-->
ಜೀವನ ಸಂಭ್ರಮ : ಸಂಚಿಕೆ - 195

ಜೀವನ ಸಂಭ್ರಮ : ಸಂಚಿಕೆ - 195

ಜೀವನ ಸಂಭ್ರಮ : ಸಂಚಿಕೆ - 195
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                  
                                     
ಮಕ್ಕಳೇ, ಅಭಿಮಾನ ಎನ್ನುವ ಅಸುರಿ ಗುಣದ ಬಗ್ಗೆ ತಿಳಿದುಕೊಳ್ಳೋಣ. ಅಭಿಮಾನ ಎನ್ನುವುದು ಮನಸ್ಸಿನ ಕಸ. ಈ ಪದ ಭಗವದ್ಗೀತೆಯ 16ನೇ ಅಧ್ಯಾಯ 4ನೇ ಶ್ಲೋಕದಲ್ಲಿ ಬರುತ್ತದೆ. ಸೌಂದರ್ಯ ಕಳೆದುಕೊಂಡ ಹೃದಯದಲ್ಲಿ ಇಂತಹ ಗುಣ ಕಂಡುಬರುತ್ತದೆ. ಇದು ಬದುಕನ್ನು ವಿಕಾರಗೊಳಿಸುವ, ಕುರೂಪ ಗೊಳಿಸುವ ಗುಣ. ಇವು ಒಂದು ಬಗೆಯ ಮನೋರೋಗ. ದೈಹಿಕ ರೋಗ ಗುರುತಿಸಬಹುದು. ಮನಸ್ಸು , ಸೌಂದರ್ಯ ಕಳೆದುಕೊಂಡಾಗ, ಅತೃಪ್ತಗೊಂಡ ಮನಸ್ಸನ್ನು, ಗುರುತಿಸುವುದು ಕಷ್ಟ. ಈ ಗುಣಗಳನ್ನು ಬಹುತೇಕ ಜನರಲ್ಲಿ ಕಾಣುತ್ತೇವೆ. 

