-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 170

ಸ್ಫೂರ್ತಿಯ ಮಾತುಗಳು : ಸಂಚಿಕೆ - 170

ಸ್ಫೂರ್ತಿಯ ಮಾತುಗಳು : ಸಂಚಿಕೆ - 170
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                  

“ಪುಸ್ತಕಸ್ಥಾ ತು ಯಾ ವಿದ್ಯಾ , ಪರಹಸ್ತಗತ ಧನಂ
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ”

ಹೀಗೊಂದು ಸುಭಾಷಿತವಿದೆ. ಸುಭಾಷಿತ ಎಂದರೆ ಚೆನ್ನುಡಿ ಅಥವಾ ಒಳ್ಳೆಯ ಮಾತು ಎಂದರ್ಥ. ಪುಸ್ತಕದಲ್ಲಿರುವ ವಿದ್ಯೆ, ಪರರ ಕೈಗೆ ಸೇರಿದ ಹಣ ಇವೆರಡೂ ನಮ್ಮ ಅಗತ್ಯದ ಸಮಯದಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂದು ಈ ಸುಭಾಷಿತದ ಅರ್ಥ. ವಿದ್ಯೆಯು ಪುಸ್ತಕದಲ್ಲಷ್ಟೇ ಇದ್ದರೆ ಸಾಲದು, ಅದು ಮಸ್ತಕದೊಳಗಿರಬೇಕು. ನಮ್ಮ ಧನವು ಇತರರ ಕೈಯಲ್ಲಿರುವುದಲ್ಲ ನಮ್ಮ ಕೈಯಲ್ಲೇ ಇರಬೇಕು. ಜ್ಞಾನ ಮತ್ತು ಧನ ನಮ್ಮಲ್ಲೇ ಇದ್ದಾಗ ಅಗತ್ಯಕ್ಕೆ ಬೇಕಾದಂತೆ ಉಪಯೋಗಕ್ಕೆ ಬರುತ್ತದೆ ಎಂಬುದು ಸುಭಾಷಿತದ ಒಳ ಅರ್ಥ.

ನಮ್ಮೊಳಗೆ ಜ್ಞಾನವಿರಬೇಕು. ನಮಗೆ ಅಗತ್ಯ ಬಂದಾಗಲೆಲ್ಲಾ ಇತರರಿಂದ ಮಾಹಿತಿ ಪಡೆಯುತ್ತಲಿರುವುದು ಕಷ್ಟ ಸಾಧ್ಯ ಮತ್ತು ಮೂರ್ಖತನ. ನಮ್ಮಲ್ಲಿ ಅಜ್ಞಾನವಿದೆ ಅಥವಾ ಸೂಕ್ತವಾದ ಜ್ಞಾನವಿಲ್ಲವೆಂದು, ಅನ್ಯನೊಬ್ಬನಾದ, ಜ್ಞಾನಿಯೆಂದು ಹೇಳಲ್ಪಡುವ ವ್ಯಕ್ತಿಯ ಮುಂದೆ ನಮ್ಮ ಸಮಸ್ಯೆಯನ್ನು ಮಂಡಿಸಿ ಸಲಹೆ ಪಡೆಯುವಾಗ; ನಮ್ಮ ಪೆದ್ದುತನವೂ ಅವನೆದುರು ಅನಾವರಣವಾಗುತ್ತದೆ. ವ್ಯಕ್ತಿಗತವಾಗಿ ಆತ ಉತ್ತಮ ಗುಣ ಸ್ವಭಾವದವನಾಗಿರದೇ ಇದ್ದರೆ ಮುಂದೆ ಅವನು ನಮ್ಮನ್ನು ಕಷ್ಟ ನಷ್ಟಗಳ ಪ್ರಪಾತಕ್ಕೆ ದೂಡಲೂ ಬಹುದು. 

ಜ್ಞಾನಿಗಳಾದರೂ ಎಲ್ಲರೂ ನಿಸ್ವಾರ್ಥಿಗಳೆಂದು ಹೇಳುವಂತಿಲ್ಲ. ಮನುಷ್ಯನ ಮನೋಗುಣ ಲಾಭ ನಷ್ಟಗಳ ಲೆಕ್ಕಾಚಾರದಲ್ಲೇ ಇರುತ್ತದೆ. ನಾವು ನಮ್ಮ ಸಂದೇಹ ಪರಿಹಾರ ಅಥವಾ ಸಮಸ್ಯೆಯ ನಿವಾರಣೋಪಾಯ ಪಡೆಯಲು ಆಶ್ರಯಿಸುವ ವ್ಯಕ್ತಿಯು ಮಹಾ ಸ್ವಾರ್ಥಿಯಾಗಿದ್ದರೆ; ಆತ ಅಥವಾ ಆಕೆ ನಮಗೆ ಪ್ರಯೋಜನವಾಗುವುದು ಬೇಡ ಎಂಬ ಮತ್ಸರದಿಂದ ಅಸಂಗತ ಸಲಹೆ ನೀಡಲೂ ಬಹುದು. ನಮ್ಮಲ್ಲೇ ಎಲ್ಲ ಗೊಂದಲಗಳನ್ನೂ ಪರಿಹರಿಸುವ ಜ್ಞಾನವಿದ್ದರೆ ಇತರರು ಮಾಡುವ ಮೋಸ ವಂಚನೆ ಅಸಹಕಾರಗಳಿಂದ ಪಾರಾಗಿ ಬಲಾನ್ವಿತರಾಗಲು ಸಾಧ್ಯವಿದೆ.

