ನಿಷ್ಪಾಪಿ ಸಸ್ಯಗಳು : ಸಂಚಿಕೆ - 111
Thursday, July 17, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 111
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಬಾಲ್ಯದಲ್ಲಿ ನಮ್ಮ ಶಾಲಾ ಫೀಸು, ಹಬ್ಬಗಳಿಗಾಗಿ ಹೊಸಬಟ್ಟೆ, ಊರ ಜಾತ್ರೆಯಲ್ಲಿ ಖುಷಿ ಗಳಿಸಲು ಒಂದಿಷ್ಟು ಹಣದ ಅಗತ್ಯ ಖಂಡಿತವಾಗಿಯೂ ಇರುತ್ತದೆ. ಹಿಂದಿನ ಕಾಲದಲ್ಲಿ ತಂದೆತಾಯಿ ದುಡಿದು ಗಳಿಸಿ ಮಕ್ಕಳ ಖರ್ಚಿಗಾಗಿ ಹಣ ಕೊಡುವ ಪೋಷಕರೊಂದಡೆಯಾದರೆ ಮಕ್ಕಳ ಕೈಗೆ ಕಾಸು ಒದಗಿಸಿ ಅವಶ್ಯಕತೆ ಪೂರೈಸಲು ಸಹಕರಿಸುವ ಕಾಡಿನ ಗಿಡಮರಗಳೊಂದೆಡೆ ಇದ್ದವು ಗೊತ್ತಾ..?
ಕಹಿಯಾದ ಕಾಸರಕನ ಬೀಜ, ಗೇರು ಬೀಜ, ಅಂಟುವಾಳ, ಸೀಗೆ, ದಾಲ್ಚಿನ್ನಿ ಹೀಗೆ ಹಲವಾರು ಕಾಡುತ್ಪನ್ನಗಳು ಮಕ್ಕಳ ಅವಶ್ಯಕತೆಗಳನ್ನಷ್ಟೇ ಅಲ್ಲದೆ ಬಡವರ ಮನೆಯ ಕೆಲ ಸಮಯದ ಹಸಿವನ್ನೂ ತಗ್ಗಿಸುತ್ತಿದ್ದವು. ಮಳೆ ಬೆಳೆ ರಕ್ಷಣೆ ನೀಡದ ಕಾಲದಲ್ಲಿ ಸೀಗೆಕಾಯಿ ಹಲವಾರು ಕುಟುಂಬಗಳಿಗೆ ಆಧಾರವಾಗಿತ್ತೆಂದು ಹಿರಿಯರ ಮಾತುಗಳಿಂದ ತಿಳಿಯಬಹುದು. ಗೇರು ಬೀಜವನ್ನು ಸ್ವಲ್ಪ ಸುಲಭದಲ್ಲಿ ಕೊಯ್ಯಲು ಸಾಧ್ಯವಾದರೆ ಸೀಗೆಯನ್ನು ಕೊಯ್ಯುವ ಕೆಲಸ ಸಂಕೀರ್ಣವಾದುದು. ಕೆಲವು ಬುಡಕಟ್ಟು ಜನಾಂಗಗಳು ಈಗಲೂ ಸೀಗೆ ಬೆಳೆಯನ್ನು ಆಶ್ರಯಿಸಿವೆ.