ಅಭಿಮಾನ: ಅಭಿಮಾನ ಎಂದರೆ ಅಂಟಿಕೊಳ್ಳುವುದು. ಅತಿಯಾಗಿ ಹಚ್ಚಿಕೊಂಡಿರುವುದು. ಅಭಿಮಾನ ಎಷ್ಟು ಹಚ್ಚಿಕೊಳ್ಳುತ್ತೇವೆ ಎಂದರೆ, ನಮ್ಮ ಅಸ್ತಿತ್ವವೇ ಅದು ಆಗಿಬಿಡುತ್ತದೆ. ಜಾತಿ, ಮತ, ಬಣ್ಣ, ಸಂಪ್ರದಾಯ, ಭಾಷೆ, ಧರ್ಮ, ರಾಜಕೀಯ, ವಸ್ತು ಮತ್ತು ವ್ಯಕ್ತಿಗಳಿಗೆ ಅತಿಯಾಗಿ ಅಂಟಿಕೊಳ್ಳುತ್ತೇವೆ. ಇದರಿಂದ ಮಾನದ ಸೌಧ ನಿರ್ಮಿಸಿಕೊಳ್ಳುತ್ತೇವೆ. ನಮ್ಮ ಮಾನ, ಮರ್ಯಾದೆ ಇದರ ಮೇಲೆ ನಿಂತಿದೆ ಎಂದು ಭಾವಿಸುತ್ತೇವೆ. ಅದು ಬೀಳದಂತೆ ನೋಡಿಕೊಳ್ಳುತ್ತೇವೆ. ಇದರ ರಕ್ಷಣೆಗೆ ಕಷ್ಟಪಡುತ್ತೇವೆ. ಇವುಗಳ ಮೇಲೆ ಮಾನದ ಸೌಧ ಕಟ್ಟಿಕೊಳ್ಳುತ್ತೇವೆ. ಇದರ ಮೇಲೆ ನಮ್ಮ ಸಮಾಧಾನ ಕಟ್ಟಿಕೊಳ್ಳುತ್ತೇವೆ. ಎಲ್ಲರೂ ನನ್ನನ್ನು ಕೊಂಡಾಡಬೇಕು. ಇದು ಹಾಗೆ ಉಳಿಯಬೇಕೆಂದು ಭಾವಿಸಿ, ಅದಕ್ಕೆ ಅಂಟಿಕೊಳ್ಳುತ್ತೇವೆ. ಅದಕ್ಕೆ ಬಹಳ ಹೊಂದಿಕೊಂಡು ಬಿಡುತ್ತೇವೆ. ಆದರೆ ಈ ಭಾವನೆ ಶಾಶ್ವತವಲ್ಲ ಎನ್ನುವ ತಿಳುವಳಿಕೆ ಇರುವುದಿಲ್ಲ. ನಾವು ಅದರ ಪರಾವಲಂಬಿಯಾಗಿರುತ್ತೇವೆ. ನಾವು ಅಂಟಿಕೊಂಡಿರುವುದಕ್ಕೆ ಏನಾದರೂ ಆದರೆ ನನಗೆ ಆದಂತೆ ಆಗಿ ದುಃಖಕ್ಕೆ ಕಾರಣವಾಗುತ್ತದೆ. ಇದರಲ್ಲಿ ರಾಗದ ಅಂಶ, ದ್ವೇಷದ ಅಂಶ ಇದೆ. ಅಭಿನೀವೇಶ ಇದೆ. ಇದನ್ನು ಉಳಿಸುವ ಪ್ರಯತ್ನ ಸಾಗಿದೆ. ಆದರೆ ಇದರಿಂದ ಯಾರೂ ಸಫಲರಾಗಿಲ್ಲ. ನಾನು ಸಂತೋಷ ಪಡಬೇಕಾದರೆ, ಸಂತೋಷದ ಕಾರಣ ನನ್ನೊಳಗಿರಬೇಕಾಗುತ್ತದೆ. ಅಥವಾ ನನ್ನ ಕೈಯೊಳಗೆ ಇರಬೇಕಾಗುತ್ತದೆ. ಹಾಗಲ್ಲದೆ ಜಗತ್ತಿನ ಹತ್ತಿರ ಕೊಟ್ಟುಬಿಟ್ಟರೆ, ಅದು ನನ್ನಲ್ಲಿ ಅಸ್ಥಿರವಾಗುತ್ತದೆ. ಅದು ದುಃಖಕ್ಕೆ ಕಾರಣ. ಕುಳಿತಾಗ ಪಕ್ಕಕ್ಕೆ ಸರಿ ಎಂದುದಕ್ಕೆ, ಎಷ್ಟು ಗಲಾಟೆ ಆಗಿಲ್ಲ ಜಗತ್ತಿನಲ್ಲಿ. ಈಗ ನಾನು ಒಂದು ಕುರ್ಚಿಯಲ್ಲಿ ಕುಳಿತಿದ್ದೇನೆ. ನಾಳೆ ಅದು ತೆಗೆದು, ಬೇರೆ ಸಣ್ಣ ಕುರ್ಚಿ ಹಾಕಿದರೆ, ನನ್ನ ಅಭಿಮಾನಕ್ಕೆ ಧಕ್ಕೆ ಆಗುತ್ತದೆ. ಕುರ್ಚಿ ಬದಲಾದಾಗ ಸಂತೋಷ ಇರುವುದಿಲ್ಲ. ಎಲ್ಲರಿಗೂ ಒಂದೇ ರೀತಿ ಮಾಡಿದರೆ ಒಂದು ಭಾವ, ಸ್ವಲ್ಪ ಹೆಚ್ಚು ಕಡಿಮೆ ಮಾಡಿದರೆ ಮತ್ತೊಂದು ಭಾವ ಆಗುತ್ತದೆ. 

