ನಿಷ್ಪಾಪಿ ಸಸ್ಯಗಳು : ಸಂಚಿಕೆ - 108
Thursday, June 26, 2025
Edit
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...? ಹೊಸ ಶೈಕ್ಷಣಿಕ ವರ್ಷ ಈಗಷ್ಟೇ ಆರಂಭವಾಗಿದೆ. ಹಾಗೆಯೇ ಪ್ರಕೃತಿಯಲ್ಲೂ ವರ್ಷ ಋತು ಆರಂಭವಾಗಿ ಹಲವಾರು ದಿನಗಳೇ ಸರಿದಿವೆ. ಕಣ್ಮನ ತಣಿಸುವ ಹಸಿರು ನಮ್ಮ ಸುತ್ತಲಿರುವ ಗುಡ್ಡಬೆಟ್ಟ, ಬಯಲು ತಪ್ಪಲಲ್ಲಿ ಹಬ್ಬಿವೆ. ಹಸಿರು ಈ ಸ್ಥಳಗಳನ್ನಲ್ಲದೆ ಕೆಲವೊಮ್ಮೆ ನೀರನ್ನೂ ಬಿಡದೆ ಆವರಿಸಿರುವುದನ್ನು ಕಾಣಬಹುದು. ಅವುಗಳ ಸೌಂದರ್ಯವನ್ನು ಕಂಡು ಕೆಲವೊಮ್ಮೆ ನಾವು ಮನೆಯಂಗಳಕ್ಕೆ ತರುವುದೇ ಅಲ್ಲದೆ, ಉದ್ಯಾನವನ, ಅಕ್ವೇರಿಯಮ್, ಕೆರೆ, ಕೊಳಗಳಲ್ಲೂ ಸ್ಥಾನ ನೀಡಿ ಖುಷಿ ಪಡೆಯುತ್ತೇವೆ. ಇಂತಹ ಒಂದು ಸಸ್ಯವೇ ಅಂತರಗಂಗೆ!
ಇದರ ಮೋಹಕವಾದ ರಚನೆ, ಎಲೆಗಳ ವೈಯ್ಯಾರದ ಅಂಚು, ತಿಳಿ ಹಸಿರು ಬಣ್ಣ, ಮಾತನಾಡುತ್ತಿದೆಯೇನೋ ಎಂಬಷ್ಟು ಮುಗ್ಧತೆಯೇ ಚುಂಬಕದಂತೆ ಸೆಳೆವ ಶಕ್ತಿ! ಅವುಗಳನ್ನು ಹಾಕಿದ ನೀರಿಗೆ ಒಂದಿಷ್ಟು ಸೆಗಣಿ ನೀರು ಸೇರಿಸಿದರಂತೂ ಅಂಗನವಾಡಿ ಮಕ್ಕಳಂತೆ ನಕ್ಕು ನಲಿಯುತ್ತವೆ. ಮೇಲ್ನೋಟಕ್ಕೆ ತಾವರೆಯ ಹೋಲಿಕೆ ತೋರುವ ಈ ಸಸ್ಯದ ರಚನೆಯೇ ವಿಶಿಷ್ಟ. ಸಮನಾಂತರವಾದ ಸೆರೆ (ನರ) ಗಳನ್ನು ಪಡೆದು ಮೃದುವಾದ ಸಣ್ಣ ಪ್ರಮಾಣದ ಕೂದಲಿನಿಂದ ತುಂಬಿ ಹೊಳೆಯುವ ಎಲೆಗಳು ಚಪ್ಪಟೆಯಾಗಿ ಅಗಲವಾಗಿ ಹೃದಯದಾಕಾರದಲ್ಲಿರುತ್ತವೆ. ಕಮಲ ದಳಗಳಂತೆ ಬುಡಕ್ಕೆ ಸುತ್ತಲೂ ಜೋಡಣೆಗೊಂಡು ಎಲೆಕೋಸಿನಂತೆಯೂ ಕಾಣಿಸುತ್ತದೆ. ಅದಕ್ಕೇ ಇಂಗ್ಲೀಷಲ್ಲಿ ವಾಟರ್ ಕ್ಯಾಬೇಜ್ ಎನ್ನುವರು.
