೆ - 175
Tuesday, July 29, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 175
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಬಲ್ಬೊಂದನ್ನು ಬೆಳಗಿಸುವ ಕೆಲಸವಾಗಬೇಕಾದರೆ ಅದಕ್ಕೆ ವಿದ್ಯುತ್ ಕನೆಕ್ಟ್ ಆಗಬೇಕು. ದೂರವಾಣಿಯಲ್ಲಿ ಸಂವಾದ ನಡೆಯಲು ಕರೆಯು ಕನೆಕ್ಟ್ ಆಗಬೇಕು. ಅದೇ ರೀತಿ ನಮ್ಮ ಯಾವುದೇ ಕಾರ್ಯ ಸಾಧನೆಗೆ ನಾವು ಮನಸ್ಸು ಮನಸ್ಸುಗಳೊಂದಿಗೆ ಕನೆಕ್ಟ್ ಆಗಬೇಕು. ಮನಸ್ಸುಗಳೊಂದಿಗೆ ಕನೆಕ್ಟ್ ಆಗುವಲ್ಲಿ ನಮ್ಮ ವ್ಯಕ್ತಿತ್ವವು ಪ್ರಮುಖ ಪಾತ್ರವಹಿಸುತ್ತದೆ. ಗೌರವಿಸುವ ಗುಣ, ಹಸನ್ಮುಖ, ವಿನಯ ಭರಿತ ಮಾತು, ವ್ಯಕ್ತಿಗಳೊಂದಿಗೆ ನಾವು ಹೊಂದಿರುವ ಸ್ನೇಹದ ಬಂಧ ನಮ್ಮನ್ನು ಬಹು ಬೇಗನೆ ಇತರರೊಂದಿಗೆ ಕನೆಕ್ಟ್ ಮಾಡುತ್ತದೆ. ಮನೆಗೆ ಕೆಲಸಕ್ಕೆ ಬಂದವನನ್ನು ದರ್ಪದಿಂದ ಮಾತನಾಡಿದರೆ ಆತ ಮರು ದಿನದಿಂದ ಕೆಲಸಕ್ಕೆ ಖಂಡಿತ ಬರಲಾರ. ನಮ್ಮ ಶ್ರೀಮಂತಿಕೆಯಾಗಲೀ, ನಮ್ಮ ಭವ್ಯ ಬಂಗಲೆಯಾಗಲೀ, ನಾವು ಕೊಡುವ ತಿಂಡಿಯಾಗಲೀ, ಕೊಡುವ ಸಂಬಳದ ಮೊತ್ತವಾಗಲೀ ಯಾರನ್ನೂ ಸೆಳೆಯದು. ನಾಲಿಗೆಯ ಸಂಸ್ಕಾರ, ಹೃದಯ ಶ್ರೀಮಂತಿಕೆಯ ನಮಸ್ಕಾರ, ಪುರಸ್ಕರಿಸುವ ಚೆನ್ನುಡಿಗಳೇ ಮನಸ್ಸುಗಳನ್ನು ಸೆಳೆಯುವ ಶಕ್ತಿಶಾಲಿ ಅಯಸ್ಕಾಂತ ಎಂಬುದನ್ನು ಮರೆಯಬಾರದು.
