ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 13
Saturday, July 5, 2025
Edit
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 13
ಲೇಖನ : ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಗೆ ರಾಜ್ಯ ಮಟ್ಟದಲ್ಲಿ ಐದನೇ ಸ್ಥಾನ
ಬರಹ : ಶೋಭಾ ಎನ್
ಸಹ ಶಿಕ್ಷಕಿ.
ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆ
ಮೂಡುಬಿದಿರೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಶ್ರಮದ ಪ್ರತಿಫಲ ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಗೆ ಶೇಕಡಾ ನೂರು ಫಲಿತಾಂಶ– ರಾಜ್ಯ ಮಟ್ಟದಲ್ಲಿ ಐದನೇ ಸ್ಥಾನದ ವಿಜಯದ ನೆನಪು...
2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಕ್ಷಣ. ನಮ್ಮ ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯ ಎಲ್ಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರ ಹೃದಯಗಳಲ್ಲೊಂದು ಅಪಾರ ಆನಂದದ ಕುಸುಮ ಮೂಡಿತು. ನಮ್ಮ ಶಾಲೆಯು ಶೇ100 ಫಲಿತಾಂಶವನ್ನು ಸಾಧಿಸಿ, ರಾಜ್ಯ ಮಟ್ಟದಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿತು. ನಮ್ಮ ಶಾಲೆಗೆ ಕಳೆದ ಮೂರು ವರ್ಷದ ನಂತರ ಇತಿಹಾಸದಲ್ಲಿ ಹೆಮ್ಮೆಯ ಕ್ಷಣವಾಗಿತ್ತು.
ಈ ಸಾಧನೆಯ ಹಿಂದೆ ನಮ್ಮ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ ವೀಣಾ ಪ್ರಮೋದ್, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳ ಅಚಲ ಶ್ರದ್ಧೆ , ದೃಢ ನಿರ್ಧಾರ, ಸತತ ಪ್ರಯತ್ನ , ಸ್ಪೂರ್ತಿ -ಪ್ರೇರಣೆಯ ಬೆಳಕಾಗಿದೆ. ವಿಷಯ ಶಿಕ್ಷಕರು ತಮ್ಮ ಕಾಯಕ ನಿಷ್ಠೆಯಿಂದ ಪ್ರತಿದಿನವೂ ವಿದ್ಯಾರ್ಥಿಗಳಿಗೆ ತಮ್ಮನ್ನು ಓದಿನಲ್ಲಿ ತೊಡಗಿಸಿಕೊಳ್ಳಲು ಯಾವುದೇ ಹಬ್ಬ -ಹರಿದಿನಗಳನ್ನು ಲೆಕ್ಕಿಸದೆ ಕೆಲಸ ಮಾಡಿದರು. ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡುತ್ತಿದ್ಧರು.
ಶೈಕ್ಷಣಿಕ ವರ್ಷದ ಆರಂಭದಿಂದಲೇ ಪರೀಕ್ಷಾ ತಯಾರಿ ಆರಂಭವಾಯಿತು. ಪಠ್ಯ ಭಾಗಗಳ ಆಳವಾದ ವಿಶ್ಲೇಷಣೆ, ಮಾದರಿ ಪ್ರಶ್ನೆಪತ್ರಿಕೆಗಳ ಪರಿಹಾರ ಬೋಧನೆ, ಪರೀಕ್ಷೆಗಳು, ಪ್ರಶ್ನೋತ್ತರ ಚರ್ಚೆಗಳು, ಬೆಳಗ್ಗೆ ಬೇಗನೆ ಎಬ್ಬಿಸುವ ಪ್ರಯತ್ನ ಮತ್ತು ವಿಭಿನ್ನ ಮಾದರಿಯ ತರಗತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಲಾಯಿತು. ಸಂದೇಹ ನಿವಾರಣಾ ಶಿಬಿರಗಳು ಮತ್ತು ವಿಶೇಷ ತರಗತಿಗಳು ಪರೀಕ್ಷಾ ಆತಂಕ ನಿವಾರಣೆಗೆ ಕಾರ್ಯಾಗಾರ ನಡೆಸಿದರು.
ವಿದ್ಯಾರ್ಥಿಗಳು ತಮ್ಮ ಉತ್ಸಾಹ, ದೃಢತೆ ಮತ್ತು ಸಮಯ ನಿರ್ವಹಣೆಯೊಂದಿಗೆ ಈ ಪ್ರಯಾಣವನ್ನು ಸಾರ್ಥಕಗೊಳಿಸಿದರು. ಅವರ ಓದು, ಆದರ್ಶ ನಡವಳಿಕೆ ಹಾಗೂ ನಿರಂತರ ಪ್ರಯತ್ನಗಳು ಇಂದು ಈ ಸಾಧನೆಯ ಮುಖ್ಯ ಕಾರಣಗಳಾಗಿವೆ.
ಅದೇ ರೀತಿ ಪೋಷಕರ ಸಹಕಾರವೂ ಅಪಾರ. ಅವರು ಮಕ್ಕಳ ಓದಿನ ಮೇಲಿನ ಗಮನ, ಪಠ್ಯೇತರ ಚಟುವಟಿಕೆಗಳಿಗೆ ಸಮರ್ಪಿತ ಸಮಯ ನೀಡಿದ ರೀತಿ, ಶಾಲೆಯೊಂದಿಗೆ ಸಮನ್ವಯದಲ್ಲಿದ್ದ ಬದ್ಧತೆ – ಇವು ಎಲ್ಲವೂ ಈ ಯಶಸ್ಸಿಗೆ ಚಾಲನೆ ನೀಡಿದ ಬಲವಾದ ಕಂಬಗಳಾಗಿವೆ.
ಅಂತಿಮವಾಗಿ ಫಲಿತಾಂಶ ಪ್ರಕಟವಾದಾಗ, ಆನಂದದ ಜೊತೆಗೆ ಕಣ್ಣಲ್ಲಿ ಸಂತೋಷದ ನೀರು ತುಂಬಿದ ಕ್ಷಣಗಳನ್ನು ನಾವು ಅನುಭವಿಸಿದೆವು. ನಾವೆಲ್ಲ ಸೇರಿ ಸಾಧಿಸಿದ ಈ ಶ್ರೇಷ್ಟ ಫಲಿತಾಂಶ ನಮ್ಮ ಪಾಲಿಗೆ ಕೇವಲ ಅಂಕಗಳ ಸಾಧನೆಯಲ್ಲ, ನಮ್ಮ ಶ್ರಮದ ಶ್ರೇಷ್ಠ ಫಲವಾಗಿತ್ತು.
ಈ ಯಶಸ್ಸು ನಮಗೆ ಶ್ರದ್ಧೆ, ಶ್ರಮ ಮತ್ತು ಜಟಿಲ ಪ್ರಯತ್ನಗಳೆಂದರೆ ಏನು ಎಂಬುದನ್ನು ಬೋಧಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆಗಳನ್ನು ಮಾಡಬೇಕು ಎಂಬ ಹುಮ್ಮಸ್ಸನ್ನು ನಮ್ಮೆಲ್ಲರಲ್ಲೂ ಬೆಳೆಸಿದೆ. ಇದು ಹೊಸ ವಿದ್ಯಾರ್ಥಿಗಳಿಗೂ ಪ್ರೇರಣೆಯ ಬೆಳಕು ಚೆಲ್ಲಲಿದೆ.
ಸಹ ಶಿಕ್ಷಕಿ.
ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆ
ಮೂಡುಬಿದಿರೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 97415 83790:
*******************************************