ಅಂತರಗಂಗೆ ಮುಖ್ಯಕಾಂಡಕ್ಕೆ ಸುತ್ತಿಕೊಂಡ ಎಲೆಗಳ ಮೂಲಕ ನೀರಿನ ಮೇಲ್ಭಾಗದಲ್ಲಿ ತೇಲುತ್ತದೆ. ಅಡಿಭಾಗದಲ್ಲಿ ಜೊಂಡಿನಂತೆ ಬೆಳೆದ ತೆಳ್ಳಗಿನ ಬೇರುಗಳಿರುತ್ತವೆ. ಇದರ ಕಾಂಡದಿಂದ ಎಲ್ಲ ದಿಕ್ಕಿಗೂ ಕೊಂಬೆಗಳು ಬೆಳೆದು ಅದರಲ್ಲಿ ಹೊಸ ಗಿಡಗಳು ಹುಟ್ಟುತ್ತವೆ. ಇದನ್ನು ಅಪ್ ಸೆಟ್ ಎನ್ನುವರು. ಇವು ಮುಖ್ಯ ಕಾಂಡದಿಂದ ನಿಧಾನಕ್ಕೆ ಪ್ರತ್ಯೇಕವಾಗಿ ಹೊಸ ಸಸ್ಯಗಳಾಗಿ ಅಥವಾ ಗುಂಪಾಗಿ ಬೆಳೆಯುತ್ತವೆ. ಒಂದರೆಡು ಗಿಡ ತಂದು ಕಣ್ಣಳತೆಯಲ್ಲಿ ಸಾಕಿದವರ ಒಡಲಲ್ಲಿ ಗುಂಪು ಗುಂಪಾಗಿ ಅಂದಗಾರ್ತಿಯರಂತೆ ಕಂಡರೂ ಇದರ ಪೂರ್ಣಾವತಾರವನ್ನು ಕಾಣಬೇಕೆಂದರೆ ನಾಲ್ಕೈದು ಸಾವಿರ ವರ್ಷಗಳ ಹಿಂದಿನ ಪಳೆಯುಳಿಕೆಗಳ ಬಗ್ಗೆ ತಿಳಿಯಬೇಕಾಗುತ್ತದೆ.
ಇದು ಬ್ರೆಜಿಲ್ ಮತ್ತು ಅಮೆಜಾನ್ ಗೆ ಸ್ಥಳೀಯವೆಂದು ಹೇಳಲಾಗುತ್ತದೆ. ಮೊದಲು ಆಫ್ರಿಕಾದ ವಿಕ್ಟೋರಿಯಾ ಸರೋವರದ ಬಳಿಯ ನೈಲ್ ನದಿಯಲ್ಲಿ ಕಂಡು ಬಂದ ಸಸ್ಯಗಳಿಂದ ವಿವರಿಸಲಾಗಿದ್ದು ಮೂಲಕೇಂದ್ರವಾಗಿ ಉ.ಆಫ್ರಿಕಾದ ಜನ್ಮಸ್ಥಳವನ್ನು ಈಜಿಪ್ಟಿನ ಚಿತ್ರಲಿಪಿಗಳು ಹಾಗೂ ನೈಲ್ ನದಿಯಲ್ಲಿ ಗ್ರೀಕ್ ಸಸ್ಯ ಶಾಸ್ತ್ರಜ್ಞರು ಗುರುತಿಸಿದ ವರದಿಗಳಿವೆ. ದ.ಅಮೇರಿಕಾದಲ್ಲೂ ದೀರ್ಘಕಾಲದ ವಿಕಸನ ಹೊಂದಿದ ವರದಿಯಾದರೆ ಆರಂಭಿಕ ಪಳೆಯುಳಿಕೆ ಮಾದರಿಗಳು ಫ್ಲೋರಿಡಾದಿಂದ ವರದಿಯಾಗಿವೆ. ಕ್ರಿಟೇಷಿಯಸ್ ಯುಗ, ಕ್ಯಾಂಪ್ ನಿಯನ್ ಯುಗವೆಂದು ಅಲ್ಲಲ್ಲಿ ದಾಖಲಿದ್ದು ಕೆನಡಾ, ದ.ಅಲ್ಬರ್ಟಾ, ಸೈಬೀರಿಯಾ ಗಳಲ್ಲಿ ಮಾತ್ರವಲ್ಲದೆ ಫ್ಲೋರಿಡಾದಲ್ಲಿ 3550 ವರ್ಷಗಳ ಹಿಂದಿನ ಅಂತರಗಂಗೆ ಸಸ್ಯ ಹಾಗೂ ಬೀಜಗಳ ಪಳೆಯಳಿಕೆಗಳು ಕಂಡುಬಂದ ಬಗ್ಗೆ ದಾಖಲೆಗಳಿವೆ ಎನ್ನಲಾಗುತ್ತದೆ.