“ಪರಹಸ್ತಗತಂ ಧನಂ” ಎಂದಾಗ ಹಣವು ನಮ್ಮ ಮನೆಯ ಕಪಾಟಿನಲ್ಲೇ ಇರಬೇಕೆಂದು ತಿಳಿಯಬಾರದು. ಯಾವುದೇ ಬ್ಯಾಂಕಿನ ನಮ್ಮ ಖಾತೆಯಲ್ಲಿದ್ದರೆ ಸಮಸ್ಯೆಯಾಗುವುದಿಲ್ಲ. ಬ್ಯಾಂಕುಗಳು ನಿಯಮಾನುಸಾರ ಆರ್ಥಿಕ ಲಾಭವನ್ನು ನೀಡಿ ಗ್ರಾಹಕರಿಂದ ಹಣವನ್ನು ಪಡೆದು ನಿರಖು ಠೇವಣಿಯ ಅಥವಾ ಗ್ರಾಹಕರ ಉಳಿತಾಯ ಖಾತೆಯಲ್ಲಿ ಜಮೆ ಮಾಡುತ್ತಾರೆ. ಈ ಹಣವನ್ನು ನಾವು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಪಡೆಯಬಹುದು. ಈ ತಂತ್ರಜ್ಞಾನ ಯುಗದಲ್ಲಿ ಬ್ಯಾಂಕಿನಿಂದ ನಮ್ಮ ಹಣ ಪಡೆಯುವ ಬಹಳ ಸುಲಭ ದಾರಿಗಳಿವೆ. ಹಿಂದೆ ಜಟಿಲತೆಯಿತ್ತು. ಸರದಿ ಸಾಲು, ಸೇವಾ ಗವಾಕ್ಷಿಯಲ್ಲಿ ಪರಿಶೀಲನೆಗೊಳ ಪಟ್ಟು ನಮ್ಮ ಹಣ ಪಡೆಯಲು ದಿನಗಳೇ ಬೇಕಾಗಿ ಬರುತ್ತಿದ್ದಿರಬಹುದು. ಈಗ ಹಾಗೇನಿಲ್ಲ. ಮೊಬೈಲೊಂದಿದ್ದರೆ, ರಹಸ್ಯ ವಿವರಗಳನ್ನು ಬಹಿರಂಗಗೊಳಿಸದೇ ಇದ್ದರೆ ಎಲ್ಲವೂ ಇಂದು ಅತ್ಯಂತ ಸರಳ.

ತಂತ್ರಜ್ಞಾನಯುಗವಾಗಿರುವಂತೆ ಇದು ಜ್ಞಾನಯುಗವೂ ಹೌದು. ಜ್ಞಾನ ಪಡೆಯಲು, ಎಲ್ಲ ಬಗೆಯ ವಿದ್ಯೆಗಳಿಸಲು ವೆಚ್ಚರಹಿತ ಮಾಹಿತಿ ದ್ವಾರಗಳು ಅಸಂಖ್ಯವಿವೆ. ನಮ್ಮಲ್ಲಿ ಸ್ವಂತ ಪುಸ್ತಕಗಳಿರದೇ ಇದ್ದರೂ ಓದಲು ಕೃತಿಗಳನ್ನು ಗ್ರಂಥಾಲಯ ಯಾ ಅರಿವು ಕೇಂದ್ರಗಳಿಂದ ಪಡೆಯಬಹುದು. ಇ-ಬುಕ್‌ಗಳು, ಆನ್‌ಲೈನ್‌ ತರಬೇತು ವ್ಯವಸ್ಥೆಗಳೂ ಇವೆ. ಕೆಲವೊಮ್ಮೆ ಅಲ್ಪ ವೆಚ್ಚವಾದರೂ ಅದು ಗೌಣ ಮೊಬಲಗಾಗಿರುತ್ತದೆ. ಜ್ಞಾನಗಳಿಸುವ ಹಪಾ ಹಪಿ ನಮ್ಮಲ್ಲಿರಬೇಕು. 
ವಿದ್ಯೆಯುಳ್ಳವನಿಗೆ ಹಣವೂ ಒದಗುತ್ತದೆ. ಬದುಕು ನಿರಾಳವಾಗುತ್ತದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 

Ads on article

Advertise in articles 1

advertising articles 2

Advertise under the article