ಕಾಡುಗುಡ್ಡಗಳ ದೊಡ್ಡ ದೊಡ್ಡ ಮರಗಳ ಮೇಲೆ, ನದಿ ತೋಡುಗಳ ಇಕ್ಕೆಲಗಳಲ್ಲಿ, ಗದ್ದೆ ತೋಟಗಳ ಬೇಲಿಗಳಲ್ಲಿ ಸೀಗೆ ಬಳ್ಳಿಗಳು ಹಬ್ಬಿರುತ್ತಿದ್ದವು. ಸೀಗೆ ಬಳ್ಳಿಯನ್ನು ಮುಟ್ಟುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಬುಡದಿಂದ ತುದಿಯವರೆಗೂ ಕೊಕ್ಕೆಯಂತೆ ತುದಿ ಬಾಗಿದ ಚೂಪು ಮುಳ್ಳುಗಳು!. ಮಳೆ ಕಡಿಮೆ ಇರುವಲ್ಲೂ ಬೆಳೆಯಬಲ್ಲದು ಮಾತ್ರವಲ್ಲದೆ ಬರಗಾಲವನ್ನೂ ಎದುರಿಸುವ ಶಕ್ತಿಯ ಪ್ರತೀಕವಾಗಿ ಮುಳ್ಳುಗಳು ಹೆಚ್ಚಿವೆ. ಸೀಗೆಯನ್ನು ಬಳ್ಳಿಯೆಂದು ಕರೆದರೂ ಕಂದು ಬಣ್ಣದ ಕಾಂಡವು ಗಟ್ಟಿಯಾಗಿ ದಪ್ಪಗಿರುತ್ತದೆ. ಪೊದೆ ಸಸ್ಯ, ಸಣ್ಣ ಮಟ್ಟಿನ ಮರವೆಂದೂ ಕೆಲವೆಡೆ ತೋರಿಸಿ ಕೊಳ್ಳುತ್ತದೆ. ಐದು ಮೀಟರ್ ಗಳೆತ್ತರ ಏರುವ ಸೀಗೆ ಒಂದು ಆರೋಹಿ ಸಸ್ಯ. ಹೂಗಳು ತಿಳಿ ಹಳದಿ. ಮೊಗ್ಗು ಕೆಂಪು, ನೇರಳೆ ಕೆಂಪು. ತಾಜಾ ಬೀಜವು ದಪ್ಪಗಾಗಿ ನಯವಾಗಿ ತಿರುಳಿನಿಂದ ಕೂಡಿರುತ್ತದೆ. ಬೆಳೆದಂತೆ ಸುಂದರ ಕೆಂಪು ವರ್ಣದ ಕಾಯಿಗಳ ಗಟ್ಟಿ ಸಿಪ್ಪೆಯು ಸುಕ್ಕುಗಟ್ಟಿ ಕಂದು ಬಣ್ಣವಾಗುತ್ತದೆ. ಕೊನೆಗೆ ಬಿಸಿಲಿಗೆ ತೊಟ್ಟು ಒಣಗಿ ಉದುರುವ ಮೊದಲು ಸೀಗೆಕಾಯಿ ಕೊಯ್ಯುವುದೇ ಒಂದು ಸಾಹಸ!. ಸೀಗೆಬಲ್ಲೆಯ ನಡುವೆ ಇನ್ನಿತರ ಮುಳ್ಳಿನ ಗಿಡಗಂಟಿಗಳು ಬೆಳೆದಿರುತ್ತವೆ. ಕಾಯಿ ಕೆಳಗೆ ಬಿದ್ದರೆ ಕಾಣದಷ್ಟು ತರಗೆಲೆಗಳ ರಾಶಿ. ಒಂದಿಷ್ಟು ದುಡುಕಿದರೂ ಕೈ ಕಾಲು ಮುಖ ಮೂತಿ ನೋಡದೆ ಅಪ್ಪಿಕೊಳ್ಳುವ ಮುಳ್ಳಿನ ರಾಶಿ. ಅದರಿಂದ ಬಿಡಿಸಿಕೊಂಡು ಹೊರಬರಲು ಕಷ್ಟ. ಅದಕ್ಕಾಗಿ ಸೀಗೆಕಾಯಿ ಮಾಗಿದಾಗ ಅದರ ಬುಡವನ್ನು ಸ್ವಚ್ಛಗೊಳಿಸುತ್ತಾರೆ. ಬಳಿಕ ಬಿದಿರಿನ ಉದ್ದನೆಯ ಗಳದಿಂದ ಈ ಬಳ್ಳಿಯನ್ನು ಹಿಡಿದು ಸ್ವಲ್ಪವೇ ಅಲುಗಾಡಿಸಿದರೂ ಎಲ್ಲಾ ಕಾಯಿಗಳು ಉದುರುತ್ತವೆ. ಹೆಕ್ಕಲು ಸ್ವಲ್ಪ ಸುಭವಾಗುವುದು.