ಇಂತಹ ಚರಿತ್ರೆಯಿರುವ ಈ ಅಂತರಗಂಗೆ ಸಿಹಿ ನೀರಿನ ಜಲಸಸ್ಯಗಳಲ್ಲಿ ಒಂದು. ನಿಧಾನಕ್ಕೆ ಹರಿವ ನದಿ, ಸರೋವರ, ಜೌಗು ಭೂಮಿ, ಕೊಳಗಳಲ್ಲಿ ನಿಧಾನಕ್ಕೆ ಬೆಳವಣಿಗೆ ಹೊಂದತ್ತಾ ಬೆಳೆದು ಬಂದ ಈ ನಿಷ್ಪಾಪಿ ಸಸ್ಯ ಭೂಮಿಯ ಉಷ್ಣವಲಯ ಹಾಗೂ ಉಪೋಷ್ಣವಲಯದುದ್ದಕ್ಕೂ ಹರಡಿದೆ. ತಂಪೆಂದರೆ ಇದಕ್ಕಾಗದು. ಎಲ್ಲೆಡೆ ಒಂದೇ ತೆರನಾಗಿರದಿದ್ದರೂ ರೂಪವಿಜ್ಞಾನ, ಪರಿಸರ ವಿಜ್ಞಾನದ ಹೋಲಿಕೆ ಹೊಂದಿರುವ ಮೂರು ಮುಖ್ಯ ತಳಿಗಳನ್ನು ಗುರುತಿಸಲಾಗಿದೆ.
ಸಾಮಾನ್ಯವಾಗಿ Water cabbage, Nile cabbage, ಜಲ ಕುಂಭಿ, ಅಂತರ ತಾವರೆ, ಕುಂಭಿಕಾ ಎಂದೆಲ್ಲಾ ಕರೆಸಿಕೊಳ್ಳುವ ಅಂತರಗಂಗೆ ಯ ಸಸ್ಯಶಾಸ್ತ್ರೀಯ ಹೆಸರು ಪಿಸ್ಟಿಯಾ ಸ್ಟಾಟಿಯೋಟಿಸ್( Pistia stratiotes). Pistia ಕುಲವಾಗಿದ್ದು ಏರೇಸೀಯೆ ಕುಟುಂಬಕ್ಕೆ ಸೇರಿದ ಹೂ ಬಿಡುವ ಜಲಸಸ್ಯವಾಗಿದೆ.
ಅಂತರಗಂಗೆ ತುಂಬಾ ಸಾಧುಪ್ರಾಣಿಯಂತೆ ಕಂಡರೂ ಜಾಗತಿಕವಾಗಿ ಇದನ್ನು ಆಕ್ರಮಣಕಾರಿ ಸಸ್ಯವೆಂದೇ ಪರಿಗಣಿಸಲಾಗಿದೆ!. ಅವಕಾಶ ಸಿಕ್ಕರೆ ಅತ್ಯಲ್ಪ ಸಮಯದಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಾ ನೀರೇ ಕಾಣದಂತೆ ಹರಡುತ್ತದೆ. ಸಹಜವಾಗಿ ವಾಸವಾಗಿದ್ದ ಜಲಚರಗಳಿಗೆ ಸೂರ್ಯನ ಬೆಳಕೇ ಬೀಳದೆ, ಅವುಗಳಿಗೆ ಆಹಾರದ ಮೂಲವೇ ನಾಶವಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಹಡಗು, ದೋಣಿ ಸಂಚಾರಕ್ಕೆ ತೊಡಕುಂಟಾಗುತ್ತದೆ. ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ಸಂತಾನ ಹರಡುವ ಮಧ್ಯವರ್ತಿಯಾಗಿ ಸಹಕರಿಸುತ್ತದೆ.