ಬಲರಾಮ ಯಾತ್ರೆ ಕೈಗೊಂಡ. ಜಗತ್ತಿನ ಬೇರೆ ಬೇರೆ ಕ್ಷೇತ್ರಗಳಿಗೆ ಹೊರಟನು. ಒಂದು ಸಲ ನೈಮಿಷಾರಣ್ಯಕ್ಕೆ ಬಂದ. ಅದೊಂದು ಅರಣ್ಯ. ಬಹಳ ಸುಂದರವಾದ ಆಗಿನ ಕಾಲದ ಅರಣ್ಯ ಗೋಮತಿ ನದಿ ದಂಡೆಯಲ್ಲಿದೆ. ಅಯೋಧ್ಯ ಸಮೀಪ ಇದೆ. ಅಲ್ಲಿ ಒಂದು ಸುಂದರ ಆಶ್ರಮ. ಅಲ್ಲೊಬ್ಬ ಋಷಿ ವಾಸ ಮಾಡಿದ್ದನು. ಆತನ ಹೆಸರು ರೋಮಹರ್ಷಣ. ಆತ ದೊಡ್ಡ ವಿದ್ವಾಂಸ. ವ್ಯಾಸ ಮಹರ್ಷಿಯ ಶಿಷ್ಯ. ಎಲ್ಲಾ ಧರ್ಮಶಾಸ್ತ್ರಗಳನ್ನು ರಕ್ತಗತ ಮಾಡಿಕೊಂಡಿದ್ದನು. ಬಲರಾಮ ಬರುವ ವೇಳೆಗೆ ಒಂದು ಉತ್ಸವ ನಡೆಯುತ್ತಿತ್ತು. ಅಲ್ಲಿ ಒಂದು ಸಭೆ, ಹಲವಾರು ಜನ ಋಷಿಗಳು ಕುಳಿತಿದ್ದಾರೆ. ಪ್ರಧಾನವಾಗಿ ರೋಮ ಹರ್ಷಣ ಋಷಿಯನ್ನು ಒಂದು ಪೀಠದ ಮೇಲೆ ಕೂರಿಸಿದ್ದಾರೆ. ರೋಮ ಹರ್ಷಣ ತಾನು ಹೇಳುವಿಕೆಯಲ್ಲಿ ಮಗ್ನ ಆಗಿದ್ದಾನೆ. 

ಆ ಸಮಯದಲ್ಲಿ ಬಲರಾಮ ಬಂದನು. ಬಲರಾಮನಿಗೆ ಒಂದು ಬಗೆ ಅಭಿಮಾನ. ನಾನು ಸಾಕ್ಷಾತ್ ಶೇಷಾವತಾರಿ. ಅದು ಬಹಳಷ್ಟು ತುಂಬಿಕೊಂಡಿತ್ತು. ನಾನು ಕೃಷ್ಣನ ಸಹೋದರ, ಭಗವಂತನ ಛಾಯೆ, ಇದು ತಲೆಗಳಿಗೆ ಸುಳಿಯುತ್ತಿತ್ತು. ತನ್ನ ಬಲದ ಬಗ್ಗೆ, ತನ್ನ ಬುದ್ಧಿಯ ಬಗ್ಗೆ, ತನ್ನ ಶಕ್ತಿ ಸಾಮರ್ಥ್ಯದ ಬಗ್ಗೆ, ತನ್ನ ಜ್ಞಾನದ ಬಗ್ಗೆ, ಬಹಳಷ್ಟು ಅಭಿಮಾನ ಬಲರಾಮನಲ್ಲಿತ್ತು. ಎಲ್ಲಾ ಋಷಿಗಳು ಶಾಂತವಾಗಿ ಕುಳಿತಿದ್ದಾರೆ. ರೋಮ ಹರ್ಷಣ ಹೇಳುವುದರಲ್ಲಿ ಮಗ್ನನಾಗಿದ್ದಾನೆ. ಬಹಳ ಶಾಂತವಾದ ವಾತಾವರಣ. ಬಲರಾಮ ಬರುವುದನ್ನು ಋಷಿಗಳು ನೋಡಿದರು. ಎಲ್ಲಾ ಋಷಿಗಳು ಎದ್ದು ನಿಂತರು. ರೋಮ ಹರ್ಷಣ ನಿಗೆ ಆ ಬಾನ ಇರಲಿಲ್ಲ. ಆತ ಜ್ಞಾನಿ ಎದ್ದು ನಿಲ್ಲಲಿಲ್ಲ. ಬಲರಾಮನಿಗೆ ಅಭಿಮಾನಕ್ಕೆ ಧಕ್ಕೆಯಾಯಿತು. ಎಲ್ಲರೂ ನಿಂತು ಸ್ವಾಗತಿಸಿದ್ದಾರೆ, ರೋಮಹರ್ಷಣ ಆ ಕಡೆ ಲಕ್ಷ್ಯ ಕೊಡಲಿಲ್ಲ. ಇದರಿಂದ ಕ್ರೋಧಗೊಂಡ ಅಭಿಮಾನ, ಯಾವ ಹಂತ ತಲುಪಿತು ಎಂದರೆ, ಅದು ಕ್ರೋಧ ರೂಪ ತಾಳಿ, ರೋಮ ಹರ್ಷಣ ಋಷಿಯನ್ನು ಕೊಂದು ಹಾಕಿದ್ದನು. ಋಷಿ ಎದ್ದು ಸ್ವಾಗತಿಸಲಿಲ್ಲ ಅನ್ನುವ ಕಾರಣಕ್ಕೆ ಅಭಿಮಾನ ಮತ್ತು ಕ್ರೋಧ ಹೇಗೆ ಹೊಂದಿಕೊಂಡಿತ್ತು ಎಂದರೆ ಕೊಲ್ಲುವ ಹಂತಕ್ಕೆ ಹೋಯಿತು. 