ಸೀಗೆಯು "ನಿಸರ್ಗದ ಸೋಪ್" ಎಂದು ಕರೆಸಿಕೊಳ್ಳುತ್ತದೆ. ಕನ್ನಡದಲ್ಲಿ ಸೀಗೆಕಾಯಿ, ತುಳುವಿನಲ್ಲಿ ಸೀಗೆ, ಇಂಗ್ಲೀಷಲ್ಲಿ ಸೋಪ್ ನಟ್, ಕೊಂಕಣಿಯಲ್ಲಿ ಸಿಕಾಯಿ, ಸಂಸ್ಕೃತ ದಲ್ಲಿ ಕಂಠವಲ್ಲಿ, ಕಾಂತವಲ್ಲಿ, ಶಿವವಲ್ಲಿ, ಶ್ರೀ ವಲ್ಲಿ ಎಂದೆಲ್ಲ ಕರೆಸಿಕೊಳ್ಳುವ ಸೀಗೆಕಾಯಿ ಫ್ಯಾಬೇಸಿ ಕುಟುಂಬಕ್ಕೆ ಸೇರಿದೆ. ಶಾಸ್ತ್ರೀಯವಾಗಿ ಅಕೇಸಿಯ ಕಾನ್ಸಿನ್ನಾ (Acacia concinna) ಎಂಬ ಹೆಸರಿದ್ದು ಅಕೇಸಿಯ ಪನ್ನೇಟ ಎಂಬ ಇನ್ನೊಂದು ಪ್ರಭೇದವನ್ನೂ ಹೊಂದಿದೆ. ಮುಖ್ಯ ನರಕ್ಕೆ ಅತ್ತಿತ್ತ ಜೋಡಣೆಗೊಂಡ 10 - 15 ಸಂಯುಕ್ತ ಎಲೆಗಳ ರಚನೆ. ನೆಲ್ಲಿ ಕಾಯಿ ಎಲೆಯಂತೆ ಪುಟ್ಟ ಎಲೆಗಳು ಸಂಜೆಯಾಗುತ್ತಲೇ ನಿದ್ದೆಗೆ ಜಾರುತ್ತವೆ!. ಹುಳಿ ರುಚಿಯಿರುವ ಎಳೆಯ ಚಿಗುರುಗಳು ಹಿಂದಿನ ಕಾಲದಲ್ಲಿ ಮಳೆಗಾಲದ ಪ್ರಮುಖ ಖಾದ್ಯ. ಅದಕ್ಕೊಂದಿಷ್ಟು ಓಮದ ಕಾಳು ಸೇರಿಸಿದರೆ ಮಳೆಗಾಲದ ರೋಗರುಜಿನಗಳಿಂದ ರಕ್ಷಣೆಯಾಗುತ್ತಿತ್ತು!.
ಚೀನಾ ಸೇರಿದಂತೆ ಏಷ್ಯಾಕ್ಕೆ ಸ್ಥಳೀಯ ಸಸ್ಯವಾದ ಸೀಗೇಕಾಯಿಯ ಇತಿಹಾಸ ಹರಪ್ಪಾ ಪೂರ್ವದ ಕ್ರಿ.ಪೂ 2750 - 2500 ವರ್ಷಗಳಷ್ಟು ಹಿಂದಕ್ಕೆ ಸರಿಯುತ್ತದೆ..! ಹರಿಯಾಣದಲ್ಲಿ ಅ ಬಗ್ಗೆ ಸೀಗೆಕಾಯಿ, ನೆಲ್ಲಿಕಾಯಿ, ಅಂಟುವಾಳದ ಮಿಶ್ರಣ ಕಂಡು ಬಂದಿದೆ ಎಂಬ ದಾಖಲೆ ಇರುವುದರಿಂದ ಇದು ದಕ್ಷಿಣ ಏಷ್ಯಾದ ನೈರ್ಮಲ್ಯದ ಪ್ರಾಚೀನ ಬೇರುಗಳನ್ನು ಪ್ರದರ್ಶಿಸುತ್ತದೆ ಎನ್ನಲಾಗಿದೆ. ಅಂದರೆ ತಲೆಕೂದಲು ಸ್ವಚ್ಛಗೊಳಿಸಲು ಈ ಸೀಗೆಕಾಯಿ ಬಹಳ ಪ್ರಾಚೀನ ಕಾಲದಿಂದಲೂ ಬಳಸುತ್ತಿದ್ದರೆಂದು ಸುಲಭವಾಗಿ ಅರ್ಥೈಸಬಹುದು. ಈ ಆಧುನಿಕ ಕಾಲದ ವರೆಗೂ ಅಂದರೆ ವಿದೇಶೀ ವಸ್ತು ಮತ್ತು ಸಂಸ್ಕೃತಿಗೆ ಭಾರತವು ಮಾರುಹೋಗುವವರೆಗೂ ಭಾರತೀಯರಿಗೆ ಸೀಗೆಕಾಯಿ ನಿಸರ್ಗದ ವರವಾಗಿತ್ತು. ಇದು