-->
ಮಕ್ಕಳಿಗೆ ರಜೆಯ ಓದು : ಸಂಚಿಕೆ - 08

ಮಕ್ಕಳಿಗೆ ರಜೆಯ ಓದು : ಸಂಚಿಕೆ - 08

ಮಕ್ಕಳಿಗೆ ರಜೆಯ ಓದು
ಸಂಚಿಕೆ - 08
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
                    
ಬಹಳಷ್ಟು ಮಕ್ಕಳು ಈಗಾಗಲೇ ಟಿವಿಯಲ್ಲಿ ಅಥವಾ ಯೂಟ್ಯೂಬ್ ನಲ್ಲಿ ‘ದಿ ಕ್ರೋನಿಕಲ್ಸ್ ಆಫ್ ನಾರ್ನಿಯಾ’ (The Chronicles of Narnia) ಎನ್ನುವ ಸರಣಿಯ ವಿವಿಧ ಕಥಾ ವಸ್ತುಗಳನ್ನು ಹೊಂದಿದ ಚಲನಚಿತ್ರಗಳನ್ನು ನೋಡಿಯೇ ಇರುತ್ತೀರಿ. ೧೯೫೦ರಲ್ಲಿ ಸಿ.ಎಸ್. ಲೂಯಿಸ್ ಎಂಬಾತ ಬರೆದ ಈ ಅದ್ಭುತ ಮಾಯಾಜಾಲದ ಕಥೆ ಮಕ್ಕಳನ್ನಷ್ಟೇ ಅಲ್ಲ ದೊಡ್ಡವರನ್ನೂ ಮಂತ್ರಮುಗ್ಧರನ್ನಾಗಿಸಿತು. ಆತ ಸೃಷ್ಟಿಸಿದ ‘ನಾರ್ನಿಯಾ’ ಎನ್ನುವ ಕಲ್ಪನಾ ಲೋಕದಲ್ಲಿ ನಡೆಯುವ ಘಟನಾವಳಿಗಳು ಓದುಗರನ್ನು ಬೇರೆಯೇ ಆದ ಲೋಕಕ್ಕೆ ತೆಗೆದುಕೊಂಡು ಹೋಗುತ್ತಿತ್ತು.

ಈಗ ದೃಶ್ಯ ಮಾಧ್ಯಮವೇ ಪ್ರಭಾವಶಾಲಿ. ಆದರೆ, ಐವತ್ತರ ದಶಕದಲ್ಲಿ ಲೂಯಿಸ್ ಈ ನಾರ್ನಿಯಾ ಎನ್ನುವ ಕಲ್ಪನಾ ಲೋಕದ ಕಥೆಗಳನ್ನು ಬರೆದಾಗ ಓದುವವರು ತಮ್ಮ ಮನಸ್ಸಿನಲ್ಲಿಯೇ ಕಲ್ಪನೆ ಮಾಡಿಕೊಳ್ಳಬೇಕಾಗಿತ್ತು. ಲೂಯಿಸ್ ನಾರ್ನಿಯಾದ ವೃತ್ತಾಂತ ಸರಣಿಯಲ್ಲಿ ಬರೆದ ಮೊದಲ ಕಥೆ ‘ಸಿಂಹ, ಮಾಟಗಾತಿ ಮತ್ತು ಕಪಾಟು’ (The Lion, the Witch and the Wardrobe -1950). ಈ ಕಥೆಯಲ್ಲಿ ಲೂಸಿ ಎಂಬ ಹುಡುಗಿ ಅನಿರೀಕ್ಷಿತವಾಗಿ ಒಂದು ದೊಡ್ಡ ಅಲ್ಮೇರಾ (ಕಪಾಟು) ಹೊಕ್ಕಾಗ ಅದರ ಒಳಗೆ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ. ಅದು ಆಕೆಯನ್ನು ನಾರ್ನಿಯಾ ಎನ್ನುವ ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ಆಕೆ ಅನುಭವಿಸುವ ಚಿತ್ರ ವಿಚಿತ್ರ ಘಟನಾವಳಿಗಳು ಓದುಗರಿಗೆ ಬಹಳ ರೋಚಕ ಅನುಭವ ನೀಡುತ್ತದೆ. ಕುದುರೆ ದೇಹದ ಮಾನವ ಮುಖದ ವ್ಯಕ್ತಿಗಳು, ಮಾತನಾಡುವ ಪ್ರಾಣಿಗಳು, ಆಸಿಯನ್ ಎನ್ನುವ ದೊಡ್ಡದಾದ ಸಿಂಹ, ತನ್ನ ಮಾಯಾ ದಂಡದಿಂದ ಎಲ್ಲರನ್ನೂ ಕಲ್ಲಾಗಿಸಬಲ್ಲ ಬಿಳಿ ಮಾಟಗಾತಿ ಇವರೆಲ್ಲರ ಸಂಪರ್ಕ ಲೂಸಿಗೆ ಆಗುತ್ತದೆ. ಬಿಳಿ ಮಾಟಗಾತಿಯ ಮಾಯಾಜಾಲದಿಂದ ಹೊರ ಬರಲು ಲೂಸಿಗೆ ಸಿಂಹ ಹೇಗೆ ಸಹಾಯ ಮಾಡಿತು? ಯಾರೆಲ್ಲಾ ಲೂಸಿಯ ಈ ಪ್ರಯಾಣದಲ್ಲಿ ಜೊತೆಗಿದ್ದರು? ಇವನ್ನೆಲ್ಲಾ ಓದುತ್ತಾ ಕಲ್ಪನೆ ಮಾಡಿಕೊಳ್ಳುವುದು ಬಹಳ ಸೊಗಸಾದ ಅನುಭವ ನೀಡುತ್ತದೆ.