ಈ ಕಥೆ ವ್ಯಾಸ ಭಾರತದಲ್ಲಿ ಬರುತ್ತದೆ. ನಾನು ದೊಡ್ಡ ವ್ಯಕ್ತಿ, ನನಗೆ ಎಲ್ಲರೂ ಗೌರವಿಸಬೇಕು ಎನ್ನುವ ಅಭಿಮಾನ ಬಂದಿತ್ತು. ಇದು ಬಲರಾಮನ ಕಥೆಯಲ್ಲ ನಮ್ಮೆಲ್ಲರ ಕಥೆಯು ಹೀಗೆಯೆ. ಪುರಾಣದ ಕಥೆಗಳು ಸತ್ಯ ಸುಳ್ಳು ಅಂತಲ್ಲ. ಅವೆಲ್ಲ ಸಾಂಕೇತಿಕ ಕಥೆಗಳು. ನಮ್ಮ ನಮ್ಮ ಕಥೆಗಳೇ. ನಮ್ಮ ನಮ್ಮ ಮನಸ್ಸಿನ ಕಥೆ. ಯಾವುದು ನನ್ನಲ್ಲಿ ವಿಶೇಷವಾಗಿದೆ?. ವಿಶೇಷವಾಗಿ ದೊರೆಯುತ್ತದೆ?. ಅದರ ಬಗ್ಗೆ ಅಭಿಮಾನ ಮೂಡುತ್ತದೆ. ಎಲ್ಲರೂ ಸಮಾನ. 

ಈ ಜಗತ್ತಿನಲ್ಲಿ ಹೇಗಾಗುತ್ತದೆ?. ಹೆಚ್ಚು ಕಡಿಮೆ ಇರುತ್ತದೆ. ಅಭಿಮಾನ ಜಗಳಕ್ಕೆ ಕಾರಣವಾಗುತ್ತದೆ. ಅಭಿಮಾನ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಗೋಡೆ ಕಟ್ಟುತ್ತದೆ. ಅಭಿಮಾನ ಇರಬಾರದು ಅಂತಲ್ಲ. ಕಲಹಕ್ಕೆ ಕಾರಣವಾಗುವಷ್ಟು ಅಭಿಮಾನ ಇರಬಾರದು. ಅತಿಯಾದರೆ ಹೊಂದಿಕೊಳ್ಳುವುದು ಹೇಗೆ? ಬಾಳುವುದು ಹೇಗೆ? ಮನಸ್ಸು ಸಮಾಧಾನ ಉಳಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ಅಭಿಮಾನ ಅತಿ ಆಗಬಾರದು ಅಲ್ಲವೇ ಮಕ್ಕಳೇ ಅದು ಎಷ್ಟಿರಬೇಕೊ ಅಷ್ಟು ಇರಬೇಕು. ಸಹಜ ಅಭಿಮಾನ ಸುಂದರ. ಅತಿಯಾದರೆ ಅನಾಹುತ ಅಲ್ಲವೇ... ಮಕ್ಕಳೆ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article