ಆರೋಗ್ಯಕರ, ದಟ್ಟ, ಬಲವಾದ ತಲೆ ಕೂದಲಿನ ಬೆಳವಣಿಗೆಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂಬುವುದು ಪರಂಪರೆಯ ನಂಬಿಕೆ. ದೋಷರಹಿತ, ಸ್ವಚ್ಛ, ತಲೆಹೊಟ್ಟು ರಹಿತ ಕೂದಲು ಎಲ್ಲರ ಆಶೆ. ಮೃದುವಾದ ಹೊಳೆಯುವ ಕೂದಲನ್ನು ಈ ಸೀಗೆಕಾಯಿ ನೀಡುತ್ತದೆ ಎಂಬುದನ್ನು ಮನಗಂಡ ಜನರು ಇದನ್ನು ವಿಶ್ವದೆಲ್ಲೆಡೆ ಬಳಸುತ್ತಿದ್ದರೂ ಬದಲಾದ ಕಾಲಧರ್ಮದಲ್ಲಿ ಕೃಷಿ ಕಾರ್ಯಕ್ಕೆ ಹೆಚ್ಚಿನ ಜಾಗ ಬೇಕಾಗಿ ಈ ನಿಷ್ಪಾಪಿ ಸಸ್ಯವನ್ನು ಆಕ್ರಮಣಕಾರಿ ಎಂದು ಪರಿಗಣಿಸಲಾಯಿತು. ಭೂಮಿಯ ಮೇಲೆ ಅದರ ಬದುಕುವ ಹಕ್ಕನ್ನು ನಿರಾಕರಿಸುತ್ತಾ ತೆಂಗು, ಅಡಿಕೆ, ಕಾಫಿ, ರಬ್ಬರ್, ಶುಂಠಿ ಇತ್ಯಾದಿ ತೋಟಗಳಿಗಾಗಿ ಕಾಡಿನ ಜೊತೆ ಸೀಗೆ ಬಳ್ಳಿಗಳನ್ನೂ ಸವರಲಾಯಿತು. ಜೆಸಿಬಿ ಎಂಬ ಮಾನವನ ಕೈಯ್ಯ ಆಯುಧವು ಬೆಟ್ಟ ಗುಡ್ಡಗಳ ತಲೆ ಸವರಿ ಸೀಗೆ ಕಾಯಿಯನ್ನು ವಿನಾಶದ ಅಂಚಿಗೆ ನೂಕಿರುವುದು ವಿಪರ್ಯಾಸ. ಒಂದು ಕಾಲಕ್ಕೆ ನಿತ್ಯದ ಅಗತ್ಯಕ್ಕೆ ಬಳಸಲ್ಪಡುತ್ತಿದ್ದ ಸೀಗೆಕಾಯಿ ಪರಿಸರಕ್ಕೆ ಯಾವುದೇ ರೀತಿಯಲ್ಲೂ ತೊಂದರೆ ಕೊಡಲಿಲ್ಲ. ಸೀಗೆ ಸೊಪ್ಪನ್ನು ಬಾಣಂತಿಗೆ ನೀಡಿ ಎದೆಹಾಲು ಹೆಚ್ಚಾಗುವುದನ್ನು ಕಂಡುಕೊಂಡಿದ್ದರು. ಬೀಜ, ಎಲೆ, ತೊಗಟೆ ಒಣಗಿಸಿ ಪುಡಿಮಾಡಿ ವರ್ಷಪೂರ್ತಿ ಸ್ನಾನಕ್ಕಾಗಿ ಬಳಸುತ್ತಿದ್ದರು. ಈ ಮಾಂತ್ರಿಕ ಪುಡಿ ಹೆಚ್ಚು ಬುರುಗನ್ನು ಉಂಟುಮಾಡದಿದ್ದರೂ ಸೌಮ್ಯವಾಗಿದ್ದು ತಲೆ ಕೂದಲಿನ ನೈಸರ್ಗಿಕ ತೈಲಕ್ಕೆ ಹಾನಿ ಮಾಡುವುದಿಲ್ಲವೆಂದು ಸಾವಿರಾರು ವರ್ಷಗಳ ಹಿಂದೆಯೆ ಕಂಡುಕೊಂಡಿದ್ದರು. ಫಿಲಿಫೈನ್ಸ್ ನಲ್ಲಿ ಸೀಗೆ ಸಸ್ಯ ಕಡಿಮೆ ಹಾಗೂ ಮಧ್ಯಮ ಎತ್ತರದ ಪೊದೆ ಸಸ್ಯವಾದರೆ ಥೈಲ್ಯಾಂಡ್, ಚೀನಾಗಳಲ್ಲಿ ಕಾಡು, ಹಳ್ಳಿಗಳ ನಡುವೆ ಈಗಲೂ ಇದೆ.