ಸಿಎಸ್ ಲೂಯಿಸ್ ೧೯೫೦ ರಿಂದ ೧೯೫೬ರ ವರೆಗೆ ನಾರ್ನಿಯಾ ಸರಣಿಯ ೭ ಕಥೆಗಳನ್ನು ಬರೆದರು. ಪ್ರಿನ್ಸ್ ಕ್ಯಾಸ್ಪಿಯನ್, ದಿ ವಾಯೇಜ್ ಆಫ್ ಡೌನ್ ಟ್ರೇಡರ್, ದಿ ಸಿಲ್ವರ್ ಚೇರ್, ದಿ ಹಾರ್ಸ್ ಆಂಡ್ ಹಿಸ್ ಬಾಯ್, ದಿ ಮ್ಯಾಜಿಶಿಯನ್ಸ್ ನೆವ್ಯೂ, ದಿ ಲಾಸ್ಟ್ ಬ್ಯಾಟಲ್ ಮೊದಲಾದುವುಗಳು. ಲೂಯಿಸ್ ಸೃಷ್ಟಿಸಿದ ಪಾತ್ರಗಳು ಮಕ್ಕಳಲ್ಲಿ ಬಹಳಷ್ಟು ಆಸಕ್ತಿ ಮತ್ತು ಕುತೂಹಲವನ್ನು ಹುಟ್ಟಿಸಿದವು. ಇದನ್ನೇ ಬಂಡವಾಳ ಮಾಡಿಕೊಂಡ ಹಾಲಿವುಡ್ ಚಿತ್ರ ನಿರ್ಮಾಪಕರು ೨೦೦೫ರಲ್ಲಿ ನಾರ್ನಿಯಾ ವೃತ್ತಾಂತದ ಸರಣಿಯ ಹಲವು ಚಿತ್ರಗಳನ್ನು ಬಿಡುಗಡೆ ಮಾಡಿದರು. ಈ ಚಿತ್ರಗಳು ಹಿಂದಿ ಸೇರಿದಂತೆ ಭಾರತದ ಇನ್ನೂ ಕೆಲವು ಭಾಷೆಗಳಿಗೆ ಡಬ್ ಆಗಿವೆ. ಇದನ್ನು ವೀಕ್ಷಿಸಿದ ಮಕ್ಕಳು ಹಾಗೂ ಪೋಷಕರು ಕಥೆಯ ಹಿಂದಿನ ಶಕ್ತಿಯಾದ ಲೂಯಿಸ್ ಅವರ ಕಲ್ಪನಾ ಶಕ್ತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವಕಾಶ ಸಿಕ್ಕರೆ ನೀವೂ ಈ ಚಲನ ಚಿತ್ರಗಳನ್ನು ನೋಡಿ. ಆದರೆ ಅದಕ್ಕೂ ಮೊದಲು ಮರೆಯದೇ ನಾರ್ನಿಯಾದ ಕಥೆಗಳನ್ನು ಹೇಳುವ ಪುಸ್ತಕಗಳನ್ನು ಓದಿ.