ನೈಜೀರಿಯಾದ ಹೌಸಾಜ ಎಂಬಲ್ಲಿ ನೈಸರ್ಗಿಕ ಉಪ್ಪು ಲಭ್ಯವಿಲ್ಲದಾಗ ಈ ಸಸ್ಯದ ಬೂದಿಯನ್ನು ಉಪ್ಪಿನ ಬದಲಾಗಿ ಬಳಸಲಾಗುತ್ತದೆ. ಇದನ್ನು ಜಕಾಂಕೌ ಎನ್ನುವರು. ಸಿಂಗಾಪುರ್, ದ. ಚೀನಾದಲ್ಲಿ ಬಾತುಕೋಳಿ, ಹಂದಿಗಳಿಗೆ, ಇಂಡೋನೇಷ್ಯಾ ದಲ್ಲಿ ಕೋಳಿಗಳಿಗೆ ಆಹಾರವಾಗಿ ನೀಡುತ್ತಾರೆ. ದನ ಎಮ್ಮೆಗಳಿಗೆ ನೀಡಿದರೆ ಹಾಲಿನಲ್ಲಿ ಕೊಬ್ಬಿನಂಶ ಹೆಚ್ಚಾಗುವುದೆನ್ನುತ್ತಾರೆ. ಉಷ್ಟ್ರಪಕ್ಷಿಗೂ ಆಹಾರವಾಗಿದೆ. ಮಾತ್ರವಲ್ಲದೆ ಇದರ ಎಲೆಗಳಲ್ಲಿ ಎ,ಬಿ,ಸಿ ವಿಟಮಿನ್ ಗಳು ಹೇರಳವಾಗಿದೆ. ಬೂದಿಯಿಂದ ಸಾಬೂನು ತಯಾರಿಸುವರು. ಪೊಟ್ಯಾಸಿಯಮ್ ಹೇರಳವಾಗಿರುವುದರಿಂದ ಜೈವಿಕ ಗೊಬ್ಬರ ಉತ್ಪಾದನೆ, ಕೈಗಾರಿಕಾ ಅನ್ವಯತೆಗೂ ಉಪಯುಕ್ತವಾಗಿದೆ. ಸಸ್ಯಗಳೇ ಬೆಳೆಯದ ಸ್ಥಳಗಳಲ್ಲಿ ತಾನು ನೀರಿನ ಮೇಲೆ ಹಬ್ಬಿ ನೈಸರ್ಗಿಕ ಸಸ್ಯಾಭಿವೃದ್ಧಿಗೆ ಅನುವು ಮಾಡಿಕೊಟ್ಟು ಸಸ್ಯ ಅನುಕ್ರಮಕ್ಕೆ (ಪ್ಲಾಂಟ್ ಸಕ್ಸೆಷನ್) ಗೆ ಅವಕಾಶ ಒದಗಿಸುತ್ತದೆ. ಬಿಳಿತೊನ್ನು, ಹುಣ್ಣು, ಮೂಲವ್ಯಾಧಿ, ಮೂತ್ರನಾಳದ ಸೋಂಕು, ಊತ, ಹೊಟ್ಟೆ ಸಮಸ್ಯೆ, ಭೇದಿ, ಕೆಮ್ಮು, ಅಸ್ತಮಾ, ಗೊನೊರಿಯಾ, ಇಸುಬು ಇತ್ಯಾದಿ ಚರ್ಮರೋಗಗಳಿಗೆ ಆಫ್ರಿಕಾ ದ ಹಲವು ದೇಶಗಳಲ್ಲಿ ಅಲ್ಲದೆ ಭಾರತದಲ್ಲೂ ಬಳಸಲಾಗುತ್ತದೆ. ಈ ಬಗ್ಗೆ ಬಹಳಷ್ಟು ಸಂಶೋಧನೆಗಳೂ ನಡೆದಂತಿದೆ.
ಒಟ್ಟಿನಲ್ಲಿ ಸಸ್ಯವೊಂದು ಜಲಸಸ್ಯವಾಗಿ ರೂಪಾಂತರ ಗೊಂಡು ಬೆಳೆದು ನಮ್ಮೆದರು ನಿಂತು ನಗುವ ಅಂತರಗಂಗೆ ಒಂದು ವಿಶಿಷ್ಠವಾದ ಸಸ್ಯವೆಂದು ನಿಮಗೂ ಈಗ ಅನಿಸಿರಬೇಕಲ್ಲ...!
ಹೌದು ಮಕ್ಕಳೇ, ನೀವೂ ಒಂದೆರಡು ಸಸಿ ಸಾಕಿ ಅದರ ಸೌಂದರ್ಯದ ಬಗ್ಗೆ ಗಮನಿಸುವಿರಲ್ಲವೇ.. ವಿಶ್ವದಲ್ಲಿ ಇದರ ಅಸ್ಥಿತ್ವದ ಒಳಿತು ಕೆಡುಕುಗಳ ಬಗ್ಗೆಯೂ ನೆನೆಪಿರಲಿ.
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************