ಭಾರತ ಮತ್ತು ಪೂರ್ವ ಏಷ್ಯಾದಲ್ಲಿ ವಾಣಿಜ್ಯಬೆಳೆಯಾಗಿ ಬೆಳೆಯುತ್ತಾರೆ. ಬಂಗಾಳದಲ್ಲಿ ಮೀನುಗಳಿಗೆ ವಿಷ ಹಾಕಲು ಬಳಸುತ್ತಾರೆ. ಬರ್ಮಾದಲ್ಲಿ ಹೊಸ ವರ್ಷದಂದು ಕಲ್ಮಶ, ಕೆಟ್ಟ ಶಕುನ ಬಿಡಿಸಲು ಇದರ ಶಾಂಪೂ ಬಳಸಿ ಸ್ನಾನ ಮಾಡುವರು. ಈ ವೇಳೆ ತೆರೆದ ಮಾರುಕಟ್ಟೆಯಲ್ಲಿದು ಪ್ಲಾಸ್ಟಿಕ್ ಚೀಲಗಳಲ್ಲಿ ಮಾರಾಟವಾಗುತ್ತದೆಯಂತೆ. ಥೈಲ್ಯಾಂಡಲ್ಲಿ ವಯಸ್ಸಾದವರಿಗೆ ಗೌರವ ಸಲ್ಲಿಸಲು, ದುಷ್ಟತನ ಹೊರಗೆ ಹಾಕುವ ಆಚರಣೆಗಾಗಿ ಒಣಗಿದ ಹಣ್ಣನ್ನು ಪವಿತ್ರ ನೀರಲ್ಲಿ ಬಳಸುವರಂತೆ.
ನಮ್ಮ ಮಾರುಕಟ್ಟೆಯಲ್ಲೂ ಶಾಂಪೂ, ಸಾಬೂನು ಹಾಗೂ ಔಷಧಿಗಳಲ್ಲಿ ಸೀಗೆಕಾಯಿ ಬಳಕೆಯಲ್ಲಿದೆ. ಮೂತ್ರವರ್ಧಕ, ವಾಂತಿಕಾರಕ, ಎಸ್ಜಿಮಾ, ಕುಷ್ಠ, ಕಾಮಾಲೆ, ಸುಲಭ ಹೆರಿಗೆ ಇತ್ಯಾದಿಗಳಿಗೆ ಸಹಾಯಕವಾಗಿ ಬಳಕೆಯಲ್ಲಿದೆ. ಕೆಲವು ಚಿಟ್ಟೆಗಳ ಲಾರ್ವಾಗಳಿಗೆ ಸೀಗೆ ಕಾಯಿ ಎಲೆಗಳೇ ಆಹಾರದ ಮೂಲ.
ಮಾನವನ ಧನ ದಾಹದೆದುರಲ್ಲಿ 'ಸೀಗೆ ಮೆಳೆಗಳಿದ್ದಲ್ಲಿ ನೀರು ನಿಂತು ಅಂತರ್ಜಲ ಹೆಚ್ಚಾಗುತ್ತದೆ, ಮಣ್ಣು ಸವೆಯುವುದಿಲ್ಲ, ಮೇಲ್ಮಣ್ಣು ಫಲವತ್ತಾಗಿರುತ್ತದೆ, ರೈತರ ಹಳ್ಳಿಗರ ಜೀವನ ಮಟ್ಟ ಸುಧಾರಿಸಲು ಸಹಕರಿಸುತ್ತದೆ 'ಎನ್ನುವುದೆಲ್ಲ ಹಳೆಯ ಕತೆಗಳಾಗಿವೆ! ಕನಿಷ್ಟ ನಾವು ಅವುಗಳನ್ನು ಬಳಸಿದರೆ ಸಾಂಪ್ರದಾಯಿಕವಾಗಿ ಬೆಳೆಸುವ ಯಾರಿಗಾದರೂ ಸಹಾಯವಾಗಬಹುದು. ಇದ್ದ ಬಳ್ಳಿಯನ್ನು ಉಳಿಸಿಕೊಂಡರೆ ಅವಲಂಬಿತ ಜೀವಿಗಳ ನಾಶವನ್ನು ತಡೆಯಬಹುದು ಅಲ್ಲವೇ?
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************