ದಿ ವಂಡರ್ ಫುಲ್ ವಿಜಾರ್ಡ್ ಆಫ್ ಓ ಝಡ್ (The Wonderful Wizard of OZ)
ಇದು ಡೊರೊತಿ ಅಥವಾ ದೊರೊತಿ ಎನ್ನುವ ಪುಟ್ಟ ಹುಡುಗಿಯ ಕಥೆ. ಕನ್ಸಾಸ್ ಎಂಬ ಊರಿನ ರೈತಾಪಿ ಕುಟುಂಬದ ಹುಡುಗಿ ತನ್ನ ಮುದ್ದಿನ ನಾಯಿಯಾದ ಟೊಟೊ ಜೊತೆ ಕೈಗೊಂಡ ಸಾಹಸದ ಕಥೆ. ಒಮ್ಮೆ ಡೊರೊತಿಯ ಊರಿನಲ್ಲಿ ಭೀಕರ ಸುಂಟರ ಗಾಳಿ ಬರುತ್ತದೆ. ಈ ಸುಂಟರಗಾಳಿಗೆ ಡೊರೊತಿ ಮತ್ತು ಆಕೆಯ ನಾಯಿ ಹಾರಿಹೋಗಿ ಯಕ್ಷಿಣಿ ನಾಡಿಗೆ ಬೀಳುತ್ತಾರೆ. ಅಲ್ಲಿ OZ ಎನ್ನುವ ಮಾಂತ್ರಿಕನನ್ನು ಭೇಟಿಯಾಗುವ ಆಕೆ ಮಾಂತ್ರಿಕನ ಬಳಿ ತನ್ನ ಊರಿಗೆ ಹೋಗಲು ಸಹಾಯ ಬೇಡುತ್ತಾಳೆ. ಆಕೆ ಮನೆಗೆ ಹಿಂದಿರುಗುವಾಗಿನ ಸಾಹಸಗಾಥೆಯನ್ನು ಓದಿಯೇ ತಿಳಿದುಕೊಳ್ಳಬೇಕು. 

ಈ ಸಾಹಸಮಯ ಕಥೆಯನ್ನು ಬರೆದವರು ಎಲ್. ಫ್ರಾಂಕ್ ಬೌನ್. ಇದು ಮೊದಲಿಗೆ ಪ್ರಕಟವಾದದ್ದು ೧೯೦೦ನೇ ಇಸವಿಯಲ್ಲಿ. ಈ ಸಾಹಸಮಯ ಕಥೆಯನ್ನು ಮೆಚ್ಚಿ ೧೯೦೨ರಲ್ಲಿ ಅದನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲಾಗಿತ್ತು. ೧೯೩೯ರಲ್ಲಿ ಈ ಕಥೆಯು ಸಿನೆಮಾ ರೂಪದಲ್ಲಿ ಹೊರಬಂತು. ಡೊರೊತಿಯಾಗಿ ಜ್ಯೂಡಿ ಗಾರ್ಲಾಂಡ್ ನಟಿಸಿದ್ದರು. ಒ ಝೆಡ್ ಮಾಲಿಕೆಯಲ್ಲಿ ಬೌನ್ ಸುಮಾರು ೧೩ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬರೆದ ಕೊನೆಯ ಪುಸ್ತಕ ಗ್ಲಿಂಡ ಆಫ್ ಓ ಜೆಡ್ ಅವರ ಮರಣಾ ನಂತರ ಬಿಡುಗಡೆಯಾಯಿತು. ಈ ಅದ್ಭುತ ಕತೆಗಳನ್ನು ಮಕ್ಕಳು ಓದಬಹುದು.


ಉಳಿದಂತೆ ‘ಜಂಗಲ್ ಬುಕ್’ ನಂತಹ ಪ್ರಸಿದ್ಧ ಕಾದಂಬರಿ ಬರೆದ ರುಡ್ ಯಾರ್ಡ್ ಕಿಪ್ಲಿಂಗ್ ‘ಜಸ್ಟ್ ಸೊ ಸ್ಟೋರೀಸ್’ (Just so Stories) ಅನ್ನು ನಿಮ್ಮ ಮಕ್ಕಳ ಓದಿನ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು. ಇದೊಂದು ಅದ್ಭುತ ಕಲ್ಪನಾಲೋಕದ ಪಯಣದ ಕಥೆ. ಇದರ ಜೊತೆಯಲ್ಲಿ ಜಾಕ್ ಲಂಡನ್ ಬರೆದ ‘ಬಕ್’ ಎನ್ನುವ ನಾಯಿಯ ಸಾಹಸಮಯ ಕಥೆ ‘ದಿ ಕಾಲ್ ಆಫ್ ದಿ ವೈಲ್ಡ್’ (The Call of the Wild) ಓದಬಹುದು.
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
..................................... ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************








Ads on article

Advertise in articles 1

advertising articles 2

Advertise under the article