ನಾವು ನಿರ್ದಿಷ್ಟಗೊಳಿಸಿದ ಕೆಲಸವಾಗಬೇಕಾದರೆ ಹಲವಾರು ಮನಸ್ಸುಗಳೊಂದಿಗೆ ನಾವು ಕನೆಕ್ಟ್ ಆಗಬೇಕು. ಕನೆಕ್ಟ್ ಆಗಿದ್ದಾಗ ಕಾರ್ಯದ ಪ್ರಸ್ತಾಪ ಮಾಡಿದೊಡನೆ ಸ್ವಯಂ ಪ್ರೇರಣೆಯಿಂದ ಜನರು ನಮ್ಮೊಂದಿಗೆ ಜೋಡಣೆಯಾಗುತ್ತಾರೆ. ಕಾರ್ಯಸಾಧನೆಯಾಗುವ ತನಕ ಸಂಪೂರ್ಣ ಬೆಂಬಲವಾಗಿರುತ್ತಾರೆ. ನಮ್ಮ ಮನೆಯ ನಾಯಿಯು ನಮ್ಮೊಡನೆ ಎಷ್ಟು ಪ್ರೀತಿಯಿಂದ ಕನೆಕ್ಟ್ ಆಗಿರುತ್ತದೆ ಅಲ್ವೇ? ಮನೆಯವರೊಂದಿಗೆ, ಸಮುದಾಯದೊಂದಿಗೆ ಕನೆಕ್ಟ್ ಆಗಲು ಮನುಷ್ಯರಾದ ನಮಗೇಕೆ ಸಾಧ್ಯವಾಗುವುದಿಲ್ಲ. ನಮ್ಮ ಹೊಮ್ಮು ಬಿಮ್ಮುಗಳು, ‘ನಾನು’ ಎಂಬ ಅಹಂ ನಮ್ಮ ಮನಸ್ಸನ್ನು ತೆರೆಯಲು ಬಿಡುವುದಿಲ್ಲ. ನಮ್ಮ ವಿಕಸನಕ್ಕೆ ಅಡ್ಡಿಯಾಗುವ ಅಹಂಗಳೆಲ್ಲವನ್ನೂ ಸುಟ್ಟು ಬೂದಿ ಮಾಡುವುದೇ ಕನೆಕ್ಟ್ ಆಗಲು ಇರುವ ಮುಕ್ತ ಬಾಗಿಲು. ಕನೆಕ್ಟ್ ಆಗಿರುವುದೇ ಉದ್ದೇಶಿತ ಕಾರ್ಯ ಸಾಧನೆಗೆ ಸುಲಭ ಹಾಗೂ ಸರಳ ಮಾರ್ಗ.
ಬಸ್ ಟಿಕೆಟ್ ತೆಗೆದುಕೊಳ್ಳುವಾಗ ನಿರ್ವಾಹಕನ ಮುಖವನ್ನು ನೋಡಿ ಪ್ರೀತಿಯ ನಗು ಬೀರಿ ನಾವು ಹೋಗುವ ಸ್ಥಳವನ್ನು ಹೇಳಿದರೆ ಆತ ನಮ್ಮೊಂದಿಗೆ ಕನೆಕ್ಟ್ ಆಗುತ್ತಾನೆ. ಅಂಚೆಯಣ್ಣ ಮನೆಗೆ ಬಂದಾಗ ಬಾಯಾರಿಕೆ ಬೇಕೇ ಎಂದು ವಿಚಾರಿಸೋಣ. ಟಪ್ಪಾಲು ನೀಡಿದೊಡನೆ "ಥ್ಯಾಂಕ್ಸ್“ ಎನ್ನೋಣ. ನಮಗೆ ಅವನು ಕನೆಕ್ಟ್ ಆಗುತ್ತಾನೆ. ಮುಂದೆ ಆತ ಎಷ್ಟು ಬಿಝಿಯಾಗಿದ್ದರೂ ಪತ್ರಗಳನ್ನು ನಮಗೆ ಸಕಾಲಕ್ಕೆ ತಲಪಿಸುತ್ತಾನೆ. ರಿಕ್ಷಾ ಇಳಿಯುತ್ತಾ ನಗು ಮುಖದಿಂದ ಬಾಡಿಗೆ ಪಾವತಿಸಿ, ಕೃತಜ್ಞತೆ ಹೇಳಿದರೆ ನಮಗವನು ಕನೆಕ್ಟ್ ಆಗುತ್ತಾನೆ. ಕನೆಕ್ಟ್ ಆಗದೆ ನಮ್ಮ ಕೆಲಸಗಳಾಗವು. ಕನೆಕ್ಟ್ ಆಗಲು ನಮ್ಮಲ್ಲಿರುವ ಎಲ್ಲ ಬಿಗಿತಗಳನ್ನು ಸಡಿಲಗೊಳಿಸಲೇ ಬೇಕು. ನಮಸ್ಕಾರ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************